ಡಾ. ಪ್ರೇಮಲತ ಬಿ.
ಬೊಂಬೆಯಂತ ಮಗುವ ಬಟ್ಟೆಯಲಿ ಸುತ್ತಿ
ಸುಡುವ ನೆತ್ತಿ, ಚಪ್ಪಲಿಯಿಲ್ಲದ ಕಾಲ
ಹೆಂಗಸೊಬ್ಬಳು
ಕಾರ ಕಿಟಕಿಗೆ ಮೈ ತಾಗಿಸಿ
ಭಿಕ್ಷೆಗೆ ಕೈ ಮುಂದೊಡ್ಡೂತ್ತಾಳೆ
ನಿರೀಕ್ಷೆಯಿಲ್ಲದ ಕಣ್ಣುಗಳ
ಆಚೀಚೆ ಸರಿಸುತ್ತ ಮುಂದೆ ಯಾರೆಂದು
ಮನದಲ್ಲೇ ಲೆಕ್ಕವಿಡುವಾಗ ಎಲ್ಲ ದಿನಗಳು
ಕೊನೆಯಲಿ ಒಂದೇ ಇರಬೇಕು..
ಹೊಟ್ಟೆಪಾಡು, ಕೈಗಳ ಜೋಲಿ ಹಾಡು
ಇಷ್ಟಕ್ಕೇ ಮುಗಿಯುತ್ತಿರಬೇಕು…
ದಣಿವಿರದೆ ದುಡಿದ ಮೂವತ್ತು ವರ್ಷಗಳು
ಕಾಲೇಜಿನಲಿ ಕಳೆದ ಹತ್ತು ವರ್ಷಗಳು
ಮನೆ ದುಡಿಮೆಯಲಿ ಸುಕ್ಕುಗಟ್ಟಿದ ಕೈಯಲ್ಲಿ
ಹತ್ತು, ನೂರು,ಸಾವಿರದ ನೋಟುಗಳ
ತಡಕುತ್ತ ಅಂಜುತ್ತೇನೆ
ಈ ಮಗುವಿಗೂ ಭಿಕ್ಷೆಯ ಭವಿಷ್ಯವೇ?
ಸಂದರ್ಭ ಕೊಡುವ ಕುತ್ತಿಗೆ, ಕೊನೆ ಎಲ್ಲಿಗೆ?

“ಬರುತ್ತೀಯೇನು ಕೊಡುತ್ತೇನೆ
ಊಟ, ಬಟ್ಟೆ, ದುಡ್ಡು, ಕೆಲಸ
ಪುಟ್ಟಮಗುವಿಗೆ ಆಟದ ಸಾಮಾನು
ಶಾಲೆಯ ಜೊತೆ , ತೂಗಲು ಆಶೆಯ ಕಮಾನು? “
ಪ್ರಶ್ನೆ ಕೇಳದಂತೆ, ಮುಂದೆ ಮಾತಾಡದಂತೆ
ಮುಖ ತಿರುವಿ ನಡೆಯುತ್ತಾಳೆ
ಇರದಿರುವುದು ಎಂದೋ ಕಳೆದ ನಂಬಿಕೆಯೇ?
ಸುಟ್ಟ ಸಂಕಲ್ಪವೆ? ಹಲ್ಲಂಡೆ ಬದುಕಿನ
ಭಾರೀ ಸೆಳೆತವೆ?
ತೋರದೆ ಬೆಪ್ಪಾಗುತ್ತೇನೆ
ಮುಂದಿರುವ ಡ್ರೈವರು ಮೀಸೆಯಡಿ
ನಗುವ ತಡೆಹಿಡಿದು ಮುಚ್ಚಿಡುವಾಗ
ಪ್ರಶ್ನೆಗಳು ಮಿನುಗುತ್ತವೆ
ಆದರ್ಶಗಳು ಅಳ್ಳಕವೆ ?
ಭಿಕ್ಷೆಯ ಕೈಗಳಿಗೆ ಚಾಚಿದ
ಸಹಾಯ ಹಸ್ತ ಇಷ್ಟು ನಿರರ್ಥಕವೆ?
ಬಂಧನಗಳಿಲ್ಲದ ಅವಳ ಬದುಕಿನಲಿ
ಬದ್ಧತೆಯ ಕೇಳಿದ ನನ್ನ
ಭಿಕ್ಷಾ ಪಾತ್ರೆ ಖಾಲಿಯೇ ಉಳಿಯುತ್ತದೆ !!







ಅದ್ಬುತ ರೀ..
ಧನ್ಯವಾದಗಳು
ಒಳ್ಳೆಯ ಕವಿತೆ
ಧನ್ಯವಾದಗಳು ಸರ್