ಎಚ್ ಎಸ್ ಆರ್ ಓದಿದ ‘ಒಬ್ರು ಸುದ್ಯಾಕೆ..’

ಎಚ್ ಎಸ್ ರಾಘವೇಂದ್ರರಾವ್

**

ಹೆಸರಾಂತ ಕಥೆಗಾರ್ತಿ ಬಿ ಟಿ ಜಾಹ್ನವಿ ಅವರ ಸಮಗ್ರ ಕಥಾ ಸಂಕಲನ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

‘ಕೌದಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಎಚ್ ಎಸ್ ಆರ್ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.

**

ಲಂಕೇಶ್ ಪತ್ರಿಕೆಯಿಂದ ಸಾಹಿತ್ಯಾಸಕ್ತರಿಗೆ ಪರಿಚಿತರಾದ ಬಿ.ಟಿ. ಜಾಹ್ನವಿ ಮತ್ತು ರೇಖಾರಾಣಿ, ಇವರಿಬ್ಬರೂ ನನಗೆ ಬಹಳ ಇಷ್ಟವಾದ ಲೇಖಕರು, ನಾನು ಹೀಗೆಂದುಕೊಂಡು ಸುಮಾರು ಇಪ್ಪತ್ತು ವರ್ಷಗಳೇ ಕಳೆದಿವೆ. ಆದರೆ ಇವತ್ತು ಸಾಹಿತ್ಯಿಕವಾಗಿ ತಮ್ಮನ್ನು ಪ್ರೊಮೋಟ್ ಮಾಡಿಕೊಳ್ಳುವುದರಲ್ಲಿ ಎಷ್ಟೊಂದು ಅನಾಸಕ್ತರೆಂದರೆ ನಾನು ಮತ್ತು ನನ್ನಂತಹ ಹಲವರು ಇವರನ್ನು ನೋಡಿಯೂ ಇಲ್ಲ. ಆದರೆ, ಇವರ ಬರವಣಿಗೆಯನ್ನು ಹತ್ತಾರು ಜನರಿಗೆ ರೆಕಮೆಂಡ್ ಮಾಡಿದ್ದೇನೆ. ‘ಓದಲೇ ಬೇಕಾದ ಬರಹಗಾರರು’ ಎಂದು ಹೇಳಿದ್ದೇನೆ. ಹತ್ತು ವರ್ಷಗಳಷ್ಟು ಹಿಂದೆಯೇ ರೇಖಾರಾಣಿಯವರ ಕಥಾಸಂಕಲನದ ಬಗ್ಗೆ ಬರೆದಿದ್ದೆ. ಈಗ ಜಾಹ್ನವಿಯವರ ಒಟ್ಟು ಕಥೆಗಳ ಬಗ್ಗೆ ಬರೆಯುವ ಅವಕಾಶ ಸಿಕ್ಕಿದೆ. ಇದು ನನಗೆ ಹೆಮ್ಮೆಯ ಮತ್ತು ಸಂತೋಷದ ಸಂಗತಿ.

ಇವರಿಬ್ಬರೂ ಕೂಡ ನಿಜವಾದ, ಆ ಪದದ ಸರಿಯಾದ ಅರ್ಥದಲ್ಲಿ ಆಧುನಿಕರು. ಇಪ್ಪತ್ತೊಂದನೆಯ ಶತಮಾನದ ನಿಜವಾದ ತಲ್ಲಣಗಳನ್ನು ಅವು ಬರುವುದಕ್ಕಿಂತ ಮೊದಲೇ ಊಹಿಸುವುದು ಇವರಿಗೆ ಸಾಧ್ಯವಾಗಿತ್ತು. ಇವರು, ಇಂದು ನನಗೆ ಸಮಕಾಲೀನರೋ ಅಥವಾ ನನ್ನ ನಂತರದ ಪೀಳಿಗೆಯವರೋ ಆಗಿರುವ ಅರ್ಥದಲ್ಲಿ ಆಧುನಿಕರಲ್ಲ. ಅವರು ನಾವು ಬೇಡವೆಂದುಕೊಂಡರೂ ಗತಕಾಲದ, ‘ಸೋ ಕಾಲ್ಡ್’ ಸಂಸ್ಕೃತಿಯ ಹಿಡಿತದಲ್ಲಿ ಉಳಿಯುವವರು, ಅದಕ್ಕಾಗಿ ತಹತಹಿಸುವವರು. ಅದನ್ನು ದೇಶಿಯೆನ್ನಿ, ಗ್ರಾಮೀಣ ಮುಗ್ಧತೆಯೆನ್ನಿ, ಪರಂಪರೆಯ ಬಗೆಗಿನ ಪ್ರೀತಿಯೆನ್ನಿ ಪರಿಣಾಮ ಮಾತ್ರ ಒಂದೇ. ಇವರು ದಿನದಿನವೂ ಬದಲಾಗುತ್ತಲೇ ಕಳೆದುಕೊಂಡ ಯಾವುದೋ ‘ಮಾಧುರ್ಯ’ಕ್ಕಾಗಿ ಹಳಹಳಿಸುವವರು. ನಿಜವಾದ ಆಧುನಿಕತೆ ಇರುವುದು ಜೀವನಕ್ರಮದ ಪಲ್ಲಟದಲ್ಲಿ ಅಲ್ಲ. ಬದಲಾಗಿ ಜೀವನ ಮೌಲ್ಯಗಳ ಪಲ್ಲಟದಲ್ಲಿ. ಇಂತಹ ಪಲ್ಲಟ ನಡೆಯದಿದ್ದರೆ, ಹೊಸ ಉಡುಪುಗಳ ಪಂಜರದಲ್ಲಿರುವ ಹಳೆಯ ಹುಡುಗ ಹುಡುಗಿಯರೇ ಸಿಗುತ್ತಾರೆ. ಇಂಥ ನಿಜವಾದ ಪಲ್ಲಟವು ಏನನ್ನೂ ಕಳೆದುಕೊಳ್ಳುವ ಅಗತ್ಯವಿಲ್ಲದಿದ್ದ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವುದು ಕೇವಲ ಸಹಜ.

ಅವರಿಗೆ ದೊರೆತ ಬಿಡುಗಡೆಯು, ‘ಬಿಡುಗಡೆಯ ಬೇಡಿ’ ಆಗುವುದು ಸಾಧ್ಯವಿರಲಿಲ್ಲ. ಇಲ್ಲಿ ನಾನು ಡಿಗ್ರಿ ಪಡೆದು, ಕೆಲಸ ಪಡೆದು, ಸಂಬಳವನ್ನು ಗಂಡನೊಂದಿಗೆ ಹಂಚಿಕೊಂಡು, ಮನೆ-ಕಾರುಗಳ ಕನಸು ಕಾಣುವ ಹೆಣ್ಣುಮಕ್ಕಳ ಬಗ್ಗೆ ಹೇಳುತ್ತಿಲ್ಲ. ಅವರು ವಿದ್ಯಾವಂತರೇ ಹೊರತು ಆಧುನಿಕರಲ್ಲ. ಅವರ ತಲ್ಲಣಗಳು ಸುಳ್ಳು ಎಂದಲ್ಲ. ಆದರೆ, ನಿಜವಾದ ಆಧುನಿಕತೆಯ ಸಂಬಂಧಗಳನ್ನು ಕಂಡುಕೊಳ್ಳುವ, ಕಟ್ಟಿಕೊಳ್ಳುವ, ಪ್ರಶ್ನಿಸುವ, ಹೊರೆಯೂ ಆಗದ ಸೆರೆಯೂ ಆಗದ ಬಾಳನ್ನು ಹುಡುಕುವುದರಲ್ಲಿದೆ. ಮಧ್ಯಮವರ್ಗದ ಲೇಖಕ-ಲೇಖಕಿಯರ ಮಹಾಪೂರದಲ್ಲಿ ಇಂತಹ ಆಧುನಿಕತೆಯು ಹಿನ್ನೆಲೆಗೆ ಸರಿಯುತ್ತದೆ. ಏಕೆಂದರೆ, ಅಂತಹ ‘ಡೇರಿಂಗ್’ ಮತ್ತು ‘ರಿಸ್ಕ್ ಟೇಕಿಂಗ್’ ಅಲ್ಲಿ ಸಾಧ್ಯವಾಗಿರುವುದಿಲ್ಲ.

ಜಾಹ್ನವಿಯವರು ತಮ್ಮ ಕತೆಗಳಲ್ಲಿ ಒಂದರ ನಿರೂಪಕಿಯಿಂದ ಹೀಗೆ ಹೇಳಿಸುತ್ತಾರೆ : “ಹೆಣ್ಣು ಜನ್ಮ ತಾಳಿದ ಕ್ಷಣದಿಂದ ಅದಕ್ಕೇ ತಕ್ಕನಾದ ನಡೆನುಡಿ, ಓದುಬರೆಹ, ಸಂಸ್ಕಾರದಿಂದ ಆಕೆನ ಕಡೆದು ಕೆತ್ತುವ ಒಪ್ಪಿತ ರೂಢಿವ್ಯವಸ್ಥೆಗೆ ಎದುರಾಗಿ ನಿಂತಿದ್ದಳಾಕೆ” (ಪುಟ 176) ಇಲ್ಲಿ ಹೆಸರಿಸಿರುವ ಹುಡುಗಿ ಹದಿನೆಂಟರ ಅನಿತಾ. ಅವಳು ತನ್ನ ತಂದೆ-ತಾಯಿ, ತಂಗಿ-ತಮ್ಮಂದಿರನ್ನು ಸಾಕಲೆಂದು, ಕೀಳರಿಮೆ-ಅಪರಾಧೀ ಭಾವಗಳ ಲವಲೇಶವೂ ಇಲ್ಲದೆ ವಿವಾಹಪೂರ್ವದ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡಿರುತ್ತಾಳೆ. ಅವಳ ಬಗ್ಗೆ ಮತ್ತೆ ಹೇಳುತ್ತೇನೆ. ಆದರೆ, ಆಧುನಿಕತೆ ಹುಟ್ಟುವುದು ಬದುಕಿನ ಅಗ್ನಿಕುಂಡದಲ್ಲಿಯೇ. ಗಂಡಸರಿಗಾದರೂ ಹಾಗೆಯೇ. ಬಹಳ ಪ್ರಸಿದ್ಧವಾದ ಆನಂದರ ‘ನಾನು ಕೊಂದ ಹುಡುಗಿ’ ಕತೆಯೊಂದಿಗೆ ಇದನ್ನು ಹೋಲಿಸಿದಾಗ, ನಮ್ಮ ಸಮಾಜ ಮತ್ತು ಕತೆಗಳು ಇಟ್ಟಿರುವ/ಇಡಬೇಕಾದ ಪಾಸಿಟಿವ್ ಹೆಜ್ಜೆಗಳು ಗೊತ್ತಾಗುತ್ವೆ.

ಸಾಹಿತ್ಯದ ಆಕರವಾಗಿ ಜೀವನವನ್ನು ನೋಡಬಾರದು, ಬದಲಾಗಿ ಜೀವನವನ್ನು ಕಂಡುಕೊಳ್ಳುವ ಒಂದು ಬಗೆಯಾಗಿ ಸಾಹಿತ್ಯವನ್ನು ಕಾಣಬೇಕು ಎಂಬ ತಿಳುವಳಿಕೆ ಜಾಹ್ನವಿಯವರಿಗಿದೆ. ಆದ್ದರಿಂದಲೇ ಇವರು ಸಾಹಿತ್ಯೋಪಜೀವಿಗಳಲ್ಲ. ಹೀಗಿರುವುದು ಆರೋಗ್ಯದ ಕುರುಹು. ಈಕೆ ಕವಿತೆಯಂತಹ ಅಮೂರ್ತ ಐದ್ರಿಕತೆಯ ಮಾಧ್ಯಮವನ್ನು ಆರಿಸಿಕೊಳ್ಳದೆ ಅನುಭವಲೋಕದೊಂದಿಗೆ ನೇರವಾದ ಮುಖಾಮುಖಿಯನ್ನು ಬಯಸುವ ಕಥೆ-ಕಾದಂಬರಿಗಳನ್ನು ಆರಿಸಿಕೊಂಡಿದ್ದರಲ್ಲೂ ಈ ಬಗೆಯ ಧೈರ್ಯವಿದೆ. ಆದರೆ, ಇಂತಹ ಅನ್ಯ ಆಸಕ್ತಿಗಳು ಇವರ ಬರವಣಿಗೆಯ ಪ್ರಮಾಣವನ್ನು ಕಡಿಮೆ ಮಾಡಿದೆಯೆಂದು ಕಾಣುತ್ತದೆ. ಇದನ್ನು ನಾನು ಇವರ ಗೆಳತಿಯಾದ ದು.ಸರಸ್ವತಿಯವರೂ ಸೇರಿದಂತೆ ಹಲವರಲ್ಲಿ ಗಮನಿಸಿದ್ದೇನೆ. ಬರವಣಿಗೆಯ ಕಲೆಗಾರಿಕೆಯು ಬರೆಯುವುದರಿಂದಲೇ ಬರುತ್ತದೆ. ಇಂಗ್ಲೀಷ್ ಮಾತನ್ನು ಬಳಸುವುದಾದರೆ, “ಸಾಹಿತ್ಯವು ಬಹಳ ಹೊಟ್ಟೆಕಿಚ್ಚಿನ ಹೆಂಡತಿ”. ಅದನ್ನು ಸತತವಾಗಿ ಓಲೈಸಬೇಕು. ತಮ್ಮ ಹತ್ತೆಂಟು ಹಳವಂಡಗಳ ನಡುವೆಯೂ ಬರವಣಿಗೆಯ ಖದರನ್ನು ಉಳಿಸಿಕೊಂಡ ಲಂಕೇಶ್ ಅವರನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಜಾಹ್ನವಿಯವರ ಕಥೆಗಳ ಬಗ್ಗೆ ಬರೆಯುವುದು, ನಮ್ಮ ಕಾಲದ ಸಾಹಿತ್ಯಿಕ ಸಂದರ್ಭದಲ್ಲಿ ಒಂದು ಬಗೆಯ ಬಿಡುಗಡೆಯ ಭಾವನೆಯನ್ನು ನೀಡುತ್ತದೆ. ಅವರದು ಯಾವುದೇ ಬಗೆಯ ರಿಯಾಯಿತಿಯನ್ನು ಬಯಸದ ದಿಟದ ಕಥೆಗಳು, ತಾಜಾ ಆದ ಕಲಾಕೃತಿಗಳು. ಮಹಿಳೆಯರು, ದಲಿತರು ಮುಂತಾದ ಮಾನದಂಡಗಳನ್ನು ಬಳಸಿ ಅವರ ಬಗ್ಗೆ ಬರೆಯಹೋದರೆ ಅವರೇ ಕೋಪದಿಂದ ಕಿಡಿಕಿಡಿಯಾದಾರು! ಕಲೆಯ ಸ್ವರೂಪವು ಬದಲಾಗುತ್ತದೆ ಎಂಬ ಸಂಗತಿಯನ್ನು ಒಪ್ಪಿಕೊಂಡೂ ಪ್ರತಿಭೆ ಹಾಗೂ ಕಸುಬುದಾರಿಕೆಯ ವಿಷಯದಲ್ಲಿ ಯಾವುದೇ ಸವಲತ್ತುಗಳನ್ನು ಕೊಡದ ಲಂಕೇಶ್ ವಿಶ್ವವಿದ್ಯಾಲಯವು ಇವರನ್ನು ಬೆಳೆಸಿದೆ. ಅದಕ್ಕಿಂತ ಮೊದಲು ಅವರ ತಂದೆಯವರಿಂದ ಕೊಡಲ್ಪಟ್ಟ ಮತ್ತು ಪರಿಸರಕ್ಕೆ ಆರೋಗ್ಯಕರವಾದ ಅರ್ಥ ನೀಡಿದ ಜೀವನ ಮೌಲ್ಯಗಳು ಇವರನ್ನು ರೂಪಿಸಿದ್ದವು. ಕೊನೆಗೂ ಕಥೆಯ ಹಂದರವನ್ನು ರೂಪಿಸುವ ಅನುಭವಲೋಕ ಎಲ್ಲಿಂದ ಬರುತ್ತದೆ ಎನ್ನುವುದು ಬಹಳ ಗೌಣ.

ಮನಸ್ಸಿನಲ್ಲಿಯೇ ಕಲ್ಪಕತೆಯಿಂದಲೇ ಕಟ್ಟಿದ ಎಲ್ಲೂ ಇಲ್ಲದ ಲೋಕದಲ್ಲಿ, ತನ್ನ ಕಾಲ-ದೇಶ-ಸಂದರ್ಭಗಳ ಎಲ್ಲ ತಲ್ಲಣಗಳನ್ನೂ ಹಿಡಿದಿಟ್ಟ ಕಾಫ್ಕಾಗಿಂತ ಬೇರೆ ಉದಾಹರಣೆ ಬೇಡ. ಕೊನೆಗೂ ಸೃಜನಶೀಲ ಬರವಣಿಗೆಯ ಸೋಲು ಗೆಲುವುಗಳನ್ನು ತೀರ್ಮಾನಿಸುವುದು ಬರೆಯುವವರ ಕಲ್ಪಕತೆ ಮತ್ತು ಭಾಷಿಕ ತಿಳುವಳಿಕೆಗಳೇ. ಅಂತೆಯೇ ಜೀವನವನ್ನು ತೀವ್ರವಾಗಿ ಅನುಭವಿಸುವ ಮತ್ತು ಅಷ್ಟೇ ತೀವ್ರವಾಗಿ ಅದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇರಬೇಕು. ನಮ್ಮ ಕಣ್ಣುಗಳಿಗೆ ಕಾಣುವ, ಇಂದ್ರಿಯಗಳಿಗೆ ನಿಲುಕುವ ಲೋಕ ಕೂಡ ‘ಕಣ್ಕಟ್ಟು’ ಇರಬಹುದು ಎಂಬ ಅನುಮಾನವೇ ಕತೆಗಾರರನ್ನು ಕಾಪಾಡುತ್ತದೆ ಮತ್ತು ಬೆಳೆಸುತ್ತದೆ. ಅಂತಹ ಎಚ್ಚರ ಇದ್ದರೆ. ನರಸಿಂಹಸ್ವಾಮಿಯವರು ಹೇಳಿದ ಹಾಗೆ, “ಇಹದ ತಳಹದಿಯಿಂದ ದಿಟದ ದರ್ಶನ ಅರಳಿ ಹಂಬಲಿಸಿ ಹಾಡು” ಆಗುತ್ತದೆ. ಈ ಕತೆಗಳಲ್ಲಿ ಅಂತಹ ತಿಳುವಳಿಕೆಯು ಒಡಮೂಡಿದೆಯೆಂದು ನಾನು ತಿಳಿದಿದ್ದೇನೆ.

ಹಾಗೆಯೇ, ಸ್ವತಃ ನನ್ನದೇ ಬಾಲ್ಯದ ಪರಿಸರವೂ ಆಗಿರುವ, ಚಿತ್ರದುರ್ಗ-ದಾವಣಗೆರೆಗಳ ಆಸುಪಾಸಿನ ಹಳ್ಳಿ ಪಟ್ಟಣಗಳ ಬದುಕಿನ ಮೂಲಕ, ಎಲ್ಲ ಕಾಲದ ಮನುಷ್ಯರ ಸಮಸ್ಯೆಗಳನ್ನು ಕಾಣುವ ಪ್ರಯತ್ನವು ಈ ಕಥೆಗಳಲ್ಲಿದೆ. ಇವುಗಳ ಕೆಲವು ಲಕ್ಷಣಗಳು ಮತ್ತು ಗುಣಗಳನ್ನು ಇಲ್ಲಿ ಹೇಳಬೇಕು ಎಂಬ ಆಸೆ ನನಗೆ ಇದೆ. ಕೆಲವು ತಿಂಗಳ ಹಿಂದೆ ಮಿತ್ರರಾದ ಎನ್.ಎಸ್. ಶಂಕರ್ ಅವರ ಕಥೆಗಳಿಗೆ ಬರೆದ ಮುನ್ನುಡಿಯು ಕೆಲವು ವಿಷಯಗಳಲ್ಲಿ ಇದಕ್ಕೆ ಪೂರಕವಾಗಿದೆ. ಮುಗ್ಧತೆಯ ನಾಶ ಮತ್ತು ಅರಿವಿನ ಸ್ಫೋಟಗಳನ್ನು. ಇಲ್ಲಿನ ಹಲವು ಕತೆಗಳಲ್ಲಿ ಗುರುತಿಸಬಹುದು. ಇಲ್ಲಿ ಮುಗ್ಧತೆ ಎಂದರೆ ಶಿಶುಸಹಜವಾದ ಇನ್ನೊಸೆನ್ಸ್ ಅಲ್ಲ. ಪರಂಪರೆಯಿಂದ ದತ್ತವಾದ ನಂಬಿಕೆಗಳನ್ನು ಅವು ಇರುವ ಹಾಗೆಯೇ ಒಪ್ಪಿಕೊಳ್ಳುವುದು ಕೂಡ ಇಂಥ ‘ಮುಗ್ಧತೆ’ಯ ಪರಿಣಾಮವೇ. ಅನೇಕ ಸಲ ಪ್ರೀತಿ ಅಥವಾ ಅದರ ಭ್ರಮೆಯು ಬಹುದೊಡ್ಡ ಕಣ್ಕಟ್ಟು ಆಗಿರುತ್ತದೆ, ಸಂಕಲೆ ಆಗಿರುತ್ತದೆ. ನಿಜವಾದ ಅರಿವು ವಿದ್ಯೆಯಿಂದ ಅಲ್ಲ, ವಿವೇಕದಿಂದ ಬರುತ್ತದೆ, ಮನುಷ್ಯತ್ವದಿಂದ ಬರುತ್ತದೆ. ಇಲ್ಲಿನ ಕತೆಗಳಲ್ಲಿ ಅಂತಹ ಅರಿವು ಮತ್ತು ಅದರ ಫಲವಾದ ಕ್ರಿಯೆಗಳು ಮನಾಮನಿಯಾಗಿ ಕಾಣಿಸಿಕೊಂಡಿವೆ.

ಇಂತಹ ತಿಳುವಳಿಕೆಯು, ‘ಮ್ಯಾನಿಪುಲೇಟೆಡ್’ ಆಗಿ ಬದುಕುತ್ತಿರುವವರಿಗೆ, ಆ ಸೆರೆಮನೆಯಿಂದ ಹೊರಬರುವ ಕೆಚ್ಚನ್ನು ಕೊಡುತ್ತದೆ. ಜಾಹ್ನವಿಯವರ ಇಂತಹ ಕತೆಗಳ ಕೇಂದ್ರದಲ್ಲಿ ಹೆಣ್ಣು ಪಾತ್ರಗಳಿರುವುದು ಆಶ್ಚರ್ಯವೂ ಅಲ್ಲ, ಅಪರಾಧವೂ ಅಲ್ಲ. ಬದಲಾಗಿ ಅದು ಅನುಭವದ ಅಧಿಕೃತತೆಯ ಪ್ರಶ್ನೆ. ಈ ಕಥೆಗಳಿಂದ ಸ್ವತಃ ಪುರುಷ ಲೇಖಕರೂ ಕೆಲವು ಪಾಠಗಳನ್ನು ಕಲಿತುಕೊಂಡು ತಮ್ಮ ಅನುಭವಗಳನ್ನು ಶೋಧಿಸಬಹುದು. ಹಾಗೆ ನೋಡಿದರೆ, ಜಾಹ್ನವಿಯವರು ಲಂಕೇಶರ ಕತೆಗಳ ಕಟ್ಟುವಿಕೆ ಮತ್ತು ಹೇಳುವಿಕೆಗಳಿಂದ ಸಾಕಷ್ಟು ಕಲಿತರೂ ಅವರಿಗಿಂತ ಭಿನ್ನವಾದ ಅನನ್ಯವಾದ ಪಾತ್ರಗಳನ್ನು ಸನ್ನಿವೇಶಗಳನ್ನು ಒಡಮೂಡಿಸಿದ್ದಾರೆ. ಕನ್ನಡಕ್ಕೆ ಬಹಳ ವಿಶಿಷ್ಟವಾದ ಲಂಕೇಶರ ಸ್ತ್ರೀ ಪಾತ್ರಗಳು ಪ್ರತಿಭಾವಂತನೊಬ್ಬ ಕಟ್ಟಿಕೊಟ್ಟ ‘ಪ್ರಾಕ್ಸಿ’ಗಳಾದರೆ, ಜಾಹ್ನವಿಯವರ ಸ್ತ್ರೀ ಪಾತ್ರಗಳು ಅವುಗಳಿಗಿಂತ ದಿಟಕ್ಕೆ ಹತ್ತಿರವಾದವು. ‘ವ್ಯಭಿಚಾರ’ ಎನ್ನುವ ಪದದ ಅರ್ಥವನ್ನೇ ಮರುಚಿಂತನೆಗೆ ಹಚ್ಚುವ ವ್ಯಭಿಚಾರ, ದಲಿತರೇ ದಲಿತರ ಶೋಷಣೆ ಮಾಡಬಹುದೆಂಬ ವಾಸ್ತವವನ್ನು ಸರಿಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ ‘ಕಳ್ಳುಬಳ್ಳಿ’, ಹೆಣ್ಣುಗಂಡಿನ ಸಂಬಂಧದ ಹಲವು ನೆಲೆಗಳ ಆತ್ಯಂತಿಕ ಸೂಕ್ಷ್ಮಗಳನ್ನು ಪ್ರಾಯಶಃ ಕನ್ನಡದಲ್ಲಿ ಮೊದಲ ಬಾರಿಗೆ ಅನಾವರಣ ಮಾಡಿರುವ ಇನ್ನೆಷ್ಟೋ ಕತೆಗಳು.

ಜೀವನದ ಪರಿಚಿತ ಚಹರೆಗಳನ್ನು, ಒತ್ತಾಯಗಳನ್ನು ಮೀರುವ, ಹೊಸದಕ್ಕೆ ಕೊಟ್ಟುಕೊಳ್ಳುವ ಪ್ರಯತ್ನದಲ್ಲಿ ಬಹಳ ‘ರಿಸ್ಕು’ಗಳಿವೆ. ಕೊನೆಗೂ ಕತೆಗಾರ್ತಿಯು ಕೇವಲ ಇಂದಿನ ವಾಸ್ತವಗಳನ್ನು ಮಾತ್ರ ಹೇಳುವುದಿಲ್ಲ. ನಾಳಿನ ಸಾಧ್ಯತೆಗಳನ್ನು ಗ್ರಹಿಸಿ, ಸೃಷ್ಟಿಸಿ ಕೊಡುತ್ತಾಳೆ. ಆ ಅರ್ಥದಲ್ಲಿ ಬರವಣಿಗೆಯು ಜೀವಂತಿಕೆಯ ಫಲವಾದ ಆಶಾಚಿಂತನೆಯೂ ಹೌದು. ಇಲ್ಲಿ ಇನ್ನೂ ಒಂದು ಗುಟ್ಟಿದೆ. ಜೀವನದ ಸುಳಿಗಳಲ್ಲಿ ದಿಟ್ಟವಾದ ನಿರ್ಧಾರ ತೆಗೆದುಕೊಂಡು ಅದಕ್ಕೆ ಅನುಗುಣವಾದ ಶಿಲುಬೆಗಳನ್ನು ಹೊರುತ್ತಿರುವವರು, ಬೌದ್ಧಿಕವಾದ ಪೂರ್ವಸಿದ್ಧತೆ ಮತ್ತು ಆಲೋಚನೆಗಳ ಮೂಲಕ ತೀರ್ಮಾನ ತೆಗೆದುಕೊಂಡಿರುವುದಿಲ್ಲ. ಬದಲಾಗಿ ಅಂತಹವರ ‘ಕ್ರಿಯೆಗಳು’. ವ್ಯಾಖ್ಯಾನಕ್ಕೆ ಒಳಪಟ್ಟಾಗ ಅವುಗಳ ನಿಜವಾದ ಆಯಾಮಗಳು ನಮಗೆ ತಿಳಿಯುತ್ತವೆ. ಉದಾಹರಣೆಗೆ, ‘ವ್ಯಭಿಚಾರ’ ಕಥೆಯ ಲೀಲಕ್ಕನ ಬದುಕಿನ ಇಕ್ಕಟ್ಟುಗಳು, ಅವರ ತೀರ್ಮಾನಗಳು ಮತ್ತು ಅವರ ಪಡಿಪಾಟಲುಗಳು ಓದುಗರಿಗೆ ನೇರವಾಗಿ ತಿಳಿಯುವುದೇ ಇಲ್ಲ. ತಿಳಿಯುವುದೇನಿದ್ದರೂ ಅವರ ಕಹಿ ಬೆರೆಯದ ವ್ಯಕ್ತಿತ್ವವಷ್ಟೇ. ಆದರೆ, ನಮಗೆ ಮುಖ್ಯವಾಗುವುದು ಆಕೆಯ ಬಾಳಿನ ವೀಕ್ಷಕರಾದ ಅಕ್ಕತಂಗಿಯರ ತಿಳುವಳಿಕೆಯಲ್ಲಿ ಆಗುವ ಪಲ್ಲಟ. ಆ ತಿಳುವಳಿಕೆಯ ಮದುವೆಯಾಗದ-ಗಂಡು ತಿಳಿಯದ ಅಕ್ಕನ ಒಂಟಿತನ ಮತ್ತು ಅದೆಲ್ಲವನ್ನೂ ತಿಳಿದ/ಪಡೆದ ತಂಗಿಯ ಒಂಟಿತನಗಳ ಅಗ್ನಿದಿವ್ಯದ ಮೂಲಕವೇ ಮೂಡುತ್ತದೆ.

“ಲೀಲಕ್ಕ ಯೂ ಆರ್ ಗ್ರೇಟ್” ಎನ್ನುವ ಮಾತು ನಮ್ಮೆಲ್ಲರ ದೈನಂದಿನ ವರ್ತನೆಗೆ ಹಾದಿ ತೋರುವ ಬೆಳಕಾಗಲು ದಶಕಗಳೇ ಬೇಕಾಗಬಹುದು. ಆ ಬೆಳಕಿನೊಳಗೆ ಇನ್ನೆಷ್ಟೋ ತೊಡಕುಗಳೂ ಇರಬಹುದು. ಅದು ಮುಖ್ಯವಲ್ಲ. ಮುಕ್ತವಾದ ಪ್ರಜ್ಞೆಯು ಹಿಂಸೆಯ ಮೂಲಕವಾಗಿಯೂ ಕಲಿಯುವುದಿದೆಯಲ್ಲ ಅದು ಮುಖ್ಯ. ನೆನ್ನೆ ಸಂಜೆ, ಗಿರೀಶ ಕಾಸರವಳ್ಳಿಯವರ ‘ಘಟಶ್ರಾದ್ಧ’ವನ್ನು ನೋಡುತ್ತಿದ್ದೆ. ಅಲ್ಲಿಯೂ ಕೂಡ ಯಮುನಕ್ಕನು ಸಾಂಪ್ರದಾಯಿಕ ಕ್ರೌರ್ಯದಿಂದ ಅನುಭವಿಸುವ ಹಿಂಸೆಗಿಂತ ನಾಣಿಯ ಮುಗ್ಧತೆಯು ಸ್ಫೋಟವಾಗುವ ಬಗೆಯು ಮುಖ್ಯವಾಗುತ್ತದೆ. ಕನಿಷ್ಠಪಕ್ಷ ಯಮುನೆಗಾದ ಅನ್ಯಾಯವು ಕೆಲವರಿಗಾದರೂ ಹೊಳೆಯುತ್ತದೆ. ಆದರೆ ನಾಣಿಯ ನೋವುಗಳು ಅನುಕ್ತವಾಗಿಯೇ ಉಳಿದುಬಿಡುತ್ತವೆ. ಜಾಹ್ನವಿಯವರು ಸುಜಯ ಮತ್ತು ಸವಿತರನ್ನು ಹೀಗೆ ತೋರಿಸಿದ್ದಾರೆ. ಹಾಗೆಯೇ ಈ ಸೋದರಿಯರು ಬಳಸುವ ಭಾಷೆಯು ಮುಗ್ಧರದೇನೂ ಅಲ್ಲ. ಲೀಲಕ್ಕ ಮತ್ತು ಅವಳ ಪ್ರಿಯಕರ ‘ಪ್ರಾಣಿ’ಯ ಸಂಬಂಧದ ಬಗ್ಗೆ ಅವರು ಬಳಸುವ ಭಾಷೆಯು ನಿಜಕ್ಕೂ ‘Raw’ ಆದುದು. ಅದರಲ್ಲಿ, ಮಧ್ಯಮ ವರ್ಗದ ಬ್ರಾಹ್ಮಣರ ಕನ್ನಡದಲ್ಲಿ ಹಿಡಿಯಲಾಗದ ಯಾವುದೋ ಒಂದು ಜೀವನದ್ರವ್ಯವಿದೆ. ಇದು ಬೇರೆ ಹಲವು ಕಥೆಗಳ ವಿಷಯದಲ್ಲಿಯೂ ನಿಜ. ಆದರೆ, ಅಕ್ಕತಂಗಿಯರ ತಿಳಿವಳಿಕೆಯು ಹೊಸದಾದರೂ ಅವರ ಮೌಲ್ಯಪ್ರಜ್ಞೆಯು ಹಳತಾಗಿಯೇ ಉಳಿದಿರುತ್ತದೆ.

ಅದಕ್ಕೆ ಆಗುವ ಎoಟಣ ಈ ಕತೆಯ ಮುಖ್ಯನೆಲೆ. ಪ್ರಾಯಶಃ ಈ ಸಂಕಲನದ ಸರಿಸುಮಾರಿನಲ್ಲಿ ಅಥವಾ ಅನಂತರ ಬಂದ ವೈದೇಹಿಯವರ ಕೆಲವು ಕಥೆಗಳಲ್ಲಿಯೂ ಇಂತಹುದೇ ಹುಡುಕಾಟಗಳಿವೆ. ಇದು ಪ್ರೇಕ್ಷಕರೇ ಪಾತ್ರಧಾರಿಗಳಾಗಿಬಿಡುವ ಹಾದಿಯ ಪಯಣ. ನನಗೆ ಬಹಳ ಇಷ್ಟವಾದ ಇಂತಹುದೇ ಇನ್ನೊಂದು ಕತೆ, ‘ದೂಪ್ದಳ್ಳಿ ಸೆಕ್ಸಿ ದುರುಗ’ ಎನ್ನುವುದು. ಜಾಹ್ನವಿಯವರ ಬಹುಪಾಲು ಕತೆಗಳು ವರ್ಣಭೇದ, ಜಾತಿಭೇದ ಮುಂತಾದ ಸಂಗತಿಗಳ ಜೊತೆಜೊತೆಗೆ ವರ್ಗಭೇದ ಮತ್ತು ಜೀವನಶೈಲಿಗಳ ನಡುವಿನ ಅಂತರದಿಂದ ಹುಟ್ಟುವ ದುರಂತಗಳನ್ನು ಬಗೆಯುತ್ತವೆ. ಕುವೆಂಪುರವರು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕಾವೇರಿಗೆ ಗುತ್ತಿಯು ಆರೋಗ್ಯಶಾಲಿಯೂ ಸುಂದರವೂ ಆದ ಪ್ರಾಣಿಯಂತೆ ಕಾಣುತ್ತಿದ್ದನೆಂದು ಹೇಳುತ್ತಾರೆ. ಹಾಗೆಯೇ ಪೀಂಚಲು, ಐತನ ಮೇಲಿನ ತನ್ನ ಪ್ರೀತಿಗೆ ಕೊಂಚವೂ ಭಂಗ ಬರದಂತೆ ಮುಕುಂದಯ್ಯನಿಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಿದ್ದಳೆಂದು ಹೇಳುತ್ತಾರೆ. ಆ ಅನಿಸಿಕೆಗಳನ್ನು ಮರು ಪರಿಶೀಲಿಸುವ ಕಾಲ ಈಗ ಖಂಡಿತವಾಗಿಯೂ ಬಂದಿದೆ.

ಅದೇನೇ ಇರಲಿ, ಈ ಕತೆಯಲ್ಲಿ ನಿರೂಪಕಿಯ ಗೆಳತಿಯರ ಅಷ್ಟೇನೂ ಮುಗ್ಧವಲ್ಲದ ಚೆಲ್ಲಾಟ, ದುರುಗನೆಂಬ ಇಲಿಗೆ ಪ್ರಾಣಸಂಕಟವಾಗುತ್ತದೆ. ಅವನಲ್ಲಿ ಲೈಂಗಿಕ ಮತ್ತು ಪ್ರೇಮಸಂಬಂಧಿಯಾದ ಭಾವನೆಗಳು ಮೂಡುವ ಕ್ರಮ ಮತ್ತು ಅದರ ದುರಂತದ ಹಾಗೆಯೇ, ಕತೆ ಹೇಳುತ್ತಿರುವ ಹುಡುಗಿಯು ಬೆಳೆಯುವ ಮತ್ತು ತನ್ನ ವಾತಾವರಣದ ಒಳಗಡೆಯೇ ಅಡಗಿರುವ ಅಸಮತೆ ಮತ್ತು ಕ್ರೌರ್ಯಗಳನ್ನು ಕಂಡುಕೊಳ್ಳುವ ಬಗೆಯನ್ನೂ ಕಟ್ಟಿಕೊಡುತ್ತದೆ. ಇಷ್ಟಕ್ಕೂ ಇದು ದುರುಗ ಮೂಡಿಬಂದಿರುವ ಗ್ರಾಮೀಣ ವಾತಾವರಣವು ಮುಗ್ಧವೆಂದು ಹೇಳುವ ಕಥೆಯಲ್ಲ. ಅಲ್ಲಿಯೂ ರತ್ನಳಂತಹ ಅಸಹಾಯಕಳನ್ನು ‘ಹಾಲಿಂಡಸ್ಟೂರು’ (All India Tour) ಕರೆದುಕೊಂಡು ಹೋಗಿ ದುರುಪಯೋಗ ಮಾಡಿಕೊಳ್ಳುವ ಸಾಹುಕಾರರಿದ್ದಾರೆ. ಆದರೆ ಅದು ದುರುಗನ ತಿಳುವಳಿಕೆಗೆ ನಿಲುಕುವುದಿಲ್ಲ. ಆದರೆ ನಿರೂಪಕಿಯ ವಿದ್ಯಾಭ್ಯಾಸ ಮತ್ತು ಆದಕ್ಕಿಂತ ನೂರುಪಟ್ಟು ಹೆಚ್ಚಾಗಿ ಅವಳ ಸಂವೇದನಾಶೀಲತೆ ಅವಳಿಗೆ ದುರುಗನ ದುರಂತವನ್ನು ಮನದಟ್ಟು ಮಾಡಿಸುತ್ತದೆ. ಆದ್ದರಿಂದಲೇ ಜಾಹ್ನವಿಯವರ ಪಾತ್ರಗಳು ಪ್ರಾತಿನಿಧಿಕವಾಗುವ ಹಂಬಲದಲ್ಲಿ ಸ್ವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ. ಅವರ ಯಾವ ಪಾತ್ರವೂ ರಕ್ತಮಾಂಸ ಹೃದಯ ಮೆದುಳುಗಳ ಸ್ಪಂತ ವಾಸ್ತವಕ್ಕೆ ಹೊರತಾಗುವುದಿಲ್ಲ.

ಜಾಹ್ನವಿಯವರ ಕಥೆಗಳು ಆಧುನಿಕತೆಯನ್ನು ಮೈಗೂಡಿಸಿಕೊಂಡಿವೆ ಎಂದು ನಾನು ಹೇಳಿದೆ. ಆದರೆ, ಇದು ಅಷ್ಟು ಸರಳವಿಲ್ಲ. ಜಾಹ್ನವಿಯವರ ತಂದೆಯವರು ಮೂಡಿಸಿದ ಆಧುನಿಕವಾದ ತಿಳಿವಳಿಕೆಗೊ ಇಪ್ಪತ್ತನೆಯ ಶತಮಾನವು ಹುಟ್ಟುಹಾಕಿಕೊಂಡಿರುವ ‘ಜಾಗತಿಕ ಆಧುನಿಕತೆ’ಯ ನರಕಕ್ಕೂ ಖಚಿತವಾದ ವ್ಯತ್ಯಾಸಗಳಿವೆ. ಜಾಹ್ನವಿಯವರು ಮೊದಲನೆಯದರ ಗುಣಗಳು ಮತ್ತು ಎರಡನೆಯದರ ಮಿತಿಗಳು ಎರಡನ್ನೂ ಗುರುತಿಸಿದ್ದಾರೆ. ಅವರ ಬಹುಪಾಲು ಕತೆಗಳು ಮಧ್ಯಮವರ್ಗಕ್ಕೆ ಚಲಿಸಿರುವ ಹಳ್ಳಿಗಳಿಂದಲೇ ಬಂದು ನಗರದಲ್ಲಿ ಜೀವನ ನಡೆಸುತ್ತಿರುವ ಹಲವು ಜಾತಿಗಳ ವಿದ್ಯಾವಂತರ ಆಷಾಢಭೂತಿತನದ ಜೊತೆಗೆ ಹಳ್ಳಿಗಳಿಂದ ಬಂದ ಚಿಕ್ಕ ವಯಸ್ಸಿನ ಅವಲಂಬಿತರ ಮೌಲ್ಯಗಳನ್ನು ಮುಖಾಮುಖಿಯಾಗಿಸುತ್ತವೆ. ಇದು ನಿಜವಾಗಿಯೂ ‘ಹುಸಿಯಾದ’ ವಿದ್ಯಾಭ್ಯಾಸವು ಹುಟ್ಟಿಸಿದ ಕೆಟ್ಟತನದ ಕತೆ. ಆ ಕೆಟ್ಟತನವೂ ಎಲ್ಲ ಮನುಷ್ಯರ ಒಳಗಡೆಯೇ ಇರುವಂಥದ್ದು. ಆಕಾಶದಿಂದ ಉದುರುವುದಲ್ಲ. ಆದರೆ, ಮಧ್ಯಮವರ್ಗದವರ ತಣ್ಣನೆಯ ಕ್ರೌರ್ಯವನ್ನು ‘ಸಭ್ಯತೆ’, ‘ನಾಗರೀಕತೆ’ ಎಂದು ಮೆರೆಸುವ ಹುನ್ನಾರಗಳು ನಮ್ಮ ಕಣ್ಣೆದುರಿಗೆ ಇವೆ. ಜಾಹ್ನವಿಯವರು ಅಂತಹ ಹುನ್ನಾರಗಳ ಬುಡಕ್ಕೆ ಕೊಡಲಿಪೆಟ್ಟು ಹಾಕುತ್ತಾರೆ. ಅದರಲ್ಲಿಯೂ ಇದು ಹೊಸದಾಗಿ ಮೈದಳೆದಿರುವ ನವ ಮಧ್ಯಮವರ್ಗ. ನಿಜಕ್ಕೂ ‘ಇದರ ಬಾಯಲ್ಲಿ ಬೆಲ್ಲ, ಕೈಯಲ್ಲಿ ಕತ್ತರಿ’ ಇರುತ್ತದೆ. ಅದು ಕ್ರೌರ್ಯದ ಪರಮಾವಧಿ.

ಜಾಹ್ನವಿಯವರ ಕತೆಗಳ ಇನ್ನೊಂದು ಲಕ್ಷಣವೆಂದರೆ ಗಂಡು-ಹೆಣ್ಣುಗಳ ಸಂಬಂಧದ ಹಲವು ಸೂಕ್ಷ್ಮಗಳನ್ನು ಹಲವು ನೆಲೆಗಳಲ್ಲಿ ನೋಡಿರುವುದು. ಕಥಾ ಸಾಹಿತ್ಯದಲ್ಲಿ ಇದು ಬಹಳ ಕಷ್ಟದ ಕೆಲಸ. ಶಿವರಾಮ ಕಾರಂತರಿಂದ ಹಿಡಿದು ವೀಣಾ ಶಾಂತೇಶ್ವರ ಮತ್ತು ವೈದೇಹಿಯವರಿಗೆ ಅನೇಕ ಲೇಖಕರು ಇಂಥ ಪ್ರಯತ್ನ ಮಾಡಿದ್ದಾರೆ. ದೇಹ, ವಿಚಾರಗಳು ಮತ್ತು ಭಾವನೆಗಳ ನಡುವಿನ ಕೂಡುಕೊಳ್ಳುವ ಸಂಬಂಧಗಳನ್ನು, ಅಂತೆಯೇ ಗಡಿಗೆರೆಗಳನ್ನು ಗುರಿತಿಸುವುದು ಕಷ್ಟ. ಜಾಹ್ನವಿಯವರು ಆಧುನಿಕವೆಂದು ತೋರುವಾಗಲೂ ಎಲ್ಲ ಕಾಲಕ್ಕೂ ನಿಜವಿರಬಹುದಾದ ಸತ್ಯಗಳನ್ನು ಹುಡುಕಿ ತೆಗೆದಿದ್ದಾರೆ. ಕಾಮ ಮತ್ತು ಪ್ರೇಮಗಳನ್ನು ಪರಸ್ಪರ ವಿರುದ್ಧ ಧ್ರುವಗಳೆಂದು ತಿಳಿಯದ ಒರಟುತನ, ಸೌಮ್ಯತೆ, ನಾಜೂಕು, ಹುಸಿತನ ಮುಂತಾದ ಸಂಗತಿಗಳನ್ನು ಎಚ್ಚರಿಕೆಯಿಂದ ಶೋಧಿಸುವ ಕೆಲಸ ಇಲ್ಲಿ ನಡೆದಿದೆ. ಗಂಡು-ಹೆಣ್ಣುಗಳ ಸಂಬಂಧವು ಆದರ ಒಟ್ಟಂದದಲ್ಲಿ ಮೂಡುವುದೇ ವಿನಾ ಕೇವಲ ಕಾಮ-ಪ್ರೇಮಗಳಲ್ಲಿ ಅಲ್ಲವೆಂಬ ತಿಳಿವಳಿಕೆಯು ಇಲ್ಲಿ ನಿಚ್ಚಳವಾಗಿದೆ.

ಈ ವಿಚಾರಗಳನ್ನು ಇನ್ನಷ್ಟು ಭಿನ್ನವಾಗಿ ನೋಡುವ ಕತೆ, ‘ನೆರೆಹಾವಳಿ’. ಇದರಲ್ಲಿ ಬರುವ ಅನಿತಾ ಎಂಬ ಹದಿನೆಂಟರ ಹುಡುಗಿಯ ಆಯ್ಕೆಗಳ ಹಿಂದಿರುವ ದಿಟ್ಟತನ ಮತ್ತು ತಿಳುವಳಿಕೆಗಳು ಬದುಕಿನ ಪಾಠಶಾಲೆಯಲ್ಲೇ ಕಲಿತ ಅನಿವಾರ್ಯಗಳು. ಐವತ್ತು ವರ್ಷ ಮೀರಿದ ಶೆಟ್ಟರ ಸಂಗಡದ ತನ್ನ ಸಂಬಂಧವನ್ನು ಹೇಳುವಾಗ, “ಅಷ್ಟಕ್ಕೂ ನಾನು ಈಗ ಮಾಡ್ತಿರದ್ನ ಮದ್ವೆಯಾದ್ಮೇಲೂ ಮಾಡದಲ್ವಾ ಸರ್ ಏನು ವ್ಯಶ್ಯಾಸ?” “ಅಂದು ನಮ್ಮೊಳಗೊಂದು ಸಮರವನ್ನೇ ಸಾರಿ. ತಾನು ಸುಮ್ಮನೆ ಕುಳಿತುಬಿಟ್ಟಳಾಕೆ”. ಅವಳ ತಿಳಿವಳಿಕೆಯನ್ನು ನಿರೂಪಕಿ ಸರಿಯಾಗಿ ಗುರುತಿಸುತ್ತಾಳೆ. “ಮನು, ಅವ್ಳು ಪ್ರಜ್ಞೆಯಿಟ್ಕಂಡೇ ಎಲ್ಲಾ ಮಾಡ್ತಿದಾಳೆ. ಪ್ರಜ್ಞೆ ಕಳ್ಕಂಡಲ್ಲ. ಮತ್ತೆ ಯಾಕ್ಮಾಡ್ತಿದಾಳೆ. ಆಕೆಗೇನ್ ಬೇಕು ಇದರ ಸ್ಪಷ್ಟ ಅರಿವೂ ಇದೆ. ಎಚ್ಚರಿಕೇನೂ ಇದೆ, ಅದಕ್ಕೆ ಅಲ್ಲಿ ಯಾವ ಫ್ಯೂಷನ್ನೂ ಇಲ್ಲ, ಕನ್‌ಫೆಷನ್ನೂ ಇಲ್ಲ?…” ಈ ನಿಲುವು ಒಬ್ಬ ನಿರ್ಭಾವುಕಳಾದ ಒರಟು ಹುಡುಗಿಯನ್ನು ಸೃಷ್ಟಿಸಿಲ್ಲವೆನ್ನುವುದು ಈ ಕತೆಗಿರುವ ಇನ್ನೊಂದು ಆಯಾಮ. ಇಂತಹ ದಿಟ್ಟ ಹುಡುಗಿಯೂ ಕೊಂಚವೇ ಕೊಂಚ ಪ್ರೀತಿಯನ್ನು ಕಂಡಾಗ, ಪುಟ್ಟ ಹುಡುಗಿಯಾಗುತ್ತಾಳೆ. ಆದರೂ ಸರಿಯಾದ ತೀರ್ಮಾನವನ್ನೇ ತೆಗೆದುಕೊಳ್ಳುತ್ತಾಳೆ.

ನಾನು ಬಹಳ ಕೋಟ್ ಮಾಡಲು ಇಷ್ಟಪಡುವುದಿಲ್ಲ. ದಯವಿಟ್ಟು ಅದೊಂದು ಕತೆಯನ್ನಾದರೂ ಓದಿ. ಈ ಕತೆಯು ಇನ್ನಷ್ಟು ಸಾಂದ್ರವಾಗುವುದು. ನಿರೂಪಕಿ ಮತ್ತು ಮನು ಎಂಬ ಯುವಕನ ಬಿಡುಬೀಸು ಎಂಬಂತೆ ಕಂಡರೂ ಮುಕ್ತವಾದ ಆರೋಗ್ಯಕರವಾದ ಸಂಬಂಧದಿಂದ. ಅವರ ಮಾತುಕತೆ ಮತ್ತು ಕ್ರಿಯೆಯಲ್ಲಿಯೇ ತಾರುಣ್ಯದ ಉಕ್ಕಂದ ಮತ್ತು ಕಲ್ಪಕತೆಗಳು ತುಂಬಿ ತುಳುಕುತ್ತವೆ. ಆದರೆ, ಹದಿನೆಂಟರ ಅನಿತಾಳ ‘ಪ್ರಬುದ್ಧತೆ’ ಮತ್ತು ಮೂವತ್ತರ ಆಸುಪಾಸಿನ ಅವರಿಬ್ಬರ ‘ಹುಡುಗುತನ’ವನ್ನು ಅಕ್ಕಪಕ್ಕ ಇಟ್ಟು ನೋಡಿದಾಗ, ಬದುಕಿನ ಸ್ವರೂಪದಲ್ಲಿಯೇ ಇರುವ ಅಸಮಾನತೆ ಮತ್ತು ಕ್ರೌರ್ಯಗಳು ಎದ್ದು ಕಾಣುತ್ತವೆ. ಹಾಗೆ ನೋಡಿದರೆ, ಇವರು ಯಾರೂ ಖಳನಾಯಕರಲ್ಲ, ಕೆಟ್ಟವರಲ್ಲ. ಎಲ್ಲರೂ ತಮ್ಮ ಪರಿಸರವು ರೂಪಿಸಿದ ಗೊಂಬೆಗಳು. ಆದರೆ, ಆ ಒತ್ತಾಯಗಳನ್ನು, ಒತ್ತಡಗಳನ್ನು ಮೀರಿ ಮಾನವೀಯವಾಗುವ ಕರ್ತವ್ಯ ಮತ್ತು ಸಾಧ್ಯತೆಗಳನ್ನು ಈ ಕತೆಗಳು ತಿಳಿಸಿಕೊಡುತ್ತವೆ.

ಇಲ್ಲಿರುವ ಎಲ್ಲ ಕತೆಗಳನ್ನೂ ಪರಿಚಯ ಮಾಡಿಕೊಡುವ ಉದ್ದೇಶ ನನಗಿಲ್ಲ. ಕೆಲವು ಕತೆಗಳು ಮನುಷ್ಯರ ಬಡತನ, ಕೆಟ್ಟತನ ಮತ್ತು ಸ್ವಾರ್ಥಗಳ ಫಲವಾದ ದುಃಖವನ್ನು, ಅದರ ನಡುವೆಯೂ ಪುಟಿಯುವ ಮನುಷ್ಯತ್ವದ ಜೀವಸೆಲೆಯನ್ನು ಅಚ್ಚುಕಟ್ಟಾಗಿ ಹೇಳುತ್ತವೆ. ಅವುಗಳಿಗೆ ಹೆಚ್ಚಿನ ಮಹತ್ವಕಾಂಕ್ಷೆ ಇಲ್ಲ. ಸಮುದಾಯಗಳೊಂದಿಗೆ ಬೆರೆತು ಅವರ ಹಾಡುಪಾಡುಗಳನ್ನು ಹಂಚಿಕೊAಡವರಿಗೆ ಇಂಥದೊAದು ಅಪೇಕ್ಷೆ ಸಹಜವಾಗಿಯೇ ಇರುತ್ತದೆ. ಹೀಗೆ ಹೇಳುವಾಗ ನನಗೆ ಗುಲ್ಬರ್ಗಾದ ಹೋರಾಟಗಾರ್ತಿ ಕಥೆಗಾರ್ತಿಯಾದ ಕೆ.ನೀಲಾ ಅವರು ನೆನಪಿಗೆ ಬರುತ್ತಿದ್ದಾರೆ. ಹೀಗೆ ಹಂಚಿಕೊಳ್ಳುವ ಕೆಲಸವು ಸ್ವ-ಕೇಂದ್ರಿತವಾದ ಗೋಳುಕರೆಗಿಂತ ಒಳ್ಳೆಯದು. ಜಾಹ್ನವಿಯವರ ಕೆಲವು ಕಥೆಗಳಲ್ಲಿ, ಸನ್ನಿವೇಶದ ವಿಷಮತೆಯಿಂದ ತಪ್ಪಿಸಿಕೊಳ್ಳಲು ಹೆಣ್ಣುಮಕ್ಕಳು ಹೂಡುವ ಉಪಾಯಗಳ ಪ್ರಸ್ತಾಪ ಬರುತ್ತದೆ. ಶಕ್ತಿಯ ಬದಲು ಯುಕ್ತಿಯನ್ನು ಬಳಸುವ ಇವರು ಕುವೆಂಪು ಕಾದಂಬರಿಗಳ ಹಳೇಪೈಕದ ತಿಮ್ಮ ಮತ್ತು ನಾಯಿ ಗುತ್ತಿಯರ ಹಾಗೆ “Trickster Hero”ಗಳ ಗುಂಪಿಗೆ ಸೇರುತ್ತಾರೆ.

‘ದೇವರ್ ಬಂದಾವ್ ಬನ್ನಿರೋ?’ ಕತೆಯ ರೇಣುಕಾ ಮತ್ತು ‘ಒಬ್ರು ಸುದ್ಯಾಕೆ?…’ ಈ ಕತೆಯ ಕಲ್ಯಾಣಿ ಇಂತಹ ಪಾತ್ರಗಳು ನಮ್ಮ ಲೇಖಕಿಯರ ಕತೆ-ಕಾದಂಬರಿಗಳಲ್ಲಿ ಇಂತಹ ಜಾಣೆಯರೂ ಅಪರೂಪವೇ. ‘ನೆಲಬಾನಿನ ಗೆಳೆತನ’ ಕತೆಯ ಪಾರ್ವತಿ ಕೂಡ ಇವರಿಗಿಂತ ಭಿನ್ನವಾದರೂ ಗಮನಿಸಲೇಬೇಕಾದ ಪಾತ್ರ. ಜಾಹ್ನವಿಯವರು ನೂರಕ್ಕೆ ನೂರರಷ್ಟು ಕನ್ನಡದ, ಕರ್ನಾಟಕದ ಮತ್ತು ತನ್ನ ಕಾಲದ ಭಾಷೆಯನ್ನು ಬಳಸಿದ್ದಾರೆ. ಇದು ಬಹಳ ಮುಖ್ಯವಾದುದು. ಏಕೆಂದರೆ, ನಮ್ಮ ಸಂವೇದನೆ, ತಿಳುವಳಿಕೆ ಮತ್ತು ನಾವು ಕಟ್ಟಿಕೊಡುವ ಲೋಕ ಇವೆಲ್ಲವೂ ನಿಜವಾಗುವುದು ಭಾಷೆಯಿಂದ ಮಾತ್ರವೇ. ಇಲ್ಲಿ ಸಂಸ್ಕೃತ ಪದಗಳ ಬಳಕೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಲಂಕೇಶ್ ಮತ್ತು ತೇಜಸ್ವಿಯವರು ಹೀಗೆ ಅಬ್ಬರವಿಲ್ಲದೆ, ಘೋಷಣೆಗಳಿಲ್ಲದೆ ಕನ್ನಡವನ್ನು ಬಳಸುವ ಬಗೆಯನ್ನು ನಮಗೆ ಹೇಳಿಕೊಟ್ಟರು, ಹಾಗೆಯೇ ಇಲ್ಲಿ ಮಧ್ಯ ಕರ್ನಾಟಕದ ಅದರಲ್ಲಿಯೂ ಚಿತ್ರದುರ್ಗ ಜಿಲ್ಲೆಯ ಆಡುಮಾತನ್ನು ಬಹಳ ಪರಿಣಾಮಕಾರಿಯಾಗಿ ಬಳಸಲಾಗಿದೆ. ಅದು ತನ್ನಷ್ಟಕ್ಕೆ ತಾನು ಮುಖ್ಯವಲ್ಲ. ಕತೆಗಾರ್ತಿಯು ಆ ಉಪಭಾಷೆಯನ್ನು ಬಳಸಿಕೊಂಡು ತನ್ನದೇ ಆದ ಶೈಲಿಯನ್ನು ಕಟ್ಟಿಕೊಂಡಿರುವುದು ಮುಖ್ಯ. ಅದರಲ್ಲಿ ನಿಜಕ್ಕೂ ಸೃಜನಶೀಲತೆ ಮತ್ತು ಧೈರ್ಯಗಳಿವೆ.

‘ಒಬ್ರು ಸುದ್ಯಾಕೆ ? ಗದ್ಲ್ಯಾಕೆ…’ ಮುಂತಾದ ಕತೆಗಳ ಹೆಸರಿನಿಂದ ಹಿಡಿದು ಕತೆಗಳ ಒಳಗೆ ತುಂಬಿರುವ ವಿವರಗಳವರೆಗೆ ಹಲವು ಪ್ರಾದೇಶಿಕ ಸಂಗತಿಗಳು ಈ ಬರವಣಿಗೆಯ ರಕ್ತ ಮಾಂಸಗಳಾಗಿವೆ. ಹಾಗೆಂದು ಪ್ರಾದೇಶಿಕತೆಯು ‘ಲಂಪಟತೆ’ಯೋ ಅನನ್ಯತೆಯನ್ನು ಪಡೆದುಕೊಳ್ಳುವ ಸುಲಭ ಹಾದಿಯೋ ಆಗದಂತೆ ಅವರು ಎಚ್ಚರ ವಹಿಸಿದ್ದಾರೆ. ಇಲ್ಲದೆ ಹೋದರೆ ಪ್ರಾದೇಶಿಕತೆ ಇರುತ್ತದೆ, ಆದರೆ ಕತೆಯೇ ಇರುವುದಿಲ್ಲ. ಅಲ್ಲದೆ ಬರೆಯುವವರು ಭಾವುಕತೆ, ಜಾಣತನ, ತುಂಟತನ, ನೋವು ಮುಂತಾದ ಹತ್ತು ಹಲವು ಸಂಕೀರ್ಣ ಸೂಕ್ಷ್ಮಗಳನ್ನು ಶೈಲಿಯಲ್ಲಿ ಮಾಡಿಕೊಳ್ಳುವ ಬದಲಾವಣೆಗಳಿಂದಲೇ ತೋರಿಸಬೇಕಾಗುತ್ತದೆ. ಸ್ವತಃ ಭಾವುಕಳಾಗುವ ಲೇಖಕಿಯು ಭಾವುಕವಾದ ಕತೆಗಳನ್ನು ಬರೆಯಲಾರಳು. ವಿಚಾರವೂ ಹಾಗೆಯೇ ಕತೆಯ ಮತ್ತು ಶೈಲಿಯ ಒಡಲಿನಿಂದಲೇ ಮೂಡಿಬರಬೇಕು. ‘ಪ್ರಿ-ಡೆಟರ್ಮೈನ್ಡ್’ ಆದ ವೈಚಾರಿಕತೆಯಿಂದ ಅಲ್ಲ. ‘ವಿಮುಖ’ ಮತ್ತು ‘ವ್ಯಭಿಚಾರ’ ಕತೆಗಳನ್ನು ಈ ದೃಷ್ಟಿಯಿಂದ ನೋಡಬಹುದು.

ಈ ಮುನ್ನುಡಿಯು ಈಗಾಗಲೇ ಸಾಕಷ್ಟು ಉದ್ದವಾಗಿದೆ. ಇಂಥ ಸಂಕಲನಗಳು ಪ್ರಕಟವಾದ ಮೇಲೆ ಬರುವ ವಿಮರ್ಶೆಗಳು ಇಲ್ಲವೇ ಇಲ್ಲ ಅಥವಾ ಬಹಳ ಕಡಿಮೆ ಎನ್ನುವ ಕೊರಗು ಕೂಡ ಇದಕ್ಕೆ ಕಾರಣವೆಂದು ತೋರುತ್ತದೆ. ಅದೂ ಅಲ್ಲದೆ, ಸ್ವತಃ ಜಾಹ್ನವಿಯವರು ಈ ಪುಸ್ತಕದೊಂದಿಗೆ ‘ನಾನು, ನನ್ನೋರು, ನನ್ ಬರವಣಿಗೆ’ ಎಂಬ ಬಹಳ ಒಳ್ಳೆಯ ಬರವಣಿಗೆಯನ್ನು ಕೊಟ್ಟಿದ್ದಾರೆ. ಅದೇ ಒಂದು ಕತೆಯ ಹಾಗೆ ತಲ್ಲಣಿಸುತ್ತದೆ. ಅದಕ್ಕೆ ಹೋಲಿಸಿದರೆ ನನ್ನ ಮುನ್ನುಡಿಯು ನೀರಸ. ಅದೇನೇ ಇರಲಿ, ಜಾಹ್ನವಿಯವರು ತಮ್ಮ ಮೊದಲ ಸಂಕಲನವನ್ನು ತಮ್ಮ ತಂದೆ ಡಾ.ತಿಪ್ಪೇಸ್ವಾಮಿಯವರಿಗೆ ಮತ್ತು ಲಂಕೇಶ್ ಅವರಿಗೆ ಅರ್ಪಿಸಿದರು. ಇಬ್ಬರೂ ಈಗ ಇಲ್ಲ. ಆದರೆ, ಅವರು ನಂತರದ ಕತೆಗಳ ಈ ಫಸಲನ್ನು ನೋಡಿದ್ದರೆ ಸಂತೋಷ ಪಡುತ್ತಿದ್ದರೆಂಬ ನಂಬಿಕೆ ನನಗಿದೆ. ಇವರು ಬರವಣಿಗೆಗೆ ಇನ್ನಷ್ಟು ಸಮಯ ಮತ್ತು ಗಮನಗಳನ್ನು ಕೊಡಲಿ ಮತ್ತು ತಮ್ಮ ಸಂಗಡವೇ ಬೆಳೆಯುವ ಹೊಸ ಕತೆಗಳನ್ನು ಬರೆಯಲಿ ಎಂದು ನನ್ನ ಆಸೆ. ಆದರೆ, ಈಗ ಬರೆದಿರುವಷ್ಟರಿಂದಲೇ ಅವರು ಕನ್ನಡದ ಮುಖ್ಯ ಕತೆಗಾರ್ತಿಯರಲ್ಲಿ ಒಬ್ಬರು. ಇಲ್ಲಿ ಈ ಮಾತುಗಳನ್ನು ಬರೆಯುವ ಅವಕಾಶ ಕೊಟ್ಟಿದ್ದಕ್ಕಾಗಿ ಅವರಿಗೆ ನನ್ನ ವಂದನೆಗಳು.

‍ಲೇಖಕರು Admin MM

February 20, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: