ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಎನ್ ದರ್ಗಾದವರ ಕವಿತೆ- ಐದು ಸತ್ಯಗಳು…

ಆರ್ ಎನ್ ದರ್ಗಾದವರ

ಹೊಸ್ತಿಲದೊಳಗೆ ಆಡುತ್ತಾ ಬಿದ್ದ ಬಡತನ
ನೋಡಿ
ಅಪ್ಪ ಹೇಳುತ್ತಿದ್ದ;ಇವನೇ ಒದ್ದೋಡಿಸುತ್ತಾನೆ ಇರು
ಅವ್ವ ಕರಿಹೊಲದ ಮೇರೆಯಲಿ ಬಿಸಿಲು ನೋಡಿ;
ಇವನೇ ನೆರಳಾಗುತ್ತಾನೆ ಇರಿ
ಇಬ್ಬರ ಕಣ್ಗಳ ದೂರದೃಷ್ಟಿಯಲಿ
ಸೂಟುದಾರಿ ಮನುಷ್ಯರು ನಾವು

ಭತ್ತ ಬೆಳೆಯುವ ನನ್ನಪ್ಪ
ಪಡಸಾಲಿಯಲಿ ಅನ್ನ ಉಣ್ಣುವ ಕನಸು ಬಿದ್ದಾಗಲೊಮ್ಮೆ
ನಡು ರಾತ್ರಿಯಲ್ಲೂ ಅವ್ವನನ್ನೆಬ್ಬಿಸಿ ತಣ್ಣನೆ ನೀರನ್ನು ಕೇಳುತ್ತಾನೆ
ಮೂರು ದಿನದ ಹಸಿವು ಮಾಯವಾಗಿ
ಸಣ್ಣದನಿಯಲಿ ಪದವನು ಹಾಡಿ ಗೊರಕೆಯಲಿ ಕನಸು ಕಾಣುತ್ತಾನೆ

ಆಗಸ್ಟ್ ಹದಿನೈದರ ಹಬ್ಬಕ್ಕೆ
ಪೈಯಾ ಕೊಟ್ಟು ತಂದ ತ್ರಿವರ್ಣಧ್ವಜವ ನೋಡಿ
ಅಪ್ಪ ಹೇಳುತ್ತಲೇ ಇದ್ದ; ನಿಮ್ಮಜ್ಜನ ರಕ್ತವಿದೆ
ಇದರಲ್ಲಿ ಜೋಪಾನ !
ಯಾರ ಸ್ವಾತಂತ್ರ್ಯಕ್ಕೂ ತಂತಿಬೇಲಿಯಾಗಬೇಡ

ದಾರಿಹೋಕನೊಬ್ಬ ‘ಯಾವ ಜಾತಿಯವ್ರು ಎಂದಾಗ
ಅಪ್ಪ;ಮನಸ್ಶ ಜಾತಿ ರ್ರಿ ಎಂದದ್ದು
ಯಾವ ಪಠ್ಯದಲ್ಲಿಯೂ ಕಾಣಸಿಗದಿದ್ದದ್ದು
ಅಭಿವೃದ್ಧಿಯ ಮೊದಲ ಹೆಜ್ಜೆ

ಸ್ವಾತಂತ್ರ್ಯದ ಕತೆಗಳನು ಕಂತೆ ಕಂತೆ ಮಾಡಿ ಹೇಳುತ್ತಿದ್ದ ಅವ್ವ
ಹೊರ ಹೋಗದಂತೆ ಕಣ್ಣೀರ ಅಡ್ಡಾಕಿಸಿ ಕಟ್ಟಪ್ಪಣೆ ಹಾಕಿದ್ದಾಳೆ
ಕವಿತೆ ಬರೆದವನ ಗುರುತು ಸಿಗದಿರಲೆಂದು ದಪ್ಪ ಮೀಸೆ ಹಚ್ಚಿದ್ದಾಳೆ

‍ಲೇಖಕರು Admin

28 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading