ಅಹಲ್ಯಾ ಬಲ್ಲಾಳ್ ಕಂಡಂತೆ ‘ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು’

ಅಹಲ್ಯಾ ಬಲ್ಲಾಳ್ 

 ಕಾವ್ಯೇಷು ನಾಟಕಂ ರಮ್ಯಂ- 1

ಕಾವ್ಯಾ ಕಡಮೆ ನಾಗರಕಟ್ಟೆ ಎಂಬ  ಕನ್ನಡತಿ  ಸಿಗಬೇಕಾದರೆ ದೂರದೇಶವೆಂಬ ಪಕ್ಕದಮನೆ ನ್ಯೂಜರ್ಸಿಗೆ ಹೋಗಬೇಕಾದದ್ದು ಒಂದು ಸೋಜಿಗ. ಅಲ್ಲಿ ನಡೆದ ಆಪ್ತ ರಂಗಭೂಮಿಯ ಪ್ರಯೋಗವೊಂದಕ್ಕೆ ಬಂದಾಕೆಯ  ಜೊತೆಗಿನ ಮಾತುಕತೆಯಲ್ಲಿ ಆಕೆ ನಾಟಕ ಬರೆದಿರುವ ವಿಷಯ ತಿಳಿಯಿತು. ನನ್ನ ಓದುವ  ಹವ್ಯಾಸ ಎಂದೋ ಘಟ್ಟ ಹತ್ತಿದ್ದರೂ ಅದು ಹೇಗೋ ಏನೋ, ಈ ನಾಟಕವನ್ನು ಓದಲೇಬೇಕು ಅಂದುಕೊಂಡೆ. ಈ ನಡುವೆ ಈ ಬರಹಗಾರ್ತಿಯ ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಕವನ ಸಂಕಲನಗಳು  ಹಾಗೂ  ‘ಪುನರಪಿ’ ಕಾದಂಬರಿಯನ್ನು ಬೆಂಗಳೂರಿನಲ್ಲಿ  ಕೊಂಡು ಓದಿಯೂ ಆಯ್ತು. 

‘ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು’ ನಾಟಕ ಪುಸ್ತಕದ ಬಗ್ಗೆ ವಿಚಾರಿಸಿದಾಗ ಮಳಿಗೆಯವರು ಇಲ್ಲವೆಂದು ಕೈಯಾಡಿಸಿದ್ದರು. ಕನ್ನಡದಲ್ಲಿ ಲೇಖಕಿಯರು ಪ್ರಕಟಿಸಿರುವ ನಾಟಕಗಳ ಸಂಖ್ಯೆ ಕಡಿಮೆ ಎಂದು ಬಲ್ಲವರಿಂದ ತಿಳಿಯಿತು. ಇರಲಿ. ಅಂತೂ ಕೆಲವು ವಾರಗಳ ಹಿಂದೆ ಹೊನ್ನಾವರದ ಬಂಡಾಯ ಪ್ರಕಾಶನದ ಪ್ರಕಟಣೆ  ‘ಆಟ…’  ಕೈ ಸೇರಿತು.

ಪತ್ರಿಕೋದ್ಯಮ ಪದವಿ. ಮನೆಯಲ್ಲೇ ಸಾಹಿತ್ಯದ ಪರಿಸರ. ಚಿಕ್ಕಂದಿನಿಂದಲೂ ಓದುವ ಮತ್ತು  ನಾಟಕ ನೋಡುವ ಅಭ್ಯಾಸ. ಬರವಣಿಗೆಯಲ್ಲಿ  ತಾಜಾ ಗುಣ. ಸುತ್ತಮುತ್ತಲಿನ ಆಗುಹೋಗುಗಳ ಸೂಕ್ಷ್ಮ ಅರಿವು. ಬರವಣಿಗೆಗಾಗಿ ಚಿಕ್ಕ ವಯಸ್ಸಿಗೇ ಬಂದಿರುವ ದೊಡ್ಡ ಪ್ರಶಸ್ತಿಗಳು. ವಿದೇಶದಲ್ಲಿದ್ದೂ ತಾಯ್ನಾಡಿನ ಸಂಸ್ಕೃತಿಯೊಡನೆ ಅವಿನಾಭಾವ. ಇಷ್ಟು ತಳಹದಿ ಸಾಲದೇ ಓದುಗರ ನಿರೀಕ್ಷೆ ಗರಿಗೆದರಲು? ಪುಟ ತೆರೆದು ನೋಡಿದರೆ ಅರೆರೆ..ಡಾ. ಶ್ರೀಪಾದ ಭಟ್ ಅವರ ಮುನ್ನುಡಿ! ಅದನ್ನು ಮೊದಲು ಓದುವುದೋ ನಾಟಕವನ್ನೋ?

ಈ ಕೃತಿಯಲ್ಲಿರುವ ಎರಡು ನಾಟಕಗಳಲ್ಲಿ ‘ಆಟದೊಳಗಾಟ’ಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಹಸ್ತಪ್ರತಿ ಬಹುಮಾನವನ್ನು ನೀಡಿದೆ. ಹೆಸರೇ  ಸೂಚಿಸುವಂತೆ ‘ಆಟದೊಳಗಾಟ’ ನಾಟಕದೊಳಗಿನ ನಾಟಕವೇ ಸರಿ. ಮುಖ್ಯ ಪಾತ್ರಧಾರಿ ಸುಮತಿ ಮಧ್ಯವಯಸ್ಸಿನ ನಾಟಕಕಾರ್ತಿ. ತಕ್ಕಮಟ್ಟಿನ ಅನುಕೂಲವಿರುವ, ಮಧ್ಯಮವರ್ಗದ ಸುಶಿಕ್ಷಿತ ಪಾತ್ರಗಳು. ಸುಮತಿಯ  ಜೀವನದ ಭಾಗವಾಗಿರುವ  ವ್ಯಕ್ತಿಗಳಿಗೂ  ಅವಳು ಬರೆಯುತ್ತಿರುವ ನಾಟಕದ ಪಾತ್ರಗಳಿಗೂ ಹೆಚ್ಚು ಕಡಿಮೆ ಸಮಾನಾಂತರ ಚಲನೆ. ಯಾವುದು ಯಾವುದರ ಪ್ರತಿಫಲನ? ಅದರಲ್ಲಿ ಇದು ಇದರಲ್ಲಿ ಅದು ಆಗಲು ಅವಕಾಶ. ಒಟ್ಟು ಎಂಟು ದೃಶ್ಯಗಳಿರುವ ಈ ಎರಡು ತಾಸಿನ ಅವಧಿಯ ನಾಟಕದ  ವಸ್ತು- ದಾಂಪತ್ಯ ಮತ್ತು ಕುಟುಂಬ ಎಂಬ ವ್ಯವಸ್ಥೆ; ಅದರ ಒಳಸುಳಿಗಳ ನಡುವಿನ ಚಕಮಕಿ ಕಿಡಿಗಳು.  

ಕಾರ್ನಾಡರ ‘ಮದುವೆ ಆಲ್ಬಮ್’ ನಂತೆ ಇದೂ ಸಾಮಾಜಿಕ ನಾಟಕವೇ. ವಿಜಯ್ ತೆಂಡೂಲ್ಕರರ ‘ಕನ್ಯಾದಾನ್’, ಮೋಹನ್ ರಾಕೇಶರ ‘ಆಧೇ ಅಧೂರೇ’ ಮೊದಲಾದ ನಾಟಕಗಳು ಈ ವಿಷಯವನ್ನು ಬೇರೆಬೇರೆ ರೀತಿಯಲ್ಲಿ  ಚಿತ್ರಿಸಿವೆ. ಮರಾಠಿ ಲೇಖಕ ಪ್ರಶಾಂತ್ ದಳ್ವಿ ತೊಂಬತ್ತರ ದಶಕದಲ್ಲಿ  ಬರೆದ ಪೂರ್ಣ ಪ್ರಮಾಣದ  ನಾಟಕ ‘ಚಾರ್ ಚೌಘಿ’ ಯಲ್ಲಿ ಸುಶಿಕ್ಷಿತ ತಾಯಿ ಮತ್ತು ವಿವಾಹೇತರ ಸಂಬಂಧದಲ್ಲಿ ಹುಟ್ಟಿದ ಅವಳ ಮೂರು ಹೆಣ್ಣು ಮಕ್ಕಳ ಅನುಭವಲೋಕವಿದೆ. ತನ್ನ ಕುಟುಂಬದ ಸ್ತ್ರೀಯರ ಜೀವನವನ್ನು ಕಾಣುತ್ತಲೇ ಬೆಳೆದ ಕೊನೆಯ ಮಗಳು  ಇಬ್ಬರು ಸ್ನೇಹಿತರನ್ನು ಇಷ್ಟಪಟ್ಟು ಅವರಿಬ್ಬರ ಒಪ್ಪಿಗೆ ಪಡೆದು ಇಬ್ಬರನ್ನೂ ವರಿಸುವ ತೀರ್ಮಾನಕ್ಕೆ ಬರುತ್ತಾಳೆ.

‘ನಮ್ಮ ನಮ್ಮಲ್ಲಿ’ ಎಂಬ ಹೆಸರಿನಲ್ಲಿ ಇದರ ಕನ್ನಡ ರೂಪವನ್ನು ಮುಂಬೈಯಲ್ಲಿ  ಆಡಿಸಿದ್ದೆವು. ಮಾರ್ಮಿಕ ಸಂಭಾಷಣೆಗಳಿರುವ  ಮೂಲ ಮರಾಠಿಯಲ್ಲಿ ಕಾರ್ನಾಡರ ಹಯವದನದ ಉಲ್ಲೇಖವೂ ಇದೆ. ಚಂದ್ರಕಾಂತ ಕುಲಕರ್ಣಿಯ ನಿರ್ದೇಶನದಲ್ಲಿ ದೀಪಾ ಶ್ರೀರಾಮ್, ವಂದನಾ ಗುಪ್ತೆ, ಅಸಾವರಿ ಜೋಶಿ ಮತ್ತು  ಪ್ರತೀಕ್ಷಾ ಲೋಣ್ಕರ್ ಅಭಿನಯದ ಈ ನಾಟಕ ತನ್ನ ಕಾಲಕ್ಕೆ ತುಂಬಾ ಮುಂದು ಎನಿಸಿಕೊಂಡಿತ್ತು.

ಪರಿಚಿತ ವಸ್ತುವಿಷಯವನ್ನು ಕಾವ್ಯಾ ತನ್ನ ರಚನೆಯಲ್ಲಿ ನಿರ್ವಹಿಸಿರುವ ರೀತಿ ಆಕರ್ಷಕ. ನಾಟಕದ ರೂಪ ಮತ್ತು  ಹೂರಣ ಎರಡಕ್ಕೂ ಪ್ರಾಶಸ್ತ್ಯ ಇದೆ ಇಲ್ಲಿ. ಯುವ ಪೀಳಿಗೆಯ ಸಶಕ್ತ ಲೇಖನಿಯೊಂದು ಎರಡನ್ನೂ ಹೊಸ ಬಗೆಯ ವಿನ್ಯಾಸಕ್ಕೊಳಪಡಿಸುವ ಸಾಹಸಕ್ಕೆ ಕೈಹಾಕಿರುವುದು ಆಹ್ಲಾದಕರ. 

“ಪಾತ್ರ ಪಾತ್ರ ಸೇರಿತೇ ಏಕತ್ರ?/ ಸೂತ್ರ ಸೂತ್ರ ಇದೆಯೇ ನಿನ್ನ ಹತ್ರ?” ಎಂದು ಹೊರಡುವ ಆಟ ಕುಶಲ ಹೆಣಿಗೆಯ ದೃಶ್ಯಗಳಲ್ಲಿ ತನ್ನ ಒಡಲನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ. 

ಗಂಡು: “ಚಿಟ್ಟೆ ಬಟ್ಟೆಯ ತೊಟ್ಟ ಮೀನು/ ಸ್ವಪ್ನದಲಿ ಕಂಡಂತೆ ಬಾನು/ ಜಗದ ಗುಟ್ಟನು ಬಿಡಿಸಿ ನೀನು/ ತರುವ ಉತ್ತರ ಸರಳವೇನು?” 

ಹೆಣ್ಣು: “ದಟ್ಟ ಕಾನನ ಏರಿ ನಾನು/ ಕಂಡ ಸಮತಲ ಸಹಜವೇನು?/ ಬಿಟ್ಟ ಸ್ಥಳವನ್ನು ಕಟ್ವ ಕಾಯಕ / ಸುಲಭವೇ ಸವಿದಂತೆ ಜೇನು?”

ರಂಗಕಲಾವಿದ ಹಾಗೂ ಶಿಕ್ಷಕ ಯತೀಶ್ ಕೊಳ್ಳೇಗಾಲರ ನಿರ್ದೇಶನದಲ್ಲಿ ಇದರ ಪ್ರಯೋಗಗಳು ಮೈಸೂರಿನಲ್ಲಿ ನಡೆದಿವೆ. “ಯಾವುದೇ ನಾಟಕವನ್ನು ನಿರ್ದೇಶನ ಮಾಡಬೇಕು ಅಂದಾಗ, ಇವತ್ತಿಗೆ ಈ ನಾಟಕ ಯಾಕೆ ಪ್ರಸ್ತುತ? ಯಾವ ಪ್ರಬಲ ಕಾರಣಕ್ಕೆ/ ಜವಾಬ್ದಾರಿಗೆ ಈ ನಾಟಕವನ್ನು ರಂಗದ ಮೇಲೆ ತರಬೇಕು ಅನ್ನುವ ಪ್ರಶ್ನೆ ಬರುತ್ತೆ. ಇದನ್ನು ಓದಿದಾಗ, ಇದು ಇವತ್ತಿನ micro and macro familyಗಳ conflict ಅನ್ನು ಮತ್ತು ಇವತ್ತಿನ ಸಮಾಜದಲ್ಲಿ ಕಾಣಸಿಗುವ ಮದುವೆಯ ಬಂಧ ಹಾಗೂ ಮದುವೆಯೇತರ ಬಂಧವನ್ನು  ತುಂಬಾ ಸರಳ ಮಾತುಕತೆಯಲ್ಲಿ ಶ್ರೀಸಾಮಾನ್ಯರಿಗೆ ಮುಟ್ಟಿಸುತ್ತದೆ ಮತ್ತು ಆಲೋಚನೆಗೂ  ಹಚ್ಚಿಸುತ್ತದೆ ಎಂಬುದು ಪ್ರಮುಖ ಕಾರಣ.” “ಪಾತ್ರ ಅಂದ್ರೆ, ಅದಕ್ಕೆ ಒಳಗೊಂದು ಹೊರಗೊಂದು ಬದುಕು ಇದ್ದೇ ಇರುತ್ತೆ. ಅವು ಮುಖಾಮುಖಿ ಆಗೋದೇ ನಾಟಕದೊಳಗಿನ ಸನ್ನಿವೇಶಗಳಲ್ಲಿ.

ಈ ನಾಟಕದ ಉದ್ದಕ್ಕೂ ಎಲ್ಲಾ ಪಾತ್ರಗಳು ಎಲ್ಲಾ ಸನ್ನಿವೇಶಗಳಲ್ಲಿ  ಸಂಪರ್ಕ ಹಾಗೂ ಸಂಘರ್ಷಕ್ಕೆ ರೆಡಿ ಇದ್ದೇ  ಇರ್ತಾವೆ. ಅದೂ ತೀರಾ ಲೋಕರೂಢಿಯ ಮಾತುಗಳಂತೆ ಕೇಳುವ ಮಾತುಗಳಲ್ಲೂ… ಒಳ-ಹೊರ. ಅದು ಮಜಾ. ಹಾಗಾಗಿ ಈ ಬೇಸಿಕ್ ಕಾರಣಗಳಿಗಾಗಿ ನಟನಾಗಿಯೂ ಈ ಪಠ್ಯ ನನ್ನನ್ನು ಕೆಲಸಕ್ಕೆ ಹಚ್ಚುತ್ತದೆ.” “ಪ್ರದರ್ಶನ ಆದ ಮೇಲೆ ಎಲ್ಲಾ ವಯೋಮಾನದವರೂ ನಾಟಕ ವೀಕ್ಷಣೆಯಿಂದ ಒಂದು ತೃಪ್ತಿಯನ್ನು ಹೊಂದಿದ್ದರು. ಅಂತೆಯೇ, ‘ನಮ್ಮ ಕಥೆನೇ ಅಲ್ವಾ ಇದೆಲ್ಲಾ’ ಅನ್ನುವ ಉದ್ಘಾರವನ್ನೂ ಕೇಳಿದೆವು. ಬಹುಶಃ ನಿರ್ದೇಶಕನಾಗಿ ನಾಟಕದ ಆಯ್ಕೆಯಲ್ಲಿ ಇದೇ ನನ್ನ ನಿರೀಕ್ಷೆ ಅನ್ಸುತ್ತೆ”,ಎನ್ನುತ್ತಾರೆ ಯತೀಶ್. 

‘ಆಟದೊಳಗಾಟ’ವನ್ನು ಓದಿದಾಗ  ಇಷ್ಟವಾಗಲು ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಆಹಾ ಎನಿಸುವ ಸಾಲುಗಳು, ಉದಾಹರಣೆಗೆ: 

*ಸುಮತಿ: “ಆದ್ರೆ ಪುಟ್ಟ ಮಗೂನ, ಮಲಗಿರೋ ಸಂಗಾತೀನ ಬಿಟ್ಟು ನಾನೆಲ್ಲಿ ಜಗತ್ತಿಗೆ ಶಾಂತಿ ಸಾರಲಿಕ್ಕೆ ಹೋಗಲಿ ಹೇಳು?”

 “ಮುತ್ತು ಪೋಣಿಸ್ತಾ ಪೋಣಿಸ್ತಾ ಇನ್ನೊಂದು ಅಂಚಲಿ ಅವರು ಹಿಡಿದಿರ್ತಾರೆ ಬಿಡು ಅಂತ ಒಮ್ಮೆ  ಕೈಬಿಟ್ಟರೂ ಸಾಕು ಒಂದೇ ಕ್ಷಣದಲ್ಲಿ ಹಾರ ಚೆಲ್ಲಾಪಿಲ್ಲಿಯಾಗಿ ಬಿಟ್ಟಿರ್ತದೆ.”

*ಸರಳಾ (ಗಂಡ ರವಿಗೆ): “ರೇಷ್ಮೆ ಸೀರೆ ಉಟ್ಟಾಗ ಆಡಿದ ಮಾತಿಗೂ ಮನೆ ಬಟ್ಟೆಯಲ್ಲಿ ಆಡುವ ಮಾತಿಗೂ ವ್ಯತ್ಯಾಸವಿರ್ತದೆ.” 

*(ಸುಮತಿಯ ಗೆಳೆಯ) ಕುಮಾರ: “ಬದುಕಿನಲ್ಲಿ ಇಲ್ಲದಿರುವ ಅಂತ್ಯವನ್ನು ಕಥೆಯಲ್ಲಿ  ಕಾಣಲಿಕ್ಕೆ ಹೋಗುತ್ತೀವಲ್ಲ..” 

*ಕುಮಾರ: “ಮನುಷ್ಯ ಸಹಜವಾದ ಯಾವ ಗುಣವೂ ಕೆಟ್ಟದಲ್ಲ.” 

*ಸುಮತಿ(ಮಗಳಿಗೆ): “ನಿಮ್ಮಪ್ಪನ ಬಳಿ ಈ ಕತೆಯ ಬೇರೆಯದೇ ಆಯಾಮ ಇರಬಹುದು”. ಇಂತಲ್ಲಿ, ನಾಟಕಕಾರ್ತಿ ಸುಮತಿಯ ಮೂಲಕ ಸ್ವತಃ ಕಾವ್ಯಾ ತನ್ನ ಅನುಭವದ ಆಚೆಗೂ ಇದ್ದೇ ಇರುವುದರ ಅಸ್ತಿತ್ವವನ್ನು ಗುರುತಿಸುವ ಪರಿ ಸಮಾಧಾನ ಕೊಡುತ್ತದೆ. ಅಂತೆಯೇ  ಒಂದು ವಿಷಯವನ್ನು ಹಲವು ಕೋನಗಳಿಂದ ನೋಡುವ ಸಂಕಲ್ಪ ಕೂಡ.

5ನೆಯ ದೃಶ್ಯ-ಸುಮತಿಯ ಚಿತ್ತದಲ್ಲಿರುವ  ಮೂರೂ ಪಾತ್ರಗಳು ತಂತಮ್ಮ ಒಳತೋಟಿಗೆ  ಮಾತಾಗುತ್ತವೆಯಾದರೂ  ಕೊನೆಗೆ “ಮನೆ ಸಿಕ್ಕೇ ಸಿಗುವುದು” ಎನ್ನುತ್ತಾರೆ. ಸುಲಭದ  ಸಿನಿಕತನಕ್ಕೆ ಎಡೆಗೊಡದ ಈ  ದೃಷ್ಟಿಕೋನ ಅಚ್ಚರಿ ಮತ್ತು ಖುಷಿ ನೀಡಿತು,  ಒಟ್ಟೊಟ್ಟಿಗೇ.  

ಮುನ್ನುಡಿಕಾರರು  ಈ ನಾಟಕಗಳ ವೈಶಿಷ್ಟ್ಯಗಳನ್ನು ಉಲ್ಲೇಖಿಸುತ್ತ 

“ಆಟದ ಒಳ ಹೊಕ್ಕು ಆಟವನ್ನು ಕಾಣುತ್ತ ಅದನ್ನು ಕಟ್ಟಹೊರಡುವ ಒಂದು ಧ್ಯಾನಸ್ಥ ದಾರಿಯತ್ತ ಕಾವ್ಯಾ ಚಲಿಸುತ್ತಿದ್ದಾಳೆ. ಇಲ್ಲಿ ಅದು ಸಿದ್ಧಿಸಿದೆ ಅಂತಲ್ಲ. ಹಾದಿ ಸರಿಯಾಗಿದೆ ಅಂತ. ಈ ಪಯಣದ ಹಾದಿಯಲ್ಲಿ ತಿದ್ದಿಕೊಳ್ಳುವುದಕ್ಕೆ ಅಗತ್ಯವಾದ ಕೆಲ ಸಂಗತಿಗಳು ಇವೆ” ಎನ್ನುತ್ತ ಅಂತಹ ಸಂಗತಿಗಳನ್ನೂ ಪ್ರಸ್ತಾಪಿಸುತ್ತಾರೆ. 

“ಚೂರೇ ಚೂರು ಸೊಕ್ಕು ತೋರಿದರೆ/ ಪದ್ಯದ ಒಂದಕ್ಷರವೂ ಹುಟ್ಟುವುದಿಲ್ಲ/ ಒಂದೇ ಕಾಳು  ಸಾಸಿವೆಯೂ ಹೊಟ್ಟುವುದಿಲ್ಲ” ಎಂಬ  ಸಾಲುಗಳ ಒಡತಿ ಇಂತಹ feedbackಅನ್ನು ಮುಂದಿನ ನಾಟಕಗಳಲ್ಲಿ ಹೇಗೆ ಸೇರಿಸಿಕೊಳ್ಳಬಹುದು, ಅವು  ಹೇಗಿರಬಹುದು ಎಂದೆಲ್ಲಾ ಕುತೂಹಲವಾಗುತ್ತದೆ. 

ಮುಗಿಸುವ ಮುನ್ನ… 

ಆಟದೊಳಗಾಟದಲ್ಲಿ ಒಂದು ಮುಖ್ಯ ಪಾತ್ರ ಇನ್ನೊಂದು ಪಾತ್ರ ಪೇಂಟ್ ಮಾಡಿದ ಮಡಕೆಯನ್ನು ಎತ್ತೆತ್ತಿ ನೆಲಕ್ಕೆ  ಕುಕ್ಕುತ್ತದೆಯಾದರೂ ಅದು ಒಡೆಯುವುದಿಲ್ಲ, ಏಕೆಂದರೆ ಅದು ಸೆಣಬಿನ ಚೀಲದಿಂದ ಮಾಡಿದ್ದು. 

ನನಗೇನೋ ಇದು ಸೃಜನಶೀಲತೆ  ಹಾಗೂ ಕಲೆಗಳು ದಯಪಾಲಿಸುವ ನಮ್ಯತೆಯ ಬಗ್ಗೆ ಈ ಲೇಖಕಿಗೆ ಇರುವ ನಂಬಿಕೆಯ ಕುರುಹು ಎಂದೆನಿಸುತ್ತದೆ.

ಓಟಿಟಿಗೆ ಜೈ ಎನ್ನುವ ಈ ದಿನಗಳಲ್ಲೂ ನಾಟಕ ಬರವಣಿಗೆಗೆ ಸೈಯೆನ್ನುವ ಈ ಲೇಖನಿಯ ಕಸುವು, ಲಾಲಿತ್ಯ ಎರಡೂ ನಮ್ಮನ್ನು ಅಚ್ಚರಿಗೊಳಿಸುತ್ತಲೇ ಇರಲಿ. 

(ಪೂರಕ ಮಾಹಿತಿಯನ್ನು ಒದಗಿಸಿಕೊಟ್ಟ ಚೈತನ್ಯ ಸರ್ಗೊ  ಮತ್ತು  ವಿಭಾ ಪುರೋಹಿತ ಅವರಿಗೆ ಪ್ರೀತಿಯ ನೆನಕೆಗಳು.) 

ಕಾವ್ಯೇಷು ನಾಟಕಂ ರಮ್ಯಂ- 2 

ಕಾವ್ಯಾ ಕಡಮೆ ನಾಗರಕಟ್ಟೆ ಬರೆದಿರುವ ಈ ಪುಸ್ತಕದಲ್ಲಿ ಎರಡು ನಾಟಕ ಪಠ್ಯಗಳಿವೆ. ಅವುಗಳಲ್ಲಿ ಎರಡನೆಯದು ಡೋರ್ ನಂಬರ್ ಎಂಟು. ರಂಗದ ಮೇಲೆ ಕಾಣಿಸಿಕೊಳ್ಳುವ ಪಾತ್ರಗಳು ಎರಡೇ- ‘ಕೃಷ್ಣ’ ಮತ್ತು ‘ಅರ್ಜುನ’.  ಸುಮಾರು ಒಂದು ಗಂಟೆ ಅವಧಿ.  ಸಾಮಾನ್ಯವಾಗಿ ಎರಡೇ ಪಾತ್ರಗಳಿರುವ ನಾಟಕಗಳ ನಿರೀಕ್ಷಿತ ಚೌಕಟ್ಟನ್ನು ಇದು ಮುರಿಯುತ್ತ ಹೊಸತೊಂದನ್ನು ಕಟ್ಟಿಕೊಡುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಗಂಡು-ಹೆಣ್ಣಿನ ಸಂಬಂಧದಲ್ಲಿ ಗಂಡಿನ ಮನಸ್ಥಿತಿಯನ್ನು  ಚಿತ್ರಿಸುವ  ಕಾವ್ಯಾ ‘ಪರಿಮಳ’ ಎಂಬ ಮುಖ್ಯ ಸ್ತ್ರೀ ಪಾತ್ರವನ್ನು ರಂಗದ ಮೇಲೆ ತರುವುದೇ ಇಲ್ಲ. ಆದರೂ ನಾಟಕದ ಉದ್ದಕ್ಕೂ ಆಕೆ ಇರುವುದು ಇಲ್ಲಿಯ ವೈಶಿಷ್ಟ್ಯಗಳಲ್ಲಿ ಒಂದು. 

ನಗರದ ಕೆಳಮಧ್ಯಮವರ್ಗದ ಒಂದು  ಚಾಳ್. ಅಲ್ಲಿ ಡೋರ್  ನಂಬರ್ ಏಳರ ‘ಪರಿಮಳ’ ಡೋರ್ ನಂಬರ್ ಎಂಟರ ಕೃಷ್ಣನಿಗೆ ಮನೆಯ ಬೀಗದಕೈ ಕೊಟ್ಟು ಹೋಗುತ್ತಾಳೆ. ಅವಳ ಗಂಡ ಅರ್ಜುನ ಬಂದ ನಂತರ ಕೃಷ್ಣ-ಅರ್ಜುನರ ನಡುವಿನ ಮಾತುಗಳೇ ನಾಟಕ. ಇವರಿಬ್ಬರೂ ನಾಟಕದ ವೇಷವನ್ನು ಧರಿಸಿದವರೇ ಅನ್ನಿ. ” ಎದೆಯ ಬಡಿತವ ಅರಿಸಿ ನಡೆದವ ಸರಿಸಿದ ಆ ಪರದೆಯ/ ಹಿಂದೆ ಏನಿದೆ? ಏನು ನಿಂತಿದೆ? ಲೋಕವೇ ನೀ ಅರಿತೆಯಾ?”  ಹೆಣ್ಣಿನ ಮನವನ್ನು ಅರಿತುಕೊಳ್ಳಲಾರದ ಮನಸ್ಥಿತಿ ಮತ್ತು ಅದರ ಪರಿಣಾಮವನ್ನು ಮುನ್ನೆಲೆಗೆ ತರುವ ಈ ಆಟ ಇನ್ನೂ ಹಲವು ಸಂಗತಿಗಳನ್ನು ಮನಗಾಣಿಸುತ್ತದೆ-ನಗರ ಜೀವನದ ಇಕ್ಕಟ್ಟಿನ ವಸತಿ ಸಮಸ್ಯೆ,  ಪುಟ್ಟ ಊರಿನಿಂದ ಕನಸುಗಣ್ಣು ಹೊತ್ತು ಬರುವ ಯುವಕರು ಉದ್ಯೋಗಚಕ್ರದಲ್ಲಿ ಸಿಲುಕಿ ನಡೆಸುವ ಯಾಂತ್ರಿಕ  ಜೀವನ, ದಿರಿಸಿನಿಂದ ಹಿಡಿದು ಆರಂಭವಾಗುವ ಸೂಕ್ಷ್ಮ ಲಿಂಗರಾಜಕಾರಣ, ಸಣ್ಣಪುಟ್ಟ ನಟರ ಪಾಡು, ಹೀಗೆ.

ಪೌರಾಣಿಕ ವ್ಯಕ್ತಿತ್ವಗಳ ಮೂಲಕ ಇಂದಿನ ಲೋಕವನ್ನು ಕಟ್ಟಿಕೊಡುವ ಈ ವಿಶಿಷ್ಟ ರಚನೆಯನ್ನು  ರಂಗಕ್ಕೆ ತಂದವರು ಮೈಸೂರಿನವರು.  ರಂಗಾಯಣದ ಧನಂಜಯ ಆರ್. ಸಿ. ಯವರ ನಿರ್ದೇಶನ ಮತ್ತು ಸಂಗೀತ, ಧನಂಜಯ ಹಾಗೂ ಮಹೇಶ್ ಕಲ್ಲತ್ತಿಯವರ ಅಭಿನಯದ ಈ ಆಟ ಸಾಕಷ್ಟು ಜನರ ಮನಗೆದ್ದಿದೆ.    
ಕಾವ್ಯಾಳ ಕವನಗಳನ್ನು ಓದಿದವರಿಗೆ  ಪರಿಚಯವಿದೆ. ದೇವರು “ನಮ್ಮ ನಿಮ್ಮಂತೆಯೇ / ಜೀನ್ಸ್ ತೊಟ್ಟಿದ್ದಾನೆ.” (ಜೀನ್ಸ್ ತೊಟ್ಟ ದೇವರು).  

ಇಲ್ಲಿಯ ಕೃಷ್ಣನಿಗೂ  ಯಾವುದೇ ವೈಭವೀಕರಣವಿಲ್ಲ. ಅವನೂ ನಮ್ಮ ನಿಮ್ಮಂತೆ ಸಾಮಾನ್ಯನು. ಭಯಭಕ್ತಿಯಿಂದ ದೂರದಿಂದಲೇ ವಂದಿಸಬೇಕಾದ ಮೂರ್ತಿ ಅವನಲ್ಲ. “ಹೆಣ್ಣಿನ ಜೀವಕ್ಕೆ ಹತ್ತಿರವಾಗದೇ ಅವರನ್ನು ಹೇಗೆ ಅರ್ಥಮಾಡಿಕೊಳ್ಳೋಕೆ ಸಾಧ್ಯ ಹೇಳು?”  “ನಟನಾಗಿ ನೂರಾರು  ಬದುಕುಗಳನ್ನು ಜೀವಿಸಿದ್ದೀನಿ ನೂರಾರು ಜೀವಗಳ ಒಳಗೆ ಹೊಕ್ಕು ಹೊರಬಂದಿದ್ದೀನಿ” ಎನ್ನುತ್ತಾನೆ ಕೃಷ್ಣ, ಹೆಂಡತಿಯ ಮೇಲೆ ಸಂಶಯ ಪಡುವ  ಅರ್ಜುನನಿಗೆ. 

“ಹಲವು ಗೊಲ್ಲರ ತುಟಿ ತಾಗಬೇಕಾದ ಕೊಳಲಿನ ಅಗತ್ಯದ ಕುರಿತು ನಾಟಕ ಮಾತನಾಡುತ್ತದೆ… ವೇಷಧಾರಿ ಕೃಷ್ಣ ಪಾರ್ಥರ ನಡುವೆ ಬದುಕಿನ ಭಗವದ್ಗೀತೆಯೇ ನಡೆದು ಹೋಗುತ್ತದೆ” ಎನ್ನುತ್ತಾರೆ ಮುನ್ನುಡಿಕಾರರಾದ ಡಾ. ಶ್ರೀಪಾದ ಭಟ್.

ನಾಟಕದ ಆರಂಭದಲ್ಲಿ ಕೃಷ್ಣ ಕೊಳಲೂದುತ್ತಾನೆ, ಕೊನೆಯಲ್ಲಿ ಕೃಷ್ಣ ಅರ್ಜುನನಿಗೆ ಕೊಳಲನ್ನು ನುಡಿಸುವಂತೆ ಪ್ರೋತ್ಸಾಹಿಸುತ್ತಾನೆ.  

ಇಂದಿನ ತಲ್ಲಣಗಳನ್ನು ಹಿಡಿದಿಡುವ ಸಶಕ್ತ ಪಠ್ಯ, ಉತ್ತಮ ಅಭಿನಯಕ್ಕೆ ಅವಕಾಶ, ಹಾಸ್ಯ ಮಿಶ್ರಿತ ವಾಸ್ತವ, ಸರ್ರಿಯಾಲಿಸಂ, ಕೌತುಕ ಎಲ್ಲವೂ ಇರುವ ಈ ನಾಟಕ ಹೊಸಹೊಸ ರೀತಿಯ ಆಟಗಳಿಗೆ ನಾಂದಿ ಹಾಡಲಿ ಎಂಬ ಆಶಯ. 

(ಪೂರಕ ಮಾಹಿತಿಯನ್ನು ಒದಗಿಸಿಕೊಟ್ಟ ಚೈತನ್ಯ ಸರ್ಗೊವಿಭಾ ಪುರೋಹಿತ, ಮಹೇಶ್ ಕಲ್ಲತ್ತಿ ಅವರಿಗೆ ಪ್ರೀತಿಯ ನೆನಕೆಗಳು.) 

ಕಾವ್ಯೇಷು ನಾಟಕಂ ರಮ್ಯಂ- 3

ಕಾವ್ಯಾ ಕಡಮೆ ನಾಗರಕಟ್ಟೆ ಜೊತೆ ನಾಟಕಗಳ ಕುರಿತು ಮಾತುಕತೆ: 

1. ನಿಮ್ಮಆಟದೊಳಗಾಟ’ ಮತ್ತುಡೋರ್ ನಂಬರ್ ಎಂಟು’ ಎರಡೂ ನಾಟಕಗಳಲ್ಲಿ , ಇತರ ಸಂಗತಿಗಳ ಜೊತೆ  ನಾಟಕ/ ನಟನೆಗೆ  ಸಂಬಂಧಪಟ್ಟ ಅಂಶಗಳಿವೆ. ನಾಟಕ ಎಂಬ  ಪ್ರಕಾರದ ಯಾವ ಯಾವ  ಅಂಶಗಳು ನಿಮ್ಮನ್ನು ಸೆಳೆಯುತ್ತವೆ?  

ಕಾವ್ಯಾ: ನಾಟಕದ ಪ್ರಕ್ರಿಯೆಯೆಂದರೇ, ಅದೊಂದು ಮ್ಯಾಜಿಕ್! ನಾಟಕಕ್ಕೆ ಸಂಬಂಧಪಡುವ ಎಲ್ಲ ಅಂಶಗಳೂ ನನಗೆ ವಿಸ್ಮಯಕಾರಿಯಾಗಿಯೇ ಕಾಣಿಸುತ್ತವೆ. ಯಾರದ್ದೋ ತಲೆಯಲ್ಲಿ ಅರಳಿದ ಕಥೆಯೊಂದು ನಾಟಕದ ರೂಪ ಪಡೆದು ಅದನ್ನು ಇನ್ನ್ಯಾರೋ ಓದಿ ರಂಗಕ್ಕೆ ತರುತ್ತಾರೆಂದರೆ ಅದಕ್ಕಿಂತ ಬೆರಗಿನ ಸಂಗತಿ ಯಾವುದಿದೆ!  ರಂಗಭೂಮಿಯೆನ್ನುವುದೇ ಮನುಷ್ಯ ಕೋಟಿಗೊದಗಿದ ಅದ್ಬುತವಾಗಿರುವಾಗ ಅಲ್ಲಿ ಪರದೆಯ ಹಿಂದೆ ನೇಪಥ್ಯದಲ್ಲಿ ಏನು ನಡೆಯುತ್ತದೆ ಎನ್ನುವುದು ನನಗೆ ಯಾವತ್ತಿಗೂ ಕುತೂಹಲದ ಸಂಗತಿ. ಹೀಗಾಗಿ ಈ ಎರಡೂ ನಾಟಕಗಳಲ್ಲಿ ಈ ವಿಷಯ ನನ್ನ ಅರಿವಿಲ್ಲದಂತೆಯೇ ಒಳ ನುಸುಳಿರಬಹುದು.  

2. ನಾಟಕದ ಸ್ಕ್ರಿಪ್ಟ್ ಬರವಣಿಗೆಗೆ ಯಾವುದೇ formal training ಪಡೆದಿದ್ದೀರಾ

ಕಾವ್ಯಾ: ನಾಟಕ ರಚನೆಯ ಕುರಿತು ಯಾವ ಕೋರ್ಸನ್ನು ಮಾಡಿಲ್ಲವಲ್ಲ ಎಂಬ ಕುರಿತು ನನಗೆ ಖೇದವಿದೆ. ಮೊದಲು ವಿದ್ಯಾಭ್ಯಾಸ, ನಂತರ ಕೆಲಸ, ಮದುವೆ ಹೀಗೆ ಏನೇನೋ ಅಡ್ಡಬಂದವು. ಹಾಗೆ ನೋಡಿದರೆ ಪ್ರಾಕ್ಟಿಕಲ್ ಆಗಿ ನಾಟಕ ಓದುವುದು, ನಾಟಕ ನೋಡುವುದು ಬಿಟ್ಟು ಈ ಕ್ರಿಯೆಗೆ ಬೇರೇನೂ ಟ್ರೇನಿಂಗು ಬೇಕಿಲ್ಲ ಅಂತ ನನ್ನನ್ನು ನಾನೇ ನಂಬಿಸಲು ಯತ್ನಿಸಿಕೊಳ್ಳುತ್ತಿದ್ದೇನೆ. ಮುಂದೆಂದಾದರೂ ಅವಕಾಶ ಸಿಕ್ಕಿದರೆ ಕೋರ್ಸು ಮಾಡಿದರೂ ಮಾಡಿದೆ. 

 3. ನಿಮ್ಮ ಒಂದು ಸಂದರ್ಶನದಲ್ಲಿ ಬರಹವೇ ತನ್ನ formಅನ್ನು ನಿರ್ಧರಿಸಿಕೊಳ್ಳುತ್ತದೆ ಎಂಬರ್ಥದ  ಮಾತುಗಳನ್ನು ಹೇಳಿದ್ದೀರಿ. ನಿಮ್ಮ ನಾಟಕಗಳಲ್ಲಿ ಪ್ರಕ್ರಿಯೆ ಹೇಗಾಗುತ್ತದೆ? ಸ್ವಲ್ಪ ವಿವರಿಸುವಿರಾ

ಕಾವ್ಯಾ: ಒಂದು ವಿಷಯ ಮನಸ್ಸಿಗೆ ಬರುವಾಗ ಅದು ಕವಿತೆಯಾಗಿಯೋ, ಕಥೆಯಾಗಿಯೋ, ನಾಟಕವಾಗಿಯೋ, ಕಾದಂಬರಿಯಾಗಿಯೋ ಅವವೇ ಫಾರ್ಮ್ ನಲ್ಲಿ ಬರುತ್ತದೆ ಅಂತ ಆ ಸಂದರ್ಶನದಲ್ಲಿ ಹೇಳಿದ್ದೆ. ಅದೊಂದು ವಿಚಿತ್ರ! ಬಂದ ಕವಿತೆಯನ್ನು ಬರೆದಿಡಲು ಒಮ್ಮೊಮ್ಮೆ ಅರ್ಧ ಘಂಟೆಯ ಅಲ್ಪ ಸಮಯವೇ ಸಾಕು. ಒಮ್ಮೊಮ್ಮೆ ಅರ್ಧ ದಿನ ತೆಗೆದುಕೊಂಡಿದ್ದೂ ಇದೆ. ಆದರೆ ಒಂದು ದಿನ ಕಳೆದುಬಿಟ್ಟರೆ, ಅದು ಬಂದಾಗ ಆಲಸ್ಯ ತೋರಿ ಬರೆದಿಡದೇ ಹೋದರೆ ಆಮೇಲೆ ಅದು ಹೋದ ಹಾದಿಯನ್ನು ವಿಷಾದದಿಂದ ನೋಡುತ್ತ ಕೂರುವುದು ಬಿಟ್ಟು ಬೇರೆ ಯಾವ ದಾರಿಯೂ ಉಳಿದಿರುವುದಿಲ್ಲ. ಕಥೆ ಕಾದಂಬರಿಗಳಲ್ಲಿ ಹಾಗಲ್ಲ. ಹೋಗು ಅಂದರೂ ಕಥೆಗಳು ಅಷ್ಟು ಸುಲಭಕ್ಕೆ ಮನಸ್ಸಿನಿಂದ ಜಾರಿ ಹೋಗುವುದಿಲ್ಲ. ಆದರೆ ನಾನು ಗಮನಿಸಿದಂತೆ prose ಬರವಣಿಗೆಯಲ್ಲಿ ಪ್ರೇರಣೆಗಿಂಥ ಹೆಚ್ಚಾಗಿ ಬೇಕಿರುವುದು ಕುಳಿತು ಬರೆಯಬೇಕಿರುವ ಶಿಸ್ತು, ತಾಳ್ಮೆ. ಅಷ್ಟು ಸಮಯ ಬರವಣಿಗೆಗಂತಲೇ ತೆಗೆದಿಟ್ಟು ಕುಸುರಿ ಕೆಲಸದಂತೆ ವರ್ಕ್ ಮಾಡಬೇಕು. ನಾಟಕ ಮೂಡುವ ವಿಧಾನವೇ ಬೇರೆ! ಒಂದು ನಾಟಕವನ್ನು ಒಟ್ಟು ಪದಗಳಲ್ಲಿ ಅಳೆಯಲು ಹೋದರೆ ಅದು ಒಂದು ಕವನ ಸಂಕಲನಕ್ಕಿಂಥ ಕಡಿಮೆ ಶಬ್ಧಗಳಲ್ಲಿ ಇರುತ್ತದೆ. ಆದರೆ ಒಂದು ಕಾದಂಬರಿಯಲ್ಲಿರಬೇಕಾದ ಹರಹು, ಗ್ರಾಸವನ್ನು ಇಲ್ಲಿ ಹೆಚ್ಚೇನೂ ವಿವರಿಸದೇ ಸಂಭಾಷಣೆಗಳಲ್ಲಿಯೇ ಕಟ್ಟಿಕೊಡಬೇಕಾಗುತ್ತದೆ. ಯಾವುದಾದರೂ ಒಂದೇ ಪ್ರಕಾರದಲ್ಲಿ ಬರೆಯಬೇಕು ಅಂತ ನನಗೂ ಆಸೆ.  ಆದರೆ ಈ ಎಲ್ಲ ಪ್ರಕಾರಗಳೂ ಒಂದೊಂದು ಬಗೆಯ ತೃಪ್ತಿಯನ್ನು ಕೊಡುತ್ತವಾದುದರಿಂದ ಅವು ಬಂದಾಗ ನಾನಾಗಿ ಬೇಡ ಅನ್ನಲಾರೆ.   

 4. ನಿಮ್ಮನ್ನು ಬಹಳ ಪ್ರಭಾವಿಸಿದ /ನಿಮ್ಮ ಮೆಚ್ಚಿನ ನಾಟಕಕಾರ / ನಾಟಕಕಾರ್ತಿ ಯಾರು? ಕನ್ನಡ ಮತ್ತು ವಿಶ್ವ ಸಾಹಿತ್ಯ – ಎರಡರಲ್ಲೂ.  ಅಲ್ಲಿ ಯಾವ ಯಾವ ಅಂಶಗಳು ನಿಮಗೆ ಇಷ್ಟ?  

ಕಾವ್ಯಾ: ಕಾರ್ನಾಡ್, ಕಾರ್ನಾಡ್ ಮತ್ತು ಕಾರ್ನಾಡ್. ಜೊತೆಗೆ ಕಂಬಾರ ಮತ್ತು ಲಂಕೇಶರ ನಾಟಕಗಳೂ ಇಷ್ಟವಾಗುತ್ತವೆ. ಬೆಕೆಟ್, ಚೆಕೋವ್, ಬರ್ನಾರ್ಡ್ ಶಾ, ಲೋರ್ಕಾ, ಗೋರ್ಕಿ; ಜೊತೆಗೆ ಸಾಪೋಕ್ಲಿಸ್, ಯುರಿಪಿಡೀಸ್ ಮುಂತಾದ ಗ್ರೀಕ್ ನಾಟಕಕಾರರು… ಹೀಗೆಯೇ ಬಿಡಿ ನಾಟಕಗಳು ಸಿಕ್ಕಲ್ಲೆಲ್ಲ ಹುಡುಕಿ ಹುಡುಕಿ ಓದಿದ್ದೇನೆ. ಅಂತರ್ಜಾಲವೆನ್ನುವುದು ನಮ್ಮ ಕಾಲಕ್ಕೆ ಒದಗಿದ ಬಹುದೊಡ್ಡ ವರ ಎಂದು ಅನುಭವಕ್ಕೆ ಬಂದಿದ್ದು ಎಷ್ಟೊಂದು ಹಳೆಯ ನಾಟಕಗಳು ಉಚಿತವಾಗಿ ಓದಲು ಲಭ್ಯವಿದೆಯಲ್ಲ ಅಂತ ಗೊತ್ತಾದ ಮೇಲೆಯೇ. ಜೊತೆಗೆ ಶೇಕ್ಸಪಿಯರ್ ನಾಟಕಗಳ ಒಳಗೆ ಬರುವ ಕಾದಂಬರಿಯಂಥ ವಿಶಾಲ ಪ್ರಪಂಚವೂ ನನಗೆ ಇಷ್ಟ. ಆದರೂ ಕಾರ್ನಾಡ್ ನಾಟಕಗಳ ಹುಚ್ಚಿನಿಂದ ನನಗಿನ್ನೂ ಬಿಡಿಸಿಕೊಳ್ಳಲಾಗಿಲ್ಲ. ಅವರ ಸಂಭಾಷಣೆಗಳಲ್ಲಿರುವ ತೀಕ್ಷ್ಣತೆ, ಸ್ತ್ರೀಪರ- ಮನುಷ್ಯಪರ ಧೋರಣೆ, ನಾಟಕದ ಆತ್ಮದಲ್ಲಿರುವ ಗಟ್ಟಿತನ ನನಗೆ ಬಹಳ ಇಷ್ಟವಾಗುವ ಅಂಶಗಳು. ಅವರ ಪಾರದರ್ಶಕ ಭಾಷೆಯೂ ನನಗೆ ಇಷ್ಟ. 

5. ಕನ್ನಡದಲ್ಲಿ ಮಹಿಳೆಯರು ಬರೆದ ನಾಟಕಗಳು ಪ್ರಕಟವಾಗಿರುವುದು ಅಥವಾ ರಂಗವೇರುವುದು ಕಡಿಮೆ ಎಂಬ ಮಾತಿದೆ. ನೀವೇನೆನ್ನುವಿರಿ ? ಹೌದಾದರೆ ಇದಕ್ಕೆ ಕಾರಣ ಏನಿರಬಹುದು

ಕಾವ್ಯಾ: ಕನ್ನಡದಲ್ಲಿಯೂ ಮಹಿಳೆಯರಿಂದ ರಚನೆಗೊಂಡ ನಾಟಕಗಳು ವಿರಳವಾಗಿದ್ದರೂ, ಬಂದಿವೆ. ಎಂ ಉಷಾ ಅವರ ಶೂಲಿ ಹಬ್ಬ, ಜಯಶ್ರೀ ಅವರ ನಾಟಕಗಳು ತಕ್ಷಣಕ್ಕೆ ಹೊಳೆಯುತ್ತಿರುವ ಉದಾಹರಣೆಗಳಷ್ಟೇ. ನಾಟಕ ರಚನೆ ಬಹಳ ಸಮಯ ಬೇಡುವ ಕೆಲಸ. ನಮ್ಮ ಹೆಣ್ಣುಮಕ್ಕಳಿಗೆ ಅಷ್ಟೊಂದು ಸಮಯವನ್ನು ಚರಿತ್ರೆ ಯಾವ ಕಾಲದಲ್ಲಿ ಕೊಟ್ಟಿದೆ ಹೇಳಿ? ಆಕೆ ಏನಿದ್ದರೂ ತನಗೆ ಕೊಡಮಾಡಿದ ಎಲ್ಲ ಕೆಲಸಗಳನ್ನೂ ಮುಗಿಸಿಯೇ ಉಳಿದ ಸಮಯದಲ್ಲಿ ಹವ್ಯಾಸವೆಂದು ಬರವಣಿಗೆಯನ್ನು ಎತ್ತಿಕೊಳ್ಳಬೇಕು. ಒಬ್ಬ ನಾಟಕಕಾರ ಕೋಣೆಯ ಬಾಗಿಲಿಕ್ಕಿ ಬರೆಯಲು ತೊಡಗಿದರೆ ಮೇಧಾವಿಯೆನಿಸಿಕೊಳ್ಳುತ್ತಾನೆ, ಅದನ್ನೇ ನಾಟಕಕಾರ್ತಿಯೊಬ್ಬಳು ಮಾಡಿದರೆ ಸ್ವಾರ್ಥಿಯೆನಿಸಿಕೊಳ್ಳುತ್ತಾಳೆ.  ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಅದೃಷ್ಟದಿಂದಲೋ, ಬಂಡಾಯವೆದ್ದೋ ಈ ವಿಷವರ್ತುಲದಿಂದ ತಪ್ಪಿಸಿಕೊಂಡಿದ್ದೇವೆ. ಆದರೂ ಹೆಣ್ಣಿನ ಸಮಯದ ಹಕ್ಕನ್ನು ಆಕೆಯೇ ಉಳಿಸಿಕೊಳ್ಳುವ ದಾರಿಯಲ್ಲಿ ನಾವಿನ್ನೂ ಬಹಳ ದೂರ ಕ್ರಮಿಸಬೇಕಿದೆ. ಹಾಗಾಗುವ ಕಾಲ ದೂರವಿಲ್ಲ ಎಂಬ ಆಶಾವಾದವೂ ನನಗಿದೆ. ನಮ್ಮಜ್ಜಿ ಯಾವತ್ತೂ ಹೇಳುತ್ತಿದ್ದ “ನಮ್ಮ ಜೀವನಾನೇ ನಾಟಕವಾಗಿದೆ, ಇನ್ನು ಬೇರೆ ನಾಟಕ ಬೇಕೇ?” ಎಂಬ ಮಾತು ಯಾವತ್ತೂ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿರುತ್ತದೆ.

6.  ಅಮೆರಿಕಾದಲ್ಲಿ ನೀವು ಕಂಡ ನಾಟಕಗಳಿಗೂ ನಮ್ಮಲ್ಲಿನ ನಾಟಕಗಳಿಗೂ ಏನು ವ್ಯತ್ಯಾಸ / ಸಾಮ್ಯತೆಯನ್ನು ಗುರುತಿಸಿದ್ದೀರಿ? 

ಕಾವ್ಯಾ: ಹುಬ್ಬಳ್ಳಿ ಧಾರವಾಡಗಳಲ್ಲಿ ಓದುತ್ತಿದ್ದಾಗ ನೂರಾರು ನಾಟಕಗಳನ್ನು ನೋಡಿದ ಅನುಭವ ಮರೆಯಲಸಾಧ್ಯವಾದುದು. ನೀನಾಸಂ, ರಂಗಾಯಣ, ಗೊಂಬೆ ಮನೆ, ಆಟ-ಮಾಟ.. ಒಂದೇ ಎರಡೇ.. ಎಲ್ಲಿ ಯಾವ ನಾಟಕವಿದ್ದರೂ ತಪ್ಪಿಸದೇ ಓಡುವುದೇ! ನಾನೀಗ ಅಮೆರಿಕದಲ್ಲಿ ರಂಗಭೂಮಿಯ ತವರುಮನೆಯಾದ ನ್ಯೂಯಾರ್ಕ್ ನಗರದ ಹತ್ತಿರವೇ ಇರುವ ಕಾರಣ ಆಗಾಗ ಬ್ರಾಡ್ ವೇ ಶೋಗಳಿಗೆ ಹೋಗುವುದುಂಟು. ಅಮೆರಿಕದ ಶೋಗಳಲ್ಲಿ ದೊಡ್ಡ ದೊಡ್ಡ ಸೆಟ್ ಗಳು, ದಂಗು ಬಡಿಸುವಂತಹ ವಿನ್ಯಾಸ, ಸಂಗೀತ ಇದ್ದರೂ ನಮ್ಮ ಭಾರತೀಯ ಹವ್ಯಾಸಿ ರಂಗಭೂಮಿಯ ಸರಳತೆಯೇ ನನಗೆ ಇಷ್ಟ. ಇಲ್ಲಿಯ ನಾಟಕಗಳು ಒಂದು ಬಗೆಯಲ್ಲಿ ಹಾಲಿವುಡ್ ಸಿನಿಮಾಗಳನ್ನು ನೆನಪಿಗೆ ತರುತ್ತವೆ. ನಾಟಕಗಳು ಕಣ್ಣಿಗಷ್ಟೇ ಅಲ್ಲ, ಆತ್ಮಕ್ಕೆ ತಟ್ಟುವಂತಿರಬೇಕು ಅಂತ ನನ್ನ ಅನಿಸಿಕೆ. ಅಮೆರಿಕನ್ನರು ಎಲ್ಲವನ್ನು commercialize ಮಾಡಲು ಮುಗಿಬೀಳುತ್ತಾರಲ್ಲ ಅಂತ ನನ್ನ ಗುಮಾನಿ. ಹಾಗಂತ generalize ಕೂಡ ಮಾಡಲಾಗದು. Hamilton ಎಂಬ ಅದ್ಭುತ ನಾಟಕ ತನ್ನ Rap ಲಯದಲ್ಲೇ ಮನಸೆಳೆದಿತ್ತು. An Act of God ಎಂಬ ಏಕವ್ಯಕ್ತಿ ಪ್ರದರ್ಶನ ದೇವರ ಹಲವು ಮುಖವಾಡಗಳನ್ನು ಕಳಚುತ್ತ ಹೋಗುವ ಪರಿಯೇ ಅನನ್ಯ. ಒಟ್ಟಿನಲ್ಲಿ ಬರವಣಿಗೆಯಲ್ಲಿರುವಂತೆಯೇ ನಾಟಕಗಳಲ್ಲಿಯೂ ದೇಶ- ವಿದೇಶದ ಗಡಿಗಳನ್ನು ಮೀರಿ ಉಳಿಯುವುದು: “ಒಳ್ಳೆಯ ಮತ್ತು ಅಷ್ಟೇನೂ ಮುಖ್ಯವಲ್ಲದ” ಎಂಬ ಎರಡೇ ವಿಭಾಗಗಳು ಅಂತ ಅನ್ನಿಸುತ್ತದೆ. 

7. ಮುಂದೆ ಇನ್ನಷ್ಟು ನಾಟಕಗಳನ್ನು ಬರೆಯುವ ಯೋಜನೆ ಇದೆ ಎಂದಿರಿ. ಅದರ ಬಗ್ಗೆ ಸ್ವಲ್ಪ ವಿವರ… ಕಾವ್ಯಾ: ಹೌದು, ಇತ್ತೀಚೆಗಷ್ಟೇ ಮಕ್ಕಳ ನಾಟಕವೊಂದನ್ನು ಬರೆದು ಮುಗಿಸಿದ್ದೇನೆ. ಎರಡು ತಿಂಗಳ ಹಿಂದೆ, ಈ ನಾಟಕದ ವಸ್ತು ಕುಡಿಯೊಡೆಯುತ್ತಿದ್ದಾಗ “ಮಕ್ಕಳ ನಾಟಕ ತಾನೇ, ಒಂದು ವಾರದಲ್ಲಿ ಬರೆದು ಮುಗಿಸಬಲ್ಲೆ” ಎಂಬ ಉಡಾಫೆಯಲ್ಲಿಯೇ ಶುರು ಮಾಡಿದ್ದೆ. ಆದರೆ ಮಕ್ಕಳ ನಾಟಕದ ಒಳಸೂಕ್ಷ್ಮಗಳು ಬರೆಯುತ್ತಲೇ ಅನುಭವಕ್ಕೆ ಬಂದವು. ಸಂಭಾಷಣೆಗಳು, ಮನಸ್ಥಿತಿ, ನೋಟ ಎಲ್ಲವೂ ಬದಲಾಯಿಸಿಕೊಂಡು ಬರೆಯಬೇಕಲ್ಲ! ಇದನ್ನು ಬರೆಯುತ್ತ ಬಾಲ ಸಾಹಿತ್ಯದ ಮೇಲೆ ನನಗಿದ್ದ ಗೌರವ ದುಪ್ಪಟ್ಟಾಯಿತು. ನಾನು ತುಂಬಾ ಗೌರವಿಸುವ ಡಾ ಶ್ರೀಪಾದ ಭಟ್ ಅವರು ಇದಕ್ಕೆ ಹಿಂದೆ ‘ಸಂಜೀವಿನಿ ಸ್ಟೋರ್ಸ್’  ಏಕವ್ಯಕ್ತಿ ನಾಟಕ ಬರೆಯಲು ಹುರಿದುಂಬಿಸಿದ್ದರು. ಈಗ ಬೆಂಗಳೂರಿನ ದೃಶ್ಯಕಾವ್ಯ ಎಂಬ ಹವ್ಯಾಸಿ ತಂಡಕ್ಕಾಗಿ ಒಂದು ಹೊಸ ನಾಟಕವನ್ನು ಕೈಗೆತ್ತಿಕೊಂಡಿದ್ದೇನೆ. ಮುಂದಿನ ಎರಡು ತಿಂಗಳಲ್ಲಿ ಗಡುವು ಇರುವುದರಿಂದ ಖಾಲಿ ಹಾಳೆಯ ಮೇಲೆ ಮೂಡುವ ಡೈಲಾಗುಗಳಿಗಾಗಿ ನಾನಂತೂ ಕಾತರದಿಂದ ಕಾಯುತ್ತಿದ್ದೇನೆ. 

‍ಲೇಖಕರು Admin

March 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಸುನಂದಾ ಕಡಮೆ

    ತುಂಬಾ ಸೂಕ್ಷ್ಮವಾಗಿ ಅವಲೋಕಿಸಿದ್ದೀರಿ ಅಹಲ್ಯಾ, ಖುಷಿಯಾಯ್ತು..

    ಪ್ರತಿಕ್ರಿಯೆ
  2. Ahalya Ballal

    ಮೂರೂ ಭಾಗಗಳನ್ನು ಪ್ರಕಟಿಸಿದ ಅವಧಿಗೆ thank you, thank you, thank you! 🙂

    ಪ್ರತಿಕ್ರಿಯೆ
  3. ಜಯಲಕ್ಷ್ಮಿ ಪಾಟೀಲ್

    ಹೇಳಿಯೂ ಹೇಳದಂತೆ, ಕುತೂಹಲ ತಣಿಯದಂತೆ ಸುದೀರ್ಘವಾದರೂ ಹಾಗನ್ನಿಸದ ನಿಮ್ಮ ಈ ಬರವಣಿಗೆ ಶೈಲಿ ತುಂಬಾ ಇಷ್ಟವಾಯಿತು. ಅದರಲ್ಲೂ ‘ಆಟದೊಳಗಿನ ಆಟ’ ನಾಟಕದ ಆಶಯದ ಸುತ್ತಲಿನ ಮತ್ತು ಒಳ ಹೂರಣವನ್ನು ಅದೆಷ್ಟು ಘಮಿಸುವಂತೆ ನಿರೂಪಿಸಿದ್ದೀರೆಂದರೆ,
    ಈ ಅಷ್ಟೂ ನೋಡಲು ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅನಿಸಿತು ಅಹಲ್ಯ. ಸಂದರ್ಶನವೂ ಸರಿಯಾದ ಪ್ರಶ್ನೆಗಳನ್ನೊಳಗೊಂಡಿದೆ ಮತ್ತು ಅದಕ್ಕೆ ಕಾವ್ಯ ಅವರ ಉತ್ತರಗಳು ಇಷ್ಟವಾದವು. ನೀವಿಲ್ಲಿ ಪ್ರಸ್ತಾಪಿಸಿದ ನಾಟಕಗಳನ್ನು ಮತ್ತು ಈಗ ಕಾವ್ಯಾ ಬರೆಯುತ್ತಿದ್ದೇನೆ ಎಂದ ಮಕ್ಕಳ ನಾಟಕವನ್ನು ನಾನೂ ಓದಬೇಕು.

    ಪ್ರತಿಕ್ರಿಯೆ
  4. Ahalya Ballal

    ನಿಮ್ಮ ಸಹೃದಯತೆಗೆ ಶರಣು. ಸುನಂದಾ, ಶ್ರವಣಕುಮಾರಿ, ಜೆಪಿ. ದಿಲ್ ಖುಶ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: