ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ನಾನೂ ನನ್ನ ಆಫೀಸು!

ಬದುಕಿನ ನಡೆದು ಬಂದ ದಾರಿಯನ್ನು ನೆನೆಸಿಕೊಂಡರೆ ಒಂದೊಂದು ಸಲ ಇಷ್ಟೊಂದು ಉದ್ದದ ದಾರಿ ಸವೆಸಿದ್ದು ನಾನೇನಾ? ನಡೆದಿದ್ದೇ ಗೊತ್ತಾಗಲಿಲ್ಲವಲ್ಲ! ಯಾವಾಗ ನಡೆದೆ ಅಂತೆಲ್ಲ ಆಶ್ಚರ್ಯ ಹುಟ್ಟಿಬಿಡತ್ತೆ. ಆದರೆ ಈ ದಾರಿ ನನ್ನನ್ನು ಗಟ್ಟಿ ಮಾಡಿದ್ದಂತೂ ಸತ್ಯ. ಕೆಲವೊಂದು ಘಟನೆಗಳನ್ನು ನಿಮಗೆ ಹೇಳಬೇಕೆನ್ನಿಸ್ತಿದೆ ಯಾಕೋ …
ಮದುವೆಯಾದ 10 ವರ್ಷ ಏನು ಮಾಡಿದೆ ಅಂತ ಯಾರಾದರೂ ಕೇಳಿದರೆ ‘ಅಡಿಗೆ ಮಾಡಿದೆ ಮತ್ತು ತಿಂದೆ’ ಅನ್ನೋ ಒಂದು ವಾಕ್ಯದಲ್ಲಿ ಮುಗಿಸಿ ಬಿಡಬಹುದು! ಯಾವಾಗ ನೋಡಿದರೂ ಗಸಗಸೆ ಪಾಯಸ, ಮಜ್ಜಿಗೆ ಹುಳಿ, ವಾಂಗೀ ಬಾತು ಅಂತ ಮಾಡಿ ಮಾಡಿ ತಿನ್ನುವುದು ಮತ್ತು ಬೇರೆಯವರಿಗೆ ಬಡಿಸುವುದು ಇಷ್ಟರಲ್ಲಿ ಸುಖ ಕಂಡುಕೊಂಡು ಬಿಟ್ಟಿದ್ದೆ. ನನ್ನ ಗಂಡ ಪಾಪ ಎಷ್ಟೊಂದು ಕಷ್ಟ ಪಟ್ಟು ಕೆಲಸ ಮಾಡಿದರೂ ಕೈಯಲ್ಲಿ ದುಡ್ಡು ಅನ್ನುವುದು ಉಳಿಯುತ್ತಲೇ ಇರಲಿಲ್ಲ. ಹಗಲು-ರಾತ್ರಿ ಕಷ್ಟ ಪಟ್ಟರೂ ದುಡಿದದ್ದೆಲ್ಲ ಎಲ್ಲಿಗೆ ಹೋಗುತ್ತಿದೆ ಅಂತ ನನಗೆ ಆಶ್ಚರ್ಯ. ಹೀಗೆ ಆಶ್ಚರ್ಯ ಪಡ್ತಾ, ಕೂತಲ್ಲೇ ಕೂತಿದ್ದ ನನ್ನನ್ನು ಕಂಡು ಅಕ್ಕ ಒಂದು ದಿನ ‘ಬರೀ ಪಾಯಸ, ಬಾತು ಅಂತ ಮಾಡಿದ್ದೇ ಆಯ್ತು. ಎದ್ದು ಆಚೆ ಹೊರಡು. ಮನೇಲಿ ಕೂತ್ಕೊಂಡು ಅದೇನು ಕಡೀತೀಯಾ?’ ಅಂತ ತುಂಬ ನಯವಾಗಿ ಬಯ್ದು ಮನೆಯಿಂದ ಆಚೆ ದಬ್ಬಿದಳು!
ಮೊದಲ ದಿನ ನಾನು ಆಫೀಸಿಗೆ ಕಾಲಿಟ್ಟಾಗ ಎಲ್ಲರ ಮುಖದಲ್ಲೂ ಅಸಹನೆ … ಅವರ ವೃತ್ತದಲ್ಲಿ ಅಪರಿಚಿತಳೊಬ್ಬಳು ಕಾಲಿಟ್ಟಂತ ಅಸಹನೆಯದು. ನಮ್ಮ ಫ಼್ಯಾಕ್ಟರಿಯ ಲೆಕ್ಕಾಚಾರಗಳು ಮೆಸ್ ಆಗಿಹೋಗಿದ್ದವು. ಪಾಪ ಅಕೌಂಟ್ಸ್‌ನ ಗಂಧ-ಗಾಳಿ ತಿಳಿಯದ ನನ್ನ ಗಂಡ ಯಾವುದನ್ನು ಸರಿ ಪಡಿಸಬೇಕು ಅಂತ ತಿಳಿಯದೇ ಕೈ ಚೆಲ್ಲಿ ಬಿಟ್ಟಿದ್ದ. ಇನ್ನು ಮುಂದೆ ಲೆಕ್ಕದ ಕೆಲಸವೆಲ್ಲ ಇವಳದ್ದು ಅಂತ declare ಮಾಡಿದ ನನ್ನ ಗಂಡ.
ನಾನು ರಾಶಿ ರಾಶಿ ಬಿದ್ದಿದ್ದ vouchers ಹಿಡಿದು ಲೆಕ್ಕ ತೆಗೆದುಕೊಳ್ಳಲು ಕೂತೆ. ಆಫೀಸಿನ ಮ್ಯಾನೇಜರ್ ಆಗಿದ್ದವ ಅಷ್ಟು ದಿನ ಸುಖವಾಗಿದ್ದ. ಈಗ ನಾನು ಕಾಲಿಟ್ಟು ಒಂದೊಂದೇ voucher ಹಿಡಿದು ಕೂತ ಕೂಡಲೇ ಅವನು ದಂಗುಬಡೆದ. ನಾನು ಯಾವುದಾದರೂ ಲೆಕ್ಕದ ಬಗ್ಗೆ ಗಟ್ಟಿಸಿ ಕೇಳಿದರೆ LKG ಮಗುವಿನ ಹಾಗೆ ‘ನನಗೆ ಅಮ್ಮ ಇಲ್ಲ …ನನಗೆ ಯಾರೂ ಇಲ್ಲ’ ಅಂತ ಅಸಂಬದ್ಧ ಮಾತಾಡಿದವನೇ ಅಳಲು ಶುರು ಮಾಡಿದ!! ನನಗೆ ಈ ರೀತಿಯ ಮಾತನ್ನು ಕೂಡಾ ಒಂದು ಆಫೀಸಿನಲ್ಲಿ ಆಡಬಹುದಾ ಅಂತ ಆಶ್ಚರ್ಯವೋ ಆಶ್ಚರ್ಯ. ಒಟ್ಟಿನಲ್ಲಿ ಅವನು ಏನೋ ಕೇಳಿದರೆ ಮತ್ತೇನೋ ಉತ್ತರ ಕೊಡುವುದು, ನಾನು ಪಟ್ಟು ಹಿಡಿದು ಕೂತುಕೊಳ್ಳುವುದು ಇದೇ ಆಯಿತು. ಕೊನೆಗೆ ಅವನು ನಾನು ಸೋಲೊಪ್ಪುವ ಪ್ರಾಣಿಯಲ್ಲ ಅನ್ನಿಸಿ ಕೈಚೆಲ್ಲಿ ಕೂತ.
ಇದು ಮನುಷ್ಯರ ಕಥೆಯಾದರೆ, ಎಲ್ಲಕ್ಕಿಂತ ದೊಡ್ಡ ಶತ್ರುವೊಂದು ನನಗಾಗಿ ಕಾದಿತ್ತು… ಅದು ನನ್ನ ಕಂಪ್ಯೂಟರ್ ಅಜ್ಞಾನ. ಕಂಪ್ಯೂಟರಿನ ಅ ಆ ಇ ಈ ಕೂಡಾ ಗೊತ್ತಿಲ್ಲದ ಶುದ್ಧ ಶುಂಠಿಯಾಗಿದ್ದ ನಾನು ಮೊದ ಮೊದಲು ಎಲ್ಲ ಲೆಟರ್‌ಗಳನ್ನೂ ಕೈಯಲ್ಲಿ ಬರೆದು ಹಾಕುತ್ತಿದ್ದೆ. ಎಷ್ಟಂತ ಲೆಟರ್‌ಗಳನ್ನು ಬರೆಯಲು ಸಾಧ್ಯ? ಹಾಗಾಗಿ ಕಂಪ್ಯೂಟರ್ ಕಲಿಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ನನ್ನ ಗಂಡ ಜಗತ್ತಿನ ಅತೀ ಕೆಟ್ಟ ಟೀಚರ್. ಅವನ ಹತ್ತಿರ ಏನಾದರೂ ಕಲಿಯಲು ಹೊರಟರೆ, ಕಲಿತದ್ದನ್ನೂ ಮರೆಸಿ ಬಿಡುವುದು ಗ್ಯಾರಂಟಿ! ಶಾಂತ ಮೂರ್ತಿಯಾಗಿದ್ದ ಅವನು ಕಲಿಸುವ ವಿಷಯದಲ್ಲಿ ಮಾತ್ರ ಅಸಾಧ್ಯ ಅಸಹನೆಯುಳ್ಳವನಾಗಿದ್ದ. ಅವನು ಬಡ ಬಡ ಅಂತ ಎಲ್ಲ ಒಂದು ಸಲ ಒದರಿ ಹೊರಟುಹೋದರೆ ಅಲ್ಲಿಗೆ ಮುಗಿಯಿತು … ಇನ್ನೊಂದೇ ಒಂದು ಪ್ರಶ್ನೆ ಹಾಕುವ ಹಾಗಿಲ್ಲ. ಹಾಕಿದರೂ ಅವನು ಉತ್ತರಿಸುತ್ತಿರಲಿಲ್ಲ. ಅಪ್ಪಿ ತಪ್ಪಿ ಉತ್ತರಿಸಿದರೂ ಮೊದಲಿದ್ದ ಗೋಜಲು ಮತ್ತೂ ಹೆಚ್ಚಾಗುವಂತೆ ಮಾಡಿಡುತ್ತಿದ್ದ!

ಆಗ ನಮ್ಮಲ್ಲಿ ಇದ್ದಿದ್ದು ಒಂದು ಹಳೆಯ ಡೆಸ್ಕ್ ಟಾಪ್ ಕಂಪ್ಯೂಟರ್. ನಾನು ಅಫೀಸಿಗೆ ಕಾಲಿಟ್ಟ ಕೂಡಲೇ ಅದನ್ನು ಆನ್ ಮಾಡುತ್ತಿದ್ದೆ. ಮನೆಯಲ್ಲಿ ತಿಂಡಿ ತಿನ್ನಲು ಸಮಯ ಇರುತ್ತಿರಲಿಲ್ಲ. ಹಾಗಾಗಿ ತಿಂಡಿ ತಿಂದು, ಕಾಫಿ ಕುಡಿದು ಮುಗಿಸುವಷ್ಟರಲ್ಲಿ ನನ್ನ ಈ ಕಂಪ್ಯೂಟರ್ ಓಪನ್ ಆಗಿರುತ್ತಿತ್ತು! ಆದರೆ ಕೈಯ್ಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಅದು ಕೂಡಾ ಶರವೇಗದ ಸರದಾರನ ಹಾಗೆ ಕಾಣಿಸುತ್ತಿತ್ತು. ಯಾವ ಫೈಲನ್ನು ಎಲ್ಲೋ ಸೇವ್ ಮಾಡುವುದು, ಆ ನಂತರ ಎಲ್ಲಿದೆ ಅಂತ ಗೊತ್ತಾಗದೇ ತಡಕಾಡುವುದರಲ್ಲಿ ದಿನದ ಅರ್ಧ ಭಾಗ ಕಳೆದು ಹೋಗುತ್ತಿತ್ತು. ಯಾವ ಫೈಲು ಎಲ್ಲಿದೆ, ಯಾವ ಫೋಲ್ಡರ್ ಎಲ್ಲಿದೆ ಅನ್ನುವುದೇ ತಿಳಿಯದೇ ಕಕ್ಕಾಬಿಕ್ಕಿ. ಒಂದು ಸಲವಂತೂ ಮೌಸ್ ಸ್ವಲ್ಪ ಜೋರಾಗಿ ಅಲುಗಾಡಿಸಿ ಬಿಟ್ಟು ಕರ್ಸರ್ ಎಲ್ಲೋ ಕಾಣೆಯಾಗಿ ಹೋಗಿತ್ತು. ನಾನು ಅಯ್ಯೋ ಏನೋ ಎಡವಟ್ಟು ಮಾಡಿಟ್ಟೆ ಅಂತ ಹೆದರಿ ನನ್ನ ಗಂಡನನ್ನು ಕರೆದರೆ ‘ಪೆದ್ದು ಪೆದ್ದಾಗಿ ಆಡಬೇಡ … ಅಲ್ಲೇ ಇರತ್ತೆ ಹುಡ್ಕು’ ಅಂದ ಕೂತಲ್ಲೇ ಕೂತು. ಸಿಕ್ತಿಲ್ಲ ಅಂತ ಅಳುಮೋರೆಯಲ್ಲಿ ಹೇಳಿದಾಗ ‘ಏನದು ಇಷ್ಟೊಂದು ಪೆದ್ದು ನೀನು … ಒಂದ್ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಕ್ಕೆ ಬರಲ್ಲ’ ಅಂತ ನಾನೇನೋ ಕಂಪ್ಯೂಟರ್ ಇಂಜಿನಿಯರ್ ಆಗಿದ್ದೂ ಅದರಲ್ಲಿ ಕೆಲಸ ಮಾಡಲು ಕಲಿತಿಲ್ಲದವಳ ಥರ ಮಾತಾಡಿದ. ನಾನು ‘ನಿನಗೆ ಅಡುಗೆ ಮನೇಲಿ ಕಾಲಿಟ್ಟ ಕೂಡಲೇ ಇವತ್ತು ಬಿಸಿಬೇಳೆ ಬಾತ್ ಮಾಡು ಅಂತ ಹೇಳಿಬಿಟ್ಟರೆ ಮಾಡೋದಿಕ್ಕೆ ಬಂದುಬಿಡತ್ತಾ?’ ಅಂತ ಕೂಗಾಡಿ ಮತ್ತೆ ಬಂದು ಸೀಟಿನಲ್ಲಿ ಕೂತಿದ್ದೆ. ಆಮೇಲೂ ಕರ್ಸರ್ ಸಿಗದಾದಾಗ ಮನೆಯಲ್ಲಿದ್ದ ನನ್ನ ಏಳು ವರ್ಷದ ಮಗನಿಗೆ ಫೋನ್ ಮಾಡಿ ಕರ್ಸರ್ ಕಾಣೆಯಾಗಿದೆ ಅಂತ ಅತ್ತಿದ್ದೆ. ನನ್ನ ಮಗ ಬಿದ್ದು ಬಿದ್ದು ನಕ್ಕು ಕರ್ಸರ್ ಹುಡುಕುವ ಶೆರ್ಲಾಕ್ ಹೋಮ್ಸ್ ಆಗಿದ್ದ!
ಅಂತೂ ಒಂಟಿ ಬೆರಳಲ್ಲಿ ಕೀ ಕುಟ್ಟುತ್ತಾ ಅಲ್ಪ ಸ್ವಲ್ಪ ಕಲಿತೆ. ಅಷ್ಟರಲ್ಲಿ ನನ್ನ ಗಂಡನಿಗೆ ಲೆಕ್ಕವನ್ನೆಲ್ಲ ಕಂಪ್ಯೂಟರಿನಲ್ಲಿ ಮಾಡಬೇಕು ಅಂತ ಐಡಿಯಾ ಹೊಳೆದು ಬಿಟ್ಟಿತು. ಟ್ಯಾಲಿ ಹಾಕಿಸಿ ‘ಇನ್ನು ಮುಂದೆ ಇದರಲ್ಲೇ ಕೆಲಸ ಮಾಡು ಅಂದುಬಿಟ್ಟ. ಟ್ಯಾಲಿ ಎಂದರೆ ಕಬ್ಬಿಣದ ಕಡಲೆ! ಎಲ್ಲಿಂದ ಶುರು ಮಾಡಬೇಕು ಅಂತಲೇ ತಿಳಿಯದೇ ಕೈ ಚೆಲ್ಲಿ ಕೂತೆ. ಯಾರೋ ಒಬ್ಬರು ಟೀಚರ್ ಒಬ್ಬರನ್ನು ಗೊತ್ತು ಮಾಡಿದ. ಆತ 15 ದಿನ ಕೂತು ಚೂರು ಹೇಳಿಕೊಟ್ಟರು. ಆದರೆ ಅವರು ಮಾಡಿದ ತಪ್ಪು ಅಂದರೆ ನನಗೆ ಕಾಲೇಜಿನಲ್ಲಿ ಓದಿದ್ದೆಲ್ಲ ನೆನಪಿದೆ ಅಂತ ಭ್ರಮಿಸಿದ್ದು. ಕಾಲೇಜಿನಲ್ಲಿ ಓದುವಾಗಲೇ ಪೂರ್ತಿ ತಲೆಗೆ ಹತ್ತಿಲ್ಲದ್ದು, ಇನ್ನು ಅಷ್ಟೊಂದು ವರ್ಷ ಆದ ಮೇಲೆ ಹೇಗೆ ನೆನಪಿರಬೇಕು! ತೀರಾ basics ಕೂಡಾ ಮರೆತು ಬಿಟ್ಟಿದ್ದೆ. ಟ್ಯಾಲಿ ಕಲಿಯುವುದಿರಲಿ, ಅಕೌಂಟೆನ್ಸಿಯನ್ನೇ ಕಲಿಯಬೇಕಾದ ಪರಿಸ್ಥಿತಿ ಬಂದಿತ್ತು. ಇದು ಆಗು ಹೋಗುವ ಕಥೆಯಲ್ಲ ಬಿಡು ಅಂತ ತೀರ್ಮಾನಿಸಿ ಅವರು ಏನೋ ಹೇಳಿ ಅರ್ಥವಾಯ್ತಾ ಅಂದರೆ ಆಯಿತು ಅನ್ನುವಂತೆ ತಲೆಯಾಡಿಸಿಬಿಟ್ಟೆ. ಆತ ಒಂದಿಷ್ಟು ಹೇಳಿಕೊಟ್ಟ ಶಾಸ್ತ್ರ ಮಾಡಿ ಕೈ ಬೀಸಿ ಹೊರಟರು. ನಾನು ಆಗ ನನ್ನ ಕಲಿಕೆ ಶುರು ಮಾಡಿದೆ. ಒಂದು ಕಾಲ್ಪನಿಕ ಕಂಪನಿ ಹುಟ್ಟು ಹಾಕಿ ಒಂದೊಂದೇ ಎಂಟ್ರಿ ಕೊಟ್ಟು, ಅದು profit and loss account ನಲ್ಲಿ ಮತ್ತು balance sheet ನಲ್ಲಿ ಹೇಗೆ reflect ಅಗುತ್ತೆ ಅಂತ ಎಕ್ಸ್‌ಪರಿಮೆಂಟ್ ಮಾಡಿ ಮಾಡಿ ಅಂತೂ ಕೊನೆಗೊಮ್ಮೆ ಟ್ಯಾಲಿ ಕಲಿತೆ.
ಇದು ನಮ್ಮ ಆಫೀಸಿನ ಒಳಗಿನ ವಿಚಾರಗಳಾದರೆ, ಹೊರಗಿನವರ ಕಥೆಯೊಂದಿತ್ತು. ನಮ್ಮ ಫ಼್ಯಾಕ್ಟರಿಗೆ ಬರುವ ಜನರಿಗೆ ಆ ಗಂಡು ಸಾಮ್ರಾಜ್ಯ ಹೇಗೆ ಒಗ್ಗಿ ಹೋಗಿತ್ತೆಂದರೆ ಒಬ್ಬಳು ಹೆಂಗಸನ್ನು ಅಲ್ಲಿ ಯಾರೂ ಒಪ್ಪಲು ಸಿದ್ಧರಿರಲಿಲ್ಲ. ನಮ್ಮ ಆಫೀಸಿನ ಹುಡುಗರೇನೋ ವಿಧಿಯಿಲ್ಲದೇ ನನ್ನನ್ನು ಒಪ್ಪಿಕೊಂಡರು. ಆದರೆ ನಮ್ಮ ಆಫೀಸಿಗೆ ಬರುತ್ತಿದ್ದ ಸಪ್ಲೈಯರ್‌ಗಳಿಗೆ ಮಾತ್ರ ನನ್ನ ಹತ್ತಿರ ಬರುವುದು ತುಂಬ ಅವಮಾನವಾಗುತ್ತಿತ್ತು. (ಇದೆಲ್ಲಾ ಯಾವುದೋ ಶತಮಾನದ ಕಥೆಯಲ್ಲ ..1999-2000 ದ ಕಥೆಯಷ್ಟೇ) ಹಾಗಾಗಿ ನನ್ನ ಗಂಡ ‘ಇನ್ನು ಮುಂದೆ ಲೆಕ್ಕವೆಲ್ಲ ನನ್ನ ಹೆಂಡತಿ ನೋಡಿಕೊಳ್ತಾಳೆ. ಅವಳ ಹತ್ತಿರ ಹೋಗಿ ಲೆಕ್ಕ finalise ಮಾಡಿ ಬನ್ನಿ’ ಅಂದರೆ ‘ಇಲ್ಲ, ನೀವೇ ಮಾಡಿ’ ಅಂತ ಅಲ್ಲಿಯೇ ಕೂರುತ್ತಿದ್ದರು. ಆದರೆ ಅವನ ಕೆಲಸವೇ ಸಾಕಷ್ಟಿರುತ್ತಿದ್ದರಿಂದ, ಎರಡು ಮೂರು ದಿನವಾದರೂ ಅವರ ಲೆಕ್ಕಕ್ಕೊಂದು ಗತಿ ಕಾಣದೆ, ಅವರು ಕೂತಲ್ಲೇ ಕೂತು ಹುತ್ತಗಟ್ಟಲು ಶುರುವಾದರು! ನಾನೂ ಸೀರಿಯಲ್‌ನಲ್ಲಿ ಷಡ್ಯಂತ್ರ ಹೂಡುತ್ತ ಸೊಟ್ಟ ನಗೆ ನಗುವ ಹೆಂಗಸರ ಹಾಗೆ ನಗುತ್ತಾ, ಅವರನ್ನೇ ಗಮನಿಸುತ್ತಾ ಕೂತೆ. ಒಂದು ದಿನ ತಾಳ್ಮೆ ಮುಗಿದು ನನ್ನ ಹತ್ತಿರ ಬರುತ್ತಾರೆ ಅಂತ ಗೊತ್ತಾಗಿತ್ತು. ಅಂತೂ ಕೊನೆಗೆ ಒಲ್ಲದ ಮನಸ್ಸಿನಿಂದ ನನ್ನ ಹತ್ತಿರ ಬಂದರು. ನಾನು ಅವರ ಲೆಕ್ಕವನ್ನೆಲ್ಲ ಮಾಡಿ ಮುಗಿಸಿ ಚೆಕ್ ಬರೆದು ಕೈಗಿಟ್ಟ ಮೇಲೆ ಹೊರಡುವಾಗ ಕೆಲವರು ನನ್ನೆದುರೇ ನನ್ನ ಗಂಡನಿಗೆ ಹೇಳುತ್ತಿದ್ದರು ‘ಆದ್ರೂ ಸಾರ್, ಮೇಡಮ್ ಕೈಲಿ ಹೀಗೆಲ್ಲಾ ಕೆಲಸ ಮಾಡಿಸ್ಬಾರ್ದು. ಆರಾಮಾಗಿ ಮನೇಲಿರ್ಬೇಕು ಅವರು’ ಅಂತ. ಅದರ ಹಿಂದಿನ ಅರ್ಥ ನನಗೆ ಗೊತ್ತಿಲ್ಲದ್ದಾ?!
ಇದು ಆಫೀಸಿನ ಒಳಗಿನ ಕಥೆಯಾದರೆ, ಮನೆಯಲ್ಲಿ ಸಂಬಂಧಿಕರ ಕಥೆ ನೋಡಬೇಕು. ನಾನು ನನ್ನ ಗಂಡನ ಚೆಕ್ ಬುಕ್ ಕಿತ್ತಿಟ್ಟುಕೊಂಡು ಬಿಟ್ಟಿದ್ದೇನೆ ಮತ್ತು ಅವನಿಂದ ಎಲ್ಲ ಸ್ವಾತಂತ್ರ್ಯವನ್ನೂ ಕಸಿದು ಮೂಲೆಗುಂಪು ಮಾಡಿಬಿಟ್ಟಿದ್ದೇನೆ ಅನ್ನುವ ಥರದ ಮಾತುಗಳನ್ನು ನನ್ನೆದುರೇ ಆಡುತ್ತಿದ್ದರು! ಏನಾದರೂ ಅಂದುಕೊಳ್ಳಲಿ, ಒಟ್ಟಿನಲ್ಲಿ ನನ್ನ ಕೆಲಸ ನಾನು ಮಾಡಿಕೊಂಡು ಹೋಗಬೇಕು ಅಂತ ತೀರ್ಮಾನಿಸಿಬಿಟ್ಟಿದ್ದೆ. ಹಾಗಾಗಿ ಅವರೆಲ್ಲ ವ್ಯಂಗ್ಯದ ಮಾತು ನನಗೆ ಅರ್ಥವೇ ಆಗಿಲ್ಲವೇನೋ ಅನ್ನುವ ಥರ ಇರಲು ಕಲಿತೆ.
ಆಫೀಸಿನ ಒಳಗಿನ ಕೆಲಸಗಳದ್ದು ಈ ಕಥೆಯಾಯ್ತು. ಹೊರಗಿನ ಪೇಮೆಂಟ್ ಕಲೆಕ್ಟ್ ಮಾಡುವ ಕೆಲಸ ಕೈಗೆತ್ತಿಕೊಂಡ ನಂತರದ ಒಂದಿಷ್ಟು ಕಥೆಯನ್ನು ಮುಂದಿನವಾರ ಹೇಳುತ್ತೇನೆ ….ಆ ನಂತರ ನಿಮಗೆ ಯಾರಿಗಾದರೂ ಕಲೆಕ್ಷನ್ ಏಜೆಂಟ್‌ನ ಅಗತ್ಯ ಬಿದ್ದಾಗ ನನ್ನ ನೆನಪಾಗದಿದ್ದರೆ ನನ್ನಾಣೆ !!

‍ಲೇಖಕರು avadhi

11 July, 2013

ನಿಮಗೆ ಇವೂ ಇಷ್ಟವಾಗಬಹುದು…

12 Comments

  1. vijayashree

    <> ಕಲ್ಪಿಸಿಕೊಳ್ಳೋಕೇ ಭಾರೀ ಮಜವಾಗಿದೆ.. ಚನ್ನಾಗಿ ಬರೆದಿದ್ದೀರಿ.. ಭಾರ್ತಿ

  2. yash

    ಬರಹ ಚೆನ್ನಾಗಿದೆ…

  3. krishna

    Interesting story. Well written. Waiting for more.

  4. Mallikarjuna K

    Wonderful experiment, be practical can do anything.

  5. ಜಿ.ಎನ್ ನಾಗರಾಜ್

    ಹೆಜ್ಜೆ ಹೆಜ್ಜೆಗೂ ಮಹಿಳೆ ಹೋರಾಡುತ್ತಲೇ ಪ್ರತಿಯೊಂದೂ ಕ್ಷೇತ್ರವನ್ನೂ ಗೆದ್ದುಕೊಳ್ಳಬೇಕಾಗಿದೆ.ಏಕೆಂದರೆ ಇಡೀ ಸಮಾಜ ಒಟ್ಟಾಗಿ ಕಂದಾಚಾರೀ ಚಿಂತನೆಗಳನ್ನು ಬೆನ್ನಟ್ಟಿ ಹೊಡೆದೋಡಿಸದೆ ಇದ್ದುದರಿಂದ.

  6. ಸತೀಶ್ ನಾಯ್ಕ್

    ತೊಟ್ಟಿಲನ್ನ ತೂಗುವ ಕೈ ದೇಶವನ್ನ ಆಳಬಲ್ಲದು.. ನಾವು ಎರಡನೇ ಮೂರನೇ ತರಗತಿ ಯಲ್ಲಿದ್ದಾಗ ಕಲಿತ ನುಡಿಗಟ್ಟು.. ಅದಕ್ಕೊಂದು ಆತ್ಮೀಯ ಉದಾಹರಣೆ ಕೊಡ ಬಹುದಾದಂತ ಬರಹ.
    ಹೋಂ ಮಿನಿಸ್ಟರ್, ಫೈನಾನ್ಸ್ ಮಿನಿಸ್ಟರ್ ಕೂಡಾ ಆದ್ಮೇಲೆ ಭಾರೀ ಬೆಳವಣಿಗೆಗಳು ಆಗಿವೆ..!!
    ಬಹಳ ಚೆಂದದ ಲಹರಿಯ ಬರಹ.. ಮುಂದಿನ ಭಾಗದ ಕುರಿತಾಗಿ ಉತ್ಸುಕನಾಗಿದ್ದೇನೆ.. 🙂

  7. samyuktha

    🙂 waiting for nextu….

  8. Gopaal Wajapeyi

    ಚೆನ್ನಾಗಿದೆ ಆ’ಪೀಸಾ’ಯಣ… ಮುಂದೆ? 🙂

  9. shobhavenkatesh

    kathe kadambari yalli kelidde nijavagalu nadedideyalla next issue kayuthidini

  10. Anonymous

    sahaja sundara sarala matinalli odugarannu hididittukolluva baraha nimmadu,Bharathi.mundina sanchikegagi edirunodtaiddene.

  11. Seema Deepak

    akka,
    nanna kathenu almost same. iga ondu hantakke bandide. nanna hale dingalanna nenapisidakke thanks.

  12. Neeta Rao

    ಆಫೀಸಿನಲ್ಲಿ ಭಾರತಿ, ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಸಹಜ, ಸರಳ ಶೈಲಿ, ಆತ್ಮೀಯವೆನಿಸುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading