ಜಗದೀಶ್ ಕೊಪ್ಪ ಓದಿದ- ‘ಎಂ ಎಂ ಕಲಬುರ್ಗಿ’

ಜಗದೀಶ್ ಕೊಪ್ಪ

ನವಕರ್ನಾಟಕ ಪ್ರಕಾಶನದಿಂದ ಇತ್ತೀಚೆಗೆ ಬಿಡುಗಡೆಯಾಗಿರುವ ನಾಡಿನ ಹೆಸರಾಂತ ವಿದ್ವಾಂಸ, ಸಂಶೋಧಕ ಮತ್ತು ಶಾಸನ ತಜ್ಞರಾಗಿದ್ದ ಕಲಬುರ್ಗಿಯವರ ಕುರಿತಾಗಿ ಮಿತ್ರ ಡಾ.ಸಿದ್ಧನಗೌಡ ಪಾಟೀಲ ಅವರು ರಚಿಸಿರುವ ನೂರು ಪುಟಗಳಷ್ಟು ಇರುವ ಈ ಪುಟ್ಟಕೃತಿ ನನ್ನನ್ನು ಇತ್ತೀಚೆಗೆ ತೀವ್ರವಾಗಿ ಕಾಡಿದ ಕೃತಿಗಳಲ್ಲಿ ಒಂದು.

ಕಲಬುರ್ಗಿಯವರ ಜೀವನ ಮತ್ತು ಸಂಶೋಧನೆಯ ಎಲ್ಲಾ ಮಗ್ಗುಲುಗಳನ್ನು ಅವರ ನೇರ ಶೀಷ್ಯನಾಗಿ, ಒಡನಾಡಿಯಾಗಿ ಯಾವುದೇ ಭಾವುಕತೆಗೆ ಒಳಗಾಗದೆ ಸಿದ್ಧನಗೌಡರು ನಿರ್ಭಾವುಕತೆಯಿಂದ ರಚಿಸಿರುವ ಪರಿ ಅಚ್ಚರಿ ಮೂಡಿಸಿತು. ಈ ಕೃತಿಯನ್ನು ಓದಿದ ನಂತರ ಸಿದ್ದನಗೌಡ ಪಾಟೀಲರನ್ನು ಎಲ್ಲಾ ಸಾರ್ವಜನಿಕ ಬದುಕು ಮತ್ತು ಹೋರಾಟಗಳಿಂದ ಮುಕ್ತಗೊಳಿಸಿ ಅವರನ್ನು ಒಂದೆಡೆ ಕೂರಿಸಿ ಬರೆವಣಿಗೆ ಹಚ್ಚಿದರೆ, ಅವರ ಮೂಲಕ ನಮಗೆ ಉತ್ತರ ಕರ್ನಾಟಕದ ಸಾಹಿತ್ಯ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದ ಚರಿತ್ರೆ ಉತ್ತಮ ಗುಣಮಟ್ಟದಲ್ಲಿ ದಾಖಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅನಿಸತೊಡಗಿದೆ.

ಇಂದಿನ ದಿನಗಳಲ್ಲಿ ನಿವೃತ್ತ ಪ್ರಾಧ್ಯಾಪಕರು ಮತ್ತು ಅರವತ್ತರ ವಯಸ್ಸಿನ ಪ್ರಾಧ್ಯಾಪಕರು ತಮ್ಮ ಓದು, ಬರೆವಣಿಗೆಗೆ ತಿಲಾಂಜಲಿ ಇತ್ತು ವಾಟ್ಸ್ ಅಪ್ ಯೂನಿವರ್ಸಿಟಿ ಮತ್ತು ಫೇಸ್ ಬುಕ್ ಯೂನಿರ್ವಸಿಟಿಯಲ್ಲಿ ತಲ್ಲೀನರಾಗಿ ದಿನಕ್ಕೊಂದು ಹಳೆಯ ಪೋಟೊ ಅಥವಾ ಸೆಲ್ಪಿ ಚಿತ್ರಗಳನ್ನು ಅಳವಡಿಸುತ್ತಾ ಇರುವುದನ್ನು ನೋಡಿದರೆ, ಅವರ ಬಗ್ಗೆ ಕೇವಲ ಜಿಗುಪ್ಸೆ ಮಾತ್ರವಲ್ಲ ಅಸಹ್ಯ ಮೂಡತೊಡಗಿದೆ. (ಎಲ್ಲರೂ ಅಲ್ಲ) ಇಂತಹ ಮಹಾಶಯರು ಒಮ್ಮೆ ತಮ್ಮ ಯೂನಿರ್ವಸಿಟಿಯಿಂದ ರಜೆ ಪಡೆದು ಸಿದ್ದನಗೌಡರ ಕೃತಿಯನ್ನು ಓದಬೇಕು.

ಕಳೆದ ನಾಲ್ಕೂವರೆ ದಶಕವನ್ನು ಹೋರಾಟ ಮತ್ತು ಓಡಾಟಗಳಲ್ಲಿ ಕಳೆದಿರುವ ಸಿದ್ದನಗೌಡ ಪಾಟೀಲರು ಕಲಬುರ್ಗಿಯವರ ಕೃತಿ ರಚನೆಗಾಗಿ ಅವರ ಬಹುತೇಕ ಕೃತಿಗಳನ್ನು ಅಧ್ಯಯನ ಮಾಡಿ ಸಮಗ್ರ ವಿವರ ಮತ್ತು ವಿಶ್ಲೇಷಣೆಯ ಮೂಲಕ ಕಟ್ಟಿಕೊಟ್ಟಿರುವ ವೈಖರಿ ಈ ನಾಡಿನ ಯಾವುದೇ ವಿದ್ವಾಂಸನ ಅಧ್ಯಯನವನ್ನು ಮೀರಿಸುವಂತಿದೆ. ತಮ್ಮ ತೋರು ಬೆರಳಿನ ರೇಖೆಗಳು ಅಳಿಸಿಹೋಗುವಂತೆ ವಾಟ್ಸ್ ಅಪ್ ಮತ್ತು ಫೇಸ್ ಬುಕ್ ವಿ.ವಿ.ಯಲ್ಲಿ ತಲ್ಲೀನರಾಗಿರುವ ಪ್ರೊಫೆಸರ್ ಗಳು ಮತ್ತು ವಿದ್ಯಾರ್ಥಿಗಳು ಅಗತ್ಯವಾಗಿ ಈ ಕೃತಿಯನ್ನು ಒಮ್ಮೆ ಓದಲೇ ಬೇಕು.

ಕಲಬುರ್ಗಿ ಸರ್ ಕುರಿತಂತೆ ಅನೇಕ ಊಹಾ ಪೋಹಗಳಿದ್ದವು. ಅವರು ಪರಮ ಲಿಂಗಾಯುತ ಧರ್ಮದ ಪರವಾಗಿದ್ದರು, ಮಹಾ ಮುಂಗೋಪಿ, ಯಾರ ಜೊತೆ ಬರೆಯುವುದಿಲ್ಲ ಎಂಬ ಮಾತುಗಳು ಚಾಲ್ತಿಯಲ್ಲಿದ್ದವು. ಆದರೆ, ಅವರ ಆತ್ಮೀಯ ಶಿಷ್ಯರಂತೆ, ಮನೆಯ ಮಕ್ಕಳಂತೆ ಒಡನಾಡಿದ ಗೆಳೆಯರಿಗೆ ಮಾತ್ರ ಕಲಬುರ್ಗಿಯವರು ಕೇವಲ ಗುರು ಮಾತ್ರವಲ್ಲ, ಒಬ್ಬ ಆದರ್ಶ ತಂದೆಯಾಗಿ, ಮಾರ್ಗದರ್ಶಕರಾಗಿ ನಮ್ಮ ಪಾಲಿಗೆ ಗೋಚರವಾಗುತ್ತಿದ್ದರು. 1996 ರಿಂದ ಅವರ ನಿಧನರಾಗುವವರೆಗೂ ಅವರ ಜೊತೆ ಒಡನಾಡಿದ ಭಾಗ್ಯ ನನ್ನದಾಗಿದೆ. 2001 ರಲ್ಲಿ ಓರ್ವ ಪತ್ರಕರ್ತನಾಗಿ ಧಾರವಾಡಕ್ಕೆ ತೆರಳಿದ ನನ್ನನ್ನು ಅಧ್ಯಯನ ಶೀಲ ಬರಹಗಾರನನ್ನಾಗಿ ರೂಪಿಸಿದ ಕೀರ್ತಿ ಕಲಬುರ್ಗಿ ಮತ್ತು ಗಿರಡ್ಡಿ ಸರ್ ಗೆ ಸಲ್ಲಬೇಕು. ಅವರಿಲ್ಲದ ಧಾರವಾಡ ನನ್ನ ಪಾಲಿಗೆ ಬರಡಾಯಿತು. ಪ್ರತಿ ಅಕ್ಷರ ಹಾಗೂ ಓದಿನ ಹಿಂದೆ ಇಂತಹ ಗುರುಗಳ ಮಾರ್ಗದರ್ಶನ ಪಡೆದದ್ದು ನನ್ನ ಬದುಕಿನ ಅಮೂಲ್ಯ ಕ್ಷಣಗಳು ಎಂದು ನಾನು ಭಾವಿಸಿದ್ದೀನಿ.

2005 ರಲ್ಲಿ ಕಲಬುರ್ಗಿಯವರು ದ.ರಾ.ಬೇಂದ್ರೆ ಪ್ರತಿಷ್ಠಾನದ ಅಧ್ಯಕ್ಷರಾಗಿ, ಗಿರಡ್ಡಿ ಮತ್ತು ವೀಣಾ ಶಾಂತೇಶ್ವರ ಅವರು ಸದಸ್ಯರಾಗಿದ್ದಾಗ ಬೇಂದ್ರೆ ಫೇಲೋಶಿಪ್ ಅಡಿಯಲ್ಲಿ ಈ ಇಬ್ಬರು ಗುರುಗಳ ಮಾರ್ಗದಶರ್ಶನದಲ್ಲಿ ಕುವೆಂಪು ಮತ್ತು ಬೇಂದ್ರೆ ಕವಿತೆಗಳ ತೌಲನಿಕ ಅಧ್ಯಯನ ಮಾಡಿದ್ದೆ. ಉತ್ತರ-ದಕ್ಷಿಣ ಹೆಸರಿನ ಆ ಕೃತಿಯು ಎರಡು ಮುದ್ರಣ ಕಂಡಿದ್ದು, ಧಾರವಾಡದ ಬೇಂದ್ರೆ ಪ್ರತಿಷ್ಠಾನದಿಂದ ಪ್ರಕಟಗೊಂಡಿದೆ.

ನಲವತ್ತು ವರ್ಷಗಳ ಹಿಂದೆಯೇ ಕನ್ನಡ ಎಂ.ಎ. ವಿದ್ಯಾರ್ಥಿಯಾಗಿ ಅವರ ಪ್ರೀತಿಯ ಶಿಷ್ಯರಾಗಿದ್ದ ಸಿದ್ದನಗೌಡ ಪಾಟೀಲರು ಗುರುವಿನಿಂದ ಪಡೆದ ವಿದ್ಯೆಯನ್ನು ಅವರ ಈ ಕೃತಿಯ ಪ್ರತಿ ಅಕ್ಷರದಲ್ಲಿಯೂ ಕಾಣಬಹುದಾಗಿದೆ. ಬಿಜಾಪುರ ಜಿಲ್ಲೆಯ ಅವರ ಬಾಲ್ಯ, ವಿದ್ಯಾರ್ಥಿ ಜೀವನ, ಪದವಿಯ ಶಿಕ್ಷಣದಿಂದಲೂ ಪ್ರಥಮ ಧರ್ಜೆಯಲ್ಲಿ ಪಾಸಾಗುತ್ತಾ ಬಂದ ಅವರ ಪ್ರತಿಭೆ ನಂತರ ಕನ್ನಡ ಅಧ್ಯಾಪಕರಾಗಿ, ಸಂಶೋಧಕರಾಗಿ, ಶಾಸನ ತಜ್ಞರಾಗಿ ಅವರು ತೊಡಗಿಸಿಕೊಂಡ ಬಗೆ ಹಾಗೂ ಅವರ ಚಿಂತನೆಗಳ ಇತಿಮಿತಿಗಳನ್ನೂ ಸಹ ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ. ಕಲಬುರ್ಗಿಯವರ ಅಸಾಧಾರಣಾ ನೆನಪು, ಓದಿನ ಶಿಸ್ತನ್ನು ಹತ್ತಿರದಿಂದ ಗಮನಿಸಿದ್ದ ನಮಗೆ ಅವರು ರಚಿಸಿರುವ, ಸಂಪಾದಿಸಿರುವ ಮತ್ತು ಸಂಶೋಧನೆ ಮಾಡಿರುವ ಕೃತಿಗಳ ಸಂಖ್ಯೆ 124 ಎಂಬುದು ನಮ್ಮಂತಹವರಿಗೆ ಅಚ್ಚರಿ ಮೂಡಿಸುವುದಿಲ್ಲ. ಅವರ ನಿವಾಸದಲ್ಲಿ ಕುಳಿತು ಯಾವುದೇ ವಿಷಯ ಕುರಿತು ಪ್ರಸ್ತಾಪ ಮಾಡಿದರೆ, ಕೂಡಲೇ ಆ ವಿಷಯವನ್ನು ನಮ್ಮ ಮುಂದಿಟ್ಟು, ಮನೆಗಳಗಿನ ಗ್ರಂಥಾಲಯದಿಂದ ಪುಸ್ತಕವನ್ನು ತಂದು ತೆರದಿಟ್ಟು ನಮ್ಮ ಮುಂದೆ ಇಡುತ್ತಿದ್ದರು. ಅವರು ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ನವೋದಯ ಸಾಹಿತ್ಯದ ಓದಿನ ನಂತರ ಶಾಸನಗಳ ಅಧ್ಯಯನ ಮತ್ತು ಸಂಶೋಧನೆಗಳತ್ತ ಹೊರಳಿದವರು. ಇದು ಅವರ ಬದುಕಿನ ಧ್ಯಾನವಾಗಿತ್ತು.

ಕಲಬುರ್ಗಿಯವರು ಯಾವುದೇ ಇತಿಹಾಸವಿರಲಿ ಅವುಗಳ ಅಧ್ಯಯನದಲ್ಲಿ ತೊಡಗಿಕೊಳ್ಳುತ್ತಿದ್ದ ಬಗೆಯನ್ನು ಸಿದ್ಧನಗೌಡ ಪಾಟೀಲರು ಮೂರು ವಿಧಾನಗಳಲ್ಲಿ ಗುರುತಿಸಿದ್ದಾರೆ. ಒಂದು- ಆಕರವನ್ನು ಶೋಧಿಸುವುದು ಮತ್ತು ಶುದ್ದೀಕರಿಸುವುದು. ಎರಡನೆಯದಾಗಿ- ಶುದ್ದೀಕರಿಸಿಕೊಂಡ ಆಕರ ಸಾಮಾಗ್ರಿಯ ಸಹಾಯದಿಂದ ಗತಕಾಲದ ವಸ್ತುಸ್ಥಿತಿಯನ್ನು ಸಂಯೋಜಿಸುವುದು. ಮೂರನೆಯದಾಗಿ- ಸಂಯೋಜಿತ ವಸ್ತುಸ್ಥಿತಿಯನ್ನು ಸರಿಯಾಗಿ ವ್ಯಾಖ್ಯಾನಿಸಿ ಪ್ರಸ್ತುತ ಪಡಿಸುವುದು.

ಈ ಹಿನ್ನಲೆಯಲ್ಲಿ ಅವರು ಬಸವಣ್ಣನ ಸಹೋದರಿ ಅಕ್ಕನಾಗಮ್ಮನ ಕುರಿತು ಹಾಗೂ ಚೆನ್ನಬಸಣ್ಣನ ಹುಟ್ಟಿನ ಕುರಿತು ವಿಶ್ಲೇಷಿಸಿದಾಗ ಇಪ್ಪತ್ತೈದು ವರ್ಷಗಳ ಹಿಂದೆ ವಿವಾದ ಹಾಗೂ ಪ್ರಾಣ ಹತ್ಯೆ ಬೆದರಿಕೆಗೆ ಒಳಗಾಗಿದ್ದರು. ಇವತ್ತಿಗೂ ಕೂಡ ಚೆನ್ನಬಸಣ್ಣನ ಹುಟ್ಟಿನ ಕುರಿತಾಗಿ ಲಿಂಗಾಯುತ ಮತ್ತು ವೀರಶೈವ ಸಮುದಾಯ ಮೌನವಹಿಸಿದೆ. ಅವನು ಶಿವನ ಪ್ರಸಾದ ಎಂದು ಹುತೇಕ ಕಡೆ ಹೇಳಲಾಗಿದೆ. ಒಂದೆಡೆ ಮಾತ್ರ ಶಿವದೇವಯ್ಯ ಚೆನ್ನಬಸವಣ್ಣನ ತಂದೆ ಎಂದು ಹೇಳಲಾಗಿದೆ.

ವಾಸ್ತವವಾಗಿ ಅಧಿಕೃತ ಮೌಖಿಕ ಚರಿತ್ರೆಗಳ ಮೂಲಕ ಡೋಹರ ಕಕ್ಕಯ್ಯ ಮತ್ತು ಅಕ್ಕ ನಾಗಮ್ಮ ಇವರ ನಡುವಿನ ದೈಹಿಕ ಸಂಬಂಧದಿಂದಾಗಿ ಬಸವನ ಬಾಗೇವಾಡಿಯಲ್ಲಿ ಅಕ್ಕನಾಗಮ್ಮನ್ನು ಬ್ರಾಹ್ಮಣ ಜಾತಿಯಿಂದ ಹೊರಹಾಕಿದ ಕಾರಣಕ್ಕಾಗಿ ಬಸವಣ್ಣನು ಜನಿವಾರ ಕಿತ್ತೆಸೆದು ಅಕ್ಕನ ಜೊತೆ ಕಪ್ಪಡಿ ಸಂಗಮಕ್ಕೆ ಬಂದ ಕಥೆ ಇಂದಿಗೂ ಕೂಡಲ ಸಂಗಮದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಜನಪದರ ಬಾಯಲ್ಲಿ ಚಾಲ್ತಿಯಲ್ಲಿದೆ. 19967-97 ರ ಸಮಯದಲ್ಲಿ ಡಾ.ಪಿ.ವಿ. ನಾರಾಯಣ ಅವರು ಧರ್ಮಕಾರಣ ಎಂಬ ಕಾದಂಬರಿ ಬರೆದಾಗ ವಿವಾದಕ್ಕೆ ಒಳಗಾಗಿ ಇದೇ ಕಾರಣದಿಂದಾಗಿ ನಿಷೇಧಕ್ಕೆ ಒಳಗಾಯಿತು. ಈ ಸಂದರ್ಭದಲ್ಲಿ ಚಂಪಾ ಅವರು ಸಂಕ್ರಮಣ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟಿಸಿ ‘ ಡೋಹರ ಕಕ್ಕಯ್ಯನು, ಅಕ್ಕ ನಾಗಮ್ಮನು ಬೇಲಿಯ ಹಿಂದೆ ಸಂಗವ ಮಾಡಿದರು’ ಎಂಬ ಬೀದರ್ ಜಿಲ್ಲೆಯಲ್ಲಿ ಜನಪ್ರಿಯವಾಗಿದ್ದ ಜಾನಪದ ಗೀತೆಯನ್ನು ಪ್ರಸ್ತಾಪ ಮಾಡಿದ್ದರು.

ಕಲಬುರ್ಗಿಯವರು ಸಹ ಇದೇ ವಿಷಯವನ್ನಿಟ್ಟುಕೊಂಡು ಜಾತಿಯಿಂದ ಮುಕ್ತನಾಗಿದ್ದ ಬಸವಣ್ಣನು ಡೋಹರ ಕಕ್ಕಯ್ಯನಿಗೂ ಮತ್ತು ಅಕ್ಕನಾಗಮ್ಮನಿಗೂ ವಿವಾಹ ಮಾಡಿಸಿರುವ ಸಾಧ್ಯತೆ ಇದೆ. ಬಸವಣ್ಣನ ದೃಷ್ಟಿಯಲ್ಲಿ ಕಕ್ಕಯ್ಯ ದಲಿತನಲ್ಲ, ಅಕ್ಕನಾಗಮ್ಮ ಬ್ರಾಹ್ಮಣಳಲ್ಲ ಇಬ್ಬರೂ ವೀರ ಶೈವರು ಎಂದು ವ್ಯಾಖ್ಯಾನಿಸಿದ್ದರು. ಜೊತೆಗೆ ಚೆನ್ನಬಸಣ್ಣ ಈ ದಂಪತಿಗಳ ಪುತ್ರ ಎಂದು ಊಹಿಸಿದ್ದರು. ಈ ವಿಷಯವನ್ನು ಕಲಬುರ್ಗಿಯವರು ಖಚಿತ ಸತ್ಯ ಎಂದು ಹೇಳಿಕೊಂಡಿರಲಿಲ್ಲ. ಸಾಧ್ಯತೆಗಳಿವೆ ಎಂದು ಹೆಚ್ಚಿನ ಅಧ್ಯಯನಕ್ಕೆ ಕರೆ ನೀಡಿದ್ದರು. ಆದರೆ, ತಾನು ಕುವೆಂಪು ಅವರ ಪರಮ ಶಿಷ್ಯ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತಿದ್ದ ಹಾಗೂ ಅದೇ ಧಾರವಾಡದ ಕರ್ನಾಟಕ ವಿ.ವಿ.ಯ ಕನ್ನಡ ವಿಭಾಗದಲ್ಲಿ ಕಲಬುರ್ಗಿಯವರ ಸಹದ್ಯೋಗಿಯಾಗಿದ್ದ ಡಾ.ಎಲ್. ವೃಷೇಭೇಂದ್ರ ಸ್ವಾಮಿಯವರು ಕೆಲವು ಮಠಾಧೀಶರನ್ನು ಮುಂದಿಟಟ್ಟುಕೊಂಡು ದೊಡ್ಡ ದಾಂಧಲೆ ಎಬ್ಬಿಸಿದರು. ಕಲಬುರ್ಗಿಯವರ ಐವತ್ತನೇ ಹುಟ್ಟು ಹಬ್ಬದ ಸಮಾರಂಭಕ್ಕೆ ಅಡ್ಡಿಪಡಿಸಿದರು. ಜೊತೆಗೆ ಅವರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ ಅವರಿಂದ ಕ್ಷಮಾರ್ಪಣಾ ಪತ್ರವನ್ನು ಸಹ ಬರೆಸಿಕೊಳ್ಳಲಾಯಿತು. ಈ ಎಲ್ಲಾ ವಿರಗಳು ಈ ಕೃತಿಯಲ್ಲಿ ದಾಖಲಾಗಿರುವುದು ವಿಶೇಷ.

ಕಲಬುರ್ಗಿಯವರ ಹತ್ಯೆಯ ಹಿಂದೆ ಸುಧಿರ್ಘ ಇತಿಹಾಸವಿದೆ. ಹಿಂದೂ ಸಂಘಟನಗಳ ಜೊತೆ ಬ್ರಾಹ್ಮಣ ಹಾಗೂ ವೀರಶೈವ ಸಂಘಟನೆಗಳು ಕೈ ಜೋಡಿಸಿರುವ ಸಾಧ್ಯತೆಗಳಿವೆ. ಹದಿನೈದು ವರ್ಷಗಳ ಹಿಂದೆ ಗದಗ ಜಿಲ್ಲೆಯ ಅಣ್ಣಿಗೇರಿಯ ಹಳ್ಳವೊಂದರಲ್ಲಿ ಆರನೂರಕ್ಕೂ ಹೆಚ್ಚು ಮಾನವ ತಲೆಬುರುಡೆಗಳು ದೊರೆತಿದ್ದವು. ಇವುಗಳ ಹಿಂದೆ ಬ್ರಾಹ್ಮಣ ಮತ್ತು ಜೈನರ ನಡುವಿನ ಸಂಘರ್ಷ ನಡೆದಿರುವ ಸಾಧ್ಯತೆಗಳಿದ್ದು ಬ್ರಾಹ್ಮಣ ಸಮುದಾಯದಿಂದ ಹತ್ಯೆಯಾದ ಜೈನರ ತಲೆಬುರುಡೆಗಳು ಇರಬೇಕು ಎಂದು ಕಲ್ಬುರ್ಗಿಯವರು ವೈಜ್ಞಾನಿಕ ಆಧಾರದ ಮೇಲೆ ತಲೆಬುರುಡೆಗಳ ಅವಧಿಯನ್ನು ಗುರುತಿಸಿದ ನಂತರ ಅದೇ ಕಾಲಕ್ಕೆ ಹೊಂದಿಕೆಯಾಗುವ ಶಾಸನಗಳ ಆಧಾರದ ಮೇಲೆ ಮೂದಬಿದರಿಯಲ್ಲಿ ನಡೆಯುವ ಆಳ್ವಾಸ್ ಸಿರಿನುಡಿಯ ಅಧ್ಯಕ್ಷೀಯ ಭಾಷಣದಲ್ಲಿ ಈ ಮಾತನ್ನು ಹೊರಹಾಕಿದ್ದರು. ಅಂದಿನಿಂದಲೇ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು..

ಶುದ್ಧವಾದ ಕೈ ಮತ್ತು ಬಾಯಿ ಕಲ್ಬುರ್ಗಿಯ ಜೀವನದ ಲಕ್ಷಣಗಳಾಗಿದ್ದವು. ಸಾಂಸ್ಕೃತಿಕ ಪ್ರತಿಷ್ಠಾನಗಳಲ್ಲಿ ಗೂಟ ಹೊಡೆದುಕೊಂಡು ಕೊಳೆಯುತ್ತಿರುವ ಇಂದಿನ ಸಾಹಿತ್ಯ ಲೋಕದ ವ್ಯಕ್ತಿಗಳಿಗಿಂತ ಭಿನ್ನವಾಗಿ ಬೇಂದ್ರೆ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಟಾನಗಳಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ ತಕ್ಷಣ ರಾಜಿನಾಮೆ ಸಲ್ಲಿಸಿದ ಕರ್ನಾಟಕದ ಏಕೈಕ ವಿದ್ವಾಂಸ ಕಲಬುರ್ಗಿಯವರು. ಕಲ್ಬುರ್ಗಿಯವರ ಮಾನವೀಯ ಗುಣವನ್ನು ಸಹ ಸಿದ್ಧನಗೌಡ ಪಾಟೀಲ್ ಈ ಕೃತಿಯಲ್ಲಿ ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಅವರ ಮನೆಯ ಸಮೀಪವಿರುವ ಹೀರೆಮಲ್ಲೂರು ಶಿಕ್ಷಣ ಸಂಸ್ಥೆಗೆ ಕಲ್ಬುರ್ಗಿಯವರು ಗೌರವ ಅಧ್ಯಕ್ಷರಾಗಿದ್ದರು. ಒಮ್ಮ ಕಾಲೇಜಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪಾಲ್ಗೊಳ್ಳಲು ಹಿಂದಿನರಾತ್ರಿ ಧಾರವಾಡಕ್ಕೆ ಬಂದಿದ್ದ ಸಿದ್ದನಗೌಡರು ಅತಿಥಿ ಗೃಹದಲ್ಲಿ ತಂಗಿದ್ದಾಗ, ಬೆಳಿಗ್ಗೆ ಏಳುಗಂಟೆಗೆ ಪ್ಲಾಸ್ಕ್ ನಲ್ಲಿ ಚಹಾ ಹಾಕಿಸಿಕೊಂಡು, ದಿನಪತ್ರಿಕೆ ಹಿಂಡಿದುಕೊಂಡು ಕೊಠಡಿಗೆ ಬಂದ ಗುರುವನ್ನು ನೋಡಿ ದಂಗಾದ ಅವರು ಚಹಾ ಕುಡಿಯದೆ ಪ್ರತಿಭಟಿಸಿ, ಗುರುವಿನ ಮನೆಗೆ ಹೋಗಿ ಚಹಾ ಕುಡಿದು ಬಂದ ಘಟನೆಯನ್ನು ವಿವರಿಸಿದ್ದಾರೆ.

ಅವರು ಆಂತರೀಕವಾಗಿ ಎಂತಹ ಮಾತೃ ಹೃದಯವನ್ನು ಹೊಂದಿದ್ದರು ಎಂಬುದಕ್ಕೆ ಈ ಘಟನೆಯು ಸಾಕ್ಷಿಯಾಗಿದೆ. ನನಗೆ ದಿನಾಂಕ ಮರೆತು ಹೋಗಿದೆ. ಆ ದಿನ ಬೆಳಗಾವಿ ನಗರದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿತ್ತು. ವಿಠಲ ಎಂಬ ರೈತ ವಿಷಕುಡಿದು ಆತ್ಯಹತ್ಯೆ ಮಾಡಿಕೊಂಡಿದ್ದ. ಆ ದಿನ ಬೆಳಿಗ್ಗೆ ಎಂಟು ಗಂಟೆಗೆ ಕರೆ ಮಾಡಿದ ಕಲ್ಬರ್ಗಿಯವರು ‘ ಕೊಪ್ಪ ಹತ್ತು ಗಂಟೆಗೆ ಮನೆ ಹತ್ತಿರ ಬಾ. ಬೆಳಗಾವಿಗೆ ಹೋಗಿ ಅಲ್ಲಿಂದ ಗೋಕಾಕ್ ತಾಲ್ಲೂಕಿನ ಕಟ್ಟಿಮನಿ ಊರಿಗೆ ಹೋಗಿ ಬರೋಣ, ನಿನ್ನ ಜೊತೆ ಮಾತನಾಡಬೇಕಿದೆ’ ಎಂದರು. ತಕ್ಷಣ ಸ್ನಾನ, ತಿಂಡಿ ಮುಗಿಸಿ ಗುರುವಿನ ಮನೆಯತ್ತ ಹೊರಟೆ.

ಹತ್ತು ಗಂಟೆಗೆ ಕಾರ್ ನಲ್ಲಿ ಬೆಳಗಾವಿ ನಗರಕ್ಕೆ ತೆರಳಿ ಬಸವರಾಜ ಕಟ್ಟಿಕನಿ ಪ್ರತಿಷ್ಟಾನದ ಕಚೇರಿಗೆ ಹೋದ ನಂತರ ಯಾರು ಇಲ್ಲದ ಸಮಯದಲ್ಲಿ ಈ ವಿಷಯವನ್ನು ನನ್ನ ಬಳಿ ಪ್ರಸ್ತಾಪಿಸಿದರು. ‘ಕೊಪ್ಪಾ, ನಮ್ಮ ವಿವಾಹದ ಐವತ್ತನೇ ವರ್ಷದ ವಾರ್ಷಿಕೋತ್ಸವ ಮಾಡಿಕೊಳ್ಳಲು ಮಗ ಐವತ್ತು ಸಾವಿರ ಕಳಿಸಿಕೊಟ್ಟಿದ್ದ, ಮಗಳು ಇಪ್ಪತ್ತೈದು ಸಾವರ ನೀಡಿದಳು. ನಾನು ಆಕಿಯ ಅಭಿಪ್ರಾಯ ಕೇಳದೆ (ಅಂದರೆ ಪತ್ನಿ ಉಮಾ ಅಮ್ಮನವರನ್ನು ಕೇಳದೆ), ಆ ಹಣಕ್ಕೆ ಇಪ್ಪತ್ತೈದು ಸಾವಿರವನ್ನು ಸೇರಿಸಿ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಿರೇಮಲ್ಲೂರು ಈಶ್ವರನ್ ಕಾಲೇಜಿಗೆ ದಾನ ಮಾಡಿಬಿಟ್ಟೆ. ಯಾಕೋ ಮನಸ್ಸಿಗೆ ಕಸಿವಿಸಿ ಆಗ್ತಿದೆ ಕಣೋ, ಆಕೆಯ ಅಭಿಪ್ರಾಯವನ್ನು ಒಮ್ಮೆ ಕೇಳಬೇಕಿತ್ತು ಎಂದು ಅನಿಸತೊಡಗಿದೆ. ಈಗ ಕೇಳುವ ಧೈರ್ಯವಿಲ್ಲ, ನೀನು ಅಮ್ಮನ ಹತ್ತಿರ ಮಾತನಾಡಿ ಆಕಿ ಮನಸ್ಸನಲ್ಲಿ ಏನಿದೆ ತಿಳಿದುಕೊ, ಆಕೆಗೆ ಆಸೆ ಇದ್ದರೆ, ನಾನು ಎಪ್ಪತ್ತೈದು ಸಾವಿರ ಕೊಟ್ಟು ಬಿಡ್ತಿನಿ’ ಎಂದರು. ನನಗೆ ನಗು ತಡೆಯಲಾಗಲಿಲ್ಲ. ಏನ್ ಸಾರ್ ಅಮ್ಮಾ ಎಂದಾದರೂ ನಿಮ್ಮ ಕೆಲಸಗಳಿಗೆ ಅಡ್ಡಿಯಾಗಿದ್ದಾರಾ? ಎಂದೆ. ನಂತರ ಒಂದು ದಿನ ಅವರು ಬೆಂಗಳೂರಿಗೆ ಹೋಗಿದ್ದಾಗ ಮನೆಗೆ ಹೋಗಿ ಅಮ್ಮನಿಗೆ ಈ ವಿಷಯ ತಿಳಿಸಿದಾಗ ಅವರು ಜೋರಾಗಿ ನಕ್ಕು ಬಿಟ್ಟರು.

ಇದು ಬಹುತೇಕ ಮಂದಿ ನೋಡದ ಹಾಗೂ ಕೇಳದ ಈ ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಕಲಬುರ್ಗಿಯವರ ಮಾನವೀಯ ಮುಖಗಳು. ಇಂತಹ ಅನೇಕ ಆಯಾಮಗಳನ್ನು ಮಿತ್ರರಾದ ಸಿದ್ಧನಗೌಡ ಪಾಟೀಲ್ ಈ ಕೃತಿಯಲ್ಲಿ ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ. ಹಿಂದೂ ಸಂಘಟನೆಗಳ ದುಷ್ಟ ಶಕ್ತಿಗಳು ಹತ್ಯೆ ಮಾಡಿದ್ದು ಕಲಬುರ್ಗಿಯವರನ್ನಲ್ಲ, ಕನ್ನಡದ ನೆಲದ ಸಾಕ್ಷಿಪಜ್ಞೆ ಮತ್ತು ವಾಸ್ತವ ಸತ್ಯದ ಪ್ರತಿಪಾದಕ ಹಾಗೂ ಇತಿಹಾಸದ ನೈಜ ಪ್ರಜ್ಞೆಯನ್ನು ಹತ್ಯೆ ಮಾಡಿದರು. ಇದು ಕನ್ನಡದ ನೆಲದ ದುರಂತವಲ್ಲದೆ ಬೇರೇನೂ ಅಲ್ಲ.

‍ಲೇಖಕರು Admin

August 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: