ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : money is what money does!

ಭಾರತಿ ಬಿ ವಿ

ನನ್ನ ಅಪ್ಪನ ಗೆಳೆಯ ಒಬ್ಬರಿದ್ದಾರೆ. ಆ ಕ್ಷಣದಲ್ಲಿ ಅವರ ಮನೆಯ ಮುಂದೆಯೇ ಗೂಟ ಬಡಿದುಕೊಂಡ ಹಾಗೆ ನಿಂತಿರುವಾಗ ‘ಇನ್ನೊಂದು ಸಲ ಬಂದಾಗ ಮನೆಗೆ ಖಂಡಿತ ಬರಲೇಬೇಕು .. ಆಯ್ತಾ?’ ಅಂತಾರೆ! ಅದರಲ್ಲಿ ಈಗ ಮನೆಯ ಒಳಗೆ ಬರದೇ ಹಾಗಿಂದ ಹಾಗೇ ದಯಮಾಡಿಸು ಅನ್ನುವ ಗೂಢಾರ್ಥವಿರುವುದು ಅರ್ಥವಾಗದ ಮೊದ್ದುಗಳು ನಾವಲ್ಲ. ಒಂದು ಸಲ ಹೀಗಾಯಿತು .. ಅವರ ಹೆಂಡತಿ ಊರಿಂದ ಬಂದ ನಮ್ಮ ನೆಂಟರನ್ನು ಮನೆಗೆ ಬರಲು ಆಹ್ವಾನಿಸಿದ್ದರು ಅಪರೂಪಕ್ಕೆ. ಅವರಿಗೆ ಅತಿಥಿ ಸತ್ಕಾರ ಅಂತೆಲ್ಲ ಏನೂ ಮಾಡಿ ಅಭ್ಯಾಸವಿಲ್ಲ ಅನ್ನುವುದು ನಮಗೆ ಗೊತ್ತಿತ್ತು. ಹಾಗಾಗಿ ಹೋಗಲು ಆಗದೇ ಹೋಗಿದ್ದಕ್ಕೆ ಅವರಿಗೆ ತಿಳಿಸಬೇಕು ಅಂತಲೂ ಅನ್ನಿಸದೇ ಮರುದಿನ ಹೋದರಾಯ್ತು ಅಂತ ಸುಮ್ಮನಾಗಿಬಿಟ್ಟೆವು. ಓಡಿ ಬಂದ ಆಕೆ ‘ಅಯ್ಯೋ ಎಷ್ಟೊಂದು ತಿಂಡಿ ಎಲ್ಲ ಮಾಡ್ಕೊಂಡು ಕಾದಿದ್ದೀನಿ’ ಅಂತ ಪೇಚಾಡಿ ನಮ್ಮನ್ನು guilty feeling ನ ಬಾವಿಗೆ ದೂಡಿಬಿಟ್ಟರು. ನಾವು ತುಂಬ ಪಶ್ಚಾತ್ತಾಪ ಪಟ್ಟು ನಿಂತ ಕಾಲಲ್ಲೇ ಅವರ ಮನೆಗೆ ಓಡಿದೆವು ಪಾಪ ಏನೆಲ್ಲ ಮಾಡಿಟ್ಟುಕೊಂಡು ಬಿಟ್ಟಿದ್ದಾರೋ, ನಾವು ಹೋಗದೇ ಎಲ್ಲ ಉಳಿದು ಹೋಗುತ್ತಲ್ಲಾ ಅಂತೆಲ್ಲ ಮನಸ್ಸಲ್ಲಿ ಭಾವನೆಗಳು. ಅವರು ಒಂದು ಬಟ್ಟಲನ್ನು ತಂದು ಎದುರಿಗಿಟ್ಟರು … ಅದರಲ್ಲಿ ಗೋಲಿ-ನಿಜಕ್ಕೂ ಗೋಲಿ ಗಾತ್ರದ ಒಂದು ಜಾಮೂನು! ತೆಗೆದು ಬಾಯಿಗಿಟ್ಟುಕೊಂಡರೆ ಒಂದು ಹಲ್ಲಿನ ಮಧ್ಯಕ್ಕೂ ಸಿಕ್ಕದ ಸೈಜ಼ಿನ ಆ ಜಾಮೂನಿಗೆ ಅವರು ಅಷ್ಟೆಲ್ಲ ಹೇಳಿಕೊಂಡಿದ್ದರು! ನಮ್ಮ ನೆಂಟರೆಲ್ಲ ಇವತ್ತಿಗೂ ಅವರು ಮಾಡಿದ ಅಬ್ಬರವನ್ನು ನೆನೆ ನೆನೆದು ನಗುತ್ತಾರೆ. ಅವರ ಮನೆಗೆ ಯಾವಾಗ ಹೋದರೂ ಏನ್ ಕೊಡ್ಲೀ …. ಬೋರ್ನ್‌ವಿಟ, ಹಾರ್ಲಿಕ್ಸ್, ಬಾದಾಮಿ ಹಾಲು, ಕಾಫಿ, ಟೀ, ನಿಂಬೆಹಣ್ಣು ಪಾನಕ, ಹಾಲು …..ಮುಗಿಯದ ಲಿಸ್ಟು. ಕೊನೆಗೆ ಬರುವಷ್ಟರಲ್ಲಿ ನಾವು ಸುಸ್ತಾಗಿ ಏನೋ formality ಗೆ ಅಂತ ಪರ್ವಾಗಿಲ್ಲ, ಏನೂ ಬೇಡ ಅಂದರೆ ಅಯ್ಯೋ ಹಾಗಂತೀಯಾ? ನೀನು ಯಾವಾಗ್ಲೂ ಹೀಗೆ ಮಾಡ್ತೀಯಾಪ್ಪಾ .. ನಿಮ್ಮನೆಗೆ ಬಂದಾಗ ಎಷ್ಟೊಂದು ಕೊಡ್ತಿ. ನಮ್ಮನೇಲಿ ಏನೂ ತಗೊಳ್ಳೋದೇ ಇಲ್ಲ! ಇರು ಕಾಫಿಗೆ ಅಂತ ನೀರಿಟ್ಟಿದ್ದೆ. ಒಲೆ ಆಫ್ ಮಾಡಿ ಬರ್ತೀನಿ ಅಂದು ಬಿಡುತ್ತಾರೆ !!

ಇನ್ನೊಬ್ಬರು ಅಂಕಲ್ ಇದ್ದರು. ನಾವು ರಜೆಗೆ ಅವರ ಮನೆಗೆ ಹೋದರೆ ಎದುರಿಗೆ ಒಂದಿಪ್ಪತ್ತೈದು ಕಲರ್ ಕಲರ್ ಪೆನ್ನುಗಳನ್ನಿಟ್ಟು ನಿಂಗೆ ಯಾವ್ದು ಬೇಕು ಆರಿಸ್ಕೋ ಅನ್ನುತ್ತಿದ್ದರು. ನಾವು ಪುಟ್ಟ ಮಕ್ಕಳು. ಭಲೇ ಥ್ರಿಲ್ ಆಗಿ ಹೋಗಿ ನಂಗೆ ಗ್ಲೀನ್, ನಂಗೆ ಲೆದ್, ನಂಗೆ ಬೂ, ನಂಗೆ ಆಲೆಂಜ್ ..ಅಂತ ಆರಿಸಿದ್ದೇ ಆರಿಸಿದ್ದು. ಆತ ಒಂದಿಷ್ಟು ಹೊತ್ತು ಟೈಮ್ ಪಾಸ್ ಮಾಡಿದ ಮೇಲೆ ಈಗ್ಲೇ ಕೊಟ್ಟರೆ ಹಾಳು ಮಾಡಿಬಿಡ್ತೀರಾ. ಊರಿಗೆ ವಾಪಸ್ ಹೊರಡೋ ದಿನ ಕೊಡ್ತೀನಿ ಆಯ್ತಾ? ಅನ್ನುತ್ತಿದ್ದರು. ನಾವು ಪೆದ್ದಲಾಷ್ಟಕಗಳ ಹಾಗೆ ತಲೆ ಆಡಿಸುತ್ತಿದ್ದೆವು. ಊರಿಗೆ ಹೊರಡುವ ದಿನ ಆ ಸಮಯದಲ್ಲಿ ಅವರು ಮನೆಯಲ್ಲೇ ಇರುತ್ತಿರಲಿಲ್ಲ. ಪೆನ್ನು ಯಾರಲ್ಲಿ ಕೇಳುವುದು? ನಾವು ಸಂಕಟದ ಹೃದಯದಲ್ಲಿ ವಾಪಸ್ ಬರುತ್ತಿದ್ದೆವು. ಅಲ್ಲಿಯವರೆಗೆ ಎಲ್ಲ ಓಕೆ. ಆದರೆ ನಾವು ಎಂಥಾ ಪೆದ್ದುಗಳಿರುತ್ತಿದ್ದೆವೆಂದರೆ ಮುಂದಿನ ಸಲ ರಜಕ್ಕೆ ಹೋದಾಗಲೂ ಅವರು ಅದೇ ಇಪ್ಪತ್ತೈದು ಪೆನ್ನುಗಳನ್ನಿಟ್ಟು ನಿಂಗೆ ಯಾವ್ದು ಬೇಕು ಅಂದಾಗ ಮತ್ತೆ ನಂಗೆ ಗ್ಲೀನ್, ನಂಗೆ ಲೆದ್ ಅಂತ ಆರಿಸಲು ಶುರು ಮಾಡುತ್ತಿದ್ದೆವು!! ಆ ಕಾಲದಲ್ಲಿ ಆ ಪೆನ್ನಿಗೆ ಹತ್ತೋ, ಇಪ್ಪತ್ತೋ ಪೈಸೆ ಇದ್ದಿರಬೇಕು … ಆದರೂ ನಮಗೆ ಅದು ಅಮೂಲ್ಯ ಅನ್ನಿಸುತ್ತಿತ್ತು. ಅಷ್ಟೊಂದು ಆಸ್ತಿ ಇದ್ದ ಅವರಿಗೆ ಆ ಸಣ್ಣ ವಸ್ತುವನ್ನೂ ಕೊಡಲು ಮನಸ್ಸು ಬರುತ್ತಿರಲಿಲ್ಲ.
ಹಾಗಂತ ಪಾಪ ಬೇರೆಯವರ ವಿಷಯದಲ್ಲಿ ಮಾತ್ರ ಜಿಪುಣಾಗ್ರೇಸರ ಅಂತ ಎಣಿಸಬೇಡಿ ಮತ್ತೆ! ತಮ್ಮ ವಿಷಯಕ್ಕೂ ಅದೇ ಪಾಲಿಸಿ ಅವರದ್ದು. ಊರಿನ ಮಧ್ಯ ಭಾಗದಲ್ಲಿ ರಾಶಿ ರಾಶಿ ಸೈಟುಗಳು ಮತ್ತು ಮನೆಗಳು. ಊರಾಚೆ ಇದ್ದ ಎಕರೆಗಟ್ಟಳೆ ಭೂಮಿಯ ಒಡೆಯ. ಆಗಾಗ ಹೋಗಿ ಆ ಭೂಮಿಯನ್ನು ನೋಡಿ ಬರುವ ಚಟ ಅವರಿಗೆ. ಅವರ ಹತ್ತಿರ ಒಂದು ಶತಮಾನದಷ್ಟು ಹಳೆಯದ್ದಾದ TVS Suzuki ಇತ್ತು. ಕೇಜಿ ಲೆಕ್ಕದಲ್ಲಿ ತೂಕಕ್ಕೆ ಮಾರುವಂತಿದ್ದ ಅದರಲ್ಲಿ ಹೋಗಿ ಕೋಟ್ಯಾಂತರ ಬೆಲೆ ಬಾಳುವ ಭೂಮಿಯನ್ನು ನೋಡಿ ಹಿಂದಿರುಗುತ್ತಿದ್ದರು. ಆಮೇಲೆ ಒಂದಷ್ಟು ದಿನಕ್ಕೆ ಅದು ತುಂಬ ಪೆಟ್ರೋಲ್ ಕುಡಿಯುತ್ತದೆ ಅಂತ ಹೇಳಿ ಸುವೇಗಾ ಅಂತ ಒಂದು ಸೈಕಲ್‌ಗಿಂತ ಸ್ವಲ್ಪ ದೊಡ್ಡದಾದ ಗಾಡಿ ಇರುತ್ತಿತ್ತಲ್ಲ .. ಅದರಲ್ಲಿ ಹೋಗಲು ಶುರು ಮಾಡಿದರು! ಆಮೇಲೆ ಕೊನೆ ಕೊನೆಗೆ ಅದೂ ಖರ್ಚು ಜಾಸ್ತಿ ಅಂತ ತೀರ್ಮಾನಿಸಿ BTS ಬಸ್ಸಿನಲ್ಲಿ ಸೂರ್ಯೋದಯದ ಟೈಮಿಗೆ ಹೊರಟು ಸಂಜೆ ಸೂರ್ಯಾಸ್ತವಾಗುವ ಹೊತ್ತಿಗೆ ವಾಪಸ್ಸಾಗುತ್ತಿದ್ದರು. ಹೊಟ್ಟೆಗೆ ತಿನ್ನಲೂ ಏನೂ ಸಿಗದ ಜಾಗವಾದ್ದರಿಂದ ವಾಪಸ್ಸಾಗುವಷ್ಟರಲ್ಲಿ ಮುಖವೆಲ್ಲ ಬಾಡಿಹೋದ ಸೊಪ್ಪಿನ ಹಾಗೆ ಆಗಿರುತ್ತಿತ್ತು. ಹೊಟ್ಟೆಗೆ ತಿನ್ನಲು ಸಿಕ್ಕಿದ್ದರೂ ಅವರು ಕೊಂಡು ತಿನ್ನುತ್ತಿರಲಿಲ್ಲ ಅನ್ನುವುದು ಬೇರೆಯದೇ ಮಾತು!

ಸಿಟಿ ಮಾರ್ಕೆಟ್ಟಿನಲ್ಲಿ ಚೀಪ್ ಆಗಿ ಚಪ್ಪಲಿ ಸಿಗುತ್ತದೆ ಅಂತ ಬಸ್ಸಿನಲ್ಲಿ ಹೋಗಿ ಒಂದೇ ಅಳತೆಯ, ಒಂದೇ ಬಣ್ಣದ ಒಂದು ಡಜ಼ನ್ ಹವಾಯ್ ಚಪ್ಪಲಿ ತಂದಿಡುತ್ತಿದ್ದರು ಇಡೀ ವರ್ಷದ ದಿನಸಿ ತಂದಿಡುವ ಹಾಗೆ, ಅವರಿಗೂ ಮತ್ತು ಅವರ ಹೆಂಡತಿಗೂ ಸೇರಿ! ಅವರ ಹೆಂಡತಿಗೆ ಪಾಪ ಬಣ್ಣ ಬಣ್ಣದ ಲೆದರ್ ಚಪ್ಪಲಿ ಹಾಕುವ ಆಸೆ. ಅದಕ್ಕಾಗಿ ಗಂಡನನ್ನು ಬೇಡುತ್ತಿದ್ದರು… ರೀ ಇಂಥ 12 ಚಪ್ಪಲಿ ತರುವ ಬದಲು ಒಂದು ಲೆದರ್ ಚಪ್ಪಲಿ ಕೊಡಿಸ್ರೀ ಅಂತ ಬೇಡಿದರೆ ನಾಲ್ಕು ಸಲ ಹೇಳುವವರೆಗೆ ಕಿವಿಗೇ ಬೀಳದ ಹಾಗೆ ಇರುತ್ತಿದ್ದ ಮನುಷ್ಯ ಐದನೆಯ ಸಲ ಹೇಳುವಾಗ ಹೆಂಡತಿಯ ಹೆಸರು ಹಿಡಿದು ಜೋರಾಗಿ ಘರ್ಜಿಸಿದರೆ ಅಲ್ಲಿಗೆ ಆಕೆ ಗಪ್ ಚುಪ್! ಉಸಿರೆತ್ತುವ ಹಾಗಿಲ್ಲ ಅಲ್ಲಿಂದ ಮುಂದಕ್ಕೆ …
ಆಕೆಯೂ ಏನು ಕಡಿಮೆ ಇರಲಿಲ್ಲ. ನಾವು ಅವರ ಮನೆಗೆ ಹೋಗಲು ಬೆಳಿಗ್ಗೆಯೇ ಫೋನ್ ಮಾಡಿ ಹೋದರೆ ಬದುಕಿದೆವು. ಇಲ್ಲವೆಂದರೆ ಆಕೆ ನೆನೆಸಿಟ್ಟ ಅವಲಕ್ಕಿಗೆ ಒಂದು ಹಿಡಿ ಎಕ್ಸ್ಟ್ರಾ ಸೇರಿಸುವ ಗೋಜಿಗೂ ಹೋಗುತ್ತಿರಲಿಲ್ಲ. ಅಯ್ಯೋ ಮುಂಚೇನೇ ಹೇಳಿದ್ದರೆ ನಿಮಗೂ ಸೇರಿಸಿ ಮಾಡಬಹುದಿತ್ತು ನೋಡು! ಎಂಥಾ ಕೆಲಸ ಮಾಡಿಬಿಟ್ಟೆ ಅಂತ ಬಾಯಲ್ಲಿ ಪೇಚಾಡುತ್ತಲೇ ನಮ್ಮೆದುರೇ ಕೂತು ಹೊಟ್ಟೆಬಿರಿಯ ತಿಂದು ಮುಗಿಸುತ್ತಿದ್ದರು. ನನ್ನ ಅಮ್ಮ ಹಸಿವಿನಿಂದ ಕಂಗೆಟ್ಟ ಮುಖದಲ್ಲಿ ಇಲ್ಲರೀ, ಬೆಳಿಗ್ಗೆ ಊಟ ಮಾಡಿದ್ದೇ ಅರಗಿಲ್ಲ ನೋಡಿ! ಅಬ್ಬಾ ಈಗ ತಿಂದುಬಿಟ್ಟಿದ್ರೆ ಹೊಟ್ಟೆ ಒಡೆದುಹೋಗ್ತಿತ್ತು ! ಅಂತ ಹೇಳುತ್ತಿದ್ದಳು. ಅವಳೇನೋ ದೊಡ್ಡವಳು. ಹಸಿವೆ ತಡೆಯುವ ಶಕ್ತಿ ಇತ್ತು. ನಾನು ಚಿಕ್ಕವಳು. ಚುರುಗುಟ್ಟುವ ಹೊಟ್ಟೆಯನ್ನು ಎಷ್ಟಂತ ಸಮಾಧಾನಿಸಲಿ? ಅಂತೂ ಇಂತೂ ಅಮ್ಮನ ಕಿವಿ ಕಚ್ಚಿ ಕಚ್ಚಿ ಅಲ್ಲಿಂದ ಹೊರಡಿಸಿ ಎದುರಾದ ಹೋಟೆಲ್‌ಗೆ ನುಗ್ಗಿ ಮಸಾಲೆ ದೋಸೆ ಹಾಕಿದಾಗ ಕತ್ತಲಿಡುತ್ತಿದ್ದ ಕಣ್ಣಿನಲ್ಲಿ ಚೂರು ಬೆಳಕು ಮೂಡುತ್ತಿತ್ತು ..
ಅವರೆಲ್ಲ ಹೀಗೇ ಜಿಪುಣತನದಲ್ಲಿ ಬದುಕಿ ಬದುಕಿ ಸತ್ತರು ಅನ್ನುವಲ್ಲಿಗೆ ಜಗತ್ತಿನ ಅತೀ ಶ್ರೇಷ್ಠ ಜಿಪುಣಾಗ್ರೇಸರ ಕಥೆಗಳಲ್ಲಿನ ಒಂದೆರಡು ಅಧ್ಯಾಯ ಮುಗಿಯುತ್ತದೆ …!
ಮನುಷ್ಯ ಯಾಕಾಗಿ ಹಣವನ್ನು ಅಷ್ಟೊಂದು ಮೋಹಿಸುತ್ತಾನೆ? ಹಣವನ್ನು ತನಗಿಂತ ಜಾಸ್ತಿ ಮೋಹಿಸುತ್ತಾನಲ್ಲಾ ಯಾಕೆ? ಇಡೀ ಜಗತ್ತಿನಲ್ಲಿ ಎಲ್ಲ ಮನುಷ್ಯರೂ ಸ್ವಾರ್ಥಿಗಳೇ. ಮನುಷ್ಯ ಮನಸ್ಸಿನ ಒಳ ಹೊಕ್ಕು ನೋಡಿ ಬೇಕಿದ್ದರೆ … Top of the chart ನಲ್ಲಿ ಮೊದಲಿನವನು ‘ತಾನು’ ಮಾತ್ರ. ಎಲ್ಲ ಸುಖ-ದುಃಖ, ಆಸೆ, ಲಾಭ, ನಷ್ಟ, ಮೋಹ, ಪ್ರೀತಿ, ಕಾಳಜಿ, ನ್ಯಾಯ, ಅನ್ಯಾಯ ಎಲ್ಲವುಗಳ ಹಿನ್ನೆಲೆಯಲ್ಲೂ ತಾನು ಅನ್ನುವುದು ಮುಂಚೂಣಿಯಲ್ಲಿರುತ್ತದೆ. ಅಂಥ ‘ತಾನು’ ಅನ್ನುವ ಮೋಹವನ್ನು ಮೀರುವುದು ತುಂಬ ಸಾಧನೆ ಮಾಡಿದ ಸನ್ಯಾಸಿಗಳಿಗೆ ಮಾತ್ರ ಸಾಧ್ಯ ಅನ್ನುತ್ತಾರೆ. ನಾನು ‘ಅಂಥ’ ಸನ್ಯಾಸಿಯನ್ನು ಕೂಡಾ ಕಂಡಿಲ್ಲವಾದ್ದರಿಂದ ಅಂಥವರಿದ್ದಾರೆ ಅನ್ನುವುದನ್ನು ಕೂಡಾ ನಂಬಲು ನಿರಾಕರಿಸುತ್ತೇನೆ. ಹಾಗಾಗಿ ತಾನು ಅನ್ನುವ ಮೋಹವನ್ನೂ ಮೀರಿಸುವ ಶಕ್ತಿ ಈ ಹಣಕ್ಕೆ ಬಂದಿದ್ದಾದರೂ ಹೇಗೆ? ತನಗೆ ಕೂಡಾ ತಾನು ಖರ್ಚು ಮಾಡಿಕೊಳ್ಳದೇ ಕೃಪಣನಾಗಿ ಯಾಕೆ ಬದುಕುತ್ತಾನೆ?
ಹಣ ಇಲ್ಲದವರ ಕಥೆ ಹೋಗಲಿ. ಕೋಟಿಗಟ್ಟಲೆ ಇರುವವರೂ ಕೈ ಹಿಡಿಹಿಡಿದು ಬದುಕುವುದು ಯಾಕೆ? ಹರಿದ ಬಟ್ಟೆಯನ್ನೇ ತೇಪೆ ಹಾಕಿ ಹಾಕಿ ಹೊಲೆದು ಉಪಯೋಗಿಸುವ, ಮುದಿ ವಯಸ್ಸಿನಲ್ಲೂ ಕೈಲಿ ಶಕ್ತಿ ಉಡುಗಿ ಹೋದಾಗಲೂ ಮನೆಯ ಕೆಲಸಕ್ಕೆ ಒಂದು ಜನವನ್ನು ಇಟ್ಟುಕೊಳ್ಳದೇ ತಾವೇ ಮನೆಕೆಲಸವನ್ನೆಲ್ಲ ಮಾಡಿ ಮಧ್ಯಾಹ್ನದ ಹೊತ್ತಿಗೆ ಉಸ್ಸೋ ಅಂತ ನೆಲ ಕಚ್ಚುವ, ಮೊಣಕಾಲೆಲ್ಲ ಗಂಟು ಹಾಕಿದ್ದರೂ ಆಟೋ ಹತ್ತದೇ ಬಸ್ಸಿನಲ್ಲೇ ಹೋಗುವ, ಸೇಬು 150 ರೂಪಾಯಿ ಅಂದಕೂಡಲೇ ಒಂದು ಹೋಳನ್ನೂ ಮನೆಗೆ ತರದ ನಾನಾ ಥರದ ಜನರನ್ನೆಲ್ಲ ಕಂಡಾಗಲೆಲ್ಲ ಮನುಷ್ಯನಿಗೆ ಹಣದ ಮೇಲೆ ತನ್ನನ್ನೂ ಮೀರಿದ ವ್ಯಾಮೋಹ ಯಾಕೆ ಅಂತ ಆಶ್ಚರ್ಯವೆನ್ನಿಸುತ್ತದೆ. ಗಂಟು ಹಾಕಿ ಹಾಕಿ ಇಟ್ಟು ಕೊನೆಗೊಂದು ದಿನ ಸುಮ್ಮನೆ ಹೊರಟುಬಿಡುತ್ತೀವಿ ಅಂತ ಗೊತ್ತಿದ್ದರೂ ಕೂಡಾ ಈ ಪರಿಯ ಹಣ ಮನುಷ್ಯ ಯಾಕಾಗಿ ಕೂಡಿ ಹಾಕುತ್ತಾನೆ? ದುಂದು ವೆಚ್ಚ ಬೇಡ … ಆದರೆ quality of life ಅನ್ನುವುದೊಂದಿದೆಯಲ್ಲ, ಅದಕ್ಕೆ ನ್ಯಾಯ ಕೊಡುವಷ್ಟಾದರೂ ಬೇಡವಾ?
ನಾನು ಕಾಮರ್ಸ್ ತೆಗೆದುಕೊಂಡು ಕಾಲೇಜಿಗೆ ಕಾಲಿಟ್ಟ ಮೊದಲ ದಿನ ಎಕನಾಮಿಕ್ಸ್ ಕ್ಲಾಸ್ ಇತ್ತು. ಎಕನಾಮಿಕ್ಸ್‌ನಲ್ಲಿ money is what money does ಅನ್ನುವುದೊಂದು ಪ್ರಾಥಮಿಕ ಸೂತ್ರ. ಅದೇನು ಅಂತ ಅರ್ಥವಾಗದೇ ಉರು ಹಚ್ಚಿ ಮುಂದೆ ಸಾಗಿದ್ದೆ. Money is what money does ಅಂದರೇನು?! ಅಂತ ತಲೆ ಚೆಚ್ಚಿಕೊಂಡಿದ್ದೆ. ಉಹೂ .. ಗೊತ್ತಾಗಿರಲೇ ಇಲ್ಲ. ಬದುಕು ಅರ್ಥವಾಗುತ್ತಾ ಹೋದ ಹಾಗೆ ಈಗ … ಈಗ ಇವೆಲ್ಲ ಎಷ್ಟು ಚೆಂದಕ್ಕೆ ಅರ್ಥವಾಗುತ್ತವೆ! ಹಣದ ಕೆಲಸವನ್ನು ಹಣ ಮಾಡಿದರೆ ಮಾತ್ರ ಅದನ್ನು ಹಣವೆನ್ನುತ್ತಾರೆ. ಎಷ್ಟು ಸರಳ ಅರ್ಥ! ಇದು ಅರ್ಥವಾಗದ ಜಗತ್ತಿನ ಎಲ್ಲ ಜಿಪುಣಾಗ್ರೇಸರರಿಗೂ ನನ್ನದೊಂದು ಹೃತ್ಪೂರ್ವಕ ವಿಷಾದ …

‍ಲೇಖಕರು avadhi

21 March, 2013

ನಿಮಗೆ ಇವೂ ಇಷ್ಟವಾಗಬಹುದು…

16 Comments

  1. Geetha b u

    Very well written. Nextu avaru chendhaagi ettukondu, maadikondu yenjala kaili kaage odisadhavara bagge bareyiri bharthi…….whenever I read something written by you I feel like adding something of my own….experiences and the way we react and think is similar…adhakke haage annisutheno…..

  2. N.viswanatha

    Tumba arthagharbitha chennada baraha

  3. M.S.Prasad

    Please do Convey my Regrets Too !!!Comment haakodralli nanage jipunatana illa. Good write up.

  4. Anjali Ramanna

    chennaagide Bharathi 🙂
    Anjali Ramanna

  5. subhashini

    ಕೋಟಿಗಟ್ಟಲೆ ಆಸ್ತಿ ಇಟ್ಕೊಂಡು ದರಿದ್ರ ಬಡಿದವರಂತೆ ಬದುಕುವ ಜಾಯಮಾನದವರೇ ನಮ್ಮ ನಡುವೆ ಇರುವ ಕಾರಣದಿಂದಲೇ ನಮ್ಮ ರಾಷ್ಟ್ರ ಇಂದಿಗೂ ಬಡದೇಶವಾಗಿಯೇ ಉಳಿದಿದೆ.

  6. samyuktha

    ha ha!! nimma barahada shailiye chenda! hu….naanoo nodiddene intaha mahaashayaranna! 🙂

  7. ಪ್ರಸಾದ್.ಡಿ.ವಿ.

    ಭಾರತಿ ಅಕ್ಕಾ, ಬಹಳ ಚೆಂದದ ಲೇಖನ. ‘ಮನಿ ಇಸ್ ವ್ಹಾಟ್ ಮನಿ ಡಸ್’, ಈ ಫ್ರೇಸ್ ನಿಜಕ್ಕೂ ಅರ್ಥಪೂರ್ಣವಾದುದು. ಅದನ್ನು ಪ್ರಾಪಂಚಿಕ ಉದಾಹರಣೆಗಳ ಮೂಲಕ ಹೇಳ ಹೊರಟಿರುವ ನಿಮ್ಮ ತಂತ್ರಗಾರಿಕೆ ಮೆಚ್ಚುಗೆ ಪಡೆಯುತ್ತದೆ.
    – ಪ್ರಸಾದ್.ಡಿ.ವಿ.

  8. ಸುಗುಣ ಮಹೇಶ್

    ತುಂಬಾ ಚೆನ್ನಾಗಿದೆ ಲೇಖನ. ಹಣ ಇದ್ದವರು ಅದನ್ನು ಬಳಸುವುದನ್ನೂ ಕಲಿಯಬೇಕು.

  9. jogi

    ಭಾರತಿ,
    ಸೊಗಸಾಗಿ ಓದಿಸಿಕೊಂಡಿತು. ದುಡ್ಡಿನ ವಿಚಾರದಲ್ಲಿ ಗಾಂಧೀಜಿ ಹೇಳಿದ ಮಾತೊಂದು ನನಗೆ ಮತ್ತೆ ಮತ್ತೆ ನೆನಪಾಗುತ್ತಿರುತ್ತೆ. IF you buy what you do not need, you will need what you cannot buy. ಇವತ್ತಂತೂ ದೊಡ್ಡ ಸಂಬಳ ನಮ್ಮನ್ನು ಎಷ್ಟು ಲೋಲುಪರಾಗಿ ಮಾಡಿದೆ ಅಂದರೆ ಪ್ರತಿಯೊಂದಕ್ಕೂ ಒಂದರ ಹತ್ತು ಪಟ್ಟು ಬೆಲೆ ಕೊಂಡು ಕೊಳ್ಳುವವರನ್ನು ನೋಡುತ್ತೇವೆ. ಐನೂರು ರುಪಾಯಿ ಬನೀನು, ಐದು ಸಾವಿರ ರುಪಾಯಿ ಶೂ, ಲಕ್ಷ ರುಪಾಯಿ ಬೈಕು ಹೀಗೆ. ದುಬಾರಿ ಹೊಟೆಲುಗಳೂ ಅಷ್ಟೇ. ಒಮ್ಮೆ ತೋಳ್ಪಾಡಿಯವರ ಜೊತೆ ಹೊಟೆಲಿಗೆ ಹೋಗಿದ್ದೆ. ಐನೂರು ರುಪಾಯಿ ಇಬ್ಬರ ಊಟದ ಬಿಲ್ ಆಗಿತ್ತು. ಅವರು ಹೇಳಿದ ಒಂದು ಮಾತು ಕಾಡುತ್ತಿರುತ್ತೆ. ಈ ಐನೂರು ರುಪಾಯಿ ನನ್ನ ಒಂದು ತಿಂಗಳ ಊಟದ ಖರ್ಚು. ದುಡ್ಡನನು ಹೀಗೆ ಪೋಲು ಮಾಡಬಾರದು. ಜಾಸ್ತಿ ದುಡಿಯೋದೂ ಜಾಸ್ತಿ ಖರ್ಚು ಮಾಡೋದು ಎರಡೂ ಅಹಂಕಾರ ಅಂದಿದ್ದರು ಅವರು.

    • bharathi

      ಕೃಪಣರು ಮತ್ತು ಲೋಲುಪರು ಇಬ್ಬರೂ ದುಡ್ಡಿಗೆ ಅದರ ಯೋಗ್ಯತೆಗಿಂತ ಹೆಚ್ಚು ಬೆಲೆ ಕೊಡುವ ಜನರು … ಅಲ್ಲವಾ?

  10. Rj

    Chenda ide..Liked it.Enjoyed it. 🙂
    -Rj

  11. vidyashankar

    Super artcile 🙂 I like it… I like it! For them Money has helped to achieve what great Saints have achived… going beyond self 🙂

  12. sunil Rao

    very nice one

  13. anu

    ನನಗೂ ಆಗಿದೆ ಜಿಪುಣರ ಸಹವಾಸದ ಅನುಭವ ಜೊತೆಗೆ, ಹಣ ಹೇಗೆ ಖರ್ಚು ಮಾಡಬೇಕೆಂಬುದರ ಬಿಟ್ಟಿ ಸಲಹೆ. ಆರು ಜನಕ್ಕೆ ಅಡುಗೆ ಮಾಡಲು ಅರೆಪಾವಿನ ಗಂಜು ಇಟ್ಟಿರುತ್ತಾರೆ. ಚೆನ್ನಾಗಿ ಊಟ ಮಾಡುವವರೂ ಸಹ ಸಾಕು ಎಂದೆನ್ನುತ್ತಾ ಹೊಟ್ಟೆಗೆ ಮೋಸಮಾಡಿಕೊಳ್ಳಬೇಕು ಇಲ್ಲ, ಬೇರೆಲ್ಲಾದರೂ ಹೊರಗೆ ಹೋಗಿ ತಿಂದು ಬರಬೇಕು. ಮಾತುಮಾತಿಗೂ ಹೊಟ್ಟೆ ಬಟ್ಟೆ ಕಟ್ಟಿದರೆ ಸಂಸಾರ ಎಂದು ಗೊಣಗುತ್ತಲೂ ಇದ್ದರೆ, ಸಂಪಾದನೆ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿಯೇ ಅಲ್ಲವೇ? ಅನಿಸುತ್ತದೆ.

  14. ಶಮ, ನಂದಿಬೆಟ್ಟ

    “ದುಂದು ವೆಚ್ಚ ಬೇಡ … ಆದರೆ quality of life ಅನ್ನುವುದೊಂದಿದೆಯಲ್ಲ, ಅದಕ್ಕೆ ನ್ಯಾಯ ಕೊಡುವಷ್ಟಾದರೂ ಬೇಡವಾ?”
    “ಬದುಕು ಅರ್ಥವಾಗುತ್ತಾ ಹೋದ ಹಾಗೆ ಈಗ … ಈಗ ಇವೆಲ್ಲ ಎಷ್ಟು ಚೆಂದಕ್ಕೆ ಅರ್ಥವಾಗುತ್ತವೆ! ಹಣದ ಕೆಲಸವನ್ನು ಹಣ ಮಾಡಿದರೆ ಮಾತ್ರ ಅದನ್ನು ಹಣವೆನ್ನುತ್ತಾರೆ. ಎಷ್ಟು ಸರಳ ಅರ್ಥ! ಇದು ಅರ್ಥವಾಗದ ಜಗತ್ತಿನ ಎಲ್ಲ ಜಿಪುಣಾಗ್ರೇಸರರಿಗೂ ನನ್ನದೊಂದು ಹೃತ್ಪೂರ್ವಕ ವಿಷಾದ …”
    10000000000000000000000000 likes Bharathi … JipuNarige Nannadoooooo vishaada ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading