ಡಾ.ಎಂ ಎಸ್ ಆಶಾದೇವಿ
ಕಡು ಕಷ್ಟದ ಕಾಲವು ನಮ್ಮನ್ನು ಅಧೀರರನ್ನಾಗಿಸಿರುವ ಹೊತ್ತು ಇದು. ಇದರ ಆರಂಭದ ಕಾಲವಂತೂ ನಮ್ಮನ್ನು ಅದೆಷ್ಟು ಕಂಗಾಲಾಗಿಸಿತ್ತು ಎಂದರೆ, ಏನೆಂಥ ಘಳಿಗೆಯನ್ನೂ ಎದುರಿಸುವ ಮನಸ್ಥಿತಿಯೊಂದನ್ನು ನಮಗೆ ಗೊತ್ತಿದ್ದು ಗೊತ್ತಿಲ್ಲದಂತೆ ಸಾಹಿತ್ಯವು ರೂಪಿಸಿರುತ್ತದೆ ಎನ್ನುವ ಸತ್ಯದ ಬಗ್ಗೆಯೇ ಅನುಮಾನ ಬರುವಷ್ಟು. ಆ ಆಘಾತದಿಂದ ಮನಸ್ಸು ನಿಧಾನವಾಗಿ ಚೇತರಿಸಿಕೊಂಡು ಕಾವ್ಯವೆನ್ನುವ ಮದ್ದಿನ ಕಡೆಗೆ ಹೊರಳುವ ಹೊರಳು ಘಟ್ಟದಲ್ಲಿ ನಾವಿದ್ದೇವೆ.
ಕಾವ್ಯವನ್ನು ಜೀವಸೂಚಿ ಎಂದು ಕರೆಯುವುದು ವಿಶೇಷಣವಲ್ಲ, ಅದು ಒಂದು ಜನ ಸಮುದಾಯದ ಒಟ್ಟೂ ಚಲನೆಯ ತೋರುದೀಪ. ಅದರ ಜೀವಂತಿಕೆ, ಆರೋಗ್ಯ, ಲೋಕಗ್ರಹಿಕೆ, ಸಂವೇದನಾಶೀಲತೆ ಹೀಗೆ ಅದು ತನ್ನನ್ನು ಕಾಪಾಡಿಕೊಳ್ಳುವಲ್ಲಿ, ಉಳಿಸಿ ಬೆಳೆಸಿಕೊಳ್ಳುವಲ್ಲಿ ಎತ್ತ ಸಾಹುತ್ತಿದೆ ಎನ್ನುವುದನ್ನು ತೋರಿಸುವ ಮುನ್ಸೂಚಿ. ಎಷ್ಟೆಲ್ಲ ವಿರೋಧವಿದ್ದರೂ, ಅನಾದರವಿದ್ದರೂ ಕಾವ್ಯ ತಾನು ಮಾಡಬೇಕಾದ ಕೆಲಸವನ್ನು ಮಾಡಿಯೇ ತೀರುತ್ತದೆ, ಹೇಳಬೇಕಾದ್ದನ್ನು ಹೇಳಿಯೇ ಮುಗಿಸುತ್ತದೆ.
ಕಡು ಕಷ್ಟದ ಕಾಲ ಎಂದೆ. ಸಾಂಕ್ರಾಮಿಕ ರೋಗವೊಂದು ಚಾಟಿ ಹಿಡಿದು ಜಗತ್ತಿಗೆ ಪಾಠ ಕಲಿಸುವ ರೋಷದಲ್ಲಿರುವಂತೆ ಕಾಣಿಸುತ್ತಿದೆ. ಹೇಳಿ ಹೇಳಿ ಸಾಕಾಗಿ , ರೋಸಿ ಹೋದ ತಾಯಿಯು ಕೊನೆಯ ದಾರಿ ಎನ್ನುವಂತೆ ಮಕ್ಕಳಿಗೆ ದಂಡದ ಮೂಲಕ ತಿಳಿ ಹೇಳುವಂತೆ ಕಾಣಿಸುತ್ತಿರುವ ಈ ಸಂದರ್ಭವು ನೂರಾ ಒಂದನೆಯ ಬಾರಿಗೆ ನಮಗೆ ಅನಾವರಣ ಮಾಡುತ್ತಿರುವ ಸತ್ಯವೆಂದರೆ, ಮನುಷ್ಯನಿಗೆ ಮನುಷ್ಯನೇ ಬಲುದೊಡ್ಡ ಸಾಂಕ್ರಾಮಿಕ ರೋಗ ಎನ್ನುವುದನ್ನು. ಕಾಲ ಮೇಲೆ ಕಲ್ಲು ಹಾಕಿಕೊಂಡು ಒರಲುತ್ತಿರುವ ಮೂರ್ಖ ಅಪರಾಧಿಯಂತೆ ಜಗತ್ತು ಕಾಣಿಸುತ್ತಿದೆ.
The center can not hold
the best lack all conviction
while the worst are full of passionate intensity
ಎನ್ನುವ ಯೇಟ್ಸ್ ನ ಮಾತುಗಳಾಗಲೀ
ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ
ದಾರಿ ಸಾಗುವುದೆಂತೋ ನೋಡಬೇಕು
ಎನ್ನುವ ಅಡಿಗರ ಮಾತುಗಳಾಗಲೀ ನಮಗೆ ಇಂದು ಕೇವಲ ರಾಜಕೀಯ, ಸಾಂಸ್ಕೃತಿಕ ಕಾಣ್ಕೆಗಳಾಗಿ ಕಾಣುತ್ತಿಲ್ಲ. ಅವು ಅಮೂರ್ತ ನೆಲೆಗಳಿಂದ ಹೊರ ಬಂದು ಕಣ್ಣಿಗೆ ರಾಚುವ ಮೂರ್ತ ಸತ್ಯಗಳಾಗಿ ಬಿಟ್ಟಿವೆ. ಕಾವ್ಯದ ದೇಶ ಕಾಲಗಳಾಚೆಗಿನ ದರ್ಪಣ ಶಕ್ತಿಯ ಪ್ರತಿಮೆಗಳು ಇವು.
ಈ ಎಲ್ಲ ಬಿಕ್ಕಟ್ಟುಗಳ ಆತ್ಯಂತಿಕ ಸ್ಥಿತಿ ಎನ್ನುವಂತೆ ಬಂದ ಕೊರೊನಾ ಕಾಲದಲ್ಲಿ ಕಾವ್ಯದ ಜೊತೆಗಿನ ನನ್ನ ಸಂಬಂಧವು ತಾಯ ಮಡಿಲಿಗೆ ಮರಳುವ ಮಗುವಿನಂತೆ. ಇದು ನನ್ನೊಬ್ಬಳ ಅನುಭವವೇನಲ್ಲ. ಅನೇಕರ ಅನುಭವ. ಹೊರಗಿನ ಲೋಕ ಮತ್ತು ಒಳಗಿನ ಲೋಕಗಳು ತತ್ತರಿಸುತ್ತಿರುವಾಗಲೂ, ಸ್ವತಃ ತಾನೇ ಕಂಗಾಲಾಗಿ ಹೋಗಿರುವಾಗಲೂ ತಾಯಿ ತನ್ನ ಮಗುವಿಗೆ ಮಾತ್ರ ಅದರ ಝಳ ತಾಕದಂತೆ ಮಗುವಿನ ತಲೆ ನೇವರಿಸುವಂತೆ ಕಾವ್ಯ ನಮ್ಮನ್ನು ಸಮಾಧಾನ ಪಡಿಸುತ್ತಿದೆ.
ಬಂದ ಬಾಗಿಲು ಮಣ್ಣು
ಬಿಡುವ ಬಾಗಿಲು ಮಣ್ಣು
ನಡುವೆ ಕಾಪಾಡುವುದು ತಾಯ ಕಣ್ಣು
ನಿಜ, ತಾಯಿಗೆ ಪರ್ಯಾಯವಿಲ್ಲ. ಆದರೆ ತಾಯ್ತನದ ಗುಣಗಳು, ಮಾಂತ್ರಿಕ ಶಕ್ತಿಯ ಸೆಳಕುಗಳು ಕಾವ್ಯದಲ್ಲೂ ಕಾಣುವುದು ಇಂಥ ದುರ್ಭರ ಕಾಲದಲ್ಲಿ. ಏರುತ್ತಲೇ ಇರುವ ಕೊರೊನ ಗ್ರಾಫ್, ಯಾವ ಭದ್ರತೆಯೂ ಇಲ್ಲದ ಸನ್ನಿವೇಶಗಳಲ್ಲಿ ನಾವು ಮಾಡುತ್ತಿರುವ ಕೆಲಸ, ಬದುಕೇ ಚೆಲ್ಲಾಪಿಲ್ಲಿಯಾಗಿ ದಿಕ್ಕೆಟ್ಟ ಕಾರ್ಮಿಕರು, ವ್ಯವಸ್ಥೆಯ ಅಮಾನವೀಯತೆ, ಕಣ್ಣೆದುರೇ ಮುಗಿದು ಹೋಗುತ್ತಿರುವ ಬದುಕುಗಳು, ಯಾರು, ಯಾವಾಗ ಹೇಗೆ ಬದುಕಿಗೆ ವಿದಾಯ ಹೇಳಬಹುದು ಎನ್ನುವುದರ ಬಗ್ಗೆ ಆಲೋಚನೆಯನ್ನೂ ಮಾಡಲಾಗದಷ್ಟೂ ವೇಗವಾಗಿ ಘಟಿಸುತ್ತಿರುವ ಸಾವುಗಳು.
ಎತ್ತ ನೋಡಿದರೂ ಅದೇ ಅದೇ ಆಘಾತದ ಮನಸ್ಥಿತಿಗಳು. ಭಯವಾಗುತ್ತದೆ, ಅರೆ ನಾವು ಸಾವನ್ನೂ ಇಷ್ಟು ಯಃಕಶ್ಚಿತ್ತವಾಗಿ ನೋಡುವ ಸ್ಥಿತಿ ಬಂದು ಬಿಟ್ಟಿತೆ? ಯಮನ ವೇಗ ಎನ್ನುವುದು ನಮ್ಮೆಲ್ಲರ ಅನುಭವಕ್ಕೂ ಗಾಢವಾಗಿ ತಟ್ಟುತ್ತಿರುವ ದುಶ್ಕಾಲ ಇದು.
ಅದಕ್ಕೇ ನಾನು ಆರಂಭದಲ್ಲಿ ಹೇಳಿದ್ದು, ಕಾವ್ಯದ ಬಗೆಗೂ ನಂಬಿಕೆ ಹೋಗುವಷ್ಟು ನಾವು ತತ್ತರಿಸಿ ಹೋಗಿ ಬಿಟ್ಟಿದ್ದೆವು. ಆದರೆ ಮನಸ್ಸು ಈಗೀಗ ವಾಸ್ತವವನ್ನು ಒಪ್ಪಿಕೊಳ್ಳುತ್ತಾ, ಅದರ ಭೀಕರತೆಯನ್ನು ಎದುರಿಸುವ ದಾರಿಗಳನ್ನು ಎದುರು ನೋಡುತ್ತಿರುವಾಗ, ಸಾಹಿತ್ಯದ ವಿದ್ಯಾರ್ಥಿಗಳು ಕಾವ್ಯದ ಕಡೆಗೆ ಹೊರಳಿದ್ದು ತಾಯ್ತನದ ಭದ್ರತೆಯನ್ನು, ಅಖಂಡ ಪ್ರೀತಿಯನ್ನು, ಜೀವನೋತ್ಸಾಹವನ್ನು, ಕಳೆದು ಹೋಗುತ್ತಿರುವ ಭರವಸೆಯನ್ನು ಮತ್ತೆ ಪಡೆದುಕೊಳ್ಳುವ ಜೇವಣಿಯಾಗಿ ಕಾವ್ಯ ಕಾಣಿಸುತ್ತಿದೆ.
ಸವಾಲುಗಳು ಪರಿಹಾರವಾಗುತ್ತವೆ ಎಂದಲ್ಲ. ಆದರೆ ದಿಕ್ಕೆಟ್ಟ ಮನಸ್ಸನ್ನು ಸಮಸ್ಥಿತಿಗೆ ತರಲು, ಅಪ್ರಿಯ ವಾಸ್ತವವನ್ನು ಒಪ್ಪಲೇಬೇಕಾದ ಅನಿವಾರ್ಯತೆಯನ್ನು ಮನದಟ್ಟು ಮಾಡಿಸಲು ನನಗಂತೂ ಕಾವ್ಯ ನೆರವಾಗಿದೆ, ತಾಯಿಯ ಪ್ರತಿರೂಪದಂತೆ. ಹುಸಿರಮ್ಯವಾದದಂತೆ ಇದು ಕಾಣಿಸಬಹುದು ಎಂದು ಬಲ್ಲೆ. ಆದರೆ,
ನಾಳಿನ ಬಾಗಿಲು ನಂದನವೆಂದು
ಪ್ರೀತಿಗೆ ಶಾಂತಿಗೆ ಜಯವಿಹುದೆಂದು
ಎಲ್ಲರಿಗೊಳಿತನು ಬಯಸಲಿ ಕವನ
ಎನ್ನುವುದನ್ನು ನಾನಂತೂ ಮನಸಾರೆ ನಂಬಿದವಳು.
0 Comments