ಈರುಳ್ಳಿ ಕತೆ
ಎಲ್ಸಿ ನಾಗರಾಜ್
ಈ ಈರುಳ್ಳಿ ಬಗ್ಗೆ ನನಗೆ ತುಂಬಾ ಕುತೂಹಲವಿತ್ತು , ಸಿಪ್ಪೆಯಾದ ನಂತರ ಸಿಪ್ಪೆ , ಅದರ ನಂತರ ಮತ್ತೊಂದು ಸಿಪ್ಪೆ ಮಗದೊಂದು ಸಿಪ್ಪೆ
ಸಿಪ್ಪೆ , ಸಿಪ್ಪೆ ಬರೀ ಸಿಪ್ಪೆ , ಸುಲಿಯುತ್ತಾ ಹೋದರೆ ಕೊನೆಗುಳಿಯುವುದು ಬರೀ ಶೂನ್ಯ ; ತೊಗರಿ ಬಿಡಿಸಿದರೆ ಅದರೊಳಗೆ ಮಣಿಗಳಂತೆ ಕುಂತ ಕಾಳು , ಅದರೊಳಗೊಂದು ಬೀಜಭ್ರೂಣ ; ಒಣಗಿಸಿಟ್ಟರೆ ಸುಪ್ತಾವಸ್ಥೆಯಲ್ಲಿ ಕಾಯುತ್ತದೆ ತಾಯಿಯೊಬ್ಬಳ ಹರವಿ , ಗುಡಾಣ ಮತ್ತು ವಾಡೆಯಲ್ಲಿ
ಆಕಾಶ ಮಿಂಚಿ ತೆನೆಯಂತೊಡೆದು , ಭೂಮಿಯ ಮೇಲೆ ಅದನೇ ತೋರುತ ಮಕ್ಕಳಿಗೆ ಸಜ್ಜಿಗೆ ತಿನಿಸುವ ಮುದುಕಿ ಕೊಂಕಿ ಕೆರೆದಾಡುತ್ತಾಳೆ ಮನೆ ಮಂದಿಯನ್ನ , ಗೊಣಗುತ್ತಾಳೆ , ಹಲುಬುತ್ತಾಳೆ , ಕಾಪಿಟ್ಟ ಬೀಜಕ್ಕೆ ಮಣ್ಯಾಕೆ ಸಿದ್ಧವಾಗಲಿಲ್ಲ ಅಂತಾ
ಆದರೆ ಪಾಪ ಈರುಳ್ಳಿ ಇದೆಯಲ್ಲಾ ಅದಕ್ಕೆ ಅದೇನು ಗೊತ್ತಿಲ್ಲ , ಈ ಈರುಳ್ಳಿ , ಅದೇ ಬಂದು ಭಾಷಣ ಮಾಡಿ ಸನ್ಮಾನ ಮಾಡಿಸಿಕೊಂಡು ಹೋದ ಆ ಈರುಳ್ಳಿಗೆ ಅದೆಂತಾ ಅಹಂಕಾರ , ಅದೆಂತಾ ಠೀವಿ , ಅದೆಂತೆಂತಾ ಕಿರೀಟಗಳು
ಆದರೆ ಅಡುಗೆ ಮನೆಗೆ ತಂದು ಸುಲಿದರೆ ಒಂದು ಪದರ ಕೊಳೆತು , ಇನ್ನೊಂದು ಪದರಕ್ಕೆ ಸೋಂಕಿ , ಸೋಂಕಿದ ಎರಡೂ ಪದರಗಳನ್ನೂ ಸುಲಿದು ಬಿಸಾಕಿ ಉಳಿದದ್ದೇನು
ತಮಾಷೆ ಎಂತದು ಅಂದರೆ ಈ ಈರುಳ್ಳಿ ಇದೆಯಲ್ಲಾ ಇದು ತನ್ನಿಂದ ತಾನೇ ಒಂದು ಸ್ವತಂತ್ರ ತರಕಾರಿಯಲ್ಲ , ಈ ಈರುಳ್ಳಿಯನ್ನ ಒಂದು ಬದನೆಕಾಯಿ , ಅಥವಾ ಕ್ಯಾರೆಟ್ಡು ಅಥವಾ ಟೊಮಾಟೊ ಅಥವಾ ಸುವರ್ಣಗೆಡ್ಡೆ ಅಥವಾ ಎಂಥದಾದರೂ ಒಂದು ಅದರ ಜೊತೆಗೆ ಬೇಯಿಸಿದಾಗಲೇ ಇದಕ್ಕೊಂದು ಅಸ್ತಿತ್ವ ಮತ್ತು ಅಸ್ಮಿತೆ
ಆದರೂ ಈ ಈರುಳ್ಳಿಯ ಅಹಂಕಾರ ಬಲು ಮಹತ್ತಿನ ಅಹಂಕಾರ , ‘ಜಗತ್ತಿನ ಸಕಲ ತರಕಾರಿಗಳಿಗೂ ರುಚಿ ಕೊಡುವ ನಾನೇ ರಾಜ , ನಾನೇ ಪ್ರಧಾನಿ , ನಾನೇ ಕೊತ್ತಂಬರಿ ; ಹಿಂಗೆ ಪಟ್ಡಿ ಕಟ್ಟುತ್ತಾ ಈ ಈರುಳ್ಳಿ ಬರಿ ಬೆತ್ತಲೆಯೂ ಆಗದಂತೆ ಬರೀ ಸಿಪ್ಪೆಗಳು , ಸಿಪ್ಪೆ ಮತ್ತು ಸಿಪ್ಪೆ ಮತ್ತು ಸಿಪ್ಪೆ ಮತ್ತೂ
ಅಲ್ಲಾ ಸಾರ್ , ಈ ಈರುಳ್ಳಿಗೆ’ ನಾನು ಬರಿ ಈರುಳ್ಳಿ , ನಾನು ಮುಖ್ಯವಾಗಬೇಕಾದರೆ ಇತರೆ ತರಕಾರಿಗಳು ಕೂಡ ಲೆಕ್ಕಕ್ಕಿರಬೇಕು’ ಅಂತಾ ಒಂದು ಗ್ಯಾನ ಇರಬೇಡವಾ ಸಾರ್
ಸಾರ್, ಈ ಈರುಳ್ಳಿ ಇದೆಯಲ್ಲಾ ಸಾರ್ , ಇದು ಹಿಂಗೆ ಆತ್ಮವೇ ಇಲ್ಲದ ದೇಹಕ್ಕೆ !
ಆತ್ಮದ ಕತೆ ಎಲ್ಲೀ ಸಾರ್ ? ಸುಲಿದೂ ಸುಲಿದೂ ಸುಲಿದೂ ಇಲ್ಲದಂತಾಗಿಬಿಡುವ ಈ ಶೂನ್ಯ ಸರದಾರನಿಗೆ
ಸಾರ್, ಅದೆಂತಾ ಕಿರೀಟ ಇಡ್ತಿದೀರಾ ಸಾರ್ ! ?






0 Comments