ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ನಾನೂ ನನ್ನ ಸಿನೆಮಾಗಳು!!

ಸುಮ್ಮನೊಂದಿಷ್ಟು ಸಿನೆಮಾ ನೆನಪುಗಳು …

ನಾವು ಚಿಕ್ಕವರಾಗಿರುವಾಗಿನಿಂದ ನಮ್ಮ ಮನೆಯ ಸದಸ್ಯರೆಲ್ಲರನ್ನು ಹಿಡಿದಿದ್ದ ತಂತು ಯಾವುದು ಅಂದರೆ…….. ಪ್ರೀತಿ, ವಾತ್ಸಲ್ಯ ಅಂತೆಲ್ಲ ಇದ್ದರೂ ಲಿಸ್ಟಿನ ಮೊದಲಿಗೆ ಬರುವುದು ಯಾವುದು ಹೇಳಿ?! ಕನ್ನಡ ಸಿನೆಮಾ ಸ್ವಾಮಿ, ಕನ್ನಡ ಸಿನೆಮಾ!! ನಮ್ಮ ಮನೆಯ ಎಲ್ಲ ಸದಸ್ಯರೂ ಸಿನೆಮಾ ಪೈತ್ಯಗಳು. ನಿಮಗೆ ಗೊತ್ತಾ ನಾನು ಸ್ಕೂಲಿಗೆ ಹೋಗೋದಿಕ್ಕೆ ಮುಂಚೆಯೇ ಕನ್ನಡ ವರ್ಣಮಾಲೆಯ ಅಕ್ಷರ ಮತ್ತು ಕಾಗುಣಿತವನ್ನು ಕಲಿತ ರೀತಿ?
ಅಪ್ಪ-ಅಮ್ಮನನ್ನು ಪೀಡಿಸಿ ಕಾಡಿಸಿ ಇದ್ಯಾವ ಅಕ್ಷರ, ಅದ್ಯಾವ ಅಕ್ಷರ ಅಂತ ತಲೆ ತಿಂದು, ಅಂತೂ ಇಂತೂ ಸ್ವಲ್ಪ ಜ್ಞಾನ, ಜೊತೆಗೊಂದು ಸ್ವಲ್ಪ ಊಹಾಶಕ್ತಿಯಿಂದ ಪದಗಳನ್ನು ಜೋಡಿಸಿ ಅಂತೂ ಕೊನೆಗೊಮ್ಮೆ ಸಿನೆಮಾ ಹೆಸರು ಮತ್ತು ನಟ ನಟಿಯರ ಹೆಸರು ಓದಲು ಕಲಿಯುತ್ತಿದ್ದೆನಂತೆ! ಎ … ಎ … ರ …. ಅಣ್ಣಾ ಇದ್ಯಾವ ಅಕ್ಷರ ಅಣ್ಣಾ? ಮಧ್ಯೆ ನನ್ನದೊಂದು ಪ್ರಶ್ನೆಯಂತೆ. ಡು ಅಂತ ಅಪ್ಪ ಸೇರಿಸಿದ ಕೂಡಲೇ ಎರಡು ಅಂತ ಒಂದು ಪದವಾಗುತ್ತಿತ್ತು! ಆಮೇಲೆ ಕ … ಕ …ಅಣ್ಣಾ ಇದು ಏನು? ಅನ್ನುತ್ತಿದ್ದೆ. ಅಪ್ಪ ಅದು ನ ಅಂದ ಕೂಡಲೇ ಕೊನೆಯ ಅಕ್ಷರಕ್ಕೊಂದು ಚೂರು guess work ಮಾಡಿ ಸು ಅಂತ ಮುಗಿಸಿ ಒಟ್ಟಿನಲ್ಲಿ ‘ಎರಡು ಕನಸು’ ಹೆಸರನ್ನು ಪೂರ್ತಿ ಮಾಡಿದಂಥ ಬಾಲ ಪ್ರತಿಭೆ ನನ್ನದು!! ನಾನು ಮೊದಮೊದಲು ಓದಿದ್ದೇ ಬರೀ ಸಿನೆಮಾ ಮತ್ತು ಹೀರೋ, ಹೀರೋಯಿನ್‌ಗಳ ಹೆಸರಂತೆ. ಅದನ್ನು ಓದುವ ಚಪಲಕ್ಕಾಗೇ ಅಕ್ಷರ ಕಲಿತೆ ಅಂದರೆ ಅದಿನ್ನೆಂಥಾ ಹುಚ್ಚಿರಬೇಕು ನೀವೇ ಯೋಚಿಸಿ …
ಒಂದು ಸಲ ಮಾಮೂಲಿ ಎಂಥದ್ದೋ ಜ್ವರ ಬಂದು ಮಲಗಿದ್ದೆ . ಅಪ್ಪ ಮತ್ತು ಅಕ್ಕ ಹೋಗಿ ಎರಡು ಕನಸು ಸಿನೆಮಾ ನೋಡಿ ಬಂದುಬಿಟ್ಟಿದ್ದರು. ನನಗೋ ಅಸಾಧ್ಯ ಸಿಟ್ಟು. ನನ್ನನ್ನು ಬಿಟ್ಟು ಸಿನೆಮಾ ನೋಡಿ ಬಂದ ಅವರಿಬ್ಬರನ್ನೂ ವಿಲನ್‌ ಥರ ನೋಡಿದ್ದೆ. ಜ್ವರ ಒಂದು ಚೂರು ಇಳಿಮುಖವಾದ ತಕ್ಷಣ ನಮ್ಮೂರಿನ ಟೆಂಟ್‌ಗೆ ಹೊರಟೇಬಿಟ್ಟಿದ್ದೆ ಅಪ್ಪನ ಜೊತೆ. ಈ ಅಕ್ಕ ಇದ್ದಾಳಲ್ಲ … ಅವಳೊಂಥರಾ ಕಾಡಿ ತಿನ್ನುತ್ತಿದ್ದಳು ನನ್ನನ್ನು ಆಗೆಲ್ಲ. ಸಿನೆಮಾ ನೋಡಿ ಆದ ಮೇಲೆ ತೆಪ್ಪಗೆ ಮನೆಯಲ್ಲಿರಬೇಕು ತಾನೇ ಅವಳು? ಹಾಗಿರದೇ ತಾನೂ ಹಿಂದೆ ಬಂದಳು. ಇನ್ನೂ ಮೊದಲ ಸೀನ್ ಶುರುವೇ ಆಗಿಲ್ಲ, ಅದಕ್ಕೆ ಮುಂಚೆಯೇ ‘ಈಗ ನೋಡ್ತಿರು … ಸ್ಕೂಟರ್ ಚಕ್ರ ಕಾಣ್ಸತ್ತೆ ..’ ಅಂದಳು. ನಾನು ಹೇಗೋ ಸಹಿಸಿ ಕೂತಿದ್ದೆ. ಇನ್ನೊಂದು ನಿಮಿಷಕ್ಕೆ ‘ನೋಡೀಗ ಮೇಲಕ್ಕೆ ಮೇಲಕ್ಕೆ ತೋರಿಸ್ತಾ ಹೋಗಿ ರಾಜ್‌ಕುಮಾರ್‌ನ ತೋರಿಸ್ತಾರೆ ..’ ನಾನು ಒಂದು ಸೀನನ್ನೂ ಆಸಕ್ತಿಯಿಂದ ನೋಡುವ ಹಾಗೇ ಇಲ್ಲ ! ಅದಕ್ಕೆ ಮುಂಚೆಯೇ ಅವಳ running commentary ಬಂದಾಗಿರುತ್ತಿತ್ತು. ನಾನು ಅಣ್ಣಾ ನೋಡಿ ಇವಳು ಕಥೆ ಹೇಳಿಬಿಡ್ತಿದಾಳೆ … ಅಂತ ರಾಗ ಪಾಡಿದರೆ ಸಿನೆಮಾದ ರೀ ಪ್ಲೇಯಲ್ಲಿರುತ್ತಿದ್ದ ಅಪ್ಪ ನಮ್ಮ ಕಡೆ ಗಮನವೇ ಹರಿಸುತ್ತಿರಲಿಲ್ಲ! ಹಾಗಾಗಿ ಅವಳಿಗೆ ಇನ್ನಿಷ್ಟು ಹುಮ್ಮಸ್ಸು ಬಂದು ಇಡೀ ಸಿನೆಮಾದ ಕಥೆಯನ್ನು ಹೇಳಿ ಮುಗಿಸಿ ವಿಕೃತ ಆನಂದ ಪಡುತ್ತಿದ್ದಳು. ಅದೊಂಥರಾ ಮಜದ ದಿನಗಳು. ಇದೇ ಅಕ್ಕ ಮುಂದೆ ಕಾಲೇಜಿನಲ್ಲಿರುವಾಗ ಸಿನೆಮಾ ನೋಡಿ ಬಂದರೆ ಕಥೆ ಹೇಳುತ್ತಿದ್ದುದು ಹೇಗೆ ಗೊತ್ತಾ … ಅವರಿಬ್ರೂ ಲವ್ ಮಾಡ್ತಿರ್ತಾರೆ. ಬೇರೆ ಆಗ್ತಾರೆ. ಕೊನೇಲಿ ಸತ್ತೋಗ್ತಾರೆ … ಎಲ್ರೂ ಒಳ್ಳೆಯವರಾಗಿರ್ತಾರೆ. ಆಮೇಲೆ ಕೆಟ್ಟೋರಾಗ್ತಾರೆ. ಕೊನೇಲಿ ಮತ್ತೆ ಒಂದಾಗ್ತಾರೆ …ಲವ್ ಮಾಡ್ತಾರೆ. ಹೀರೋಯಿನ್ ಮೋಸ ಮಾಡ್ತಾಳೆ. ಹೀರೋ ಕುಡಿದು ಸತ್ತೋಗ್ತಾನೆ … ಈ ಥರ ಮೂರು ವಾಕ್ಯಗಳಲ್ಲಿ ಇಡೀ ಸಿನೆಮಾ ಕಥೆ ಹೇಳುತ್ತಿದ್ದಳು!! ಸಣ್ಣವರಾಗಿರುವಾಗಿನ ಮಜವೇ ಮಜ …
ನಮ್ಮೂರಿನಲ್ಲಿ ಒಂದು ಟೆಂಟ್ ಇತ್ತು. ಆಕಾಶದಲ್ಲಿನ ನಕ್ಷತ್ರಗಳನ್ನೆಲ್ಲ ಎಣಿಸುವಷ್ಟು ತೂತು. ಅಂತ ಟೆಂಟ್‌ಗೆ ನಾವು ಮಕ್ಕಳು ಮಕ್ಕಳೇ ಹೋದರೆ ಬೆಂಚಿನ ಮೇಲೆ ಕೂತು ನೋಡಿ ಬರುತ್ತಿದ್ದೆವು. ಆದರೆ ಅಪ್ಪ-ಅಮ್ಮ ಬಂದರೆ ನಾವೆಲ್ಲ ಸಿನೆಮಾಗೆ ಹೊರಟರೆ ನಮ್ಮ ಮನೆಯ ಕೆಲಸದವನು ಹಿಂದೆ ಕಬ್ಬಿಣದ ಛೇರುಗಳನ್ನು ಹಿಡಿದು ಬರುತ್ತಿದ್ದ! ಆಮೇಲೆ ಬಕ್ಕಮ್ಮ ಬಕ್ಕಮ್ಮ ಎಕ್ಕಡ ಪೋತಾವ್ರಾ ಅಂತೇನೋ ಹಾಡಿನ ಜೊತೆ ಸಿನೆಮಾ ಮುಗಿದ ಕೂಡಲೇ ನಮ್ಮ ಕೆಲಸದವನು ಮತ್ತೆ ಖುರ್ಚಿ ಹಿಡಿದು ನಮ್ಮ ಹಿಂದೆ! ಅಂಥ ಟೆಂಟ್‌ಗೆ ಒಂದು ಸಿನೆಮಾ ಬಂದರೆ ಸುತ್ತಲಿನ ಹತ್ತೂರಿನ ಸಮಸ್ತ ಜನರೂ ನೋಡುವವರೆಗೆ ಹೊಸ ಸಿನೆಮಾ ಹಾಕುತ್ತಿರಲಿಲ್ಲ. ಹಾಗಾಗಿ ಒಂದೊಂದು ಸಿನೆಮಾ ಕನಿಷ್ಟ ಅಂದರೆ ಮೂರು ತಿಂಗಳು ಇರುತ್ತಿತ್ತು. ನಾವು ಒಂದು ಸಿನೆಮಾ ಬದಲಾದರೆ ಆ ಕೂಡಲೇ ಮೊದಲ ದಿನವೇ ಹೋಗಿ ನೋಡಿ ಬಂದುಬಿಡುತ್ತಿದ್ದೆವು.
ಅದು ಮಾಮೂಲಿನ ದಿನಗಳಲ್ಲಿ ಓಕೆ. ಆದರೆ ಬೇಸಿಗೆ ರಜೆ ಬಂದಾಗ ನಮ್ಮ ಪಾಡು ನಾಯಿಪಾಡಾಗುತ್ತಿತ್ತು. ಕಾರಣ ಹೇಳುತ್ತೇನೆ ಕೇಳಿ. ರಜೆಯಲ್ಲಿ ನಮ್ಮೂರಿಗೆ ನೆಂಟರು ಒಬ್ಬೆ ಒಬ್ಬೆಯಾಗಿ ಬರುತ್ತಿದ್ದರು. ಸುಮಾರು ಗುಂಪುಗಳು ಬರುತ್ತಿದ್ದವು. ನಮ್ಮೂರಿಗೆ ಬಂದವರಿಗೆಲ್ಲ ನುಗು ಡ್ಯಾಮ್ ಮತ್ತು ಕಾಡನ್ನು ತೋರಿಸುವುದರ ಜೊತೆಗೆ ಇದ್ದ ಇನ್ನೊಂದು ಆದ್ಯ ಕರ್ತವ್ಯ ಅಂದರೆ ನಮ್ಮೂರಿನ ಟೆಂಟ್‌ ಸಿನೆಮಾ ನೋಡಲು ಬಂದ ನೆಂಟರನ್ನು ಕರೆದೊಯ್ಯುವ mandatory ಕೆಲಸ. ಮೊದಲ ಸಲ ಖುಷಿ. ಮತ್ತೆ ಇನ್ನೊಂದು ವಾರಕ್ಕೆ ಇನ್ಯಾವುದೋ ನೆಂಟರ ಗುಂಪು ಬಂದರೆ ಮತ್ತೊಂದು ಸಲ .. ಇನ್ನೊಂದು ಸಲ. ಅಬ್ಬಾ! ನಮ್ಮ ಸ್ಥಿತಿ ಹೇಗಿರಬೇಕು ನೀವೇ ಯೋಚಿಸಿ. ಒಂದು ಸಲವಂತೂ ಅದ್ಯಾವುದೋ ಸಿನೆಮಾ ಬಂದಿತ್ತು. ಹೆಸರು ಕೂಡ ನೆನಪಿಲ್ಲ. ಅದರಲ್ಲಿ ಒಂದು ಹಾಡಿತ್ತು ತಿಳಿನೀರಾಟದೊಳೂ … ಕಲ ಕಲ ಪಾಠಗಳೂ … ತಾ ಮಹಾ ..ಹೀಗೇನೋ ಅರ್ಥವಾಗದ ಪದಗಳು. ಅದರಲ್ಲಿ ಸುಮಾರು 20 ಹಾಡುಗಳಿದ್ದವು! ಅಂತ ಸಿನೆಮಾವನ್ನು ಪದೇ ಪದೇ ನೋಡಿದ ನಮ್ಮ ಸ್ಥಿತಿ ನಿಜಕ್ಕೂ ದಯನೀಯ. ಕೊನೆ ಕೊನೆಗಂತೂ ಅಮ್ಮ ನಮ್ಮ ಹೆಸರು ಹಿಡಿದು ಕೂಗಿದರೆ ಎಲ್ಲಿ ಸಿನೆಮಾಗೆ ಹೋಗು ಅನ್ನುತ್ತಾಳೋ ಅನ್ನುವ ಭಯಕ್ಕೆ ಮನೆ ಬಿಟ್ಟೇ ಓಡಿಹೋಗುತ್ತಿದ್ದೆವು. ಆದರೆ ಎಷ್ಟು ಹೊತ್ತು ಬೀದಿ ಸುತ್ತಲು ಸಾಧ್ಯ? ಸಿನೆಮಾ ಇದ್ದಿದ್ದು ರಾತ್ರಿ ಎಂಟಕ್ಕೆ. ಹಾಗಾಗಿ ಮನೆಗೆ ಬಂದ ಕೂಡಲೇ ಅಮ್ಮ ನಮ್ಮನ್ನು ನೆಂಟರ ಜೊತೆ ಹೊರಡಿಸುತ್ತಿದ್ದಳು. ನಾನಂತೂ ಆ ಸಿನೆಮಾ ಒಂಭತ್ತೋ, ಹತ್ತೋ ಸಲ ನೋಡಿ ಸುಸ್ತಾಗಿ ಕೊನೆಗೆ ಅಲ್ಲೇ ಎಲ್ಲೋ ಕಾಲು ಚಾಚಿ ಮಲಗಿ ಸಿನೆಮಾ ಮುಗಿದ ಮೇಲೆ ಎಬ್ಬಿಸುತ್ತಿದ್ದರಲ್ಲ, ಆಗ ತೂರಾಡುತ್ತ ಮನೆ ಸೇರುತ್ತಿದ್ದೆ!

ಮೈಸೂರಿಗೆ ದಂಡು ಕಟ್ಟಿಕೊಂಡು ಇಡೀ ಕಾಲೋನಿಯ ಜನರೆಲ್ಲ ಹೋಗಿ ಶಾಪಿಂಗ್ ಮುಗಿಸಿ ವಾಪಸ್ ಬರುವಾಗ ಒಂದು ರಾಜ್‌ಕುಮಾರ್ ಸಿನೆಮಾ ನೋಡದಿದ್ದರೆ ಹುಟ್ಟಿದ್ದೇ ವೇಸ್ಟ್ ಅನ್ನಿಸಿಬಿಡುತ್ತಿತ್ತು. ಒಂದು ಸಲವಂತೂ ಸನಾದಿ ಅಪ್ಪಣ್ಣ ಸಿನೆಮಾಗೆ ಹೋಗಿದ್ದೆವು. ಬಾಲ್ಕನಿಯ ಎಲ್ಲ ಟಿಕೆಟ್ sold out ಆಗಿಹೋಗಿತ್ತು. ಕೆಳಗಿನ ಕ್ಲಾಸ್‌ನಲ್ಲಿ ಮೊದಲ ಸಾಲಿನ ಟಿಕೆಟ್ ಮಾತ್ರ ಇದೆ ಅಂದರೆ ಅದೂ ಓಕೆ ಅಂತ ಹೋಗಿ ಕೂತು ರಾಜ್‌ಕುಮಾರ್, ಅಶೋಕ್, ಜಯಪ್ರದಾ ಎಲ್ಲರೂ ನಮ್ಮ ಎದೆಯ ಮೇಲೇ ಓಡಾಡುತ್ತಿದ್ದಾರೇನೋ ಅನ್ನಿಸುವಂಥ ಹಾರಿಬಲ್ ಅನುಭವ. ಒಳ್ಳೆಯ ಸೀನ್ ಬಂದಾಗ ಹಿಂದಿನಿಂದ ಎಸೆದ ಚಿಲ್ಲರೆ ಕಾಸುಗಳೆಲ್ಲ ನಮ್ಮ ಮೇಲೂ ಅಷ್ಟಿಷ್ಟು ಬಿದ್ದು, ಮತ್ತೆ ಒಂದಿಷ್ಟು ಸ್ಕ್ರೀನ್ ಮುಟ್ಟುತ್ತಿದ್ದವು! ಆ ಗಲಾಟೆಯಲ್ಲೂ ಬಿಡದೇ ಪೂರ್ತಿ ಸಿನೆಮಾ ನೋಡಿ ಬಂದಿದ್ದೆವು. ಆ ಕಾಲಕ್ಕೆ ಕನ್ನಡ ಬಿಟ್ಟು ಬೇರೆ ಭಾಷೆಯ ಯಾವ ಸಿನೆಮಾಗೂ ಅಪ್ಪ ಕರೆದುಕೊಂಡು ಹೋಗುತ್ತಿರಲಿಲ್ಲ. ಹಾಥಿ ಮೇರೆ ಸಾಥಿ ಅನ್ನುವ ಸಿನೆಮಾಗೆ ಮಾತ್ರ ಪ್ರಾಣಿಗಳಿರುವ ಮಕ್ಕಳ ಸಿನೆಮಾ ಅಂತ ವಿಶೇಷ consideration ಮೇಲೆ ಹಿಂದಿ ಸಿನೆಮಾ ಒಂದಕ್ಕೆ ಕರೆದುಕೊಂಡು ಹೋಗಿದ್ದರು! ಆಗಿನಿಂದ ಈಗಿನವರೆಗೆ ಕನ್ನಡ ಸಿನೆಮಾ ನೋಡಿ ನೋಡಿ ದಣಿದ ನನಗೆ ಈಗ ನೆನಪಿಸಿಕೊಂಡರೂ ನೆನಪಾಗುವುದು ಬೆರಳೆಣಿಕೆಯಷ್ಟು ಸಿನೆಮಾಗಳು ಮಾತ್ರ ಅಂದರೆ ಉಳಿದವುಗಳು ಹೇಗಿದ್ದಿರಬೇಕು!
ಇನ್ನು ಬೆಂಗಳೂರಿಗೆ ನಾವು ಬಂದ ಮೇಲೆ ಅಪ್ಪ ಬೇರೆ ಊರಿನಲ್ಲಿರುತ್ತಿದ್ದರು. ಹಾಗಾಗಿ ಅಪ್ಪ ಊರಿಗೆ ಬರುತ್ತಾರೆ ಅಂದರೆ ಸಿನೆಮಾಗೆ ಹಿಂದಿನ ದಿನವೇ ನಾನು, ಅಕ್ಕ ಕ್ಯೂ ನಿಂತು ಅಡ್ವಾನ್ಸ್ ಬುಕಿಂಗ್ ಮಾಡಿಸುತ್ತಿದ್ದೆವು. ಅಪ್ಪ ಬೆಂಗಳೂರಿನಲ್ಲಿ ಇರುತ್ತಿದ್ದ ಒಂದು ವಾರದಲ್ಲಿ ಸುಮಾರು 5 ಸಿನೆಮಾ ನೋಡಿರುತ್ತಿದ್ದೆವು. ಅದೂ ಚೆಂದವೋ ಚಾರವೋ ಒಂದೂ ಗೊತ್ತಿಲ್ಲ. ಯಾವ ಯಾವ ಕನ್ನಡ ಸಿನೆಮಾ ಇದೆಯೋ ಎಲ್ಲಕ್ಕೂ ಹಾಜರ್. ಆಗೆಲ್ಲ ಇದ್ದಿದ್ದು ಒಂದು ಬೈಕ್. ಇಬ್ಬರು ಅದರಲ್ಲಿ ಹೋಗಿ, ಮತ್ತಿಬ್ಬರು ಆಟೋದಲ್ಲಿ ಹೋಗಿ ಅಂತೂ ಒಟ್ಟಿನಲ್ಲಿ ಕನ್ನಡ ಚಿತ್ರರಂಗವನ್ನು ಉದ್ಧಾರ ಮಾಡಿಬಿಡುತ್ತಿದ್ದೆವು. ಸೆಕೆಂಡ್ ಶೋ ಅಂತ ಇರುತ್ತಿತ್ತು ಆ ಕಾಲದಲ್ಲಿ. ಮುಗಿಯುತ್ತಿದ್ದುದು ರಾತ್ರಿ 12 ಕ್ಕೆ. ಆ ರಾತ್ರಿಯಲ್ಲಿ ಬೈಕ್ ಸ್ಟಾರ್ಟ್ ಆಗದೇ ಅಪ್ಪ ಡೌನ್‌ನಲ್ಲಿ ಗಾಡಿ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಾ ಹೊರಟವರು ಎಷ್ಟೋ ಹೊತ್ತಿನವರೆಗೂ ಬಾರದೇ ಹೋದಾಗ ನಾನು, ಅಕ್ಕ ಯಾವುದೋ ಒಂದು ಲೈಟ್ ಕಂಬದ ಬೆಳಕಿನಲ್ಲಿ ಜೀವ ಕೈಲಿ ಹಿಡಿದು ನಿಂತಿದ್ದು ನೆನ್ನೆ, ಮೊನ್ನೆಯೇನೋ ಅನ್ನಿಸುತ್ತದೆ. ಕಿಲಾಡಿ ಜೋಡಿ ಅನ್ನುವ ಸಿನೆಮಾಗೆ ಹೋಗಿ, ಟಿಕೆಟ್ ತೆಗೆದುಕೊಂಡು ನಿಂತಿದ್ದೆವು ಒಂದು ಸಲ. ಸಿನೆಮಾ ಥಿಯೇಟರಿನ ಒಳಗೆ ಬಿಡುವಾಗ ನೋಡಿದರೆ ಅಪ್ಪನ ಜೋಬು ಪಿಕ್ ಪಾಕೆಟ್ ಆಗಿಹೋಗಿದೆ! ದುಡ್ಡೇನೂ ಹೆಚ್ಚಿರಲಿಲ್ಲ. ಆದರೆ ಸಿನೆಮಾ ಟಿಕೆಟ್‌ಗಳೂ ಹೊರಟುಹೋಗಿದ್ದವು. ನಾವು ಪೆಚ್ಚು ಮುಖ ಹಾಕಿ ಅಳುವಷ್ಟರಲ್ಲಿ ಇದ್ದಕ್ಕಿದ್ದಂತೆ ಎಲ್ಲಿಂದಲೋ ಪ್ರತ್ಯಕ್ಷವಾದ ಯಾರೋ ಒಬ್ಬ ಅಪ್ಪ ಏನಾಯ್ತು ಅಂತ ಯೋಚಿಸುವಷ್ಟರಲ್ಲಿ ಕೈಗೆ ಅದೇನೋ ತುರುಕಿ ಮಾಯವಾಗಿದ್ದ. ನೋಡಿದರೆ ಕಳುವಾದ ನಾಲ್ಕು ಟಿಕೆಟ್‌ಗಳು! ಅಂಥಾ ಒಳ್ಳೆಯ ಕಳ್ಳನನ್ನು ನೀವ್ಯಾರಾದರೂ ಕಂಡಿದ್ದೀರಾ ಹೇಳಿ!
ನವರಂಗ್ ಥಿಯೇಟರ್‌ನಲ್ಲಿ ರಾಜ್‌ಕುಮಾರ್ ಸಿನೆಮಾ ಹಾಕಿದರೆ ನೋಡಲು ಬರ್ತಿದ್ದ ಜನರು ಕ್ಲೈಮ್ಯಾಕ್ಸ್ ಸೀನ್ ಬಂದಾಗ ಸೀಟೆಲ್ಲ ಹರಿದುಹಾಕಿ ಬಿಡುತ್ತಿದ್ದರು! ಅದ್ಯಾವ ಸೀಮೆ ಸಿನೆಮಾ ನೋಡಾಟವೋ ನನಗೆ ಈಗಲೂ ಅರ್ಥವಾಗಿಲ್ಲ. ಪ್ರಸನ್ನ, ಪ್ರಮೋದ್ ಥಿಯೇಟರ್‌ಗಳ ಕಥೆಯೂ ಅದಕ್ಕಿಂತ ಹೆಚ್ಚು ಭಿನ್ನವೇನೂ ಇರುತ್ತಿರಲಿಲ್ಲ. ಆದರೂ ಆ ಹರಕಾ ಮುರುಕ ಸೀಟುಗಳ ಮೇಲೆ ಒಂದು ಪೃಷ್ಠ ಮೇಲಕ್ಕೂ, ಮತ್ತೊಂದನ್ನು ಕೆಳಕ್ಕೂ ಮಾಡಿ ಕೂತು ನೋಡಿಬರುತ್ತಿದ್ದೆವು! ನಾಗರಹಾವು ಸಿನೆಮಾಗೆ ಐದು ಸಲ ಟಿಕೆಟ್ ಸಿಗದಿದ್ದರೆ no problem! ಆರನೆಯ ಸಲ ಮತ್ತೆ ಬರುತ್ತೇವೆ ಅಂತ ಛಲದಿಂದ ಹೋಗಿ ಟಿಕೆಟ್ ಸಂಪಾದಿಸಿ ನೋಡುತ್ತಿದ್ದೆವು. ಆ ಕಿತ್ತು ಹೋದ ಥಿಯೇಟರ್‌ಗಳಲ್ಲೇ ಅಷ್ಟೆಲ್ಲ ಸಿನೆಮಾ ನೋಡಿದ ನಾವು ಇನ್ನು ಈ ಕಾಲದ ಥರ online booking ಅಂತೆಲ್ಲ ಇದ್ದು, ಈ ಥರದ ಸುಪ್ಪತ್ತಿಗೆಯಂತ ಸೀಟುಗಳಿದ್ದರೆ ಬಹುಶಃ ಅಲ್ಲೇ ಒಂದು ಸೀಟು ಬಾಡಿಗೆ ಹಿಡಿದು, ತಿಂಗಳ ವರ್ತನೆ ಲೆಕ್ಕದಲ್ಲಿ ಸಿನೆಮಾ ನೋಡಿ ಬಿಡುತ್ತಿದ್ದೆವು ಅಂತ ಅನ್ನಿಸುತ್ತದೆ. ಕನ್ನಡ ಸಿನೆಮಾ ರಂಗ ಏನಾದರೂ hero of the year, best director of the year ಅಂತೆಲ್ಲ ಪ್ರಶಸ್ತಿಯ ಜೊತೆ ಅತ್ಯುತ್ತಮ ಪ್ರೇಕ್ಷಕ ಪ್ರಶಸ್ತಿ ಅಂತೇನಾದರೂ ಇಟ್ಟಿದ್ದರೆ ಬಹುಶಃ ಅದು ಪ್ರತೀ ವರ್ಷವೂ ನಮಗೇ ಸಿಕ್ಕುತ್ತಿತ್ತು ಅನ್ನುವುದರಲ್ಲಿ ನನಗಂತೂ ಸಂಶಯವಿಲ್ಲ!

‍ಲೇಖಕರು avadhi

4 April, 2013

ನಿಮಗೆ ಇವೂ ಇಷ್ಟವಾಗಬಹುದು…

12 Comments

  1. ಹರಿ

    ಆ ದಿನಗಳಲ್ಲಿ ಸಿನೆಮಾ ನೋಡೋದೇ ಒಂದು ಹಬ್ಬ. ಆ ಮಜಾ ಈಗಿನ ಆನ್‍ಲೈನ್ ಬುಕ್ಕಿಂಗ್‍ನ A.C. theater’ನಲ್ಲಿ ಸಿಕ್ಕಲ್ಲ ಬಿಡಿ.
    ಅಂದ ಹಾಗೆ “ಅತ್ಯುತ್ತಮ ಪ್ರೇಕ್ಷಕ” ಪ್ರಶಸ್ತಿ ಅಷ್ಟು ಸುಲಭವಾಗಿ ನಿಮಗೆ ಸಿಗೋ ಛಾನ್ಸೇ ಇಲ್ಲ….ನಾವು ಇದೀವೀ ಕಾಂಪಿಟೇಷನ್‍ನಲ್ಲಿ…ಜೊತೆಗೆ ಅಶೋಕ ಶೆಟ್ಟರ್, ಜಯಂತ್ ಕಾಯ್ಕಿಣಿ, ವಸುಧೇಂದ್ರ….ಪಟ್ಟಿ ತುಂಬಾ ಉದ್ದ ಇದೆ.

    • bharathi

      enthaa competitive worldappa idu … che!! :))))))))

  2. Anjali Ramanna

    tuMbaa chennaagide Bharathi ! 🙂
    Anjali Ramanna

  3. Badarinath Palavalli

    ಮತ್ತೆ ನಮ್ಮೂರಿನ ಟೆಂಟ್ ಸಿನಿಮಾವನ್ನು ನೆನಪಿಸಿದ ಬರಹ. ಸರಾಗವಾಗಿ ಓಡಿಸಿಕೊಳ್ಳುವ ಮತ್ತು ಮನಸ್ಸಿನಾಳಕ್ಕೆ ಇಳಿಯುವ ವಿಚಾರ ಧಾರೆ ನಿಮ್ಮ ಅನನ್ಯ ಶೈಲಿ.
    ಹಳೇ ಜೋಕು, ನವರಂಗ್ ಥಿಯಟರಿನಲ್ಲಿ ಸಿನಿಮಾ ನೋಡೋಕೆ ಹೋದರೆ ತಪ್ಪಿಸಿಕೊಳ್ಳೋಕೆ ಆಗಲ್ಲವಂತೆ. ಥೀಯಟರಿನವರು ಗೇಟ್ ಹಾಕಿಬಿಟ್ಟಿರುತ್ತಾರಂತೇ!

  4. sugunamahesh

    ಖುಷಿ ಆಗುತ್ತೆ ನೀವು ಬಾಲ್ಯದಲ್ಲಿ ಸಿನಿಮಾ ನೋಡುತ್ತಿದ್ದು ಕೇಳಿ. ನಾವು ಬಾಲ್ಯದಲ್ಲಿ ಸಿನಿಮಾಕ್ಕೆ ಹೋಗಿದ್ದೇ ನೆನಪಿಲ್ಲ. 🙁

    • Jayalaxmi Patil

      ಸುಗುಣ, ಇದೇ ಮಾತನ್ನ ನಾನೂ ಹೇಳೋಣ ಅಂತ ಇಲ್ಲಿ ಬಂದೆ, ಆದರೆ ಒಂಚೂರು ಬದಲಾವಣೆಯೊಂದಿಗೆ, ಅಂದರೆ ಬಾಲ್ಯದಲ್ಲಿ ನಾನು ನೋಡಿದ ಸಿನಿಮಾ ಸಂಖ್ಯೆ ಬೆರಳು ಮಡಿಚಿ ಎಣಿಸಿದರೆ ಆರು ಅಷ್ಟೇ! 🙁
      ಭಾರ್ತಿ, ನೀವು ಖುಷ್ ಖುಷಿಯಾಗಿ ಹೇಳ್ಕೊಂಡು ಹೋಗ್ತೀರಿ ನೋಡಿ, ಅದನ್ನ ಓದ್ತಿದ್ರೆನೇ ನಮ್ಮನ್ನೂ ಆ ಖುಷಿ ಆವರಿಸಿಕೊಂಡುಬಿಡುತ್ತೆ. 🙂 ಸೂಪರ್ ಮಾ, ಅಹವಿಯ ಹಾಡು ಮುಂದುವರೆಯಲಿ ಅನವರತ.

  5. Swarna

    ನಾವೂ ರೆಡಿ ಪ್ರೇಕ್ಷಕ ಸ್ಪರ್ಧೆಗೆ 🙂

  6. samyuktha

    😀 eshtu nagisutteeri! 🙂

  7. Rj

    ಭಾರತಿಯವರೇ,ನೀವು ಒಂಥರಾ ಹ್ಯಾಪಿ ಗೋ ಲಕ್ಕಿ ವುಮನ್! ಅಲ್ವ?
    ಇಲ್ಲದಿದ್ರೆ ಇವೆಲ್ಲ ಮಾಡೋಕೂ ಆಗೋಲ್ಲ,ಬರಿಯೋಕೂ ಆಗಲ್ಲ.ಚೆನ್ನಾಗಿದೆ.
    🙂
    -Rj

  8. Prasad DV

    chenda bareyutteeri.. manasaare nakkiddene.. 😀

  9. Anitha Naresh manchi

    chennaagide Bharati 🙂

  10. Geetha b u

    “Hogadhiri sodharare” yendhu cinema mugidharu mele tent nalli haakuthidha haadu nenapaithu. Bharathi, nimma nenapina angala theredhu neevu baredhaaga.., naavu namma nenapugala bandaaradalli enukuvanthe maadutheeralla….adhu nimma baravanigeya major plus point. Thank you.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading