ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂತಾ ಭರತಿ ಕನಸು..

ದೀಪಾ ಗೋನಾಳ

**

ಯಾವುದೋ ಉದ್ವೇಗ

ಎಲ್ಲಿಂದ ತಲೆ ಹೊಕ್ಕು

ಎದೆಗಿಳಿಯಿತೋ ಕಾಣೆ

ಯಾವುದೋ ಒತ್ತಡ

ಯಾರಿಗೆಲ್ಲ 

ಮಣಿಯಬೇಕು

ಹೆಣ್ಣು ಜೀವವಿದು ಅರಿಯೆ

ಮುಟ್ಟಿಗಿನ್ನೂ ವಾರವಿದೆ

ಇಂದೇ ಹೊಟ್ಟೆ‌ ಹಿಂಡುತಿದೆ

ಜೀವವೆಲ್ಲ ಬಾಯಿಗೆ ಬಂದು

ಭಯವಾಗಿ ಉಸಿರಲ್ಲಿ

ಹೊರ ಬಂದಂತೆ

ಈ ಕೆಟ್ಟ ಗಳಿಗೆಯಲೂ

ಒಂದು ಪುಟ್ಟ ಕನಸು

ಅದು ಬೀಳದಿದ್ದರೂ

ನಾನೇ ಕಣ್ ತುಂಬಿಕೊಂಡು

ತಟ್ಟುತ್ತಿದ್ದೇನೆ 

ಏ ಕನಸೇ 

ಬಾ

ಇಲ್ಲೆ ಇರು 

ಈ ರೆಪ್ಪೆಯೊಳಗೆ

ಬೆಚ್ಚಗೆ

ಹೊರಗೆ ಹೋಗದಿರು

ಗುಮ್ಮಂದಿರು

ದೊಡ್ಡ ಕುರ್ಚಿಯಲಿ

ಕಾಯುವವರಂತೆ

ಪೋಷಾಕು ತೊಟ್ಟು

ಕೊಲ್ಲುತಿಹರು

ಬಾ ಇಲ್ಲಿ

ಸೋತು

ಬಂದ ನನ್ನ

ನಿನ್ನ ಎರಡು ಕಾಲುಗಳ ನಡುವೆ 

ಕೂಡಿಸಿಕೊ

ತಲೆತುಂಬ ಎಣ್ಣೆ ಉಣಿಸಿ

ಬೆರಳಲ್ಲೆ ತಟ್ಟಿ

ಹಣೆಗೊಂದ ಸಿಹಿಮುತ್ತನಿಟ್ಟು

ತಟ್ಟು

ಎಂತಾ ಭರತಿ ಕನಸು

ಮೈಯೆಲ್ಲ ಹಗುರ

ಕಣ್ಣು ನಿದ್ದೆಗೆ 

ಕಾತರಿಸಿ ನಿನ್ನ ಕಾಲ ಮೇಲೆ

ತನು ಆನಿಸಿ

ಉಟ್ಟ ಉದ್ವೇಗ

ತಟ್ಟಿದ ಒತ್ತಡ

ಒಡ್ಡುಗಟ್ಟಿದ ಭಯವೆಲ್ಲ

ನೆಲಕ್ಕೆಸೆದು

ನೆಲದಭಾಗವೇ 

ಆಗಿ ಮಲಗಿದ 

ಕನಸು

ನೆಲವಾದ

ಮಣ್ಣಾದ

ಮಣ್ಣ ಮೇಲೊಂದು

ಮರವಾದ

ಮರದಲ್ಲೊಂದು

ಹಣ್ಣಾದ

ಹಣ್ಣು ಬೀಜದಿ

ಸಾವಿರ ಸಸಿಯಾದ

ಸಸಿ ಸಸಿಯೂ

ಹೆಮ್ಮರವಾದ

ಹೆಮ್ಮರಗಳ ಸಾಲುಗಳಲಿ

ಸಾಲಾಗಿ ಕೂತ

ಹಕ್ಕಿಪಿಕ್ಕಿಗಳಿಗೆ ನೆರಳಾದ

ಕೊರಳಾದ

ಗೂಡಾದ

ಕಾಡಾದ

ಹಾಡಾದ

ಉಸಿರಾದ

ಉಸಿರರಸಿ

ಬಂದವರ

ಎದೆ ಹೊಕ್ಕು

ಜೀವಕಾದ 

ಕನಸು

‍ಲೇಖಕರು Admin MM

1 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading