ಒಮ್ಮೆ ಖುಷಿ, ಒಮ್ಮೆ ನೋವು; ಒಮ್ಮೆ ಹೆಮ್ಮೆ, ಒಮ್ಮೆ ಮರುಕ..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

|ಕಳೆದ ಸಂಚಿಕೆಯಿಂದ|

ಅಮ್ಮಚ್ಚಿ ರಿಲೀಸ್ ಆದ ಸ್ವಲ್ಪ ದಿನಗಳ ನಂತರ ವೈದೇಹಿ ಮೇಡಂ ಗೆ ಒಂದು ಕಾಲ್ ಬರುತ್ತದೆ ದೂರದ ಮುಂಬೈನಲ್ಲಿರುವ ಖ್ಯಾತ ಸಾಹಿತಿ ಮತ್ತು ವಿಮರ್ಶಕಿ ಮಮತಾ ರಾವ್ ಅವರ ಕಾಲ್ ಅದು. ವೈದೇಹಿ ಮೇಡಂ ಮೊದಲು ಅವರೊಂದಿಗೆ ಮಾತನಾಡಿ ನಂತರ, “ನನಗೆ ನೀವು ಹೇಳಿದ್ದನ್ನೆಲ್ಲಾ ಚಂಪಾಗೆ ಹೇಳಿ ಅವಳಿಗೆ ಖುಷಿಯಾಗುತ್ತದೆ,” ಎಂದು ಅವರಿಗೆ ನನ್ನ ನಂಬರ್ ಕೊಡುತ್ತಾರೆ. ಇಂತಹ ಅನೇಕ ಕರೆಗಳು ವೈದೇಹಿ ಮೇಡಂನಿಂದ ನನಗೆ ಫಾರ್ವಾರ್ಡ್ ಆಗಿವೆ…

ನಿಜಕ್ಕೂ ಇಂತಹ ಸಾಧಕರು ಸಿನೆಮಾ ಬಗ್ಗೆ ಒಳ್ಳೆಯ ಮಾತುಗಳಾಡಿದರೆ ಖುಷಿಯಾಗದೇ ಇರುತ್ತದೆಯೇ..? ಮಮತಾ ಮೇಡಂ ಕೂಡಲೇ ನನಗೆ ಕಾಲ್ ಮಾಡಿ ಅವರು ಯುಎಸ್ ನಿಂದ ಕತಾರ್ ಏರ್ವೇಸ್ ನಲ್ಲಿ ಬರುವಾಗ ವಿಮಾನದಲ್ಲಿ ಅಮ್ಮಚ್ಚಿಯನ್ನು ನೋಡಿದ್ದನ್ನು ತಿಳಿಸಿ, ಸಿನೆಮಾದ ಬಗೆಗೆ ಬಹಳಷ್ಟು ಒಳ್ಳೆಯ ಮಾತನಾಡಿ “ಕತಾರ್ ಏರ್ವೇಸ್ ಸಿನೆಮಾ ತೆಗೆದುಕೊಂಡಿದೆ ಎಂದರೆ ಅದು ಅತ್ಯುತ್ತಮ ಸಿನೆಮಾ ಎಂದೇ” ಅಂದಾಗ ಅವರ ಆ ಮಾತು ಕೇಳಿ, ಅಮ್ಮಚ್ಚಿ ಜೊತೆಗೆ ನಾನೂ ಆಕಾಶದಲ್ಲಿ ಹಾರಾಡಿದಷ್ಟೇ ಖುಷಿಯಾಗಿತ್ತು.

ಸಿನೆಮಾ ರಿಲೀಸ್ ಆದ ಕೆಲವು ದಿನಗಳಲ್ಲೇ ಯಾವುದೋ ಏಜೆನ್ಸಿಗೆ ಒಂದು ಸಣ್ಣ ಬೆಲೆಗೆ ಏರ್ ವೇಸ್ ನ ರೈಟ್ಸ್ ಕೊಟ್ಟು ಅದರ ಬಗ್ಗೆ ಮರೆತೇ ಹೋಗಿದ್ದೆವು. ಮಮತಾ ಮೇಡಂ ಕಾಲ‌್ ಮಾಡಿ ಅಭಿನಂದಿಸಿದಾಗಲೇ ಅದರ ನೆನಪಾದದ್ದು… ನಂತರ ಅನೇಕರು ಹೀಗೇ ವಿಮಾನದಲ್ಲಿ ಅಮ್ಮಚ್ಚಿಯನ್ನು ನೋಡಿದೆ ಅಂದಾಗ ನಿಜಕ್ಕೂ ಖುಷಿಯಾಗಿತ್ತು.

ಆದರೆ, ರಿಲೀಸ್ ಆದ ಸ್ವಲ್ಪ ದಿನಗಳಲ್ಲಿಯೇ ಅಮ್ಮಚ್ಚಿಯನ್ನು ನೋಡಿದವರ ಅನಿಸಿಕೆ ಕೇಳಿ ಕೆಲವರು, “ನಾವೂ ಅಮ್ಮಚ್ಚಿಯನ್ನು ನೋಡಬೇಕು ಯುಎಸ್ ನಲ್ಲಿ ರಿಲೀಸ್ ಮಾಡುತ್ತೀರಾ?” “ನಾವು ಮುಂಬೈನಲ್ಲಿದ್ದೇವೆ ಸಿನೆಮಾ ಹೇಗೆ ನೋಡುವುದು? ದುಬೈಗೆ ಅಮ್ಮಚ್ಚಿ ಯಾವಾಗ ಬರುತ್ತಾಳೆ?” ಎಂದು ಹೊರ ರಾಜ್ಯದವರು ಹೊರದೇಶದವರು ಮೆಸೇಜ್ ಮಾಡಿ ಕೇಳುವಾಗ, ನಿಜಕ್ಕೂ ಆಸೆ ಪಟ್ಟು ಸಿನೆಮಾ ನೋಡಬೆಕೆನ್ನುವವರಿಗೆ ಸಿನೆಮಾ ತೋರಿಸಲು ಆಗುತ್ತಿಲ್ಲವಲ್ಲ ಎಂಬ ಕಳವಳ ನಮಗೆ.

ಯುಎಸ್, ದುಬೈ, ಮುಂಬೈಗಳಲ್ಲಿ ರಿಲೀಸ್ ಮಾಡೋಣವೆಂದು ಪ್ಲಾನ್ ಮಾಡಿದರೂ ನಮಗಿರುವ ಕಾಂಟ್ಯಾಕ್ಟ್ ಗಳ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. ಇದೇ ಯೋಚನೆಯಲ್ಲಿರುವಾಗ, ಕಳೆದ ಏಪ್ರಿಲ್ ನಲ್ಲಿ ಅಮ್ಮಚ್ಚಿ “ಅಮೆಜ಼ಾನ್ ಪ್ರೈಮ್ ವಿಡಿಯೋ” ದಲ್ಲಿ ಸ್ಥಾನ ಪಡೆದುಕೊಂಡದ್ದು, ದೂರದ ಪ್ರೇಕ್ಷಕರನ್ನೂ “ಅಮ್ಮಚ್ಚಿ” ತಲುಪಬೇಕೆಂಬ ನಮ್ಮ ಬಯಕೆಯನ್ನು ಪೂರೈಸಿತ್ತು.

ಇದ್ದಕ್ಕಿದ್ದಂತೆ, ಹಲವಾರು ಕರೆಗಳು, ಹಲವಾರು ಮೆಸೇಜ್ ಗಳು, ಎಲ್ಲೆಲ್ಲಿಂದಲೋ ಯಾರು ಯಾರೋ ಕರೆಮಾಡಿ “ಅಮ್ಮಚ್ಚಿ” ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದೆಷ್ಟು? ಅತ್ಯಂತ ಪ್ರೀತಿಯಿಂದ ಫೇಸ್ ಬುಕ್ ನಲ್ಲಿ ಉದ್ದುದ್ದ ಬರೆದದ್ದೆಷ್ಟು? “ಅಮ್ಮಚ್ಚಿ” ಮತ್ತೊಮ್ಮೆ ರಿಲೀಸ್ ಆದಂತಾ ಸಂಭ್ರಮ ನಮಗೆ.

ಅಮೆರಿಕಾ ಕನ್ನಡಿಗರಂತೂ “ಅಮ್ಮಚ್ಚಿ” ಗೆ ಕೊಟ್ಟ ಪ್ರೀತಿ ಅಷ್ಟಿಷ್ಟಲ್ಲ. ಅಲ್ಲಿರುವ ಸುಕನ್ಯಾ ಮೇಡಂ, ಗೆಳತಿ ಸುಪ್ರಿಯಾ, ಶೆಟ್ರ ತಂಗಿ ಶ್ವೇತಾ ಮುಂತಾದವರು ಅಮ್ಮಚ್ಚಿಯನ್ನು ತಮ್ಮವರಿಗೆಲ್ಲಾ ಪರಿಚಯಿಸಿದರೆ, ವಲ್ಲೀಶ ಶಾಸ್ತ್ರಿ ಅವರು ಮತ್ತು “ನಮೇರಿಕಾ”ದ ಆನಂದ್ ರಾವ್ ಅವರು ಅಮ್ಮಚ್ಚಿ ತಂಡದೊಡನೆ ಅಮೆರಿಕಾ ಕನ್ನಡಿಗರ ಸಂವಾದ ಏರ್ಪಡಿಸಿ ನೂರಾರು ಸಹೃದಯ ಪ್ರೇಕ್ಷಕರ ಜೊತೆ ನಮಗೆ ಮಾತನಾಡುವ ಅವಕಾಶ ಒದಗಿಸಿಕೊಟ್ಟರು.

ಅಲ್ಲಿನ ಪ್ರೇಕ್ಷಕರು ಅಮ್ಮಚ್ಚಿಯನ್ನು ಎಷ್ಟು ಇಷ್ಟ‌ಪಟ್ಟರೆಂದರೆ, “ಎರಡುಗಂಟೆಗಳು ನಮಗೆ ಊರಿನಲ್ಲೇ ಇದ್ದ ಅನುಭವವಾಯಿತು” “ನೀವು ತೋರಿಸಿರುವ ಅನೇಕ ಆಚರಣೆಗಳು ನಮ್ಮ ಬಾಲ್ಯವನ್ನು ನೆನಪಿಸಿತು” ಎಂದೆಲ್ಲಾ ಕೊಂಡಾಡಿದರು. ತೆಲಗು ಸಾಹಿತ್ಯಲೋಕದ ಬಹುದೊಡ್ಡ ಲೇಖಕಿ “ವೋಲ್ಗಾ” ಅವರು ವೈದೇಹಿ ಮೇಡಂ ಗೆ ಕಾಲ್ ಮಾಡಿ ಸಿನೆಮಾದ ಬಗ್ಗೆ ಬಹಳಷ್ಟು ಒಳ್ಳೆಯ ಮಾತುಗಳನ್ನಾಡಿದ್ದು ನಿಜಕ್ಕೂ ನಮಗೆ ಹೆಮ್ಮೆ ಎನಿಸಿತ್ತು.

ಎಲ್ಲಾ ಸಂವಾದಗಳಲ್ಲೂ, ಎಲ್ಲಾ ಪ್ರೇಕ್ಷಕರು ವ್ಯಕ್ತಪಡಿಸುತ್ತಿದ್ದ ಒಂದೇ ಅಭಿಪ್ರಾಯವೆಂದರೆ, “ಅಮ್ಮಚ್ಚಿಗೆ ರಾಷ್ಟ್ರ ಪ್ರಶಸ್ತಿ ಬರಲೇಬೇಕು, ಎಲ್ಲಾ ವಿಭಾಗವೂ ಪ್ರಶಸ್ತಿಗೆ ಅರ್ಹವಾಗಿದೆ” ಎಂದು. ಕಪ್ಣಣ್ಣ ಅಂಗಳದಲ್ಲಿ ಒಮ್ಮೆ ‘ಅಮ್ಮಚ್ಚಿ’ ಪ್ರದರ್ಶನ ನೋಡಿದ ಪ್ರೇಕ್ಷಕರೊಬ್ಬರು ಅಮ್ಮಚ್ಚಿಗೆ ಪ್ರಶಸ್ತಿ ಬರಲು ತಾವು ತಿರುಪತಿ ತಿಮ್ಮಪ್ಪನಲ್ಲಿ ಬೇಡಿಕೊಳ್ಳುವುದಾಗಿ ತಿಳಿಸಿದ್ದರು.

ಪ್ರಶಸ್ತಿ ಪಡೆಯುವ ಅರ್ಹತೆ ಅಮಚ್ಚಿಗೆ ಇದ್ದರೂ, ಅದಕ್ಕಾಗಿ ಲಾಬಿ ಮಾಡುವ ಮನಸ್ಸು ನಮಗಿಲ್ಲವಲ್ಲ! ಹಾಗಾಗಿ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ನಮಗೆ ಒಂದು ಅನುಮಾನ ಇದ್ದೇ ಇತ್ತು ಆ ಅನುಮಾನ‌ ಒಂದಿಷ್ಟೂ ಸುಳ್ಳಾಗದಂತೆ ಮಾಡಿದ್ದು ಆ ಎಲ್ಲಾ ಪ್ರಶಸ್ತಿಗಳು. ಬೆಂಗಳೂರು ಚಿತ್ರೋತ್ಸವದಿಂದ ಮೊದಲುಗೊಂಡು ರಾಜ್ಯ, ರಾಷ್ಟ್ರ, ಪ್ರಶಸ್ತಿಗಳವರೆಗೆ ಎಲ್ಲಡೆಯೂ ಪ್ರಶಸ್ತಿಯಿಂದ ವಂಚಿತಳಾಗಿದ್ದಳು “ಅಮ್ಮಚ್ಚಿ..”


ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡ ಮತ್ತು ವರ್ಲ್ಡ್ ಸಿನೆಮಾ ಎರಡೂ ವಿಭಾಗಕ್ಕೆ ಅಮ್ಮಚ್ಚಿ ಆಯ್ಕೆಯಾಗಿದ್ದಳು. ಕೊನೆಯ ದಿನದ ಹಿಂದಿನ ದಿನ ಅನೇಕರು ನಿಮಗೇ ಪ್ರಶಸ್ತಿ ಬರಬೇಕು ಎಂದು, ಕೆಲವರಂತೂ ನಿಮಗೇ ಬಂದಿದೆ ಎಂದು ಅಭಿನಂದನೆಗಳನ್ನೂ ಹೇಳಿಬಿಟ್ಟಿದ್ದರು. ಮರುದಿನ ಸಮಾರೋಪದಲ್ಲಿ ಪ್ರಶಸ್ತಿ ಪ್ರಕಟವಾದಾಗ ಮಾತ್ರ ಅಮ್ಮಚ್ಚಿ ಕಾಣೆಯಾಗಿದ್ದಳು…..

2019 ಮಾರ್ಚ್ ನಲ್ಲಿ ನಾನು ಕುಟುಂಬದೊಡನೆ ಜಪಾನ್ ನಲ್ಲಿದ್ದ ತಮ್ಮನ ಮನೆಗೆ ಹೋಗಿದ್ದಾಗ, ಶೆಟ್ರಿಗೊಂದು ಕರೆ ಬರುತ್ತದೆ.. “ಇದೇನ್ ಶೆಟ್ರೆ ಎಲ್ಲರೂ ದೆಹಲಿಯಲ್ಲಿ ರೂಂ ಮಾಡಿದ್ದರೆ ನೀವು ಜಪಾನ್ ಗೆ ಹೋಗಿ ಕೂತಿದ್ದೀರಾ?” ಎಂದು ಒಬ್ಬರು ಹೇಳುತ್ತಾರೆ ಶೆಟ್ರು ಆಶ್ಚರ್ಯದಿಂದ “ದೆಹಲಿಗಾ! ಏಕೆ” ಅಂದರೆ, “ರಾಷ್ಟ್ರ ಪ್ರಶಸ್ತಿಗಾಗಿ ಏಷ್ಟೆಲ್ಲಾ ಲಾಬಿ ನಡೆಯುತ್ತಿದೆ ನೀವು ಜಪಾನ್ ಟೂರ್ ಮಾಡುತ್ತಿದ್ದೀರಾ?” ಎನ್ನುತ್ತಾರೆ.

ಅದಕ್ಕೆ ಶೆಟ್ರು “ನಾವು ಸಿನೆಮಾ ಮಾಡಿದ್ದೀವಿ, ಜನ ನೋಡಿದ್ದಾರೆ ಪ್ರಶಸ್ತಿಗಾಗಿ ಹಾಕಬೇಕಾದ ಅರ್ಜಿಯೂ ಹಾಕಿದ್ದೀವಿ ನಮ್ಮ ಕೆಲಸ ಮುಗಿದಿದೆ. ಪ್ರಶಸ್ತಿ ಪಡೆಯುವ ಅರ್ಹತೆ ಸಿನೆಮಾಗಿದೆ. ಕೊಡುವ ಯೋಗ್ಯತೆ ಅವರಿಗಿದ್ದರೆ ಕೊಡುತ್ತಾರೆ. ನಾವು ಪ್ರಶಸ್ತಿಗಾಗಿ ಸಿನೆಮಾ ಮಾಡಿದ್ದಲ್ಲ” ಎಂದು ಹೇಳಿ ಕಟ್ ಮಾಡುತ್ತಾರೆ…

ಮುಂದೆ, ರಾಷ್ಟ್ರ ಪ್ರಶಸ್ತಿ ಅಮ್ಮಚ್ಚಿಗೆ ಬರುವುದಿಲ್ಲ.. ರಾಜ್ಯ ಪ್ರಶಸ್ತಿಯೂ ಬರುವುದಿಲ್ಲ ಆದರೆ ಪ್ರಶಸ್ತಿ ಬಂದಾಗ ಬರಬಹುದಾದ ಕರೆಗಳಿಗಿಂತ ಜಾಸ್ತಿ ಕರೆಗಳು ಪ್ರಶಸ್ತಿ ಅನೌನ್ಸ್ ಮಾಡಿದ ದಿನ ನಮಗೆ ಬರುತ್ತವೆ.. ಎಷ್ಟು ಜನ ಎಷ್ಟು ನೋವು ಪಟ್ಟರೆಂದರೆ, ನಮಗಿಂತಾ ಸಂಕಟ ಪಟ್ಟವರು ಅದೆಷ್ಟೋ ಮಂದಿ.. ಅದು ನಮಗೆ ಪ್ರಶಸ್ತಿ ಬಂದದ್ದಕ್ಕಿಂತಾ ಸಮಾಧಾನ ತಂದಿತ್ತು.

ಆದರೂ, ವೈದೇಹಿಯವರ ಕತೆಗಳಿಗಿಂತಾ ಕತೆ ಬೇಕೆ? ಅವರ ಸಾಹಿತ್ಯಕ್ಕೆ ಬೆಲೆ ಕಟ್ಟಲಾಗುತ್ತದೆಯೇ? ಪತ್ತಾರರ ಸಂಗೀತದ ಶ್ರೇಷ್ಠತೆ ಏನು? ಸಿನೆಮಾಟೋಗ್ರಫಿ, ಎಡಿಟಿಂಗ್ ಗಳಲ್ಲಿ ಅಮ್ಮಚ್ಚಿ ಕಡಿಮೆಯೇ? ಉರಾಳರಿಂದ ಇಂತಹ ಪಾತ್ರ ಮತ್ತೊಮ್ಮೆ ಮಾಡಿಸಲು ಸಾಧ್ಯವೇ? ಎಂದೆಲ್ಲಾ ಯೋಚಿಸಿದಾಗ ಸಂಕಟವಾಗದೇ ಇರುತ್ತದೆಯೇ? ಆದರೆ ಮರುಕ್ಷಣವೇ, ಕೆಟ್ಟ ಸಿನೆಮಾ ಮಾಡಿ ಪ್ರಶಸ್ತಿ ಪಡೆದು ಜನರಿಂದ ಛೀ! ಥೂ! ಅನಿಸಿಕೊಳ್ಳುವುದಕ್ಕಿಂತ ಪರಿಚಯವೇ ಇಲ್ಲದವರೂ ನಮಗಾಗಿ, ನಮಗಾದ ಅನ್ಯಾಯಕ್ಕಾಗಿ ಮರುಕ ಪಡುವುದಿದೆಯಲ್ಲ ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇಕೆ? ಎಂದೆನಿಸಿ ಖುಷಿಯೂ ಆಗುತ್ತಿತ್ತು.

ಅದೇ ಸಮಾಧಾನದಲ್ಲಿರುವಾಗಲೇ ಮತ್ತೊಂದು ಸಮಾಧಾನ ಕೆಲವೇ ದಿನಗಳಲ್ಲಿ ನಮಗೆ ಸಿಕ್ಕಿತ್ತು.. ರಾಷ್ಟ್ರ ಪ್ರಶಸ್ತಿಯ ಜ್ಯೂರಿಗಳಲ್ಲಿ ಒಬ್ಬರು ಹಿಂದೂ ಪತ್ರಿಕೆಯಲ್ಲಿ ಮೊದಲ ಸುತ್ತಿನಲ್ಲಿ ನಾವು ನಾಲ್ಕು ಜನರ ತಂಡ ಆಯ್ಕೆ ಮಾಡಿದ್ದೇ “ಅಮ್ಮಚ್ಚಿಯೆಂಬ ನೆನಪು” ಚಿತ್ರ ಎಂದು ಹೇಳಿಕೆಯೇ ಕೊಟ್ಟುಬಿಟ್ಟರು.. ಹಾಗೇ ರಾಜ್ಯ ಪ್ರಶಸ್ತಿ ಬಾರದಿದ್ದಾಗಲೂ ಮರುದಿನವೇ ನಮಗೊಬ್ಬರು ಅಪರಿಚಿತರು ಕಾಲ್ ಮಾಡಿ, ನಾನೂ ಕೂಡಾ ರಾಜ್ಯ ಪ್ರಶಸ್ತಿಯ ಜ್ಯೂರಿ ಕಮಿಟಿಲ್ಲಿದ್ದೆ, ನಿಮ್ಮ ಸಿನೆಮಾಗಾಗಿ ಬಹಳಷ್ಟು ಹೋರಾಟ ಮಾಡಿದೆ ಆದರೆ ಸಾಧ್ಯವಾಗಲಿಲ್ಲ ಅಂದದಷ್ಟೇ ಅಲ್ಲದೆ, ಅನೇಕ ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ನಮ್ಮನ್ನು ಶಿಫಾರಸ್ಸು ಮಾಡಿದರು.

ಆದರೆ ನಮ್ಮ ದುರಾದೃಷ್ಟವೆಂದರೆ, ಇದೆಲ್ಲಾ ಆಗುವಷ್ಟರಲ್ಲಿ 2018ರಲ್ಲಿ ತಯಾರಾದ ಚಿತ್ರಗಳ ಉತ್ಸವಗಳೇ ಮುಗಿದು ಹೋಗಿರುತ್ತದೆ..

ಆದರೇನು? ಪ್ರತಿಷ್ಠಿತ ಫಿಲ್ಮ್ ಫೇರ್ ಅವಾರ್ಡ್, ಸೈಮಾ ಅವಾರ್ಡ್ ಗಳಂತ ಹಲವಾರು ಅವಾರ್ಡ್ ಗಳಿಗೆ ಅಮ್ಮಚ್ಚಿ ನಾಮಿನೆಟ್ ಆದಳು.. ಎಲ್ಲಕ್ಕಿಂತ ಮುಖ್ಯವಾಗಿ, ರಾಷ್ಟ್ರ ಮಟ್ಟದ ವಿಮರ್ಶಕ ಬಳಗ ನೀಡುವ ಪ್ರತಿಷ್ಠಿತ “ಗಿಲ್ಡ್ ಅವಾರ್ಡ್”ಗೆ ಆ ವರ್ಷದಲ್ಲಿ ರಿಲೀಸ್ ಆದ ಕನ್ನಡದ ಸುಮಾರು ಇನ್ನೂರ ನಲವತ್ತು ಸಿನೆಮಾಗಳಲ್ಲಿ, ಆಯ್ಕೆಯಾದ ಮೂರೇ ಮೂರು ಸಿನೆಮಾ ಗಳಲ್ಲಿ ‘ಅಮ್ಮಚ್ಚಿ’ ಒಬ್ಬಳಾಗಿ, ಮುಂಬೈಗೆ ಪಯಣಿಸಿದ್ದು ಅತ್ಯಂತ ಹೆಮ್ಮೆ ನಮಗೆ..

ಒಮ್ಮೆ ಖುಷಿ, ಒಮ್ಮೆ ನೋವು, ಒಮ್ಮೆ ಹೆಮ್ಮೆ, ಒಮ್ಮೆ ಮರುಕ.. ಇಂತೆಲ್ಲಾ ಮಿಶ್ರ ಭಾವನೆಗಳ ನಡುವೆ ‘ಅಮ್ಮಚ್ಚಿ’ಯಂತಾ ಬ್ರಿಡ್ಜ್ ಸಿನೆಮಾವೊಂದು ರಿಲೀಸ್ ಆಗಿ ಮೂವತ್ತು ದಿನಗಳು ಥಿಯೇಟರ್ ನಲ್ಲಿ ರಾರಾಜಿಸಿ, ಹಲವಾರು ಸಿನಿಮೋತ್ಸವಗಳಲ್ಲಿ ಸೈ ಎನಿಸಿಕೊಂಡು, ಇದೀಗ ಅಮೆಜ಼ಾನ್ ಪ್ರೈಮ್ ನ ಮುಖಾಂತರ ಸಾವಿರಾರು ಜನರ ಮನೆ ಮನಸ್ಸುಗಳಿಗೆ ತಲುಪಿ ಚಿತ್ರ ರಿಲೀಸ್ ಅಗಿ ಎರಡು ವರ್ಷವಾದರೂ ಇನ್ನೂ ಹಸಿಯಾದ ಅನುಭವ ನೀಡುತ್ತಿರುವ ಅಮ್ಮಚ್ಚಿ ನಮ್ಮನ್ನು ಎಷ್ಟು ಆವರಿಸಿಕೊಂಡುಬಿಟ್ಟಿದ್ದಾಳೆ? ಅಮ್ಮಚ್ಚಿಯ ಈ ಬಂಧನದಿಂದ ಬಿಡುಗಡೆಗೊಳ್ಳಲು ಬಹುಶಃ ‘ಅವಧಿ’ಯಲ್ಲಿನ ಈ ಲೇಖನ ಸಹಾಯವಾಗಬಹುದೇನೋ.. ಅದು ಹೇಗೆ? ಎಂಬುದು…

| ಮುಂದಿನ ಸಂಚಿಕೆಯಲ್ಲಿ |

‍ಲೇಖಕರು ಚಂಪಾ ಶೆಟ್ಟಿ

December 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: