ಉದಯ ಗಾಂವಕರ್ ಬಿಚ್ಚಿಟ್ಟ ‘ಟೊಮೆಟೋ ಗಾಥಾ’

ಉದಯ ಗಾಂವಕರ್

ಎರಡು ಸಾವಿರ ವರ್ಷಗಳ ಹಿಂದೆ ಮೆಕ್ಸಿಕೋದ ದಕ್ಷಿಣ ಭಾಗದಲ್ಲಿದ್ದ ಅಝ್ಟೆಕ್ ಎಂಬ ಮೆಸೋಅಮೇರಿಕನ್ ಜನ ಟೋಮೆಟೋ ಎಂದು ಈಗ ಕರೆಯಲ್ಪಡುತ್ತಿರುವ ಗಿಡವನ್ನು ಅಲ್ಲಿನ ಕಾಡುಗಳಿಂದ ನಾಡಿಗೆ ಯಾಕಾದರೂ ತಂದರೋ?

ಅವರು ತಂದಿದ್ದ ಟೊಮೆಟೋ ಗಿಡದಲ್ಲಿ ಬಟಾಣಿ ಕಾಳಿನ ಗಾತ್ರದ ಕೆಂಪು ಹಣ್ಣು ಬಿಡುತಿತ್ತು. ಬಹುಶಃ ಚೆಂದಕ್ಕೆಂದು ತಂದು ಮನೆಯೆದರು ನೆಟ್ಟಿರಬಹುದು. ಈಗ ನೋಡಿದರೆ ಟೊಮೆಟೋ ಒಂದು ಅಲಂಕಾರಿಕ ಹಣ್ಣಾಗಿ ಡೈನಿಂಗ್ ಟೇಬಲ್ಲಿನ ಮೇಲೆ ಏಕಾಂಗಿಯಾಗಿದೆ. ನಮ್ಮ ಮನೆಯಲ್ಕೂ ಟೊಮೆಟೋ ಇದೆ ಎಂಬ ಪ್ರತಿಷ್ಠೆಯಾಗಿ, ಅನಿವಾರ್ಯವಾದರೆ ಒಂದಿದೆ ಎಂಬ ವಿಶ್ವಾಸವಾಗಿ!

ಈ ಪ್ರತಿಷ್ಠೆ ಇಲ್ಲದವರು ಟೊಮೆಟೋವನ್ನು ತಮ್ಮ ಅಡುಗೆಯ ಮನೆಯಿಂದ ಹೊರದಬ್ಬಿದ್ದಾರೆ. ಬದಲಿಯನ್ನು ಹುಡುಕಿಕೊಂಡು ಹುಣಸೆ, ನಿಂಬೆಗೆ ಮರಳಿದ್ದಾರೆ. ಆದರೆ, ಹೀಗೆ ನಮ್ಮ ಅಡುಗೆಯ ರೂಢಿಯನ್ನೂ ಜಿಹ್ವಾ ಸಂಸ್ಕಾರವನ್ನೂ ಬದಲಿಸುವುದು ಅಷ್ಟು ಸುಲಭವಲ್ಲ. ಸಮೂಹದ ಸ್ಮೃತಿಗೆ ಟೊಮೆಟೋದ ಟಿಂಜಿ ರುಚಿಯು ಸೇರಿಕೊಂಡದ್ದು ನಿನ್ನೆ ಮೊನ್ನೆಯಲ್ಲ.

ಯುರೋಪಿನ ಧನದಾಹಿ ಜನ ಬಂಗಾರ ಹುಡುಕಿಕೊಂಡು ಅಲೆದು ಅಮೇರಿಕಾ ಖಂಡ ತಲುಪಿದ್ದು ಗೊತ್ತೇ ಇದೆ. ಹೀಗೆ ಹೋದವರು ಮರಳಿ ಬರುವಾಗ ಅಮೇರಿಕಾ ಖಂಡದ ಸಂಪದ್ಭರಿತ ಕಾಡುಗಳಿಂದ ಅದಾಗಲೇ ನಾಡಿಗೆ ಬಂದಿದ್ದ ಬಟಾಟೆ, ಮೆಣಸು ಮುಂತಾದ ಸೊಲನೇಸಿ ಕುಟುಂಬದ ಗಿಡಗಳನ್ನು ಜಗತ್ತಿನ ರುಚಿ ಕಲ್ಪನೆಗಳನ್ನು ಬೇಕಾಬಿಟ್ಟಿ ಬದಲಿಸಿದರು. ಬಟಾಟೆಯ ಪರಿಚಯವೇ ಇದ್ದಿರದಿದ್ದ ಯುರೋಪು ಮೊದಲ ಮಹಾಯುದ್ಧದ ವೇಳೆಗೆ ಬಟಾಟೆ ಬೆಳೆಗೆ ಹತ್ತುಪಟ್ಟಿಯ ಕೀಟದ ಬಾಧೆ ಉಂಟಾಗಿ ಭೀಕರ ಕ್ಷಾಮವನ್ನು ಅನುಭವಿಸಿತು.

Leptinotarsa decemlineata ಎಂಬ ಆ ಭಕಾಸುರ ಕೀಟವನ್ನು ಜಗತ್ತಿಗೆಲ್ಲ ಹರಡಿದ್ದು ಅಮೇರಿಕದ ಗುಪ್ರಚರ ಸಂಸ್ಥೆಯಾದ ಸಿ.ಐ.ಎ ಎಂದು ಆಗಿನ ಸೋವಿಯತ್ ರಷ್ಯಾ ಆರೋಪಿಸಿತ್ತು. ಆದರೆ, ಆ ಕೀಟವು ಬಟಾಟೆ ಯುರೋಪನ್ನು ತಲುಪುವ ಮೊದಲೇ ದೊಣ್ಣೆ ಮೆಣಸಿನ ಕಾಯಿಯ ಜೊತೆ ಜಗದಗಲ ಹರಡಿಕೊಂಡಿತ್ತು.

ಸ್ಪೇನಿನ ಹರ್ಮನ್ ಕಾರ್ಟೆಸ್ ಮೆಕ್ಸಿಕೋದ ಆಝ್ಟೆಕ್ ಅಧಿಪತ್ಯವನ್ನು ಸೋಲಿಸಿ ಮರಳಿ ಬರುವಾಗ ಟೊಮೇಟೋವನ್ನು ಯುರೋಪು ಖಂಡಕ್ಕೆ ತಂದನೆಂದು ಹೇಳಲಾಗುತ್ತದೆ. ಈ ಅಪರಾಧಕ್ಕಾಗಿ ಆತನನ್ನು ಈಗಿನ ಜನ ಕ್ಷಮಿಸಲಾರರು.

ಸ್ಪೇನಿನ ಜನ ಜಗತ್ತಿನ ಹಲವು ಕಡೆ ತಮ್ಮ ವಸಾಹತು ಸ್ಥಾಪಿಸುತ್ತಿದ್ದಂತೆ ಟೊಮೆಟೋ ಕೂಡಾ ಜಗತ್ತನ್ನು ವ್ಯಾಪಿಸುತ್ತಾ ಹೋಯಿತು. ಟೊಮೆಟೋ ಹಣ್ಣು ಅಡುಗೆಯ ತರಕಾರಿಯಾಗಿ ರೂಪುಗೊಂಡು ಎಲ್ಲೆಡೆ ಬೆಳೆಸಲು ಶುರುಮಾಡಲು ಮತ್ತೆ ಇನ್ನೂರು ವರ್ಷಗಳು ಬೇಕಾದವು. ಪೋರ್ತುಗೀಸರು ಹದಿನೆಂಟನೆ ಶತಮಾನದಲ್ಲಿ ಟೊಮೆಟೋವನ್ನು ಭಾರತಕ್ಕೆ ತಂದರು. ಹಸಿಮೆಣಸನ್ನು ಭಾರತಕ್ಕೆ ತಂದವರೂ ಅವರೇ. ಆದುದರಿಂದಲೇ ಮೆಣಸನ್ನು ಕುಂದಾಪುರ ಕನ್ನಡದಲ್ಲಿ ಗ್ವಾಯ್ ಕೋಡ್ ಎನ್ನುತ್ತಾರೆ. ಪೋರ್ಚುಗೀಸರ ಗೋವಾದಿಂದ ಬಂದದ್ದೆಂದು ಆ ಹೆಸರು. ಟೊಮೆಟೋವನ್ನು ಬಿಲಾಯತಿ ಬೆಗನ್ ಎಂದು ಕರೆಯುವ ಬೆಂಗಾಲಿ ಜನ ಈವರೆಗೂ ಅದಕ್ಕೆ ಭಾರತೀಯ ಸ್ಥಾನಮಾನ ನೀಡಲು ಅನುಮಾನಿಸುತ್ತಿದ್ದಾರೆ.

ಮೆಕ್ಸಿಕೋದ ಅಝ್ಟೆಕ್ ಜನರ ನಹೊತಿ ಭಾಷೆಯ ಟೊಮೆಟಿ ಸ್ಪೇನಿಗೆ ಬರುವಾಗ ಟೊಮೆಟೋ ಆಯಿತು. ಸೊಲೆನೇಸಿ ಕುಟುಂಬಕ್ಕೆ ಸೇರಿರುವ ಟೊಮೆಟೋದ ಸಸ್ಯಶಾಸ್ತ್ರೀಯ ದ್ವಿನಾಮಕರಣ Solanum lycopersicum. ಜಗತ್ತಿನಾದ್ಯಂತ ಮೂರುಸಾವಿರಕ್ಕೂ ಹೆಚ್ಚು ತಳಿಗಳನ್ನು ಬೆಳೆಸಲಾಗುತ್ತದೆ. ಟೊಮೆಟೋದಲ್ಲಿ ಲೈಕೋಪೇನ್ ಎಂಬ ಆಂಟಿಆಕ್ಸಿಡೆಂಟ್ ಹೇರಳವಾಗಿರುತ್ತದೆ. ಪೊಟ್ಯಾಸಿಯಂ, ವಿಟಮಿನ್ ಕೆ 1, ವಿಟಮಿನ್ ಬಿ9 ಮುಂತಾದ ಪೋಷಕಾಂಶಗಳೂ ಸಾಕಷ್ಟು ಪ್ರಮಾಣದಲ್ಲಿರುತ್ತವೆ.

ಭಾರತ – ಪಾಕಿಸ್ತಾನಗಳ ನಡುವೆ ಟೊಮೆಟೋ ಪೊಲಿಟಿಕ್ಸ್ ನಡೆಯುತ್ತಿರುತ್ತವೆ. ಭಾರತದ ಟೊಮೆಟೋ ಆಮದು ಮಾಡಿಕೊಂಡದ್ದರಿಂದ ನಮ್ಮ ರೈತರ ಟೊಮೆಟೋಗೆ ಬೆಲೆ ಸಿಗುತ್ತಿಲ್ಲ ಎಂದು ಅಲ್ಲಿನ ವಿರೋಧ ಪಕ್ಷಗಳೂ ಪಾಕಿಸ್ತಾನದ ನೀರುಳ್ಳಿ ಆಮದಿನಿಂದ ನಮ್ಮ ರೈತರಿಗೆ ನಷ್ಟವಾಗಿದೆಯೆಂದು ಇಲ್ಲಿನ ವಿರೋಧ ಪಕ್ಷದವರೂ ದೂರುವುದು ನಡೆಯುತ್ತಿರುತ್ತದೆ. ಟೊಮೆಟೋ- ನೀರುಳ್ಳಿ ಎರಡೂ ಮಾಂಸಾಹಾರಿ ಮತ್ತು ಸಸ್ಯಾಹಾರಿ ಅಡುಗೆಗಳಲ್ಲಿ ಸಮಾನ ಮಹತ್ವ ಪಡೆಯುತ್ತವೆ.

ಇನ್ನೊಂದು ವಿಷಯ ಗೊತ್ತಾ? ಟೊಮೆಟೋದಲ್ಲಿ ಶೇಕಡಾ ತೊಂಬತ್ತೈದು ಭಾಗ ನೀರೇ ಆಗಿರುತ್ತದೆ. ಅಂದರೆ, ನೀವು ಒಂದು ಕೆ.ಜಿ ಟೊಮೆಟೋಕ್ಕೆ ಕೊಡುವ ನೂರು ರೂಪಾಯಿಯಲ್ಲಿ ತೊಂಬತ್ತೈದು ರೂಪಾಯಿ ಹೋಗುವುದು ನೀರಿಗೆ!

‍ಲೇಖಕರು Admin

November 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: