ನಂಬಿಕೆ ಬದುಕಿನ ತಳಹದಿ ಅನ್ನುತ್ತಾರಲ್ಲ, ಅದು ನಿಜವೇ. ಅದು ಮನುಷ್ಯ, ಮನುಷ್ಯರ ನಡುವಿನ ಸಂಬಂಧಗಳಲ್ಲಿ ತುಂಬ ಮುಖ್ಯ. ಒಂದು ಸಲ ಕಳೆದುಕೊಂಡ ನಂಬಿಕೆ ಮತ್ತೆ ಯಾವತ್ತೂ ಹಿಂತಿರುಗಿ ಬರುವುದಿಲ್ಲ. ನೀವೇನೇ ಪ್ರಯತ್ನ ಮಾಡಿ ನೋಡಿ, ಒಂದು ಸಲ ಜೈಲಿಗೆ ಹೋದ ಖೈದಿಯನ್ನು, ಒಂದು ಸಲ ಸಿಕ್ಕಿ ಬಿದ್ದ ಕಳ್ಳನನ್ನು, ಒಂದು ಸಲ ಮಾಡಿದ ದ್ರೋಹವನ್ನು ಮತ್ತೆ ಯಾರೂ ಕ್ಷಮಿಸಿ ಬದುಕಿನ ತೆಕ್ಕೆಗೆ ಕರೆದುಕೊಳ್ಳುವುದಿಲ್ಲ. ಆ ವ್ಯಕ್ತಿ ‘ಏನೋ ಅನಿವಾರ್ಯತೆಗೆ ಬಿದ್ದು ತಾನು ಆ ರೀತಿ ಮಾಡಿದೆ’ ಅಂತ ಊರೆಲ್ಲ ಕೇಳುವಂತೆ ಬೇಡಿಕೊಂಡರೂ ಜಗತ್ತು ಅಂಥವರನ್ನು ಯಾಕೋ ಕ್ಷಮಿಸುವುದೇ ಇಲ್ಲ. ಇದನ್ನೆಲ್ಲ ಕಂಡು, ಕೇಳಿ, ಅನುಭವಿಸಿಯಾಗಿದೆ. ಆದರೆ ಅದಕ್ಕೆ ತದ್ವಿರುದ್ದವಾದ ಈ ಘಟನೆಯೊಂದು ನನ್ನನ್ನು ಸದಾ ಕಾಡುತ್ತಿರುತ್ತದೆ. ಈ ರೀತಿಯಾದ ಮನಃಸ್ಥಿತಿಗೆ ಅವರನ್ನು ಒಡ್ಡುವ ಅನಿವಾರ್ಯತೆ ಏನು ಅನ್ನುವುದು ನನಗೆ ಇವತ್ತಿಗೂ ಅರ್ಥವಾಗಿಲ್ಲ …
ನನ್ನ ಅಮ್ಮನ ಮನೆಯ ನೆಂಟರಲ್ಲಿ ಸುಮಾರು ಜನ ಆ ಬಾಬಾ, ಈ ಬಾಬಾಗಳ ಭಕ್ತರು. ನನಗೆ ಯಾವ ಬಾಬಾಗಳ ಮೇಲೂ ಯಾಕೋ ಭಕ್ತಿ, ನಂಬಿಕೆ ಯಾವುದೂ ಹುಟ್ಟುವುದೇ ಇಲ್ಲ. ನಾನು ಇಡೀ ಜನ್ಮದಲ್ಲೇ ಯಾವ ಬಾಬಾ ಅಥವಾ ಧರ್ಮಗುರುಗಳ ಕಾಲಿಗೂ ಅಡ್ಡ ಬೀಳುವುದಿಲ್ಲ. ನನಗೆ ಪವಾಡಗಳಲ್ಲಿ ನಂಬಿಕೆಯಿಲ್ಲ. ಹಾಗಾಗಿ ಅದಕ್ಕೆ ಸಂಬಂಧ ಪಟ್ಟಂತೆ ಹುಟ್ಟುವ ನಂಬಿಕೆಗಳ ಮೇಲೂ ನಂಬಿಕೆಯಿಲ್ಲ. ಭವಿಷ್ಯ, ಪುನರ್ಜನ್ಮ, ಹಿಂದಿನ ಜನ್ಮ, ಸಾವಿನ ನಂತರದ ಬದುಕು, ಸತ್ತ ಮೇಲೆ ಆತ್ಮ ಉಳಿಯುವುದು …ಉಹ್ಞೂ, ಯಾವುದರ ಮೇಲೂ ನನಗೆ ನಂಬಿಕೆ ಇಲ್ಲ. ಇಂತಹದ್ದರ ಮೇಲೆಲ್ಲ ತುಂಬ ನಂಬಿಕೆ ಇರುವ ಗೆಳತಿಯೊಬ್ಬಳು ಹೇಗೋ ಮಾಡಿ ನನಗೆ ಇವುಗಳ ಮೇಲೆ ನಂಬಿಕೆ ಹುಟ್ಟಿಸಿಯೇ ಬಿಡುತ್ತೇನೆ ಅಂತ ಶಪಥ ಮಾಡಿದವಳ ಹಾಗೆ ಪ್ರಯತ್ನ ಮಾಡುತ್ತಲೇ ಇರುತ್ತಾಳೆ. ನನಗೆ ಈ ಜನ್ಮ ಒಂದನ್ನು ಬಿಟ್ಟು ಮತ್ಯಾವುದೂ ಸತ್ಯವಲ್ಲ. ನಾನು ಸತ್ತ ಮೇಲೆ ಏನೂ ಆಗುವುದಿಲ್ಲ, ಹಿಡಿ ಬೂದಿಯೊಂದು ಬಿಟ್ಟು ಅನ್ನುವುದು ನನ್ನ ಅಚಲ ನಂಬಿಕೆ. ಇಂತಹ ಮನಃಸ್ಥಿತಿಯ ನನಗೆ ನನ್ನ ನೆಂಟರಲ್ಲಿ ಸುಮಾರು ಜನ ಈ ರೀತಿ ಬಾಬಾಗಳ ಭಕ್ತರಾಗುವುದು ಯಾಕಾಗಿ ಅನ್ನುವ ಪ್ರಶ್ನೆ ಕಾಡುತ್ತಾ ಇರುತ್ತದೆ.
ಕೆಲವರ ನಂಬಿಕೆಯಂತೂ ಯಾವ ಪರಾಕಾಷ್ಠೆ ತಲುಪಿದೆಯೆಂದರೆ ಇಡೀ ಬದುಕೇ ಅವರು ನಂಬಿದ ಬಾಬಾನಿಗೆ ಮುಡುಪಾಗಿಡುವಷ್ಟು! ಮೊದಲೆಲ್ಲ ನನಗೆ ಇಂತ ನಂಬಿಕೆಯ ಹಿಂದಿನ ಆ driving force ಏನಿರಬಹುದು ಅಂತ ಕೇಳಬೇಕು ಅನ್ನುವ ಆಸೆಯಾಗುತ್ತಿತ್ತು, ಅವರೊಡನೆ ವಾದಿಸಬೇಕು ಅನ್ನಿಸುತ್ತಿತ್ತು, ಅವರನ್ನು ಪರಿವರ್ತಿಸಲು ಪ್ರಯತ್ನಿಸಬೇಕು ಅನ್ನಿಸುತ್ತಿತ್ತು. ಅದೆಲ್ಲ ಕಾಲ ಮುಗಿದು, ಒಂದಿಷ್ಟು ಬುದ್ಧಿ ಚಿಗುರಿದ ಮೇಲೆ, ನಾನು ಅವರ ಹಾಗೆ ಆಗಲು ಎಂದೂ ಸಾಧ್ಯವಿಲ್ಲವೆನ್ನುವುದು ಎಷ್ಟು ಸತ್ಯವೋ, ಅವರು ನನ್ನ ಹಾಗೆ ಆಗುವುದೂ ಎಂದೂ ಸಾಧ್ಯವಿಲ್ಲ ಅನ್ನುವುದು ಅರ್ಥವಾಗಿ ಹೋಗಿ, ಈಗ ನಿಮ್ಮಂತೆ ನೀವಿರಿ- ನನ್ನಂತೆ ನಾನು ಇರುತ್ತೇನೆ ಅನ್ನುವ ಸರಳ ಸೂತ್ರಕ್ಕೆ ಒಗ್ಗಿಕೊಂಡಿದ್ದೇನೆ.
ಈ ರೀತಿಯ ಭಕ್ತಿ-ನಂಬಿಕೆ-ಅಪನಂಬಿಕೆಗಳ ಸುತ್ತ ಹೆಣೆದುಕೊಂಡಿದೆ ಈ ಘಟನೆ …
ನಮ್ಮ ನೆಂಟರೆಲ್ಲ ಆ ಸ್ವಾಮಿಯ ಅಪ್ಪಟ ಹದಿನಾರಾಣೆ ಭಕ್ತರು. ನನ್ನ ನೆಂಟರ ಮನೆಗೆ ಹೋದಾಗ ಸಂಜೆಯ ಹೊತ್ತು ಎಲ್ಲರೂ ಆ ದೇವನ ಮತ್ತು ಅದೇ ಹೆಸರಿರುವ ಸ್ವಾಮಿಯನ್ನು indirect ಆಗಿ ಭಜಿಸುತ್ತಿದ್ದರು. ಸಂಜೆಯ ಆ ಭಜನೆ ಒಂಥರಾ ಸಾಮೂಹಿಕ ಸನ್ನಿಯ ಸಮಯವಿದ್ದಂತೆ. ಒಟ್ಟಿಗೇ ಕೂತು ಎಲ್ಲರೂ ಭಜನೆ ಹೇಳುವಾಗ, ಎಷ್ಟೇ ಬೇಡ ಬೇಡ ಅಂತ ಮನಸ್ಸು ನಿರಾಕರಿಸುತ್ತಿದ್ದರೂ ನಾನೂ ಅದರಲ್ಲಿ ಭಾಗಿಯಾಗುತ್ತಿದ್ದೆ! ಕೆಟ್ಟ ದನಿಯಲ್ಲಿ ನಾನು ಕೂಡಾ ಭಜನೆ ಮಾಡುತ್ತಿದ್ದೆ. ಅದು ನಾನು ತುಂಬ ಸಣ್ಣವಳಿರುವಾಗಿನ ಕಾಲ … ಅಂದರೆ ನನಗೆ 8-10 ವಯಸ್ಸಾದಾಗಿನ ಕತೆ. ಆ ನಂತರ ನಾನು ಹೈಸ್ಕೂಲಿಗೆ ಕಾಲಿಡುವಷ್ಟರಲ್ಲಿ ಮನಸ್ಸು ಇದನ್ನೆಲ್ಲ ವಿರೋಧಿಸಲು ಶುರು ಮಾಡಿದ ನಂತರ ಭಜನೆ, ಪೂಜೆ, ಆ ಸ್ವಾಮಿಗಳ ಆಶ್ರಮದ ಭೇಟಿ ಎಲ್ಲವನ್ನೂ ಬಿಟ್ಟೆ. ಆ ಆಶ್ರಮದವರು ಮಾಡಿರುವ ಸ್ಕೂಲು, ಈ ಆಶ್ರಮದವರು ಕಟ್ಟಿಸಿರುವ ಆಸ್ಪತ್ರೆ ಎಲ್ಲ ತುಂಬ ಚೆನ್ನಾಗಿದೆ, ಹೋಗಿ ನೋಡುವುದಕ್ಕೇನು ಕಷ್ಟ ಅಂತ ಅಂದರೂ ನಾನು ಮಾತ್ರ ಯಾವತ್ತೂ ಅಲ್ಲಿಗೆ ಕಾಲಿಡಲಿಲ್ಲ. ಅಲ್ಲಿ ಹೋಗುವುದು, ಯಾರೋ ಭಕ್ತಾದಿಗಳು ಆ ಸ್ವಾಮಿಯ ಗುಣಗಾನ ಮಾಡುವುದು, ನಾನು ವಾದಕ್ಕೆ ಇಳಿಯುವುದು ಯಾವುದೂ ಬೇಡ ಅಂತ ತೀರ್ಮಾನಿಸಿ ನಾನು ಆ ದಿಕ್ಕಿಗೆ ತಲೆಯಿಟ್ಟೂ ಮಲಗಲಿಲ್ಲ. ಅಮ್ಮ ಕೂಡಾ ಇದನ್ನೆಲ್ಲ ನಂಬುವವಳಲ್ಲವಾದರೂ ಆ ಸ್ವಾಮಿಯ ಆಸ್ಪತ್ರೆ ನೋಡಿ ಬಂದು ಹಿಗ್ಗಾ ಮುಗ್ಗಾ ಆತನ ಸಮಾಜ ಸೇವೆ ಹೊಗಳಿ, ನಾನು ‘ಹೋಗಮ್ಮಾ, ಏನು ತಮ್ಮ ದುಡ್ಡು ಹಾಕಿ ಕಟ್ಸಿದ್ರಾ ಅದನ್ನ?’ ಅಂತ ವಿತಂಡ ವಾದಕ್ಕಿಳಿದು ಬಯ್ಯಿಸಿಕೊಂಡಿದ್ದೆ. ‘ಬೇರೆಯವರ ದುಡ್ಡಾದ್ರೆ ಇಂಥ ಆಸ್ಪತ್ರೆ ಕಟ್ಟಿಬಿಡಕ್ಕೆ ಆಗತ್ತಾ? ಅದಕ್ಕೆಲ್ಲ ತುಂಬ ಶ್ರದ್ಧೆ ಇರಬೇಕು’ ಅಂತಷ್ಟೇ ಹೇಳಿ ಸುಮ್ಮನಾಗಿದ್ದಳು.
ಅಂಥ ನನ್ನ ಅಮ್ಮ ಒಂದು ದಿನ ಗುಟ್ಟಾಗಿ, ನಮ್ಮ ನೆಂಟರ ಹೆಂಗಸೊಬ್ಬರ ಕಥೆ ಪಿಸಿ ಪಿಸಿ ಅಂತ ಹೇಳಿದಳು. ಆಕೆ ಆ ಸ್ವಾಮಿಯ ಹುಚ್ಚು ಭಕ್ತೆ. ಯಾವತ್ತೋ ಒಂದು ದಿನ ಆಕೆಗೆ ಏನೋ ಕೆಟ್ಟ ಕನಸು ಬಿತ್ತಂತೆ. ಸರಿ ಮಾರನೆಯ ದಿನ ಆ ಸ್ವಾಮಿಯಲ್ಲಿಗೆ ದೌಡಾಯಿಸಿದ್ದಾರೆ ಗಂಡ-ಹೆಂಡತಿ. ಆ ಸ್ವಾಮಿ ಹೇಳಿದರಂತೆ ‘ನಿಮ್ಮ ಮನೆಯಲ್ಲಿ ಎಂಥದ್ದೋ ದೋಷವಿದೆ. ಕೂಡಲೇ ಮನೆ ಖಾಲಿ ಮಾಡಬೇಕು’ ಅಂತ. ಇವರಿಬ್ಬರೂ ಕಂಗಾಲು. ರಾತ್ರೋ ರಾತ್ರಿ ಮನೆ ಖಾಲಿ ಮಾಡಿ ಇನ್ಯಾವ ಮನೆಗೆ ಹೋಗಲು ಸಾಧ್ಯ? ಇಬ್ಬರೂ ದಿಕ್ಕೇ ತೋಚದ ಸ್ಥಿತಿಯಲ್ಲಿರುವಾಗ ಸ್ವಾಮಿಯೇ ಹೇಳಿದರಂತೆ ‘ಮನೆ ಖಾಲಿ ಮಾಡಿ ನಮ್ಮ ಆಶ್ರಮಕ್ಕೇ ಬಂದು, ಇಲ್ಲೇ ಇದ್ದು ಬಿಡಿ’ ಅಂತ. ಸ್ವಾಮಿಗಳ ಉದಾರ ಹೃದಯವನ್ನು ಕೊಂಡಾಡುತ್ತ, ಅವರು ಸಂಸಾರ ಸಮೇತ ಆಶ್ರಮಕ್ಕೆ ಶಿಫ್ಟ್ ಆದರು. ಅಲ್ಲೇ ಒಂದು ರೂಮ್ ಕೊಟ್ಟರಂತೆ. ಆಶ್ರಮದ ಕೆಲಸ-ಕಾರ್ಯ ಮಾಡುತ್ತ (ಅದನ್ನು ಸೇವೆ ಅನ್ನುತ್ತಾರೆ ನಂಬಿಕೆ ಇರುವವರು!) ಅಲ್ಲೇ ಉಳಿದುಕೊಂಡರು. ಅದೆಷ್ಟೋ ತಿಂಗಳ ಕಾಲ ಅಲ್ಲೇ ಠಿಕಾಣಿ ಹಾಕಿದ್ದರು. ಸಿಕ್ಕಾಗಲೆಲ್ಲ ಸ್ವಾಮಿಗಳ ಮಹಿಮೆ ಕೊಂಡಾಡಿದ್ದೂ ಕೊಂಡಾಡಿದ್ದೇ. ಅಲ್ಲಿನ ಪೂಜೆ-ಭಜನೆ-ಅನ್ನದಾನದ ಬಗ್ಗೆ ಕೊರೆದಿದ್ದೂ ಕೊರೆದಿದ್ದೇ. ನಂಬಿಕೆಯಿಲ್ಲದ ನನ್ನಂತವರು ಮೂಗು ಮುರಿದಿದ್ದಾಯ್ತು, ನಂಬಿಕೆ ಇರುವವರು ಅವರ ಅದೃಷ್ಟವನ್ನು ಹಾಡಿ ಹೊಗಳಿದ್ದೂ ಆಯ್ತು.
ಹೀಗಿರುವಾಗ ಒಂದು ದಿನ ಅವರು ಆಶ್ರಮ ಖಾಲಿ ಮಾಡಿ ಮತ್ತೆ ಮನೆ ಮಾಡಿ, ಅದರಲ್ಲಿದ್ದಾರೆ ಅಂತ ಸುದ್ದಿ ಕಿವಿಗೆ ಬಿತ್ತು. ಕಾರಣ ಯಾರಿಗೂ ಗೊತ್ತಿಲ್ಲ. ಎಲ್ಲರೂ ಅವರವರಿಗೆ ಬೇಕಾದ ಊಹೆ ಮಾಡಿ ಸುಮ್ಮನಾದರು. ಒಂದು ದಿನ ಆಕೆ ಸಿಕ್ಕಾಗ ಕಾರಣ ಕೇಳಿದರೆ ಆಕೆ ಬಾಯೇ ಬಿಡಲಿಲ್ಲ ತುಂಬ ಹೊತ್ತು. ಕೊನೆಗೆ ತುಂಬ ಬಲವಂತ ಮಾಡಿದ ಮೇಲೆ ‘ಅಲ್ಲಿ ನೋಡಬಾರದ್ದೆಲ್ಲ ನೋಡಿದೆ…’ ಅಂತಷ್ಟೇ ಅಂದು ಸುಮ್ಮನಾಗಿಬಿಟ್ಟರು. ಆಮೇಲೆ ಅಲ್ಲಿ ಇಲ್ಲಿ ವಿಷಯ ಬೀಳುತ್ತಾ ಹೋದ ಹಾಗೆ ಗೊತ್ತಾಗಿದ್ದೇನೆಂದರೆ ಆಕೆ ಮಧ್ಯರಾತ್ರಿಯಲ್ಲಿ ಯಾಕೋ ಎದ್ದು ಬಂದಾಗ ಆ ಆಶ್ರಮದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನೆಲ್ಲ ಕಣ್ಣಾರೆ ಕಂಡಿದ್ದರಂತೆ ಅನ್ನುವುದು. ಆ ಸ್ವಾಮಿಯ ಭಕ್ತರಾಗಿದ್ದವರು ತುಂಬ ಜನ ಮೊದ ಮೊದಲಿಗೆ ಶಾಕ್‌ಗೆ ಒಳಗಾದರು. ನಂಬದ ನನ್ನಂಥವರು ‘ನನಗೆ ಗೊತ್ತು ಇಂಥವೆಲ್ಲ ನಡೆಯುತ್ತೆ’ ಅಂತ ಬೆನ್ನು ತಟ್ಟಿಕೊಂಡಿದ್ದೂ ಆಯ್ತು. ನಮ್ಮ ನೆಂಟರಲ್ಲಿದ್ದ ಆ ಸ್ವಾಮಿಯ ಉಳಿದ ಭಕ್ತಗಣ ಕರಗಿ ಹೋಗುತ್ತದೆ ಅಂತ ನಾನು ಭ್ರಮಿಸಿದ್ದೇ ಬಂತು … ಉಹ್ಞೂ, ಆ ಭಕ್ತಗಣ intact! ಯಾವ ಭಕ್ತನೂ ಅವರಿಂದ ವಿಮುಖನಾಗಲೇ ಇಲ್ಲ! ನನಗೆ ಸಿಕ್ಕಾಪಟ್ಟೆ ಆಶ್ಚರ್ಯ ‘ಅಲ್ಲಾ, ಗೊತ್ತಿರುವವರೊಬ್ಬರು ಕಣ್ಣಾರೆ ಇಂತದ್ದೆಲ್ಲ ಕಂಡೆ ಅಂದರೂ ಮತ್ತೆ ಜನ ಮೂರ್ಖರಾಗುತ್ತಾರಲ್ಲ … ಇದು ಹೇಗೆ ಸಾಧ್ಯ?!’ ಅಂತ.
ಒಂದಿಷ್ಟು ದಿನ, ತಿಂಗಳು, ವರ್ಷ ಕಳೆಯಿತು. ಆ ಕಥೆ ಎಲ್ಲರಿಗೂ ಮರೆತೂ ಹೋಯ್ತು. ಎಲ್ಲರೂ ಮರೆತಿದ್ದು ಸರಿಯೇ, public memory is short ಅಂದುಕೊಂಡು ಬಿಡಬಹುದು. ಆದರೆ ಮುಂದಾದ ಕಥೆ ಕೇಳಬೇಕು ನೀವು…
ಮತ್ತೊಂದು ದಿನ ಅಮ್ಮ ಆಕೆಯ ಮನೆಗೆ ಹೋದಾಗ ಸಂಭ್ರಮದ ವಾತಾವರಣ ಅವರ ಮನೆಯಲ್ಲೆಲ್ಲ. ಕಾರಣ ವಿಚಾರಿಸಿದರೆ ಸ್ವಾಮೀಜಿ ಅವತ್ತು ಅವರ ಮನೆಗೆ ಬರ್ತಿದಾರೆ ಅಂತ ಗೊತ್ತಾಯಿತು! ಸ್ವಾಮೀಜಿ ಅಂತ ಆತನನ್ನು ಸಂಭೋಧಿಸಿದ್ದೇ ಅಮ್ಮನಿಗೆ ಆಶ್ಚರ್ಯ!! ಇದೇ ಆಕೆ ಒಂದಿಷ್ಟು ವರ್ಷಗಳ ಕೆಳಗೆ ‘ನೋಡಬಾರದ್ದನ್ನೆಲ್ಲ’ ಕಣ್ಣಾರೆ ನೋಡಿ ಎದ್ದು ಬಿದ್ದು ಜಾಗ ಖಾಲಿ ಮಾಡಿ ಓಡಿ ಬಂದಿದ್ದೆಲ್ಲ ಮರೆತೇ ಹೋತವರ ಹಾಗೆ ಪಾದಪೂಜೆಗೆ ಸಿದ್ಧ ಮಾಡುತ್ತಿದ್ದರು. ‘ಸ್ವಾಮೀಜಿಗೆ ಪ್ರಸಾದಕ್ಕೆ ನಾನೇ ರೆಡಿ ಮಾಡ್ತಿದೀನಿ. ನಾನು ಮಾಡೋ ಶಾವಿಗೆ ಪಾಯಸ ಅವರಿಗೆ ತುಂಬ ಇಷ್ಟವಂತೆ. ಅದಕ್ಕೇ ಹೇಳಿದಾರೆ ಪಾಯಸ ಮಾತ್ರ ಯಾರ ಕೈಲೂ ಮಾಡಿಸಬೇಡ, ನೀನೇ ಖುದ್ದು ಮಾಡು ಅಂತ….’ ಪಕ್ಕದಲ್ಲಿ ಅಪ್ಪಟ ತುಪ್ಪದಲ್ಲಿ ಹುರಿದಿಟ್ಟಿದ್ದ ರಾಶಿ ಗೋಡಂಬಿ, ದ್ರಾಕ್ಷಿ, ಪುಡಿ ಮಾಡಿಟ್ಟಿದ್ದ ಏಲಕ್ಕಿ ಪುಡಿ, ಕಾಯಿಸಿಟ್ಟಿದ್ದ ಗಟ್ಟಿ ಹಾಲು …. ಎಲ್ಲವನ್ನೂ ನೋಡುತ್ತಾ ಅಮ್ಮ ಬ್ಲ್ಯಾಂಕ್ ಆಗಿ ನಿಂತಿದ್ದಳಂತೆ.
ಈಗ ಹೇಳಿ … ಒಂದು ಸಲ ಕಳೆದುಕೊಂಡ ನಂಬಿಕೆ ಮತ್ತೆ ಮರಳಿ ಬರುವುದಿಲ್ಲ ಅನ್ನುವ ಸತ್ಯ ಸ್ವಾಮೀಜಿಗಳ ವಿಷಯದಲ್ಲಿ ಉಲ್ಟಾ ಆಗಿದ್ದು ಹೇಗೆ?! ಆ ರೀತಿಯದ್ದನ್ನೆಲ್ಲ ಕಂಡ ಮೇಲೆ ಮತ್ತೆ ಮರೆಯುವುದು ಹೇಗೆ? ಆತನಿಗಾಗಿ ಪ್ರಸಾದ ತಯಾರಿಸುವುದು ಹೇಗೆ? ಪಾದಪೂಜೆ ಮಾಡುವುದು ಹೇಗೆ? ಭಕ್ತಿ ಹುಟ್ಟುವುದು ಹೇಗೆ? ಅವರ ವಿಷಯದಲ್ಲಿ ಮಾತ್ರ ಈ ರೀತಿ ಜಗತ್ತಿನ ಸಾಮಾನ್ಯ ರೀತಿ, ರಿವಾಜು, ಕಟ್ಟಳೆಗಳಿಗೆ ವಿರುದ್ಧವಾಗಿ ನಡೆಯಬಲ್ಲದು ಅಂತಲೇ ಆ ಸ್ವಾಮೀಜಿಯಂತವರು ‘ಪವಾಡ ಪುರುಷ’ ರಾಗುತ್ತಾರೋ ಏನೋ ….!



ನನ್ನ ಅನಿಸಿಕೆಗಳಿಗೆ ಕನ್ನಡಿ ಹಿಡಿದಂತಿದೆ ನಿಮ್ಮ ಲೇಖನ.
ನಾನು ಯಾವುದೇ ಸ್ವಾಮಿಗಳು ಅಥವಾ ಗುರುಗಳನ್ನು ಒಬ್ಬ ಮನುಷ್ಯನ ದೃಷ್ಟಿಯಿಂದ ನೋಡುತ್ತೇನೆಯೇ ಹೊರತು, ಅವರ ವಿಶೇಷ ಅತಿಮಾನವ ಶಕ್ತಿ / ಗುಣಗಳಿಗೆ ಅಲ್ಲ. ಇದು ಇವರ ಈ ಜೀವನ ವೃತ್ತಿ/ಪ್ರವೃತ್ತಿ ಅಂತ consider ಮಾಡ್ತಿನಿ. ಹಾಗಾಗಿ ಕಾಲುಗಳಿಗೆ ಬೀಳೋದನ್ನ ಅವಾಯ್ಡ್ ಮಾಡ್ತೀನಿ. ಕೆಲವರಿಗೆ ಈ ಗುರುಗಳು/ಸ್ವಾಮಿಗಳಿಂದ ತಮ್ಮ ಸಮಸ್ಯೆಗಳಿಗೆ magical solution ಸಿಗತ್ತೆ ಅಂತ ಅನಿಸಿರಬಹುದು. ಒಂದು ರೀತಿಯ godmen delusionಗೆ ಒಳಗಾಗಿರ್ತಾರೆ ಅಂತ ಹೇಳಬಹುದು
Mostly A ashramada vyavasthege nimma kathanaayaki/ka ravaru saha hondikondu hogirabahudu. A vyavastheyannu ivaru oppikondirabahudu.
Dear Bharathi,
Very well written, took just few minutes to complete the read. It was such a free flow.
Liked your never say die attitude and the straight forwardness and the consistency in your thoughts.
As per the pavaDa purusha and the beliefs, I personally feel – those who commit some mistakes or with guilt feel wants to attend renaissance through these, hence they get to this mode.
I respect few Dharma gurus like Dr Shivakumar swamyji of Tumkur who is kayaka yogi but would never like to go do bhajane for these other babas. Well, now a days it surprise me when educated mass, all the intellects go do this.
Amen!