
ಶಿವಕುಮಾರ್ ಮಾವಲಿ
ಎಚ್ಚರ, ಇಲ್ಲಿ ಸರ್ಕಾರಗಳಿವೆ.
ನೀವು ಹುಟ್ಟುವ ಮೊದಲೇ ಅವು
ಅಸ್ತಿತ್ವದಲ್ಲಿರುತ್ತವೆ .
ನೀವು ಸತ್ತ ಮೇಲೂ
ಸರ್ಕಾರಗಳು ಸಾಯುವುದೇ ಇಲ್ಲ.
ಎಚ್ಚರ, ಇಲ್ಲಿ ಸರ್ಕಾರಗಳಿವೆ
ಅವು ನಿಮಗೂ ನಿಮ್ಮ ಮಕ್ಕಳಿಗೂ
ಅನ್ನ -ಉದ್ಯೋಗಗಳನ್ನು ಕೊಡುತ್ತವೆ.
ಆದರೆ ಸ್ವತಂತ್ರವನ್ನು ಕಿತ್ತುಕೊಳ್ಳುತ್ತವೆ.
ಎಚ್ಚರ, ಇಲ್ಲಿ ಸರ್ಕಾರಗಳಿವೆ
ಅವು ಅಬ್ಬರಿಸಿ ಬೊಬ್ಬಿರಿಯುತ್ತವೆ
ಆದರವಕ್ಕೆ ಶಾರೀರವಿದೆಯೇ ಹೊರತು ಶ್ರವಣವಿಲ್ಲ.
ಅವು ಚರ್ಚಿಸುತ್ತವೆ ;
ದೇಶದ ಬಗ್ಗೆ, ದೇಶವಾಸಿಗಳ ಬಗ್ಗೆ.
ಎಚ್ಚರ, ಇಲ್ಲಿ ಸರ್ಕಾರಗಳಿವೆ
ಅವುಗಳಿಗೆ ‘ಆನೆ ಹೊಟ್ಟೆ’ ಮತ್ತು ‘ಆಮೆ ವೇಗ’ಗಳಿವೆ
ಅವು ನಿಮ್ಮನ್ನು ರಮಿಸುತ್ತವೆ, ರಕ್ಷಿಸುವ ಹೊಣೆಹೊತ್ತಿವೆ.
ಎಚ್ಚರ, ಇಲ್ಲಿ ಸರ್ಕಾರಗಳಿವೆ
ಅವು ನಗರಗಳಲ್ಲಿ ಖಾಯಂ ವಿಳಾಸ ಹೊಂದಿವೆ
ಮತ್ತು ಗ್ರಾಮಗಳಿಗೆ ಆಗಾಗ ವಿಹಾರಕ್ಕೆ ಬರುತ್ತವೆ
ಅವು ನಿಮ್ಮ ಮದುವೆ, ಮುಂಜಿ, ಮಹಾಸಭಾಗಳಲ್ಲೂ ಹಾಜರಿ ಹಾಕುತ್ತವೆ
ಎಚ್ಚರ, ಇಲ್ಲಿ ಸರ್ಕಾರಗಳಿವೆ
ಅವು ಕೋರ್ಟು- ಕಛೇರಿಗಳ ರೂಪದಲ್ಲಿ
ನಿಮ್ಮನ್ನು ಹೈರಾಣಾಗಿಸುತ್ತ,
ಕಡತಗಳಲ್ಲೇ ಕಳೆದುಹೋಗಿವೆ .
ಎಚ್ಚರ, ಇಲ್ಲಿ ಸರ್ಕಾರಗಳಿವೆ
ಅವು ಸದಾ ಸನ್ನದ್ಧ ಸೈನ್ಯವನ್ನು ಹೊಂದರುತ್ತವೆ
ಅಗತ್ಯಬಿದ್ದರೆ ಆ ಸೈನ್ಯವನ್ನು
ನಿಮ್ಮ ಮೇಲೂ ನುಗ್ಗಿಸುತ್ತವೆ.
ಮರೆಯದಿರಿ,
ಈ ಸಾರ್ವಭೌಮ ಸರ್ಕಾರಗಳು
ಈಗಾಗಲೇ ನಿಮ್ಮ ಜಗುಲಿ, ಕೊಟ್ಟಿಗೆ, ಅಡುಗೆಕೋಣೆಗಳನ್ನು ಪ್ರವೇಶಿಸಿವೆ.
ಇನ್ನು ಮಲಗುವ ಕೋಣೆಯೇನು ಬಹುದೂರವೇ
ಈ ಸಂಭಾವಿತ ಸರ್ಕಾರಗಳಿಗೆ !






ಕವನ ಚೆನ್ನಾಗಿದೆ ಶಿವಕುಮಾರ್
ಕಾಡುವ ಕವಿತೆ……
Well written Shivu. Hats off to you
ಸರ್ಕಾರ ಎಂಬ ಸರ್ವಾಧಿಕಾರಿ ಮನಸ್ಸಿನ ಮನುಷ್ಯನೊಳಗಣ ದುಷ್ಟತನ ಹಾಗೂ ಕ್ರೌರ್ಯವನ್ನು ತಣ್ಣಗೆ ಹಿಡಿದಿಡುವ ಕವಿತೆ , ಮನುಷ್ಯ ಸತ್ತರೂ ಸರ್ಕಾರಗಳು ಸಾಯುವುದಿಲ್ಲ ಎಂಬ ಧ್ವನಿಯಲ್ಲಿ ಮನುಷ್ಯನ ನಿರಂತರ ಅಧಿಕಾರ ದಾಹವನ್ನು ಸಾರುತ್ತದೆ.
ದೇಶ ಮತ್ತು ದೇಶವಾಸಿಯ ಮುಖವಾಡ ಸರ್ವಾಧಿಕಾರಿ ಮನಸ್ಸು ಸದಾ ಹೊದ್ದಿರುತ್ತದೆ ಹಾಗೂ ಆನೆ ಹೊಟ್ಟೆ , ಆಮೆ ವೇಗ ಎಂಬ ಪ್ರತಿಮೆ ಗಳು ಕವಿತೆ ಮತ್ತಷ್ಟು ಕಸುವು ತಂದಿವೆ.
ಮಲಗುವ ಕೋಣೆಗೂ ಸಂಭಾವಿತ ಸರ್ಕಾರಗಳು ಇಣುಕಬಹುದು ಎಂಬ ಸಾಲು ಕವಿತೆಯ ಸಾಮರ್ಥ್ಯ ಮತ್ತು ಅಧಿಕಾರ ಬಲ ಎಲ್ಲಿತನಕ ವ್ಯಾಪಿಸಬಹುದು ಹಾಗೂ ಸರ್ಕಾರದಲ್ಲಿರುವವರ ಕೇಡಿತನವನ್ನು ಕವಿ ಗಟ್ಟಿ ಹಾಗೂ ಸೂಕ್ಷ್ಮ ಎಳೆಯಲ್ಲಿ ಸೈಕಿಕಲ್ ಡಿಸ್ಟೆನೆನ್ಸ್ ” ಮಾನಸಿನ ದೂರ ” ಕಾಯ್ದುಕೊಳ್ಳುತ್ತಲೇ ದಾಖಲಿಸುವುದು ಕಾವ್ಯದ ಸೊಗಸುಗಾರಿಕೆ ಹೆಚ್ಚಿಸಿದೆ.
ಕವಿತೆ ಚೆನ್ನಾಗಿದೆ
ಮಾವಲಿಯವರ ಕವಿತೆಯ ಸೊಗಸು ಇರುವುದು ದೊಡ್ಡ ಸತ್ಯಗಳನ್ನು ನೇರ ಮತ್ತು ಸರಳ ಮಾತುಗಳಲ್ಲಿ ಮನಮುಟ್ಟಿಸುವಲ್ಲಿ. ಖುಷಿ ನೀಡಿದ ಕವಿತೆ. ಮಾವಲಿಯವರಿಗೆ ವಂದನೆಗಳು.
Good one