ಆರ್ ತಾರಿಣಿ ಶುಭದಾಯಿನಿ ಓದಿದ – ಎಸ್ ಜಿ ಸಿದ್ಧರಾಮಯ್ಯ ಅವರ ಆತ್ಮಕಥನ ‘ಯರೆಬೇವು’

ಯರೆಬೇವು ‘ಬೋಧಿವೃಕ್ಷ’ವಾಗಿ ಬೆಳೆದ ಕಥೆ

ಆರ್ ತಾರಿಣಿ ಶುಭದಾಯಿನಿ

‘ಯರೆಬೇವು’ ಎನ್ನುವುದು ಎಸ್.ಜಿ.ಸಿದ್ಧರಾಮಯ್ಯನವರ ಆತ್ಮಕಥನ. ಅಪ್ಪಟ ದೇಸಿ ಸಮಾಜದಿಂದ ಬಂದ ಎಸ್‌ಜಿಎಸ್‌ ಅವರು ತಮ್ಮ ಆತ್ಮಕಥನಕ್ಕೆ ನೆಲಮೂಲ ರೂಢಿಪದವನ್ನೇ ಆಯ್ದುಕೊಂಡಿದ್ದಾರೆ. ಯರೆಬೇವು ಎನ್ನುವುದು ಹೆಬ್ಬೇವು; ಅದರ ಗಾತ್ರ ಸಾದಾ ಬೇವಿನದಕ್ಕಿಂತ ಹಿರಿದಾಗಿದ್ದು ಅದರ ಬೀಜ ದಪ್ಪನಾಗಿ ಒಳಗೆ ಇರುತ್ತದೆ. ಅಷ್ಟರಮಟ್ಟಿನ ದಡ್ಡತನವನ್ನು ಎತ್ತಿ ಹೇಳಲೆಂದು ಸ್ಥಳೀಕರು ಬಳಸುತ್ತಿದ್ದುದು ಯರೆಬೇವಿನ ಉಪಮೆಯನ್ನು. ‘ದಡ್ಡ ದಡ್ಡ’ ಎಂದು ಹೇಳಲ್ಪಟ್ಟ ಹುಡುಗನೊಬ್ಬ ತನ್ನ ಹಳ್ಳಿ, ಪರಿಸರ ದಾಟಿ ಶಿಕ್ಷಣದಿಂದ ವಿಕಸಿತನಾಗುವುದು, ಬದುಕು ಕಟ್ಟಿಕೊಡುವ ವೃತ್ತಿಯನ್ನು ಪಡೆದುಕೊ‘ಎಲ್ಲವೂ ಒಂದು ಸಾಧನೆಯ ಗಾಥೆಯೇ ಎನ್ನಿಸಿ ಈ ಆತ್ಮಕತೆ ಮೂಡಿರಬೇಕು.

ಆತ್ಮಕಥನ ಎನ್ನುವುದು ಹೇಗಿರಬೇಕು? ಅದರ ಸ್ವರೂಪ ಏನು ಎನ್ನುವುದರ ಬಗ್ಗೆ ಹಲವಾರು ಜಿಜ್ಞಾಸೆಗಳಿವೆ. ಆತ್ಮದ ಕತೆಯೆನ್ನುವುದು ಒಂದರ್ಥದಲ್ಲಿ ವಾಸ್ತವ, ಕಾಲ್ಪನಿಕ ಎರಡೂ ಆಗಿರುತ್ತದೆ. ಜೀವನವೆನ್ನುವುದನ್ನು ಡೈರಿಯ ಪುಟಗಳನ್ನಿಟ್ಟುಕೊಂಡು ಬರೆದರೂ ಬರೆಯುವವರ ಮನೋಧೋರಣೆ ಕಾಲದೇಶಗಳ ಸಾಪೇಕ್ಷತೆಯನ್ನು ಅವಲಂಬಿಸಿ ಒಂದು ಫಿಕ್ಷನ್ ಆಗಿರುತ್ತದೆ. ಮೇಲಾಗಿ ಉತ್ತಮಪುರುಷ ನಿರೂಪಣೆಯ ಸಂಗತಿಗಳು ಎಂದಿಗೂ ಒಮ್ಮುಖದಲ್ಲಿ ತೀರ್ಮಾನವಾಗುವಂತವಲ್ಲ. ಒಂದು ನಿರೂಪಣೆಯನ್ನು ಛೇದಿಸುವ ಹಲವು ಅಡ್ಡರೇಖೆಗಳು ಅಲ್ಲಿ ಹಾದುಹೋಗಿರುತ್ತವೆ. ಈ ದೃಷ್ಟಿಯಿಂದ ಎಸ್‌ಜಿಎಸ್‌ ಅವರ ಆತ್ಮಕಥನವನ್ನು ನೋಡಿದರೆ ತನ್ನ ಧಾತುಶಕ್ತಿಯನ್ನು ಧೇನಿಸುವ ಒಂದು ಸಕಾರಾತ್ಮಕ ಧೋರಣೆಯ ಪಾರ್ಶ್ವಕಥನವಾಗಿ ಮೂಡಿದೆ ಎನ್ನಬಹುದು.

ಆತ್ಮಕಥನ ಎಂದು ಕರೆದಿದ್ದರೂ ತಮ್ಮ ಬದುಕಿನ ಕೆಲವು ಗತಿಗಳನ್ನು ಮಾತ್ರವೇ ಎಸ್‌ಜಿಎಸ್‌ ಇಲ್ಲಿ ನೆನೆದಿದ್ದಾರೆ. ಇದರಲ್ಲಿ ಮನೆ, ಹಳ್ಳಿ, ಕುಟುಂಬ, ಶಿಕ್ಷಣ, ವೃತ್ತಿಗಳಿಗೆ ಪ್ರಾಧಾನ್ಯ ಇದ್ದು ಅವರು ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡ ಜೀವನದ ಕಥನ ಇಲ್ಲಿಲ್ಲ. ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹತ್ತು ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡು, ಹಿಂದುಳಿದ ಜಾತಿ/ವರ್ಗಗಳ ವಕ್ತಾರನಾಗಿ ಗುರುತಿಸಿಕೊಂಡ ಸಿದ್ಧರಾಮಯ್ಯನವರ ವ್ಯಕ್ತಿತ್ವದ ಸಿಡಿಲು, ಮಿಂಚುಗಳೇನೂ ಇಲ್ಲದೆ ಇಲ್ಲಿ ‘ಸಿಂಗುಸಿ’ (ಲೇಖಕರ ಆಪ್ತರು ಅವರನ್ನು ಕರೆಯುವ ಹೆಸರು) ಮಾತ್ರ ಮುನ್ನೆಲೆಗೆ ಬಂದಿದ್ದಾರೆ.

ಇದು ಒಂದು ದೃಷ್ಟಿಯಿಂದ ಉದ್ದೇಶಪೂರ್ವಕವೇ ಎನ್ನಿಸುತ್ತದೆ. ಏಕೆಂದರೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಂಡುಂಡ ಅನುಭವಗಳನ್ನು ಅವರು ಈಗಾಗಲೇ ಪುಸ್ತಕಗಳನ್ನು ಬರೆದು ದಾಖಲಿಸಿದ್ದಾರೆ. ಕನ್ನಡ ಜಗತ್ತು ಬ್ಯೂರೋಕ್ರಸಿ ಹಾಗೂ ಹಿಪೊಕ್ರಸಿಗಳಿಗೆ ಮುಖಾಮುಖಿಯಾಗುವ ಕಥನವನ್ನು ಅಲ್ಲಿ ಬರೆದಿದ್ದಾರೆ. ಈ ಕೃತಿಯಲ್ಲಿ ಅವರ ಆ ಅನುಭವಗಳಿಗೆ ಆದ್ಯತೆ ಇಲ್ಲ. ತಮ್ಮ ಬದುಕಿನ ಗತಿಯನ್ನು ಮುಚ್ಚಿಬಿಚ್ಚಿ ಹೇಳುವುದಕ್ಕಿಂತ ಅಥವಾ ಇನ್ನೊಬ್ಬರ ಗುಟ್ಟು ರಟ್ಟು ಮಾಡುವ ಆನಂದಕ್ಕಿಂತ ಹೊರತಾಗಿ ನೇರವಾಗಿ ನಿರೂಪಣೆ ಮಾಡುವುದನ್ನೇ ಎಸ್‌ಜಿಎಸ್‌ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆ ದೃಷ್ಟಿಯಿಂದ ಇದು ಪೂರ್ಣಪ್ರಮಾಣದ ಆತ್ಮಕಥನವಲ್ಲ.

‘ಬದುಕು ಮಾಡುವುದು’ ಎಂದರೆ ನಿತ್ಯದ ಜೀವನವನ್ನು ಹೋರಾಟ ಮಾಡಿ ಅದನ್ನು ನಿಜಗೊಳಿಸಿಕೊಳ್ಳುವುದು. ಇದು ‘ಅನುದಿನದ ಅಂತರಗಂಗೆ’. ಇದನ್ನು ದಾಟಿಕೊಳ್ಳುವುದನ್ನು ತಾನು ನಿರೂಪಿಸುತ್ತೇನೆ ಎನ್ನುವ ರೀತಿಯಲ್ಲಿ ಈ ಕೃತಿಯ ಓಘ ಇದೆ. ಇದೊಂದು ಬಗೆಯ plain speak ಎನ್ನಬಹುದು. ತಮ್ಮ ಬಾಲ್ಯದ ನೆನಪುಗಳು, ಹಳ್ಳಿಗಳು, ಕುಲ ಸಂಸ್ಕಾರಗಳು, ತಾವು ಅನ್ನಕ್ಕಾಗಿ ಮಾಡಿದ ಹೋರಾಟಗಳನ್ನು ಯಾರಾದರೊಬ್ಬ ಆಪ್ತಮಿತ್ರರ ಮುಂದೆ ಬಿಚ್ಚಿಡುವಂತೆಯೇ ಸರಳವಾಗಿ ಹೇಳಲಾಗಿದೆ. ಹಾಗೆ ಈ ಆತ್ಮಕತೆಯಲ್ಲಿ ತಮ್ಮ ನಂಬಿಕೆ, ಸಂಪ್ರದಾಯಗಳಿಗೆ ಅನುಗುಣವಾಗಿ ಬದುಕು ಸಾಗಿಸುವಂತಹ ಪಶುಪಾಲನ ಕುಲಕುಟುಂಬದಲ್ಲಿ ಹುಟ್ಟಿ ಶಿಕ್ಷಣದತ್ತ ಹೊರಳಿಕೊಂಡಿದ್ದು ಒಂದು ಮಜಲಾದರೆ, ಶಿಕ್ಷಣಕ್ಕೆ ತೆರೆದುಕೊಂಡು ಆ ಮೂಲಕ ಹಲವು ಬದುಕುಗಳನ್ನು ಕಂಡಿದ್ದು ಇನ್ನೊಂದು ಮಜಲು. ಹಳ್ಳಿಯ ಸಂಸ್ಕೃತಿಯಿಂದ ನಗರ ಸಂಸ್ಕೃತಿಗೆ ಮುಖಾಮುಖಿಯಾಗಿ ಅಸ್ತಿತ್ವವನ್ನು ಕಟ್ಟಿಕೊಂಡ ಕಥನ ಮಾತ್ರ ಇಲ್ಲಿದೆ. ಕನ್ನಡದ ಒಬ್ಬ ಕವಿಯಾಗಿ ಗುರುತಿಸಲ್ಪಟ್ಟ ಎಸ್‌ಜಿಎಸ್‌ ವ್ಯಕ್ತಿತ್ವಕ್ಕೆ ಅಷ್ಟಾಗಿ ಪ್ರಾಶಸ್ತ್ಯ ಸಿಕ್ಕಿಲ್ಲ. ಇದಕ್ಕೆ ಪ್ರಾಯಶಃ ಅವರು ತಮ್ಮನ್ನು ತಾವು ಸಿದ್ಧರಾಮಯ್ಯನೆಂಬ ಮನುಷ್ಯನ ಕತೆಯನ್ನು ಮಾತ್ರ ಹೇಳಬೇಕೆಂದಿರುವುದು ಕಾರಣವಿರಬಹುದು. ಇಲ್ಲಿ ಒತ್ತು ನೀಡಿರುವುದು ಅನ್ನದ ಹೋರಾಟ ಹಾಗೂ ಶಿಕ್ಷಣದ ಹೋರಾಟಗಳಿಗೆ.

ಭಾರತದಂತಹ ಜಾತಿಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜಾತಿಗಳಿಂದ ಹಲವಾರು ಸಾಂಸ್ಕೃತಿಕ ಸಂಗತಿಗಳನ್ನು ದತ್ತವಾಗಿ ಪಡೆದುಕೊಂಡಿರುತ್ತಾನೆ/ಳೆ. ಅದರ ಜೊತೆಗೆ ಆ ಜಾತಿಕುಲಗಳ ‘ಟ್ಯಾಬೂ’ಗಳಿಂದಲೂ ನಿರ್ಬಂಧಿಸಲ್ಪಡುತ್ತಿರುತ್ತಾನೆ/ಳೆ. ಸಿದ್ಧರಾಮಯ್ಯನವರು ಕುರುಬರ ಕುಲದಲ್ಲಿ ಹುಟ್ಟಿರುವುದನ್ನು ನಿವೇದಿಸಿಕೊಳ್ಳುತ್ತಲೇ ಹಳ್ಳಿಗಳಲ್ಲಿ ದಟ್ಟವಾಗಿರುವ ಜಾತಿಯ ಸಂಗತಿಗಳನ್ನು ನೆನೆಯುತ್ತಾರೆ. ಇಲ್ಲಿ ಅವರು ತಮ್ಮ ಕುಲದಿಂದ ತೆರೆದುಕೊಂಡ ಒಂದು ಜಾನಪದ ಲೋಕ, ತಿಳಿವಳಿಕೆಯನ್ನು ನಿರಾಕರಿಸಿ ಹೋಗಬೇಕು ಎನ್ನುವ ಹುಸಿ ಇರಾದೆಯನ್ನು ಇಟ್ಟುಕೊಂಡಿಲ್ಲ. ತಾವು ಒಂದು ಜಾತಿಗೆ ಸೇರಿದ ಮನುಷ್ಯ ಎಂದು ಹೇಳಿಕೊಳ್ಳುತ್ತಲೇ ಅಲ್ಲಿಂದ ಒಂದು ಜಗತ್ತು ತೆರೆದುಕೊಂಡಿದ್ದನ್ನು ಮುಗ್ಧತೆಯ ಕಣ್ಣಿನಿಂದ ನೋಡಿರುವುದನ್ನು ಹೇಳಿದ್ದಾರೆ.

ಕುಟುಂಬದ ವಿವರಗಳನ್ನು ಹೇಳುವಾಗ ನಡುನಡುವೆ ಶರಣ ಚಳವಳಿಯ ಪ್ರಸ್ತಾಪವೂ ಬರುತ್ತದೆ. ತಮ್ಮ ಕುಲದವರು ಆಚರಿಸುತ್ತಿದ್ದ ಹಬ್ಬಗಳು, ‘ವಾರಗಳು’; ಅವರು ತೆಗೆದುಕೊಳ್ಳುತ್ತಿದ್ದ ಗೊರವರ ದೀಕ್ಷೆ ಇತ್ಯಾದಿಗಳನ್ನು ಅವರು ವಿವರವಾಗಿ ಬರೆದಿದ್ದಾರೆ. ಅವರ ಅಮ್ಮನೇ ಗೊರವತಿ ಆಗಿ ದೀಕ್ಷೆ ತೆಗೆದುಕೊಂಡವರು ಎನ್ನುವುದನ್ನು ಸಹ ಇಲ್ಲಿ ಹೇಳಿದ್ದಾರೆ. ಹಾಗೆಂದು ತಮ್ಮ ಕುಲಾಚಾರಗಳನ್ನೇ ವೈಭವೀಕರಿಸಿಕೊಳ್ಳುವುದಿಲ್ಲ. ಶಿಕ್ಷಣಕ್ಕೆ ತೆರೆದುಕೊಂಡಂತೆ ಜಾತಿಯ ಭೇದಗಳು ಹಲವಾರು ಸಮುದಾಯಗಳಿಗೆ ಮಾಡಿದ ಗಾಯಗಳ ಬಗೆಗೂ ಅರಿವು ಹೆಚ್ಚಿ ಅದರ ವಿರುದ್ಧ ಹೋರಾಟಗಳಿಗೆ ಇಳಿಯುತ್ತಾರೆ.

ಶಿಕ್ಷಣದ ಮಹತ್ವ ಮನಗಂಡ ಲೇಖಕರು ಅದರ ಇಂಚಿಂಚೂ ವಿವರಗಳನ್ನು ಇಲ್ಲಿ ದಾಖಲಿಸಿದ್ದಾರೆ. ಮುಖ್ಯವಾಗಿ ಎಲ್ಲ ಗ್ರಾಮೀಣ ಹುಡುಗರಿಗೂ ಕಷ್ಟವಾಗುವ ಗಣಿತ ಮತ್ತು ಇಂಗ್ಲಿಷಿನ ಬೇಗೆಯೂ ಇಲ್ಲಿದೆ. ಎಸ್‌ಜಿಎಸ್‌ ಅವರ ತಲೆಮಾರಿನವರು ವಸಾಹತುಶಾಹಿ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿದ್ದ ಮೊದಲ ತಲೆಮಾರು. ಹಾಗಾಗಿ ಅವರ ಅನುಭವಗಳು ಸಂಘರ್ಷಾತ್ಮಕವೂ ಜ್ಞಾನಸ್ಫೋಟಕ್ಕೆ ಕಾರಣವೂ ಆಗಿ ಅವರನ್ನು ಬೆಳೆಯಿಸುತ್ತವೆ. ಅಂಬೇಡ್ಕರ್ ಹೇಳುವ ಶಿಕ್ಷಣದ ಮಂತ್ರವೇ ಎಸ್‌ಜಿಎಸ್‌ ಅವರ ಬಾಳಲ್ಲಿಯೂ ಮಂತ್ರವಾಗಿದ್ದರಿಂದ ಅವರು ಹಲ್ಲುಕಚ್ಚಿ ಕಷ್ಟವಾದರೂ ಶಿಕ್ಷಿತನಾಗುವ ಆಕಾಂಕ್ಷೆ ಇಟ್ಟುಕೊಳ್ಳುತ್ತಾರೆ. ಕನ್ನಡ ಎಂ.ಎ ಓದುವ ಅವಕಾಶ ಸಿಕ್ಕಾಗ ಅವರ ಓದು, ಅವರ ಬಳಗ ಎಲ್ಲವೂ ಬೆಳೆದು ವಿಶ್ಲೇಷಣಾತ್ಮಕವಾಗಿ ವಿಷಯಗಳನ್ನು ಅರ್ಥೈಸಿಕೊಳ್ಳುವ ಮಟ್ಟಿಗೆ ಅವರ ತಿಳಿವಳಿಕೆ ಬೆಳೆಯುತ್ತದೆ. ಈ ಅರಿವು ಅವರನ್ನು ಒಬ್ಬ ಒಳ್ಳೆಯ ಶಿಕ್ಷಕನಾಗಲು ಪ್ರೇರಣೆ ನೀಡಿರಬೇಕು. ತಮ್ಮ ವೃತ್ತಿ ಜೀವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡುತ್ತಾ ಮಾಡುತ್ತಾ ಅವರನ್ನು ಬೆಳೆಸಿ ತಾವೂ ಬೆಳೆದೆನೆನ್ನುವ ಸಾರ್ಥಕತೆಯೊಂದಿಗೆ ಜೀವನಗಾಥೆ ಮುಗಿಯುತ್ತದೆ.

ಸಹಪಾಠಿಗಳ ವೈಶಿಷ್ಟ್ಯ, ಬಂಧುಗಳ ಗುಣಸ್ವಭಾವ ಇತ್ಯಾದಿಗಳ ಸಣ್ಣ ಸಣ್ಣ ವಿವರಗಳೂ ಇಲ್ಲಿ ಮೈದುಂಬಿಕೊಳ್ಳುತ್ತವೆ. ಬಾಳಸಂಗಾತಿ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸುವಾಗ ತಮ್ಮ ತೊಡಗುವಿಕೆಗಳಲ್ಲಿ ಆ ಇನ್ನೊಂದು ಜೀವವನ್ನು ನಿರ್ಲಕ್ಷಿಸಿದೆನೇ ಎನ್ನುವ ಕೊರಗು ಕೃತಿಯಲ್ಲಿ ಕಾಣುತ್ತದೆ. ಈ ಕನ್‍ಫೆಶನ್ ಬಿಟ್ಟರೆ ಕೃತಿಯಲ್ಲಿ ಅವರು ಸಮಚಿತ್ತರು. ಬದುಕು ಕೊಡುವ ಅನುಭವವನ್ನೆಲ್ಲ ಸ್ವೀಕರಿಸುತ್ತೇನೆ ಎನ್ನುವ ಅವರ ಮನಃಸ್ಥಿತಿಯೇ ಕೃತಿಯನ್ನು ನಿರೂಪಿಸಿದೆ.

ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://bit.ly/3lhx0Ed

ಕೃತಿ: ಯರೆಬೇವು
ಲೇಖಕರು : ಎಸ್.ಜಿ.ಸಿದ್ಧರಾಮಯ್ಯ
ಪ್ರಕಾಶಕರು: ಬಹುರೂಪಿ
ಸಂಪರ್ಕಿಸಿ : 70191 82729

‍ಲೇಖಕರು Admin

May 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: