ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಊರಿನಲ್ಲಿ ಎಲ್ಲವೂ ಹೀಗೇ ಎಂದುಕೊಂಡರೆ‌‌..

ಈ ಊರಿನಲ್ಲಿ ಎಲ್ಲವೂ ಹೀಗೇ ಎಂದುಕೊಂಡರೆ‌‌ ಹೀಗೆ ಇಲ್ಲಾ ಎಂದುಕೊಂಡರೆ ಇಲ್ಲ

ಸಂದೀಪ್ ಈಶಾನ್ಯ 

ಆಗಾಗ ಕಳಚಿ ಬೀಳುವ ಕಣ್ಣಿನ ರೆಪ್ಪೆಗಳನ್ನು
ಕದ್ದು ಕೂಡಿಟ್ಟುಕೊಂಡಿದ್ದ ಮಗ್ಗುಲ ಮನೆಯ ಹುಡುಗಿ ಇದೀಗ ಹೊಸ ಬೀಸಣಿಗೆ ತಯಾರಿಸಿದ್ದಾಳೆ ಎನ್ನುವುದು ವರ್ತಮಾನ
ಪ್ರತಿ ಮಳೆಗಾಲಕ್ಕೂ ರೆಪ್ಪೆಯ ಬೀಸಣಿಗೆಯನ್ನು ಬಚ್ಚಿಡುತ್ತಿದ್ದ ಅವಳೇ
ಇಂದು ಒಂದೇ ಒಂದು ಮಾತನಾಡದೇ ತೆರೆದು ಅಂಗಳದಲ್ಲಿಟ್ಟು ನಡೆದುಹೋಗಿದ್ದಾಳೆ
ಈಗ ಮಳೆಯಾಗುತ್ತಿಲ್ಲ ಬೇಸಿಯೂ ಕಳೆದಿದೆ
ಚಳಿಗಾಲ ಎನ್ನುವುದಕ್ಕೆ ಯಾರ ಒಪ್ಪಿಗೆಯೂ ಇಲ್ಲ

ಸಮುದ್ರದ ಮುಂದೆ ಗೋಳು ತೋಡಿಕೊಳ್ಳುತ್ತಿದ್ದ ಹುಡುಗ ಇದಕ್ಕಿದ್ದಂತೆ ಕಾಣೆಯಾಗಿದ್ದಾನೆ ಎಂದು ಊರ ತುಂಬ ಸುದ್ದಿ
ಎಷ್ಟೋ ವರ್ಷಗಳ‌ ಹಿಂದೆ ಸಾಲಕ್ಕೆ ಹೆದರಿ
ಎಲ್ಲವನ್ನೂ ತೊರೆದು ಹೋಗಿದ್ದವನೇ ಈಗ ಸಲೀಸು ಊರಿಗೆ ಬಂದವನು
ಸಮುದ್ರದ ಎದುರು ನಿಂತು ಏನನ್ನೋ ಬಡಬಡಿಸಿ ಗುಡಿಸಲಿಗೆ ಹೋಗಿ ಬಾಗಿಲು ಬಡಿದುಕೊಂಡಿದ್ದಾನೆ
ಈಗ ಸಮುದ್ರಕ್ಕೆ
ದಂಡೆಯ ಮೇಲಿನ ಸಾಲು ಮರಗಳಿಗೆ
ಊರಿನ ಬೀದಿಗಳಿಗೆ ಒಂದೇ ಸಮನೇ ಆತಂಕ
ಹುಡುಗ ಎಲ್ಲಿ‌ ಹೋದ
ಕಳೆದುಹೋಗಿದ್ದವನು ಮರಳಿ ಏಕೆ ಬಂದ

ಬೆಟ್ಟದ ಮೇಲೆ ಜೋರು ಮಳೆಯನ್ನೂ ಧಿಕ್ಕರಿಸಿ ಉಪವಾಸ ಕೂತಿದ್ದ ಹಳೆಯ ಮರ ಇದೀಗ ನೆಲದ ಇಬ್ಬನಿಯನ್ನೂ ಹೀರಿಕೊಳ್ಳುತ್ತಿದೆ ಎಂದು ಅಂಗಡಿ ಕಟ್ಟೆಯ ಜನರ ದೂರು
ದಶಕಗಳ ಉಪವಾಸ ತ್ಯಜಿಸಿದ ಬೆಟ್ಟದ ಮೇಲಿ‌ನ ಮರದ ಅಂತಿಮ ನಿರ್ಧಾರದ ಕುರಿತು ನಾಳೆಯ
ಪಂಚಾಯತಿಗೆ ಯಾರೂ ಬರಬಹುದು
ಆದರೆ
ನಡುವೆ ಮಾತನಾಡಬಾರದು ಅಷ್ಟೇ

ಮೀನು ಮಾರುವವಳ ಹೆಡಿಗೆ ಕಾಣೆಯಾಗಿದ್ದನ್ನು ಪರಿಗಣಿಸದ‌ ಜನರು
ಮೀನು‌ ಹಿಡಿಯುತ್ತಿದ್ದವನ ಬಲೆ ಹರಿದು ಎಸೆದವರನ್ನು ಏಕೆ ಹುಡುಕಬೇಕು
ಬಲೆಯಿಂದ ಮೀನು ಹಿಡಿಯುವುದು ಮುಖ್ಯವೋ
ಮೀನುಗಳನ್ನು ಹೆಡಿಗೆಯಲ್ಲಿ ಮಾರುವುದು ಮುಖ್ಯವೋ
ಈ ಊರಿನಲ್ಲಿ ಒಂದೇ ಪ್ರಶ್ನೆಗೆ ಹಲವು ಉತ್ತರಗಳು

ರೆಪ್ಪೆಯ ಬೀಸಣಿಗೆಯನ್ನು ಅಂಗಳದಲ್ಲಿಟ್ಟು ನಡೆದುಹೋದವಳನ್ನೇ
ಸಮುದ್ರದ ಹುಡುಗ ಹುಡುಕಿ ಹೊರಟ
ಬೆಟ್ಟದ ಮೇಲಿನ ಮರ‌ ದಶಕದ ಹಠವನ್ನು ಬಿಟ್ಟಿರುವಂತೆ ಸಾಲಕ್ಕೆ ಹೆದರಿ ಹೋಗಿದ್ದವನು ಮರಳಿ ಬಂದ
ಹೆಡಿಗೆ ಕದ್ದವನು ಬಲೆ ಕಳೆದುಕೊಂಡ
ಬಲೆಯ ಆಸೆಗೆ ಅವಳು ಹೆಡಿಗೆ ಬಿಟ್ಟುಕೊಟ್ಟಳು
ಹೀಗೆ ಏನೇನೋ ಮಾತುಗಳು ಈ‌ ನಡುವೆ

ಹೆಬ್ಬಾಗಿಲಿನಲ್ಲಿ ನಿಂತು ಹುಡುಗನೊಬ್ಬ ಸಹಜವಾಗಿ ಹೇಳುತ್ತಿದ್ದ
ಈ ಊರಿನಲ್ಲಿ ಎಲ್ಲವೂ ಹೀಗೇ ಎಂದುಕೊಂಡರೆ‌‌ ಹೀಗೆ ಇಲ್ಲಾ ಎಂದುಕೊಂಡರೆ ಇಲ್ಲ

‍ಲೇಖಕರು avadhi

9 April, 2020

1 Comment

  1. T S SHRAVANA KUMARI

    ಹೀಗೇ ಇರಬಹುದು, ಇಲ್ಲದಿರಲೂ ಬಹುದು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading