ಮಾಂಡಸೋರ್ ನಲ್ಲಿ ಸರ್ಕಾರಿ ರೋಲ್ ಪ್ಲೇ ತಾಲೀಮು

 

ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೊತ್ತಿಕೊಂಡಿರುವ ರೈತ ಹೋರಾಟದ ಕಿಚ್ಚು ಬರಿಯ ರಾಜಕೀಯ ನಾಟಕಗಳ ಒಂದು ಭಾಗ ಎಂದು ಕೇಂದ್ರ ಸರಕಾರ ನಿರ್ಲಕ್ಷಿಸಿದರೆ, ಅದು ಅಗ್ನಿಪರ್ವತದ ಬಾಯಿಗೆ ಬೆಣೆತುರುಕಲು ಹೊರಟಷ್ಟೇ ಮೂರ್ಖತನದ ಕೆಲಸ ಅನ್ನಿಸಲಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲಿನಿಂದ 325 ಕಿ ಮೀ ದೂರದಲ್ಲಿರುವ ಮಾಲ್ವಾ ಪ್ರಾಂತ್ಯದ ಒಂಭತ್ತು ಜಿಲ್ಲೆಗಳಲ್ಲಿ ಹೊತ್ತಿಕೊಂಡಿರುವ ಕಿಚ್ಚು ದೇಶದೆಲ್ಲೆಡೆ ಉರಿಯತೊಡಗುವ ದಿನಗಳು ದೂರ ಇಲ್ಲ. ಏಕೆಂದರೆ, ಸರ್ಕಾರಗಳು ಕ್ರಷಿಯ ಸ್ವರೂಪವನ್ನೇ ಬದಲಿಸುವ ನೀತಿ ನಿರ್ಧಾರಗಳನ್ನು ತೆಗೆದುಕೊಂಡದ್ದರ ಫಲ ಇದು.

ದೇಶದಲ್ಲಿರುವ ಕ್ರಷಿ ಯೋಗ್ಯ ನೆಲಗಳಲ್ಲಿ 20%  ಮಧ್ಯಪ್ರದೇಶದಲ್ಲಿದೆ. ಆ ರಾಜ್ಯದ 49% ಭೂಮಿ ಕ್ರಷಿ ಯೋಗ್ಯವಾಗಿದ್ದು, ರಾಜ್ಯದ ಜನತೆಯಲ್ಲಿ ನೂರಕ್ಕೆ ಎಪ್ಪತ್ತೈದು ಮಂದಿ ಕ್ರಷಿಯನ್ನೇ ಆಧರಿಸಿ ಬದುಕುತ್ತಿರುವವರು. ಇಂತಹದೊಂದು ಕ್ರಷಿಕರ ರಾಜ್ಯದಲ್ಲಿ ಸರಕಾರ ತೆಗೆದುಕೊಳ್ಳುವ ತಪ್ಪು ನೀತಿ-ನಿರ್ಧಾರಗಳು ಕ್ರಮೇಣ ಎಷ್ಟೊಂದು ದುಬಾರಿ ಆಗುತ್ತವೆ ಎಂಬುದಕ್ಕೆ ಇಂದು ಅಲ್ಲಿ ಭುಗಿಲೆದ್ದಿರುವ ಹಿಂಸೆ, ಮಡುಗಟ್ಟಿರುವ ಆಕ್ರೋಷ ಮತ್ತು ಕಳೆದು ಹೋಗಿರುವ ಆರು ಜೀವಗಳೇ ಸಾಕ್ಷಿ.

ಕ್ರಷಿಯ ಮೂಲ ಉದ್ದೇಶ ಆಹಾರ ಉತ್ಪಾದನೆ. ಅದನ್ನು ಮಾಡುವ ಬದಲು, ರೈತನಿಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಿ, ಅಲ್ಲಿ ರೈತ ಗಳಿಸಿದ ದುಡ್ಡನ್ನು ಖಾಸಗಿ ಕಂಪನಿಗಳು ನಡೆಸುವ ಕಾಂಟ್ರಾಕ್ಟ್ ಫಾರ್ಮಿಂಗ್ (ಅನುಬಂಧ್ ಖೇತೀ) ಮೂಲಕ ಬೆಳೆಯಲಾದ ಆಹಾರ,ತರಕಾರಿ, ಹಣ್ಣು ಹಂಪಲುಗಳನ್ನು ಖರೀದಿಸಿ ತಿನ್ನುವಂತೆ ಏರ್ಪಡಿಸಿದ್ದು ಮಧ್ಯಪ್ರದೇಶ ಸರಕಾರಗಳ ಮೊದಲ ತಪ್ಪು. ಅನ್ನ ಬೆಳೆಯಬೇಕಾದ ರೈತ ದುಡ್ಡು ಬೆಳೆದು, ಮಾರುಕಟ್ಟೆಯಲ್ಲಿ ಅನ್ನ ಖರೀದಿಸುವಂತೆ ಮಾಡುವುದು ಈವತ್ತಿನ ಕಾರ್ಪೋರೇಟ್ ಪರ ಸರಕಾರಗಳ ನೀತಿ.

ಪರಿಸ್ಥಿತಿ ಹೀಗಾದಾಗ, ಹತ್ತಿ, ಸೋಯಾಬೀನ್, ಜತ್ರೋಪಾದಂತಹ ಬೆಳೆಗಳ ಬೆನ್ನುಬಿದ್ದ ಮಧ್ಯಪ್ರದೇಶದ ರೈತ ಅವುಗಳ ಮಾರುಕಟ್ಟೆ ಏರಿಳಿತ, ರಾಸಾಯನಿಕಗಳ ಬಳಕೆಯಿಂದಾಗಿ ಆದ ಮಣ್ಣಿನ ಸಾರನಾಶ, ಅತಿಯಾದ ನೀರಿನ ಬಳಕೆಯಿಂದಾಗಿ ಅಂತರ್ಜಲ ತಗ್ಗಿ ಉಂಟಾದ ನೀರಿನ ಕೊರತೆ, ಕೀಟಭಾದೆಗಳ ಫಲವನ್ನುಣ್ಣುತ್ತಾ ಸಹಜವಾಗಿಯೇ ಕಳೆದ 20 ವರ್ಷಗಳಿಂದೀಚೆಗೆ ಸಾಲಗಾರನಾಗುತ್ತಾ ಬಂದ.

ಈವತ್ತು ಮಧ್ಯಪ್ರದೇಶದ 64 ಲಕ್ಷ ರೈತರಲ್ಲಿ ಅರ್ಧಕ್ಕರ್ಧ ಮಂದಿ ಸುಸ್ತಿದಾರರು! ಅಲ್ಲಿನ ಪ್ರತಿಯೊಬ್ಬ ರೈತನ ಮೇಲೆ 15,000ರೂಪಾಯಿಗಳಷ್ಟು ಸರಾಸರಿ ಸಾಲ ಇದೆ. ಅದರಲ್ಲೂ ಬ್ಯಾಂಕುಗಳ ಕಿರಿಕಿರಿ-ಬಲವಂತದ ರಿಕವರಿಗಳಿಂದ ರೋಸಿಹೋಗಿರುವ ರೈತರಲ್ಲಿ ನೂರಕ್ಕೆ 40 ಮಂದಿ ಖಾಸಗಿ ಚಕ್ರಬಡ್ಡಿ ಲೇವಾದೇವಿಗಾರರಲ್ಲೇ ಸಾಲ ಮಾಡಿಕೊಂಡಿದ್ದಾರೆ.

ಸರಕಾರ ರೈತನ ಅನ್ನ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸುವ ಬದಲು ರೈತ ದುಡ್ಡು ಮಾಡಬೇಕೆಂಬ ಹುಚ್ಚಿನ ಹಿಂದೆ ಹೊರಟು ತಪ್ಪು ಮಾಡಿತು. ಸ್ಥಳೀಯವಲ್ಲದ ತಂತ್ರಜ್ನಾನ ಮತ್ತು ಬೆಳೆಗಳನ್ನು ಆಮದು ಮಾಡಿಕೊಳ್ಳತೊಡಗಿತು. ಹಾಗಾಗಿ ರೈತನ ಹೂಡಿಕೆ ವೆಚ್ಚ ಹೆಚ್ಚುತ್ತಾ ಬಂತೇ ಹೊರತು ಅದರಿಂದ ಬರುವ ಪ್ರತಿಫಲ ಅದೇ ದರದಲ್ಲಿ ಹೆಚ್ಚಲಿಲ್ಲ. ಮೇಲಾಗಿ ಆತ ಉಣ್ಣುವ ಅನ್ನಕ್ಕೂ ಕಾರ್ಪೋರೇಟ್ ಗಳನ್ನು ಅವಲಂಬಿಸಿ, ಅಲ್ಲೂ ದುಡ್ಡು ಚೆಲ್ಲಬೇಕಾಯಿತು.

ಇದು ಮಧ್ಯಪ್ರದೇಶದಲ್ಲಿನ ದುರಂತಕ್ಕೆ ಮೂಲ ಕಾರಣ. ಈ ದುರಂತದ ಬಾಗಿಲಿನಲ್ಲೇ ದೇಶದ ಇತರ ರಾಜ್ಯಗಳೂ ನಿಂತು ಕ್ಷಣಗಣನೆ ನಡೆಸುತ್ತಿವೆ.

ಮೊನ್ನೆ ಅಲ್ಲಿ ನಡೆದದ್ದೇನು?

ಮಧ್ಯಪ್ರದೇಶದಲ್ಲಿ ಜೂನ್ 1ರಿಂದ ರೈತ ಸಂಘಗಳ ಒಕ್ಕೂಟವು ತಮ್ಮ ಬೆಳೆಗಳಿಗೆ ಒಳ್ಳೆಯ ಬೆಂಬಲ ಬೆಲೆ, ಕ್ರಷಿ ಸಾಲ ಮನ್ನಾ ಮತ್ತಿತರ ಬೇಡಿಕೆಗಳನ್ನು ಮುಂದಿರಿಸಿಕೊಂಡು ಮುಷ್ಕರ ನಡೆಸುತ್ತಿದ್ದವು. ಜೂನ್ 5 ರಂದು ಅಲ್ಲಿನ ಮುಖ್ಯಮಂತ್ರಿಗಳು ರೈತರ ಕೆಲವು ಬೇಡಿಕೆಗಳನ್ನು ಒಪ್ಪಿಕೊಂಡರು ಮತ್ತು ಹಲವು ಆಶ್ವಾಸನೆಗಳನ್ನು ನೀಡಿದರು. ಆ ಬಳಿಕ, ಸಂಘ ಪರಿವಾರಕ್ಕೆ ಸೇರಿದ ಭಾರತೀಯ ಕಿಸಾನ್ ಸಂಘ ಮುಷ್ಕರ ನಿಲ್ಲಿಸಿತು; ಆದರೆ ಉಳಿದ ಸಂಘಟನಗಳು ತಮ್ಮ ಎಲ್ಲ ಬೇಡಿಕೆಗಳೂ ಪೂರೈಸುವ ತನಕ ಮುಷ್ಕರ ನಿಲ್ಲುವುದಿಲ್ಲ ಎಂದು ಘೋಷಿಸಿ, ಜೂನ್ 6ರಂದು ಬಂದ್ ಗೆ ಕರೆ ನೀಡಿದವು.

ಮಾಂಡ್ ಸೋರ್ ನಿಂದ 20  ಕಿಮೀ ದೂರದಲ್ಲಿರುವ ಪಿಪಲಿಯಾ ಗ್ರಾಮದಲ್ಲಿ ಏನು ನಡೆಯಿತೆಂಬ ಬಗ್ಗೆ ಸ್ಥಳೀಯ ಪತ್ರಿಕಾ ವರದಿಗಳು ಹೀಗೆ ಹೇಳುತ್ತಿವೆ. ಮುಷ್ಕರ ನಿರತ ರೈತರು ಪಿಪಲಿಯಾದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಬಲವಂತ ಮಾಡಿದ್ದು, ಘರ್ಷಣೆಗೆ ಕಾರಣವಾಗಿ, ರೈತರ ಮೇಲೆ ಹಲ್ಲೆ ನಡೆಯಿತು.ಈ ವಿಡಿಯೋ ವೈರಲ್ ಆಗಿ,  ಸಾವಿರಾರು ಜನ ಅಲ್ಲಿ ಸೇರಿದರು. ಅಲ್ಲಿ ಭದ್ರತೆಗೆಂದು ಇರಿಸಿದ್ದ CRPF ವ್ಯಾನಿನ ಕಡೆ ಉದ್ರಿಕ್ತ ಜನ ನುಗ್ಗಿದಾಗ, ಅದರಲ್ಲಿದ್ದ ಇಬ್ಬರೇ ಜವಾನರು ಬೆದರಿ ಗುಮ್ಡು ಹಾರಿಸಿದಾಗ ಒಬ್ಬರು ಮ್ರತಪಟ್ಟರು. ಜನ ಇನ್ನಷ್ಟು ಉದ್ರಿಕ್ತರಾಗಿ ಪಿಪಲಿಯಾ ಮಂಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದಾಗ ಅಲ್ಲಿದ್ದ ಕಾನ್ ಸ್ಟೇಬಲ್ ಬೆದರಿ ಗುಂಡು ಹಾರಿಸಿದಾಗ ನಾಲ್ಕು ಜನ ಮ್ರತಪಟ್ಟರು. ಈ ವಿಚಾರವನ್ನು ರಾಜ್ಯದ ಗ್ರಹ ಸಚಿವ ಭೂಪೇಂದ್ರ ಸಿಂಗ್ ಮೊದಲು ನಿರಾಕರಿಸಿ, ಹಾಗೇನೂ ನಡೆದಿಲ್ಲ ಎಂದು ವಾದಿಸಿ ಕೊನೆಗೆ ಒಪ್ಪಿಕೊಂಡದ್ದು ಜನರಲ್ಲಿ ಇನ್ನಷ್ಟು ಆಕ್ರೋಷ ಮಡುಗಟ್ಟಲು ಕಾರಣ ಆಯಿತು.

ಜನ ಅಲ್ಲಿ ಜಿಲ್ಲಾ ಕಲೆಕ್ಟರ್, ಪೊಲೀಸರು, ಅಂಗಡಿ ಮುಂಗಟ್ಟುಗಳ ಮೇಲೆಲ್ಲ ದಾಳಿ ನಡೆಸಿದ್ದಾರೆ, ಗಾಯಗೊಳಿಸಿದ್ದಾರೆ. ಈಗ ಇಡಿಯ ಪ್ರಕರಣ ದೇಶದ ಗಮನ ಸೆಳೆಯಲಾರಂಭಿಸಿದ್ದು, ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಅಲ್ಲಿಗೆ ತೆರಳಲೆತ್ನಿಸಿ ಸೆರೆಯಾಗಿದ್ದಾರೆ. ಪ್ರಧಾನಮಂತ್ರಿಗಳು ದಿಲ್ಲಿಯಲ್ಲಿ ಸಭೆಗಳ ಮೇಲೆ ಸಭೆಗಳನ್ನು ನಡೆಸಿದ್ದಾರೆ. ರಾಜಕೀಯ ನಾಟಕಗಳ ಮನರಂಜನೆ ಇನ್ನು ಕೆಲವುದಿನಗಳ ಕಾಲ ಭರಪೂರ ದೊರೆಯಬಹುದು.

ಆದರೆ, ಈ ನಾಟಕದ ಗೌಜಿಯಲ್ಲಿ ರೈತ ಮರೆತುಹೋಗಲಿದ್ದಾನೆ; ಆತನ ಅನ್ನ ಆತನಿಗೆ ಕೈಕೊಡತೊಡಗಿದೆ ಎಂಬ ವಾಸ್ತವ ಯಾರಿಗೂ ತೋರದಿರುವುದೇ ನಿಜವಾದ ದುರಂತ.

ಹೆಚ್ಚುವರಿ ಓದಿಗಾಗಿ: http://www.mediaforrights.org/ infopack/english-infopack/420- agriculture-in-madhya-pradesh

‍ಲೇಖಕರು avadhi

June 9, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: