ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಸುಖೀ ಜೀವಿ ಯಾರು ಅಂತ ಯಾರಾದರೂ ಪ್ರಶ್ನೆ ಕೇಳಿದರೆ ‘ನಾನು’ ಅಂತ ಘಂಟಾಘೋಷವಾಗಿ ಸಾರುತ್ತೇನೆ. ನೀನು ಸುಖವಾಗಿದ್ದೀಯಾ? ಅಂತ ಮರುಪ್ರಶ್ನೆ ಹಾಕಿದಿರೆಂದಿಟ್ಟುಕೊಳ್ಳಿ ‘ಯಾವಳಿಗೆ ಗೊತ್ತು’ ಅನ್ನುವುದು ನನ್ನ ಉತ್ತರವಾಗಿರುತ್ತದೆ. ಮತ್ತೆ ಜಗತ್ತಿನಲ್ಲೇ ಸುಖೀ ಜೀವಿ ನೀನು ಅಂತ ಯಾಕೆ ಸಾರಿಕೊಂಡೆ? ಯಾವ ಆಧಾರದ ಮೇಲೆ ಹೇಳಿಕೊಂಡೆ?ಅಂತ ಮುಂದಿನ ಪ್ರಶ್ನೆ ಹಾಕುತ್ತೀರ ಅನ್ನುವುದೂ ನನಗೆ ಗೊತ್ತು. ಆಗ ನಾನು ಹೇಳುತ್ತೇನೆ ‘ನನಗೂ ಗೊತ್ತಿರಲಿಲ್ಲ ಹಾಗೆಂದು …ಆದರೆ ಇಡೀ ಜಗತ್ತು ನಾನು ಅತ್ಯಂತ ಸುಖೀ ಜೀವಿ ಅಂತ ಸಾರಿ ಸಾರಿ ಹೇಳ್ತಿರೋದ್ರಿಂದ ಅದು ಸತ್ಯವೇ ಅಂತ ನಂಬುವುದಕ್ಕೆ ಶುರು ಮಾಡಿಬಿಟ್ಟಿದ್ದೇನೆ’ ಎಂದು! ನಿಮಗೆ ತಲೆ ಬುಡ ಅರ್ಥವಾಗುತ್ತಿಲ್ಲ ಅನ್ನುವುದು ನನಗೆ ಗೊತ್ತು. ಒಂದಿಷ್ಟು ವಿವರಿಸುತ್ತೇನೆ ಬನ್ನಿ …
ಅಪ್ಪ ಇಂಜಿನಿಯರ್ ಆಗಿದ್ದರೂ ನಮ್ಮ ಮನೆಯಲ್ಲಿ ಹಾಸಿ ಹೊದ್ದುಕೊಳ್ಳುವಂಥ ಅನುಕೂಲ ಯಾವತ್ತೂ ಇರಲಿಲ್ಲ. ಆರಾಮವಾಗಿ ನಾಳಿನ ಯೋಚನೆ ಇಲ್ಲದೇ ಬದುಕುತ್ತಿದ್ದೆವು ಅನ್ನುವುದು ಮಾತ್ರ ನಿಜ. ಆಗೆಲ್ಲ ತುಂಬ ದುಡ್ಡು ಅನ್ನುವುದು ಯಾರ ಹತ್ತಿರವೂ ಇದ್ದ ನೆನಪೇ ಇಲ್ಲ ನನಗೆ. ಬಕಾಸುರನ ಹಾಗೆ ಫ಼ೇರೆಕ್ಸ್ ಡಬ್ಬಗಟ್ಟಳೆ ತಿನ್ನುತ್ತಿದ್ದ ನನ್ನ ಹೊಟ್ಟೆ ತುಂಬಿಸಲು ಅಪ್ಪ ತಿಂಗಳ ಕೊನೆಯಲ್ಲಿ ಹತ್ತು ರೂಪಾಯಿ ಸಾಲ ಅವರ ಗೆಳೆಯನಿಂದ ಪಡೆಯುತ್ತಿದ್ದು ಸಂಬಳ ಬಂದ ಕೂಡಲೇ ವಾಪಸ್ ಕೊಟ್ಟು, ಮತ್ತೆ ತಿಂಗಳ ಕೊನೆಯಲ್ಲಿ prompt ಆಗಿ ಮತ್ತೆ ಹತ್ತು ರೂಪಾಯಿ ಸಾಲ ಕೇಳುತ್ತಿದ್ದರಂತೆ!
ಈ ಥರದ ಮಾಮೂಲಿ ಬದುಕು ಬದುಕುತ್ತಿದ್ದರೂ ಯಾಕೋ ಅಪ್ಪ ಇಂಜಿನಿಯರ್ ಆದ್ದರಿಂದ ಮನೆಯಲ್ಲಿ ಸಿಕ್ಕಾಪಟ್ಟೆ ಅನುಕೂಲವಿದೆ ಅಂತ ಎಲ್ಲರೂ ತೀರ್ಮಾನಿಸಿ ಬಿಡುತ್ತಿದ್ದರು. ಹಾಗಾಗಿ ಸದಾಕಾಲಕ್ಕೂ ನನ್ನ ಗೆಳತಿಯರ ಮಧ್ಯೆ ಯಾವುದೇ ವಸ್ತು ಕೊಳ್ಳುವ ಅಥವಾ ಆಸೆ ಪಡುವ ಮಾತು ಬಂದ ಕೂಡಲೇ ‘ನಿಂಗೇನಮ್ಮಾ ಯೋಚನೆಯಿಲ್ಲ, ನಿಮ್ಮಪ್ಪ ಇಂಜಿನಿಯರ್’ ಅಂತ ಅಂದುಬಿಡುತ್ತಿದ್ದರು ನನ್ನ ಗೆಳತಿಯರು. ಅದನ್ನು ಕೇಳಿ ಕೇಳಿ ನಾನೂ ಕೊನೆ ಕೊನೆಗೆ ಅದನ್ನು ನಂಬಲು ಶುರು ಮಾಡಿಬಿಟ್ಟಿದ್ದೆ! ಆ ನಂತರ ಆ ರೀತಿ ನಂಬುವುದು ನನಗೆ ಅಭ್ಯಾಸವೇ ಆಗಿಹೋಯಿತು!!
ನಮ್ಮ ಮನೆಯಲ್ಲಿ ಇಬ್ಬರೂ ಹೆಣ್ಣುಮಕ್ಕಳೇ. ಹಾಗಾಗಿ ನಮ್ಮ ಮೇಲೆ ಜಬರದಸ್ತಿ ಮಾಡುವ ಅಣ್ಣ-ತಮ್ಮಂದಿರು ಯಾರೂ ಇರಲಿಲ್ಲ. ಹಾಗಾಗಿ ನಮಗೆ ಕಷ್ಟ ಬಂದಾಗ ಒರಗುವುದಕ್ಕೂ ಅಣ್ಣ-ತಮ್ಮಂದಿರಿರಲಿಲ್ಲ. ನಾವು ನಾವೇ ಹೇಗೋ ಬದುಕುವುದು ಅಭ್ಯಾಸವಾಗಿ ಹೋಯಿತು. ಆದರೆ ನನ್ನ ಗೆಳತಿಯರು ಹೇಳುತ್ತಿದ್ದರು ‘ನಿಮ್ಮ ಮನೆಯಲ್ಲಿ ಇಬ್ಬರೂ ಹೆಣ್ಣು ಮಕ್ಕಳೇ ನೋಡು! ಸಖತ್ ಅರಾಮ್. ಗಂಡು ಮಕ್ಕಳ ಜೊತೆ ಹುಟ್ಟಿದ ನಮಗೆ ಯಾವಾಗಲೂ ತಗ್ಗಿ ಬಗ್ಗಿ ನಡೆಯುವ ಉಪದೇಶ ಎದುರಾಗುತ್ತಲೇ ಇರುತ್ತದೆ. ನಿನ್ನ ಬದುಕು ನೋಡು … ಒಳ್ಳೇ ಗಂಡುಗೂಳಿಗಳ ಥರ ಇದೆ. ನಿನ್ನದೇ ಅರಾಮ್ ನೋಡು’ ಎಂದು.
ಕತ್ತಲಾಯಿತಲ್ಲ ಅಂತ ಭಯ ಪಡುವಾಗ, ಆರಾಮವಾಗಿ ಒರಗಿ ಕೂತು ಅಣ್ಣ-ತಮ್ಮಂದಿರಿಂದ ಚಾಟ್ಸ್ ತರಿಸಿ ತಿನ್ನುವಾಗ, ಸಿನೆಮಾಗೆ ಗಂಡುಮಕ್ಕಳು ನಿಂತು ಟಿಕೆಟ್ ತಂದು door delivery ಕೊಡುವಾಗ, ಅಣ್ಣಂದಿರ ಹಿಂದೆ ಸೈಕಲ್ಲಿನಲ್ಲಿ ಕೂತು ಸ್ಕೂಲು ತಲುಪುವಾಗ, ಯಾವನಾದರೂ ರೇಗಿಸಿದಾಗ ಅಣ್ಣನನ್ನು ಜೊತೆಗೆ ಬರಲು ಹೇಳಿ ಅವನ ರಕ್ಷಣೆಯಲ್ಲಿ ಗಾಂಭೀರ್ಯದಿಂದ ನಡೆಯುವಾಗ, ಹೋಟೆಲ್ಲಿನಿಂದ ತಿಂಡಿ ತಂದು ಅಣ್ಣ-ತಮ್ಮಂದಿರು ಎದುರಿಗಿಡುವಾಗ – ಈ ಎಲ್ಲ ಸಂದರ್ಭಗಳನ್ನೂ ಸುಖವಾಗಿ ಅನುಭವಿಸುತ್ತಿದ್ದ ನನ್ನ ಗೆಳತಿಯರು ತಗ್ಗಿ ಬಗ್ಗಿ ನಡೆಯುವ ಉಪದೇಶ ಕೇಳಬೇಕಾಗಿ ಇಲ್ಲವಾದ ಒಂದು ವಿಷಯದ ಆಧಾರದ ಮೇಲೆ ನಾನು ಅವರಿಗಿಂತ ಆರಾಮ್ ಅಂತ ತೀರ್ಮಾನಿಸಿದ ಮೇಲೆ ನಾನು ಯಾಕೆ ಇಲ್ಲ ಅನ್ನಲಿ ನೀವೇ ಹೇಳಿ!
ಆಮೇಲೆ ಮದುವೆಯಾಗುವ ಸಮಯ ಬಂದಿತು. ಲವ್ ಮಾಡಲಿಲ್ಲವಾದ್ದರಿಂದ ಅಪ್ಪ-ಅಮ್ಮನೇ ಗಂಡು ಹುಡುಕುವುದು ಅನಿವಾರ್ಯವಾಗಿತ್ತು. ನಾನೋ ಐದೂ ಮುಕ್ಕಾಲಡಿ ಎತ್ತರ ಇದ್ದೆ . ನಮ್ಮ ದೇಶದಲ್ಲಿ ಗಂಡು ಹೆಣ್ಣಿಗಿಂತ ಎಲ್ಲದರಲ್ಲೂ ಸ್ವಲ್ಪ ಜಾಸ್ತಿಯೇ ಇರಬೇಕು … ಗಂಡು ಸ್ವಲ್ಪ ಜಾಸ್ತಿ ಎತ್ತರ ಇದ್ದು, ಸ್ವಲ್ಪ ಜಾಸ್ತಿ ಓದಿಕೊಂಡು, ಸ್ವಲ್ಪ ಹೆಚ್ಚು ವಯಸ್ಸಿನವನಾಗಿ ಇರುವುದು compulsory ತಾನೇ?! ಹಾಗಾಗಿ ನನ್ನ ಎತ್ತರಕ್ಕೆ ಮೀರುವ ಎತ್ತರದವನು ಎದುರಾಗುವವರೆಗೆ ನಾನು ಕಾಯಬೇಕಿತ್ತು. ನನ್ನ ಗೆಳತಿಯರಲ್ಲಿ ಒಬ್ಬಳಿಗೆ ಮದುವೆಯಾಯಿತು. ಇನ್ನೊಂದು ಸ್ವಲ್ಪ ದಿನ ಕಳೆಯುವುದರಲ್ಲಿ ಮತ್ತೊಬ್ಬಳಿಗೂ ಮದುವೆಯಾಯಿತು. ನಾನು ಸ್ವಲ್ಪ ಮುಜುಗರದಿಂದ, ಸ್ವಲ್ಪ ಕೀಳರಿಮೆಯಿಂದ, ಸ್ವಲ್ಪ ಜಾಸ್ತಿ ಅಸಹನೆಯಿಂದ ವರಪರೀಕ್ಷೆಯಲ್ಲಿ ಭಾಗಿಯಾಗುತ್ತಿರಬೇಕಾದರೆ ನಮ್ಮ ಮನೆಗೆ ಈ ಮದುವೆಯಾದ ಗೆಳತಿಯರಿಬ್ಬರ ಆಗಮನವಾಯಿತು.
ನನ್ನನ್ನು ಕಂಡು ‘ನಿಂದೇ ಆರಾಮ್ ಕಣೇಮ್ಮಾ … ಮದುವೆಯ ಕಾಟವಿಲ್ಲ, ಸುಖವಾಗಿದ್ದೀಯ’ ಅಂತ declare ಮಾಡಿದರು. ಮದುವೆ ಗೊತ್ತಾದ ಮೇಲೆ ಅವರವರ ಗಂಡಂದಿರನ್ನು- i mean respective husbands ಅನ್ನು ಹಾಡಿ ಹೊಗಳಿಕೊಳ್ಳುವುದನ್ನು ಕೇಳಿದ್ದೆ, ಅವನ ಪ್ರೇಮ ಪತ್ರವನ್ನು ನನಗೆ ತೋರಿಸಿ ಖುಷಿ ಪಡುವುದನ್ನು ಕಂಡಿದ್ದೆ. ಅವನ ರಸಿಕತೆಯ ಕಥೆ ಹೇಳಿ ನನ್ನೆದೆಯಲ್ಲಿ ಕಿಚ್ಚು ಹೊತ್ತಿಸುವ ಘಳಿಗೆಗಳನ್ನು ಎದುರಿಸಿದ್ದೆ. ಅವರ ರಂಗಾದ ಹಗಲು-ರಾತ್ರಿಗಳ ಬಗ್ಗೆ ನನ್ನಲ್ಲಿ ಪಿಸುನುಡಿವಾಗ ಮಂಕಾದ ನನ್ನ ಸಂಜೆಗಳ ಬಗ್ಗೆ ಮರುಗಿದ್ದೆ. ಆಗೆಲ್ಲ ಅವರು ಎಷ್ಟು ಸುಖೀ ಅಂದುಕೊಂಡಿದ್ದು ಸುಳ್ಳೇ ಸುಳ್ಳು ಅಂತ ನನಗೆ ಈಗ ಗೊತ್ತಾಯಿತು!! ‘ನಮಗಾದರೆ ಸಂಸಾರದ ಜವಾಬ್ದಾರಿ, ಅತ್ತೆ ಮಾವ, ನಾದಿನಿ, ಮೈದುನಂದಿರ ಜವಾಬ್ದಾರಿ … ನೀ ನೋಡು ಎಷ್ಟು ಮಜವಾಗಿದೀಯ’ ಅಂತ ಅವರೆಂದಾಗ ನಾನು ಯಾಕೆ ಇಲ್ಲ ಅನ್ನಲಿ ನೀವೇ ಹೇಳಿ!
ಅಲ್ಲಿಂದ ಮುಂದೆ ನನ್ನ ಮದುವೆಯೂ ಆಯ್ತು. ಈಗ ನನಗೂ ಸಂಸಾರದ ಜವಾಬ್ದಾರಿ ಇತ್ತು. ನನ್ನ ಗಂಡನ ಸಂಸಾರ ದೊಡ್ಡದಿತ್ತು. ಪಾಪ ಯಾರೂ ನಮ್ಮ ಜೊತೆಗೇನೂ ಇಲ್ಲದಿದ್ದರೂ ನಾನು ಒಂದು ಚೂರು ಕಷ್ಟ ಪಡುತ್ತಿದ್ದೇನೆ, ಈಗ ನಿಮ್ಮಲ್ಲಿ ಒಬ್ಬಳಾಗಿದ್ದೇನೆ ಅಂತ ಇನ್ನಾದರೂ ತೋರ್ಪಡಿಸಿಕೊಳ್ಳಬಹುದು ಅಂತ ಖುಷಿಯಾಗಿ ಹೋದೆ.

ಹೀಗೇ ಒಂದು ದಿನ ನನ್ನ ಗೆಳತಿಯರೆಲ್ಲ ಸೇರಿದ್ದೆವು. ಮದುವೆಯಾಗಿ ಈಗ ನಾನೂ ನಿಮ್ಮ ಸಮಾನ … ನಾನೂ ಈಗ ನಿಮ್ಮಂತೆ ಆಗಿ ಹೋಗಿದ್ದೇನೆ. ಇನ್ನು ನೀನು ಪರವಾಗಿಲ್ಲ, ಮಜವಾಗಿದ್ದೀಯ ಅನ್ನುವುದಕ್ಕೆ ಸಾಧ್ಯವೇ ಇಲ್ಲ ಅಂತ ಒಳಗೊಳಗೇ ನಗುತ್ತಾ, ಬೀಗುತ್ತಾ ಕೂತಿದ್ದೆ. ಅಷ್ಟರಲ್ಲಿ ಗೆಳತಿಯೊಬ್ಬಳು ‘ನಿಂಗಾದರೆ ಪರವಾಗಿಲ್ಲಮ್ಮ’ ಅಂತ ಶುರು ಮಾಡಿದಾಗ ನಾನು ohhh! not again !! ಅಂತ ಸುಸ್ತಾಗಿಹೋದೆ. ಈಗ ನನ್ನ ಸುಖಕ್ಕೆ ಏನು ಕಾರಣ? ನಾವೆಲ್ಲಾ ಈಗ ಒಂದೇ status ನವರಾದೆವಲ್ಲ ಅಂದುಕೊಳ್ಳುವಷ್ಟರಲ್ಲಿ ಒಬ್ಬಳು ‘ನಿಂಗಾದ್ರೆ ಪರವಾಗಿಲ್ಲ ನೋಡು, ಅತ್ತೆ, ಮಾವ ಇಬ್ರೂ ಬದುಕಿಲ್ಲ. ನಮಗೆ ನೋಡು ಎಲ್ಲರೂ ಬದುಕೇ ಇದ್ದಾರೆ! ನೀನೇ ಸುಖಿ’ ಅಂದರು. ನನ್ನ ಮದುವೆಯಾಗುವ ಮುಂಚೆ ತಾವೇ ಅತ್ತೆ-ಮಾವ ತಂದೆ, ತಾಯಿಯರ ಹಾಗೆ ಇದ್ದಾರೆಂದೂ, ಅತ್ತೆ ಚಟ್ನಿ ಪುಡಿ ಕೂಡಾ ತಾವೇ ಮಾಡಿ ಕಳಿಸುತ್ತಾರೆಂದೂ, ಊರಿಗೆ ಹೋದಾಗ ತಾವೇ ಅಡಿಗೆ ಮಾಡಿ ಬಡಿಸುವುದನ್ನು ಹೇಳಿ ‘ಹಮ್ ಆಪ್ ಕೈ ಹೆ ಕೌನ್’ ಥರದ ಸೀನ್ ನನ್ನೆದುರು ಮೂಡಿಸಿದ್ದವರು ಇವರೇ ಅಲ್ಲವಾ ಅಂತ ನಾನು ಪಿಳಿ ಪಿಳಿ ಕಣ್ಣು ಬಿಟ್ಟೆ. ಆದರೂ ಅವರು ನನ್ನ ಅತ್ತೆ-ಮಾವ ಇಲ್ಲದ್ದರಿಂದ ನಾನು ಸುಖೀ ಜೀವಿ ಅಂದಾಗ ನಾ ಯಾಕೆ ಇಲ್ಲ ಅನ್ನಲಿ ನೀವೇ ಹೇಳಿ!
ಅಲ್ಲಿಂದ ಮುಂದೆ ಒಂದು ವರ್ಷ ಉರುಳಿತು. ಅವರಿಗೆ ಮಕ್ಕಳಾದವು. ನಾನು ಮದುವೆಯಾದ ಒಂದೆರಡು ವರ್ಷ ಮಕ್ಕಳು ಬೇಡವೆಂದು ತೀರ್ಮಾನಿಸಿ ಆರಾಮವಾಗಿದ್ದೆ. ಹಾಗೇ ಒಂದು ದಿನ ಭೇಟಿಯಾದೆವು. ಆ ಮಕ್ಕಳು ಉಚ್ಚೆ ಹೊಯ್ದವು, ಕಕ್ಕ ಮಾಡಿದವು. ಇವರು ತೊಳೆದರು, ಬಳೆದರು. ತಿನ್ನಿಸಿದರು, ಕುಡಿಸಿದರು. ಒಟ್ಟಿನಲ್ಲಿ ಮುಗಿಯದ ಕೆಲಸ. ಆ ಮಕ್ಕಳು ಎಲ್ಲ ಮಾಡಿ ಮುಗಿಸಿದ ಮೇಲೆ ಹೊತ್ತು ಕಳೆಯಲೆಂದೋ ಏನೋ ಹೊಡೆದಾಡಿಕೊಂಡವು, ಅತ್ತವು, ಬಿದ್ದವು, ಎದ್ದವು. ಅಮ್ಮಂದಿರು ಹೈರಾಣಾದರು. ತಾಳ್ಮೆ ಕಳೆದುಕೊಂಡು ಎರಡು ಬಿಟ್ಟರು, ಅವು ‘ಹೋ’ ಅಂತ ಸೂರು ಹಾರಿಹೋಗುವ ಹಾಗೆ ಅತ್ತವು. ಆಮೇಲೆ ಹೊಡೆದ ಕರ್ಮಕ್ಕೆ ಇವರೇ ಸಮಾಧಾನ ಮಾಡಿ ಉಶ್ಶಪ್ಪ ಅಂತ ಕಾಲು ಚಾಚಿ ಕೂತು ‘ನಿನ್ನದೇ ಪರವಾಗಿಲ್ಲ ನೋಡು .. ಮಕ್ಕಳಿಲ್ಲ, ಮರಿಗಳಿಲ್ಲ. ನೀನೆಷ್ಟು ಸುಖಿ’ ಅಂತ ನಿಟ್ಟುಸಿರಾದರು. ಬಸಿರಿಯಾದ ಮೇಲಿನ ಆ ಹೆಮ್ಮೆ, ಮಗು ಹುಟ್ಟಿದ ನಂತರದ ಆ ಹೆಗ್ಗಳಿಕೆ, ಆ ಕಂದಮ್ಮಗಳ ತೊದಲು ನುಡಿ, ಎಳೆ ಬೆರಳು, ಮುದ್ದು ಮಾತು, nursery rhymes ಎಲ್ಲದರ ಬಗ್ಗೆ ಹಾಡಿ ಹಾಡಿ ಹೊಗಳಿಕೊಂಡು, ಮಕ್ಕಳಿಲ್ಲದ ಬದುಕು ಅದೆಷ್ಟು ಬರಡು ಅಂತ ನನಗೆ ತಿಳಿಹೇಳಿ, ಬೇಗ ನೀನೂ ಒಂದು ಮಗು ಮಾಡಿಕೋ. ಅವಿಲ್ಲದೇ ಅದೆಂಥಾ ಜೀವನ ಅಂತ ಉಪದೇಶಿಸಿದ್ದವರು ನೀವಲ್ಲವೇ? ಅಂತ ಒಳಗಿಂದೊಂದು ರಾಗ ಏಳುತ್ತಿದ್ದುದನ್ನು ಗಂಟಲಲ್ಲೇ ಒತ್ತಿ ಕೂತೆ. ನಾನು ಸುಖೀ ಜೀವಿ ಅಂತ ಅವರನ್ನುತ್ತಿರುವಾಗ ನಾ ಯಾಕೆ ಬೇಡ ಅನ್ನಲಿ ನೀವೇ ಹೇಳಿ!
ಆಮೇಲೆ ನನಗೂ ಮಗ ಹುಟ್ಟಿದ. ನಾನೂ ಎಲ್ಲ ತೊಳೆದೆ, ಬಳೆದೆ. ನಿಮ್ಮ ಸಮಾನವಾದೆ, ಈಗ ನಾನೂ ಕಷ್ಟ ಪಡುತ್ತಿದ್ದೇನೆ ಅಂತ ಬೀಗಿದೆ! ಆದರೆ ಅಷ್ಟರಲ್ಲಿ ಏನಾಗಿತ್ತು ಗೊತ್ತೇ? ಅವರಿಗೆಲ್ಲ ಎರಡನೆಯ ಮಗು ಹುಟ್ಟಿಬಿಟ್ಟಿತ್ತು! ಹಾಗಾಗಿ ನನ್ನ ಸಮಸ್ಯೆಯ ದ್ವಿಗುಣ ಸಮಸ್ಯೆ ಅವರದ್ದಾದ್ದರಿಂದ ‘ನಿಂದೇ ಅರಾಮ್ ಕಣೇ. ಒಂದೇ ಮಗು .. ನಮಗಾದರೆ ಎರಡು’ ಅಂದರು. ನಾನು ಅರ್ರೇ! ಈ ಸುಖೀ ಜೀವಿ ಪಟ್ಟ ಒಂದು ಸಲವೂ ನನ್ನ ಕೈ ಬಿಟ್ಟು ಹೋಗಲೇ ಇಲ್ಲವಲ್ಲ ಅಂತ ಕಿರೀಟವಿಲ್ಲದ ಮಹಾರಾಣಿಯಂತೆ ಬೀಗಿದೆ! ಎರಡನೆಯ ಮಗು ಮಾಡಿಕೊಂಡು ಅವರ ಸಮಾನಳಾಗುವ ಯಾವ ಉದ್ದೇಶವೂ ನನಗೆ ಇಲ್ಲದ್ದರಿಂದ ನಾನು ಆ ಸುಖೀ ಪಟ್ಟ ಕಳೆದುಕೊಳ್ಳುವ ಭಯವೇ ಇರಲಿಲ್ಲ.
ಮುಂದೆ ನಿನಗಾದರೆ ಗಂಡು ಮಗ, ನಮಗಾದರೆ ಹೆಣ್ಣು ಮಕ್ಕಳು. ನೀನೇ ಸುಖಿ ಅಂದರು. ನಾನು ಒಪ್ಪಿದೆ. ನಿನ್ನ ಮಗನಾದರೆ ಬುದ್ಧಿವಂತ. ನಮ್ಮ ಮಕ್ಕಳು ನಿನ್ನ ಮಗನಷ್ಟು ಮಾರ್ಕ್ಸ್ ತೆಗೆಯಲಿಲ್ಲ ನೀನೇ ಸುಖಿ ಅಂದರು. ನಾನು ಒಪ್ಪಿದೆ.
ನಿನ್ನ ಗಂಡನಾದರೆ ನಿನಗೆ ತುಂಬ ಸ್ವತಂತ್ರ ಕೊಟ್ಟಿದ್ದಾರೆ, ನಮಗೆ ತುಂಬ ಕಟ್ಟುನಿಟ್ಟು. ನೀನೇ ಸುಖಿ ಅಂದರು. ನಾನು ಒಪ್ಪಿದೆ. ನಮ್ಮ ತವರುಮನೆಯಲ್ಲಿ ಅತ್ತಿಗೆಯರು, ನಾದಿನಿಯರು ಬಂದಿದ್ದಾರೆ. ನಮಗೆ ಮೊದಲಿನ ಸ್ವತಂತ್ರವಿಲ್ಲ ತವರಿನಲ್ಲಿ. ನೀನೇ ಸುಖಿ ಅಂದರು. ಯಾರಿಗೇ ಹುಷಾರಿಲ್ಲ ಅಂದರೂ ನಾವು ನಾವೇ ಬಡಿದಾಡಬೇಕಾದ ಕಥೆಯನ್ನೆಲ್ಲ ಅವರಲ್ಲಿ ಹೆಳಿ ನಾ ಯಾಕೆ ಸುಖೀ ಜೀವಿ ಪಟ್ಟ ಕಳೆದುಕೊಳ್ಳಲಿ ಅಂತ ಅವರ ಮಾತನ್ನು ಒಪ್ಪಿಬಿಟ್ಟೆ!
ನಿನ್ನದಾದರೆ ಫ಼್ಯಾಕ್ಟರಿ. ನಿಮ್ಮದೇ ಕೆಲಸ. ನಮಗಾದರೆ ಬೇರೆಯವರ ಕೈಕೆಳಗೆ ದುಡಿಯಬೇಕು. ನೀನೇ ಸುಖಿ ಅಂದರು. ನಾನು ಒಪ್ಪಿದೆ. ನಾನು ಕೆಲಸಕ್ಕೆ ಹೋಗದಿದ್ದರೆ ಮಾರನೆಯ ದಿನವೂ ಅವೆಲ್ಲ ಕೆಲಸವನ್ನು ನಾನೇ ಮಾಡಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೂ ನಾನು ಹಾಗಂತ ಹೇಳಲು ಹೋಗಲಿಲ್ಲ. ಅವರು ನಾನು ಸುಖಿ ಅಂದಾಗ ನಾನು ಯಾಕೆ ಇಲ್ಲ ಅನ್ನಲಿ ನೀವೇ ಹೇಳಿ!
ನಿಮ್ಮದೇ ಬಿಸಿನೆಸ್. ಕೈ ತುಂಬ ಹಣ. ನಮ್ಮ ಹಾಗೆ ತಿಂಗಳ ಸಂಬಳ ಎಣಿಸಬೇಕಿಲ್ಲ. ನೀನೇ ಸುಖಿ ಅಂದರು. ನಿಮಗಾದರೆ ತಿಂಗಳಿಗೆ ಒಂದು fixed ಸಂಬಳ ಅಂತ ಬರುತ್ತಿರುತ್ತದೆ. ನಮಗೆ ಒಂದೊಂದು ಸಮಯದಲ್ಲಿ ಒಂದೂ ಆರ್ಡರ್ ಸಿಗದೇ ಬದುಕು ದುರ್ಭರವಾಗಿದ್ದನ್ನು ನನ್ನಲ್ಲೆ ಮುಚ್ಚಿಟ್ಟುಕೊಂಡೆ. ಊರೂರು ಅಲೆದು, ಯಾವ ಯಾವದೋ ಆಫೀಸಿನಲ್ಲಿ ಮುಖ ಒಣಗಿಸಿ ಕೂತು, ಹೊಟ್ಟೆಗಿಲ್ಲದೇ payment collect ಮಾಡಿದ್ದು ಕೂಡಾ ನಾನು ಹೇಳಲಿಲ್ಲ. ಬರಬೇಕಾದ ಹಣಕ್ಕಾಗಿ ದಿನ ಬೆಳಗಾದರೆ ದೈನೇಸಿಯಂತೆ ಇಲ್ಲದ ಕಥೆಗಳನ್ನೆಲ್ಲ ಕಟ್ಟಿ ಯಾವನ ಎದುರೋ ಸಲಾಮು ಹಾಕಿದ್ದನ್ನು ಕೂಡಾ ನಾನು ಹೇಳಲು ಹೋಗಲಿಲ್ಲ. ಪುಟ್ಟ ಮಗನನ್ನು ಮನೆಯೊಳಗೆ ಬಿಟ್ಟು, ಬೀಗ ಹಾಕಿ ಆಫೀಸಿಗೆ ಹೋಗಿ ವಾಪಸ್ ಬಂದ ನಂತರ ಕಿಟಕಿಯಲ್ಲಿ ಖೈದಿಯ ತರ ಮುಖವಿಟ್ಟು ಗೆಳೆಯನ ಜೊತೆ ಮಗ ಮಾತಾಡುವುದನ್ನು ಕಂಡು ಹೊಟ್ಟೆಯಲ್ಲಿ ಆದ ಸಂಕಟ ಕೂಡಾ ಹೇಳಲು ಹೋಗಲಿಲ್ಲ. ಸುಖೀ ಜೀವಿ ಪಟ್ಟ ಸುಮ್ಮನೆ ಯಾಕೆ ಕಳೆದುಕೊಳ್ಳಲಿ ನೀವೇ ಹೇಳಿ!
ಅದಾದ ಮೇಲೆ ಬದುಕು ಒಂದಿಷ್ಟು ಹಸನಾಯಿತು. ಆರ್ಥಿಕವಾಗಿ ಬದುಕು ನೆಟ್ಟಗಾಯಿತು, ಇನ್ನು ನಾಳೆ ಏನು ಅನ್ನುವ ಚಿಂತೆಯಲ್ಲಿ ಬದುಕಬೇಕಿಲ್ಲ ಅನ್ನುವ ಸ್ಥಿತಿ ತಲುಪಿದೆವು. ಆದರೆ ಒಂದು ದಿನ ನನಗೆ ಕ್ಯಾನ್ಸರ್ ಖಾಯಿಲೆ ಅಂತ ಗೊತ್ತಾಯಿತು. ಎಲ್ಲರೂ ಓಡಿಬಂದರು ನನ್ನನ್ನು ನೋಡಲು. ಆಗ ಮಾತ್ರ ‘ನಿನಗಾದರೆ ಪರವಾಗಿಲ್ಲ ಬರೀ ಕ್ಯಾನ್ಸರ್ ಇದೆ. ನಮಗೆ ನೋಡು …’ ಅಂತ ಯಾರೂ ಅನ್ನಲಿಲ್ಲ ಸಧ್ಯ ….



ನಿಮ್ಮೊಡನಿದ್ದೂ ನಿಮ್ಮಂತಾಗದೇ…..
ಬರಹದ ಆಂತ್ಯ ಬಹಳ ಮಾರ್ಮಿಕವಾಗಿದೆ.
ಥ್ಯಾಂಕ್ಯೂ ಮೇಡಂ
lekhanada niroopane yeshtu chennagideyendare tanagi tane odisikondu hoguttade.Anthyada salugalu ondu katheyanne heluttave. janaru hege ,avara alathegolu enu ennuvudu marmikavagi tiliyuttade N.Viswanatha
ನಿಜ್ಜ! ನಮ್ಮ ಬೂಟಿನಲ್ಲಿರುವ ಇರಿತ ನಮಗಲ್ಲದೆ ಇನ್ಯಾರಿಗೆ ಗೊತ್ತಾಗತ್ತೆ?
ಮೇಲ್ನೋಟಕ್ಕೆ ನಗುವ ವ್ಯಕ್ತಿಗಳನ್ನಾ, ಹೆಸರು ಮಾಡಿರುವ ಜನರನ್ನ; ಯಾವ ಕೊರತೆಯೂ ಇಲ್ಲದವರು ಎ೦ದು ಜನ ಕಲ್ಪಿಸಿಕೊ೦ಡಿರುತ್ತಾರೆ. ಅವರ ಕೀರ್ತಿಗೂ ಆರ್ಥಿಕ ಪರಿಸ್ಥಿತಿ ಮತ್ತು ಮಾನಸಿಕ ಸ್ಥಿತಿ ಬಹಳ ಉರ್ದ್ವವಾಗಿರೋಲ್ಲ ಎ೦ಬುದು ಹತ್ತಿರದ ಜನಕ್ಕೆ ಮಾತ್ರ ಅರಿವಿರುತ್ತದೆ.
ಇನ್ನೂ ಕೆಲವು ಸಮಸ್ಯೆಗಳು ಖುದ್ದು ಆ ವ್ಯಕ್ತಿಗೆ ಮಾತ್ರ ಗೊತ್ತಿರುತ್ತದೆ.
ಆದರೆ ಜಗತ್ತು ನೀನು ಸುಖಿ ಅ೦ದಾಗ ನಮಗೆ ಸಿಗುವ ಒ೦ದು ಕ್ಷಣದ ಸುಖ ಬಹಳ ಥ್ರಿಲ್ ಆಗಿರುತ್ತದೆ; ಕಷ್ಟಗಳನ್ನ ಮರೆ ಮಾಡುವ ತಾಕತ್ತು ಹೊದಿರುವುದಕ್ಕೆ.
ತು೦ಬಾ ಒಳ್ಳೆಯ ಬರಹ
ಹ್ಹಿ ಹ್ಹಿ… ಹ್ಹಿ ಹ್ಹಿ … ಹ್ಹಿ ಹ್ಹಿ …
ನಿಮಗೇನ್ರೀ ಭಾರತಿ ಮನಸ್ಸಿಗೆ ಅನಿಸಿದ್ದನ್ನ ಆರಾಮಾಗಿ ಚಂದವಾಗಿ ಬರದು ಬಿಡ್ತೀರಾ… ಚಾನ್ಸ್ ಪಾ … ನಮಗೆ ಹಾಗೆ ಬರೆಯಲು ಬರೋಲ್ವೇ .. ನಿಮಗೇನು ಆರಾಮು … ನೀವೇ ಸುಖೀ ಕಣ್ರೀ … !!!!!
ಚಂದವಾಗಿ ಸತ್ಯವನ್ನೇ ಬರೆದಿದ್ದೀರ.. ನಂಗೂ ಈಗ ಯಾರ್ಯಾರೋ ಏನೇನೋ ಹೇಳಿದ್ದೆಲ್ಲಾ ನೆನಪಾಗ್ತಿದೆ.. 🙂
nanagintaanEne Bharathi ?! 🙂 tuMbaa iShTa aaytu 🙂
Anjali Ramanna
Brilliant article, as usual!
ಆಗ ಮಾತ್ರ ‘ನಿನಗಾದರೆ ಪರವಾಗಿಲ್ಲ ಬರೀ ಕ್ಯಾನ್ಸರ್ ಇದೆ. ನಮಗೆ ನೋಡು …’ ಅಂತ ಯಾರೂ ಅನ್ನಲಿಲ್ಲ ಸಧ್ಯ ….- ಅಬ್ಬಾ.. ಸಿಕ್ಕಾ ಪಟ್ಟೆ ನಕ್ಕು ಬಿಟ್ಟೆ….:D ನಂಗ್ಯಾಕೆ ಇಂಥ ಗೆಳತಿಯರು ಸಿಗಲಿಲ್ವೋ ಕಾಣೆ!!! 🙁 🙂 ನಂಗೂ ಸಿಕ್ಕಿದಿದ್ದರೆ ನಾನೂ ಸುಖಿಯಾಗಿರುತ್ತಿದ್ದೆನೇನೋ :):) Excellent… liked it very much… 🙂
ಹೌದು ಭಾರತಿಯವರೇ…
ಸುಖ, ಸಮಾಧಾನ ಅನ್ನೋದು ನಮ್ಮ ನಮ್ಮ ಮನಸ್ಸಿನಲ್ಲಿ ಇರತ್ತೆ. ಕೆಲವರು ಎಲ್ಲಾ ಸೌಕರ್ಯ ಇದ್ರೂ ಇಲ್ಲ… ಇಲ್ಲ… ಅಂತ ಹೇಳ್ತಾ ಇರ್ತಾರೆ. ಇನ್ನು ಕೆಲವರು ಇದ್ದದ್ದನ್ನೇ ಖುಷಿಯಲ್ಲಿ ಅನುಭವಿಸ್ತಾ ಸಂತೋಷದಿಂದ ಇರ್ತಾರೆ. ಇವರಿಬ್ರಲ್ಲಿ ಯಾರು ಸುಖಿಗಳು?
ಬರೆದದ್ದು ತುಂಬಾ ಚೆನ್ನಾಗಿದೆ.
ನಮ್ಮನ್ನು ಇಷ್ಟಪಡದಿರುವರ(!) ಮುಂದೆ ಸಂತಸದಿಂದ ಇರಬೇಕು 🙂
ಕೊನೆಯ ಸಾಲು ಓದಿ ಸಖತ್ ಆಪ್ತವಾದ ಬರಹ ಅನಿಸ್ತು. ನಿಮ್ಮ ಬರಹ ಚೆನ್ನಾಗಿದೆ.
Nice…ಇಷ್ಟ ಆಯಿತು…ತುಂಬ ಚೆನ್ನಾಗಿ ಬರೆದಿದ್ದೀರಿ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂಥ ಹೇಳುವುದು ಇದಕ್ಕಾಗಿಯೇ!
ಇರುವೆಯ ಭಾರ ಇರುವೆಗೆ ಆನೆಯ ಭಾರ ಆನೆಗೆ… ಎಲ್ಲರೂ ಅವರವರ ನೇರಕ್ಕೆ ಮಾತನಾಡಿಕೊಳ್ಳುವುದು ಸುಲಭ… ಒಂದು ಆಪ್ತ ಬರಹ ನಿಮ್ಮ ಅನುಭವ ಲೇಖನದಲ್ಲಿ ನನ್ನನ್ನು ಕಂಡುಕೊಂಡೆ.
Superb article….:)
ivattu odide…sakhat ishtavayitu,,,:)
Hatsoff Bharathi. Nija, namaginta sukhi bere yaaroo illave illa 🙂 thanks
Nice article mam.. superb
naguva mogadali novakanenalla
jareva janara bhava aritenalla
nova maretu edegundade saadhisi
ellarinda sai anisikondenall
namma sutha mutha iruva janarannu chennagi vivarisiddeeya. Ravi kanaddannu kavi kanda annodu idakkene. superb article.
ಪುಟ್ಟ ಮಗನನ್ನು ಮನೆಯೊಳಗೆ ಬಿಟ್ಟು, ಬೀಗ ಹಾಕಿ ಆಫೀಸಿಗೆ ಹೋಗಿ ವಾಪಸ್ ಬಂದ ನಂತರ ಕಿಟಕಿಯಲ್ಲಿ ಖೈದಿಯ ತರ ಮುಖವಿಟ್ಟು ಗೆಳೆಯನ ಜೊತೆ ಮಗ ಮಾತಾಡುವುದನ್ನು ಕಂಡು ಹೊಟ್ಟೆಯಲ್ಲಿ ಆದ ಸಂಕಟ ಕೂಡಾ ಹೇಳಲು ಹೋಗಲಿಲ್ಲ.
🙁
ಎಲ್ಲಾ ಸಾಲುಗಳನ್ನು ನಗುತ್ತಾ ಓದುತ್ತಿರಬೇಕಾದರೆ ಈ ಮೇಲಿನ ಸಾಲೇಕೋ ನನಗೂ ಸಂಕಟ ತರಿಸಿತು.
Nice frame work! -ಅಂತ ಹೇಳಬೇಕೋ ಬೇಡವೋ ಅನ್ನುವ ಸಂದಿಗ್ಧತೆ.
ಬರಹ ಚೆಂದವಿದೆ ಅಂದರೆ ಸ್ಯಾಡಿಸ್ಟ್ ಆಗಬಹುದೆನ್ನುವ ಭಯ.
ಎಷ್ಠು ಮಾರ್ಮಿಕವಾಗಿ ನಗುತ್ತಲೇ ಏನೆಲ್ಲ ಹೇಳಿಬಿಟ್ಟಿದ್ದೀರಿ..
-Rj
ತುಂಬಾ ಚೆನ್ನಾಗಿದೆ.
ಇಂಥ ಬರಹವನ್ನು ಚೆಂದವಿದೆ ಅಂತ ಹೇಳೋದು ಹ್ಯಾಗೆ… Rj ಹೇಳಿದಂತೇ ನಂಗೂ ಅನ್ನಿಸಿತು…
ಏನು ಹೇಳಿಲ್ಲ.. ಏನು ಹೇಳಿದೆ.. ಈ ಬರಹ… love you
Lively narration Bharathi..:-) Neevu iro tharane..:-)
Sadhya…alle nillisidhralla……!!! I know people who talk further…..very well written bharathi..as usual. :-))
ಏನು ಹೇಳಲಿ ?ಮೊದಲಿನಿಂದ ಕೊನೆಯವರೆಗೂ ಮನಸ್ಸನ್ನು ಆರ್ದ್ರಗೊಳಿಸುತ್ತದೆ .