ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಎನ್ ದರ್ಗಾದವರ ಕವಿತೆ – ರೂಪವತಿ…

ಆರ್ ಎನ್ ದರ್ಗಾದವರ

ಯಾವ ಹೂವಿಗೆ ಒಡತಿಯಂತಿದ್ದಳೋ
ಅಂತದ್ದೇ ಹೂವಿಂದ ದೂರವಾದಳು
ಮುಡಿಯುತ್ತಿದ್ದ ಗುಲಾಬಿ ಮಲ್ಲಿಗಿತ್ಯಾದಿ
ಅವಳನ್ನ ಸಂಪೂರ್ಣ ಅಲಂಕರಿಸಿ
ಸೊಕ್ಕಿನಿಂದ ಹಿಗ್ಗುತ್ತಿದ್ದವು
ಕಪ್ಪು ಕೂದಲು ಅಭಿಮಾನದಿಂದ ಹಾರಾಡುತ್ತಿದ್ದ
ಕಾಲವಿತ್ತು
ಇಂದು ಬಿದಿರು ಹೆಣೆದ ಸವಾರಿಗೆ ಸಿದ್ಧವಾದವಳ ಮೇಲೆ
ಕರಿ ತಲೆಯು ಹೂವನ್ನು ಅಪ್ಪಿಕೊಂಡಿಲ್ಲವೆಂದಲ್ಲ
ಮೊದಲಿಗಿದ್ದ ಹಿಗ್ಗುವಿಕೆ ಕಾಣುತ್ತಿಲ್ಲ
ಅಸಲಿಗೆ ಹೂವಿಗೇನು ಕೋಪವಿಲ್ಲ
ಅದೇ ಹೂವುಗಳು ಅವಳನ್ನ ಮಲಗಿದ್ದಲ್ಲೇ ಶೃಂಗಾರಗೊಳಿಸಿವೆ

ಯಾವ ಬಣ್ಣದ ಸೀರೆಗಳು ಸೌಂದರ್ಯವನ್ನು
ಒಡಲಿನಲ್ಲಿ ಅಡಗಿಸಿಟ್ಟದ್ದವೋ
ಅದಾವ ಚಲುವು ಅವಳ ಬಳಿಯಿಲ್ಲ
ಬಿಳಿ ಬಟ್ಟೆಗೆ ಯಾವ ಹೊಳಪು ಇಲ್ಲ
ಕೆಂಪಗಿದ್ದ ತುಟಿಗಳು ಕಪ್ಪು ಬಣ್ಣಕ್ಕೆ ತಿರುಗಿ
ಯೌವನದ ಕಾವಿನಿಂದ ಮಿಂಚುತ್ತಿದ್ದ ಮೈಯಲ್ಲ
ಬಾತು ಬಸಿಯುತ್ತಿರುವಾಗ
ಅವಳು ರೂಪವತಿ ಹೇಗಾದಳು..?

ಹೌದು,
ಅವಳು ರೂಪವತಿಯೇ ಸರಿ
ನಾಲ್ಕು ಚಲುವೆಯರ ರೂಪವಿತ್ತು ಅವಳಲ್ಲಿ
ಪಾಂಡವರನ್ನು ಸಂತೈಸಿದ ದ್ರೌಪದಿ
ದೇವತೆಯಾದಳು
ಮಧ್ಯಮನಿಂದ ಅಧಮನ ವರೆಗೂ
ಸಂಜೆಗತ್ತಲು ಅಪ್ಪಿಕೊಳ್ಳಲು ಸೂಚಿಸುತ್ತಿದ್ದಂತೆ
ತೆಕ್ಕೆಗೆ ಬಂದವರಲ್ಲಿ ಯಾವ ಪಾಂಡವನು ಸಿಗಲಿಲ್ಲ
ದೇವತೆಯ ಪಟ್ಟವೂ ದೊರೆಯಲಿಲ್ಲ
ಯಾವ ವೀರನ ಅಗಮನಕ್ಕಾಗಿ ಇಷ್ಟೊಂದು ಶೃಂಗಾರ
ಲೋಕದ ಹಂಗನು ತೊರೆದು ಹೋಗುವ ಕೊನೆ ಕ್ಷಣಕ್ಕಾದರೂ
ಸಹಜವಾಗಿ ಇರಬಾರದಿತ್ತೆ…

‍ಲೇಖಕರು Admin

24 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading