ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಚಪ್ಪಲಿಯೂ ಅಳುತ್ತಿತ್ತು..

-ಕಮಲಾಕರ ಕಡವೆ

ಮತ್ತೊಮ್ಮೆ ಚಪ್ಪಲಿ

ನ್ಯಾಯಾಲಯದಲ್ಲಿ ಎಸೆದ ಚಪ್ಪಲಿ ತೋರಿಸಿದ್ದು,
ನಡೆಯನಲ್ಲ, ನಡೆವುದನಲ್ಲ,
ತನ್ನ ನೆಲೆಯಲ್ಲಿ ನಿಲ್ಲುವುದನಲ್ಲ;
ತೋರಿಸಿದ್ದು
ಒಬ್ಬಾತ ಎಷ್ಟು ಕೆಳಗೆ ಬೀಳಬಹುದು ಎಂದು.

ಚರ್ಮ, ದಾರಗಳಿಂದ ಹೊಲಿದು ಮಾಡಿದ ಚಪ್ಪಲಿ,
ಧೂಳಿನ ಒಡನಾಡಿ,
ರಸ್ತೆಯ ಕೊಳೆಗೆ ಕನ್ನಡಿ, ಅಷ್ಟೇ.
ದ್ವೇಷವರಿಯದ ಮುಗ್ಧ.
ತೊಟ್ಟವಗೆ ನಿಷ್ಠಾವಂತ.

ಆದರೆ ಅದನ್ನು ಎಸೆದ ಕೈ
ಕಲಿತಿಲ್ಲ ಮಣ್ಣಿನ ವ್ಯಾಕರಣವನ್ನು,
ಓದಿಲ್ಲ ಸಹಾನುಭೂತಿಯ ಹೊತ್ತಿಗೆಯನ್ನು,
ಅರಿತಿಲ್ಲ ಸಂವಿಧಾನದ ತಿರುಳನ್ನು.

ತನ್ನ ಜಾತಿಸ್ಮೃತಿಯೇ ಸಂಸ್ಕೃತಿ,
ತನ್ನ ಕೂಪಮಂಡೂಕತನವೇ ಜ್ಞಾನ,
ತನ್ನ ನಾಲಿಗೆಯೇ ತೀರ್ಪು,
ತನ್ನ ಅಸಹನೆಯೇ ಧರ್ಮ,
ಎಂಬ ತನ್ನ ಅಸಂಸ್ಕೃತ ಮನಸ್ಸನ್ನು ಎಸೆದಿತ್ತು ಆ ಕೈ.

ಗಾಳಿಯಲ್ಲಿ ಹಾರುವಾಗ
ಆ ಚಪ್ಪಲಿಯೂ ಅಳುತ್ತಿತ್ತು
ಇಷ್ಟು ದಿನ ಆ ಅಹಂಕಾರಿ ಪಾದಗಳ ಹೊತ್ತು ನಡೆದಿದ್ದಕ್ಕೆ,
ಈಗ ಅದರ ದುರ್ವಾಸನೆಯನ್ನು
ನ್ಯಾಯದ ದೇಗುಲದಲ್ಲಿ ಸಾರ್ವಜನಿಕ ಮಾಡಿದ್ದಕ್ಕೆ.

ಆ ಚಪ್ಪಲಿ ನ್ಯಾಯಾಧೀಶರ ಮೇಲೆ ಬೀಳಲಿಲ್ಲ;
ಅದು ಬಿತ್ತು ಸಂಸ್ಕೃತದ ಮೇಲೆ
ಹೊಡೆದುರುಳಿಸಿ ಒಂದು ಸ್ವರವನ್ನು,
ಅನಾವರಣಗೊಳಿಸಿ ಶಬ್ದಗಳ
ಅಂತರಂಗವನರಿಯದ ಶಿಕ್ಷಣವನ್ನು
ಬೆತ್ತಲೆಯಾಗಿಸಿ ಜಾತಿಹೊತ್ತಿಗೆಯೊಳಗಿನ
ತಿರಸ್ಕಾರದ ಸಿಟ್ಟನ್ನು.

ಮತ್ತು ನೋಡುತ್ತಿದ್ದರು ನ್ಯಾಯನಿಷ್ಠುರಿಗಳು.
ಕೆಲವರು ದೂರ ಸರಿದರು,
ಕೆಲವರು ತಮ್ಮ ಗೌನಿನ ಒಳಗೊಳಗೆ ಹುಳಿಹುಳಿ ನಕ್ಕರು,
ಗಾಳಿಯಲ್ಲಿದ್ದ ಸುಟ್ಟ ಚರ್ಮದ ವಾಸನೆ
ಮೌನವಾಗಿದ್ದರೆ ತಂತಾನೇ ಶುದ್ಧವಾಗುವುದೆಂಬಂತೆ.
ಅವರು ಮರೆತಿದ್ದರು ಪ್ರತಿ ಹುಳಿನಗೆಯೂ
ಸನಾತನ ಸಂಸ್ಕೃತದ ಮೇಲೆ ಹೊಡೆದ ಮೊಳೆಯೆಂದು.

ಓ ಚಪ್ಪಲಿಯೇ,
ಪಾದಚಾರಿ ಮಾರ್ಗಗಳ ವಿನಮ್ರ ಯಾತ್ರಿಕನೇ,
ನೀನು ಮಾತ್ರ
ಪ್ರತಿಯೊಂದು ಜಾತಿಯ ಧೂಳಿನ ಸ್ಪರ್ಶವನ್ನು ತಿಳಿದಿರುವೆ.
ಬಾಗುವ ಧೀಮಂತಿಕೆ ನೀನು ಮಾತ್ರ ಕಲಿಸಬಲ್ಲೆ.

ನಿನ್ನ ಎಸೆಯಲು ಎತ್ತಿದ ಮನಸ್ಸು
ಮತ್ತು ಆ ಮನಸನ್ನು ರೂಪಿಸಿದ ಸಮಾಜ
ಕಲಿತಿದ್ದರೆ ಸಂಸ್ಕೃತಿ ಶಬ್ದದ ಇನಿತಾದರೂ ಅರ್ಥ!

‍ಲೇಖಕರು Admin

9 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading