ಈ cultural shock ವಿಷಯ ನೀವೆಲ್ಲ ಕೇಳಿದ್ದೀರಾ? ತೀರಾ ವಿಭಿನ್ನ ಸಂಸ್ಕೃತಿಯ ವಾತಾವರಣಕ್ಕೆ ಕಾಲಿಟ್ಟಾಗ ಆಗುವ ಈ ಶಾಕ್ ಕೆಲವರಾದರೂ ಅನುಭವಿಸಿಯೇ ಇರುತ್ತೀರ. ನನಗೆ ಈ ಕಲ್ಚರಲ್ ಶಾಕ್ ಅನುಭವವಾಗಿದ್ದು ನನ್ನ ಮದುವೆಯಾದಾಗ. ನನ್ನ ಅಪ್ಪನ ಮನೆಯ ವಾತಾವರಣದಲ್ಲಿ ಹುಟ್ಟಿ, ಬೆಳೆದು ಗಂಡನ ಮನೆಯ ವಾತಾವರಣಕ್ಕೆ ಬಿದ್ದಾಗ ಆದ ಈ ಶಾಕ್‌ನ ಕತೆ ನಿಮಗೆ ಹೇಳಬೇಕು ಅನ್ನಿಸುತ್ತಿದೆ …
ನನ್ನ ಅಪ್ಪನ ಮನೆಯಲ್ಲಿ ನಾವು ಸದಾಕಾಲ ತಲೆಯಲ್ಲಿನ biological clock ಜೊತೆಜೊತೆಗೇ ಹುಟ್ಟಿದವರು. ನಮ್ಮ ಯೋಚನೆಯು ಕ್ಷಣ ಕ್ಷಣದ್ದು. ಕರಾರುವಾಕ್ಕು ಪ್ರೋಗ್ರಾಮ್‌ಗಳು … ಟ್ರೈನ್ ರೈಲ್ವೇ ಸ್ಟೇಷನ್‌ಗೆ ಬರುವುದಕ್ಕೆ ಮುಂಚೆಯೇ ರೈಲ್ವೆ ಸ್ಟೇಷನ್‌ನಲ್ಲಿ ಬೀಡುಬಿಡುವ ಸಂಸಾರ … ಮಾತಾಡುವಾಗ ಮೂರು ಮಾತಾಡಿದರೆ ಕುದಿನೀರು, ಎರಡು ಮಾತಾಡಿದರೆ ಐಸು ಅನ್ನುವಂತ ವಾತಾವರಣ. ಗಂಡನ ಮನೆಯವರು ಗಡಿಯಾರವನ್ನೇ ಗೋಣಿಚೀಲದಲ್ಲಿ ಕಟ್ಟಿ ಸಮುದ್ರಕ್ಕೆ ಎಸೆದಿರುವ ವಾತಾವರಣ, ಮಾತು ಏನೂ ಬೇಕಾದರೂ ಆಡಬಹುದು, ಯಾರನ್ನಾದರೂ ರೇಗಿಸಿಕೊಳ್ಳಬಹುದು, ಅವಾಚ್ಯ ಶಬ್ಧಗಳಂತೂ ಬದುಕಿನಲ್ಲಿ ಹಾಸುಹೊಕ್ಕು! ನನಗೆ ಭೂಮಿಯಿಂದ ಬೇರೆ ಯಾವುದೋ ಗ್ರಹಕ್ಕೆ ವಲಸೆ ಹೋದಂತಾ ಅನುಭವ!
ಅಪ್ಪನ ಮನೆಯಲ್ಲಿರುವಾಗ ಒಂದು ಸಿನೆಮಾ ಥಿಯೇಟರ್‌ಗೆ ಹೋಗಬೇಕು ಅಂದಕೂಡಲೇ ನಮ್ಮ backward calculation ಶುರುವಾಗುತ್ತಿತ್ತು. ‘ಈಗ 7.30 ಗೆ ಸಿನೆಮಾ. ಅಂದರೆ ಅಲ್ಲಿಗೆ ಹೋಗಕ್ಕೆ 30 ನಿಮಿಷ. ದಾರೀಲಿ ಹೋಗುವಾಗ ಪೆಟ್ರೋಲ್ ಹಾಕಿಸೋದಿಕ್ಕೆ 10 ನಿಮಿಷ. ಪಫ್ ಮತ್ತು ಕೇಕ್ ತಗೊಳಕ್ಕೆ 15 ನಿಮಿಷ … ಅಂದರೆ 6.30 ಗೆ ಮನೆ ಬಿಡಬೇಕು. ಟ್ರಾಫಿಕ್ ಜಾಮ್‌ನಂತ ಎಮರ್ಜೆನ್ಸಿಗೆ ಇನ್ನೊಂದು 15 ನಿಮಿಷ ಪ್ರಾವಿಷನ್ ಕೊಟ್ಟು 6.15 ಕ್ಕೆ ಮನೆಯಿಂದ ಹೊರಡೋಣ’ ಅನ್ನುವಂತ ಬ್ಲೂ ಪ್ರಿಂಟ್ ಸಿದ್ಧ ಮಾಡುತ್ತಿದ್ದೆವು ನಾವು. ಒಂದು ಸಿನೆಮಾ ಕಾರ್ಯಕ್ರಮಕ್ಕೆ ಇಷ್ಟೆಲ್ಲಾ ಸಿದ್ಧತೆಯಾದರೆ ಇನ್ನು ಪರೀಕ್ಷೆಗೆ, ಸ್ಕೂಲಿಗೆ, ಊರಿಗೆ ಎಂಥ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು ಲೆಕ್ಕ ಹಾಕಿ! ಪರೀಕ್ಷೆಗೆ ಹೋಗುವಾಗ ಆಟೋ ಕೆಟ್ಟು ಹೋದರೆ ಅಂತಲೂ ಲೆಕ್ಕ ಹಾಕಿ ಅದಕ್ಕೂ ಕೆಲವು ನಿಮಿಷಗಳನ್ನು ರಿಸರ್ವ್ ಮಾಡಿಡುವ ಭೂಪರು ನಾವು. ಸ್ಕೂಲಿಗೆ ಹೋಗಲು ಹಿಂದಿನ ರಾತ್ರಿಯೇ ಯೂನಿಫಾರ್ಮ್-ಶೂ ಎಲ್ಲ ಸಿದ್ಧ ಮಾಡಿಟ್ಟು ಮಲಗುವಂತ (ಶಾಲೆ ಶುರುವಾಗುತ್ತಿದ್ದುದು 12 ಘಂಟೆಗೆ!) ಕರ್ಮಠರು ನಾವು. ಬಸ್ ನಿಲ್ದಾಣಕ್ಕೆ ಬರುವ ಮುಕ್ಕಾಲು ಘಂಟೆ ಮುಂಚೆಯೇ ಅಲ್ಲಿರುತ್ತಿದ್ದಂತ ಸರ್ ಎಂ. ವಿಶ್ವೇಶ್ವರಯ್ಯನವರ ಲೆಕ್ಕದವರು ನಾವು. ನಾವು ನಾಳೆ ಬೆಳಿಗ್ಗೆ 7 ಕ್ಕೆ ಮನೆ ಬಿಡುತ್ತೇವೆ ಅಂತ ನಿರ್ಧರಿಸಿದರೆ ಅಲ್ಲಿಗೆ ಮುಗಿಯಿತು … ಬಿಟ್ಟೆವು ಅಂತಲೇ ಲೆಕ್ಕ.
ಇಂಥ ವಾತಾವರಣದಲ್ಲಿ ಬೆಳೆದ ನಾನು ನನ್ನ ಗಂಡನ ಮನೆಗೆ ಕಾಲಿಟ್ಟಾಗಿನ ಕಥೆ ದೇವರಿಗೇ ಪ್ರೀತಿ. ಅದರ ಮೊದಲ ಅನುಭವ ನಮ್ಮ ಮದುವೆಯ ದಿನವೇ ಆಗಿಹೋಯ್ತು. ಸಂಜೆ 6 ಕ್ಕೆ ವರಪೂಜೆ ಅಂತ ನಿರ್ಧಾರವಾಗಿತ್ತು. ನನ್ನ ದೊಡ್ಡಪ್ಪ, ಅಪ್ಪ ಮಧ್ಯಾಹ್ನ 3 ಕ್ಕೆ ರೆಡಿಯಾಗಿದ್ದೂ ಆಯ್ತು. 4 ಕ್ಕೆ ಛತ್ರದ ಬಾಗಿಲಿಗೆ ಬಂದು ನಿಂತರು. 5ಕ್ಕೆ ಗೇಟಿನ ಹತ್ತಿರ ನಿಂತರು. ಗಂಡಿನ ಮನೆಯವರ ಸುಳಿವಿಲ್ಲ! ಆರು ಕಳೆದು, ಏಳು ಮುಗಿದು, ಎಂಟಕ್ಕೆ ಬಿದ್ದರೂ ಒಬ್ಬರದ್ದೂ ಸುದ್ಧಿಯಿಲ್ಲ. ನನ್ನ ಅಪ್ಪ, ದೊಡ್ಡಪ್ಪ ಈಗ ರೋಡಿಗೇ ಹೋಗಿ ನಿಂತರು. ಆಗೆಲ್ಲ ಮೊಬೈಲ್ ಫೋನ್ ಎಲ್ಲಿತ್ತು? ಹಾಗಾಗಿ ಚಡಪಡಿಕೆಯಲ್ಲಿ ಕಾಯುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿರಲಿಲ್ಲ. ವರಪೂಜೆಗೆ ಬಂದಿದ್ದ ನಮ್ಮ ನೆಂಟರೆಲ್ಲ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಲು ಶುರು ಮಾಡಿದರು. ಖಾಲಿ ಹೊಟ್ಟೆಯಲ್ಲಿ ಹಾಗೆಯೇ ಕಳಿಸುವುದು ಚೆಂದವಲ್ಲ ಅಂತ ಊಟ ಹಾಕಿ ಬೀಳ್ಕೊಟ್ಟಿದ್ದೂ ಆಯ್ತು. ನನ್ನ ದೊಡ್ಡಪ್ಪ ಮತ್ತು ಅಪ್ಪ ಇಬ್ಬರಿಗೂ ಸಧ್ಯ ಹಾರ್ಟ್ ಅಟ್ಯಾಕ್ ಆಗಲಿಲ್ಲ ಅನ್ನುವುದೊಂದೇ ಸಮಾಧಾನ. ಅಗೋ! ಇಳಿದರಪ್ಪಾ ಬೀಗರು ರಾತ್ರಿ 9.30 ಕ್ಕೆ. ಹೊಸ ಬೀಗರಲ್ಲವಾ? ಸಿಟ್ಟು ಮಾಡಲು ಸಾಧ್ಯವೇ? ಮೆಲ್ಲಗೆ ದೇಶಾವರಿ ನಗೆ ನಗುತ್ತಾ ಅಪ್ಪ ‘ಲೇಟ್ ಆಗೋಯ್ತು’ ಅಂದರು. ನನ್ನ ಗಂಡನ ಕಡೆಯವರು ಆರಾಮವಾಗಿ ‘ಶಿವಮೊಗ್ಗದ ಹತ್ತಿರ ಹತ್ತಿರ ಬಂದಾಗ ಉಪ್ಪಿಟ್ಟು, ಕೇಸರಿಬಾತ್ ಊರಲ್ಲೇ ಮರೆತು ಬಂದಿದ್ದೀವಿ ಅಂತ ನೆನಪಾಯಿತು. ಅದಕ್ಕೆ ಮತ್ತೆ ವಾಪಸ್ ಹೋಗಿ ತಂದೆವು. ಹಾಗಾಗಿ ಸ್ವಲ್ಪ ತಡ’ ಅಂದರು! ಸ್ವಲ್ಪ ತಡ !! ಅದೂ ಉಪ್ಪಿಟ್ಟು ತರುವ ಘನಕಾರ್ಯಕ್ಕಾಗಿ !!! ಉಪ್ಪಿಟ್ಟು ತರಲು ಯಾರಾದರೂ 40 ಕಿಲೋಮೀಟರ್ ವಾಪಸ್ ಹೋಗ್ತಾರಾ ಅಂತ ನಾವು ಪ್ರಶ್ನಿಸಿಕೊಳ್ಳುವಷ್ಟರಲ್ಲೇ ‘ಅಯ್ಯೋ ಇದು ಕರೆಕ್ಟ್ ಟೈಮು ಅನ್ನಬೇಕು. ನಮ್ಮಣ್ಣನ ಮದುವೆಗೆ ಹೋಗುವಾಗ ಗಾಡಿ ಕೆಟ್ಟು ಹೋಗಿ, ನಾವು ತಲುಪಿದಾಗ ಮಧ್ಯ ರಾತ್ರಿ 2 ಘಂಟೆ ಆಗಿತ್ತು’ ಅಂದರು! ಎದುರಿಗಿದ್ದ ಬಸ್ಸಿಗೆ ನಮ್ಮ ದೊಡ್ಡಪ್ಪ, ಅಪ್ಪ ಸಾಷ್ಟಾಂಗ ನಮಸ್ಕಾರ ಹೊಡೆದರು ಮನಸ್ಸಿನಲ್ಲೇ ‘ಸಧ್ಯ ನೀನೊಂದು ಕೆಟ್ಟು ಕೂತುಕೊಳ್ಳಲಿಲ್ಲವಲ್ಲ ಪುಣ್ಯಾತ್ಮ’ ಅಂತ.
ಟ್ರೈನ್ ಪ್ಲಾಟ್‌ಫಾರ್ಮ್ ತಲುಪುವುದಕ್ಕೆ ಅರ್ಧ ಘಂಟೆ ಮುಂಚೆ ಸ್ಟೇಷನ್ ಸೇರುತ್ತಿದ್ದ ನನ್ನ ಅಪ್ಪನ ಮನೆಯ ಜಗತ್ತು ಒಂದು ಕಡೆ. ನನ್ನ ಗಂಡನ ಕಥೆ ಕೇಳಿ. ಒಂದು ಸಲ ಮೈಸೂರಿನ ಟ್ರೈನ್
ಹಿಡಿಯಲು ಸ್ಟೇಷನ್‌ಗೆ ಹೋಗುವಷ್ಟರಲ್ಲಿ ಎಷ್ಟು ತಡವಾಗಿತ್ತೆಂದರೆ ಗಾರ್ಡ್ ಹಸಿರು ಬಾವುಟ ಬೀಸಲು ಕೈ ಎತ್ತಿದ್ದಾನೆ … ನಾನು ಡುಮ್ಮಣ್ಣ ಮಗನನ್ನು ಹೊರಲಾರದೇ ಹೊತ್ತುಕೊಂಡು ಮೆಟ್ಟಿಲು ಹತ್ತುತ್ತಿದ್ದೇನೆ. ಅಯ್ಯೋ! ಟ್ರೈನ್ ಇನ್ನೇನು ಹೊರಟೇ ಬಿಡುತ್ತದೆ ಅನ್ನಿಸಿ ಕೈಲಿದ್ದ ಮಗನನ್ನು ಗಂಡನ ಕೈಗೆ ಸಾಗ ಹಾಕಿ ನಾನು ಓಡುತ್ತಾ (ಆಗ ಓಡಲು ಸಾಧ್ಯವಾಗುವಷ್ಟು ಸಣ್ಣಗಿದ್ದೆ!) ಆ ಗಾರ್ಡ್ ಹತ್ತಿರ ಮಿಂಚಿನ ವೇಗದಲ್ಲಿ ಬಂದು ಅವನಿಗೆ ಕೈ ಕೈ ಜೋಡಿಸಿ ‘ಅಣ್ಣಾ ಅಲ್ಲಿ ಅವರಿಬ್ಬರೂ ಬರ್ತಿದಾರೆ. ಪ್ಲೀಸ್ ಬಾವುಟ ಬೀಸಬೇಡಣ್ಣಾ’ ಅಂತ ಬೇಡಿಕೊಂಡಿದ್ದೆ. ಪಾಪ ಅವನೂ ಮಕ್ಕಳೊಂದಿಗ ಅಂತ ಕಾಣುತ್ತೆ …ಕರುಣೆ ತೋರಿ ಬಾವುಟವಿದ್ದ ಕೈಯನ್ನು ಕೆಳಗಿಳಿಸಿ ಬಯ್ಯುವಷ್ಟರಲ್ಲಿ ನನ್ನ ಗಂಡ ಅಲ್ಲಿಗೆ ಧಾರಾಕಾರ ಬೆವರಿನ ಜೊತೆ ಹಾಜರಾಗಿ, ಗಾರ್ಡ್‌ಗೆ ಅಡ್ಡಬಿದ್ದು, ಸಿಕ್ಕ ಕೊನೆಯ ಬೋಗಿಯಲ್ಲಿ ತೂರಿಕೊಂಡು ಮೈಸೂರು ಸೇರಿದ್ದೆವು!
ಇನ್ನು ಅಪ್ಪನ ಮನೆಯಲ್ಲಿ ಒಂದು ಊರಿಗೆ ಹೋಗುತ್ತೇವೆ ಅಂದರೆ ಅವತ್ತು ಹೊರಟೆವು ಅಂತಲೇ ಅರ್ಥ ಮತ್ತು ವಾಪಸ್ ಯಾವತ್ತು ಬರುತ್ತೇವೆ ಅಂದರೆ ಅವತ್ತು ಜಗವೇ ಮುಳುಗಿ ಹೋದರೂ ವಾಪಸ್ ಬಂದೆವು ಅಂತಲೇ ಅರ್ಥ. ನನ್ನ ಗಂಡನ ಮನೆಯಲ್ಲಿ ಎಲ್ಲಿಗೇ ಹೋದರೂ – ಅದರಲ್ಲೂ ಅವನ ತವರೂರಿಗೆ ಹೋದರಂತೂ- one way ticket ಅಷ್ಟೇ ಗ್ಯಾರಂಟಿ. ವಾಪಸ್ ಯಾವತ್ತು ಬರುತ್ತೇವೆ ಅನ್ನುವುದು ದೇವರಿಗೂ ಗೊತ್ತಾಗಲು ಅಸಾಧ್ಯ. ಸ್ವಲ್ಪ ದಿನಕ್ಕೆ ಅದೆಲ್ಲ ಸುಮಾರಾಗಿ ಅಭ್ಯಾಸವಾಗಿದ್ದರೂ ನಾನೊಂದು ಸಲ ಏಮಾರಿಬಿಟ್ಟೆ. ನನ್ನ ಮೈದುನನ ಮದುವೆಯ ಸಂದರ್ಭ. ನನ್ನ ಗಂಡ ಹೇಳಿದ ‘ವರಪೂಜೆ, ಧಾರೆ ಮುಗಿಸಿ ಅವತ್ತು ರಾತ್ರಿ ಊರಿಗೆ ವಾಪಸ್ಸಾಗಲೇ ಬೇಕು. Material despatch ಆಗಲೇಬೇಕು’ ಅಂತ. ನಾನು ಇಷ್ಟೊಂದು ಸೀರಿಯಸ್ಸಾಗಿ ಹೇಳುತ್ತಿದ್ದಾನೆ ಅಂದಮೇಲೆ ಅದು 100% ಗ್ಯಾರಂಟಿ ಪ್ರೋಗ್ರಾಮ್ ಅಂತ ಎಣಿಸಿ ಮದುವೆಗೆ ಒಂದೆರಡು ಸೀರೆ, ಒಂದು ನೈಟಿ, ಎಮರ್ಜೆನ್ಸಿಗೆ ಇರಲಿ ಅಂತ ಒಂದು ಸಲ್ವಾರ್ ಕಮೀಜ಼್ ತೆಗೆದುಕೊಂಡು ಹೊರಟೆ. ಮದುವೆ ಮುಗಿಯಿತು, ಸರ ಭರ ಪ್ಯಾಕಿಂಗ್ ಮುಗಿಸಿದೆ. ನನ್ನ ಗಂಡ ಅವನ ಮನೆಯವರ ಜೊತೆ ಆರಾಮವಾಗಿ ನಗುತ್ತಾ ಕೂತಿದ್ದ. ‘ಹೊರಡೋಣವಾ?’ ಅಂತ ಕೇಳಿದಾಗ ‘ಎಲ್ಲಿಗೆ?!!!!!!!’ ಅನ್ನುವಂತೆ ನನ್ನನ್ನು ನೋಡಿದ. ಸರಿ, ಅವತ್ತು ರಾತ್ರಿ ಅವನ ಊರಾದ ಬೇಗೂರಿಗೆ ಹೋದೆವು. ನೈಟಿ ಹಾಕಿ ಮಲಗಿದೆ. ಮಾರನೆಯ ದಿನವೂ ಹೊರಡುವ ಯಾವ ಸೂಚನೆಯೂ ಇಲ್ಲ! ಸಲ್ವಾರ್ ಹಾಕಿ ರೆಡಿಯಾದೆ. ಆಗಲೂ ಮನೆಯವರ ಜೊತೆ ಪಟ್ಟಾಂಗದಲ್ಲಿದ್ದ ಆಸಾಮಿ. ಅವತ್ತು ರಾತ್ರಿ ನೈಟಿ ಒಗೆದು ಹಾಕಿ ಮಾರನೆಯ ದಿನ ಬೆಳಿಗ್ಗೆ ಅದನ್ನು ಹಾಕಿಕೊಂಡು ಸಲ್ವಾರ್ ಒಗೆದು ಹಾಕಿದೆ. ಮಾರನೆಯ ದಿನ ಮತ್ತೆ ಸಲ್ವಾರ್ ಧರಿಸಿ ನೈಟಿ ಒಗೆದು ಹಾಕಿದೆ … ಅಬ್ಬಾ, ಅಂತ ಸ್ಥಿತಿ ನನಗೆ ಯಾವತ್ತೂ ಬಂದಿರಲೇ ಇಲ್ಲ. ಕಣ್ಣಲ್ಲಿ ನೀರೇ ಬಂದುಬಿಟ್ಟಿತು. ಅತ್ತರೂ ನೋಡಲು ಅವನೆಲ್ಲಿದ್ದ?! ಹಾಗಾಗಿ ಅಳುವುದೂ ವೇಸ್ಟ್ ಅನ್ನಿಸಿ ಮತ್ತೆ ಸಲ್ವಾರ್ ಒಗೆಯಲು ಹೊರಟೆ … ಹೀಗೇ ಆ ಎರಡು ಬಟ್ಟೆಯಲ್ಲಿ ನಾವು ಏಳು ದಿನ ಅಲ್ಲಿದ್ದೆವು!! ಅದೇ ಕಡೆ ನೋಡಿ, ಈಗ ಊರಿಗೆ ಹೋದರೆ ಎರಡು ದಿನ ಅಂತ ಅವನು ಹೇಳಿದ್ದರೆ ನಾನು ಮಿನಿಮಮ್ 10 ಜೊತೆ ಬಟ್ಟೆ ತೆಗೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ. ಯಾರಾದರೂ ಯಾವತ್ತು ವಾಪಸ್ ಅಂತ ಕೇಳಿದರೆ ‘ಗೊತ್ತಿಲ್ಲ’ ಅನ್ನುವ ಉತ್ತರ ಕೊಡುವ ಅಭ್ಯಾಸವೂ ಆಗಿದೆ !
ಇನ್ನು ಭಾಷೆಯ ಮತ್ತು ಪದಗಳ ಬಳಕೆಯ ಕತೆ ಹೇಳಲು ಹೊರಟರಂತೂ ಕಾದಂಬರಿಯೇ ಆಗುತ್ತದೆ…
ನನ್ನ ಅಪ್ಪನ ಮನೆಯಲ್ಲಿ ಅತೀ ಶಿಷ್ಟಾಚಾರದ ಭಾಷೆ. ಯಾರಾದರೂ ಅಪ್ಪಿ ತಪ್ಪಿ ‘ಕತ್ತೆ’ ಅಂತ ಬಯ್ದುಬಿಟ್ಟರೆ ಮುಂದಿನ ಮೂರು ಜನ್ಮಕ್ಕೂ ನಾವು ಹಾಗಂದವರನ್ನು ಕ್ಷಮಿಸುವುದಿಲ್ಲ. ನನ್ನ ಕಸಿನ್ ಒಬ್ಬಳು ಮನೆ ಮೂರನೆಯ ಮಹಡಿಯಲ್ಲಿ ಅಂದಾಗ ನನ್ನ ಅಂಕಲ್ ಒಬ್ಬರು ‘ಹಾಗಾದರೂ ಸಣ್ಣ ಆಗ್ತೀಯೇನೋ ನೋಡೋಣ’ ಅಂದಿದ್ದನ್ನು ನನ್ನ ಕಸಿನ್ ಇವತ್ತಿಗೂ ಕ್ಷಮಿಸಿಲ್ಲ. ತುಂಬ ಮಾತಾಡುವ ನನ್ನನ್ನು ನೆಂಟರೊಬ್ಬರು ‘ಥೂ ಅದೆಷ್ಟೊಂದು ಮಾತಾಡ್ತೀಯ’ ಅಂದಿದ್ದಕ್ಕೆ ಅವರ ಜೊತೆ ಮಾತೇ ನಿಲ್ಲಿಸಿ ಬಿಟ್ಟಿದ್ದೆ. ನಮ್ಮಲ್ಲಿ ಹಾಸ್ಯದ, ಛೇಡಿಕೆಯ ಮಾತುಗಳು ನಿಷಿದ್ಧ. ನನ್ನ ಅಣ್ಣ ನಮ್ಮ ಹತ್ತಿರ ಹೆಚ್ಚು ಮಾತಾಡಿ ಮತ್ತೊಬ್ಬಳು ಕಸಿನ್ ಜೊತೆ ಹೆಚ್ಚು ಮಾತಾಡುತ್ತಿರಲಿಲ್ಲ. ಕಸಿನ್ ಅಮ್ಮ ಆ ವಿಷಯವಾಗಿ ವಿಚಾರಣೆಗೆ ನಿಂತರು. ನನ್ನ ಅಣ್ಣ ಆಗ ಊಟ ಮಾಡ್ತಾ ಕೂತಿದ್ದ. ಅವರು ವಿಚಾರಣೆಗೆ ನಿಂತಾಗ ತುಂಬ ವಿನಯದಿಂದಲೇ ‘first let me have my meals peacefully’ ಅಂದಿದ್ದನ್ನು ನಿಮ್ಮ ಮಗಳ ವಿಷಯ ಎತ್ತಿದರೆ ಶಾಂತವಾಗಿ ಊಟ ಕೂಡಾ ಮಾಡೋದಿಕ್ಕೆ ಆಗಲ್ಲ ಅಂತ ಅರ್ಥೈಸಿಕೊಂಡ ಆ ಕಸಿನ್ ಎಷ್ಟೋ ದಶಕಗಳ ಕಾಲ ನನ್ನಣ್ಣನ ಜೊತೆ ಮಾತು ಬಿಟ್ಟಿದ್ದಳು.
ನಮ್ಮದು ಚೌಕಟ್ಟಿನ ಬದುಕು. ಇರುವ ಜಾಗ ಅಷ್ಟೇ ಅಂದಮೇಲೆ ಅದರಲ್ಲಿ ಉಸಿರುಕಟ್ಟಿಯೇ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿತ್ತು. ಇಂಗ್ಲೆಂಡಿನ ರಾಜಮನೆತನದಲ್ಲಿ ರಾಣಿಗೆ ಯಾರೋ ಒಂದು ಜೋಕ್ ಹೇಳಿ, ಅದು ಕಳಪೆ ಜೋಕ್ ಆಗಿದ್ದ ಕಾರಣ ಪಾಪ ಆಕೆಗೆ ನಗು ಬಾರದಿದ್ದರೆ ಆಕೆ ತುಂಬ ಶಿಷ್ಟಾಚಾರದ ದನಿಯಲ್ಲಿ `I’m not amused’ ಅನ್ನುತ್ತಾಳಂತೆ! ಥೂ ಇದ್ಯಾವ ಕಿತ್ತೋಗಿರೋ ಜೋಕು ಮಾರಾಯ ಅನ್ನುವುದಕ್ಕೆ ಈ ರೀತಿಯ ಶಿಷ್ಟಾಚಾರದ ಕಸರತ್ತು. ನಮ್ಮಪ್ಪನ ಮನೆಯೂ ಹೆಚ್ಚು ಕಡಿಮೆ ಇದೇ ಇಂಗ್ಲೆಂಡಿನ ರಾಜಮನೆತನದವರ ರೀತಿಯೇ. ಅಂಥಾ ಮನೆಯಲ್ಲಿ ಬೆಳೆದ ನನಗೆ ಗಂಡನ ಮನೆ ನಿಜಕ್ಕೂ cultural shock ಅನುಭವ ಕೊಟ್ಟುಬಿಟ್ಟಿತು!
ನಮ್ಮ ಮದುವೆಗೆ ಬಂದಿಲ್ಲದ ಅವನ ನೆಂಟರೊಬ್ಬರು ನಮ್ಮ ಮನೆಗೆ ಮದುವೆಯಾದ ಸ್ವಲ್ಪ ದಿನಕ್ಕೆ ಬಂದರು. ‘ಯಾಕ್ಲೇ ಮದ್ವೆಗೆ ಬರ್ಲಿಲ್ಲ ಭೋ …ಕೆ’ ಅಂತ ತುಂಬ ನಯವಾಗಿ ಕೇಳಿದಾಗ ‘ಹೋಗೋಲೋ ಲೋ .. ರ್ ಮನೆಗೆ ಬಂದು ಕರೆದ್ಯಾ ನನ್ನನ್ನ’ ಅಂತ ಅವರ ಉತ್ತರ. ನಾನು ಅಯ್ಯೋ! ಇದೇನಿದು ಜಗಳವೇ ಶುರುವಾಗೋಯ್ತಲ್ಲಾ … ದೇವರೇ ಏನು ಗತಿ ಅಂತ ಟೆನ್ಷನ್ ಮಾಡಿಕೊಂಡು ಈಚೆ ಬಂದರೆ ಇಬ್ಬರೂ ಹೆಗಲ ಮೇಲೆ ಕೈ ಹಾಕಿ ಹಲ್ಲು ಕಿಸಿಯುತ್ತಿದ್ದಾರೆ! ನನ್ನಪ್ಪನ ಮನೆಯಲ್ಲೇನಾದರೂ ಈ ಭಾಷೆ ಬಳಸಿದ್ದರೆ ಇನ್ನು ವಂಶಪಾರಂಪರ್ಯವಾಗಿ ದ್ವೇಷ ಸಾಧಿಸಿಬಿಡುತ್ತಿದ್ದುದು ಗ್ಯಾರಂಟಿ. ‘ಅವ್ನಿದಾನಲ್ಲ ಆ ಸೂ …ಮಗ, ಅವ್ನಿಗೆ ಮೆಟ್ಟು ತಗೊಂಡು ಹೊಡೀಬೇಕ್ಲೇ … ’ ಅನ್ನುವುದೂ ಅವರ ಮನೆಯಲ್ಲಿ ಅತೀ ಸಾಮಾನ್ಯದ ಮಾತು. ‘ಏಯ್ ನಿಮ್ಮಜ್ಜಿ ಅಮ್ಮುಕ್ಕೊಂಡಿರಲೇ ಕಂಡಿದೀನಿ’ ಅನ್ನುವುದೂ ಮಾಮೂಲಿನ ಮಾತು. ‘ಆ ಬೋ .. ಮಗನ್ಗೆ ನಾಕು ಹಾಕ್ರಲೇ’ ಅನ್ನುವುದೂ ಮಾಮೂಲಿನ ಮಾತು!! ಅವನಿಗೆ ಮು … ಎಲ್ಲ ಕೊಬ್ಬು ಆನ್ನುವಂತ ಮಾತುಗಳೂ ಸಾಮಾನ್ಯದ ಮಾತುಗಳಂತೆ ಆಡಲ್ಪಡುತ್ತಿದ್ದವು! ನಾನು ಮೊದಮೊದಲಲ್ಲಿ ಅವರ ಮಾತು ಶುರುವಾದಾಗ ಛೇರಿನ ಹ್ಯಾಂಡ್ ರೆಸ್ಟ್ ಬಿಗಿಯಾಗಿ ಹಿಡಿದು ಕೂತಿರುತ್ತಿದ್ದೆ. ಯಾವಾಗ ಯಾವ ಮಾತು ಯಾವ ಜಗಳಕ್ಕೆ ತಿರುಗಿ ಬಿಡುತ್ತದೋ ಅನ್ನುವ ಆತಂಕ ನನಗೆ. ಆದರೆ ಯಾರೂ ಯಾರ ಮಾತಿಗೂ ಸಿಟ್ಟೇ ಆಗದೆ ನಗುತ್ತಾ ಕೂತಿರುತ್ತಿದ್ದರು. ನಾನು ಬಿಟ್ಟ ಬಾಯಿ ಮುಚ್ಚದೇ ಅವರನ್ನೇ ನೋಡುತ್ತಿದ್ದೆ.
ಇಂತ … ‘ಇಂಥಾ’ ಮಾತುಗಳನ್ನು ಸಾಮಾನ್ಯ ಮಾತುಗಳ ಹಾಗೆ ಮನೆಯಲ್ಲಿ ಬಳಸುತ್ತಾರಂತ ಯಾರಾದರೂ ನನ್ನ ಮದುವೆಗೆ ಮುಂಚೆ ಹೇಳಿದ್ದರೆ ನಮ್ಮಪ್ಪನಾಣೆ ನಾನು ನಂಬುತ್ತಿರಲಿಲ್ಲ. ಅವೆಲ್ಲ
ಕೆಟ್ಟಪದಗಳನ್ನು ಹಾಗೆಲ್ಲ ಯಾರಾದರೂ ಆಡಿಕೊಳ್ಳುತ್ತಾರೆ ಅನ್ನುವುದು ನನ್ನ ವಾತಾವರಣದಲ್ಲಿ ಕಂಡು, ಕೇಳರಿಯದ ವಿಷಯ. ಮಾಮೂಲಿನ ಮಾತೇ ಇಂಥದ್ದಾದರೆ ಇನ್ನು ಜಗಳವಾಡುವಾಗ ಯಾವ ಪದ ಉಳಿದಿರುತ್ತದೆ ಅನ್ನುವ ಆಶ್ಚರ್ಯ ನನಗೆ. ಆದರೆ ಕಾಲ ಕಳೆದ ಹಾಗೆ ಗೊತ್ತಾಯಿತು … ಜಗಳವಾಡುವಾಗ ಅದೇ ಮಾತುಗಳನ್ನು ಸಿಟ್ಟಿನಲ್ಲಿ ಜೋರಾಗಿ, ಕಿರುಚುವ ದನಿಯಲ್ಲಿ ಆಡಿಕೊಳ್ಳುತ್ತಾರೆ ಅಷ್ಟೇ ಎಂದು! ಮದುವೆಯಾಗಿ ಇನ್ನೇನು 25 ವರ್ಷವಾಗುತ್ತದೆ. ಈಗ ಯಾರಾದ್ರೂ ಮೆಟ್ಟಲ್ಲಿ ಹೊಡೀಬೇಕು ಅಂದಾಗ ನಾನು ನಗುತ್ತಾ ಕೂತಿರುತ್ತೇನೆ. ಯಾರೂ ಮೆಟ್ಟು ತೆಗೆಯುವುದೂ ಇಲ್ಲ, ಹೊಡೆಯುವುದೂ ಇಲ್ಲ ಅನ್ನುವುದು ನನಗೀಗ ಗೊತ್ತಿದೆ. ಯಾವುದೋ ಒಂದು ಮನೆಯಲ್ಲಿ ಬೆಳೆದು ಬಂದ ನಾನು ನನ್ನದಲ್ಲದ ಮನೆಗೆ ಸೇರಿ, ಅಲ್ಲಿನ ಭಿನ್ನ ವಾತಾವರಣಕ್ಕೆ ಒಗ್ಗಿಕೊಳ್ಳುವ process ನಲ್ಲಿನ ಇಂತ ಬದಲಾವಣೆಗಳು ನನಗೆ ಆಗ ಕಷ್ಟವೆನ್ನಿಸಿದರೂ ಈಗ ನಗು ತರಿಸುತ್ತದೆ. ನಾನು ಈಗ ಅವರಲ್ಲಿ ಒಬ್ಬಳಾಗಿ ಹೋಗಿದ್ದೇನೆ.
ಈಗ ಸೀದಾ ಪ್ಲಗ್ ಪಾಯಿಂಟಿಗೇ ಕೈ ಇಟ್ಟರೂ ನನಗೆ ಶಾಕ್ ಹೊಡೆಯುವುದಿಲ್ಲ …!
ಅಹವಿ ಹಾಡು : ನನ್ನ ಮದುವೆಯೂ, ನನಗಾದ cultural shockಊ!!

“ಈಗ ಸೀದಾ ಪ್ಲಗ್ ಪಾಯಿಂಟಿಗೇ ಕೈ ಇಟ್ಟರೂ ನನಗೆ ಶಾಕ್ ಹೊಡೆಯುವುದಿಲ್ಲ …!”………ಹೀಗಿದ್ರೇನೇ ಬದ್ಕಕ್ಕೆ ಆಗೋದು………LIFE IS STILL BEAUTIFULLL…..enjoyyyy … 😀
Paristithi eegaloo jasthi vyathyasa vagilla.Adare naavu eega badalaguttiddeve.Vidhiyillavalla.Eevattu eevatte baruttade nalegalla embuvudu santoshada vishaya.Timinggalalli namma alochane hageye ide.Ottinalli baraha chennagide. N.Viswanatha
Last line is simply superb!!!
ಭಾರತೀ, ತುಂಬ ಇಷ್ಟವಾಯ್ತು. ನಿಮ್ಮ ಜೀವನ ದೃಷ್ಟಿಯೇ ಹದಕ್ಕೆ ಬಂದಿದೆ. ನೀವು ಬರೆಯುವ ಎಲ್ಲದರಲ್ಲು ಈ ಹದ ಕಾಣುತ್ತದ್
ಭಾರತಿಯವರೆ ತುಂಬ ಸೊಗಸಾದ ಬರಹ, ನಿಮ್ಮ ಜೀವನ ದೃಷ್ಟಿ ಮಾಗಿದೆ
ಹಾಗಾಗಿ ಸೃಷ್ಟಿ ಕೂಡ ಹದ ಭರಿತ. ನಿಮ್ಮ ಬರಹ ಓದಲು ಖುಷಿಯಾಗುತ್ತೆ
ಹಾಯ್,
ಓದ್ತಾ ಓದ್ತಾ ತುಂಬ ಎಂಜಾಯ್ ಮಾಡಿದೆ…ಒಳ್ಳೇ ಟಾಪಿಕ್…ನಿಮ್ ಕಷ್ಟ ಓದೋರಿಗೆ ತಡೆಯಲಾಗದಷ್ಟು ನಗು:)
ashcharya andre!kela varshagala nantara avara jate navu haage agirtivi.
ಭಾರತಿಯವರೇ ನೀವು ಅವರಲ್ಲಿ ಒಬ್ಬರಾಗಿಬಿಡುವುದು ಸಾಧ್ಯವೇ ಇಲ್ಲ. ಹಾಗೆ ಆಗಿಲ್ಲ ೆಂದು ನಿಮ್ಮ ಬಗ್ಗ ಏನೂ ಗೊತ್ತಿಲ್ಲದ ನಾನು ಸ್ಟಾಂಪ್ ಪೇಪರಿನಲ್ಲಿ ಬೇಕಾದರೂ ಬರೆದು ಕೊಡುತ್ತೇನೆ.ನೀವು ಸೂ ಮಗನೇ,ಸು.. ರ್,ಮೆಟ್ಟಿನಲ್ಲಿ ಇಂತಹವನ್ನು ಬಳಸಿದ್ದೀರಾ ? ಕೇಳಿ ಸಹಿಸಿಕೊಳ್ಳುತ್ತಿರಬಹುದು ಅಷ್ಟೇ ಅಲ್ಲವೇ. ಇನ್ನು ನೀವೊಮ್ಮೆ ನಿಮ್ಮ ಗಂಡನ ಜೊತೆ ಲೆಕ್ಕ ವ್ಯವಹಾರ ನೋಡುವುದಕ್ಕೆ ಕೈ ಹಾಕಿದ ಪ್ರಸಂಗದ ಬ್ಗ್ಎ ಬರೆದಿದ್ದೀರಿ ಆ ಪ್ರಸಂಗವೂ ನೀವು ಅವರಲ್ಲಿ ಒಬ್ಬರಾಗಿಲ್ಲ ೆಂಬುದಕ್ಕೆ ಸಾಕ್ಷ್ಯವಲ್ಲವೇ ? ಈಗಲೂ ನೀವು ಯಾವುದೇ ಕೆಸವನ್ನು ಯೋಜಿತವಾಗಿ ಮಾಡುವುದನ್ನು ಬಿಟ್ಟು ಬಿಟ್ಟಿದ್ದೀರಾ ?
ಬರಹ ಬಹಳ ಚೆಂದಾಗಿದೆ. ಎರಡು ಕಾಲಘಟ್ಟಗಳನ್ನು ಮುಖಾಮುಖಿಯಾಗಿಸುತ್ತದೆ.ಪ್ರತಿ ಹೆಣ್ಣು ವಿವಿಧ ರೂಪದಲ್ಲಿ ಅನುಭವಿಸುವ ಅನಿವಾರ್ಯ ಸಂಭವ ಿದು ಬಹಳ ಹಾಸ್ಯಮಯವಾಗಿ ಬಿಡಿಸಿಟ್ಟಿದ್ದೀರಿ
nijakku chenagide. nagu tarisitu, jotege neevu innu joteyage iddiralla adu mattu khushi tarisitu. nimmatavaru savirvagli.
arthavagalilla.moderatin nanninda apexitave?
ಮಾನ್ಯರೇ ,
ನೀವು ಹೇಳಿರುವ ಸಂಗತಿಗಳು ‘ CULTURAL SHOCK ‘ ಅಲ್ಲ ; CULTURAL REFORMATION . ಏಕೆಂದರೆ ನೀವೇ ಹೇಳಿರುವಂತೆ ” ನಮ್ಮದು ಚೌಕಟ್ಟಿನ ಬದುಕು. ಇರುವ ಜಾಗ ಅಷ್ಟೇ ಅಂದಮೇಲೆ ಅದರಲ್ಲಿ ಉಸಿರುಕಟ್ಟಿಯೇ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿದ್ದ ” ನಿಮಗೆ , ಈಗ ನಿರಾಳವಾಗಿ ಉಸಿರಾಡುತ್ತಾ , ಅನಿಸಿದ್ದೆಲ್ಲವನ್ನು ಹೇಳುವ ಹಾಡುವ ಹುರುಪನ್ನು ಮತ್ತು ಕೆಚ್ಚನ್ನು ನಿಮಗೆ ತಂದು ಕೊಟ್ಟಿರುವುದು ‘ಯಾಕ್ಲೇ ಮದ್ವೆಗೆ ಬರ್ಲಿಲ್ಲ ಭೋ …ಕೆ– ‘ಹೋಗೋಲೋ ಲೋ .. ರ್ ಮನೆಗೆ ಬಂದು ಕರೆದ್ಯಾ ನನ್ನನ್ನ– ‘ಅವ್ನಿದಾನಲ್ಲ ಆ ಸೂ …ಮಗ, ಅವ್ನಿಗೆ ಮೆಟ್ಟು ತಗೊಂಡು ಹೊಡೀಬೇಕ್ಲೇ … . ‘ಏಯ್ ನಿಮ್ಮಜ್ಜಿ ಅಮ್ಮುಕ್ಕೊಂಡಿರಲೇ ಕಂಡಿದೀನಿ’ ” ಎಂಬ ನುಡಿಮುತ್ತುಗಳನ್ನಾಡುವ ಜನಸಾಮಾನ್ಯರ ಒಡನಾಟ . ನಿಮ್ಮನ್ನು ‘ ನುಡಿಶ್ರೇಷ್ಠತೆಯ ಭ್ರಮೆಯಿಂದ ‘ ಹೊರತಂದ ನಿಮ್ಮ ಗಂಡನ ಮನೆಯವರಿಗೆ ಒಂದು ಬಯ್ಗುಳ ಪದವನ್ನು – ಅವರು ಬಳಸುವಂತೆ ಸಹಜವಾಗಿ ಉಚ್ಚರಿಸುವುದರ ಮೂಲಕ ‘ THANKS ‘ ಹೇಳಿ .
ಸಿ ಪಿ ನಾಗರಾಜ , ಬೆಂಗಳೂರು
Nagaraj avare g n nagaraj avaru helidanthe naanu avralli obbalaagiddene andare avra maathugalu nanage shock kododilla ashte. Eega kelavondu padagalannu aadaballenaadroo ellavannoo alla. Eega pada padagalannu hinjikondu oddadade iruvashtara mattige naanu badalagiddene annabahudu…:)
Bharati, nimma haage hosa parisaravanna nidhanavaagi adaru oppikondu tannadagisikondu, tannavarannagisi kolludu bahala kadime. chance sikkidagella, nimma manyavaru haage heege anta mudalisuvare jasti. lekhana ishta aitu.
ಎಂದಿನಂತೆ ಈ ಸಲನೂ ಜಾಸ್ತಿ ಇಷ್ಟ ಆಯ್ತು.. 🙂
Madam,
Oodta iddare nagu bartittu. I could imagine your situation. Yaakandre nanagaadiddu ulta anubhava.
Namma tandeya maneyalli Cinema’kke hogabekendre 2nd show – intervel timege hogiruva sandarbhagaloo untu!
Atte maneyalli TV nodona andre, nanage aa volume’nalli kelisode illa – just mute thara annistiruttade!
ನಕ್ಕೂ ನಕ್ಕೂ…
MEDAM, IDU NIJAVOO… ILLA KATHEYOO… NIMMA BARAVANIGE SHYLI CHENNAGIDE.
IDU NIJAVE HAGIDDARE E PRAPANCHADALLI DIVORSE EMBA SHABDHAVE IRALLA. HENNU-GANDU IBBARALLI OBBARIGE NIMMA GUNA IDDARE SAKU. SAMSARA NEMMADHIYA SAGARA. E SAMSKRUTHI MAKKALIGE MUNDUVARIYUVUDU BEDA.
Nagaraju avare illi barediruva ondondu aksharavoo sathya … idu khanditha katheyalla
ಬಹಳ ಆಸ್ವಾದಿಸುವ ಬರಹ,,,,, ಕೊನೆಯ ಪಂಚ್ ಸೂಪರ್