ಶಿವರಾಂ ಪೈಲೂರು ಹೊಸ ಪುಸ್ತಕ ಬಂದಿದೆ

ಸ್ವಾತಿ ಕೆ ಎಚ್ 

ಅಡಿಗೆಮನೆಯ ಸ್ವಿಚ್ ಬೋರ್ಡಿನಲ್ಲಿ ಆಗಾಗ ಗುಂಯ್ ಎನ್ನುವ ಶಬ್ದ ಬರುತ್ತಿತ್ತು. ಅಲ್ಲಿಗೆ ಹಾಕಿದ ಪ್ಲಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೊನೆಗೊಮ್ಮೆ ರಿಪೇರಿ ಮಾಡೋಣವೆಂದು ತೆಗೆದು ನೋಡಿದರೆ ಕಪ್ಪಗೆ ನೊಣಕ್ಕಿಂತ ಕೊಂಚ ಸಣ್ಣ ಗಾತ್ರದ ಹುಳುಗಳ ಗುಂಪೊಂದು ವೈರಿನ ಮೇಲೆ ಗೂಡು ಕಟ್ಟಿದ್ದವು. ಗೂಡನ್ನು ವೈರಿನಿಂದ ಬೇರ್ಪಡಿಸುವಾಗ ಜೇನಿನಂತೆ ಕಪ್ಪು ಬಣ್ಣಕ್ಕಿದ್ದ ದ್ರವವೊಂದು ಸುರಿಯತೊಡಗಿತು. ಸಮಸ್ಯೆ ಬಗೆಹರಿಯಿತು ಎಂಬುದಷ್ಟೇ ಮುಖ್ಯವಾದ್ದರಿಂದ ಆ ಹುಳುಗಳು ಯಾವುದು ಎನ್ನುವ ಬಗೆಗೆ ಅಷ್ಟು ಗಮನ ಹರಿದಿರಲಿಲ್ಲ.

ಲೇಖಕರಾದ ಶ್ರೀ ಶಿವರಾಮ ಪೈಲೂರು ಅವರ “ಚುಚ್ಚದ ಜೇನು” ಪುಸ್ತಕ ಓದಿದ ನಂತರ , ನಾವು ಮಾಡಿದ್ದ ಅನಾಹುತದ ಅರಿವಾಯಿತು. ನಾವು ಯಾವುದೋ ಹುಳುಗಳ ಗೂಡು ಎಂದು ಕಿತ್ತು ಎಸೆದದ್ದು ‘ಮುಜಂಟಿ ಜೇನಿ’ನ ಗೂಡು ಎಂದು. ಮತ್ತು ನಾವು ಎಸೆದ ಜೇನು ತುಪ್ಪದ ಬೆಲೆ ಹತ್ತಿರ ಹತ್ತಿರ ಒಂದು ಸಾವಿರ.

ಸಾಮಾನ್ಯವಾಗಿ ತುಡುವೆ ಜೇನು, ಹೆಜ್ಜೇನಿನ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಜೇನು ಅಂದ ತಕ್ಷಣ ಅದರ ರುಚಿಯನ್ನು ನೆನೆದು ಬಾಯಲ್ಲಿ ನೀರೂರುವುದರ ಜೊತೆಗೆ ಜೇನು ಹುಳುಗಳ ಕಡಿತದ ಬಗ್ಗೆ ಭಯವೂ ಮೂಡುತ್ತದೆ.
ಆದರೆ ಬಹುತೇಕರಿಗೆ ಮುಜಂಟಿ ಜೇನಿನ ಬಗ್ಗೆ ತಿಳಿಯದು. ಮಿಸ್ರಿ ಜೇನು , ನಸ್ರಿ, ಕಿರುಜೇನು ಎಂಬ ಇನ್ನಿತರ ಪ್ರಾದೇಶಿಕ ಹೆಸರುಗಳನ್ನು ಹೊಂದಿರುವ ಮುಜಂಟಿ ನೊಣಕ್ಕಿಂತ ಚಿಕ್ಕ ಗಾತ್ರ ಹೊಂದಿದೆ. ಹಳೆ ಗೋಡೆಯ ಬಿರುಕುಗಳಲ್ಲಿ , ಸ್ವಿಚ್ ಬೋರ್ಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಇವು ನಿರುಪದ್ರವಿ ಎಂದೇ ಹೇಳಬಹುದು. ಇತರೆ ಜೇನುಹುಳುಗಳಂತೆ ಮುಳ್ಳನ್ನು ಹೊಂದಿರದ ಮುಜಂಟಿ ಜೇನು ಹುಳುಗಳು ಜೇನು ಸಾಕಾಣಿಕೆ ಮಾಡಲು ಆಸಕ್ತಿ ಇರುವವರಿಗೆ ಉತ್ತಮ ಆಯ್ಕೆ. ನಗರಗಳಲ್ಲಿದ್ದು ಜೇನು ಸಾಕಾಣಿಕೆ ಮಾಡಲು ಆಸಕ್ತಿ ಇದ್ದರೂ, ಹುಳುಗಳ ಕಡಿತಕ್ಕೆ ಹೆದರಿಯೋ , ಅವಶ್ಯವಾದ ಗಿಡಮರಗಳ ಕೊರತೆಯಿಂದ ಸುಮ್ಮನೆ ಇರುವವರಿಗೆ “ಮುಜಂಟಿ ಜೇನು” ಸರಿಯಾದ ಆಯ್ಕೆ.

ಜೇನು ಸಾಕಾಣಿಕೆಯ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ತುಂಬಾ ಕಡಿಮೆ ಎಂದೇ ಹೇಳಬಹುದು. ಹಲವು ಪುಸ್ತಕಗಳು ಮೇಲ್ನೋಟದ ಮಾಹಿತಿಯನ್ನಷ್ಟೇ ಹೊಂದಿವೆ.
ನಿರ್ದಿಷ್ಟವಾಗಿ ಮುಜಂಟಿ ಜೇನಿನ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ ಪುಸ್ತಕ “ಚುಚ್ಚದ ಜೇನು ,ಎಲ್ಲರಿಗೂ ಅಚ್ಚುಮೆಚ್ಚು”.
ಲೇಖಕರು ಖುದ್ದು ಮುಜಂಟಿ ಜೇನಿನ ಸಾಕಾಣಿಕೆ ಮಾಡಿದ್ದು , ತಮ್ಮ ಅನುಭವಗಳನ್ನು ಕೂಡ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಮುಜಂಟಿ ಜೇನಿನ ಮಾಹಿತಿ ಹುಡುಕಾಟದಲ್ಲಿ ಕೇರಳ ಮತ್ತು ಇನ್ನಿತರ ಸ್ಥಳಗಳಿಗೆ ಓಡಾಡಿ ಮುಜಂಟಿ ಸಾಕಾಣಿಕೆ ಮಾಡಿರುವವರ ಅನುಭವವನ್ನು ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.
ಸತತ ಎರಡು ವರ್ಷಗಳ ಕಾಲ ಮುಜಂಟಿ ಹಿಂದೆ ಬಿದ್ದು ಅಧ್ಯಯನ ನಡೆಸಿ, ಮಾಹಿತಿ ಕಲೆಹಾಕಿರುವ ಲೇಖಕರ ಶ್ರಮ ದೊಡ್ಡದು.
ತಮಗೆ ದಕ್ಕಿದ ಅನುಭವವನ್ನು ಇತರರಿಗೆ ತಲುಪಿಸುವ ಉದ್ದೇಶದಿಂದ ಪುಸ್ತಕ ಬರೆದುದು ಜೇನುಕೃಷಿಯಲ್ಲಿ ಆಸಕ್ತಿ ಹೊಂದಿರುವವರಿಗೆ ಉತ್ತಮ ಮಾರ್ಗದರ್ಶಿ ಒದಗಿಸಿದಂತಾಗಿದೆ.

ಜೇನು ಕುಟುಂಬದ ಸಮಗ್ರ ಪರಿಚಯ, ಕೌಟುಂಬಿಕ ವ್ಯವಸ್ಥೆ, ಜೇನುಹುಳಗಳ ದಿನಚರಿ ಮತ್ತು ನಿರ್ವಹಣೆ, ಜೇನು ಸಾಕಾಣಿಕೆ ಮಾಡುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳು, ಜೇನಿನ ಆಹಾರಕ್ಕಾಗಿ ಬೆಳೆಸಬೇಕಾದ ಗಿಡಮರಗಳ ಮಾಹಿತಿ, ಅನುಭವಸ್ಥರ ಪ್ರಯೋಗಗಳನ್ನೊಳಗೊಂಡ ಸಮಗ್ರ ಕೈಪಿಡಿ ಈ ಪುಸ್ತಕ.

ಜೊತೆಗೆ ನಮ್ಮ ಸುತ್ತಮುತ್ತ ಇರುವ ಮುಜಂಟಿ ಜೇನು ಹುಳುಗಳ ದಿಕ್ಕನ್ನು ಅನುಸರಿಸಿ ಜೇನು ಕುಟುಂಬವನ್ನು ಹುಡುಕಿ ಗೂಡಿಗೆ ವರ್ಗಾಯಿಸುವ ವಿಧಾನವನ್ನು ಲೇಖಕರು ವಿವರಿಸಿದ್ದಾರೆ. ಖರ್ಚಿಲ್ಲದೆ ಸಿಗುವ ಜೇನು ಕುಟುಂಬ, ಆರ್ಥಿಕ ಉಳಿತಾಯದ ಜೊತೆಗೆ ಪರಾಗಸ್ಪರ್ಶ, ರುಚಿಯಾದ ಔಷಧಿ ಗುಣ ಹೊಂದಿರುವ ಜೇನುತುಪ್ಪ ಪಡೆಯುವ ಸುಲಭದ ಮಾರ್ಗ ಯಾರಿಗೆ ತಾನೇ ಇಷ್ಟವಿಲ್ಲ?

ಮುಜಂಟಿ ಜೇನಿನ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಈ ಪುಸ್ತಕ ನಿಜಕ್ಕೂ ಸಹಕಾರಿ.
ಬುಕ್ಸ್ ಲೋಕದಲ್ಲಿ ಹಣ ಪಾವತಿಸಿ ಆರ್ಡರ್ ಮಾಡಿದರೆ ನಿಮ್ಮ ವಿಳಾಸಕ್ಕೆ ಪುಸ್ತಕ ತಲುಪುತ್ತದೆ.

ಮುಜಂಟಿ (ಮಿಸ್ರಿ/ನಸ್ರಿ/ರಾಳ) ಜೇನುಸಾಕಣೆಗೆ ಸಂಬಂಧಿಸಿ ಎರಡು ವರ್ಷ ಕೇರಳ ಮತ್ತು ಕರ್ನಾಟಕದಲ್ಲಿ ನಡೆಸಿದ ವಿಸ್ತೃತ ಅಧ್ಯಯನ ಆಧರಿಸಿದ ಈ ಕೃತಿ ಕೃಷಿ ಮಾಧ್ಯಮ ಕೇಂದ್ರದ 27ನೇ ಪ್ರಕಟಣೆ. 176 ಪುಟಗಳ ಈ ಪುಸ್ತಕದ ಬೆಲೆ: ರೂ.140. ಆನ್ ಲೈನ್ ಖರೀದಿಗೆ – https://www.instamojo.com/Booksloka/–3c1d2/?ref=store

ಲೇಖಕರು : ಶಿವರಾಮ ಪೈಲೂರು
ಮೊಬೈಲ್ ಸಂಖ್ಯೆ: 9483757707

‍ಲೇಖಕರು avadhi

March 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: