ನನ್ನ ಅಪ್ಪ-ಅಮ್ಮನಿಗೆ ಇಬ್ಬರು ಮಕ್ಕಳು … ಒಬ್ಬಳು ನಾನು, ಇನ್ನೊಬ್ಬಳು ನನ್ನ ಅಕ್ಕ. ನಮ್ಮ ಮನೆಯಲ್ಲಿ ಗಂಡಸರು ಅಲ್ಪಸಂಖ್ಯಾತರು! ನನ್ನ ಅಪ್ಪ ಒಬ್ಬರೇ ಮೈನಾರಿಟಿ ಗುಂಪಿನವರು. ಹೆಣ್ಣು ಮಕ್ಕಳದ್ದು majority. ನಾವು ಹೈಸ್ಕೂಲ್ ತಲುಪುವ ಹೊತ್ತಿಗೆ ಬೆಂಗಳೂರಲ್ಲಿ ಸೆಟಲ್ ಆದೆವು. ಟ್ರಾನ್ಸ್ಫರ್ ಆದ ಊರಿಗೆಲ್ಲ ಅಪ್ಪ ಒಬ್ಬರೇ ಹೋಗುತ್ತಿದ್ದರು. ಅವರಿರುವ ಊರು ಬೆಂಗಳೂರಿಗೆ ಹತ್ತಿರದಲ್ಲಿದ್ದರೆ ವಾರಕ್ಕೊಂದು ಸಲ, ಇಲ್ಲವೆಂದರೆ ತಿಂಗಳಿಗೊಂದು ಸಲ … ಹೀಗೇ ಬಂದು, ಹೋಗಿ ಮಾಡುತ್ತಿದ್ದರು. ಇನ್ನುಳಿದ ದಿನಗಳಲ್ಲಿ ನಮ್ಮ ನಮ್ಮದೇ ಪ್ರಮಿಳಾ ರಾಜ್ಯ.
ಈ ಥರ ಬದುಕಬೇಕಾಗಿ ಬಂದಾಗ ಎಲ್ಲ ಕೆಲಸಗಳನ್ನೂ ನಾವೇ ಮಾಡುವ ಅಭ್ಯಾಸ ಬೆಳೆಯಿತು. ವಾಟರ್ ಬಿಲ್, ಲೈಟ್ ಬಿಲ್ ಕಟ್ಟುವುದು, ರೇಷನ್ ತರುವುದು ಮುಂತಾದ ಕೆಲಸಗಳನ್ನೆಲ್ಲ ನಾವು ಮೂವರೂ ಹಂಚಿಕೊಂಡು ಮಾಡುತ್ತಿದ್ದೆವು. ಇನ್ನು ಅಪ್ಪ ಊರಿಗೆ ಬಂದಾಗ ನಾವು ನೋಡಬೇಕಾದ ಸಿನೆಮಾಗಳಿಗೆ ಕ್ಯೂನಲ್ಲಿ ನಿಂತು ಅಡ್ವಾನ್ಸ್ ಬುಕಿಂಗ್ ಮಾಡಿಸುವುದು ಕೂಡಾ ನನ್ನ ಅಥವಾ ಅಕ್ಕನ ಕೆಲಸ. ಮನೆಯ ಉಳಿದ ಮಾಮೂಲು ಕೆಲಸಗಳು, ಫೀಸ್ ಕಟ್ಟುವುದು, ಹೆಚ್ಚೇನೂ ದುಡ್ಡು ಇಲ್ಲದಿದ್ದರೂ ಆಗಾಗ ಎದುರಾಗುವ ಬ್ಯಾಂಕ್ ಕೆಲಸ, ಪೋಸ್ಟ್ ಆಫೀಸ್ ಕೆಲಸ ಎಲ್ಲವೂ ನಾವು ಮೂವರದ್ದೇ.
ನನ್ನ ಅಪ್ಪನ ಹತ್ತಿರ ಒಂದು ಬುಲೆಟ್ ಬೈಕ್ ಇತ್ತು. ರಾಕ್ಷಸಾಕಾರದ ಆ ಬೈಕಿಗೆ ದಿನವೂ ಕೆಲಸ ಕೊಡದಿದ್ದರೆ ನನ್ನ ಅಪ್ಪ ಊರಿಗೆ ಹಾಜರಾಗುವ ಹೊತ್ತಿನಲ್ಲಿ ಬ್ಯಾಟರಿ ಸತ್ತು ಹೋಗುತ್ತಿತ್ತು. ಅಪ್ಪ ಬಂದ ಸಮಯದಲ್ಲಿನ ಆ ಅಮೂಲ್ಯ ಸಮಯವನ್ನು ಬ್ಯಾಟರಿ ಛಾರ್ಜ್ ಮಾಡಿಸುವಂಥ ಕ್ಷುಲ್ಲಕ ಕೆಲಸಕ್ಕೆ ವ್ಯರ್ಥ ಮಾಡುವುದು ನಮ್ಮಿಂದ ಆಗುತ್ತಿರಲಿಲ್ಲ… ನಮಗಾಗಿ ಕಾಯುತ್ತಿರುವ ಸಿನೆಮಾಗಳು ಇರುತ್ತಿದ್ದವು, ನೆಂಟರ ಮನೆಗಳಿರುತ್ತಿದ್ದವು, ಹೋಟೆಲ್ಲುಗಳಿರುತ್ತಿದ್ದವು! ಆ ಎಲ್ಲ ಪ್ರೋಗ್ರಾಮ್ ಸಾಂಗವಾಗಿ ಆಗಬೇಕೆಂದರೆ ಮೊದಲು ಆ ಬೈಕ್ ನೆಟ್ಟಗೆ ಸ್ಟಾರ್ಟ್ ಆಗುವುದು ಅತ್ಯಗತ್ಯವಿತ್ತು. ಆದರೆ ಆ ಹೆಣಭಾರದ ಬೈಕನ್ನು ಆಗಾಗ ಸ್ಟಾರ್ಟ್ ಮಾಡಿ ಬದುಕಿಸುವ ಸ್ಥಿತಿಯಲ್ಲಿಡಲು ನಮ್ಮಿಂದ ಆಗುತ್ತಿರಲಿಲ್ಲ.
ಆದರೆ ಸತ್ತು ಹೋಗಿದ್ದ ಬ್ಯಾಟರಿಗೆ ಜೀವ ಕೊಡಿಸುವ ಸಾವಿತ್ರಿಯಾಗುವುದು ನನಗೆ ಗೊತ್ತಿತ್ತು. ಹಾಗಾಗಿ ಅಪ್ಪ ಬರುವ ಎರಡು ದಿನ ಮುಂಚೆಯೇ ಇದ್ದ ಬದ್ದ ಜೀವವನ್ನೆಲ್ಲ ಕಾರಿಕೊಂಡು ಡಿಸ್ಚಾರ್ಜ್ ಆಗಿರುತ್ತಿದ್ದ ಬ್ಯಾಟರಿಯನ್ನು ಉಪ್ಪಿನ ಕಾಗದದಿಂದ ಉಜ್ಜಿ ಆ ಪಿಸುರನ್ನೆಲ್ಲ ತೆಗೆದು ಗ್ರೀಸ್ ಮೆತ್ತಿ ಕಚ್ಚಿಕೊಂಡಿರುವ ನಟ್ಟು-ಬೋಲ್ಟಿನ ಜೊತೆ ಗುದ್ದಾಡಿ ಅಂತೂ ಇಂತೂ ಬ್ಯಾಟರಿಯನ್ನು ಬೈಕಿನಿಂದ ಬೇರ್ಪಡಿಸಿ ಛಾರ್ಜಿಂಗ್ಗೆ ಕೊಡುವುದು ನನ್ನ ಕೆಲಸ. 24 ಘಂಟೆಗಳ ಕಾಲ ಛಾರ್ಜ್ ಮಾಡಿಸಿ ಆ ನಂತರ ಅದನ್ನು ವಾಪಸ್ ತಂದು ಮತ್ತೆ ಬೈಕಿಗೆ ಫಿಟ್ ಮಾಡುವಷ್ಟರಲ್ಲಿ ಗುಲ್ಬರ್ಗಾದ ಟ್ರೈನು ಕೂಗುಡುತ್ತಿತ್ತು! ಅದಾದ ಅರ್ಧ ಘಂಟೆಯಲ್ಲಿ ಅಪ್ಪ ಮನೆಗೆ ಹಾಜರ್ ಮತ್ತು ನಮ್ಮ ತಿರುಗಾಟದ ಸೆಷನ್ ಶುರು.
ಅವತ್ತು ಶುರುವಾಗುವ ತಿರುಗಾಟ ಅಪ್ಪ ಊರಿಗೆ ಹೊರಡುವ ದಿನದವರೆಗೂ ಎಡಬಿಡದೇ ನಡೆಯುತ್ತಿತ್ತು. ನನ್ನ ಅಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಂತವರು. ಹಾಗಾಗಿ ಅವರು ಅಮ್ಮನಿಗೂ, ನಮಗೂ ಚಕ್ರ ಕಟ್ಟಿ ಬಿಟ್ಟಿದ್ದರು! ಅಪ್ಪನಿರುವವರೆಗೆ ಬರೀ ತಿರುಗಾಟ … ತಿರುಗಾಟ.
ನಮ್ಮ ಗೆಳತಿಯರಿಗೆಲ್ಲ ಸುಮಾರು ಮನೆಯಲ್ಲಿ ಅಣ್ಣ-ತಮ್ಮಂದಿರಿರುತ್ತಿದ್ದರು. ಕತ್ತಲಾದ ಮೇಲೆ ಅವರೆಲ್ಲ ಒಬ್ಬೊಬ್ಬರೇ ಓಡಾಡುತ್ತಿರಲಿಲ್ಲ. ಅವರನ್ನು ವಾಪಸ್ ಕರೆದೊಯ್ಯಲು ಅವರ ಅಣ್ಣ, ತಮ್ಮಂದಿರು ಹಾಜರಾಗುತ್ತಿದ್ದರು … ಯಾರೂ ಇಲ್ಲವೆಂದರೆ ಅವರ ಅಪ್ಪಂದಿರೇ ಬಂದುಬಿಡುತ್ತಿದ್ದರು. ನಾವು ಅವರ ಮನೆಗೆ ಹೋದಾಗಲೂ ಕತ್ತಲಾಗಿ ಹೋಯಿತೆಂದರೆ ‘ಇರು ನನ್ನ ತಮ್ಮನ್ನ ಜೊತೆಗೆ ಕಳಿಸ್ತೀನಿ’ ಅಂತ ಹೇಳುತ್ತಿದ್ದರು. ಗಂಡು ಮಕ್ಕಳಿಲ್ಲದ ನಮ್ಮ ಮನೆಯಂತ ವಾತಾವರಣದಲ್ಲಿ ಬೆಳೆದ ನಮಗೆ ಅವರು ಪಾಪ ನಾವು ಒಬ್ಬರೇ ಹೋಗುತ್ತೀವಲ್ಲಾ ಅನ್ನುವ ಕಾಳಜಿಗೆ ಆ ರೀತಿ ಹೇಳಿದರೂ ಅವರು ಜಂಭದಿಂದ ಹಾಗೆ ಹೇಳುತ್ತಿದ್ದಾರೋ ಅನ್ನಿಸಿ ಬಿಡುತ್ತಿತ್ತು. ಆಗೆಲ್ಲ ನನಗೆ ಮತ್ತು ಅಕ್ಕನಿಗೆ ಒಂಥರಾ ಸಂಕಟ… ಥೂ ನಾವೊಳ್ಳೆ ಪರದೇಶಿಗಳ ಥರ ಈ ರೀತಿಯ ಮಾತೆಲ್ಲ ಕೇಳಬೇಕಲ್ಲಾ ಎಂದು! ನಮಗೆ ಆ ರೀತಿಯ ಗಾರ್ಡಿಯನ್ ಅಣ್ಣ-ತಮ್ಮಂದಿರು ಯಾರೂ ಇಲ್ಲದ್ದರಿಂದ ಅವರು ಕಾಳಜಿಯಿಂದ ನಮ್ಮೆದುರು ಬಿಚ್ಚಿಡುವ ಸಹಾಯ ಹಸ್ತವನ್ನು ಕೂಡಾ ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ.
ಈ ಥರ ಮನಃಸ್ಥಿತಿ ಇದ್ದಾಗ ನಮ್ಮ ಅಪ್ಪನ ಎದುರು ಆಗ ಒಂದು ವಿಲಕ್ಷಣ ಬೇಡಿಕೆ ಇಡುತ್ತಿದ್ದೆವು ‘ಅಣ್ಣಾ ನಮಗೊಬ್ಬ ಅಣ್ಣ ಬೇಕು’ ಎಂದು! ನನ್ನ ಅಪ್ಪ ನಗುತ್ತಾ ‘ತಮ್ಮನನ್ನಾದರೂ ಬೇಕಿದ್ರೆ ತರಬಹುದು ..ಅಣ್ಣನನ್ನು ಎಲ್ಲಿಂದ ತರಲಿ’ ಅಂತ ನಗುವಾಗ ನಮಗೆ ಇನ್ನೂ ಸಿಟ್ಟೇರುತ್ತಿತ್ತು. ನಾವು ಮೊಂಡತನದಿಂದ ‘ದತ್ತು ತಗೊಳ್ಳಿ’ ಅನ್ನುತ್ತಿದ್ದೆವು. ಅಪ್ಪನಿಗೆ ನಮ್ಮ ಹುಚ್ಚಾಟ ಮಜ ಕೊಡುತ್ತಿತ್ತು ಅನ್ನಿಸುತ್ತದೆ. ಅವರು ಮನಸಿನಲ್ಲೇ ನಗುತ್ತಾ ‘ಆಸ್ತಿಯಲ್ಲಿ ದತ್ತು ಮಗನಿಗೂ ಪಾಲು ಕೊಡಬೇಕು. ನಿಮಗೆ ಅದು ಒಪ್ಪಿಗೇನಾ?’ ಅನ್ನುತ್ತಿದ್ದರು. ಅದು ಹಾಸ್ಯವಂತಲೂ ಗೊತ್ತಾಗದ ನಾವು ಆಸ್ತಿಯೋ, ಏನೋ ಕೊಟ್ಟುಕೊಳ್ಳಲಿ .. ಒಬ್ಬ ಅಣ್ಣ ಮನೆಗೆ ಬಂದರೆ ಸಾಕು ಅನ್ನುವ ರೀತಿಯಲ್ಲಿ ‘ಹ್ಞೂ ನಮಗೆ ಒಪ್ಪಿಗೆ’ ಅಂತ permission ಕೊಡುತ್ತಿದ್ದೆವು! ಅಪ್ಪ ‘ಸರಿ ಇಬ್ಬರಿಗೂ ಅಣ್ಣನೇ ಬೇಕೋ ಅಥವಾ ನಿಮ್ಮಿಬ್ಬರಿಗೂ ಮಧ್ಯ ವಯಸ್ಸಿನವನನ್ನು ದತ್ತು ತೆಗೆದುಕೊಳ್ಳಲೋ? ಆಗ ಒಬ್ಬಳಿಗೆ ಅಣ್ಣ, ಮತ್ತೊಬ್ಬಳಿಗೆ ತಮ್ಮ ಸಿಗುತ್ತಾನೆ’ ಅಂತ ಸೀರಿಯಸ್ಸಾಗಿ ಕೇಳುವ ಪರಿ ನೋಡಬೇಕಿತ್ತು ನೀವು!
ನಾವು ಪೆದ್ದಲಾಷ್ಟಕಗಳು ‘ಇಲ್ಲ ಅಣ್ಣ ಇಬ್ರಿಗೂ ಅಣ್ಣನೇ ಬೇಕು. ದೊಡ್ಡವನನ್ನೇ ದತ್ತು ತಗೊಳ್ಳಿ’ ಅಂತ ತೀರ್ಮಾನಕ್ಕೆ ಬರುವಂತೆ ಹೇಳುತ್ತಿದ್ದೆವು. ಈ ರೀತಿ ಮುಂದುವರೆಯುತ್ತಲೇ ಹೋಗುವ ನಮ್ಮ ಈ ತಿಕ್ಕಲು ಮಾತು-ಕಥೆ ಕೇಳಿ ಕೇಳಿ ಸಾಕಾದ ಅಮ್ಮ ನಮ್ಮನ್ನು ಗದರಿಸುವವರೆಗೆ ಇದು ನಿಲ್ಲುತ್ತಿರಲಿಲ್ಲ. ಅಮ್ಮ ಗದರಿಸಿದಾಗ ನಾನು ಮತ್ತು ಅಕ್ಕ ಅವಳನ್ನು ವಿಲನ್ ಥರ ನೋಡಿ ಮಾತು ನಿಲ್ಲಿಸುತ್ತಿದ್ದೆವು.
ಕೊನೆಗೆ ಯಾವ ದತ್ತು ಪುತ್ರನೂ ನಮ್ಮ ಮನೆಯಲ್ಲಿ ಅವತರಿಸದೇ ನಾವು ನಮ್ಮದೇ ಕಾಲ ಮೇಲೆ ನಾವು ಕುಂಟುತ್ತ, ನಡೆಯುತ್ತ ಬದುಕುವುದು ಅಭ್ಯಾಸವಾಗಿ ಹೋಯಿತು. ದೊಡ್ಡವರಾಗುತ್ತ, ಆಗುತ್ತ ಅಪ್ಪ ನಮ್ಮನ್ನು ತುಂಬ ಸ್ವತಂತ್ರರನ್ನಾಗಿ ಬೆಳೆಸಿದರು. ಹೊರಗಿನ ಎಲ್ಲ ಕೆಲಸಗಳನ್ನು ನಾವೇ ಮಾಡಿಕೊಳ್ಳಲು ಹುರಿದುಂಬಿಸುತ್ತಿದ್ದರು. ಕಾಲೇಜ್ ಮುಗಿದ ನಂತರ ಯಾವುದೋ ಲಾಟರಿ ಕಂಪನಿಯಲ್ಲಿ ಸಣ್ಣದೊಂದು ಕೆಲಸ ಸಿಕ್ಕಾಗಲೂ ಸಂಬಳ ಕಡಿಮೆಯಿದ್ದರೂ ಪರವಾಗಿಲ್ಲ, ಸೇರಿಕೋ ಅಂತ ಹೇಳಿದರು. ಅಲ್ಲಿನ ನಮ್ಮ ಸರ್ದಾರ್ಜಿ ಬಾಸ್ ಆ ಕಾಲಕ್ಕೇ ಅತೀ ದೊಡ್ಡ ಮೊತ್ತವಾದ ಒಂದು ಲಕ್ಷ, ಎರಡು ಲಕ್ಷದಷ್ಟು ಹಣವನ್ನು ಬ್ಯಾಂಕಿಗೆ ಕಟ್ಟಿ ಬರಲು ಕಳಿಸುತ್ತಿದ್ದ. ಒಬ್ಬಳೇ ಅಷ್ಟು ದುಡ್ಡನ್ನು ಕಟ್ಟಿ ಬರುವುದು, ಡ್ರಾ ಮಾಡುವುದು ಅಮ್ಮನಿಗೆ ಒಂದು ಚೂರೂ ಇಷ್ಟವಾಗುತ್ತಿರಲಿಲ್ಲ. ಯಾವನಾದರೂ ಕಣ್ಣಿಟ್ಟು ನಿನ್ನ ತಲೆ ಒಡೆದು ಹಣ ಎತ್ತಿಕೊಂಡು ಓಡಿಹೋದರೆ??? ಅಂತ ಅವಳು ಬೆದರಿದಾಗ ಅಪ್ಪ ‘ಎಂಥದ್ದೂ ಆಗಲ್ಲ ಸುಮ್ಮನಿರು. ಹೀಗೇ ಹೆದರಿದರೆ ಯಾವಾಗ ಧೈರ್ಯ ಕಲಿಯುವುದು’ ಅಂತ ಬಯ್ಯುತ್ತಿದ್ದರು.
ಇಂಥ ವಾತಾವರಣದಲ್ಲಿ ನಾವು ಸ್ವತಂತ್ರ ಕಪಿಗೋತ್ರದವರ ಹಾಗೆ ಇಡೀ ಲೋಕವೇ ನಮ್ಮದು ಅನ್ನುವ ಹಾಗೆ ಬೆಳೆದೆವು. ನಮಗೆ ಗಂಡಸರ ಜೊತೆ ಮಾತಾಡುವುದಕ್ಕೆ ನಾಚಿಕೆಯಾಗುತ್ತಿರಲಿಲ್ಲ, ಸಂಕೋಚ ಮೊದಲೇ ಆಗುತ್ತಿರಲಿಲ್ಲ! ಮನೆಗೆ ಗಂಡಸರು ಬರಲಿ, ಹೆಂಗಸರೇ ಬರಲಿ ಆರಾಮವಾಗಿ ಅವರ ಜೊತೆ ಹರಟುವುದಕ್ಕೆ ನಮ್ಮಿಂದ ಸಾಧ್ಯವಾಗುತ್ತಿತ್ತು. ಒಬ್ಬರೇ ಕತ್ತಲಾದ ಮೇಲೂ ಓಡಾಡಲು ಹೆದರಿಕೆಯಾಗುತ್ತಿರಲಿಲ್ಲ. ಆಟೋದಲ್ಲಿ ಕೂತು ಬರುವಾಗ ಭಯವಾಗುತ್ತಿರಲಿಲ್ಲ. ಒಬ್ಬರೇ ಊರಿಗೆ ಹೋಗಲು ಅಳುಕಾಗುತ್ತಿರಲಿಲ್ಲ. ನಾವು ಯಾವ ಮೇಲೂ ಡಿಪೆಂಡ್ ಆಗುವ ಅವಕಾಶ ಇಲ್ಲದ್ದರಿಂದ ಬದುಕನ್ನು ಒಂಟಿಯಾಗಿ ಎದುರಿಸುವ ಅಭ್ಯಾಸ ಬೆಳೆಯುತ್ತಾ ಹೋಯ್ತು.

ಮದುವೆಯಾದ ಮೇಲೂ ನನಗೆ ಯಾರ ಮೇಲೂ ಡಿಪೆಂಡ್ ಆಗುವ ಅಭ್ಯಾಸ ಬೆಳೆಯಲೇ ಇಲ್ಲ. ನನ್ನ ಗಂಡನದ್ದು ಮತ್ತು ನನ್ನದು ಹವ್ಯಾಸಗಳೆಲ್ಲ ಬೇರೆ ಬೇರೆ. ಅವನ ಹವ್ಯಾಸಗಳು ಎಂದಿಗೂ ನನ್ನವಾಗಲಿಲ್ಲ. ಮತ್ತು ನನ್ನ ಹವ್ಯಾಸಗಳು ಅವನವು ಕೂಡಾ ಆಗಲಿಲ್ಲ. ನಾಟಕದ ಅತೀವ ಹುಚ್ಚಿರುವ ನನಗೆ ಬೆಂಗಳೂರಿನ ರಂಗಶಂಕರ, ಕಲಾಕ್ಷೇತ್ರ, ಕೆ.ಎಚ್. ಕಲಾಸೌಧ ಎಲ್ಲವೂ ಎರಡನೆಯ ಮನೆಯಿದ್ದಂತೆ. ಅಲ್ಲೆಲ್ಲ ನಾಟಕ ಶುರುವಾಗುವುದೇ ರಾತ್ರಿ 7 ಅಥವಾ 7.30 ಕ್ಕೆ. ಮುಗಿಯುವಷ್ಟರಲ್ಲಿ ರಾತ್ರಿ ಹತ್ತು ಕೂಡಾ ಆಗಿಹೋಗಿರುತ್ತದೆ. ಅಲ್ಲಿಂದ 15-17 ಕಿಲೋಮೀಟರ್ ದೂರ ಇರುವ ನಮ್ಮ ಮನೆ ಸೇರಲು ನನಗೆ ಇರುವ ಏಕೈಕ ಮಾರ್ಗವೆಂದರೆ ಆಟೋ ಮಾತ್ರ. ಡ್ರೈವಿಂಗ್ ಬಾರದ ನನಗೆ ಆಟೋ ಪ್ರಯಾಣ ಅನಿವಾರ್ಯ. ಆಟೋದಲ್ಲಿ ಕೂತಾಗ ಡ್ರೈವರ್ ಜೊತೆ ಮಾತು ಬೆಳೆಸಿ ಅವನ ಕಷ್ಟ-ಸುಖ ವಿಚಾರಿಸುತ್ತ ಬರುತ್ತೇನೆ. ಹಾಗಾಗಿ ಮನೆ ತಲುವುವಷ್ಟರಲ್ಲಿ ಅವನ ಜೀವನ ಚರಿತ್ರೆ ಸುಮಾರು ನನ್ನೆದುರು ಬಿಚ್ಚಿಟ್ಟಿರುತ್ತಾನೆ!
ಮನೆಯವರೆಲ್ಲ ಬೆದರುತ್ತಾರೆ ನನ್ನ ಏಕಾಂಗಿ ಓಡಾಟ ಕಂಡು. ಏನು ಮಾಡಲಿ ಹೇಳಿ? ಒಂದೋ ನಾಟಕ ನೋಡುವುದು ಬಿಡಬೇಕು ಅಥವಾ ಧೈರ್ಯ ಬೆಳೆಸಿಕೊಳ್ಳಬೇಕು. ನಾಟಕ ನೋಡುವುದು ಹೇಗೆ ಬಿಡಲಿ? ಹಾಗಾಗಿ ಧೈರ್ಯ ಬೆಳೆಸಿಕೊಳುವುದೊಂದು ಬಿಟ್ಟು ಅನ್ಯಮಾರ್ಗವಿಲ್ಲ. ಪುಸ್ತಕವೊಂದನ್ನು ಓದಿ, ಅದರ ವಿಷಯ ಮಾತಾಡುವ ನಮ್ಮ ಗುಂಪೊಂದು ಇದೆ. ಅದನ್ನು ಕೂಡಾ ನಾನು ತುಂಬ ಇಷ್ಟ ಪಡುತ್ತೇನೆ. ಅದು ಕೂಡಾ ಸಂಜೆಯೇ ಶುರುವಾಗುವುದು. ಅತೀವ ಸಿನೆಮಾ ಹುಚ್ಚು ಕೂಡಾ ಇದೆ ನನಗೆ. ಯಾವ ಶೋಗೆ ಟಿಕೆಟ್ ಸಿಕ್ಕರೆ ಅದಕ್ಕೆ ನುಗ್ಗುವುದು ಅಭ್ಯಾಸವಾಗಿ ಹೋಗಿದೆ. ತುಂಬ ಗೆಳೆಯ/ಗೆಳತಿಯರು ಕೂಡಾ ಇರುವುದರಿಂದ ನನ್ನ ಓಡಾಟ ಮುಗಿಯುವುದೇ ಇಲ್ಲ.
ಕೆಲವರು ಗೆಳೆಯರು ತಮ್ಮ ಅಕ್ಕನನ್ನೋ, ತಂಗಿಯನ್ನೋ ಅರ್ಧ ಕಿಲೋಮೀಟರ್ ಇರುವ ಅವರ ಮನೆಗೆ ಬಿಟ್ಟು ಬರಲು ಹೋಗಬೇಕೆನ್ನುತ್ತಾರೆ. ಇನ್ನು ಕೆಲವರು ಊರಿಗೆ ಕರೆದೊಯ್ಯಲು ಅಪ್ಪ ಬರುತ್ತಾರೆ ಅನ್ನುತ್ತಾರೆ. ಮನೆಯಲ್ಲಿ ಬಾವ ಊರಿಗೆ ಹೋಗಿರುವುದರಿಂದ ಅಕ್ಕ/ತಂಗಿ ಒಬ್ಬಳೇ ಮಲಗಲು ಭಯ. ಹಾಗಾಗಿ ಜೊತೆಗೆ ಇರಲು ಹೋಗಬೇಕೆನ್ನುತ್ತಾರೆ. ಕತ್ತಲಾದ ಮೇಲೆ ಒಬ್ಬೊಬ್ಬಳೇ ಓಡಾಡುವ ನನಗೆ ಇವೆಲ್ಲ ವಿಚಿತ್ರವೆನ್ನಿಸುತ್ತದೆ. ಸಣ್ಣ ಮಕ್ಕಳನ್ನು ರಸ್ತೆ ಕ್ರಾಸ್ ಮಾಡಿಸುವ ಹಾಗೆ ಹೆಂಡತಿಯನ್ನು ಕೈಹಿಡಿದು ರಸ್ತೆ ದಾಟಿಸುವ ಗಂಡಂದಿರು ಕೂಡಾ ನನಗೆ ನಗು ತರಿಸುತ್ತಾರೆ. ಇನ್ನು ತರಕಾರಿ ತರಲು ಹೋದಾಗಲೂ ಹೆಂಡತಿಗೆ ಏನೂ ಗೊತ್ತಿಲ್ಲ ಪಾಪ, ತಾನು ಇಲ್ಲದಿದ್ದರೆ ಅವಳು ಮೋಸ ಹೋಗಿ ಬಿಡುತ್ತಾಳೆ ಅನ್ನುವ ಹಾಗೆ ಕೆಲವರು ಪೂರ್ತಿ ಜೋಷ್ನಿಂದ ಮುನ್ನುಗ್ಗಿ ವ್ಯಾಪಾರ ಮಾಡುವುದನ್ನು ಕಂಡರೆ ಇರಿಟೇಟ್ ಆಗುತ್ತದೆ.
ಫ಼ೇಸ್ ಬುಕ್ನಲ್ಲಿ ಒಬ್ಬಳು ಗೆಳತಿ ಬರೆದಿದ್ದಳು ‘ಆಫೀಸಿನಿಂದ ವಾಪಸ್ಸಾಗುವಾಗ ದರ್ಶಿನಿ ಕಂಡು ಹಸಿವೆಯೆನ್ನಿಸುತ್ತದೆ. ಒಬ್ಬಳೇ ಹೋದರೆ ಜನ ವಿಚಿತ್ರವಾಗಿ ನೋಡುತ್ತಾರೆ. ಹಾಗಾಗಿ ಹಸಿವೆ ಅದುಮಿ ಮನೆಯ ಕಡೆ ನಡೆಯುತ್ತೇನೆ’ ಎಂದು. ನನಗೆ ಆಶ್ಚರ್ಯವಾಯಿತು… ನಾನು ಹಸಿವೆಯಾದರೆ ಒಬ್ಬಳೇ ಹೋಗಿ ಹೋಟೆಲ್ಲಿನಲ್ಲಿ ಕೂತು ಪಟ್ಟಾಗಿ ತಿಂದು ಬರುತ್ತೇನೆ. ಅದು ನನಗೆ ಸರ್ವೇ ಸಾಮಾನ್ಯ. ನೋಡುವ ಜನ ಎಷ್ಟು ದಿನ ಅಂತ ನೋಡಿಯಾರು? ಒಂದು ದಿನ ಅವರಿಗೂ ನೋಡಿ, ನೋಡಿ ಬೋರ್ ಹೊಡೆದಾಗ ನೋಡುವುದು ಬಿಡುತ್ತಾರೆ ಅಷ್ಟೇ ಅಲ್ಲವಾ?
ಮುಂಚೆ ನೋಡಿ ಹುಡುಗಿಯರು ಇಂಜಿನಿಯರ್ ಆಗುವುದು ತುಂಬ ಕಡಿಮೆ ಸಂಖ್ಯೆಯಲ್ಲಿತ್ತು. ಇವತ್ತು ಗಂಡು ಮತ್ತು ಹೆಣ್ಣು ಇಂಜಿನಿಯರ್ಗಳ ಸಂಖ್ಯೆ ಹೆಚ್ಚೂ ಕಡಿಮೆ ಸಮ ಸಮ. ಹುಡುಗಿಯರು ಮುಂಚೆ ಸ್ಕೂಟರ್ ಓಡಿಸುತ್ತಿರಲಿಲ್ಲ. ಅಪಿ ತಪ್ಪಿ ಓಡಿಸಿದರೂ ಗಂಡೊಬ್ಬ ಅವಳ ಹಿಂದೆ ಕೂತು ಹೋಗುತ್ತಿರಲಿಲ್ಲ. ಈಗ ನೋಡಿ, ಅದು ಸಾಮಾನ್ಯವಾಗಿ ಹೋಗಿದೆ. ಹೀಗೇ ಎಲ್ಲವೂ ಕೂಡಾ … ಮಾಡುತ್ತ ಹೋದಂತೆ ನೋಡುವವರಿಗೆ ಅಭ್ಯಾಸವಾಗಿ ಬಿಡುತ್ತದೆ. ಇದಕ್ಕಾಗಿ ಹೆಚ್ಚೇನೂ ಪ್ರಯತ್ನ ಬೇಕಿಲ್ಲ … ಸುಮ್ಮನೇ ಅಳುಕಿಲ್ಲದೆ ನಮ್ಮ ಬದುಕನ್ನು ಬದುಕುತ್ತಾ ಹೋಗುವ ಛಲ ಬೇಕು ಅಷ್ಟೇ.
ನನ್ನ ಕಾಲದಲ್ಲಿ ಇವೆಲ್ಲ ಪರಿಸ್ಥಿತಿ ಇತ್ತು. ಈಗಿನ ಹುಡುಗಿಯರು ಒಬ್ಬರೊಬ್ಬರೇ ಆರಾಮವಾಗಿ ಓಡಾಡುತ್ತಾರೆ. ಅದು ಮಾಮೂಲು. ರಾತ್ರಿ ಶಿಫ಼್ಟ್ನ ಕೆಲಸ ಬಿದ್ದಾಗ ಆರಾಮವಾಗಿ ಒಗ್ಗಿಕೊಳ್ಳುತ್ತಾರೆ. ಅವರ ಅಪ್ಪ-ಅಮ್ಮಂದಿರಿಗೆ ಕೂಡಾ ಇದು ಮಾಮೂಲು ಅನ್ನಿಸುತ್ತದೆ. ಪರದೇಶಗಳಿಗೆ ಕೆಲಸದ ಮೇಲೆ ಒಬ್ಬೊಬ್ಬರೇ ಹೋಗುತ್ತಾರೆ. ಆದರೆ ನಾನು ಕಾಲೇಜಿಗೆ ಹೋಗುವಾಗಿನ ದಿನಗಳಲ್ಲಿ ಈ ರೀತಿ ಇರಲಿಲ್ಲ. ಹಾಗಾಗಿ ಎಷ್ಟೊಂದು ಜನರಿಗೆ ನನ್ನ generation ನ ನಾನು ಬಿಂದಾಸ್ ಆಗಿ ನನಗೆ ಬೇಕಿದ್ದಂತೆ ಬದುಕಿಕೊಳ್ಳುವುದು ಆಶ್ಚರ್ಯವೆನ್ನಿಸಿದೆ. ಆದರೆ ನನ್ನ ಗೆಳತಿಯರು ಅನೇಕರು ಈ ರೀತಿ ಬದುಕನ್ನು ಬದುಕುವುದನ್ನು ನಾನು ನೋಡಿದ್ದೇನೆ. ಗೊತ್ತಿಲ್ಲದ ಊರುಗಳಲ್ಲಿ ಸೆಟಲ್ ಆಗಿ ಆರಾಮವಾಗಿ ಬದುಕುತ್ತಾರೆ. ನಮ್ಮಂಥವರನ್ನು ನೋಡಿದಾಗ ಸುಮಾರು ಜನ ನಾವು ಆ ರೀತಿ ಇರುವುದಕ್ಕೆ ಆಶ್ಚರ್ಯ ನನ್ನೆದುರೇ ವ್ಯಕ್ತಪಡಿಸುತ್ತಾರೆ.
ನೀನು ನಿನ್ನ ಕಾಲಮಾನದವರಿಗಿಂತ ತುಂಬ ಬೇರೆಯದೇ ರೀತಿ ಇದ್ದೀಯ ಅಂತ ಕೆಲವರು ಹೇಳುವುದನ್ನು ಕೇಳಿದಾಗ ನಾನು ಸುಮ್ಮನೇ ನಗುತ್ತೇನೆ. ಇದು ಹೇಗೆ ನೀವು ನಿಮ್ಮ generation ನ ತುಂಬ ಜನಗಳಿಗಿಂತ ಭಿನ್ನ ಅನ್ನುವ ಪ್ರಶ್ನೆ ಎದುರಿಗಿಟ್ಟಾಗ ನನ್ನ ಉತ್ತರ ಒಂದೇ .. ಬದುಕು ಎಲ್ಲವನ್ನೂ ಕಲಿಸುತ್ತದೆ … ಬದುಕುವುದನ್ನು ಕೂಡಾ! ಈ ರೀತಿ ಬದುಕುವುದನ್ನು ಕಲಿಸಿದ ಅಪ್ಪ-ಅಮ್ಮನಿಗೆ ಮತ್ತು ನಮ್ಮ ಮನೆಯಲ್ಲಿ ಹುಟ್ಟದ ನನ್ನ ಅಣ್ಣನಿಗೆ ಈ ಮೂಲಕ ನನ್ನದೊಂದು ಕೃತಜ್ಞತೆ … !!



ನಿನಗೆ ಅಣ್ಣನೋ, ತಮ್ಮನೋ ಇದ್ದಿದ್ದರೆ ಅವನ ಗತಿ ಎನಾಗಿರಬಾರದು !!!
ಸಿಂಪಲ್ ಬದುಕನ್ನ ಗೊಂದಲ ಮಾಡ್ಕೊಂಡ್ ಬದುಕೋರು ಈ ನಿನ್ನ ಬರಹ
ಓದಲಿ, ಬದುಕು ಎಷ್ಟು ಸುಂದರ ಮತ್ತು ಸರಳ ಅಂತಾ ಅರ್ಥ ಆಗತ್ತೆ.
ಟೂ ಅಲ್ಲ , ತ್ರೀ ಅಲ್ಲ, ಫೋರ್ ಗುಡ್ ಈ ನಿನ್ನ ಲೇಖನ 🙂
ಬಲೆಪರಿವಾರ ಅಪ್ಪ ನಿಮಗೆಮಾದರಿನಿಮ್ಮಭಾಗೈವೇಭಾಗೈ
ha ha 🙂 independent candidate
waah.. 🙂
ನಿಮ್ಮ ಲೇಖನ ಓದಿದ ಮೇಲೆ ನನಗೆ ನಮ್ಮ ಮನೆಯ ಘಟನೆ ನೆನಪಾಯಿತು. ನಾನು ನನ್ನ ಮಗಳನ್ನು ಇದೇ ರೀತಿ ಇಂಡಿಪೆಂಡೆಂಟ್ ಆಗಿ ಬೆಳೆಸಬೇಕೆನ್ನುವವನು. ಆದರೆ ವಿಪರೀತ ಭಯಪಡುವ ನನ್ನ ಹೆಂಡತಿ ಇದಕ್ಕೆ ಅವಕಾಶ ಕೊಡುವದಿಲ್ಲ. ಈ ಕಾರಣಕ್ಕಾಗಿ ನಾನು ಅವಳ ಹತ್ತಿರ ಎಷ್ಟೋ ಸಾರಿ ಜಗಳಾಡಿದ್ದಿದೆ. ಬಹುಶಃ, ನಾನು ಬೆಂಗಳೂರಿನಲ್ಲಿ once for all ಇರತೊಡಗಿದ ಮೇಲೆ ನನ್ನ ಗರಡಿಯಲ್ಲಿ ಬೆಳೆಯುವ ಮಗಳು ನಿಮ್ಮಂತೆ ಆಗಬಹುದು ಎನ್ನುವದು ನನ್ನ ನಂಬಿಕೆ. ಎಂದಿನಂತೆ ನಿಮ್ಮ ಲೇಖನ Super!
ಬಾರತಿ,ಎನು ಚೆನ್ನಗಿ ಬರೆದಿದ್ದಿರಿ.ದನ್ಯವಾದಗಳೂ.ನಮ್ಮ ತ೦ದೆ ಕೂಡ ಹೀಗೆ ನಮ್ಮನ್ನು ಬೆಳಸಿದರು.ನಾವು ೧೧ ಮಕ್ಕಳೂ.ನನಗೆ ೫೮ ವರ್ಶ ಆಗಿದ್ದೆ ತಡ ನಾನು ರೈಲ್ನಲ್ಲಿ,ಅರ್ದ ಛಾಜ್ರ್ ಹೆಳೀ ನೊರ್ಥ್ ಇ೦ಡೀಯ ಟೋರ್ ಹೊರಟೇ.ಒಬ್ಬಳೇ.ಪೂನ,ನಾಸಿಕ್.ಬೊ೦ಬೈ.ಹೊಗಿ ಬ೦ದೆ.ಎಲ್ಲ ಕೆಳೂವವರೆ ಒಬ್ಬರೆ ಹೆಗೆ ಹೊದೆರಿ ಅನ್ತ.ಒಳ್ಳೇ ಅನುಬವ
“ಸಣ್ಣ ಮಕ್ಕಳನ್ನು ರಸ್ತೆ ಕ್ರಾಸ್ ಮಾಡಿಸುವ ಹಾಗೆ ಹೆಂಡತಿಯನ್ನು ಕೈಹಿಡಿದು ರಸ್ತೆ ದಾಟಿಸುವ ಗಂಡಂದಿರು ಕೂಡಾ ನನಗೆ ನಗು ತರಿಸುತ್ತಾರೆ. ಇನ್ನು ತರಕಾರಿ ತರಲು ಹೋದಾಗಲೂ ಹೆಂಡತಿಗೆ ಏನೂ ಗೊತ್ತಿಲ್ಲ ಪಾಪ, ತಾನು ಇಲ್ಲದಿದ್ದರೆ ಅವಳು ಮೋಸ ಹೋಗಿ ಬಿಡುತ್ತಾಳೆ ಅನ್ನುವ ಹಾಗೆ ಕೆಲವರು ಪೂರ್ತಿ ಜೋಷ್ನಿಂದ ಮುನ್ನುಗ್ಗಿ ವ್ಯಾಪಾರ ಮಾಡುವುದನ್ನು ಕಂಡರೆ ಇರಿಟೇಟ್ ಆಗುತ್ತದೆ”.
ನಾನೂ ಇರಿಟೇಟಿಂಗ್ ಫೆಲೋ ಹಾಗಾದ್ರೆ..:)
ಲೇಖನ ಚೆನ್ನಾಗಿದೆ, ಭಾರತಿ…
ನಿಮ್ ಜೊತೆ ನ೦ದೂ ಒಂದು ಕೃತಜ್ಞತೆ ನನ್ನ ಮನೆಯಲ್ಲಿ ಹುಟ್ಟದ ಅಣ್ಣ ಹಾಗೂ ತಮ್ಮನಿಗೆ 🙂
like it 🙂
Simpl…est aagi complex vicharagalanna helbidtira… tumba chenda baraha 🙂
sooper Bharati mmaa…. 🙂 tumbaa chenaagide
ಇಬ್ಬರೂ ಇದ್ದಾರೆ ಅದ್ರು ನನಗೂ ನಿಮ್ಮಂತಹ ಇನ್ನೊಬ್ಬ ಅಣ್ಣ ಬೇಕು ಕಣ್ರೀ!
hahahhahahahahaahhaa
ನನಗೆ ಅಕ್ಕನಿಲ್ಲ ಎಂಬುದು ನನ್ನ ಬಹುಕಾಲದ ಕೊರಗು.ಅಕ್ಕ ಎನ್ನುವುದೇ ಯಾಕೆ ನನ್ನನ್ನು ಯಾಕೆ ತುಂಬಾ ಕಾಡುತ್ತದೆ ಎಂಬುದಕ್ಕೆ ನಿಮ್ಮ ಬರದಲ್ಲಿ ಉತ್ತರ ಕಾಣದಿದ್ದರೂ ಅಕ್ಕ ಹೇಗೆ ಯೋಚಿಸಬಲ್ಲಳು ಎಂಬುದರ ಬಗ್ಗೆ ತಿಳಿಸಿದ್ದೀರಿ…ಚೆಂದದ ಬರಹ…ಏನೇ ಆಗಲಿ ಅಕ್ಕನಿರಬೇಕಿತ್ತು.
nanagu anna illa. anna madabahudadaddu kelasa inthaddu antha iraleill. jothege yochisalu namage purusothu iralilla. yakendare navella neevu helidahagr beppulastakagale. Neevu baredaddu vodi nanu nanna nanna kalakke hogidde,.
Thanks B.V
chennaagide…madam,.
Thanks for the wonderful way you weaved the story. I just can understand how you feel when you see overindulgent husbands, but I feel,it is the woman who allows them to be that. So when you say you are irritated, on whom are you irritated? the man for throwing his weight around or the woman who allows him?
Kshama sometimes woman is helpless i feel …
wow!!!!