ಅವಳು
‘ಶ್ ! ಸುಮ್ಮನೆ ತೆಪ್ಪಗೆ ಹೋಗಿ ಕೂತ್ಕೋ ಆ ಕಡೆ .. ಸುಮ್ನೆ ತರಲೆ ಮಾಡ್ಬೇಡ’ ಅಮ್ಮ ಗದರಿದಳು. ಮಟ ಮಟ ಮಧ್ಯಾಹ್ನದ ಆ ಬೇಸಿಗೆಯ ಖಾಲಿತನದಲ್ಲಿ ನಮಗೆ ಸುಮ್ಮನೆ ಕೂತುಕೊಳ್ಳಲು ಆಗುತ್ತದಾ? ಅಜ್ಜಿ ಮನೆಗೆ ಬಂದು ಒಂದು ದಿನವಾಯ್ತು. ಇನ್ನೂ ಅವಳ ಮನೆಗೆ ಹೋಗೋದಿಕ್ಕೆ ಆಗಿರಲಿಲ್ಲ. ಏನು ಮಾಡಲಿ ಅಂತ ಮನಸ್ಸಿಗೆ ಚಡಪಡಿಕೆ. ಮೆಲ್ಲನೆ ಆ ಕಡೆ ಜಾರಿಬಿಟ್ಟರೆ ಏನಾಗತ್ತೆ? ಬೇಡ ಅಂದ ನಂತರವೂ ಹೋದರೆ ಗತಿ ಕಾಣಿಸುತ್ತಾರೋ ಏನೋ! ಈ ದೊಡ್ಡವರ ಕಥೆ ಯಾರಿಗೆ ಅರ್ಥವಾಗಬೇಕು? ಇಷ್ಟು ವರ್ಷಗಳಿಂದ ಬೇಸಿಗೆಯಲ್ಲಿ ಹಾಜರಾಗ್ತೀವಲ್ಲಾ .. ಒಂದೇ ಒಂದು ಸಲವಾದ್ರೂ .. ಯಾವತ್ತಾದ್ರೂ ಇವರೆಲ್ಲ ಹೀಗಾಡಿದ್ದಿಲ್ಲ! ರಣ ಶೆಖೆಯಲ್ಲಿ ಕಾಲಿಗೆ ಚಪ್ಪಲಿಯೂ ಇಲ್ಲದೆ ಯಾವಾಗಲೂ ಸುತ್ತಾಡ್ತಿದ್ವಿ ತಾನೇ? ಇವತ್ತು ಬರೀ ಸುಳ್ಳು ಸುಳ್ಳು ಕಾರಣ ಹೇಳ್ತಾರಲ್ಲ ಎಲ್ರೂ ..
‘ಬಿಸಿಲು ಜಾಸ್ತಿ ಇದೆ ಹೋಗ್ಬೇಡ ..!’ ಇದೂ ಒಂದು ಕಾರಣವಾ ಹೋಗ್ಬೇಡ ಅಂತ ಹೇಳಕ್ಕೆ? ಅಲ್ಲಾ .. ಯಾವತ್ತು ಬಿಸಿಲು, ಮಳೆ, ಛಳಿಗೆ ನಾವು ಹೆದರಿದ್ದು? ಇಡೀ ಊರೇ ತಿರುಗುತ್ತಿದ್ದುದು ಇದೇ ಬಿಸಿಲಿನಲ್ಲಿ ತಾನೇ? ನಾವು ಬರುವುದೇ ಬೇಸಿಗೆಗೆ ಅಂತಾದ ಮೇಲೆ ಬೇಸಿಗೆಯಲ್ಲಿ ಬಿಸಿಲಲ್ಲದೆ ಮಂಜಾ ಬೀಳುತ್ತದೆ? ಇನ್ನು ಅಜ್ಜಿಯಂತೂ ಸರಿಯೇ ಸರಿ. ಅಮ್ಮನಿಗಿಂತ ಕೆಟ್ಟ ಕಾರಣ ಕೊಡ್ತಾರೆ. ಬೆಳಿಗ್ಗೆ ಕೇಳಿದಾಗ ಊಟ ಮಾಡಿ ಹೋಗುವೆಯಂತೆ ಅಂದರು. ಆಮೇಲೆ ಮಧ್ಯಾಹ್ನ ಕಾಫಿ ಆದ್ಮೇಲೆ ಅಂದ್ರು .. ಈಗ ತಿಂಡಿ ಮುಗಿಸಿ ಹೋಗು ಅಂತಿದಾರೆ. ತಿಂಡಿ ಮುಗಿಸೋ ಅಷ್ಟರಲ್ಲಿ ರಾತ್ರಿ ಊಟದ ಟೈಮ್ ಆಗಿಹೋಗತ್ತೆ! ಊರಿಗೆ ಬಂದು ಮೂರು ದಿನವಾಯ್ತು. ಆಗಿನಿಂದ ಇದೇ ಕಥೆ. ಅವಳ ಮನೆಗೆ ಹೊರಟ ಕೂಡಲೇ ಎಂಥದ್ದೋ ಒಂದು ಕಥೆ ಹೇಳಿ ನಮ್ಮನ್ನ ತೆಪ್ಪಗಾಗಿಸೋ ಈ ರೀತಿ ನಮಗೆ ನಿಜಕ್ಕೂ ಸಿಟ್ಟು ತರಿಸಿತ್ತು …
ಇವೆಲ್ಲ ನೆನ್ನೆ-ಮೊನ್ನೆ ನಡೆದ ಹಾಗೆ ಅನ್ನಿಸುತ್ತಿದೆ…
ಪ್ರತಿ ರಜಕ್ಕೆ ಬಂದಾಗ್ಲೂ ಅವಳ ಮನೆಯ ಹಿತ್ತಲಲ್ಲಿ ಬೀಡು ಬಿಡೋದು ಹೊಸ ಕತೆ ಆಗಿರುತ್ತಿರಲಿಲ್ಲ! ಅವಳ ಮನೆಯಲ್ಲಿ ದೊಡ್ಡ ಹಿತ್ತಲು .. ಅಲ್ಲಿ ರೇಷ್ಮೆ ಹುಳು ಬೇರೆ ಸಾಕಿದ್ರು. ಅದಕ್ಕೆ ರೆಡಿ ಮೇಡ್ ಫುಡ್ ಕೂಡಾ ಮನೆಯ ಹಿತ್ತಲಲ್ಲೇ .. ಎಷ್ಟೊಂದು ಹಿಪ್ಪುನೇರಳೆ ಮರಗಳಿದ್ದವು. ನಾವೋ ಆಗ ಜಗತ್ತಿನ ಸಮಸ್ತ ಗಿಡ ಮರಗಳು, ಹಣ್ಣು ಕಾಯಿಗಳು ಸೃಷ್ಟಿಯಾಗಿರೋದೇ ನಮಗೋಸ್ಕರ ಅಂದ್ಕೊಂಡುಬಿಟ್ಟಿದ್ದೆವು. ಅಜ್ಜಿ ಹೊಟ್ಟೆಗೆ ಹೇಗೆ ತುಂಬಿಸ್ತಿದ್ದರೆಂದರೆ ಅಷ್ಟು ತಿಂದ ಮೇಲೆ ಸತ್ಯಕ್ಕೂ ಅಮೃತ ಕೊಟ್ರೂ ಬೇಡ ಅಂತ ಹೇಳಬೇಕಾಗಿತ್ತು ನಾವು! ಆದರೆ ಅದೆಂಥ ಹೊಟ್ಟೆ ನಮ್ಮದು .. ಹಿಪ್ಪುನೇರಳೆ ಹಣ್ಣು ಕೂಡಾ ಬೇಡ ಅಂತಿರಲಿಲ್ಲ. ಆಮೇಲಿನ ಸರದಿ ಅಲ್ಲಿದ್ದ ಅದೆಂಥದ್ದೋ ಹುಳಿ ಹುಳಿ ಹಣ್ಣು, ದಾಳಿಂಬೆ, ಹೀಚು ಮಾವಿನಕಾಯಿಗಳದ್ದು. ನಮ್ಮ ಹೊಟ್ಟೆಗೆ ಅಜ್ಜಿ ಹಾಕಿದ ಮರಳು, ಇಟ್ಟಿಗೆ, ಜಲ್ಲಿಗಳ ಮಧ್ಯೆ ಸಿಮೆಂಟ್ನ ಹಾಗೆ ಈ ಪಿಟ್ಟೆ ಗಾತ್ರದ ಹಣ್ಣುಗಳು ಹೋಗಿ ಕೂತ ಮೇಲೆಯೆ ಸಮಾಧಾನ. ಎಲ್ಲ ಗುಡಿಸಿ ಗುಂಡಾಂತರ ಮಾಡಿ ಆಮೇಲೆ ಅವಳ ಮಗ್ಗಲು ಸೇರಿದರೆ ಮುಗೀತು .. ಬರೀ ಆಟಗಳದ್ದೇ ಸಂಭ್ರಮ. ಚೌಕ ಬಾರ, ಅಳಗುಳಿ ಮಣೆ, ಕವಡೆ, ಪಗಡೆ .. ಇಡೀ ದಿನ ಆಟದ ಗುಂಗು.
ಮತ್ತೆ ಅವಳು ಹಾಡು ಹೇಳಿದ್ರೆ ಮಾತ್ರ ತುಂಬ ಚೆನ್ನಾಗಿರುತ್ತಿತ್ತು. ಅವಳ ಹಾಡು ಕೇಳೋದಿಕ್ಕೆ ನಾನು ಬಾಯಿ ಬಿಟ್ಕೊಂಡು ಕೂತಿರ್ತಿದ್ದೆ. ಸದಾ ಗುನುಗುತ್ತ ಇರ್ತಿದ್ಲು. ಮತ್ತೆ ನೋಡಲಿಕ್ಕೂ ಎಷ್ಟು ಚಂದವಿದ್ದಳು. ನಗುವಂತೂ ನೋಡಬೇಕು .. ಅಜ್ಜನ ಮನೆಯ ಅಂಗಳದಲ್ಲಿತ್ತಲ್ಲಾ ಆಕಾಶಮಲ್ಲಿಗೆ ಅದು ಅರಳಿದ ಹಾಗೆ ಅನ್ನಿಸುತ್ತಿತ್ತು. ಎಷ್ಟು ಉದ್ದ ಜಡೆಯಿತ್ತು ಅವಳಿಗೆ. ನಡೆಯುವಾಗ ಆ ಕಡೆ, ಈ ಕಡೆ ಗಡಿಯಾರದ ಪೆಂಡ್ಯುಲಮ್ನ ಹಾಗೆ ತೂಗ್ತಾ ಇರ್ತಿತ್ತು. ನಾವು ಮಂಗನ ಹಾಗೆ ಅವಳ ಹಿಂದೆ ಅದನ್ನ ಹಿಡಿದು ಓಡಾಡ್ತಿದ್ದೆವು. ಅದನ್ನು ಕಂಡು ಅವಳಿಗೆ ನಗು. ಒಂದೇ ಒಂದು ಸಲಕ್ಕೂ ನಮ್ಮನ್ನ ಬಯ್ತಿರಲಿಲ್ಲ. ಇಲ್ಲಿ ಅಮ್ಮ ಅವಳ ಅಕ್ಕ ತಂಗಿಯರು, ಅತ್ತಿಗೆ ನಾದಿನಿಯರ ಜೊತೆ ಸೇರಿ ಗಮ್ಮತ್ತು ಮಾಡುವಾಗ ನಾವು ಅವಳ ಮನೆಯ ಹಿತ್ತಲ ನಿವಾಸಿಗಳಾಗುತ್ತಿದ್ದೆವು. ಅದಕ್ಕೆ ಯಾರ ತಕರಾರೂ ಇರುತ್ತಿರಲಿಲ್ಲ ….
ಆದರೆ ಆ ವರ್ಷ ಮಾತ್ರ ಅಷ್ಟೊಂದು ವಿರೋಧವಿತ್ತು ! ಅಲ್ಲಿಗೆ ಹೋಗುತ್ತೀವಂತ ಹೇಳಿದ ಕೂಡಲೇ ಮನೆಯವರೆಲ್ಲ ಬಯ್ಯುವುದು ಮಾಮೂಲಾಗಿ ಹೋಗಿತ್ತು. ಯಾಕೆ ಹಾಗೆ ಅಂತ ನಾವು ಕೇಳಿಕೊಂಡರೂ ಉತ್ತರ ಕೊಡೋರು ಯಾರಿದ್ದರು ಅಲ್ಲಿ? ಸುಮ್ಮನೆ ಗುಸ ಗುಸ ಪಿಸು ಪಿಸು ಅಷ್ಟೇ. ಅಷ್ಟು ವರ್ಷದಿಂದ ಮನೆಯವರ ಹಾಗೆ ಇದ್ದ ಅವಳ ಮನೆಯವರು ಅಲ್ಲಿ ಇಲ್ಲವೇ ಇಲ್ಲವೇನೋ ಅನ್ನೋ ಹಾಗೆ ಇಡೀ ಊರಿಗೆ ಊರೇ ನಿರ್ಲಕ್ಷಿಸಿ ಬಿಟ್ಟಿತ್ತು. ಡೈನೋಸಾರ್ನಂಥ ಬಲಿಷ್ಟ ಜೀವಿಯ ಸಂತತಿ ಕೂಡಾ ಕಾಲದ ಮಡಿಕೆಗಳಲ್ಲಿ ಹೇಳ ಹೆಸರಿಲ್ಲದಂತೆ ಹೂತು ಹೋಗುವಾಗ ಇನ್ನು ಅವಳ ಕಥೆ ಹೀಗಾಗಿದ್ದರಲ್ಲಿ ಆಶ್ಚರ್ಯ ಇರಲಿಲ್ಲ. ಎಷ್ಟೊಂದು ಸಣ್ಣ ಊರು ಅದು. ಮನೆ ಮನೆಗಳ ಮಧ್ಯೆ ಗೋಡೆಯೇ ಇಲ್ಲವೇನೋ ಅನ್ನುವಷ್ಟು ಪಾರದರ್ಶಕ ಬದುಕು! ಇಲ್ಲಿ ಈಗ ಅದೆಷ್ಟೋ ವರ್ಷಗಳ ನಂತರ ಕೂತು ನಾನು ಯೋಚಿಸುತ್ತೇನೆ ‘ಅವಳಿಗೆ ಆಗ ಬದುಕು ಹೇಗಿದ್ದಿರಬೇಕು? ಅಲ್ಲಿಯವರೆಗೆ ಸುತ್ತಲಿದ್ದವರೆಲ್ಲ ನಮ್ಮವರು ಅಂದುಕೊಂಡವರು .. ಒಂದು ಸಣ್ಣ ತಪ್ಪು ನಡೆ ಇಟ್ಟ ಕೂಡಲೇ ಯಾರೂ ಇಲ್ಲ ಅನ್ನುವಂಥ ದೈನ್ಯ ಸ್ಥಿತಿಗೆ ತಲುಪಿಬಿಟ್ಟರೆ ಬದುಕು ಅವಳಿಗೆ ಹೇಗೆ ಕಂಡಿದ್ದಿರಬೇಕು ಪಾಪ ..’
ಆ ಸಲದ ನಮ್ಮ ಅಜ್ಜಿ ಮನೆಯ ವಾಸದಲ್ಲಿ ಅಮ್ಮ – ಅಜ್ಜಿ – ಸಕಲರೂ ಏನೆಲ್ಲ ಅಡ್ಡಿ ಮಾಡಿದ್ರೂ ನಾವು ಮಾತ್ರ ಹೇಗೋ ಮಾಡಿ ಮರುದಿನ ಮಧ್ಯಾಹ್ನ ಅವಳ ಹತ್ತಿರ ಓಡಿದ್ದೆವು. ಅವಳ ಮನೆ ರಜಾ ಬಂತೆಂದರೆ ಸಾಕು ನಮಗಾಗಿಯೇ ತೆಗೆದಿಟ್ಟಿದೆಯೇನೋ ಅನ್ನೋ ಹಾಗೆ ಬಾಗಿಲು ಹಾರು ಹೊಡೆದಿರುತ್ತಿತ್ತು. ನಾವು ಸಾವಿರ ಸಲ ನಮ್ಮ ಮನೆಗೂ, ಅವಳ ಮನೆಗೂ ಚಿಟ್ಟೆ ಹಾಗೆ ಹಾರಾಡುತ್ತಿದ್ದೆವು. ಅಜ್ಜಿ ಮನೆ ರಸ್ತೆಯ ಈ ಮೂಲೆ .. ಅವಳ ಮನೆ ಆ ರಸ್ತೆಯ ಎದುರು ಸಾಲಿನಲ್ಲಿ ಆ ಕೊನೆಯ ಮನೆ. ಎರಡು ನಿಮಿಷದ ದಾರಿಗೆ ಇಷ್ಟೆಲ್ಲ ಸಾಹಸ ಮಾಡಿ ಅಂತೂ ಇಂತೂ ಅವಳ ಮನೆ ಮುಟ್ಟಿದೆವು. ಅವಳ ಮನೆಯ ಬಾಗಿಲು ಮುಚ್ಚಿತ್ತು. ಡಬ ಡಬ ಬಡಿದ ಸದ್ದಿಗೆ ಬಾಗಿಲು ತೆರೆದ ಅವಳ ಅಮ್ಮ ಬನ್ನಿ ಅಂತ ಕರೆಯಲೂ ಇಲ್ಲ. ಅಬ್ಬಾ ಅದೇನು ಮೌನವಿತ್ತು ಅಲ್ಲಿ! ನಾವು ಕಾಲಿಟ್ಟ ಕೂಡಲೇ ಓಡಿ ಬರ್ತಿದ್ದ ಅವಳ ಸುಳಿವು ಇರಲಿಲ್ಲ. ಅವರ ಮನೆಯಲ್ಲಿ ಇರ್ತಿದ್ದಿದ್ದೇ ಮೂರು ಜನ. ನಮ್ಮಜ್ಜಿ ಮನೆಯ ಹಾಗೆ ಎರಡು ಕ್ರಿಕೆಟ್ ಟೀಮ್ನಷ್ಟು ಮಕ್ಕಳು ಇರಲಿಲ್ಲ. ಒಬ್ಬಳೇ ಮಗಳು. ಹಾಗಾಗಿಯೇ ರಜೆಯಲ್ಲಿ ಬರೋ ನಮಗಾಗಿ ಅಷ್ಟು ಆತುರದಿಂದ ಕಾಯ್ತಿದ್ದಳೋ ಏನೋ. ‘ಅವಳು ಇಲ್ವಾ?’ ನಮ್ಮ ದನಿ ನಮಗೇ ಕೇಳಿಸದಷ್ಟು ಮೆತ್ತಗಿತ್ತು. ಉಹೂ .. ಎಲ್ಲೋ, ಏನೋ ತಪ್ಪಾಗಿದೆ ಅಂತ ಮೊದಲ ಸಲ ಅನ್ನಿಸಿದ್ದೇ ಆಗ, ಅವಳಮ್ಮ ಉತ್ತರವೇ ಕೊಡದೆ ಸುಮ್ಮನೆ ರೂಮಿನ ಕಡೆ ಕೈ ತೋರಿಸಿ ಸರಿದುಹೋದಾಗ …
ರೂಮಿನಲ್ಲಿ ದೀಪವಿರಲಿಲ್ಲ. ಇದ್ದ ಒಂದೇ ಸಣ್ಣ ಕಿಟಕಿ ಮುಚ್ಚಿತ್ತು. ಅವಳು ಮಲಗಿದ್ದಳು. ದೀಪ ಹಚ್ಚಲು ಹೋದಾಗ ‘ಬೇಡ’ ಅಂದಿದ್ದಳು. ನಮಗೆ ಭ್ರಮನಿರಸನವಾಗಿತ್ತು. ನಮಗಿಂತ ಸುಮಾರು ೫-೬ ವರ್ಷ ದೊಡ್ಡವಳಿರಬೇಕು. ನಾವು ಹುಟ್ಟಿದಾಗಿನಿಂದ ಅಜ್ಜಿಯ ಮನೆಗೆ ಬರುತ್ತಿದ್ದೆವಲ್ಲ .. ಆ ಹನ್ನೊಂದು ವರ್ಷಗಳಲ್ಲಿ ಬುದ್ಧಿ ತಿಳಿದಾಗಿನಿಂದ ಅವಳು ಯಾವತ್ತೂ ಸಪ್ಪಗಿದ್ದುದು ನಮಗಂತೂ ನೆನಪಿಲ್ಲ. ಹಾಗಿದ್ದವಳು ಈ ಮಟ ಮಟ ಮಧ್ಯಾಹ್ನದಲ್ಲಿ ಮಲಗಿದ್ದಳು ಮುಖ ಕೂಡಾ ಕಾಣದ ಕತ್ತಲ ರೂಮಿನಲ್ಲಿ. ‘ಏನಾಯ್ತೇ? ಪರೀಕ್ಷೇಲಿ ಏನಾರ ಫೇಲ್ ಆದ್ಯೆನೇ?’ ಅಂದಿದ್ದೆ ಮುಗ್ಧಳಾಗಿ. ಆಗೆಲ್ಲ ನಮಗೆ ಜೀವನದಲ್ಲಿ ಅತಿ ದೊಡ್ಡ ಎಡವಟ್ಟು ಅಂದರೆ ಪರೀಕ್ಷೆಯಲ್ಲಿ ಫೇಲ್ ಆಗುವುದು ಮಾತ್ರ. ಅವಳು ಉತ್ತರಿಸಲೇ ಇಲ್ಲ. ಅಷ್ಟರಲ್ಲಿ ಅವಳಮ್ಮ ಅಲ್ಲಿಗೆ ಬಂದವರೇ ‘ನಿಮ್ಮಮ್ಮ ಇಲ್ಲಿಗೆ ಹೋಗ್ಬೇಡ ಅಂತ ಬಯ್ಲಿಲ್ವೇನ್ರೇ?’ ಅಂದಿದ್ದರು. ಕಠೋರತೆಯಿತ್ತು ಅವರ ದನಿಯಲ್ಲಿ. ನಾನು ದೊಡ್ಡ ಪೆದ್ದಲಾಷ್ಟಕದ ಹಾಗೆ ‘ಹೂ ಬಯ್ದರು. ನಾವು ಕಣ್ಣು ತಪ್ಸಿ ಓಡಿ ಬಂದೆವು’ ಅಂದಿದ್ದೆ! ಅವರು ಮುಖ ಕೆಟ್ಟದಾಗಿ ಮಾಡಿ ಅಲ್ಲಿಂದ ಆಚೆ ಹೊರಟುಹೋಗಿದ್ದರು. ನಮಗೆ ಗಾಭರಿಯಾಗಿತ್ತು. ನಾನೇನೋ ಮಹತ್ಸಾಧನೆ ಮಾಡಿದವಳ ಹಾಗೆ ಹೇಳಿಕೊಂಡಾಗ ಅವರು ಹಾಗೆ ಮಾಡಿದ್ದು ಯಾಕೆ ಅಂತ ಅರ್ಥವೇ ಆಗಿರಲಿಲ್ಲ. ಆತುರದಿಂದ ಓಡಿ ಬಂದ ನಾವು ಈಗ ದಿಕ್ಕು ತೋಚದೆ ನಿಂತಿದ್ದೆವು.
ಅಷ್ಟರಲ್ಲಿ ಪುಣ್ಯಕ್ಕೆ ಅವಳ ಅಪ್ಪ ಬಂದಿದ್ರು. ನಮ್ಮ ಕೈಗೆ ಎಂದಿನ ಹಾಗೆ ಶುಂಠಿ ಪೆಪ್ಪಿ ಕೊಟ್ಟು ಮಾತಾಡಿಸಿದ್ದರು. ಅದು ಸುಮ್ಮನೆ ಮಾತಾಡಿದ ಹಾಗಿತ್ತು ಅಷ್ಟೇ. ಅವಳಿಗೆ ಎದ್ದು ಕೂತು ನಮ್ಮನ್ನು ಮಾತಾಡಿಸಲು ಗದರಿ ಹೇಳಿದರು. ಕತ್ತಲ ರೂಮಿನ ದೀಪ ಹಾಕಿದಾಗ ನಾನು ಬೆಚ್ಚಿ ದೀಪ ಹಾಕದಿದ್ದರೇ ಚೆಂದವಿತ್ತು ಅಂದುಕೊಂಡೆ. ಅಲ್ಲಿ ಕಂಡ ಅವಳು ಭೂತದ ಹಾಗಿದ್ದಳು. ಸಣ್ಣಗೆ … ಕಣ್ಣ ಕೆಳಗೆಲ್ಲ ಕಪ್ಪಗೆ .. ಕೊಳಕು ಕೊಳಕಾಗಿ … ಸುಕ್ಕುಗಟ್ಟಿದ ಬಟ್ಟೆಯಲ್ಲಿ . ಏನಾಗಿದೆ ಅವಳಿಗೆ ಅಂತ ಹೇಳುವವರು ಯಾರಿದ್ದರು ಅಲ್ಲಿ? ಆಗೆಲ್ಲ ದೊಡ್ಡವರ ನಡವಳಿಕೆಗಳೆಲ್ಲ ನಿಗೂಢವಾಗಿರುತ್ತಿದ್ದವು. ಈಗಿನ ಹಾಗೆ ಅಲ್ಲ. ಏನೋ ಮುಚ್ಚುಮರೆ. ನಮಗೆ ತಲೆ ಕೆಟ್ಟು ಹೋಯ್ತು. ಒಬ್ಬರೂ ಒಂದೂ ಹೇಳದೆ ಇದ್ದರೆ ನಾವು ಮಕ್ಕಳು ಎಷ್ಟಂತ ತಲೆ ಕೆಡಿಸಿ ಕೊಳ್ಳೋದಿಕ್ಕೆ ಆಗುತ್ತೆ? ಸುಮ್ಮನೆ ವಾಪಸ್ಸಾದೆವು .. ತಲೆಯೆಲ್ಲ ಗೋಜಲು ಗೋಜಲು ..
ಆಮೇಲೆ ಕೂಡಾ ಉಳಿದ ಎರಡು ತಿಂಗಳ ರಜೆಯಲ್ಲಿ ಆಗೀಗ ಕಣ್ಣು ತಪ್ಪಿಸಿ ಅವರ ಮನೆಗೆ ಹೋದರೂ ಅವಳು ಮಾತಾಡಲೇ ಇಲ್ಲ. ನಮ್ಮ ಜೊತೆ ಆಡಲೂ ಇಲ್ಲ , ಹಾಡಲೂ ಇಲ್ಲ. ಸುಮ್ಮನೆ ಮಲಗಿರ್ತಿದ್ಲು. ರಜೆ ಮುಗಿಯಿತು. ಹೊರಡುವ ಹಿಂದಿನ ದಿನ ಕೂಡಾ ಹೇಳಿ ಬರಲು ಹೋದಾಗಲೂ ನೀರಸ ಬೀಳ್ಕೊಡುಗೆ.
ಆಮೇಲೆ ಮುಂದಿನ ವರ್ಷಕ್ಕೆ ರಜೆಗೆ ಹೋದಾಗ ‘ಅವಳ ಮನೆಗೆ ಹೋಗಿ ಬರ್ತೀವಿ’ ಅಂದಾಗ ಅಜ್ಜಿ ಅವರೀಗ ಅಲ್ಲಿ ಇಲ್ಲ … ಬೇರೆ ಊರಿಗೆ ಟ್ರಾನ್ಸ್ ಫರ್ ಆಯ್ತು ಅಂದರು. ಆಮೇಲೆ ಬದುಕಿನಲ್ಲಿ ಅವಳೊಂದು ನೆನಪು ಮಾತ್ರವಾದಳು. ಮೊನ್ನೆ ಮೊನ್ನೆ ಯಾವತ್ತೋ ಇದ್ದಕ್ಕಿದ್ದ ಹಾಗೆ ಅವಳು ನೆನಪಾದಳು. ಅಮ್ಮನನ್ನು ‘ಅದೇನು ಕಥೆ ಅವಳದ್ದು? ನೀವ್ಯಾಕೆ ಆಗೆಲ್ಲ ಅವಳ ಮನೆಗೆ ಹೋದರೆ ಬಯ್ತಿದ್ರಿ?’ ಅಂತ.
ಆಗ ಅಮ್ಮ ಹೇಳಿದ್ದು ಇದು: ಅವಳು ಯಾವನನ್ನೋ ಪ್ರೀತಿಸಿ, ಅವನ ಜೊತೆ ಬದುಕು ಕಟ್ಕೊಳ್ತೀನಿ ಅಂತ ಓಡಿ ಹೋಗಿದ್ಲಂತೆ. ಆಗ ಬರೀ ೧೭ ವರ್ಷದವಳಾಗಿದ್ದ ಅವಳು ನಿಜಕ್ಕೂ ಹೇಳಬೇಕೆಂದರೆ ವಯಸ್ಸಿಗೆ ಮೀರಿದ ಬುದ್ಧಿವಂತೆ ಅನ್ನಿಸ್ತಿದ್ದಳು ನನಗೆ. ಅದು ಹೇಗೆ ಅಷ್ಟು ಬುದ್ಧಿವಂತೆ ಅವನನ್ನು ನಂಬಿದಳೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಮನೆ ಬಿಟ್ಟು ಹೋಗಿಬಿಟಿದ್ದಳು ಒಂದು ದಿನ .. ಅವನು ಅವಳ ಜೊತೆ ಎರಡು ತಿಂಗಳು ಇದ್ದು ಆಮೇಲೆ ಒಂದಿನ ಅವಳೊಬ್ಬಳನ್ನೇ ಹೋಟೆಲ್ ರೂಮಿನಲ್ಲಿ ಬಿಟ್ಟು ಓಡಿ ಹೋಗಿಬಿಟ್ಟಿದ್ದನಂತೆ. ಅವಳು ಮನೇಲಿ ಮಾಡ್ಸಿಟ್ಟಿದ್ದ ಒಡವೆ ಎಲ್ಲ ತಕ್ಕೊಂಡು ಹೋಗಿದ್ದಳು ಮತ್ತು ಅವನು ಅದೆಲ್ಲದರ ಜೊತೆ ಪರಾರಿಯಾಗಿದ್ದ. ಆಮೇಲೆ ಅವಳು ಬೇರೆ ದಾರಿ ಇಲ್ದೇ ಹಿಂತಿರುಗಿ ಬರಲೂ ದುಡ್ಡಿಲ್ದೇ ಯಾರದೋ ಹತ್ತಿರ ದುಡ್ಡು ತೆಗೆದುಕೊಂಡು ಇಲ್ಲಿಗೆ ವಾಪಸ್ ಬರಬೇಕಾಯಿತಂತೆ. ಇಲ್ಲಿ ಬಂದ ಮೇಲೆ ಬೇರೆ ರೀತಿಯ ಗೋಳು. ಸಣ್ಣ ಊರಿನಲ್ಲಿ ಈ ಥರ ಸಂಗತಿಗಳು ಎಷ್ಟು ದೊಡ್ಡದಾಗುತ್ತವೆ ಅಂದರೆ ಊರಿಗೆ ಊರೇ ಅವರನ್ನು ದೂರವಿಟ್ಟುಬಿಟ್ಟಿತ್ತು. ಬ್ರಾಹ್ಮಣರ ಮನೆಯ ಮದುವೆ, ಮುಂಜಿ, ತಿಥಿ, ಅರಿಶಿನ ಕುಂಕುಮ, ಆರತಿ ಎಲ್ಲದರಿಂದ ಅವರು ಬ್ಯಾನ್ ಆಗಿಬಿಟ್ಟಿದ್ದರು! ಅವಳು ಆಮೇಲೆ ಕಾಲೇಜಿಗೂ ಹೋಗಲಿಲ್ಲ. ಮನೆ ಬಿಟ್ಟು ಈಚೆ ಬರದವಳು ಇನ್ನು ಕಾಲೇಜಿಗೆ ಹೋಗೋದು ದೂರದ ಮಾತೇ. ಆಮೇಲೆ ಅವರು ಊರನ್ನೇ ಬಿಟ್ಟು ಹೊರಟುಹೋಗಿದ್ದರು ಅಂತ ಅಮ್ಮ ಹೇಳಿದಾಗ ಅವಳ ಸ್ಥಿತಿ ನೆನೆದು ಪಾಪದವಳು ಅನ್ನಿಸಿತು. ಅವನು ಮಾಡಿದ ಮೋಸದ ಜೊತೆಗೆ, ಈ ಥರದ ಸ್ಥಿತಿ ಎದುರಾದರೆ ಅವಳು ಎಷ್ಟು ಕಷ್ಟ ಪಟ್ಟಳೋ ಪಾಪ ಅಂತ ಮರುಗಿದೆ.
‘ಅಲ್ಲಾ, ಆಗೆಲ್ಲ ಅದ್ಯಾಕೆ ಅಷ್ಟು ಹಿಂಸೆ ಕೊಡ್ತಿದ್ರಿ ಅವಳ ಮನೆಗೆ ಹೋಗಬೇಡ ಅಂತ. ಪಾಪ ಅವನು ನೆಟ್ಟಗಿರ್ತಾನೆ ಅಂತ ಓಡಿಹೋದ್ಲು. ಆ ಪಾಪಿ ಮೋಸ ಮಾಡಿದ. ಅದು ತಪ್ಪು ಅಂತಲೇ ಇಟ್ಟುಕೊಂಡ್ರೂ ಅಪರಾಧ ಅನ್ನೋ ಮಟ್ಟದ್ದೇನೂ ಆಗಿರಲಿಲ್ಲ. ಅದ್ಯಾಕೆ ಅವಳ ಮನೆಯವರನ್ನ ಆ ಥರ ದೂರ ಇಟ್ರು ಊರವರೆಲ್ಲ’ ಅಂತ ಕೇಳಿದೆ. ‘ತಾತನಿಗೆ ಅವೆಲ್ಲ ಇಷ್ಟ ಆಗ್ತಿರಲಿಲ್ಲ’ ಅಂತ ಸುಲಭದ ಉತ್ತರ ಕೊಟ್ಟಳು ಅಮ್ಮ. ಸ್ವರ್ಗಕ್ಕೆ ಹೋದ ಮೇಲೆ ತಾತನಿಗೆ ಈ ಪ್ರಶ್ನೆ ಕೇಳದೇ ನಾನು ಬಿಡೋಳಲ್ಲ ….


ಪ್ರತಿಯೊಂದು ಸಿನೆಮಾದಲ್ಲೂ, ತಲೇ ಮೇಲೆ ತಲೇ ಬೀಳಲಿ ನಾಯಕ-ನಾಯಕಿ ಮಾತ್ರ ಒಂದಾಗಲೇ ಬೇಕು. ಇಲ್ಲ ಅಂದ್ರೆ ಸಿನೆಮಾ ನೋಡಿದವರಿಗೆಲ್ಲಾ ಒಂದು ರೀತಿ ಅಸಮಧಾನ.
ಗೆಳೆಯ/ಗೆಳತಿ ಪ್ರೀತಿ ಮಾಡ್ತಾ ಇದ್ದಾರೆ ಅಂದ್ರೆ ಪುಲ್ ಸಪೋರ್ಟ್. ಎಲ್ಲಿವರೆಗೆ ಅಂದ್ರೆ ಓಡಿಸ್ಕೊಂಡ್ ಬಂದು ರಿಜಿಸ್ಟ್ರಾರ್ ಆಫೀಸ್ನಲ್ಲಿ ಸೈನ್ ಹಾಕೋವರೆಗು.
ಅದೇ ಮನೆಯಲ್ಲಿ ಮಗ/ಮಗಳು/ಅಕ್ಕ/ತಂಗಿ/ಅಣ್ಣ/ತಮ್ಮ ಯಾರೇ ಆಗಲಿ ಪ್ರೀತಿಸ್ತಾ ಇದ್ದಾರೆ ಅಂದ್ರೆ…. ಛಾನ್ಸೇ ಇಲ್ಲ ಒಪ್ಪಿಕೊಳ್ಳೋಕ್ಕೆ.
ಅಂತದ್ರಲ್ಲಿ ಪ್ರೀತಿಸಿ/ಮನೆಬಿಟ್ಟು ಓಡಿಹೋಗಿ/ವಾಪಸ್ ಬಂದಾಗ ಒಪ್ಪಿ ಕೊಳ್ಳೋದು ಹೇಗೆ?
ಹೇಳೋದು/ಬರೆಯೋದು/ಯೋಚಿಸೋದು ಸುಲಭ…ಆದರೆ ಇಂತಹ ಒಂದು ಘಟನೆ ಆ ಸಂಸಾರದಲ್ಲಿ ಸೃಷ್ಟಿಸುವ ಅಲ್ಲೋಲ-ಕಲ್ಲೋಲಗಳು ಅಗಾಧ.
ಸುನಾಮಿಯಲ್ಲಿ ಸಾವಿರಾರು ಜನರು ಸತ್ತರು ಅಂದಾಗ “ಛೇ ಪಾಪ” ಅನ್ನುವುದು ಬೇರೆ, ಆ ಸಮಯದಲ್ಲಿ ಆ ಸ್ಥಳದಲ್ಲಿ ನಮ್ಮ ಆತ್ಮೀಯರು ಇದ್ದಾರೆ ಎಂದಾಗ ಮನಸ್ಸಿನಲ್ಲಿ ಏಳುವುದೇ ನಿಜವಾದ ಸುನಾಮಿ.
ನಿಜ ಅಂದ್ರೆ ವಿರೋಧ ಪ್ರೀತಿಗೆ ಅಲ್ಲ… ಭ್ರಮೆಯಿಂದ ವಾಸ್ತವಕ್ಕೆ ಬಂದ ಮೇಲೆ ನಿಯತ್ತಾಗಿ ಬಾಳುತ್ತಾರ? ಅದು ಸಮಸ್ಯೆ.
ಪ್ರೀತಿಗೆ ಕಣ್ಣಿಲ್ಲ, ಕಾಲಿಲ್ಲ, ತಲೆಯಿಲ್ಲ…ಎಲ್ಲ ನೋಟಗಳಾಚೆ…ಮೊದಲು ಜೀವನ ಅರಿತು, ಕಾಲ ಮೇಲೆ ನಿಂತು…ಆಮೇಲೆ ಪ್ರೀತಿಸಲಿ…ಪ್ರಬುದ್ದ ಪ್ರೀತಿ ಯಾಕೆ ಬಾಳಲ್ಲ, ಬೆಳೆಯಲ್ಲ?
ಬಹಳ ಸರಳವಾದ ವಿಷಯ. ಬಹಳ ಸರಳವಾಗಿ ಬರೆದಿದ್ದೀರಿ. ಬಲಿಷ್ಠ ಕಾರಣಗಳಿಲ್ಲದೆ (ಇದ್ದರೂ ಸಹ) ಒಬ್ಬರನ್ನು ಯಾಕೆ ದೂರವಿಡಬೇಕು? ನಂಬಿಕೆ ದ್ರೋಹಿಗಳ ಹೊರತು ಇನ್ಯಾರನ್ನಾದರೂ ದೂರವಿಡುವ ಅವಶ್ಯಕತೆಯಿದೆಯೇ?
ಸ್ವರ್ಗಕ್ಕೆ ಹೋದಾಗ…………….ಈ ಪ್ರಶ್ನೆ ಕೇಳದೆ ಬಿಡೋಲ್ಲ…ನೀವು ಆ ಸಣ್ಣ ವಯಸ್ಸಿನೊಳಗೆ ಮತ್ತೆ ಪ್ರವೇಶಿಸಿ ಬರೆದಹಾಗಿದೆ. ಹಿಡಿಸಿತು.
ಕುಂತಿ ಕಾಲಕ್ಕೆ ಮುಂಚಿನಿಂದಲೂ ಈ ಪ್ರೀತಿ ಅಂಬೋದು ಖೋಡಿ. ಕಾಲ ಬದಲಾಗಿದ್ದಕ್ಕೆ ಸಂತೋಷ ಪಡಬೇಕಾದ ವಿಷಯಗಳಲ್ಲಿ ಇದೂ ಒಂದು. ಕೆಲ ದಶಕಗಳ ಹಿಂದೆ ಇದ್ದ ಈ taboo ಈಗ ಇಲ್ಲವೆಂದುಕೊಳ್ಳುತ್ತೇನೆ.
-ಅನಿಲ ತಾಳಿಕೋಟಿ
ಅಂದು ನಡೆದದ್ದು ಇಂದು ಯಾಕೆ ಕಾಡುತ್ತದೆ .. ಉತ್ತರ ಹುಡುಕಲು ಮನಸ್ಸು ಬಯಸುತ್ತದೆ . ತಾತ ಇದ್ದಿದ್ದರೆ .. ಅವರನ್ನೂ ಯಾಕೆ ಹೀಗೆ ಮಾಡಿದೆ ಎಂಬುದು ಕಾಡು ತ್ತಿತ್ತೋ ಏನೋ . ಕಾಲ ಕಳೆದಂತೆ ,ಮನಸ್ಸು ಮಾಗಿದಂತೆ ಅಭಿಪ್ರಾಯಗಳು ಬದಲಾದದ್ದನ್ನು ನೋಡಿದ್ದೇನೆ .
ಅದೇಕೋ ನಿನ್ನ ಬಾಲ್ಯದ ಅನೇಕ ಘಟನೆಗಳು ನನ್ನವೇ ಅನ್ನಿಸುತ್ತವೆ .
ಅಭಿನಂದನೆಗಳು ಭಾರತಿ.
ಬೇಸಿಗೆ ರಜೆಗಳಲ್ಲಿನ ಅಜ್ಜಿಯ ಮನೆ ಪರಿಸರದ ಅನುಭವ ನನಗೂ ಇದೆ.. ಅಂಥಾ ಒಂದು ಅನುಭವವನ್ನ ಆಜಿಯ ಮನೆ ಮಾತ್ರ ತುಂಬಿಕೊಡಲು ಸಾಧ್ಯ. ಅಜ್ಜಿಯ ಮನೆ ಅನುಭವಗಳಿಗೆ ಕಳೆ ಕಟ್ಟುವಂತೆ ನಮ್ಮ ದಿನಗಳನ್ನ ಹಬ್ಬವನ್ನಾಗಿಸಿ ಮಾಡೋದು.. ಅಜ್ಜಿಯ ಮನೆಯಲ್ಲಿನ ಅಥವಾ ಅಜ್ಜಿ ಮನೆಯ ಅಕ್ಕ ಪಕ್ಕದ ಇಂಥ ಹುಡುಗ ಹುಡುಗಿಯರೇ. ಅಂಥವರಿಲ್ಲದ ಅಜ್ಜಿ ಮನೆಯಲ್ಲಿನ ದಿನಗಳು ಹೇಗೆ ಹಬ್ಬದ ದಿನಗಳಾಗಿ ಬದಲಾಗುತ್ತಿತ್ತು ಅನ್ನೋದೇ ಸೋಜಿಗ.
ಆ ಹುಡುಗಿಯ ಇಂಥ ದಾರುಣ ಸ್ತಿತಿ ಕಂಡು ತುಂಬಾ ಬೇಸರ ಉಂಟಾಗುತ್ತದೆ. ಒಂದು ತಪ್ಪು ಹೆಜ್ಜ ಇಟ್ಟು ತುಳಿದ ತಪ್ಪು ದಾರಿ ಬದುಕನ್ನ ಹೇಗೆಲ್ಲ ಬದಲಾಯಿಸಿ ಬಿಡುತ್ತದೆ ಅಲ್ಲವೇ. ಬದುಕೊಳಗೆ ಎಷ್ಟು ಹುಶಾರಾಗಿದ್ದರೂ ಸಾಲದು ಕೊನೆಗೆ ಬದುಕೇ ನಮ್ಮನ್ನ ಯಾಮಾರಿಸಿ ಬಿಡುತ್ತದೆ.