ಇಷ್ಟವಾಯ್ತು ವಿನಯ್ ಮಾಧವ್ ಕೃತಿ

ರಾಧಿಕಾ ವಿಟ್ಲ

ಓದು ಹಾಗೂ ಬರಹ ಎರಡೂ ನನಗೆ ಒಂದೇ ಬಂಡಿಯ ಎರಡು ಚಕ್ರಗಳು. ಆದರೆ ಓದಿದ್ದರ ಬಗ್ಗೆ ಬರೆಯೋದು ಬಹಳ ಅಂದ್ರೆ ಬಹಳ ಕಡಿಮೆ. ಅಪರೂಪಕ್ಕೆ ಓದಿದ್ದರ ಬಗ್ಗೆ ಬರೆಯುವಂತೆ ಮಾಡಿದ ಕೃತಿ ವಿನಯ್‌ ಮಾಧವ್ ಅವರ ʻವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳುʼ. ವಿನಯ್‌ ಮಾಧವ್‌ ಅವರು ನನಗೆ ಕನ್ನಡಪ್ರಭ ದಿನಗಳಿಂದ ಪರಿಚಿತರು. ಆಗಷ್ಟೇ ಪಿಳಿಪಿಳಿ ಕಣ್ಣು ಬಿಡುತ್ತಾ ಕನ್ನಡಪ್ರಭಕ್ಕೆ ಕಾಲಿಟ್ಟಿದ್ದೆ. ಎಕ್ಸ್‌ಪ್ರೆಸ್ಸಿಗೂ ಕನ್ನಡಪ್ರಭಕ್ಕೂ ಒಂದು ಪುಟಾಣಿ ಕಾರಿಡಾರ್‌ ಅಂತರದ ಅಂಗಳ ಬಿಟ್ಟರೆ ಒಂದೇ ಮನೆಯ ಹಾಗೆ.

ಆಗೆಲ್ಲ ಈ ಕಾರಿಡಾರ್‌ ದಾಟಿ ನಮ್ಮ ಕಡೆಗೂ ಉಭಯ ಕುಶಲೋಪರಿ ಸಾಂಪ್ರತಕ್ಕಾಗಿ ದಾಳಿಯಿಡುತ್ತಿದ್ದ ಕೆಲವೇ ಕೆಲವು ಆಂಗ್ಲ ಪತ್ರಕರ್ತರ ಪೈಕಿ ವಿನಯ್‌ ಮಾಧವ್‌ ಪ್ರಮುಖರು. ಆದರೆ ನನಗ್ಯಾಕೋ ಶುರುವಲ್ಲಿ ಇವರನ್ನು ನೋಡಿದಾಗ ಒಳಗೊಳಗೆ ಸಣ್ಣಗೆ ಭಯ ಶುರುವಾಗಿತ್ತು, ಅವರ ನೇರ ನಿಷ್ಠುರ ನಡೆಗೆ.

ಕನ್ನಡಪ್ರಭದೊಳಕ್ಕೆ ಬಿರುಗಾಳಿಯಂತೆ ನುಗ್ಗುತ್ತಿದ್ದ ರಭಸಕ್ಕೆ ನನಗೆ ಸೀದಾ ಕಾಡಿಂದ ಆನೆ ನುಗ್ಗಿದಂತೇ ಅನಿಸುತ್ತಿತ್ತು (ಸರ್‌ ಬೈಕೋಬೇಡಿ). ಈ ಆನೆ ಸೊಂಡಿಲು ಮೇಲೆತ್ತಿ ʻಏನ್‌ ಮರೀʼ ಅಂದಾಗ ಭಯ ಅಡಗಿ ಆಪ್ತ ಭಾವ (ಆಮೇಲೆ ನಿಜಕ್ಕೂ ಆನೆಯೇ ಅಂತಲೂ ಗೊತ್ತಾಯಿತು). ಹಾಗಾಗಿಯೇ ಇರಬೇಕು, ಇವರ ಪುಸ್ತಕವೂ ಇವರ ಹಾಗೆಯೇ ನೇರ, ದಿಟ್ಟ. ಅಷ್ಟೇ ಸರಳ ಹಾಗೂ ಆಪ್ತ.

ಬಹಳ ಕಾಲದ ನಂತರ ವಿನಯ್‌ ಮಾಧವ್‌ ಅವರ ಎದುರು, ಅದೇ ಇಂಡಿಯನ್‌ ಎಕ್ಸ್‌ಪ್ರೆಸ್‌/ಕನ್ನಡಪ್ರಭದ ಸೋಫಾದಲ್ಲಿ ಕೂತು ಕತೆ ಕೇಳಿದಷ್ಟು ಖುಷಿ ತಂದ ಓದಿದು. ೨೫ ವರ್ಷಗಳ ಅಗಾಧ ಅನುಭವದಲ್ಲಿ ಎಲ್ಲೂ ತನಗೆಲ್ಲಾ ಗೊತ್ತಿದೆ ಎಂಬ ಭಾವ ತರದೆ, ತಾನು ಕಾಡಿನ ಜೊತೆಗೆ ಕಲಿಯುತ್ತಾ ಹೋದ ವಿದ್ಯಾರ್ಥಿ ಹಾದಿಯಿಂದ ವರದಿಗಾರನಾಗಿ ಏನೆಲ್ಲ ಮಾಡಬಹುದೋ ಅದೆಲ್ಲವನ್ನೂ ಮಾಡಿ, ಕಾನೂನು ಹೋರಾಟಕ್ಕಿಳಿಯುವವರೆಗೂ ಅಷ್ಟೇ ಪ್ರಾಮಾಣಿಕತೆಯಿಂದ ಒಂದು ಅಧ್ಯಾಯದಿಂದ ಮತ್ತೊಂದಕ್ಕೆ ವಿವರಿಸುತ್ತಾ ಹೋಗಿದ್ದಾರೆ. ಅದೊಂದು ವರದಿಯೂ ಆಗದೆ, ಕತೆಯಂತೆ ಓದಿಸಿಕೊಂಡು ಹೋಗುವುದು ಇದರ ದೊಡ್ಡ ಶಕ್ತಿ.

ಈ ಪುಸ್ತಕ ಬಹಳ ಇಷ್ಟವಾಗುವುದು ಅದೇ ಕಾರಣಕ್ಕೆ. ವರದಿಗಾರ ಸಾಮಾಜಿಕ/ಪರಿಸರ ಕಾಳಜಿಯೊಂದಿಗೆ ಕೆಲಸ ಮಾಡುವುದು ಅಂದರೆ ಏನು ಎಂಬುದಕ್ಕೆ ಈ ಇಡೀ ಪುಸ್ತಕ ಉತ್ತರ. ಹಾಗಾಗಿಯೇ ಇದು ಈಗ ಪತ್ರಿಕೋದ್ಯಮಕ್ಕೆ ಕಾಲಿಡುವ/ಕಾಲಿಟ್ಟ ಎಲ್ಲರಿಗೆ ಒಂದೊಳ್ಳೆ ಪಠ್ಯಪುಸ್ತಕದ ಹಾಗೆ. ಇದರಲ್ಲಿ ಉಲ್ಲೇಖವಾದ ಕೆಲವು ಘಟನೆಗಳು ನನಗಿನ್ನೂ ನೆನಪಿದೆ. ಮುಖ್ಯವಾಗಿ ʻಬುದ್ಧನಿಗೊಂದು ಜಾತಿʼಯ ಹಂದಿಗೊಂದಿ ಪ್ರಕರಣ. ಕನ್ನಡಪ್ರಭದ ಗಿರೀಶ್‌ ಬಾಬು ಅವರು ಹಾಗೂ ಎಕ್ಸ್‌ಪ್ರೆಸ್‌ನಿಂದ ವಿನಯ್ ಮಾಧವ್ ಅವರು ಮಾಡಿದ ನಿರಂತರ ಹೋರಾಟ ಇನ್ನೂ ನಿನ್ನೆ ಮೊನ್ನೆ ನಡೆದಂತೆ ನೆನಪಿದೆ. ಕುದುರೇಮುಖದ ಹೋರಾಟದ ವಿವರಗಳು ಕೂಡಾ ಮಹತ್ವದ ದಾಖಲೆ.

ಪತ್ರಕರ್ತನಿಗೂ ತನ್ನ ಪ್ರತಿಕೃತಿ ದಹಿಸುವುದನ್ನು ನೋಡುವ ಸೌಭಾಗ್ಯ ಸಿಗೋದು ಅಂದರೆ ಸುಲಭದ ಮಾತಾ! ಗಂಭೀರವಾಗುತ್ತಾ ಅಲ್ಲಲ್ಲಿ ಸಿಗುವ ಇಂತಹ ಅಚಾನಕ್‌ ತಿರುವುಗಳು ಓದಿಗೆ ಮುದ ನೀಡುತ್ತವೆ. ಕಂಡೂ ಕಾಣದೆ ಬದಲಾದ ಜಗತ್ತು, ಭತ್ತದ ಗದ್ದೆ ಎಂಬ ಹುಲ್ಲುಗಾವಲಿನ ಕಥೆ, ಶುಂಠಿ ಎಂಬ ಮಾಯೆ ಮಾಹಿತಿಯುಕ್ತ ಅಧ್ಯಾಯಗಳು.

ಪತ್ರಕರ್ತನೊಬ್ಬನ ನಿಷ್ಠುರದ ಬರವಣಿಗೆಗೆ ದಕ್ಕಿದ ʻನಂಗೊಂದವಾರ್ಡು ಬಂದಿತ್ತುʼ ಸರ್ವಕಾಲಕ್ಕೂ ಸಲ್ಲುವ ಕಹಿಸತ್ಯ. ಒಟ್ಟಾರೆ ಕಾಡನ್ನು ಪ್ರೀತಿಸುವ ವರ್ಗಕ್ಕೂ, ಕಾಡೆಂದರೆ ಮೋಜೆಂದು ಮಾತ್ರ ಭ್ರಮಿಸುವ ಮಂದಿಗೂ ಭರಪೂರ ಮಾಹಿತಿ ಒದಗಿಸುವ/ ಕಣ್ತೆರೆಸುವ ಆಕರ. ಹಾಂ, ಎಲ್ಲದಕ್ಕಿಂತಲೂ ಹೆಚ್ಚು ಖುಷಿಯಾದದ್ದು ೨೫ ವರ್ಷ ಆಂಗ್ಲ ಪತ್ರಿಕೆಗಳಲ್ಲೇ ಕೆಲಸ ಮಾಡಿದ ವಿನಯ್‌ ಮಾಧವ್‌ ಅವರ ಚೊಚ್ಚಲ ಕೃತಿ ʻಕನ್ನಡʼ ಎಂಬುದು! ಇದೊಂದು ಸರ್ಪ್ರೈಸು.

ಹೊಟ್ಟೆಕಿಚ್ಚಾಗಿದ್ದು, ಇವರು ನಾನು ಕನಸು ಕಾಣುವಂತೆ ಕಾಡು ಸುತ್ತಿದ ಪರಿಗೆ! ಇವರೇ ಹೇಳುವಂತೆ, ‘We may be fighting a losing battle, but we haven’t lost yet’ ಹೆಚ್ಚು ಹೇಳಲು ಹೋಗುವುದಿಲ್ಲ. ಪುಸ್ತಕ ಕೊಂಡು ಓದಿ.

‍ಲೇಖಕರು Avadhi

March 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: