ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವಳು ಮತ್ತು ಅವನು

ವಸುಂಧರಾ ಕದಲೂರು

ಇವಳೋ ಉಕ್ಕುಕ್ಕಿ ಅವನ
ಚುಂಬಿಸುವ ಕಾತರ ತೋರುತ್ತಿದ್ದಳು
ಅವನು ತನ್ನಂತೆದಯೇ ಕಾಣುವ
ನೀಲನೀಲಿ ಹೊರ ಮೈಯ ಕಡಲ
ಮೋಹಿಸಿ ನಿರ್ಲಿಪ್ತನಾಗುತ್ತಿದ್ದ.
ಆಳಕ್ಕಿಳಿಯದೇ ಅವಳರಿಯದೇ.

ಇವಳ ಹಲವು ಬೇಗುದಿಗಳು ಕುದಿಗೊಂಡು
ಕಲಕಿ ಆವಿಯಾಗಿ ಮೇಲೇರಿ-
ಏರಿ ದಂಡೆಗಟ್ಟಿ ದುಂಡು ಮಲ್ಲಿಗೆಯ
ಮಾಲೆಯಾಗಿ ತೋರಿ ಅವನತ್ತ ಹುಡುಕುತ್ತ
ಸಾಗಿ ತೇಲಿ ಹೋದರೂ ಮುಟ್ಟಿಸಿಕೊಡದವನ
ನಿರ್ಲಕ್ಷ್ಯಕೆ ಒಲವು ಕರಗಿ ಕಣ್ಣೀರು ಧಾರೆಯಾಗಿ
ಇವಳ ಬಳಿ ಬಂದು ಸಂತೈಸಿದವು ಸಂತಾಪದಲಿ.

ಅವನೆಂದರೆ ಆಗಸ, ಅಷ್ಟಗಲ..!
ಇವಳೆಂದರೆ ಇಳೆ, ಇಷ್ಟರವಳೇ…?

ಇನಿದಾಗಿ ಕಾದಲನಿಗೆ ಕಾಯುವವಳು.
ಅವನು ಕದಲುವುದಿಲ್ಲ. ಸಾಗುತ್ತಾಳಿವಳು
ಸ್ವಾಗತ ಕೋರದ ಅವನ ಹಾದಿಯೆಂದು
ಒಂದು ದಾರಿಯ ಹಿಡಿದು ಅವನಲ್ಲಿಗೆಂದು
ತಿಳಿದು, ಹಗಲೂ-ರಾತ್ರಿ ದಿನಂಪ್ರತಿ.

ತಾ ಬೆಟ್ಟ ಕರಗಿಸುತಾ, ಕಡಲ ಮೊರೆಸುತಾ,
ಬಯಲ ಸುಡು ತಾಪದಲಿ, ಮೋಡದಲಿ, ಮಳೆಯಲಿ,
ಹಗಲಿರುಳು ಕಾಲಚಕ್ರಗಳ ಚಕ್ರೀಭವನ
ಕ್ರಿಯೆಯಲಿ.. ತಾ ಕ್ರಮಿಸಿದ ಹಾದಿಗೊಂದು
ಋತುಮಾನಗಳ ಲೆಕ್ಕ ಬರೆದುಕೊಂಡು ಇವಳೋ..

ಈ ಇವಳೆಂದರೆ ಇಷ್ಟರವಳೇ
ಸದಾ ಮೋಹಿಸುವ; ನಿತ್ಯಹರಿದ್ವರ್ಣದವಳು..
ಆ ಅವನೆಂದರೆ ಅಷ್ಟಗಲದ ಅಚಲನೇ

ಸರಾಗ ಸರಿದು ಹೋಗುವ ನೀಲವರಣನು…

‍ಲೇಖಕರು avadhi

25 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading