ನಾವು ಸ್ಕೂಲಿನಲ್ಲಿರುವಾಗ ಮೂರು ಜನ ಗೆಳತಿಯರು ಶೈಲಾ, ಸುಜಾತಾ ಮತ್ತು ನಾನು. ನಾವು ಕೀಳಲಾಗದಷ್ಟು ಕಚ್ಚಿಕೊಂಡಿದ್ದೆವು. ನಾನು ಮತ್ತು ಶೈಲಾ ಓದಿನಲ್ಲಿ ತುಂಬ ಜಾಣೆಯರೇನೂ ಆಗಿರಲಿಲ್ಲ. ಒಂದು ಫ಼ಸ್ಟ್ ಕ್ಲಾಸಿಗೆ ಮೋಸವಿಲ್ಲದ ಹಾಗೆ ಓದುತ್ತಿದ್ದೆವು. ಆದರೆ ಈ ಸುಜಾತಾ ನಮ್ಮ ಗೆಳತಿಯಾಗಲು ಲಾಯಕ್ಕಾದ ವ್ಯಕ್ತಿಯೇ ಆಗಿರಲಿಲ್ಲ! ತುಂಬ ಗಂಭೀರವಾದ, ತುಂಬ ಜಾಣೆಯಾದ, ತುಂಬ ಮೃದುವಾದ ಹುಡುಗಿ ಅವಳು. ಹುಟ್ಟಾ ಮಂಗಗಳ ಜಾತಿಗೆ ಸೇರಿದ ನಮ್ಮ ಜೊತೆ ಪಾಪ ಯಾವ ಗ್ರಹಚಾರ ಕೆಟ್ಟ ಘಳಿಗೆಯಲ್ಲಿ ಸೇರಿದಳೋ ಏನೋ! ಆದರೆ ನಮ್ಮ ಮೂವರನ್ನು ಬಂಧಿಸಿದ ತಂತು ಒಂದಿತ್ತು … ಅದು ಕನ್ನಡ ಪ್ರೇಮ. ನಮಗೆ ಕನ್ನಡಕ್ಕೆ ಸೇರಿದ ಎಲ್ಲದರ ಬಗ್ಗೆಯೂ ಪ್ರೀತಿ. ಕನ್ನಡ ಹಾಡು, ಸಿನೆಮಾ, ಭಾವಗೀತೆ, ಪುಸ್ತಕ ಎಲ್ಲವೂ ನಮಗೆ ತುಂಬ ಇಷ್ಟವಾಗುತ್ತಿತ್ತು. ಆ ಕಾರಣಕ್ಕಾಗೇ ಉಂಟಾದ ಸ್ನೇಹವದು ಅನ್ನಿಸುತ್ತದೆ.
ನಾನು ಮತ್ತು ಶೈಲಾ ತುಂಬ ಕಿಡಿಗೇಡಿಗಳಾಗಿದ್ದೆವು. ನಾವು ಕ್ಲಾಸಿನ ಒಳಗೆ ಇರುತ್ತಿದ್ದುದಕ್ಕಿಂತ ಹೊರಗೆ ಇರುತ್ತಿದ್ದುದೇ ಜಾಸ್ತಿ. ಯಾವುದಾದರೊಂದು ಗಲಾಟೆಯಲ್ಲಿ ಸಿಕ್ಕು ಬೀಳುವುದು ನಮ್ಮ ಫ಼ೇವರಿಟ್ ಹಾಬಿಯಾಗಿತ್ತು! ನಮ್ಮ ಪ್ರತಿಯೊಂದು ಗಲಾಟೆಯನ್ನೂ ನಾವು ಧರ್ಮಯುದ್ಧವೆಂದೇ ಪರಿಗಣಿಸುತ್ತಿದ್ದೆವು! ಹಾಗಾಗಿ ನಮ್ಮ ಪ್ರಕಾರ ಎಲ್ಲವೂ ನ್ಯಾಯಕ್ಕಾಗಿ ನಡೆಸಿದ ಹೋರಾಟಗಳೇ ಆಗಿರುತ್ತಿದ್ದವು. ಜೊತೆಗೆ ತುಂಬ ಲೇವಡಿ ಮಾಡುವ ಸ್ವಭಾವದ ನಾವು ಕ್ಲಾಸಿನಲ್ಲಿ ಕೊನೆಯ ಬೆಂಚಿನಲ್ಲಿ ಕೂತು ಮಾಡದ ಗಲಾಟೆಯೇ ಇಲ್ಲ.
ಹತ್ತನೇ ಕ್ಲಾಸಿನಲ್ಲಂತೂ ನಾವು ಬೆಂಚಿನ ಮೇಲೆ ಕೂತಿದ್ದಕ್ಕಿಂತ ನಿಂತಿದ್ದೇ ಜಾಸ್ತಿ. ಸಾಧಾರಣವಾಗಿ ಆ ಶಿಕ್ಷೆ ಬರೀ ಹುಡುಗರಿಗೆ ಮಾತ್ರ ಕೊಡುತ್ತಿದ್ದರು. ಹುಡುಗಿಯರಾಗಿ ನಾವು ಕೂಡಾ ಆ ಮಟ್ಟದ ಗಲಾಟೆ ಮಾಡಿ ಪುರುಷರೊಡನೆ ಸಮಾನತೆ ಸಾಧಿಸಿದ್ದೆವು! ಕ್ಲಾಸಿನ ಒಳಗಿರುವಾಗಲೂ, ಬಿಡುವಿನ ಸಮಯಕ್ಕೂ ವ್ಯತ್ಯಾಸವೇ ಇರದ ನಾವು ಅಲ್ಲಿ ಪಾಪ ಮೇಷ್ಟರು ಗಂಟಲು ಹರಿಯುವಂತೆ ಕಿರುಚುತ್ತಿದ್ದರೆ ಹಿಂದಿನ ಬೆಂಚಲ್ಲಿ ಕೂತು ನಮ್ಮ ಪಾಡಿಗೆ ನಾವು ಯಾವುದೋ ಕಥೆ ಪುಸ್ತಕವನ್ನು ಓದುತ್ತಲೋ, ಕವನ ಬರೆಯುತ್ತಲೋ, ಹಾಡಿನ ಲಿರಿಕ್ಸ್ ಬರೆದುಕೊಳ್ಳುತ್ತಲೋ ಕೂತಿರುತ್ತಿದ್ದೆವು.
ಇಂಥ ನಮ್ಮ ಜೊತೆ ಪಾಪ ಆ ಸುಜಾತಾ ಸೇರಿದಳು ಮತ್ತು ಕವಿತೆ ಬರೆಯುವ ಹುಚ್ಚು ನಮ್ಮನ್ನು ಗಟ್ಟಿಯಾಗಿ ಬಂಧಿಸಿತು. ಶೈಲಾ ‘ಪ್ರಿಯೇ, ಸೂರೆ ಹೋದ ಮನದ ಮಳಿಗೆಯಲ್ಲಿ ಕುಳಿತು ನಿನಗಾಗಿ ಪದ್ಯ ಬರೆಯುತ್ತಿದ್ದೇನೆ’ ಅಂತ ಬರೆದಿದ್ದ ಕವಿತೆ ಇವತ್ತಿಗೂ ನನ್ನ ಮೆಚ್ಚಿನದ್ದು. ಸುಜಾತಾ ‘ಬೇಸರದ ಜೇಡ ಬದುಕ ತುಂಬ ಬಲೆ ನೇಯುವಾಗ ನಾನು ಅರಚುತ್ತೇನೆ ನನಗೆ ಹೊಸ ಬದುಕು ಬೇಕೆಂದು’ ಅಂತ ಬರೆಯುತ್ತಿದ್ದಳು. 14 ವಯಸ್ಸಿನ ಮಕ್ಕಳು ಅಂತ ಲೆಕ್ಕಕ್ಕೆ ತೆಗೆದುಕೊಂಡರೆ ಆ ಕವಿತೆಗಳು ಚೆಂದವೇ ಇದ್ದವು ಅನ್ನಬೇಕು.
ಈ ರೀತಿ ಬರೆದುಕೊಂಡು ಸುಖವಾಗಿದ್ದ ನಮಗೆ ನಾವು ಓದಲೂ ಬೇಕು ಅನ್ನುವುದನ್ನು ಹತ್ತನೆಯ ಕ್ಲಾಸಿನ ಪಬ್ಲಿಕ್ ಪರೀಕ್ಷೆ ನೆನಪಿಸಿತು. ಪುಸ್ತಕದ ಮೇಲಿನ ಧೂಳು ಹೊಡೆದು ಅದರಲ್ಲಿ ಮುಳುಗಿದೆವು. ಸುಜಾತಾಳಂತೂ ತುಂಬ ಸೀರಿಯಸ್ಸಾಗಿ ಓದಿನಲ್ಲಿ ತೊಡಗಿಸಿಕೊಂಡಳು. ಅದಾದ ಮೇಲೆ ಪರೀಕ್ಷೆ ಮುಗಿಯಿತು. ರಜೆ ಬಂತು. ಮತ್ತೆ ಸ್ವಲ್ಪ ದಿನದಲ್ಲೇ ರಿಸಲ್ಟ್ ಕೂಡಾ …ನಾನು, ಶೈಲಾ 60% ನ ದಡದಲ್ಲಿ ಹಾಗೂ ಹೀಗೂ ಬಿದ್ದಿದ್ದೆವು. ಸುಜಾತಾ ಒಳ್ಳೆ ಮಾರ್ಕ್ಸ್ ತೆಗೆದಿದ್ದಳು. ನಾನು, ಶೈಲಾ ಬೇರೆ ಬೇರೆ ಕಾಲೇಜಿನಲ್ಲಿ ಕಾಮರ್ಸ್ ತೆಗೆದುಕೊಂಡೆವು. ಸುಜಾತಾ ನನ್ನದೇ ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಂಡಳು. ನನಗೆ ಸ್ವಲ್ಪ ಸಮಾಧಾನವಾಯ್ತು ಅವಳೊಬ್ಬಳಾದರೂ ಜೊತೆ ಉಳಿದಳಲ್ಲಾ ಎಂದು. ಮೊದಲ ದಿನ ಕಾಲೇಜಿಗೆ ಹೋದವಳೇ ಅವಳಿಗಾಗಿ ತಡಕಾಡಿದೆ. ಸುಮಾರು ಕ್ಲಾಸಿನಲ್ಲಿ ಬಗ್ಗಿ ಬಗ್ಗಿ ನೋಡಿದ ಮೇಲೆ ಅವಳು ಗೆಳತಿಯರ ಜೊತೆ ಬರುತ್ತಿರುವುದು ಕಂಡಿತು. ನಾನು ತುಂಬ ಖುಷಿಯಿಂದ ಅವಳ ಹತ್ತಿರ ಹೋಗಿ ‘ಹಾಆಆಆಆಆಆಅಯ್ …’ ಅನ್ನುವಷ್ಟರಲ್ಲಿ ಅವಳು ತುಂಬ ಗಂಭೀರಳಾಗಿ ‘ಹಾಯ್’ ಅಂದವಳು ಅವಳ ಹೊಸ ಗೆಳತಿಯರ ಜೊತೆ ಮುಂದಕ್ಕೆ ಸಾಗಿಹೋದಳು. ನನಗದು ಜೀವನದ ಮೊದಲ ಶಾಕ್. ಸುಜಾತಾ! ನಮ್ಮ ಗೆಳತಿ ಸುಜಾತಾ ನನ್ನ ಜೊತೆ ಅಷ್ಟು ಕೋಲ್ಡ್ ಆಗಿ ಹೇಗೆ ನಡೆದುಕೊಳ್ಳುವುದು ಸಾಧ್ಯ ಅಂತ ಬೆಪ್ಪಾಗಿ ನಿಂತಿದ್ದೆ.
ಅವತ್ತು ಓಡಿ ಹೋಗಿ ಶೈಲಳ ಹತ್ತಿರ ಹೇಳಿಕೊಳ್ಳುವಾಗ ಅಳುವೇ ಬಂದುಬಿಟ್ಟಿತ್ತು. ಶೈಲಾ ನನ್ನಷ್ಟು ಎಮೋಷನಲ್ ಆಗದೇ ‘ಹಿಡ್ಕೊಂಡು ಒಂದು ಬಿಡಬೇಕಿತ್ತು ಅವಳ ಕೆನ್ನೆಗೆ’ ಅಂದಳು. ಅದೆಲ್ಲ ಆಗ ಹೋಗುವ ಮಾತಲ್ಲ ಅಂತ ಹೇಳಿ ನಾನು ಆ ಮುಂದೆ ನನ್ನ ಪ್ರತಿಭಟನೆ ತೋರಿಸುವ ರೀತಿ ಸುಜಾತಾಳನ್ನು ಮಾತಾಡಿಸದೇ ಉಳಿದೆ. ಅವಳು ನನ್ನನ್ನು ಓಲೈಸಿಕೊಂಡು ಬರುತ್ತಾಳಲ್ಲ, ಆಗ ಬುದ್ಧಿ ಕಲಿಸುತ್ತೇನೆ ಅಂತ ಶಪಥ ತೊಟ್ಟೆ. ನನಗಿಲ್ಲದ ಬುದ್ಧಿ ಅವಳಿಗಿನ್ನೇನು ಕಲಿಸುವುದು ಅಂತಲೋ ಏನೋ ಆ ಸಂದರ್ಭ ಎದುರಾಗಲೇ ಇಲ್ಲ. ಆದರೆ ದೇವರು ಕರುಣಾಮಯಿ … ಈ ರೀತಿ ಅಪರಿಚಿತಳಂತೆ ಬದುಕಿದ ಅವಳನ್ನು ಮೊದಲ PUC ಪರೀಕ್ಷೆ ಹತ್ತಿರವಾದ ದಿನದಲ್ಲಿ ನನ್ನ ಹತ್ತಿರ ಬರುವಂತೆ ಮಾಡಿದ!
ಅವತ್ತೊಂದು ದಿನ ಎದುರಾದ ಅವಳು ‘ಹಾಆಆಆಆಅಯ್!’ ಅಂದಾಗ ನಾನು ತಬ್ಬಿಬ್ಬಾದೆ. ಇದ್ದಕ್ಕಿದ್ದ ಹಾಗೆ ಅವಳಿಗೆ ನಾನು ನೆನಪಾಗಿಹೋಗಿದ್ದೆ. ಆದರೆ some people never learn from their past mistakes ಅನ್ನೋದಿಕ್ಕೆ ನನಗಿಂತ ಬೇರೆ ಯಾವ ಉದಾಹರಣೆಯೂ ಬೇಕಿಲ್ಲ. ಅವಳು ಮಾತಾಡಿಸಿದ ಕೂಡಲೇ ನನ್ನ ಜೀವನ ಪಾವನವಾಗಿ ಹೋದಂತೆ ಅವಳ ಜೊತೆ ಮಾತಾಡುತ್ತಾ ನಿಂತೆ. ನನ್ನ ಶಪಥವೆಲ್ಲ ಮರೆತೇ ಹೋಗಿತ್ತು. ಹಾಗೆ ಮಾತಾಡುತ್ತಾ ನಿಂತ ಅವಳು ನನ್ನ ಸಂಸ್ಕೃತ ನೋಟ್ಸ್ ಬೇಕು ಅಂತ ಕೇಳಿದಳು. ಸಂಸ್ಕೃತ ಮತ್ತು ಇಂಗ್ಲೀಷನ್ನು ಕ್ಯಾರೆ ಅನ್ನದ ವಿಜ್ಞಾನದ ವಿದ್ಯಾರ್ಥಿಯಾದ ಅವಳಿಗೆ ಪರೀಕ್ಷೆ ಹತ್ತಿರವಾದಾಗ ನನ್ನ ಸಂಸ್ಕೃತದ ನೋಟ್ಸ್ ಬೇಕಿತ್ತು! ಹಾಗಾಗಿ ಅವತ್ತು ಆ ಮಟ್ಟದ ಪ್ರೀತಿ ಉಕ್ಕಿ ಹರಿದಿದ್ದು.

ಆದರೆ ನಾನು ಈ ನೆಪದಿಂದ ಕಳೆದುಹೋದ ಸುಜಾತಾ ಮತ್ತೆ ಸಿಗುತ್ತಾಳೆ ಅಂತ ಭ್ರಮಿಸಿದೆ. ನನ್ನ ಸಂಸ್ಕೃತ ನೋಟ್ಸ್ಗಿಂತ ಶೈಲಾಳದ್ದು ತುಂಬ ಚೆಂದವಿದೆ ಅಂತ ಹೇಳಿ ಅವಳ ಮನೆಗೆ ಕರೆದುಕೊಂಡು ಹೋದೆ. ‘ಅವಳನ್ನ ಯಾಕೆ ಕರ್ದುಕೊಂಡು ಬಂದೆಯೇ? ನಾನು ಅವಳಿಗೆ ನೋಟ್ಸ್ ಕೊಡಲ್ಲ’ ಅಂತ ಪಟ್ಟು ಹಿಡಿದ ಶೈಲಾಗೆ ಸ್ಕೂಲಿನ ದಿನದ ಗೆಳೆತನವನ್ನೆಲ್ಲಾ flashback ಮಾಡಿಸಿ ಅಂತೂ ನೋಟ್ಸ್ ಕೊಡಿಸಿದೆ. ಶೈಲಾಗೆ ಮನಸಿನಲ್ಲಿದ್ದ ನಂಜು ಮುಚ್ಚಿಟ್ಟುಕೊಳ್ಳಲು ಆಗದೇ ಅವಳ ಕೈಗೆ ಬುಕ್ ಇಡುವಾಗ ‘ಅಂತೂ ನಿನಗೆ ನೋಟ್ಸ್ ನೆಪದಿಂದ ನಾವು ನೆನಪಾದೆವು ನೋಡು’ ಅಂತ ವ್ಯಂಗ್ಯವಾಡಿದಳು. ಸುಜಾತಾ ಕೂಲಾಗಿ ‘ನಾವು ಸೈನ್ಸ್ನವರಮ್ಮಾ … ನಿಮ್ಮ ಹಾಗೆ ಕಾಮರ್ಸ್ನವರಲ್ಲ. ನಮಗೆ ಓದೋದು ತುಂಬ ಇರತ್ತೆ. ಅದಕ್ಕೇ ಅದೆಲ್ಲ ಬರೆದುಕೊಳ್ಳಕ್ಕೆ ಟೈಮಿರಲ್ಲ. ನಿಮಗಾದರೆ ಬೇರೆ ಏನು ಕೆಲಸ ಹೇಳು’ ಅಂದುಬಿಟ್ಟಳು. ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡಿದ್ದೆವು ನಾವು. ಕೊಟ್ಟಾಗಿದ್ದ ನೋಟ್ಸನ್ನು ಕಿತ್ತುಕೊಳ್ಳುವುದು ನಾಗರೀಕತೆಯಲ್ಲ ಅಂತ ಎಣಿಸಿ ಸುಮ್ಮನಾದೆವು.
ಅವತ್ತು ಮಾತನಾಡಿಸಿದ ನಂತರ ಗೆಳೆತನ revive ಆಗಿಹೋಗುತ್ತೆ ಅಂತ ನಂಬಿದ್ದ ನಾನು ಮೂರ್ಖಳು ಅಂತ ಸುಜಾತಾ ಸೆಕೆಂಡ್ PUC ನಲ್ಲಿ ಮತ್ತೆ ಪ್ರೂವ್ ಮಾಡಿದಳು. ಅವತ್ತು ಮತ್ತೆ ದುಪ್ಪಟಾ ಹಾರಿಸುತ್ತ ಬಿಗಿ ಕಂಠದಿಂದ ‘ಹಾಯ್’ ಅಂದು ಹೋದವಳು ಮತ್ತೆ ತಿರುಗಿಯೂ ನೋಡದೇ ವರ್ಷದ ಕಡೆಯಲ್ಲಿ ನಮ್ಮ ಹತ್ತಿರ ಬಂದಳು … ಮತ್ತದೇ ನೋಟ್ಸ್ಗಾಗಿ! ಆದರೆ ಈ ಸಲ ಶೈಲಾ ನನ್ನ ಮಾತು ಕೇಳಲಿಲ್ಲ. ನೋಟ್ಸ್ ಬರೆದುಕೊಂಡೇ ಇಲ್ಲ ಅಂತ ಹೇಳಿಬಿಟ್ಟಳು. ‘ಆಹಾಆಆಅ! ಸುಳ್ಳು ಹೇಳ್ತಿದಿ’ ಅಂತ ಸಲಿಗೆಯಿಂದ ಮಾತಿಗಿಳಿದ ಸುಜಾತಾಗೆ ‘ಹಾಗೇ ಅಂದ್ಕೋ’ ಅಂತ ಹೇಳಿ ಸುಮ್ಮನಾಗಿ ಬಿಟ್ಟಳು. ಕೊನೆಗೂ ಅವಳು ನೋಟ್ಸ್ ಕೊಡಲಿಲ್ಲ. ನಾನಿದ್ದೆನಲ್ಲ ಪೆದ್ದಲಾಷ್ಟಕ … ನನ್ನ ಸುಮಾರಾಗಿದ್ದ ನೋಟ್ಸನ್ನೇ ಅವಳಿಗೆ ಕೊಟ್ಟೆ. ಅದೇ ಕೊನೆ ಅವಳು ನನ್ನ ಜೊತೆ ಮಾತಾಡಿದ್ದು! ಆಮೇಲೆ ಒಂದು ಸಲ ಥಿಯೇಟರಿನಲ್ಲಿ ಸಿಕ್ಕಾಗ ಕೂಡಾ ನಮ್ಮ ಪಕ್ಕ ಸೀಟ್ ಇದ್ದರೂ ಅವಳು ತನ್ನ ಅಮ್ಮನ ಜೊತೆ ಬೇರೆಯಾಗಿ ಕೂತು ಸಿನೆಮಾ ನೋಡಿದಳು. ಅಲ್ಲಿಗೆ ಶುಭಂ!!
ಮುಂದೆ ಸುಮಾರು 25 ವರ್ಷ ನಾನು ಮತ್ತು ಶೈಲಾ ಅವಳ ಬಗ್ಗೆ ಮಾತಾಡಿಕೊಳ್ಳುತ್ತಲೇ ಉಳಿದೆವು. ಅವಳು ಇಂಜಿನಿಯರಿಂಗ್ ಸೇರಿದಳಂತೆ, ತುಮಕೂರಿನ ಯಾವುದೋ ಕಾಲೇಜಿನಲ್ಲಿ ಲೆಕ್ಚರರ್ ಅಂತೆ, ಮದುವೆ ಆಯಿತಂತೆ, ಅವಳಿಗೊಬ್ಬಳು ಮಗಳಿದ್ದಾಳಂತೆ ಹೀಗೆ ಒಂದಷ್ಟು ದಿನ ಅವಳ ಸುದ್ಧಿ ಗಾಳಿಯಲ್ಲಿ ತೇಲಿ ಬಂತು ಆಮೇಲೆ ಪೂರ್ತಿ ನಿಶ್ಯಬ್ಧ! ಅವಳ ಯಾವ ವಿಷಯವೂ ಕಿವಿಗೆ ಬೀಳಲೇ ಇಲ್ಲ. ನಾನು, ಶೈಲಾ ಭೇಟಿಯಾದಾಗಲೆಲ್ಲ ನೆನ್ನೆ, ಮೊನ್ನೆ ನಮ್ಮಿಂದ ದೂರವಾದ ಯಾವುದೋ ಗೆಳತಿಯ ಬಗ್ಗೆ ಮಾತಾಡಿಕೊಳ್ಳುವಂತೆ ಸುಜಾತಳನ್ನು ನೆನಪಿಸಿಕೊಳ್ಳುತ್ತಿದ್ದೆವು. ತುಂಬ ವರ್ಷಗಳಾಗಿ ಹೋಗಿದ್ದರಿಂದ ಅವಳು ನಮ್ಮ ಬಗೆ ತೋರಿಸಿದ ಅಸಡ್ಡೆ ಕೂಡಾ ಮರೆತುಹೋಗಿತ್ತು. ಹಾಗಾಗಿ ಮತ್ತೆ ಅವಳ ಹುಡುಕಾಟಕ್ಕೆ ಇಳಿದೆವು ನಾವಿಬ್ಬರೂ ….
ಸಿಕ್ಕ ಸಿಕ್ಕವರ ಹತ್ತಿರವೆಲ್ಲಾ ಅವಳ ಬಗ್ಗೆ ಕೇಳುತ್ತಿದ್ದೆವು. ಯಾರಿಗೂ ಅವಳ ಬಗ್ಗೆ ಏನೂ ಗೊತ್ತಿರಲಿಲ್ಲ. ಅವಳ ಸುದ್ಧಿ ಏನೇನೂ ಸಿಗಲಿಲ್ಲ. ನಾವು ಸ್ಕೂಲಿನಲ್ಲಿದ್ದಾಗ ಬರೆಯುತ್ತಿದ್ದ ಕವಿತೆಗಳು ಮತ್ತು ಬೇರೆಯವರು ಬರೆದಿದ್ದ ಕವಿತೆಗಳನ್ನು ಖುದ್ದು ಸುಜಾತಾ ಮೂರು ಕಾಪಿ ಮಾಡಿ ನನಗೆ ಮತ್ತು ಶೈಲಾಗೆ ಕೊಟ್ಟಿದ್ದಳು. ಶೈಲಾ ಅದನ್ನು ಕಳೆದು ಹಾಕಿದ್ದಳು. ನಾನು ಮಾತ್ರ ಅದನ್ನು ಜೋಪಾನವಾಗಿಟ್ಟಿದ್ದೆ (ಇವತ್ತಿಗೂ ಅದು ನನ್ನಲ್ಲಿದೆ). ಶೈಲಾ ಮನೆಗೆ ಹೋದಾಗೆಲ್ಲ ಆ ಕವಿತೆ ಪುಸ್ತಕ ತೋರಿಸಿ, ಅದರಲ್ಲಿ ಬರೆದಿರುವುದನ್ನೆಲ್ಲ ಓದಿ ನಾಸ್ಟಾಲ್ಜಿಯಾ ಟ್ರಿಪ್ ಹೊರಡುತ್ತಿದ್ದೆವು. ನಮ್ಮ-ಅವಳ ಸ್ನೇಹಕ್ಕೆ ಸಾಕ್ಷಿಯಾಗಿ ಉಳಿದಿದ್ದು ಆ ಪುಸ್ತಕವೊಂದೇ…

ಆಮೇಲೆ ಈ ಇಂಟರ್ನೆಟ್ ಬಂತಲ್ಲಾ ಆಗ ಮತ್ತೆ ಸುಜಾತಳ ಹುಡುಕಾಟಕ್ಕೆ ಬಿದ್ದೆ. ಗೂಗಲಣ್ಣನಿಗೆಲ್ಲ ಸಂದೇಶ ಕಳಿಸಿದೆ ಸುಜಾತಾ ಏನಾದಳು ಅಂತ. ಆ ಪರಿಯ ಹುಚ್ಚು ನನ್ನದು! ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಗೂಗಲಣ್ಣ ಅವಳ ಹೆಸರಿನ ಒಂದೆರಡು ಸರ್ಚ್ ಹುಡುಕಿ ಕೊಟ್ಟೇ ಬಿಟ್ಟ! ಯಾವುದೋ ಮಂಜಿನ ಬೆಟ್ಟದ ಮೇಲೆ ನಿಂತ ಗಂಡ-ಹೆಂಡತಿ-ಮಗಳ ಸಂಸಾರದ ಫೋಟೋ ಅದು. ಅದನ್ನು ಎನ್ಲಾರ್ಜ್ ಮಾಡಿ ಕನ್ನಡಕ ಹಾಕಿ ನೋಡಿದರೂ ಅದು ಅವಳೋ, ಅಲ್ಲವೋ ಅಂತ ಗೊತ್ತಾಗಲೇ ಇಲ್ಲ. ಇನ್ನೊಂದು ಸೈಟಿನಲ್ಲಿ ಸುಜಾತಾ IISC ಯಲ್ಲಿ ಯಾವುದೋ ಪೇಪರ್ presentation ಮಾಡಿದ ಡೀಟೈಲ್ಸ್ ಇತ್ತು! ಅದನ್ನು ಹಿಡಿದು ಅಲ್ಲಿಗೆ ಫೋನ್ ಮಾಡಿದೆ! ಈ ಹುಚ್ಚಿಗೆ ಏನು ಅರ್ಥವೋ ನನಗೆ ಇವತ್ತಿಗೂ ಸೋಜಿಗವೆನ್ನಿಸುತ್ತದೆ. ಅವರು ಹಿಂದೆ ಒಬ್ಬರು ಸುಜಾತಾ ಇದ್ದರೆಂದೂ, ಆ ನಂತರ ಅವರು ತುಮಕೂರಿನ ಕಾಲೇಜೊಂದರಲ್ಲಿ ಇದ್ದಾರೆಂದೂ ಅಲ್ಲಿನ ಡೀಟೈಲ್ಸ್ ಕೊಟ್ಟರು. ಅಲ್ಲಿಗೆ ಫೋನ್ ಮಾಡಿದರೆ ಅಲ್ಲಿ ಕೆಲಸ ಬಿಟ್ಟು ತುಂಬ ವರ್ಷವಾಯಿತೆಂದೂ, ಯಾವುದೋ ಸಾಫ್ಟ್ವೇರ್ ಕಂಪನಿ ಸೇರಿದಳೆಂದೂ ಹೇಳಿದರು. ಅಲ್ಲಿಯೂ ತಡಕಾಡಿ ಸೋತೆವು. ಆದರೆ ಹುಡುಕಾಟ ನಿಲ್ಲಿಸಲೇ ಇಲ್ಲ …
ಈಗ ನಾಲ್ಕು ವರ್ಷದ ಕೆಳಗೆ ಒಂದು ದಿನ ಶೈಲಾ ಫೋನ್ ಮಾಡಿ ಸುಜಾತಾ ನಂಬರ್ ಸಿಗ್ತು ಕಣೇ ಅಂತ ಕಿರುಚಿದಾಗ ನಾನು ಅವಳ ಮನೆಗೆ ಓಡಿದ್ದೆ. ಶೈಲಾ ಮನೆ ಕ್ಲೀನ್ ಮಾಡುತ್ತಿರಬೇಕಾದರೆ ಒಂದು ಹಳೆಯ ಡೈರಿ ಸಿಕ್ಕಿತ್ತು… ಸುಮಾರು 25 ವರ್ಷ ಹಿಂದಿನದ್ದು. ಅದರಲ್ಲಿ 5 digit ನ ಅವಳ ನಂಬರ್ ಇತ್ತು! ಆ 5 Digit ನ ನಂಬರ್ ಈಗ 8 ಅಂಕೆಗಳ ನಂಬರ್ ಆಗಿಹೋಗಿತ್ತು. ಎಷ್ಟು ಸುದೀರ್ಘ ಕಾಲ ನಾವು ಅವಳ ಹುಡುಕಾಟದಲ್ಲಿದ್ದೇವೆ ಅಂತ ಆಗ ಅರ್ಥವಾಯಿತು! ಇಬ್ಬರೂ ಕೂತು ಕಾಲ ಕಾಲಕ್ಕೆ ಯಾವ ನಂಬರ್ ಸೇರಿಸಿದರು ಅಂತ ನೆನಪಿಸಿಕೊಂಡು ಅಂತೂ, ಇಂತೂ 8 ಅಂಕೆಗಳ ಅವಳ ಫೋನ್ ನಂಬರ್ re construct ಮಾಡಿದೆವು. ಶೈಲಾ ಆ ಕೂಡಲೇ ಅವಳ ನಂಬರಿಗೆ ಕಾಲ್ ಮಾಡಿದರೆ ನಿಜಕ್ಕೂ ಅದು ಅವಳ ತಾಯಿಯ ಮನೆಯ ನಂಬರ್ರೇ ಆಗಿತ್ತು!! ನಾವು ನಮ್ಮ ವಿಜಯವನ್ನು ಕೊಂಡಾಡಿದೆವು. ಆಮೇಲೆ ಅವಳ ತಾಯಿ ಸುಜಾತಳ ನಂಬರ್ ಕೊಟ್ಟರು. ನಾವು ಆ ಕೂಡಲೇ ಕಾಲ್ ಮಾಡಿದ್ದೂ ಆಯ್ತು… ಸುಜಾತಾ ಸಿಕ್ಕಿ ಬಿಟ್ಟಿದ್ದಳು …
ನಾನು, ಶೈಲಾ ತುಂಬ excitement ನಿಂದ ಮಾತಾಡಿ ಅವಳ ಜೊತೆ ಹರಟಿದೆವು. ಅವಳೂ ಪುಣ್ಯಕ್ಕೆ ನೀವ್ಯಾರು ಅನ್ನದೇ ಮಾತಾಡಿಸಿದಳು. ಮನೆಗೆ ಬನ್ನಿ ಅಂದಳು. ನಾವಿಬ್ಬರೂ ಅವಳ ಆಹ್ವಾನವನ್ನು ತುಂಬ ಸೀರಿಯಸ್ಸಾಗಿ ತೆಗೆದುಕೊಂಡು ಬಿಟ್ಟು ಮಾರನೆಯ ದಿನ ಅಂದರೆ ಜನವರಿ 1, 2009 ರಂದು ಅವಳನ್ನು ನೋಡಲು ಬರುತ್ತೇವೆ ಅಂತ ಅಡ್ರೆಸ್ ತೆಗೆದುಕೊಂಡಿದ್ದೂ ಆಯ್ತು…
ಅವತ್ತಿನ ದಿನ ತುಂಬ ತಳಮಳ. ಇಷ್ಟೊಂದು ವರ್ಷದ ಮೇಲಿನ ಭೇಟಿ ಹೇಗಿರುತ್ತದೋ ಅಂತ. ನಾನು ಅವಳ ಕೈಬರಹದ ಕವನದ ಬುಕ್ ಹಿಡಿದು ಹೋದೆ … ಅಪೂರ್ವ ಭೇಟಿಯೊಂದರ ನಿರೀಕ್ಷೆಯಲ್ಲಿ. ಮಲ್ಲೇಶ್ವರದ ಅವಳ ಮನೆಯ ಬಾಗಿಲು ತಟ್ಟಿದಾಗ ನಾವಿಬ್ಬರೂ ಬಾಯಲ್ಲಿರುವ ಹಲ್ಲೆಲ್ಲ ಕಾಣುವಂತೆ ನಗುತ್ತಾ ನಿಂತೆವು. ಬಾಗಿಲು ತೆಗೆದ ಅವಳು ನಿರ್ಲಿಪ್ತಳಂತೆ ‘ಹಾಯ್ .. ಬನ್ನಿ’ ಅಂದಳು. ನಮ್ಮ ಉತ್ಸಾಹ ಸ್ವಲ್ಪ ತಣ್ಣಗಾಯಿತು. ನಾನು ನನ್ನ ಕೈಲಿದ್ದ ಪುಸ್ತಕ ಅವಳ ಕೈಗಿಟ್ಟೆ … ಅವಳು ಅದನ್ನು ಹಿಂದೆ ಮುಂದೆ ಒಂದು ಸಲ ತಿರುಗಿಸಿ ನೋಡಿ ‘ನಾನು ಕನ್ನಡ ಓದೇ 25 ವರ್ಷ ಆಗೋಯ್ತು ಅನ್ಸತ್ತೆ …’ ಅಂದು ಪುಸ್ತಕ ವಾಪಸ್ ಕೊಟ್ಟಳು…ಅದರಲ್ಲಿನ ಅವಳದ್ದೇ ಕವಿತೆಯನ್ನು ಸಹಾ ಕಣ್ಣೆತ್ತಿಯೂ ನೋಡದೇ. ನಾನು, ಶೈಲಾ ಸೀಟಿನಲ್ಲಿ ತಿಣುಕಾಡುತ್ತ ಕೂತಿದ್ದೆವು. ಅವಳು ತುಂಬ ಒಳ್ಳೆ ಕೆಲಸದಲ್ಲಿದ್ದಳು. ಹಾಗಾಗಿ ನಮ್ಮ ಹಾಗೆ ಜಂಗ್ಲಿಗಳಂತೆ ಅಲ್ಲ ಕಣೇ, ಬಾರೇ, ಹೋಗೆ ಅಂತೆಲ್ಲ ಮಾತು ಕೂಡಾ ಆಡದೇ ‘ನೀವೇನು ಮಾಡ್ತಿದ್ದೀರ? ಮನೆ ಎಲ್ಲಿ? ಮಕ್ಕಳು? ಅಂತೆಲ್ಲ ತುಂಬು ಗಾಂಭೀರ್ಯದಿಂದ ವಿಚಾರಿಸಿಕೊಂಡಳು. ನಾವಿಬ್ಬರೂ ಸ್ವಲ್ಪ ಹೊತ್ತು ಕೂತವರು, ಅಲ್ಲಿನ ಕೃತಕತೆ ಸುಸ್ತು ತರಿಸಿ ‘ನಾವಿನ್ನು ಹೊರಡ್ತೀವಿ’ ಅಂದೆವು. ಅವಳು ಕೂಡಾ ಬಿಡುಗಡೆಯ ದನಿಯಲ್ಲಿ ‘ಹೌದಾ… ಸರಿ. ನನಗೆ ಕೂಡಾ ನಮ್ಮ ಫ್ಲ್ಯಾಟ್ಗೆ ಪೇಂಟರ್ ಬರೋವ್ನಿದ್ದಾನೆ. ಅಲ್ಲಿಗೆ ಹೋಗಬೇಕು. ನಾನು ಹೊರಡ್ತೀನಿ. ಲೇಟ್ ಆಗೋಯ್ತು’ ಅಂದಳು. ಒಲ್ಲದ ಅವಳ ಮೇಲೆ ಬಲವಂತವಾಗಿ ಬಿದ್ದು ಹೋದ ನಾವು ಅವಳ ನೆನಪಿನಿಂದ, ಆತ್ಮೀಯ ಬಳಗದಿಂದ, ಬಾಳಿನಿಂದ ನಿರ್ಗಮಿಸಿ ತುಂಬ ತುಂಬ ದಿನ ಕಳೆದುಹೋಗಿದ್ದವು ಅನ್ನುವುದು ಸಾಕ್ಷಾತ್ಕಾರವಾಗಿ, ಇನ್ನು ಸೆಕೆಂಡ್ಗಳ ಲೆಕ್ಕದಲ್ಲಿ ಅಲ್ಲಿ ಕೂತುಕೊಳ್ಳುವುದೂ ಅಕ್ಷಮ್ಯ ಅಪರಾಧ ಅನ್ನಿಸಿ ಎದ್ದೆವು.
ಮತ್ತೆ ಹಿಂತಿರುಗಿ ನೋಡಲಿಲ್ಲ …
ಅಹವಿ ಹಾಡು : ಹೀಗೊಂದು nostalgia ….

ಬಹುಶಃ ಇಂಥಾ ಗೆಳೆತನಗಳು ಎಲ್ಲರ ಉಡಿಯಲ್ಲೂ ಇರುತ್ತವೆ ಮತ್ತು ಈ ತೆರನಾದ ಅನುಭವಗಳು ಕೂಡ.
ಅದೇಕೋ ಬೆನ್ನು ಮಾಡಿ ಹೋದವರ ಹಿಂದೆ ಓಡುತ್ತಲೇ ಇರುತ್ತೇವೆ ನಾವುಗಳು
ಬರೆದು ಮತ್ತೆ ನೆನಪಿಸಿದಿರಿ 🙂
Painting ada mele mattomme punaravarthisabahudithu. Niroopane bahala chennagide.Andu tiliyada ivara sahasagalu indu tilidavu .N.Viswanatha
ಹ್ಹೆ.. ಇದೊಂಥರ ಮೊದ್ಲು ಸ್ಟೇಟಸ್, ಪ್ರಯಾರಿಟಿಸ್, .. ಆಮೇಲೆ ಪುರಸೋತ್ತಿದ್ದರೆ ನೆನಪು, ಗೆಳೆತನ, ಭಾವನೆ, ಮಣ್ಣು ಮಸಿ ಎಲ್ಲಾ … ಲೈಫು ಇಷ್ಟೇನೆ …:) 🙂 🙂 ನೀವೊಬ್ರೆ ಹೀಗೆಲ್ಲಾ ಪೆದ್ದಲಾಷ್ಟಕ ಅನ್ಕೋ ಬೇಡಿ .. ಹಿಂದ್ಹಿಂದೆ ನಾನೂ ಬರ್ತಿದೀನಿ ..:) 🙂 🙂 ಚನ್ನಾಗಿತ್ತು ಬರಹ..
Oh. So sad. Why are friendships based on one’s field of study or profession. Super writeup Bharathi.
ನಮ್ಮಂಥ ಭಾವವುಕ ಜೀವಿಗಳಿಗೆ ಸ್ನೇಹ, ಪ್ರೀತಿ ವರುಷಗಳು ದಶಕಗಳಾಗಿ ಉರುಳಿದರೂ ಮರೆತಿರುವುದಿಲ್ಲ. ನೆನ್ನೆ ಮೊನ್ನಿನ ಉತ್ಸಾಹವೇ ತುಳುಕುತ್ತಿರುತ್ತದೆ. ಆದರೆ ನಿರ್ಲಿಪ್ತ , ನಿರ್ಭಾವುಕರಿಗೆ ಎನೂ ಅನಿಸೊಲ್ಲ ಕಣೆ. ಲೈಫು ಇದೇನೆ..:)
beautiful post.
ಭಾವನೆಗಳನ್ನು ಬಹಳ ಸೊಗಸಾಗಿ ವ್ಯಕ್ತ ಪಡಿಸಿದ್ದೀರ.
ನಿನ್ನಲ್ಲಿರುವ ಭಾವದ ತುಣುಕುಗಳು ನನ್ನಲ್ಲೂ ಇರೋದ್ರಿಂದ… ನೀ ಯಾಕೋ ನನಗೆ ತುಂಬಾ ಹತ್ತಿರ ಅನ್ನಿಸ್ತೀಯ ಕಣೆ ಭಾರತಿ..
🙁 ಇ೦ತಹ ವ್ಯ(ಕ)ಥೆ ಗಳು ನಮ್ಮಲ್ಲೂ ಇವೆ
matte ade…. aaptate barahadalli 🙂
navu muru jana gelatiyaru. sumaru 40 varshada melayitu. varushakkommeyu bhettiyaguvdilla. adaru contactinalli iddeve.adralli obblantu varushakkommene phone madodu. aadare geletna bittilla. inthavaru iddeve.vishayada aayke niroopane chennagide.
some people never lears from the past mistakes- ಅಲ್ವಾ!?(ನಾನೂ ಅಷ್ಟೆ; ೫೦;೫೦)
ಬರಹ ಚೆನ್ನಾಗಿದೆ
Excellent ! 🙂
Simply Sooooooooooooooooooooooooooooooooooooooooper…