ಶೋಭಾ ದಿನೇಶ್
ಈ ಸಂಜೆ ಅವನು ಬರಲಿದ್ದಾನೆ.
ಹಾಗಂತ ಖುದ್ದು ಅವನೇ ಹೇಳಿ ಕಳಿಸಿದ್ದಾನೆ.
ಹೀಗೆ ಭೇಟಿ ದಿಢೀರ್ ಸಿಕ್ಕಿಯಾದರೆ ನಿಕ್ಕಿಯಾದರೆ
ಅದೆಂಥಾ ಗಡಿಬಿಡಿ
ದೇಹದ ಕಸುವೆಲ್ಲಾ ಸೋರುತ್ತಿರುವಂತೆ
ಧಾವಂತದ ಚಡಪಡಿಕೆ
ಮೊನ್ನೆ ಗಾಂಧೀ ಬಜಾರಿನಲ್ಲಿ ಕೊಂಡ ಕಡು ನೀಲಿ ಜುಮುಕಿಗೆ
ತಿಳಿ ನೀಲಿ ಸೀರೆ ಹೊಂದಿಸಿಟ್ಟಿದ್ದೇನೆ
ನನ್ನದೇ ನಿರೀಕ್ಷೆಯಲ್ಲಿದೆ ಬಚ್ಚಲು ಮನೆಯ ಹಬೆಯಾಡುವ ನೀರು
ಸೀಗೆಯೊಂದಿಗೆ ಶ್ರೀಗಂಧ ಬೆರಸಿ ಸ್ನಾನಕ್ಕಿಳಿದಿದ್ದೇನೆ.

ಹಿತ್ತಲಿನ ಪಾರಿಜಾತೆಯ ನೆರಳಿನಲ್ಲಿ ಎರಡೇ ಎರಡು ಕುರ್ಚಿ ಜೋಡಿಸಿದ್ದೇನೆ
ನಡುವೆ ಕಡು ಕಂದು ಟೀಪಾಯಿ, ಮೇಲೆ ದೇವತೆಗಳು ಕುಡಿಯುವ ಕಾಫಿ
ಆಗಷ್ಟೇ ಬಿರಿಯುತ್ತಿರುವ ಪಾರಿಜಾತೆಯೊಂದಿಗೆ,
ಕಾಫಿಯ ಘಮಲು ಪೈಪೋಟಿಗೆ ಬಿದ್ದಿದೆ.
ಪ್ರೀತಿಯ ವಿಷಯದಲ್ಲಿ ನಾನು ಅಪ್ಪಟ ಮಾರ್ವಾಡಿ
ಕೊಟ್ಟಷ್ಟೇ ಬಿಡದೇ ಪಡೆಯುತ್ತೇನೆ
ಆತನಿಗೂ ಅಷ್ಟೇ ಕಕ್ಕುಲಾತಿ
ಈ ಕೊಡು ಕೊಳ್ಳುವಿಕೆಗೆ ಸಾಕ್ಷಿಯಾಗಲು ಇಡೀ ಸಂಜೆ ಸಜ್ಜಾಗಿದೆ.
ಒಂದಷ್ಟು ಕವಿತೆ, ಮಾತು, ನೆನಪು ಒಟ್ಟು ಮಾಡಿ ಅಣಿಯಾಗಿದ್ದೇನೆ
ಅವನು ಬರುವುದಷ್ಟೇ ಬಾಕಿ
ಕಾಯುವಿಕೆಯೇ ಹೀಗೆ, ಮಧುರ ತಪನೆ






Beautiful
ಸಕ್ಕತ್
super
Chendada padya madam
ವಾಹ್!!!