ಎಂ ವಿ ಶಶಿಭೂಷಣ ರಾಜು
ಉಗಮವಾಗುತ್ತಲೇ ಇರುತ್ತದೆ
ಹೊಸ ಕಾವ್ಯ
ಹಳೇಬೇರು ಟಿಸಿಲೊಡೆದು ಹೊಮ್ಮುತ್ತದೆ
ನವ ಶ್ರಾವ್ಯ
ಭಾವದಭಾವದೆಡೆಯಲ್ಲೂ
ಆಳದಲ್ಲಿನ ಜೀವ ಮೊಳಕೆಯೊಡೆದು
ಒಣಕೊಡರು ಚಿಗುರೊಡೆದು
ಸೊರಗಿದ ನೆಲಕೆ, ಜೀವಸೆಲೆಯಂತೆ
ಒದಗುತ್ತದೆ
ಒಂಟಿಹಾದಿ ಹಲವಾಗಿ
ಒಂದುಹೆಜ್ಜೆ ಗೆಲುವಾಗಿ
ಸಾಗುತ್ತಲೇ ಇರುತ್ತದೆ
ಅಗ್ನಿ, ವಾಯು, ವರುಣರ
ಭಾವಲೋಕಕೆ
ಕದ ತೆರೆಯುತ್ತದೆ

ಹಲವು ಮನಸುಗಳ ಭಾವಾಲಾಪನೆ
ಅದೇ ಮಿಡಿತ, ಅಸಾಹಕತೆ, ತಹತಹ
ಹಲವ ಬಣ್ಣಗಳ ತಾಕಲಾಟ
ಕಂಡುಕೊಳ್ಳಲು ಭಾವಕ್ಕೆ
ಒಂದು ಅಭಿವ್ಯಕ್ತಿ
ಅರಸುತ್ತಲೇ ಇರುತ್ತದೆ
ಹೊಸದಾರಿಗಳ, ಹೊಸಭಾವದಭಿವ್ಯಕ್ತಕೆ
ಅರಳಿ ನರಳಿದ ಮನ,
ನೋವೊಂದೇ, ಹಲವು ವ್ಯಕ್ತಗಳು
ಹೊರಹೊಮ್ಮುವುದು, ಹಲವು ತೆರೆದಲಿ
ಸಾಗಿಹೋಗುವುದು ದೂರತೀರಕೆ
ಬಗೆ ಬಗೆಯ ಭಾರ ಹೊತ್ತು,
ಸಾಗುವ ದಾರಿತುಂಬ
ಸುರಿಸುವುದು ನವಕಾವ್ಯ ಬೀಜವ,
ಮೊಳೆಕೆಹೊಡೆದು ಮರವಾಗಿ
ಹಲವು ಭಾವಪಕ್ಷಿಗಳ ಆಶ್ರಯಕೆ






ಚೆನ್ನಾಗಿದೆ