ಸೌಂದರ್ಯ ಜನ್ಮ ರಹಸ್ಯವು

ಇಷ್ಟು ದಿನಗಳಿಗೆ ನನಗೆ
ನಿನ್ನ ಜನ್ಮ ರಹಸ್ಯವು ತಿಳಿಯಿತು
ನಿತ್ಯವೂ –
ಸಸಿಗಳನ್ನು, ಮೊಗ್ಗುಗಳನ್ನು, ಹೂಗಳನ್ನು, ಎಲೆಗಳನ್ನು
ಗಿಡಗಳನ್ನು, ಗೆಡ್ಡೆಗೆಣಸುಗಳನ್ನು ಸೃಷ್ಟಿಸಿ
ಆರು ಋತುಗಳ ಆತಿಥ್ಯಕ್ಕೆ ಅನುಗುಣವಾಗಿ ನೆಲವನ್ನಲಂಕರಿಸಿ
ಬೆಟ್ಟಗಳಿಗೆ ಹಸಿರು ಹುಲ್ಲಿನ ಸೀರೆಯುಡಿಸಿ
ಮರಳುಗಾಡಿನ ಕದಪುಗಳ ಮೇಲೆ
ಶುಷ್ಕ ಸಸ್ಯಗಳ ಹೂಗಳನ್ನರಳಿಸಿ
ದ್ವೀಪಗಳಲ್ಲಿ ನಾರಿಕೇಳಗಳನ್ನು,
ಸಾಗರ ಜಲಗಳಲ್ಲಿ ನಾಜೂಕು ಹಸಿರನ್ನು
ಮೈದಾನದ ಮೇಲೆ ಮಳೆ ಮೋಡಗಳ ಸೃಷ್ಟಿಸಿ
ಕಲ್ಲುಬಂಡೆಗಳನ್ನ ಜಡಿಮಳೆಯಲ್ಲಿ ತೋಯಿಸಿ
ಬಿಸಿಲನ್ನು ಹರವಿ ಬೆಳದಿಂಗಳ ಸುರುವಿ
ಗಾಢ ಶೀತಲ ಗಾಳಿಯನ್ನು ಹಬ್ಬಿಸಿ
ಹೊಸ ಚಿಗುರನ್ನು ಮೂಡಿಸಿ ಎಲೆಗಳುದುರಿಸಿ
ಗಿಡವನ್ನು ನಗ್ನದೇಹ ಅಸ್ತಿಪಂಜರವನ್ನಾಗಿ ಮಾರ್ಪಡಿಸಿ
ಹೀಗೆ ಪ್ರತಿಕ್ಷಣವೂ ಅನುಕ್ಷಣವೂ ಮಾಡಿ ಮಾಡಿ
ನಿತ್ಯದ ಈ ಸೃಷ್ಟಿಗೆ ಪ್ರಕೃತಿಮಾತೆಗೆ ಬೇಸತ್ತುಹೋಯಿತು
ಮಾಗರ್ಾಂತರವನ್ನನ್ವೇಷಿಸಿ, ಮಾನವ ರೂಪವನ್ನರಸಿ
ಕಡೆಗೆ ನಿನ್ನ ರೂಪವನ್ನು ಧರಿಸಿತು
ಈಗ ನೀನು ನಡೆದಾಡುವ ಪ್ರಕೃತಿ!
ಸಹಜ ಸೌಂದರ್ಯಗಳನ್ನೆಲ್ಲಾ-
ನಿನ್ನಲ್ಲಿ ಅಲಂಕರಿಸಿದ ವಿಸ್ಮಯ ಸಮ್ಮೋಹನ ಮೂತರ್ಿ!
ಅದಕ್ಕೇ ಗೆಳತೀ…!
ನೋಡುತ್ತಲೇ ನಿನ್ನ ನನ್ನ ಮನಸ್ಸು ಪುಳಕಗೊಂಡಿತು
ತೆಳುಮೋಡ ಹೃದಯವು ತೇಲಿಹೋಯಿತು
ಆತ್ಮೀಯತೆ ಮೊಳಕೆಯೊಡೆದು ಮೊಗ್ಗಿನ ಅನುರಾಗವು ಸೂಸಿತು
ಮಮಕಾರದ ತಂಗಾಳಿಯು ಬೀಸಿ, ಬೆಳದಿಂಗಳ ಬಯಕೆ ಕನವರಿಸಿತು
ಸಾಗರದಲೆಗಳ ಅಭಿಮಾನವು ಉಕ್ಕೇರಿ, ಬೆಳಕಿನ ಮೋಹವು ಆವರಿಸಿತು
ಮಳೆಹನಿಯ ಆರಾಧನೆಯು ನೆರೆಯಾಗಿ ನುಗ್ಗಿತು
ಸಖೀ! ನಿನ್ನ ಸ್ಪರ್ಶವು ನನ್ನಲ್ಲಿ ಪ್ರೀತಿಯನ್ನು ಹುಟ್ಟಿಸಿತು
ಇಷ್ಟುಕಾಲಕ್ಕೆ …..
ನನಗೆ ನಿನ್ನ ಮೇಲಿನ ಪ್ರೀತಿಗೆ ಕಾರಣವು ತಿಳಿಯಿತು !
– ತೆಲುಗು ಮೂಲ: ಮಾಮಿಡಿ ಹರಿಕೃಷ್ಣ
– ಅನುವಾದ: ರೋಹಿಣಿ ಸತ್ಯ






ಪ್ರಕೃತಿಯ ಪ್ರತಿಕೃತಿ ಹೆಣ್ಣೆನ್ನುವ ಸರಳ ಆವಿಷ್ಕಾರದ ಕವನ. ಪ್ರಕೃತಿಗಿಂತಲೂ ದೇವರಿಲ್ಲ ,ಸೌಂದರ್ಯ, ಸ್ನೇಹ, ಪ್ರೇಮ ಭಾವವಿಲ್ಲ. ಇವೆಲ್ಲವನ್ನೂ ಮಾನವರಿಗೆ ಧಾರೆಯೆರಿದ ಹೆಮ್ಮೆ ಪ್ರಕೃತಿಗೇ ಸಲ್ಲುತ್ತದೆ.
ಚೆನ್ನಿದೆ ನಿಮ್ಮ ಕವನ .. ಪ್ರಕೃತಿಯ ಸೊಬಗು ಪದ ಪದಗಳಲ್ಲಿ ಅರಳಿ ನಿಂತಿದೆ