ರಾಜೀವ ನಾರಾಯಣ ನಾಯಕ
ಸಾಂಸ್ಕೃತಿಕವಾಗಿ ಹರುಷ ತರುವ ನಾಡಿನ ಹಬ್ಬಗಳನ್ನು ಸಾಹಿತ್ಯಿಕ ಸಂಭ್ರಮವಾಗಿಸುವ ಪ್ರಯತ್ನವನ್ನು ಕನ್ನಡ ಪತ್ರಿಕೆಗಳು ಮಾಡುತ್ತಿವೆ. ಅದರಲ್ಲೂ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ ಮತ್ತು ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಗಳು ತಮ್ಮದೇ ಆದ ವಿಶಿಷ್ಟತೆ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ. ನಿನ್ನೆ ಸುಧಾ ವಾರಪತ್ರಿಕೆಯ “ಯುಗಾದಿ ಪ್ರಬಂಧ ಸ್ಪರ್ಧೆ 2020” ರ ಫಲಿತಾಂಶಗಳು ಬಂದಿವೆ. ಬಹುಮಾನ ವಿಜೇತರಿಗೆಲ್ಲರಿಗೂ ಅಭಿನಂದನೆಗಳು.
ನನ್ನ “ಘರ್ ಗುತಿ ” ಎನ್ನುವ ಪ್ರಬಂಧಕ್ಕೆ ಎರಡನೇ ಬಹುಮಾನ ಬಂದಿದೆ. ಈ ಹಿಂದೆ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯೂ ಸೇರಿ ವಿಜಯ ಕರ್ನಾಟಕ, ವಿಜಯವಾಣಿ, ತುಷಾರ ಮುಂತಾದ ಕಥಾ ಸ್ಪರ್ಧೆಗಳಲ್ಲಿ ನನ್ನ ಕತೆಗಳಿಗೆ ಬಹುಮಾನಗಳು ಬಂದದುಂಟು. ಆದರೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದೂ ಮೊದಲು, ಬಹುಮಾನ ಗಳಿಸಿದ್ದೂ ಮೊದಲು!
ಇರಲಿ, ಮುಖ್ಯವಾಗಿ ನನಗೆ ಹೇಳಬೇಕಾಗಿರುವುದು ಈ ಪ್ರಬಂಧ ಸ್ಪರ್ಧೆಯಲ್ಲಿ ಮೂರು ಬಹುಮಾನಗಳು ಮುಂಬೈನವರಿಗೆ ಬಂದಿವೆ. ನನಗೆ ಎರಡನೇ ಬಹುಮಾನ, ಶ್ರೀಮತಿ ಶ್ಯಾಮಲಾ ಮಾಧವ, ಶ್ರೀಮತಿ ಕಲಾ ಭಾಗ್ವತ್ ಅವರ ಪ್ರಬಂಧಗಳು ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿವೆ. ನಾಡಿನ ಬಹುಮುಖ್ಯವಾದ ಸ್ಪರ್ಧೆಯಲ್ಲಿ ಮೂರು ಬಹುಮಾನಗಳನ್ನು ಮುಂಬೈ ಕನ್ನಡಿಗರು ಗಳಿಸಿರುವುದು ಅಚ್ಚರಿಯೂ ಹೌದು, ಅಭಿನಂದನೀಯವೂ ಹೌದು! ಇದು ಹೊರನಾಡ ಕನ್ನಡಿಗರ ಪ್ರತಿಭೆ ಮತ್ತು ಕನ್ನಡಪ್ರೀತಿಗೆ ಮಾನದಂಡವಾಗಿದೆ ಅಂದರೂ ತಪ್ಪಿಲ್ಲ. ಅದೂ ಅಲ್ಲದೇ ಇದರಲ್ಲಿ ಹೊರನಾಡ ಕನ್ನಡಿಗರು ಇಂಥ ಸಾಹಿತ್ಯಿಕ ಸಾಂಸ್ಕೃತಿಕ ಸಂಬಂಧಗಳ ಮೂಲಕ ತಮ್ಮ ಮೂಲನೆಲದ ಅಸ್ಮಿತೆಯನ್ನು ಗಟ್ಟಿಗೊಳಿಸುವ ಪ್ರಯತ್ನವನ್ನೂ ಕಾಣಬಹದು.
ಮುಂಬೈ ಕನ್ನಡಿಗರ ಸಾಹಿತ್ಯ ಪ್ರೀತಿಗೆ ಇನ್ನೊಂದು ಆಯಾಮವೂ ಇದೆ. ಅಕ್ಷಯ, ಗೋಕುಲವಾಣಿ, ಸ್ನೇಹ ಸಂಬಂಧ, ನೇಸರು, ಮೊಗವೀರದಂಥ ಮುಂಬೈಪತ್ರಿಕೆಗಳು, ಮೈಸೂರು ಅಸೋಸಿಯೇಶನ್, ಜಗಜ್ಯೋತಿ ಕಲಾ ವೃಂದ, ಕನ್ನಡ ಭವನ ಎಜುಕೇಶನ್ ಸೊಸೈಟಿ ಮುಂತಾದ ಸಂಘ ಸಂಸ್ಥೆಗಳು ಕಥಾ ಸ್ಪರ್ಧೆಗಳನ್ನೂ, ಕಾವ್ಯ ಸ್ಪರ್ಧೆಗಳನ್ನೂ ಆಯೋಜಿಸುತ್ತಿವೆ. ಈ ವಾರ್ಷಿಕ ಸ್ಪರ್ಧೆಗಳಲ್ಲಿ ಒಳನಾಡಿನ ಉದಯೋನ್ಮುಖ ಮತ್ತು ಹೆಸರಾಂತ ಕವಿಗಳು, ಕತೆಗಾರರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.
ಬಹುಮಾನಿತರನ್ನು ಮುಂಬೈಗೆ ಕರೆಸಿ ಸನ್ಮಾನಿಸುವ ಸಂಪ್ರದಾಯವೂ ಇರುವುದರಿಂದ ಕವಿಗಳು, ಕತೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಎಷ್ಟೋ ಜನರಿಗೆ ಬಹುಮಾನದ ನೆಪದಲ್ಲಿ ಮುಂಬೈ ದರ್ಶನ ಪಡೆಯುವ ಅವಕಾಶವೂ ಸಿಗುವುದರಿಂದ ಇಲ್ಲಿ ತೀವ್ರ ಸ್ಪರ್ಧೆ ಇರುತ್ತದೆ. ಬಹುಮಾನಿತರನ್ನು ಕರೆಸಿ ಸತ್ಕರಿಸಿ ಅವರಿಗೆ ಮುಂಬೈ ದರ್ಶನದ ವ್ಯವಸ್ಥೆಯನ್ನೂ ಮಾಡಿಕೊಟ್ಟು, ಮುಂಬೈ ಬಗ್ಗೆ ಮಧುರ ಭಾವನೆಗಳೊಂದಿಗೆ ಮರಳುವ ಕವಿ ಕತೆಗಾರರನ್ನು ಕಂಡಾಗ ಮುಂಬೈ ಕನ್ನಡಿಗರಲ್ಲಿ ಕೂಡ ಅದೇನೋ ಧನ್ಯತೆಯ ಭಾವನೆ ಉಂಟಾಗುತ್ತದೆ.
ಇದು ಸಾಹಿತ್ಯಕ್ಕೆ ಮಾತ್ರ ಸೀಮಿತವಾದ ಮಾತಲ್ಲ. ಕಲೆ, ನಾಟಕ, ಸಂಗೀತ ಕ್ಷೇತ್ರಗಳಲ್ಲೂ ಇಂಥ ಅವಿನಾಭಾವ ಸಂಬಂಧ ನಿರಂತರವಾಗಿ ಮುಂದುವರಿದಿದೆ. ಮುಂಬೈ ಕರ್ನಾಟಕ ಸಂಘವು ಆಯೋಜಿಸುವ ಕುವೆಂಪು ನಾಟಕ ಸ್ಪರ್ಧೆಯಂತೂ ಒಳನಾಡಿನ ಸಾವಿರಾರು ಕಲಾವಿದರನ್ನು ಮುಂಬೈಗೆ ಬರುವಂತೆ ಮಾಡಿದೆ. ಆಯಾ ಕಲಾವಿದರ ಜೊತೆಗೆ ಅವರ ಕುಟುಂಬದ ಸದಸ್ಯರೂ ಬಂದು ಹೋಗುವುದುಂಟು.
ಮಹಾನಗರಿಯ ಧಾವಂತದ ಬದುಕಿನಲ್ಲೂ ಇಂಥ ಸಾಂಸ್ಕೃತಿಕ ಸಂಬಂಧವನ್ನು ಬೆಸೆಯಲು ಆಮ್ಚಿ ಮುಂಬೈ ಸದಾ ಮುಂದಿದೆ ಎನ್ನಲು ಹೆಮ್ಮೆಯಾಗುತ್ತಿದೆ.






ನಿಮ್ಮ ಅನಿಸಿಕೆ ಅಭಿಪ್ರಾಯ ತುಂಬ ಆಪ್ತ.. ಅಭಿನಂದನೆಗಳು.. ಭಾವಗಳನ್ನು ಭಾಷೆ ಬೆಸೆಯುವುದು ಸಣ್ಣ ಸಂಗತಿಯಲ್ಲ…
ಧನ್ಯವಾದ ಚಂದ್ರಪ್ರಭಾ ಮ್ಯಾಮ್..”ಭಾವಗಳನ್ನು ಭಾಷೆ ಬೆಸೆಯುವ …” ಸ್ವೀಟ್ ಕಾಂಪ್ಲಿಮೆಂಟ್ 🙂
Really heartening to learn about the literary activities of NRKs!