ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ’ರೇಪ್ ಆದ ಹೆಣ್ಣು ಮೈತುಂಬ ಬಟ್ಟೆ ತೊಡಬೇಕು ಅನ್ನುವ ಮಾತೂ…’

ಈಗೊಂದಿಷ್ಟು ತಿಂಗಳ ಹಿಂದೆ ದೆಹಲಿಯ ಗ್ಯಾಂಗ್ ರೇಪ್ ಪ್ರಕರಣ ನಡೆದಿದ್ದು ನೆನಪಿದೆಯಲ್ಲವೇ? ಆಗೆಲ್ಲ ಅದೇನು ಭಯಂಕರ ಹೋರಾಟ, ಚೀರಾಟ. ಇಡೀ ಪತ್ರಿಕೆಯ ತುಂಬ, ಟಿ.ವಿ ಯ ತುಂಬ ಆ ಹುಡುಗಿಯದ್ದೇ ಸುದ್ದಿ. ಆಮೇಲೆ ಆ ಹುಡುಗಿ ಸತ್ತು ಹೋದಳು. ಆಮೇಲೆ ಒಂದಿಷ್ಟು ದಿನ ಅವಳ ಹೆಸರಿನಲ್ಲಿ ಹಣತೆ ಹಚ್ಚಿದೆವು, ಮೌನ ಆಚರಿಸಿದೆವು …. ಅಲ್ಲಿಗೆ ಓಂ ಶಾಂತಿ ಶಾಂತಿ ಶಾಂತಿಃ. ಆಮೇಲೆ ಆ ರೇಪ್ ಮಾಡಿದ ಧೀರರ ವಿಷಯ ಮನಸ್ಸಿನಿಂದ ಮರೆಯಾಯಿತು. ನಾವು ನಮ್ಮ ನಮ್ಮ ಬದುಕಿಗೆ ಮರಳಿದೆವು. ಇನ್ನು ಅವರಿಗೆ ಅದು ಯಾವಾಗ ಶಿಕ್ಷೆಯಾಗುತ್ತದೋ … ಅಥವಾ ಶಿಕ್ಷೆ ಆಗುತ್ತದೋ, ಇಲ್ಲವೋ ಯಾವುದೂ ಗೊತ್ತಿಲ್ಲ. ಈ ರೇಪ್‌ನ ಸಮಯದಲ್ಲಿ ಇಡೀ ಭಾರತದಲ್ಲಿ ಎಷ್ಟು ವ್ಯಾಪಕ ಪ್ರತಿಭಟನೆ ನಡೆಯಿತು ಅಂದರೆ, ನಾನೆಂದುಕೊಂಡಿದ್ದೆ ‘ಇನ್ನು ಮುಂದೆ ರೇಪ್ ಮಾಡಬಯಸುವವನು ಹೆದರುತ್ತಾನೆ …ಈ ರೀತಿಯ ಪ್ರತಿಭಟನೆ ಹಿಂದೆಂದಿಗಿಂತ ಉಗ್ರವಾಗಿತ್ತು. ಹಾಗಾಗಿ ನಮ್ಮ ದೇಶಕ್ಕೆ ದೇಶವೇ ರಾತ್ರಿ ಮಲಗಿದಾಗ ಮಗ್ಗಲು ಬದಲಿಸುವಂತೆ ಬದಲಾಗಿಬಿಡುತ್ತದೆ’ ಎಂದು.
ಆ ರೇಪ್ ಸುದ್ದಿಯಿನ್ನೂ ಪೇಪರ್‌ನಲ್ಲಿ ಚಾಲ್ತಿಯಲ್ಲಿರುವಾಗಲೇ ಮತ್ತಿಷ್ಟು ಗ್ಯಾಂಗ್ ರೇಪ್ ಪ್ರಕರಣಗಳು ನ್ಯೂಸ್ ಪೇಪರಿನಲ್ಲಿ ಬರಹತ್ತಿದವು! ಯಾವನೂ, ರೇಪ್ ಮಾಡುವ ಒಂದೇ ಒಂದು ಗಂಡು ಪ್ರಾಣಿ ಇಂಥದ್ದಕ್ಕೆಲ್ಲ ಹೆದರುವುದಿರಲಿ, ಕೇರ್ ಕೂಡಾ ಮಾಡುವುದಿಲ್ಲ ಅಂತ ನನಗೆ ಅರ್ಥವಾಗಿದ್ದೇ ಆಗ. ಎಲ್ಲ ಆರೋಪಿಗಳಿಗೂ ಗೊತ್ತು, ರೇಪ್ ಸಾಬೀತಾಗಿ, ಆರೋಪಿಗಳೆಲ್ಲ ಅಪರಾಧಿಗಳೆಂದು ಪರಿಗಣಿಸಲ್ಪಟ್ಟು, ಅವರಿಗೆ ಶಿಕ್ಷೆಯೆನ್ನುವುದೇನಾದರೂ ಆಗುವಷ್ಟರಲ್ಲಿ ಅವರಿಗೆಲ್ಲ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳೂ ಹುಟ್ಟಿಬಿಟ್ಟಿರುತ್ತಾರೆ ಎಂದು. ನಮ್ಮ ದೇಶದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿಯಂಥವರನ್ನು ಹತ್ಯೆ ಮಾಡಿದವರಿಗೇನೇ ಶಿಕ್ಷೆಯಾಗಲು ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ .. ಇನ್ನು ಸಾಮಾನ್ಯ ಮನುಷ್ಯರ ಗತಿ?
ಆ ದೆಹಲಿ ರೇಪ್ ಪ್ರಕರಣ ಇನ್ನೂ ಮನಸ್ಸಿನಿಂದ ಮರೆಯಾಗಿಲ್ಲ. ಅಷ್ಟರಲ್ಲೇ ಫೋಟೋ ಜರ್ನಲಿಸ್ಟ್ ಗ್ಯಾಂಗ್ ರೇಪ್ ಪ್ರಕರಣ ನಡೆದಿದೆ. ಮತ್ತೆ ಪತ್ರಿಕೆಯಲ್ಲೆಲ್ಲ ಸುದ್ದಿ. ಈ ಪ್ರಕರಣದಲ್ಲಿ ಕೂಡಾ ಒಬ್ಬ ‘ಬಾಲ ರೇಪಿಸ್ಟ್’ ಇದ್ದಾನೆ. 19 ವರ್ಷದ ಆತ ಇನ್ನೂ ಮೈನರ್ ಅಂತ ಅವನ ಅಜ್ಜಿ ವಾದಿಸುತ್ತಿದ್ದಾರಂತೆ! ರೇಪಿಸ್ಟ್‌ಗಳ ವಿಷಯದಲ್ಲಿ ಮೈನರ್ ಅನ್ನುವ ಪದವೇ ನನಗೆ ಇರಿಟೇಟ್ ಮಾಡುತ್ತದೆ. ಕಳ್ಳತನ, ದರೋಡೆ ಇಂಥ ವಿಷಯಗಳಲ್ಲಿ ಆರೋಪಿಯನ್ನು ಬಾಲಾಪರಾಧಿ ಅಂತ ಪರಿಗಣಿಸಬಹುದು. ಆದರೆ ಒಂದು ಹೆಣ್ಣನ್ನು ರೇಪ್ ಮಾಡಲು ಒಬ್ಬ ಗಂಡು ಶಕ್ತನಾಗಿದ್ದಾನೆ ಎಂದರೆ ಅವ ಪೂರ್ಣ ಪ್ರಮಾಣದ ಗಂಡಸಾಗಿ ಬೆಳೆದಿದ್ದಾನೆ ಎಂದೇ ಅರ್ಥವಲ್ಲವೇ? ಈ ಕಾರಣಕ್ಕಾಗಿ ಕೂಡ ಒಬ್ಬ ರೇಪಿಸ್ಟ್ ತಪ್ಪಿಸಿಕೊಳ್ಳಬಹುದು ಅನ್ನುವುದು ಎಂತ ಹಾಸ್ಯಾಸ್ಪದ ಅನ್ನಿಸಿಬಿಡುತ್ತದೆ. ಈ ರೇಪ್ ಪ್ರಕರಣದಲ್ಲಿ ಭಾಗಿಯಾದವರು ದೆಹಲಿ ರೇಪ್ ಮಾಡಿದವರಿಗಿಂತ ‘ಮಾನವೀಯತೆ ಉಳ್ಳವರು’ ಅಂತ ಕೂಡಾ ಅನ್ನಿಸಿಕೊಂಡು ಬಿಡುತ್ತಾರೋ, ಏನೋ … ಯಾಕೆಂದರೆ ರೇಪ್ ನಡೆಸಿದ ನಂತರ ಕಬ್ಬಿಣದ ಸರಳನ್ನು ಅವಳ ದೇಹದೊಳಕ್ಕೆ ತೂರಿಸಿಲ್ಲವಲ್ಲ! ಅವಳ ದೇಹದ ಒಳಭಾಗವೆಲ್ಲ ಹರಿದ ಬಟ್ಟೆಯಂತೆ ಆಗಿಲ್ಲವಲ್ಲ ! ಈ ಪ್ರಕರಣದಲ್ಲಿ ಅಂತ ಅಮಾನುಷವ ವರ್ತನೆಯಿಲ್ಲದೇ ‘ಬರೀ ರೇಪ್’ ಮಾಡಿದ್ದಾರಲ್ಲ, ಹಾಗಾಗಿ ಅವರು ಶಿಕ್ಷೆಗೊಳಗಾಗಬಾರದು ಅನ್ನುವ ವಾದ ಕೂಡಾ ಹುಟ್ಟುವ ದಿನ ಬಂದುಬಿಡುತ್ತದೋ ಅಂತ ಭಯವೆನ್ನಿಸುತ್ತದೆ.
ರಸ್ತೆಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದರೆ, ಆ ಗಾಡಿಗಳನ್ನು ನಿರ್ದಾಕ್ಷಿಣ್ಯವಾಗಿ ಜ಼ೀಬ್ರಾ ಗಾಡಿಗಳ ಒಳಗೆ ತುರುಕಿ ಎತ್ತಿಕೊಂಡು ಹೋಗುವುದನ್ನು ನೋಡುತ್ತೇವೆ. ಹೆಲ್ಮೆಟ್ ಹಾಕದಿರುವವರನ್ನು ಪೊಲೀಸರು ತಿರುವಿನಂತ ಕಾಣದ ಸ್ಥಳಗಳಲ್ಲಿ ನಿಂತು, ಹೊಂಚು ಹಾಕಿ ಹಿಡಿದು, ಫ಼ೈನ್ ಕಕ್ಕಿಸುತ್ತಾರೆ. ಒನ್ ವೇನಲ್ಲಿ ಬರುವ ಗಾಡಿಗಳ ಸವಾರರು ರಸ್ತೆಯ ಈ ತುದಿ ಮುಟ್ಟುವಷ್ಟರಲ್ಲಿ ಫ಼ೈನ್ ಕಟ್ಟಲು ರಸೀತಿಯೊಂದು ಅವರನ್ನು ಎದುರು ನೋಡುತ್ತಿರುತ್ತದೆ. ಅಂಥ ವಿಷಯದಲ್ಲೆಲ್ಲ ತ್ವರಿತ ಗತಿಯಲ್ಲಿ ತಪ್ಪು-ಸರಿಗಳು ನಿರ್ಧಾರಿತವಾಗಿ ಹೋಗಿ, ಶಿಕ್ಷೆಯೂ ಆಗಿ ಹೋಗುತ್ತದೆ. ಆದರೆ ಘೋರ ಅಪರಾಧಗಳು ನಿರ್ಧಾರವಾಗಲು ಯಾಕೆ ವರ್ಷಾನುಗಟ್ಟಳೆ ಸಮಯ ಬೇಡುತ್ತವೆ? ಹಾಗೊಂದು ವೇಳೆ ಯಾವುದಾದರೂ ಒಬ್ಬ ರೇಪಿಸ್ಟ್‌ಗೆ ಶಿಕ್ಷೆ ಅಂತ ನಿರ್ಧಾರವಾಗಿಯೇ ಹೋಯಿತು ಅಂದುಕೊಳ್ಳಿ … ಆಗ ನಡೆಯುವ ಆ ಎಮೋಷನಲ್ ಡ್ರಾಮಾಗೆ ಕೂಡಾ ಏನೇನೂ ಕೊರತೆಯಿಲ್ಲ.
ನಿಮಗೆ ನೆನಪಿದೆಯಾ? ಒಂದಿಷ್ಟು ವರ್ಷಗಳ ಕೆಳಗೆ ಧನಂಜಯ ಚಟರ್ಜಿ ಅನ್ನುವವನೊಬ್ಬ ರೇಪ್ ಮಾಡಿದ ನಂತರ ಆ ಹುಡುಗಿಯನ್ನು ಕೊಲೆ ಕೂಡಾ ಮಾಡಿದ್ದ. ಸುಮಾರು ವರ್ಷಗಳ ನಂತರ ಆತನಿಗೆ ಅಂತೂ ಇಂತೂ ಮರಣದಂಡನೆಯ ಶಿಕ್ಷೆ ಅಂತ ನಿರ್ಧಾರವಾಯಿತು. ಆತ ರಾಷ್ಟ್ರಪತಿಗಳಿಗೆ ಕ್ಷಮಾದಾನಕ್ಕೆ ಬೇಡಿಕೆ ಸಲ್ಲಿಸಿದ. ಆ mercy petition ಕೂಡಾ ರಾಷ್ಟ್ರಪತಿ ಅಬ್ದುಲ್ ಕಲಾಮರಿಂದ ತಿರಸ್ಕೃತವಾಯ್ತು. ಆ ನಂತರ ಆತನಿಗೆ ಮರಣದಂಡನೆ ಖಚಿತವಾಯಿತು. ಆ ಸಮಯದಲ್ಲಿ Human Rights activist ಗಳು ಕಣಕ್ಕೆ ಕಾಲಿಟ್ಟರು … ಜೊತೆಗೆ ಮೀಡಿಯಾ ಕೂಡಾ. ಧನಂಜಯನಂತ ಧನಂಜಯನಿಗೆ ಮರಣದಂಡನೆ ಕೂಡದು ಅಂತ ಎಲ್ಲೆಡೆ ಮಾತೋ ಮಾತು. ಪ್ರಾಣ ಕೊಡಲು ಅಶಕ್ತರಾದವರಿಗೆ ಪ್ರಾಣ ತೆಗೆದುಕೊಳ್ಳುವ ಹಕ್ಕೂ ಇಲ್ಲ ಅಂತೆಲ್ಲ ಉದ್ದುದ್ದ ಲೇಖನಗಳು ಪೇಪರಿನಲ್ಲೆಲ್ಲ ಪ್ರಕಟವಾದವು. ಇನ್ನು ಮೀಡಿಯಾದವರಂತೂ ಯಾವುದೋ ಸ್ವಾತಂತ್ರ್ಯ ಯೋಧನ ವಿಷಯ ರಿಪೋರ್ಟ್ ಮಾಡುತ್ತಿರುವ ನೈತಿಕ ಹೊಣೆ ಹೊತ್ತವರಂತೆ ದಿನ ಬೆಳಗಾದರೆ ಧನಂಜಯನ ವಿಷಯ ಪುಂಖಾನುಪುಂಖವಾಗಿ ಬರೆಯಲು ಶುರು ಮಾಡಿದವು. ಆತನಿಗೆ ಕ್ಷಮಾದಾನ ನೀಡಬೇಕಿತ್ತು ಅನ್ನುವ ಮಾತುಗಳೂ, ಚರ್ಚೆಗಳೂ ನಡೆದೇ ನಡೆದವು.

ನಿಜಕ್ಕೂ ಹೇಳಬೇಕೆಂದರೆ ಅವನಿಗೆ ಮರಣದಂಡನೆ ನೀಡಲೂಬಾರದಿತ್ತು ಅನ್ನುವುದನ್ನು ನಾನು ಮತ್ತು ಇನ್ನುಳಿದ ಹೆಂಗಸರೂ ಸಮರ್ಥಿಸುತ್ತೇವೆ … ಆತನ ಲೈಂಗಿಕ ಶಕ್ತಿಹರಣ ಮಾಡಿದ್ದರೆ ಸಾಕಾಗಿತ್ತು. ಡಾಕ್ಟರ್‌ಗಳ ಸಹಾಯದಿಂದ ಅದನ್ನು ಮಾಡಿ ಮುಗಿಸಿ ‘ಆಯ್ತಪ್ಪಾ ನಿನ್ನ mercy petition ಸ್ವೀಕೃತವಾಗಿದೆ. ನೀನಿನ್ನು ಬದುಕಿಕೋ ಹೋಗು’ ಅಂದಿದ್ದರೆ ಅವನಿಗೂ ಮತ್ತು human right activistಗಳಿಗೂ ಪಾಪ ಖುಷಿಯಾಗುತ್ತಿತ್ತು! ಹಾಗೆ ಮಾಡದೇ ಆತನಿಗೆ ಕೊನೆಗೆ ಮರಣದಂಡನೆಯಾಗುವ ನಿರ್ಧಾರ ಖಚಿತವಾಯಿತು. ಆಗಂತೂ ದಿನವೂ ಪೇಪರಿನಲ್ಲಿ ಪೇಜುಗಟ್ಟಳೆ ಧನಂಜಯನ ವಿಷಯವೇ. ಆತ ಸಾಯುವ ಮುಂಚೆ ಹೊಸ ಬಟ್ಟೆ ಬೇಡಿದ, ಊಟಕ್ಕೆ ಮೊಸರು ಕೇಳಿದ, ಸಿಹಿ ತಿಂಡಿ ಬೇಡಿದ. ನೇಣುಗಂಬವನ್ನೇರುವ ಮುನ್ನಾ ದಿನ ಭಕ್ತಿಗೀತೆಗಳನ್ನು ಕೇಳಿದ. ಭಗವದ್ಗೀತೆ ಓದಿದ. ಈ ರೀತಿ ಬರೆದು ಬರೆದು, ಕೊನೆಗೆ ಅವನು ನೇಣಿಗೇರಿಸಲ್ಪಟ್ಟ ಅಂತ ತಿಳಿದಾಗ ಸಿಟ್ಟಿನಲ್ಲಿದ್ದ ನನ್ನಂತವಳ ಗಂಟಲು ಕೂಡಾ ಚೂರೇ ಚೂರು ಬಿಗಿದು ಬರುವಂತೆ ಆಗಿಹೋಗಿತ್ತು! ಈ ರೀತಿಯಲ್ಲಿ ಅಪರಾಧಿಯ ಪರ ಕೂಡಾ ಮರುಕದ ಅಲೆ ಎಬ್ಬಿಸಿಬಿಡುವಂತ ಬೇಜವಾಬ್ದಾರಿತನ ನಮ್ಮದು…
ಇಸ್ಲಾಮಿಕ್ ದೇಶಗಳಲ್ಲಿ ರೇಪ್ ಮಾಡಿದವರಿಗೆ ಕಲ್ಲಿನಿಂದ ಹೊಡೆದು ಸಾಯಿಸುತ್ತಾರೆ, ಸಾರ್ವಜನಿಕವಾಗಿ ಗಲ್ಲಿಗೇರಿಸುತ್ತಾರೆ ಅಂತೆಲ್ಲ ಓದಿ ಧನ್ಯಳಾಗಿದ್ದೆ. ಆದರೆ ಈ ವಿಷಯವಾಗಿ ಓದುತ್ತಾ ಹೋದಂತೆ ಕಂದು ಬಂದ ಕೆಲವು ಸತ್ಯಗಳು ಎದೆ ನಡುಗಿಸುವಂತಿದ್ದವು. ರೇಪ್‌ಗೆ ಒಳಗಾದ ಹೆಣ್ಣಿಗೆ ನಾಲ್ಕು ಜನ ಗಂಡಸರ ಸಾಕ್ಷಿ ಇರಲೇಬೇಕಂತೆ. ರೇಪ್‌ಗೆ ಸಾಕ್ಷಿ?! ಮದುವೆಯ ಮನೆಯಲ್ಲಿ ಜನರಿರುವ ಹಾಗೆ ರೇಪ್ ನಡೆಯುವ ಸ್ಥಳದಲ್ಲೂ ಜನರು ಇರುತ್ತಾರಾ? ಹಾಗೊಂದು ವೇಳೆ ಇದ್ದರೂ ಅವರೂ ಕೂಡಾ ರೇಪ್‌ನಲ್ಲಿ ಭಾಗಿಯಾಗುವಂಥವರೇ ಆಗಿರುತ್ತಾರೆಂಬುದು ಸರಳ ಸತ್ಯ. ಆ ರೀತಿ ನಾಲ್ಕು ಜನರ ಸಾಕ್ಷ್ಯ ಬೇಕೆಂದು ಕೇಳಿದ ಕೂಡಲೇ ಆ ಕೇಸ್ ಬಿದ್ದುಹೋದ ಲೆಕ್ಕಕ್ಕೆ ಸೇರುವುದು ಖಚಿತ. DNA ದಂತ ಸಾಕ್ಷ್ಯ ಕೂಡಾ ಅವರಿಗೆ ಮಾನ್ಯವಲ್ಲವಂತೆ. ಇಂಥ ಸಂದರ್ಭದಲ್ಲಿ ಹೆಣ್ಣೊಬ್ಬಳು ತಾನು ರೇಪ್ ಆದೆ ಎಂದು complaint ಕೊಟ್ಟು, ಆರೋಪಿ ಗಂಡಸು ಅದನ್ನು ನಿರಾಕರಿಸಿದರೆ (ನಿರಾಕರಿಸದೇ ಇನ್ನೇನು ಒಪ್ಪುತ್ತಾನಾ!!!) ಆ ಹೆಣ್ಣು ಅನೈತಿಕ ಸಂಬಂಧದಲ್ಲಿ ತೊಡಗಿದ ಲೆಕ್ಕಕ್ಕೆ ಸೇರಿಹೋಗುತ್ತಾಳಂತೆ ಮತ್ತು ದೂರು ಕೊಟ್ಟ ಆಕೆಗೇ ಛಡಿಯೇಟು ಕೊಡಬೇಕು ಅಂತ ಕೂಡ ನಿರ್ಧಾರವಾಗುವ ಸಾಧ್ಯತೆ ಇದೆಯಂತೆ. ಅಂದಮೇಲೆ ಯಾವ ಹೆಣ್ಣು ಧೈರ್ಯ ಮಾಡಿ ದೂರು ನೀಡಲು ಸಾಧ್ಯ?! ಯಾಕೋ ಇದೆಲ್ಲ ಓದಿ ತುಂಬ depressing mood ಬಂದುಬಿಟ್ಟಿತು.
ರೇಪ್ ನಡೆದಾಗ ಎಲ್ಲ ಕಡೆ ಚರ್ಚೆ ಶುರುವಾಗುತ್ತದಲ್ಲ, ಆಗ ಮೊದಲಿಗೆ ಕೇಳಿಬರುವ ಮಾತು ಅಂದರೆ ಹೆಣ್ಣು ಮೈತುಂಬ ಬಟ್ಟೆ ತೊಡದೇ ಪುರುಷರನ್ನು ಕೆರಳಿಸಿ ಅವಳ ಆಪತ್ತನ್ನು ಅವಳೇ ಬರಮಾಡಿಕೊಳ್ಳುತ್ತಾಳೆ ಅನ್ನುವುದು. ಇದಂತೂ ಹಳಸಲು ಮಾತಾಗಿ ಹೋಗಿದೆ. ಮೈತುಂಬ ಬಟ್ಟೆ ತೊಟ್ಟ ಹೆಂಗಸರು ಯಾರೂ ರೇಪ್ ಆಗಿಯೇ ಇಲ್ಲ ಅನ್ನುವ ಥರದ ಮಾತು. ಇಂಥ ಹಾಸ್ಯಾಸ್ಪದ ಮಾತುಗಳಿಗೆ ಹೋಲಿಸಬಹುದಾದ ಇನ್ನೊಂದು ಹಾಸ್ಯಾಸ್ಪದ ಮಾತು ನನ್ನ ಮನಸಲ್ಲಿ ಮೂಡಿತು … 20 ಕ್ಕೆ ಕಡಿಮೆ ಮೈಕ್ರಾನ್ ಇರುವ ಪ್ಲ್ಯಾಸ್ಟಿಕ್ ಕವರ್‌ಗಳನ್ನು ಉಪಯೋಗಿಸಬಾರದು ಅಂತ ಆರ್ಡರ್ ಬಂದ ಹೊಸತರಲ್ಲಿ ರಸ್ತೆ ಬದಿಯಲ್ಲಿ ತರಕಾರಿ ವ್ಯಾಪಾರಿಗಳ ಹತ್ತಿರ ಅಧಿಕಾರಿಗಳು raid ಗೆ ಬರುತ್ತಾರೆ ಅಂತ ಆ ವ್ಯಾಪಾರಿಗಳು ಹೇಳುತ್ತಿದ್ದರು. ಕವರ್ ಕೊಡದಿದ್ದರೆ ಗಿರಾಕಿಗಳನ್ನು ಕಳೆದುಕೊಳ್ಳುವ ಭಯ. ಹಾಗಾಗಿ ಆ ಕವರ್‌ಗಳನ್ನು ಕದ್ದು ಮುಚ್ಚಿ ಎಲ್ಲೆಲ್ಲೋ ಇಟ್ಟು, ತರಕಾರಿ ಹಾಕಿ, ಗಿರಾಕಿಗಳನ್ನು ಸಾಗಹಾಕುತ್ತಿದ್ದರು. ಆ ಅಧಿಕಾರಿಗಳು ಈ ಬಡಪಾಯಿಗಳನ್ನು ಯಾಕೆ ಶಿಕ್ಷಿಸಬೇಕು? ಅದನ್ನು ತಯಾರಿಸುವವರ ಮೇಲೆ ದುಬಾರಿ ಫೈನ್ ಹೇರಿದರೆ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ (ಕದ್ದು ಮುಚ್ಚಿ ತಯಾರಿಕೆಯಲ್ಲಿ ತೊಡಗುತ್ತಾರೆ ಅನ್ನುವುದೂ ಸತ್ಯವಾದರೂ) ಉಪಯೋಗವಾಗುತ್ತಿತ್ತಲ್ಲವೇ? ಸಮಸ್ಯೆಯ ಮೂಲಕ್ಕೆ ಕೈ ಇಡುವ ಬದಲು ಅಂತ್ಯಕ್ಕೆ ಕೈ ಇಡುವ ಈ ಹಾಸ್ಯಾಸ್ಪದ ಕ್ರಮಗಳು ನಗು ತರಿಸುತ್ತವೆ. ಇದೇ ರೀತಿ ರೇಪ್‌ ಆಗದಂತೆ ತಡೆಯಬೇಕೆಂದರೆ ಹೆಣ್ಣು ಮೈ ತುಂಬ ಬಟ್ಟೆ ತೊಡಬೇಕು ಅನ್ನುವ ಹಾಸ್ಯಾಸ್ಪದ ಮಾತಾಡುತ್ತೀರಲ್ಲ, ಅದು ನಾಗರೀಕ ಸಮಾಜ ಒಪ್ಪುವಂತ ಮಾತೇ?
ಕೊನೆಯ ಮಾತು: ನಮ್ಮ ಬೆಂಗಳೂರಿನಲ್ಲಿ ಇರುವ ಗುಂಡಿಗಳನ್ನೆಲ್ಲ ದಾಟಿಕೊಂಡು ಗಾಡಿ ಮುಂದಕ್ಕೆ ಓಡಿಸುವುದೇ ಒಂದು ಪ್ರಯಾಸದ ಕೆಲಸ. ಎಲ್ಲೋ ಕೆಲವು ‘ನೈಸಾಗಿರುವ’ ರಸ್ತೆಗಳಲ್ಲಿ ಮತ್ತು ಫ಼್ಲೈ ಓವರ್‌ಗಳ ಮೇಲೆ ಮತ್ತು ಅಪರೂಪದ ಕೆಲವು ರಿಂಗ್ ರೋಡ್‌ಗಳಲ್ಲಿ ಸ್ವಲ್ಪ ವೇಗವಾಗಿ ಗಾಡಿ ಓಡಿಸುವ ಸೌಭಾಗ್ಯ ದೊರಕುತ್ತದೆ. ಒಂದಿಷ್ಟು ಸ್ಪೀಡ್ ಒಗ್ಗೂಡಿಸಿಕೊಳ್ಳುವಷ್ಟರಲ್ಲಿ ಅಗೋ! ಆ ರಸ್ತೆಗೆ ಸೇರುವ ಸೈಡ್ ರಸ್ತೆಗಳಿಂದ ಗಾಡಿಗಳು ಎರ್ರಾಬಿರ್ರಿಯಾಗಿ ಈ ಮುಖ್ಯ ರಸ್ತೆಗೆ ಬಂದುಬಿಡುತ್ತವೆ. ಮುಖ್ಯ ರಸ್ತೆಯಲ್ಲಿ ಸ್ಪೀಡ್ ಆಗಿ ಧಾವಿಸಿ ಬರುತ್ತಿರುವ ವಾಹನಕ್ಕೆ ಆ ಗಾಡಿಗಳು ಹೊಡೆದು ಬಿಟ್ಟರೆ? ಅದಕ್ಕೇನು ಪರಿಹಾರ ಅಂತ ಕೇಳಿದರೆ, ಸೈಡ್ ರಸ್ತೆಗೆ ಹಂಪ್ ಹಾಕುವುದು ಅತ್ಯಂತ ಲಾಜಿಕಲ್ ಪರಿಹಾರ ಅಂತ ಯಾರಾದರೂ ಹೇಳಬಹುದು. ಆದರೆ ನಮ್ಮ ಬೆಂಗಳೂರಿನ ಅಧಿಕಾರಿಗಳಿಗೆ ಇದಕ್ಕಿಂತ ಅದ್ಭುತ ಪರಿಹಾರವೊಂದು ಹೊಳೆಯುತ್ತದೆ. ಅದೇನೆಂದರೆ, ಮುಖ್ಯ ರಸ್ತೆಗೇ ಹಂಪ್ ಹಾಕಿಬಿಡುವುದು! ಸೈಡ್ ರೋಡಿನಿಂದ ಅವರು ಸ್ಪೀಡಾಗಿ ಬಂದು ಅಪಘಾತವಾದರೆ ಅಂತ ಮುಖ್ಯರಸ್ತೆಯಲ್ಲಿ ಸಾಗುವ ಇವರೇ ಆ ಸಣ್ಣ ಗುಡ್ಡದಂತ ಹಂಪ್ ಏರಿ ಇಳಿದು ಸಾಗಬೇಕು!
ರೇಪ್ ಆದ ಹೆಣ್ಣು ಮೈತುಂಬ ಬಟ್ಟೆ ತೊಡಬೇಕು ಅನ್ನುವ ಮಾತೂ ಇಂಥದ್ದೇ ಅನರ್ಥಕಾರಿ ನಿರ್ಧಾರ ಅನ್ನಿಸುವುದಿಲ್ಲವೇ ನಿಮಗೆ …?
 

‍ಲೇಖಕರು avadhi

29 August, 2013

ನಿಮಗೆ ಇವೂ ಇಷ್ಟವಾಗಬಹುದು…

9 Comments

  1. Anonymous

    Sathyavannu heliddiri.

  2. Tejaswini Hegde

    ಇಸ್ಲಾಮಿಕ್ ದೇಶದ ಕಾನೂನಿನ ಇನ್ನೊಂದು ಕ್ರೂರ ಮುಖ ಗೊತ್ತಿರಲಿಲ್ಲ. ಅದನ್ನೋದಿದ ಮೇಲೆ ನಮ್ಮ ದೇಶದ ಕಾನೂನೇ ಎಷ್ಟೋ ವಾಸಿ ಎಂದೆನಿಸುತ್ತಿದೆ. ಲೇಖನ ಚೆನ್ನಾಗಿ ಬಂದಿದೆ.

  3. ಅಜ್ಜಿಮನೆಗಣೇಶ್

    ಅರ್ಥಪೂರ್ಣ ಲೇಖನ ಮೇಡಮ್

  4. Vasuki Raghavan

    nimma article-galalli yaavaagaloo iruva acute observation mattu different aada insight missing ittu…neevu pratee guruvaarakke sikkaapatte ollelle articles bareyodanna ododu namage abhyaasa aagogirodoo idakke kaarana irabahudu…

  5. Anil Talikoti

    ರೇಪಿಸ್ಟರ ಶಿಕ್ಷೆಗೆ ಇಸ್ಲಾಮಿಕ್ ದೇಶಗಳತ್ತ ನೋಡುವದು ಒಂದೆರೆಡು ಶತಮಾನಗಳಷ್ಟು ಹಿಂದೆ ಹೋದಂತೆ. ಮೊನ್ನೆ ಮೊಂಟಾನಾದ ಜಡ್ಜ್ (Todd Baugh) ೧೪ ವರುಷದ ಹುಡಗಿಯನ್ನು ರೇಪ ಮಾಡಿದವನಿಗೆ ಬರೀ ಮುವತ್ತು ದಿನದ ಶಿಕ್ಷೆ ವಿಧಿಸಿ ಸಾವಿರಾರು ಜನರ ಆಕ್ರೋಶಕ್ಕೆ ಕಾರಣವಾಗಿದ್ದಾನೆ. ನನಗನಿಸುವ ಮಟ್ಟಿಗೆ fast-track court ಗಳು ಅಥಾವ ಇದಕ್ಕೆಂದೆ ಬೇರೆ ಕೋರ್ಟಗಳಲ್ಲಿ ಇವನ್ನು ಇತ್ಯರ್ಥ ಮಾಡಿ (with special procsecutors), ನೀವು ಹೇಳಿದಂತೆ ಮೈನರ್ಯೆನ್ನುವದನ್ನು ನೋಡದೆ ನಿರ್ದಾಕ್ಷಿಣ್ಯವಾಗಿ ಉಗ್ರ ಶಿಕ್ಷೆ ಶೀಘ್ರವಾಗಿ ಆಗುವಂತೆ ನೋಡಿಕೊಳ್ಳಬೇಕು. ರೇಪಿಗೆ, ಹೆಣ್ಣು ಮೈತುಂಬ ಬಟ್ಟೆ ತೊಡದಿರುವದು ಕಾರಣ ಎನ್ನುವದು ಅನರ್ಥಕಾರಿ ಹಾಗೂ ಅವಹೇಳನಕಾರಿಯಾದ ಮಾತು.

  6. ತಮ್ಮ ಓದುಗ ಅಭಿಮಾನಿ

    ಬಿವಿ ಭಾರತಿಯವರ ಅಭಿಪ್ರಾಯಗಳನ್ನು ಗೌರವಿಸುತ್ತಾ ಒಂದು ಸಣ್ಣ ವಿಷಯವನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ತಾವು ಭಾವಿಸಿರುವಂತೆ- ರೇಪ್‌ಗೆ ಒಳಗಾದ ಹೆಣ್ಣಿಗೆ ನಾಲ್ಕು ಜನ ಗಂಡಸರ ಸಾಕ್ಷಿ ಇರಲೇಬೇಕಂತೆ- ಇದು ವಾಸ್ತವಕ್ಕೆ ದೂರವಾದ ಮಾತು. ನಾಲ್ಕು ಸಾಕ್ಷ್ಯಗಳ ಕಾನೂನು ಅನ್ವಯಿಸುವುದು ವ್ಯಭಿಚಾರದ ಆರೋಪದ ಬಗ್ಗೆ ಹೊರತು ಅತ್ಯಾಚಾರಕ್ಕಲ್ಲ. ಒಂದರ್ಥದಲ್ಲಿ ನೋಡುವುದಾದರೆ, ಈ ನಿಯಮ ಮಹಿಳೆಯ ಮೇಲೆ ಸುಳ್ಳು ಆರೋಪವನ್ನು ಹೊರಿಸುವುದನ್ನು ತಡೆಗಟ್ಟಲಿಕ್ಕಿದೆ ವಿನಹ ಅವಳನ್ನು ಬಲಿಪಶುವನ್ನಾಗಿ ಮಾಡಲು ಅಲ್ಲ. ಜತೆಗೆ, ಈ ವಿಷಯದಲ್ಲಿ ಸುಳ್ಳಾರೋಪ ಮಾಡಿದ ವ್ಯಕ್ತಿಗೂ ಕೂಡಾ ಇಸ್ಲಾಮೀ ಕಾನೂನಿನ ಪ್ರಕಾರ ಶಿಕ್ಷೆ ಇದೆ.
    ನಾನು ಕೂಡಾ ಬಹಳಷ್ಟು ಮೂಲ/ ಅಧಿಕೃತ ಇಸ್ಲಾಮೀ ಪುಸ್ತಕಗಳನ್ನು ಅಧ್ಯಯಿಸಿದ್ದೇನೆ. ಇಂದಿನ ಇಂಟರ್ ನೆಟ್ ಯುಗದಲ್ಲಿ ನಾವು ಯಾವುದೇ ಮಾಹಿತಿಗಾಗಿ ಗೂಗಲ್ ಸೆರ್ಚ್ ನ್ನು ನಂಬುತ್ತೇವೆ. ನನ್ನ ವೈಯುಕ್ತಿಕ ಅನುಭವದ ಮಟ್ಟಿಗೆ ಹೇಳುವುದಾದರೆ, ಈ ಸೆರ್ಚ್ ನಲ್ಲಿ ನಮಗೆ ಹೆಚ್ಚಾಗಿ ಸಿಗುವುದು ಫೇಕ್ ವೆಬ್ ಸೈಟ್ ಗಳು. ಆ ವೆಬ್ ಸೈಟ್ ಗಳ ಹೆಸರು, ಶೈಲಿ ನೋಡಿದಾಗ ನಾವದನ್ನು ನಿಜವಾಗಿಯೂ ಇಸ್ಲಾಮಿನ ಮುಖವಾಣಿಗಳೆಂದು ಭಾವಿಸಬೇಕು, ಆದರೆ ಸ್ವಲ್ಪ ಪರ್ಯಾಯ ಪ್ರಯತ್ನ ಮಾಡಿದಾಗ ನಮಗೆ ವಾಸ್ತವವೇನೆಂಬುವುದು ತಿಳಿಯುತ್ತದೆ.
    ಬಹುಷ ಇಂತಹ ಸಣ್ಣ ಸಣ್ಣ ಗೊಂದಲಗಳ ಚೈನ್ ರಿಯಾಕ್ಷನ್ ನಿಂದಾಗಿನೇ ಇಂದು ಸಮಾಜದಲ್ಲಿ ಇಸ್ಲಾಮ್-ಫೋಬಿಯ ಹರಡಿಕೊಂಡಿದೆ. ಅದನ್ನು ಈ ಕಮೆಂಟ್ ವಿಭಾಗದಲ್ಲಿಯೂ ನಾವು ಫೀಲ್ ಮಾಡಬಹುದು.

  7. ಸುಮನ್ ದೇಸಾಯಿ

    ಹೌದು,ಮೈಮ್ಯಾಲೆ ಹಾಕ್ಕೊಂಡ ಅರವಿ ಬರೊಬ್ಬರಿ ಇಲ್ಲಾಂತ ರೇಪ್ ಆತು ಅನ್ನೊದು ಅರ್ಥಹೀನ ಅನಸ್ತದ.ಏನೊ Mistake ಆತು ಅಂತ ಅಪರಾಧಿಗಳನ್ನ ಸುಮ್ನ ಬಿಡೊದುನು ಒಂದ ದೊಡ್ಡ ಅಪರಾಧನ. Bcoz its not a mistake its blunder”
    ಹಿಂದಕ ವಾಮಾಚಾರಾ ಮಾಡೊವರನ ಅವರ ಹಲ್ಲು ಕಿತ್ತಿ ಶಿಕ್ಷಾ ಕೊಡತಿದ್ರಂತ. ವಾಮಾಚಾರಿಗಳ ಶಕ್ತಿ ಇರೊದನ ಮಂತ್ರಗಳೊಳಗ. ಮಂತ್ರಗಳ ಸ್ಪಷ್ಟ ಉಚ್ಛಾರಣೆ ಇಲ್ಲಂದ್ರ ಅವರ ಸಾಧನೆ ಅವರಿಗೆನ ತಿರಗುಬಾಣ ಆಗತದ. ಹಲ್ಲುಗಳನ್ನ ಕಿತ್ತಿ ವಾಮಾಚಾರಿಗಳನ್ನ ನಿಶ್ಚಪ್ರಯೋಜಕರನ್ನಾಗಿ ಮಾಡಿ, ಮಾಟ ಮಂತ್ರಗಳಿಂದಾಗೊ ಅನಾಚಾರಗಳನ್ನ ತಪ್ಪಿಸಿ ದೇಶದ ಹಿತ ರಕ್ಷಣೆ ಮಾಡತಿದ್ರಂತ. ಅದೇ ರೀತಿ ಬಲಾತ್ಕಾರಿಗಳಿಗೆ ಬರೊಬ್ಬರಿ ಶಿಕ್ಷಾ ಅಂದ್ರ ಅತ್ಯಾಚಾರ ಮಾಡಿದ ವ್ಯಕ್ತಿಯನ್ನ ನಪುಂಸಕನನ್ನಾಗಿ ಮಾಡೊದು. ಹೆಣ್ಣಿಗೆ ಹೆಂಗ ಒಂದ ಸಲಾ ಕಳಕೊಂಡಿದ್ದು ವಾಪಸ ಪಡಿಲಿಕ್ಕೆ ಆಗಲಾರಧಂಥಾ ನೊವನ್ನ ಕೊಟ್ಟಾನೊ ಅಂಥಾ ಒಂದ ನೋವು ಆಂವನು ಅನುಭೊಗಸಬೇಕು.ಭೊಗ ವಸ್ತುಗಳು ತನ್ನ ಮುಂದನ ಇದ್ರುನು ಅದನ್ನ ಭೊಗಿಸಲಿಕ್ಕಾಗಲಾರದ, ತಾ ಮಾಡಿದ ಕುಕೃತ್ಯಕ್ಕ ಸಾಯೊತನಕಾ ವಿಲಿ ವಿಲಿ ಒದ್ದಾಡಿರಬೇಕು.ಯಾವ ಕ್ಷಣಿಕ ಸುಖದ ಸಲುವಾಗಿ ಆಂವಾ ಒಂದ ಜೀವದ ಜೋಡಿ ಆಟಾಆಡಿರತಾನ ಅಂಥಾ ಸುಖಾನ ಜೀವನದಾಗ ಎಂದು ಅನುಭೊಗಸಲಿಕ್ಕಾಗಿರಬಾರದು, ಈಡಿ ಜೀವನಾ ಶಂಡನಂಘ ಒದ್ಯಾಡಿರಬೆಕು. ಬೇರೆ ದೇಶಗಳೊಳಗ ಏನ ಶಿಕ್ಷಾ ಕ್ರಮ ಅದ ಅನ್ನೊದಕ್ಕಿಂತಾ ನಮ್ಮ ದೇಶದೊಳಗ ಇಂಥಾ ಒಂದು ಶಿಕ್ಷೆಯ ಕ್ರಮ ಜಾರಿಗೆ ಬರಬೇಕು.ಹಂಗ ಅಂದ್ರ ಮಾತ್ರ ಆಗೊ ಅನಾಹುತಗಳನ್ನ ತಪ್ಪಸಬಹುದು.

  8. mseswarappa

    ದೇಶದ ಕಾನೂನಿನ ಇನ್ನೊಂದು ಕ್ರೂರ ಮುಖ ಗೊತ್ತಿರಲಿಲ್ಲ. ಅದನ್ನೋದಿದ ಮೇಲೆ ರೇಪಿಸ್ಟರ ಶಿಕ್ಷೆಗೆ ಇಸ್ಲಾಮಿಕ್ ದೇಶಗಳತ್ತ ನೋಡುವದು ನಿರ್ದಾಕ್ಷಿಣ್ಯವಾಗಿ ಉಗ್ರ ಶಿಕ್ಷೆ ಶೀಘ್ರವಾಗಿ ಆಗುವಂತೆ ನೋಡಿಕೊಳ್ಳಬೇಕು.

  9. K Mohan

    tumba vichara puritha haagu arthagarbhitha lekhana. yava kanunu idanna badalayisalu sadhyavilla. ello odida nenapu “man cannot be made virtue by an act of parliament” antha. bari nyaya vyavastheyinda inthaha akrutyagalannu tadegattalu sadhyavilla. manushyana naithikate manavate beleyabeku. naithikatege arthave gottillada eegina janatege adannu kalisalu thane hege sadhya? modala pathashaleyindale ee vyavaste abhivruddhiyagabeku. adare deshada eegina paristhitiyalli idu sadhyave?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading