ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದಿಗೂ ಇದೆ ತೇವ ಇಲ್ಲೆ ಎದೆಯೊಳಗೆ..

ತಾಯಂದಿರ ದಿನದ ನೆಪದಲ್ಲಿ

ಸೌಮ್ಯಾ ಪ್ರಸಾದ್ ಕಿಳಿಂಗಾರು.

‘ತಾಯಂದಿರ ದಿನ’ ಎನ್ನುವ ಪ್ರತ್ಯೇಕ ದಿನದ ಔಚಿತ್ಯ ಏನು ಅನ್ನುವುದು ‘ಅಮ್ಮನ ದಿನ’ ನನ್ನನ್ನು ಬಹುವಾಗಿ ಕಾಡಿದ ವಿಷಯ.

ಅಮ್ಮನ ದಿನದಂದು ಮಾತ್ರ ಅಮ್ಮನ ಜತೆಗೆ ಸೆಲ್ಫಿ ತೆಗೆದು ಖುಷಿಪಡುವ ಸಂಪ್ರದಾಯವೂ ಇಲ್ಲದಿಲ್ಲ. ‘ಫೋಕಸ್’ ಬದುಕಿನ ಬಹುದೊಡ್ಡ ಭಾಗವೇ ಆಗಿ ಬದಲಾಗತ್ತಿರುವುದು ಇಂದೀಗ ಸಹಜವೇ ಆಗಿದೆ. ಗುರುತಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಪ್ರತಿಯೊಬ್ಬನ ಬದುಕಿನ ಮತ್ತು ಯಶಸ್ಸಿನ ಬೇರು ಇರುವುದು ಅಮ್ಮನಲ್ಲಿಯೇ. ಆದರೆ ಗೆಲ್ಲುಗಳು ಬಲಿತಾಗ ಬೇರಿನತ್ತ ಒಮ್ಮೆ ದೃಷ್ಟಿ ಹರಿಸುವ ಅವಕಾಶ ಇಲ್ಲವಾಗುತ್ತಿರುವುದರಿಂದಲೇ ಇಂತಹ ಆಚರಣೆಗಳ ಮಹತ್ವ ಹೆಚ್ಚಾಗುತ್ತಿದೆ. ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಭಾವವೇ ಉಳಿಸಿಕೊಳ್ಳಬೇಕೆಂಬ ತುಡಿತಕ್ಕೆ ಆಸ್ಪದವಾಗುತ್ತದೆ.

“ಮಾನವೀಯತೆ ಅಂದರೆ ಅಮ್ಮ, ಬದುಕು ಅಂದರೆ ಏನು ಎನ್ನುವುದನ್ನು ಅಕ್ಷರಾಭ್ಯಾಸವೇ ಇಲ್ಲದ ನನ್ನ ಅಮ್ಮನನ್ನು ನೋಡಿ ತಿಳಿಯಬೇಕು, ಸಾಮಾಜಿಕವಾಗಿ ತೆರೆದುಕೊಳ್ಳದ ಬದುಕು ಬದುಕೇ ಅಲ್ಲ ಎನ್ನುವುದನ್ನು ನನಗೆ ತಿಳಿಸಿಕೊಟ್ಟದ್ದು ಅವರ ಬದುಕು’ ಪ್ರತಿಯೊಂದು ಸಂದರ್ಭದಲ್ಲೂ ಅಮ್ಮನ ಬಗೆಗೆ ಹೇಳುತ್ತಿದ್ದ ನನ್ನ ಶಿಕ್ಷಕರೊಬ್ಬರ ಮಾತೇ ಮೊದಲ ಬಾರಿಗೆ ಅಮ್ಮನ ಬಗೆಗೆ ಯೋಚಿಸಲು ನನಗೆ ಪ್ರೇರಣೆಯಾದದ್ದು.

ಅಮ್ಮನ ಬಗೆಗೆ ಪ್ರೀತಿಯಿಲ್ಲವೆಂದಾಲೀ, ಅಮ್ಮನ ಕಷ್ಟಗಳ, ತ್ಯಾಗದ ಅರಿವಿಲ್ಲವೆಂದಾಗಲೀ ಅಲ್ಲ. ಆದರೆ ಅದನ್ನು ಗುರುತಿಸುವ ಅದರ ಬಗೆಗೆ ಚಿಂತಿಸುವ ಅಗತ್ಯ, ಅನಿವಾರ್ಯತೆ ಕಾಡಿದ್ದೇ ಇಲ್ಲ ನನ್ನನ್ನು. ಯಾವುದೋ ಒಂದು ಸಂದರ್ಭ ಪ್ರತಿಯೊಬ್ಬರಿಗೂ ಅಮ್ಮ ಅನ್ನುವ ಒಂದು ವ್ಯಕ್ತಿತ್ವದ ಬಗೆಗೆ ಯೋಚಿಸುವಂತೆ ಮಾಡುತ್ತದೆ.

ಪ್ರತಿಯೊಬ್ಬರ ಬದುಕಿನಲ್ಲಿ ಅಮ್ಮನಿಗೆ ಮಹತ್ವದ ಸ್ಥಾನವಿದೆ. ಮಗುವೊಂದು ಹುಟ್ಟುವ ಮೊದಲೇ ತನ್ನ ಬೇಕುಬೇಡ , ಇಷ್ಟಾನಿಷ್ಟಗಳನ್ನು ಮೂಲೆಗೆಸೆದು ಮಗುವಿಗಾಗಿ ಬದುಕುವ ಅಮ್ಮ ಸಮಕಾಲೀನ ಸಂದರ್ಭದಲ್ಲೂ ಇದಾರೆ ಅನ್ನುವುದೇ ಬಹಳ ಮಹತ್ವದ ಸಂಗತಿ.

ಅಮ್ಮನನ್ನ, ಅಮ್ಮನ ಕೆಲಸ ಗಳನ್ನು ಪ್ರೀತಿಯನ್ನು ಗುರುತಿಸುವ ಮನಸ್ಸು ಮತ್ತು ಗುರುತಿಸುವ ಕಾರ್ಯ ಬಹಳ ದೊಡ್ಡದು. ಅದು ಶುರುವಾದದ್ದು ಇತ್ತೀಚಿಗೆ. ಸ್ವ ಗುರುತಿಸುವಿಕೆಯ ಭಾಗವಾಗಿಯೇ ಅಮ್ಮನ ಗುರುತಿಸುವಿಕೆಯೂ ಶುರುವಾಗಿರಬೇಕು. ‘ತಾನಿಂತವರ ಮಗ’ ಎನ್ನುವ ಮೂಲಕ ತನ್ನ ಹೆಸರನ್ನು ಮರೆಮಾಚಿ ಅಪ್ಪ ,ಅಮ್ಮನ ಮೂಲಕ ತನ್ನನ್ನು ಪರಿಚಯಿಸಿಕೊಳ್ಳುವ ಕ್ರಮ ಚಂಪೂಯುಗದಲ್ಲೇ ಚಾಲ್ತಿಯಲ್ಲಿದ್ದರೂ ಅವಳ ಬಗೆಗೆ ಅವಳ ನೋವು ನಲಿವುಗಳ ಬಗೆಗೆಲ್ಲಿ ಪ್ರಸ್ತಾಪವಾದದ್ದಿಲ್ಲ. ಒಂದು ಇಡೀ ಮನೆಯನ್ನು ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಅಮ್ಮ ಅಂದಿನಿಂದಲೂ ತ್ಯಾಗಿಯೇ. ಅವಳ ಸ್ಥಾನ ಅಂದಿಗೂ ಬದಲಾಗಿಲ್ಲ, ನವವಸಾಹತುಶಾಹಿಯ ಈ ಸಂದರ್ಭದಲ್ಲಿಯೂ ಬದಲಾಗಿಲ್ಲ.

ಅಮ್ಮ ಅಂತ ಯಾರನ್ನೂ ಕರೆಯಬಹುದು, ಆದರೆ ‘ಅಬ್ಬೇ’ ಅಂದರೆ ಅದು ಹೆತ್ತ ತಾಯಿ ಮಾತ್ರ ಎನ್ನುವ ಮಾತು ಬ್ರಾಹ್ಮಣ ಸಮುದಾಯದಲ್ಲಿದೆ. ಹಾಗಾಗಿ ಈಗಲೂ ಹಲವೆಡೆ ಅಮ್ಮನಿಗೆ ಅಬ್ಬೆ ಎನ್ನುವ ಮಾತು ಚಾಲ್ತಿಯಲ್ಲಿದೆ.

ಅಮ್ಮ ಎನ್ನುವ ದೈವತ್ವದ ಕಲ್ಪನೆಯು ನವೋದಯ ಕಾಲದಲ್ಲಿ ಭಾರತಾಂಬೆ ಎನ್ನುವ ರಾಷ್ಟ್ರೀಯತೆಯ ಕಲ್ಪನೆಯಾಗಿ ಅದು ವೈಯಕ್ತಿಕ ಪಾತಳಿಗಿಳಿದು ಅಮ್ಮ ಅಮ್ಮನಾದದ್ದು ಆಧುನಿಕ ಕಾಲಘಟ್ಟದಲ್ಲೇ ಎಂದೆನಿಸುತ್ತದೆ. ಪಿ. ಲಂಕೇಶ್ ಅವರ ಅವ್ವ ಕವನ ಈ ನಿಟ್ಟಿನಲ್ಲಿ ಬಹಳ ಪ್ರಸಿದ್ದಿಯನ್ನೂ ಪಡೆದಿದೆ.

ನನ್ನವ್ವ ಫಲವತ್ತಾದ ಕಪ್ಪುನೆಲ

ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ

ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು

ಮಕ್ಕಳೊದ್ದರೆ ಅವಳ ಅಂಗಾಂಗ ಪುಳಕ

ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ’

ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪನವರು ತಾಯೊಲವೆ ತಾಯೊಲವು ಈ ಲೋಕದೊಳಗೆ/ ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ! ಎನ್ನುತ್ತಾ ಕಳೆದು ಹೋದ ತಾಯಿಯ ಪ್ರೀತಿಯನ್ನು ಕಡಲಿಗೂ ಹೋಲಿಸುತ್ತಾರೆ.

ನನ್ನ ಹರಿದ ಅಂಗಿ ಹೊಲಿದ ನಿನ್ನ ಕೈ

ಹೊಲಿಯಲಿಲ್ಲ ನಿನ್ನ ಬಾಳ ಬಂಡಿ

ಉರಿಯದ ಒಲೆ ಉರಿಸಿ

ಬೆಳಗಲಿಲ್ಲ ನಿನ್ನ ಬದುಕು

ಹೊಗೆ ಸುತ್ತ ಹರಡಿ

ಕಪ್ಪಾದರೂ ಒಲೆ ಅಟ್ಟ

ಕಪ್ಪಾಗಲಿಲ್ಲ ಹಸಿಮನಸು

ಕೊರಳು ಸುತ್ತ ಪೋಣಿಸಿದ

ಕಣ್ಣಂಚಿನ ಹನಿ ನೀರಮಾಲೆ

ಇಂದಿಗೂ ಇದೆ ತೇವ

ಇಲ್ಲೆ ಎದೆಯೊಳಗೆ’

ಎನ್ನುವ ಸಾಲುಗಳು ಅಮ್ಮನ ದಿನದ ನೆಪದಲ್ಲಿ ಅಮ್ಮನಿಗಾಗಿ..

‍ಲೇಖಕರು avadhi

12 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading