‘ಇವ ಲೆಬನಾನಿನವ’-ಜೀವಂತ ಪುಸ್ತಕದ ಜೀವಂತಿಕೆಯ ಪುಟಗಳು


ವೀರಣ್ಣ ಮಡಿವಾಳರ

**
‘ಹುಚ್ಚ ಒಬ್ಬ ನಿಜವಾದ ಸಂಗೀತಗಾರನೇ, ಆದರೆ ಆತ ನುಡಿಸುವ ವಾದ್ಯದ ಶೃತಿ ತಪ್ಪಿದೆಯಷ್ಟೇ’ ಇಂಥದೊಂದು ಅನನ್ಯ ಸಾಲನ್ನು ಸೃಜಿಸಿದ ಆತ್ಮದ ಸೌಂದರ್ಯ ಎಂಥದಿರಬಹುದು ಎಂದು ನಾನು ಕಳೆದ ಹದಿನೈದು ವರ್ಷಗಳಿಂದ ಹುಡುಕುತ್ತಲೇ ಇದ್ದೇನೆ. ಸಿಕ್ಕಷ್ಟೂ ಸಮೃದ್ಧಗೊಳ್ಳುತ್ತಿರುವ, ಓದಿದಷ್ಟೂ ಬಾಕಿ ಉಳಿಯುವ, ಹುಡುಕಿದಷ್ಟೂ ಹೆಚ್ಚುತ್ತಲೇ ಇರುವ ಖಲೀಲ್ ಗಿಬ್ರಾನ್ ಜಗತ್ತನ್ನು ಆವರಿಸಿರುವ ಕಾವ್ಯ ಜೀವ. ಇಂಡಿಯಾಕ್ಕೆ ಗಾಲಿಬ್ ನಂತೆ ಜಗತ್ತಿಗೆ ಗಿಬ್ರಾನ್. ನಮ್ಮ ಯಾವ ಹೋಲಿಕೆ, ವ್ಯಾಖ್ಯಾನ, ಹೊಗಳಿಕೆಗೆ ನಿಲುಕದ ಆತ್ಮವದು. ಎದುರಿಗೆ ಸಿಗದ ಕಲ್ಪನೆಗೆ ಮೀರಿದ ಕಾವ್ಯಜೀವ ಗಿಬ್ರಾನ್.

ಕನ್ನಡದಲ್ಲಿ ಅನೇಕರು ಆತನನ್ನು ಮರುಸೃಜಿಸಲೆತ್ನಿಸಿದರು. ಪ್ರಭುಶಂಕರ ರವರು ಪರಿಣಾಮಕಾರಿಯಾಗಿ ಕನ್ನಡ ಮನಸ್ಸುಗಳಲ್ಲಿ ಅಚ್ಚೊತ್ತುವಂತೆ ಅಷ್ಟು ಇಷ್ಟು ಅನುವಾದಿಸಿದರು. ಪ್ರವಾದಿ, ಮಾನವಪುತ್ರ ಏಸು ಮುಂತಾದ ರೂಪಗಳಲ್ಲಿ ಆತನ ಕೃತಿಗಳು ಕನ್ನಡವನ್ನು ಬೆಳಗುತ್ತಿವೆ. ಆದರೆ ಖಲೀಲ್ ಗಿಬ್ರಾನ್ ಖಲೀಲ್ ಕುರಿತು ಕನ್ನಡಕ್ಕೆ ಬಂದ ಕೃತಿಗಳಲ್ಲೆಲ್ಲ ವಿಶಿಷ್ಟವೂ ಅನನ್ಯವೂ ಅಪೂರ್ವವೂ ಎಂಬಂಥ ಕೃತಿ ‘ಇವ ಲೆಬನಾನಿನವ’.

ಮಹಾಕವಿ ಬೇಂದ್ರೆ ತನ್ನ ಗುರುಸಮಾನರು ಎಂದು ಭಾವಿಸಿದ್ದ ಚೇತನವೊಂದನ್ನ ಶೀರ್ಷಿಕೆ ನೋಡಿದೊಡೆಯೇ ಬೇಂದ್ರೆಯವರೇ ಬರೆದರಾ ಎಂದನ್ನಸಿದ್ದು ನನಗೆ ಮಾತ್ರವಾ ಗೊತ್ತಿಲ್ಲ. ಈ ಕೃತಿಗೆ ಇಂಥದೊಂದು ಮಹತ್ತು ಯಾಕೆ ಎಂದು ಚರ್ಚಿಸುವುದು ಈ ಬರಹದ ಮೂಲ ಉದ್ದೇಶ. ಕನ್ನಡದ ಸಂಧ್ಯಾರಾಣಿ, ಇಂಗ್ಲಿಷ್ ನ ಬಾರ್ಬರಾ ಯಂಗ್ ರ ಆಲೋಚನಾ ಸಾಮರ್ಥ್ಯ, ರೂಪಕ ಸಾಮರ್ಥ್ಯ, ಕಲ್ಪನೆಯ ಶಕ್ತಿ ಮತ್ತು ಅರ್ಥಮಾಡಿಕೊಳ್ಳುವ ತಾಕತ್ತುಗಳ ಒರೆಗೆ ಹಚ್ಚಿದೆಯೆಂಬಂತೆ ಈ ಪುಸ್ತಕವಿದೆ. ಬೆಂಕಿಯನ್ನು ಅರ್ಥ ಮಾಡಿಕೊಳ್ಳಲು ಕಿಡಿಯಾದರೂ ನಮ್ಮೊಳಗಿರಬೇಕು. ಸಮುದ್ರದ ಗುಣವ ತಿಳಿಯಲು ಹನಿಯಾದರೂ ಎದೆಯಲ್ಲಿರಬೇಕು. ಬಾರ್ಬರಾ ಯಂಗ್ ರ ‘ದಿಸ್ ಮ್ಯಾನ್ ಫ್ರಾಮ್ ಲೆಬನಾನ್’ನಲ್ಲಿನ ಗಿಬ್ರಾನ್ ಅದೇ ಸತ್ವ ಮತ್ತು ಉಸಿರಗಂಧದೊಂದಿಗೆ ಸಂಧ್ಯಾರಾಣಿಯವರ ಕನ್ನಡದ ‘ಇವ ಲೆಬನಾನಿನವ’ ನಲ್ಲೂ ಬಂದಿದ್ದಾನೆ, ಜೀವತಳೆದಿದ್ದಾನೆ, ನಮ್ಮೊಂದಿಗೆ ಆತ್ಮಸಂವಾದಕ್ಕಿಳಿಯುವಷ್ಟು ಇಲ್ಲಿನ ಅನುವಾದ ಹತ್ತಿರವಿದೆ.

ಇದೊಂದು ಜೀವನ ಚರಿತ್ರೆ ಅಲ್ಲ, ಸಂಶೋಧನಾ ಕೃತಿ ಅಲ್ಲ, ವಿಮರ್ಶಾ ಕೃತಿ ಅಲ್ಲವೇ ಅಲ್ಲ, ಕಥೆ ಕವಿತೆ ಪ್ರಬಂಧವೂ ಅಲ್ಲ. ಕಲಾ ವಿಮರ್ಶೆ, ಸ್ವಕಥನ, ಅನುಭವ ಕಥನವೂ ಅಲ್ಲ. ನಮ್ಮ ಅಕಾಡೆಮಿಕ್ ವಲಯದ ಚೌಕಟ್ಟುಗಳಲ್ಲಿ ಈ ಕೃತಿಯನ್ನು ಬಂಧಿಸಲಾಗುವುದಿಲ್ಲ, ನಾವೇ ಸೃಷ್ಟಿಸಿಕೊಂಡ ಫ್ರೇಮ್ ಗಳಲ್ಲಿ ಇದನ್ನ ಕೂರಿಸಲಾಗುವುದಿಲ್ಲ. ಖಲೀಲ್ ಒಂದು ಜೀವಂತ ನದಿ. ಅದನ್ನ ನೋಡಬಹದು, ಓದಬಹುದು, ಸವಿಯಬಹದು ಆದರೆ ಅಂತಿಮ ನಿರ್ಣಯಕ್ಕೆ ಬರಲಾಗದು.

ಇದು ಏಕಕಾಲಕ್ಕೆ ಜೀವನ ಚರಿತ್ರೆಯೂ ಹೌದು, ಕಥೆ ಕವಿತೆ ಕಾದಂಬರಿ, ಸ್ವಕಥನ ಅನುಭವ ಕಥನವೂ, ವಿಮರ್ಶೆ ಸಂಶೋಧನೆಯೂ ಹೌದು. ಎಲ್ಲಕ್ಕಿಂತ ಮುಖ್ಯವಾಗಿ ಇದೊಂದು ಜೀವಂತ ಪುಸ್ತಕವಂತೂ ಹೌದು.

ಈ ಪುಸ್ತಕದ ರಚನೆಯ ಸೊಗಸೇ ಸೊಗಸು. ಏಳು ವರ್ಷಗಳ ಕಾಲ ಒಂದೇ ಜೀವವಾಗಿ ಬದುಕಿದ ಎರಡು ಆತ್ಮಗಳ ನಡುವಿನ ನಮ್ಮ ವ್ಯಾಖ್ಯಾನಕ್ಕೆ ಸಿಗದ ಸಂಬಂಧದ ದಾಖಲೆಯಾಗಿ ಈ ಕೃತಿ ಒಮ್ಮೆ ಕಂಡರೆ, ಮತ್ತೊಮ್ಮೆ ಗಿಬ್ರಾನ್ ನ ಪ್ರತಿ ಪುಸ್ತಕದ ಪ್ರತಿ ಕಲಾಕೃತಿಯ ಸೃಜನಶೀಲ ಶಕ್ತಿಯನ್ನ ನಮ್ಮ ಅನುಭವಕ್ಕೆ ತರುವ ಅನುಭವ ಪ್ರಮಾಣವಾಗಿ ಪ್ರತ್ಯಕ್ಷ ಸಾಕ್ಷಿಯ ಮನದಿಂಗಿತವಾಗಿ ನಮ್ಮೊಳಗೆ ಇಳಿಯುತ್ತದೆ. ಇಲ್ಲಿ ಘಟನೆಗಳಿವೆ, ಚಿಂತನೆಗಳಿವೆ, ಒಳನೋಟಗಳಿವೆ, ದೂರದೃಷ್ಟಿ, ಮಹಾತ್ವಾಕಾಂಕ್ಷೆ, ಕವಿಯೊಬ್ಬನ ಕನಸು ಕಾಣ್ಕೆ ಕನವರಿಕೆ ಮತ್ತು ಮುಖ್ಯವಾಗಿ ಜೀವ ಕಾವ್ಯದ ಪ್ರವಾಹವಿದೆ.

ಗಿಬ್ರಾನ್ ಹೇಳಿದರೆ ಬಾರ್ಬರಾ ಬರೆಯುತ್ತಾಳೆ. ಒಂದು ಮಹಾನ್ ಚೇತನ ಹೇಳಿದ್ದನ್ನ ಹೇಳಿದಂತೆಯೇ ಗ್ರಹಿಸಲು ಮತ್ತು ಬರೆಯಲು ಮತ್ತೊಂದು ಮಹಾನ್ ಚೇತನವೇ ಬೇಕಾಗುತ್ತದೆ. ಇದು ಹೇಳಿದ್ದನ್ನು ತಕ್ಷಣವೇ ಅಕ್ಷರಕ್ಕಿಳಿಸುವ ಸಾಫ್ಟ್ ವೇರ್ ತಂತ್ರಜ್ಞಾನವಲ್ಲ. ಗಿಬ್ರಾನ್ ನಾಭಿಮೂಲದಿಂದ ಆತ್ಮಪೂರ್ವಕವಾಗಿ ಹುಟ್ಟುವ ಆಲೋಚನೆಯ ಬೆಂಕಿಯುಂಡೆಗಳ ಪ್ರವಾಹವನ್ನ ತನ್ನ ಕವಿಗಳಲ್ಲಿ ಆಣೆಕಟ್ಟು ಕಟ್ಟಿ ಹಿಡಿದು ಮನಸು ಹೃದಯ ಆತ್ಮದ ಮೂಲಕ ಕೈಗಳಿಗೆ ದಾಟಿಸಿ ಪೆನ್ನಿನಿಂದ ಅಕ್ಷರಗಳ ಮೂಲಕ ಕಾಗದದ ರಣಾಂಗಣಕ್ಕೆ ದಾಟಿಸುವ, ಅಗಾಧ ಸಾಮರ್ಥ್ಯ ಬೇಡುವ ಮಹತ್ಕಾರ್ಯವದು. ದಟ್ಟವಾದ ಆಲೋಚನೆ, ಹರಳುಗಟ್ಟಿದ ಚಿಂತನೆ, ಲೋಕದ ಕೇಡು ಸುಖಗಳನ್ನು ಗಂಟುಕಟ್ಟಿ ಹಿಡಿವ ಮಹಾಸಾಹಸವದು. ಅಂಥ ಸಾಹಸವನ್ನು ಗಿಬ್ರಾನ್ ಮತ್ತು ಬಾರ್ಬರಾ ಮಾಡಿದರು. ಸಂಧ್ಯಾರಾಣಿಯವರೂ ಈ ಸೃಜನಶೀಲ ಪವಾಡದಲ್ಲಿ ಮೂಲಕ್ಕೆ ಸನಿಹ ಬಂದಿದ್ದಾರೆ, ಗಿಬ್ರಾನ್ ಕಾವ್ಯ ಶಿಲ್ಪಕ್ಕೆ ಕನ್ನಡದಲ್ಲಿ ಪ್ರಾಣಜೀವ ತುಂಬಿದ್ದಾರೆ.

ಆತ ನಜರೇತಿನ ಏಸು, ಆದರೆ ಇಲ್ಲಿ ನಾಜಿರೇತ್‌ನ ಏಸು ಆಗಿದ್ದಾನೆ. ಕನ್ನಡದಲ್ಲಿ ‘ಗಿಬ್ರಾನ್’ ಎಂದು ಬಹುತೇಕರು ಒಪ್ಪಿಯಾಗಿದೆ. ಆದರೆ ಈ ಕೃತಿಯಲ್ಲಿ ಅಲ್ಲಲ್ಲಿ ಜಿಬ್ರಾನ್ ಎಂದು ದಾಖಲಿಸಲಾಗಿದೆ. ಅಕ್ಷರ ತಪ್ಪುಗಳು ಸಮೃದ್ಧ ಭೋಜನದಲ್ಲಿ ಹರಳು ಬಂದ ಅನುಭವ ಕೊಡುತ್ತವೆ. ದೊಡ್ಡ ದೊಡ್ಡ ವಾಕ್ಯಗಳನ್ನು ಅನುವಾದಿಸುವಾಗ ಅಲ್ಲಲ್ಲಿ ತೊಡರಿದಂತೆ ಕಾಣಿಸುತ್ತದೆ. ‘ಮೂಲ ಕೃತಿಯ ಬಣ್ಣ ವಾಸನೆ ರುಚಿಯಲ್ಲಿ ಯಾವುದಾದರೂ ಎರಡನ್ನು ಹಿಡಿದರೂ ಆ ಅನುವಾದ ಶ್ರೇಷ್ಠ ಅನುವಾದ’ ಎಂದು ದೇವನೂರು ಹೇಳಿದ ನೆನಪು. ಈ ಕೃತಿ ಬಣ್ಣ ವಾಸನೆ ರುಚಿಯಲ್ಲೂ ಮೂಲಕ್ಕೆ ಹತ್ತಿರವಿದೆಯಾದರೂ ಪರಿಪೂರ್ಣವಾಗಿಲ್ಲ. ಅದು ಕೃತಿಯ ಮಿತಿಯೇನೂ ಅಲ್ಲ. ಎಲ್ಲ ಬರೆದ ಮೇಲೂ ಏನೋ ಉಳಿದೇ ಇರುತ್ತದೆ, ಹೇಗೆಲ್ಲ ಅನುವಾದಿಸಿದ ಮೇಲೂ ಮತ್ತೊಂದು ಸಾಧ್ಯತೆ ಇದ್ದೇ ಇರುತ್ತದೆ. ಅದಕ್ಕೆ ಈ ಕೃತಿಯೂ ಹೊರತಾಗಿಲ್ಲ. ‘ಇವ ಲೆಬನಾನಿವ’ ಕೃತಿಯನ್ನ ನಮ್ಮ ವಿಶ್ವವಿದ್ಯಾಲಯಗಳು ಅಥವಾ ನಮ್ಮ ಅಕಾಡೆಮಿಗಳು, ಸಾಂಸ್ಕೃತಿ ಸಾಹಿತ್ಯ ಸಂಸ್ಥೆಗಳು ಅಧ್ಯಯನಕ್ಕೆ ತೆಗದುಕೊಳ್ಳಬಹುದಾದಷ್ಟು ಮಹತ್ವ ಈ ಕೃತಿಗಿದೆ. ಕಾರಣ ಇಲ್ಲಿ ಅನೇಕ ಪ್ರಯೋಗಗಳಿವೆ. ಏಕಕಾಕಲಕ್ಕೆ ಕಾವ್ಯ ಮತ್ತು ಕಲಾಕೃತಿಗಳ ಸಂವಾದಗಳಿವೆ. ಕಲಾಕೃತಿ ಮತ್ತು ಕಲಾವಿಮರ್ಶೆಯ ಜುಗಲ್ ಬುಂದಿಯಿದೆ. ಒಂದು ಪರಿಪೂರ್ಣ ಬದುಕಿನ ಜೀವಂತಿಕೆ ಮತ್ತು ದುರಂತಗಳ ತೀವ್ರವಾದ ಸೌಂದರ್ಯಪೂರಿತ ಮಹತ್ತಾದ ದಾಖಲೆಯಿದೆ.

ಐದು ಫೂಟು ಎರಡಿಂಚಿನ ಗಿಬ್ರಾನ್‌ನ ಒಂದು ಕಟ್ಟುಮಸ್ತಾದ ದೇಹದಲ್ಲಿ, ಸಾಗರದಷ್ಟು ಅಗಾಧವಾದ, ಆಕಾಶದಷ್ಟು ಅಗಲವಾದ, ಬೆಂಕಿಯಷ್ಟು ತೀವ್ರವಾದ, ನೀರಿನಷ್ಟು ಶಕ್ತಯುತವಾದ, ಕಾವ್ಯಾತ್ಮವೊಂದು ಜೀವಿಸಿದ ಬದುಕನ್ನು ಹತ್ತಿರದಿಂದ ಕಂಡು, ಏಳು ವರ್ಷ ಜೀವನ ಹಂಚಿಕೊಂಡು, ಅಧಿಕೃತವಾಗಿ ದಾಖಲಿಸಿರುವ ಈ ಪುಸ್ತಕದಿಂದ ಕನ್ನಡ ಬದುಕು ಕಲಿಯಬೇಕಾದ್ದು ಬಹಳಷ್ಟಿದೆ. ‘ಬದುಕೆಂದರೆ ಕೆಲಸ, ಕೆಲಸ, ಮತ್ತಷ್ಟು ಕೆಲಸ’ ಎನ್ನುತ್ತಾನೆ ಗಿಬ್ರಾನ್. ‘ಮನುಷ್ಯ ಯಾವುದಕ್ಕಾಗಿ ಬದುಕುತ್ತಾನೆ ಎಂಬುದರ ಮೇಲೆ ಆತನ ಬದುಕಿನ ಸಾರ್ಥಕತೆ ಮತ್ತು ಘನತೆಯಡಗಿದೆ’ ಎನ್ನುತ್ತಾರೆ ಲಂಕೇಶ್. ಅಂತಿಮವಾಗಿ ನಾವೇನೆಂದುಕೊಂಡಿದ್ದೇವೆ, ಏನೆಂದುಕೊಳ್ಳಬೇಕು ಎಂಬುದರ ಜಿಜ್ಞಾಸೆಗೆ ದೂಡುವುದು ಈ ಕೃತಿಯ ಹೆಗ್ಗಳಿಕೆ.

ಮಹತ್ ಎಂಬುದು ಒಂದು ನಿರ್ದಿಷ್ಟ ವ್ಯಾಖ್ಯಾನಕ್ಕೆ ನಿಲುಕದ ಒಂದು ಪದವದು. ಆದರೆ ಈ ಕೃತಿ ಓದಿದಾಗ ಮಹತ್ ಎಂದರೆ ಗಿಬ್ರಾನ್. ಮಹತ್ ಎಂದರೆ ಆತನ ಕೃತಿಗಳು, ಮಹತ್ ಎಂದರೆ ಆತ ಸೃಷ್ಟಿಸಿದ ಪಾತ್ರಗಳು, ಮಹತ್ ಎಂದರೆ ಆತನ ಕಲಾಕೃತಿಗಳು ಮಹತ್ ಎಂದರೆ ಬಾರ್ಬರಾ, ಮಹತ್ ಎಂದರೆ ‘ಇವ ಲೆಬನಾನಿನವ’ ಎನ್ನಿಸಿದರೆ ನಾನು ಅಪ್ರಮಾಣಿಕನಲ್ಲ.

ಇಲ್ಲಿ ಸತ್ಯ ಮತ್ತು ಸೌಂದರ್ಯ ಪದರೂಪ ಪಡೆದಿವೆ. ಸತ್ಯದ ಆತ್ಯಂತಿಕ ಸ್ವರೂಪ ಹೇಗಿರಬಹುದು ಎಂದು ನೀವು ಹುಡುಕಿದರೆ ಬಹುಶಃ ಈ ಕೃತಿಯ ಆಲೋಚನಾ ಮಂಟಪಗಳಲ್ಲಿ, ಅದರ ಘನರೂಪ ನಿಮಗೆ ಸಿಗಬಹುದು. ಸೌಂದರ್ಯದ ಆತ್ಯಂತಿಕ ಮೂರ್ತರೂಪ ಯಾವುದು ಎಂದು ನೀವು ಪ್ರಶ್ನಿಸಿದರೆ, ಅದು ಖಲೀಲ್ ಗಿಬ್ರಾನ್ ಸೃಜಿಸಿದ ಕಲಾಕೃತಿಗಳು ಎಂದು ಈ ಕೃತಿ ಉತ್ತರಿಸುತ್ತದೆ. ಸಾಕ್ಷೀಕರಿಸುತ್ತದೆ.
ಗಿಬ್ರಾನ್ ತನ್ನ ಹೃದಯದ ಜೀವರಕ್ತದಿಂದ ಸೃಜಿಸಿದ ಪವಿತ್ರಗ್ರಂಥಗಳ ಊರುಗಳಿಗೆ ಹಸಿರು ಹೆದ್ದಾರಿ ಈ ‘ಇವ ಲೆಬನಾನಿನವ’.

ಕನ್ನಡದ ಪರಂಪರಾಗತ ವಿವೇಕ ಹೆಮ್ಮೆ ಪಡುವಂಥದ್ದಾದರೂ ಸಮಕಾಲೀನ ನಡೆ ಅಷ್ಟೇನೂ ಸಮಾಧಾನಕರವಾಗಿಲ್ಲ. ಅದಕ್ಕೆ ಮುಖ್ಯ ಕಾರಣ ಎಂಟು ಕೋಟಿ ಜನರ ನಡುವೆ ಲೆಕ್ಕಕ್ಕೆ ನಿಲುಕದ ಗೋಡೆಗಳೆದ್ದಿರುವುದು. ಇಲ್ಲಿ ಒಬ್ಬರನ್ನ ಮೆಚ್ಚಿದರೆ ಮತ್ತೊಬ್ಬರು ಅವರ ಚಾರಿತ್ರ್ಯ ಹರಣಕ್ಕೆಳಸುವುದು, ಪೂರ್ಣ ಪ್ರಮಾಣದಲ್ಲಿ ಒಪ್ಪಿ ಆರಾಧಿಸಿದರೆ ವ್ಯಕ್ತಿ ಆರಾಧನೆ ಅಪರಾಧವೆನ್ನುವುದು, ಗಂಡುಹೆಣ್ಣಿನ ಮಧ್ಯದ ಪರಿಪೂರ್ಣ ಪ್ರೇಮ ಅಸಾಧ್ಯವೆನ್ನುವುದು, ಅನುಭವ ಪ್ರಮಾಣವೂ ಹುಸಿ ಎನ್ನುವುದು ಹೀಗೆ ಅನೇಕ ಸಂಗತಿಗಳಿವೆ, ಸಾಂಸ್ಕೃತಿಕ ರಾಜಕಾರಣಕ್ಕೆ ಹಲವು ಬಣ್ಣಗಳಿವೆ, ಮುಖಗಳಿವೆ. ಆದರೆ ಈ ಕೃತಿ ಜಗದ ಅನೇಕ ಜೀವಗಳು ಅದು ಹೇಗೆ ಗಿಬ್ರಾನ್ ನ ಮೋಹಕ್ಕೊಳಗಾಗಿ ಬದುಕಿಗೆ ಬೆಳಕು ಕಂಡು ಕೊಂಡರು, ಪುಟ್ಟ ಕಪ್ಪು ಪುಸ್ತಕವೊಂದು ಅದು ಹೇಗೆ ಎಳೆಜೀವಗಳಿದ ಹಿಡಿದು ಹಣ್ಣುಹಣ್ಣು ಮುದುಕ ಮುದುಕಿಯರಿಗೆ ನೆಮ್ಮದಿಯನ್ನೂ, ಸಾವನ್ನು ಸಂಭ್ರಮಿಸುವ ದಾರಿಯನ್ನೂ ಹೇಳಿಕೊಟ್ಟಿತು, ಆತ ಬರೆದ ಪೆನ್ನು, ಕಂದು ಹಾಳೆಗಳು, ಆತ ಬಳಸಿದ ಟೇಬಲ್, ಆತ ಕಾಲೇಜಿನಲ್ಲಿ ಕೂರುತ್ತಿದ್ದ ಮೇಜಿನಿಂದ ಹಿಡಿದು ಆ ಬಿಶಾರಿಯ ಗುಹೆಯ ಒಳಗೆ ನಿರ್ಮಿಸಲಾದ ಗೋರಿಯವರೆಗೆ ಎಲ್ಲವೂ ಹೇಗೆ ಜಗದ ಪವಿತ್ರ ಸ್ಮಾರಕಗಳಾದವು ಎಂಬುದನ್ನ ಮಾಂತ್ರಿಕ ಭಾಷೆಯಲ್ಲಿ ಕಟ್ಟಿಕೊಡುತ್ತದೆ ಈ ಕೃತಿ.

ಬಾರ್ಬರಾ ಹೇಳುತ್ತಾಳೆ, ‘ಇವ ಲೆಬನಾನಿವ’ ಬರೆಯುವಾಗ ನನಗೆ ಗಿಬ್ರಾನ್ ನನ್ನು ಜಗತ್ತಿಗೆ ಪರಿಚಯಿಸುವುದಾಗಿರಲಿಲ್ಲ, ಬದಲಾಗಿ ಆತನನ್ನು ಈ ಕೃತಿಯ ಮೂಲಕ ಮರುಹುಟ್ಟಿಸುವುದಾಗಿತ್ತು, ನನ್ನ ಜೊತೆ ಬದುಕಿದ ಜೀವವನ್ನ ಜಗದ ಜನರೊಡನೆಯೂ ಜೀವಂತವಾಗಿ ಬದುಕಿಸುವುದಾಗಿತ್ತು ಎಂಬರ್ಥದ ಮಾತುಗಳನ್ನ ಹೇಳುತ್ತಾರೆ. ನಮ್ಮಲ್ಲಿ ಅಭಿನಂದನಾ ಗ್ರಂಥಗಳ ಮೂಲಕ ಅನೇಕರ ಸಾಂತ್ವನ ಸೇರಿಸಿ ಪದಗೋರಿ ಕಟ್ಟುತ್ತಾರೆ. ಮತ್ತು ಅಂಥ ಅನೇಕ ಸುಡುಗಾಡುಗಳಿಗೆ ಬರೆದವರನ್ನು ಬಿಟ್ಟು ಸಾಮಾನ್ಯರು ಹೋಗುವುದು ಕಡಿಮೆ. ‘ಇವ ಲೆಬನಾನಿವ’ ಇದಕ್ಕೆ ಅಪವಾದ.

‘ಇವ ಲೆಬನಾನಿವ’ ಒಂದು ಜೀವಂತ ಪುಸ್ತಕ. ಇಲ್ಲಿನ ಪ್ರತಿ ಪುಟಗಳಿಗೂ ಜೀವಂತಿಕೆಯಿದೆ. ಇದು ಓದಿ ಮುಗಿಸಿ ಎತ್ತಿಟ್ಟುಬಿಡಬಹುದಾದ ಪುಸ್ತಕವಲ್ಲ, ಬದಲಾಗಿ ಕಾಲದೊಂದಿಗೆ ನಮ್ಮೊಂದಿಗೆ ಬೆಳೆಯುವ ಕೃತಿಯಿದು. ಇಂಥದೊಂದು ಅಪರೂಪದ ಘನಕಲಾಕೃತಿಯನ್ನು ಕನ್ನಡಕ್ಕೆ ತಂದ ಸಂಧ್ಯಾರಾಣಿಯವರ ಶ್ರಮ ಗೌರವಿಸುವಂಥದು. ಗಿಬ್ರಾನ್ ಒಂದು ಸೃಜನಶೀಲ ಪರ್ವತ. ಕಣ್ಣಿನಿಂದ ನೋಡಿದರೆ ಪೂರ್ಣವಾಗಿ ದಕ್ಕಲಾರ. ಮನಸ್ಸಿನಿಂದ ನೋಡಿದರೆ ಬಹುಶಃ ಕಂಡಾನು, ನಮ್ಮ ಮನಸ್ಸನ್ನೂ ಹೊಕ್ಕಾನು, ಪ್ರಾಮಾಣಿಕವಾಗಿ ಪ್ರಯತ್ನಿಸಿ ನೋಡಿ.

‍ಲೇಖಕರು avadhi

February 26, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sandhya N

    ಧನ್ಯವಾದಗಳು ವೀರಣ್ಣ. ಥ್ಯಾಂಕ್ಯೂ ಅವಧಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: