ಎಸ್ ಎಲ್ ಭೈರಪ್ಪ ಎನ್ನುವ 'ಹೆತ್ತಮ್ಮ'ಳಿಗೆ…

ಎಸ್ ಎಲ್ ಭೈರಪ್ಪನವರು ನೀಡಿದ ಹೇಳಿಕೆ ಕುರಿತು ನಾ ದಿವಾಕರ್ ಅವರು ‘ನೇರ ನೋಟ’ದಲ್ಲಿ ಚರ್ಚಿಸಿದ್ದರು ಅದು ಇಲ್ಲಿದೆ
ಈಗ ಆ ಚರ್ಚೆಗೆ ವರಹಳ್ಳಿ ಆನಂದ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ವರಹಳ್ಳಿ ಆನಂದ
ನಮ್ಮ ಕಡೆ ಒಂದು ನುಡಿಗಟ್ಟಿದೆ- ‘ಹೆತ್ತಮ್ಮಳಿಗೆ ಮೊಮ್ಮಗೂಸು ಬುದ್ಧಿ ಹೇಳಿತು’ ಅಂತ.
ಅಂದರೆ  ಮಗುವು ಅಜ್ಜಿಗೆ ಬುದ್ಧಿ ಹೇಳಿತು ಅಂತ. ಆ ಮಗು ಅಥವಾ ಆ ಮೊಮ್ಮಗು ಯಾಕೆ
ಬುದ್ಧಿ ಹೇಳಬೇಕು? ಬುದ್ಧಿ ಹೇಳುವ ಪ್ರಮೇಯವಾದರೂ ಯಾಕೆ ಬಂತು ? ಒಂದೊ ಅಜ್ಜಿ ತಪ್ಪು
ಮಾಡಿರಬೇಕು. ಎರಡೊ  ಅಜ್ಜಿಯ ನಡವಳಿಕೆ ಮೊಮ್ಮಗುಗೆ ತಪ್ಪಾಗಿ ಕಂಡಿರಬೇಕು. ಬಹುಶಃ
ಇಷ್ಟೇ ಆಗಿರಬೇಕು.
ಹಾಗಾದ್ರೆ ಈಗ ಅಜ್ಜಿ ಯಾರು? ಮೊಮ್ಮಗು ಯಾರು? ಅಜ್ಜಿ ಅಥವಾ ಅಜ್ಜ ಸಾಹಿತಿ ಎಸ್. ಎಲ್.
ಭೈರಪ್ಪನವರು! ಮೊಮ್ಮಗು – ವರಹಳ್ಳಿ ಆನಂದ ಅಂದರೆ ನಾನು!
ಯಾಕೆ ಈ ಹೋಲಿಕೆ ಎಂದರೆ ಭೈರಪ್ಪನವರು ದೊಡ್ಡ ಆಲದ ಮರ . ಆ ಹಿರಿ ಆಲದ ಮರದ ಕೆಳಗಡೆ
ಅಥವಾ ದೂರದಲ್ಲಿ ಎಲ್ಲೋ ಇರುವ ಒಂದು ಚಿಕ್ಕ ಗಿಡ. ಈಗ ತಾನೇ ಚಿಗುರುತ್ತಿರುವ ಚಿಕ್ಕ
ಗಿಡ ಅಂತ ಈ ಹೋಲಿಕೆ ಮಾಡಿಕೊಳ್ಳುತ್ತಿದ್ದೇನೆ. ತಪ್ಪಿದ್ದರೆ ಕ್ಷಮಿಸಿ.
ಹಾಗಾದರೆ ಅಜ್ಜ ಹೇಳಿದ ಮಾತಾದರೂ ಯಾವುದು? “ಧರ್ಮ ಗ್ರಂಥಗಳೇ ನಮ್ಮ ಸಂವಿಧಾನ. ಈ ರೀತಿ
ಕಾನೂನುಗಳು ಬರುತ್ತಾ ಹೋದರೆ ಇನ್ನು ಮುಂದೆ ಹೆಂಡತಿಯನ್ನು ಮುಟ್ಟಿಸಿಕೊಳ್ಳುವುದಕ್ಕೂ
ರಿಜಿಸ್ಟರ್ನಲ್ಲಿ ಸಹಿ ಮಾಡಿಸಿಕೊಳ್ಳಬೇಕಾಗುತ್ತದೆ”  ಎಂಬ ಮಾತು.
ಅಜ್ಜನ ಮಾತು ಕೇಳಿಸಿಕೊಂಡ ಆ ಮಗು “ತಾತ ಏನು ನೀವು ಆಡೊ ಮಾತೂ… ಹಾಗಾದರೆ ನಿಮ್ಮ
ಮನು ಧರ್ಮಶಾಸ್ತ್ರವು ಗಂಡ ಸತ್ತ ನಂತರ ಹೆಂಡತಿ ಬೆಂಕಿಗೆ ಬಿದ್ದು ಸಾಯಿ ಅನ್ನುತ್ತದೆ .
ನೀವು ಸತ್ತ ನಂತರ ನಿಮ್ಮ ಹೆಂಡತಿ ಅಥವಾ ಅಳಿಯ ಸತ್ತ ನಂತರ ನಿಮ್ಮ ಮಗಳು ಸಾಯಬಹುದೇ?
ಹೇಳಿ.
ಬೆಂಕಿಗೆ ಬಿದ್ದು ಸಾಯೋದು, ಮನುಧರ್ಮಶಾಸ್ತ್ರ ಇವೆಲ್ಲಾ ಹಳೆಯದು. ಅದು ಈಗ ಬೇಡ.
ಯಾರೋ ಒಂದು ಹೆಣ್ಣನ್ನು ಅಥವಾ ತನ್ನ  ಹೆಂಡತಿಯನ್ನು  ಬಲವಂತವಾಗಿ  ಮುಟ್ಟಲು
ಆಸೆಪಟ್ಟರೆ ಅದನ್ನು ನೀವು ಒಪ್ಪಿಕೊಳ್ಳುತ್ತೀರಾ? ನಿಮ್ಮ ಮಗಳೇ ಆದರೆ ನೀವು
ಒಪ್ಪಿಕೊಳ್ಳುತ್ತೀರಾ ? ಏನು ತಾತ ನೀವು ಹೇಳೋ ಮಾತೂ.. ಎಷ್ಟು ತತ್ವಶಾಸ್ತ್ರದ ಬಗ್ಗೆ
ಮಾತನಾಡುತ್ತೀರಾ.. ಇಷ್ಟೆಲ್ಲಾ ಮಾತಾಡಿ.. ನೀವು ಈ ರೀತಿ ಮಹಿಳೆಯರ ಬಗ್ಗೆ ಕೀಳಾಗಿ..
ಮಹಿಳೆಯರ ಮೈಮನದ ಪ್ರಕೃತಿದತ್ತ ತತ್ತ್ವಶಾಸ್ತ್ರವನ್ನು  ಅರಿಯದೆ
ಮಾತನಾಡುತ್ತಿದ್ದಾರಲ್ಲ ಸರಿಯಾ ? ನಿಮ್ಮ ತತ್ವಶಾಸ್ತ್ರ ಹೇಳೋದು ಇದೇನಾ? ನನಗ್ಯಾಕೋ
ನೀವು ಮನು ಧರ್ಮಶಾಸ್ತ್ರವನ್ನು ರಚಿಸಿರುವವನ ಅಣ್ಣನೋ ತಮ್ಮನೋ ಇರಬೇಕು ಅನ್ನಿಸುತ್ತದೆ.
ಜಾತೀಯತೆಯನ್ನು ಅಥವಾ ಮೇಲು ಕೀಳುಗಳನ್ನು ಸಮರ್ಥಿಸುವಂತೆ ನೀವು ಕಾಣುತ್ತೀರಿ. ನಿಮ್ಮ
ಬ್ರಾಹ್ಮಣತ್ವ ಬಗ್ಗೆಯೇ  ಹೇಳ್ತೀರಲ್ಲಾ.. ನೀವೇ ಹೆಣ್ಣಾಗಿದ್ದರೆ ಕಥೆ ಏನು? ನಿಮ್ಮ
ಮಾತುಗಳನ್ನು ಕೇಳಿದರೆ.. ಅತ್ಯಾಚಾರಗಳನ್ನು, ಗುಲಾಮಿತನದ ವ್ಯವಸ್ಥೆಯನ್ನು ನೀವು
ಸಮರ್ಥಿಸುತ್ತಿದ್ದೀರ ಅಂದಹಾಗೆ  ಆಯಿತಲ್ಲವೇ? ಸರಿ ನಿಮಗ್ಯಾಕೆ ಸಂವಿಧಾನದ ಮೇಲೆ
ಅಷ್ಟೊಂದು ಕೋಪ? ನೀವು ಚೆನ್ನಾಗಿ ಇದ್ದೀರಲ್ಲಾ..?”   ಅಂದಿತು.
ಮೊಮ್ಮಗನ ಇಷ್ಟೆಲ್ಲಾ ಮಾತುಗಳನ್ನು ಕೇಳಿದ ಅಜ್ಜ ಅಂದುಕೊಂಡದ್ದು “ಹೆತ್ತಮ್ಮ ಳಿಗೆ
ಮೊಮ್ಮಗು ಬುದ್ಧಿ ಹೇಳಿತು” ಅಂತ!
ಈ ರೀತಿ ನೀವು ಮಾತನಾಡಿದರೆ  ಮೊಮ್ಮಗು ಬುದ್ಧಿ ಹೇಳದೆ ಇನ್ನೇನು ಮಾಡಬೇಕು? ಯಾಕೆಂದರೆ
ನಾನು ಇನ್ನೂ ಇಪ್ಪತ್ತಾರಿನ ವಯಸ್ಸಿನವನು. ಹಾಗಾದರೆ ನಾನು ನಿಮಗೆ ಮೊಮ್ಮಗು ಸಮಾನ
ತಾನೇ ? ಆ ಧೈರ್ಯದಿಂದ ಹೇಳುತ್ತಿದ್ದೇನೆ.
ಭೈರಪ್ಪನವರಿಗೆ ಮೊಮ್ಮಗು ರೀತಿ ಇರುವ ನಾನು ಒಂದು ಮಾತು ಹೇಳಲು ಬಯಸುತ್ತೇನೆ: ನೀವು
ಬೆಳೆದಿರುವ ದೊಡ್ಡ ಆಲದ ಮರ. ದೇಶಕ್ಕೆ ನೆರಳಾಗಬೇಕು. ಬದಲಾಗಿ ನೆರಳು ನೀಡಲು ಆಗದ
ಒಣಗಿದ ಮರದಂಥಾಗಬಾರದು. ಎಷ್ಟೂ ಅಂತ ಮಹಿಳಾ ವಿರೋಧಿತನವನ್ನು
ಪ್ರತಿಪಾದಿಸುತ್ತೀರಾ..?
ಮಹಿಳೆಯರು ದೊಡ್ಡತನದತ್ತ ಚಾಚಿಕೊಳ್ಳುವುದು, ತನ್ನ ಸುತ್ತಲಿನ ಅವಿವೇಕದ ಗೂಡಿನಿಂದ
ಹಾರುವುದು, ಗಂಡ ಸತ್ತ ವಿಧವೆ ಮದುವೆಯಾಗುವುದು  ಇದನ್ನೆಲ್ಲ ವಿರೋಧಿಸುವ ನೀವು
ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ನೀವು ಪ್ರತಿಪಾದಿಸುವ ಸಿದ್ಧಾಂತವಾದರೂ ಏನು ? ನಿಮ್ಮ
ತತ್ವಶಾಸ್ತ್ರದಲ್ಲಿ  ಸಮಾನತೆಗಾಗಿ ಇರುವ ತತ್ತ್ವವಾದರೂ ಏನು ?
ಭೈರಪ್ಪನವರು ಮಹಿಳೆಯರಿಗೆ ಸ್ವಾಭಿಮಾನದ ಚೈತನ್ಯವಾಗಿರುವ ನಮ್ಮ ಸಂವಿಧಾನವನ್ನು
ವಿರೋಧಿಸಿ  ಮಾತನಾಡುತ್ತಾರೆ. ಇವರ ವಿರೋಧಿ ಮಾತಿಗೆ ಒಂದು ಉದಾಹರಣೆಯನ್ನು
ಕೊಡುತ್ತೇನೆ- ‘ತಾರಾ’ ಅಂತ ಒಂದು  ಹಿಂದಿ ಸಿನಿಮಾ ಇದೆ. ಆ ಸಿನಿಮಾದಲ್ಲಿ ತಾರಾ
ಗಂಡನಿಂದಲೇ ಗರ್ಭವತಿ ಆಗುತ್ತಾಳೆ. ಮೊದಲು ಹೆಂಡತಿಯನ್ನು ಕೂಡಿದ ಗಂಡ ಕೂಡಿದ ಕೆಲವೇ
ದಿನಗಳಲ್ಲಿ  ಕಳ್ಳಬಟ್ಟಿ ಕಾಯಿಸುವ ಕೆಲಸದಿಂದ ಆತ ಜೈಲಿಗೆ ಹೋಗುತ್ತಾನೆ. ಇನ್ನೇನು
ತಾರಳು ಮಗುವಿಗೆ ಜನ್ಮ ಕೊಡುತ್ತಾಳೆ ಎನ್ನುವ ಕೆಲವೇ  ದಿನಗಳಲ್ಲಿ ಗಂಡ ಜೈಲಿನಿಂದ
ಬಿಡುಗಡೆಯಾಗಿ ಬರುತ್ತಾನೆ. ಹೆಂಡತಿಯನ್ನು ನೋಡುತ್ತಾನೆ. ನೋಡಿದ ಗಂಡ ಹೆಂಡತಿಯನ್ನು
ಹೆಂಡತಿಯ ಗರ್ಭವನ್ನು ಚಾಡಿಕೋರನ ಚಾಡಿ ಮಾತಿನಿಂದ  ಅನುಮಾನಿಸಿ ಊರಿನ ಪಂಚಾಯಿತಿ
ಕಟ್ಟೆಯಲ್ಲಿ ಊರಿನಿಂದಲೂ ಮನೆಯಿಂದಲೂ   ಮನಸ್ಸಿನಿಂದಲೂ ಹೊರಗಿಡುತ್ತಾನೆ. ತುಂಬಿದ
ಗರ್ಭವತಿ ರಸ್ತೆಯ ಮಧ್ಯದಲ್ಲಿಯೇ ಮಗುವಿಗೆ ಜನ್ಮಕೊಟ್ಟ ತಾರ ಯಾವುದೋ ಪಕ್ಕದ ಊರಿನಲ್ಲಿ
ಯಾರದೋ ಮನೆಯಲ್ಲಿ ಸೇರಿಕೊಂಡು ಆಕೆ ಗಂಡನ ನೆನಪಲ್ಲಿ ಕೊರಗುತ್ತಾಳೆ.
ಆ ಮಗುವಿನ ನಗುವಲ್ಲಿ ಗಂಡನನ್ನು ಕಾಣುತ್ತಾಳೆ.   ಈ ನಡುವೆ ಪಟ್ಟಣದಿಂದ ಆ ಪ್ರದೇಶಕ್ಕೆ ಬಂದ
ಸಂಶೋಧಕ ವಿದ್ಯಾರ್ಥಿಗಳಿಂದ ಡಿಎನ್ಎ ಟೆಸ್ಟ್ ನಿಂದ ಇಂಥವರ ಮಗು ಇಂಥವರದ್ದು ಎಂದು
ಕಂಡು ಹಿಡಿಯಬಹುದು ಎಂದು  ತಿಳಿಸುತ್ತಾರೆ. ತಾರಾಳಿಗೆ ಹುಟ್ಟಿದ ಗಂಡು ಮಗು ತಾರಾಳ
ಗಂಡನದ್ದೇ ಎಂದು ಸಂಶೋಧಕರಿಂದ ಅದು ಗೊತ್ತಾಗುತ್ತದೆ. ಆಗ ತಾರಳು ಗಂಡನ ಊರಿನಲ್ಲಿ
ಪಂಚಾಯಿತಿ  ಮಾಡಿಸಿ ಇದು ನಿನ್ನದೇ ಮಗು ಎಂದು ಹೇಳಿ ಗಂಡನಿಗೆ ಸತ್ಯಾಂಶವನ್ನು
ತಿಳಿಸುತ್ತಾಳೆ.
ತಿಳಿಸಿದ ನಂತರ ತಾನು ಗಂಡನನ್ನು ತೊರೆದು ಊರನ್ನೂ ತೊರೆದು ಪಕ್ಕದೂರಿನ ಮನೆಗೇ ಸೇರಿಕೊಳ್ಳುತ್ತಾಳೆ. ಸತ್ಯ ಗೊತ್ತಾದಾಗಲೂ ತಾರಳು ಗಂಡನನ್ನು ತೊರೆದು ಹೋಗುವುದೇ ಇಲ್ಲಿ ತಾರಾಳ ಸ್ವಾತಂತ್ರ್ಯ, ಶಕ್ತಿ, ಸ್ವಾಭಿಮಾನ ಮತ್ತು ಸತ್ಯದ ಸಂಕೇತವಾಗಿದೆ. ಇಂತಹ ಸತ್ಯವನ್ನು ಇಂತಹ ಸ್ವಾಭಿಮಾನವನ್ನು ಇಂತಹ ಛಲವನ್ನು, ಇಂತಹ ಸ್ವಾತಂತ್ರ್ಯವನ್ನು ಕೊಟ್ಟಿದ್ದು ನಮ್ಮ ಭಾರತ  ಸಂವಿಧಾನ.
ಛಲಕ್ಕೆ ಚೈತನ್ಯವಿರುವ ಸಂವಿಧಾನವನ್ನು ವಿರೋಧಿಸುವ ಮಾತನಾಡುತ್ತಾರಲ್ಲ ಭೈರಪ್ಪನವರಿಗೆ ಈ ಮೊಮ್ಮಗು  ಏನುಹೇಳಬೇಕು?
ನಿಮ್ಮ ‘ವಂಶವೃಕ್ಷ’ದ ಕಾದಂಬರಿಯಲ್ಲಿ ಕಾತ್ಯಾಯಿನಿಯು ತನ್ನ ಸ್ವತಂತ್ರ ಬದುಕಿಗಾಗಿ
ಹಂಬಲಿಸುವ ಹೆಣ್ಣು, ತನ್ನ ಪ್ರಕೃತಿದತ್ತವಾದ ಆಸೆಗಳನ್ನು ಪೂರೈಸಿಕೊಳ್ಳುಲು ಹಂಬಲಿಸುವ
ಹೆಣ್ಣು. ಸಮಾನತೆಗಾಗಿ ಹಂಬಲಿಸುವ ಹೆಣ್ಣು. ಇಂತಹ ಹೆಣ್ಣನ್ನು ನೀವು ಕಾದಂಬರಿಯ
ಕೊನೆಯಲ್ಲಿ ಸಾಯಿಸುತ್ತೀರ.
ಮೊದಲ  ಕಾದಂಬರಿಯಲ್ಲಿ ನೀವು ಮಾಡಿದ ತಪ್ಪಾದರೂ ನಿಮಗೆ ತಿಳಿಯಬಾರದೇ? ಇನ್ನು ಮಹಿಳಾ ಅಂತರಂಗವನ್ನು, ಮಹಿಳಾ ಮೈಮನವನ್ನು, ಸಂವಿಧಾನ ಸಮಾನತೆಯನ್ನು  ವಿರೋಧಿಸುವುದದಾರೂ ಏತಕೆ? ಇದನ್ನು ಕನ್ನಡ ಸಾಹಿತ್ಯ ಅರ್ಥ ಮಾಡಿಕೊಳ್ಳಬೇಕಾಗಿದೆ. ಭೈರಪ್ಪನವರ ಸಾಹಿತ್ಯ ಮನುಧರ್ಮ ಶಾಸ್ತ್ರದ ರಕ್ತದ ಕಲೆಯಾಗಿದೆ. ವೈರುಧ್ಯಗಳ ಕಲೆಯಾಗಿದೆ.  ಬ್ರಾಹ್ಮಣರನ್ನು ಬ್ರಾಹ್ಮಣರಾಗಿ ಉಳಿಸುವ ಒಂದು ವ್ಯವಸ್ಥಿತ
ಸಾಹಿತ್ಯದ ಕೆಲಸವಾಗಿದೆ. ಬ್ರಾಹ್ಮಣತ್ವವನ್ನು  ಗಟ್ಟಿಗೊಳಿಸುವ ಕೆಲಸವೂ ಆಗಿದೆ.
ಇವರ ಸಾಹಿತ್ಯ ಬರೀ ಮಹಿಳೆಯರ ಆತ್ಮ ಸಾಕ್ಷಿಗೆ ಹೊಡೆತ ಅಲ್ಲ. ಇಡೀ ಭಾರತದ ಬಹುತ್ವದ
ವ್ಯವಸ್ಥೆಗೆ ಅಪಾಯವಾಗಿದೆ. ಭಾರತೀಯತೆ ಎಂಬ  ಕುಟುಂಬದಲ್ಲಿ ಈ ಅಪಾಯವನ್ನು ಕಂಡ ಮೊಮ್ಮಗು ಆತಂಕಗೊಂಡು  ಬುದ್ಧಿ ಹೇಳದೆ ಇನ್ನೇನು ಮಾಡಬೇಕು?

‍ಲೇಖಕರು Avadhi Admin

May 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: