ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : ಜಯಾ ಬಾಧುರಿ ’ಪತಿಯರೆಲ್ಲಾ ಪ್ರಿಯಕರರಲ್ಲ’ ಅಂದುಬಿಟ್ಟಿದ್ದಿದ್ದರೆ!

ಈ ಬರಹ ಶುರು ಮಾಡುವುದಕ್ಕೆ ಮುನ್ನವೇ ನಾನೊಂದು ಮಾತು ಸ್ಪಷ್ಟ ಪಡಿಸುತ್ತೇನೆ – ನಾನು ಗಂಡಸರೆಲ್ಲ ಕೆಟ್ಟವರು ಮತ್ತು ಹೆಂಗಸರೆಲ್ಲ ಶೋಷಣೆಗೊಳಗಾದವರು ಅಂತ ಮೂಗು ಮುರಿಯುವಂಥ ಸ್ತ್ರೀವಾದಿಯಲ್ಲ ಎಂದು. ಇಡೀ ಜಗತ್ತಿನ ಗಂಡು-ಹೆಣ್ಣುಗಳನ್ನೆಲ್ಲ ಕಾಣುವಾಗ ನನಗೆ ಬರುವಂತ ಮಾಮೂಲು ಪ್ರಶ್ನೆಗಳು, ಸಂಶಯಗಳು ಮತ್ತು ವಿಚಿತ್ರ ಅನ್ನಿಸುವಂಥದ್ದನ್ನು ನಿಮ್ಮ ಜೊತೆ ಹೇಳಬೇಕೆನ್ನಿಸಿತು, ಹಾಗಾಗಿ ಈ ಬರಹ ಹುಟ್ಟಿತಷ್ಟೇ …
ನೀವು ಗಂಡಸರೇ ಗುಂಪುಗಟ್ಟಿಕೊಂಡು ಇರುವ ಪಾರ್ಟಿಗೆ ಅಥವಾ ಗೆಳೆಯರೆಲ್ಲ ಸುಮ್ಮನೆ ಸೇರಿಕೊಂಡು ಮಾತುಕತೆಯಲ್ಲಿ ತೊಡಗಿರುತ್ತಾರಲ್ಲ ಅಲ್ಲಿನ ಮಾತಿಗೆ ಕಿವಿಗೊಡಿ … ಗಂಡಸರು ಹೆಂಡತಿಯನ್ನು ಆಡಿಕೊಳ್ಳುವಂತ ತುಂಬ ಜೋಕ್ಸ್ ಹೇಳಿಕೊಳ್ಳುತ್ತಿರುತ್ತಾರೆ.
‘ನನ್ನ ಹೆಂಡತಿ ಕೇಳಿದಳು, ನಾನು ಸತ್ತೋದ ಮೇಲೆ ಇನ್ನೊಂದು ಮದುವೆ ಆಗ್ತೀರಾ’ ಅಂತ. ಅದಕ್ಕೆ ನಾನು ಹೇಳ್ದೆ ‘ಒಬ್ಬ ಮನುಷ್ಯ ಒಂದೇ ಸಲ ಮೂರ್ಖನಾಗೋದು’ !
‘ಮದುವೆಯ ಪದದ ಅರ್ಥ ಹೇಳು ಅಂದ ಮಗ. ನಾನು ಹೇಳ್ದೆ ಅದೊಂದು ಬರೀ ಪದವಲ್ಲ .. ಅದೊಂದು sentence … life sentence ಮಗೂ’ ಅಂತ !
ಮದುವೆಯ ಬೆಳ್ಳಿಹಬ್ಬದಲ್ಲಿ ಗಂಡ ಹೇಳ್ತಾನೆ ‘ನಿನ್ನ ಅಪ್ಪ ನಿನ್ನನ್ನ ಮದುವೆಯಾಗದಿದ್ರೆ ಜೈಲಿಗೆ ಕಳಿಸಿ ಕಂಬಿ ಎಣಿಸೋ ಹಾಗೆ ಮಾಡ್ತೀನಿ ಅಂದಿದ್ದ. ಜೀವಾವಧಿ ಶಿಕ್ಷೆ ಆಗಿದ್ರೂ ಇಷ್ಟು ಹೊತ್ತಿಗೆ ಬಿಡುಗಡೆಯಾಗಿ 10 ವರ್ಷ ಆಗಿರ್ತಿತ್ತು’
‘ಏಳೇಳು ಜನ್ಮಕ್ಕೂ ನೀವೇ ನನ್ನ ಗಂಡನಾಗಲಿ ಅಂತ ಹೆಂಡತಿ ಹೇಳಿದರೆ ಗಂಡ ಇದೇ ಏಳನೆಯ ಜನ್ಮವಾಗಲಿ ಅಂದನಂತೆ’ …ಹೀಗೆಲ್ಲ.
ಆ ಜೋಕುಗಳಿಗೆ ಅಲ್ಲಿರುವ ಗಂಡಸರು ಮತ್ತು ಅಪ್ಪಿ ತಪ್ಪಿ ಅವರವರ ಹೆಂಡತಿಯರು ಬಂದಿದ್ದರೆ ಅವರೂ ಕೂಡಾ ಸಭಾ ಮರ್ಯಾದೆ ಮತ್ತು party mood ಕಾಪಾಡಲು ಈ ಜೋಕ್ಸ್ ಕೇಳಿ, ನಕ್ಕು ಸುಮ್ಮನಾಗುತ್ತಾರೆ. ಹೆಂಡತಿಯರು ಹರ್ಟ್ ಕೂಡಾ ಆಗುವುದಿಲ್ಲ … ಅಷ್ಟೊಂದು ಒಗ್ಗಿಹೋಗಿದ್ದಾರೆ ಇಂತ ಜೋಕ್‌ಗಳಿಗೆ. ಆದರೆ ಗಂಡಂದಿರ ವಿಚಾರವಾಗಿ ಇಂತ ಜೋಕ್‍ಗಳನ್ನು ನೀವು ಕೇಳಿದ್ದೀರಾ? (ನಾನಂತೂ ಕೇಳಿಲ್ಲ). ಹೆಂಗಸರು ತುಂಬ ಆತ್ಮೀಯ ಗೆಳತಿಯರ ಹತ್ತಿರ ಸುಖ-ದುಃಖ ಹೇಳಿಕೊಳ್ಳುತ್ತಾರೆ. ಆದರೆ ಪಾರ್ಟಿಗಳಲ್ಲಿ ಎಲ್ಲರ ಜೊತೆ ಇರುವಾಗ, ಇರುವುದಕ್ಕಿಂತ ಗಂಡನ ವಿಷಯ ಸ್ವಲ್ಪ ಹೆಚ್ಚಾಗೇ ಕೊಚ್ಚಿಕೊಳ್ಳುತ್ತಾರೆ ಹೊರತು ಕೆಳಗಿಳಿಸುವ ಜೋಕ್ಸ್ ಹೇಳಿಕೊಳ್ಳುವುದು ತುಂಬ ಅಪರೂಪ.
ನನ್ನ ಗೆಳತಿಯೊಬ್ಬಳು ಗಂಡ ಏಳೇಳು ಜನ್ಮಕ್ಕೂ ನೀನೇ ಹೆಂಡತಿಯಾಗು ಅಂದಾಗ ಅವಳು ತಮಾಷೆಗೋ (ಅಥವಾ ಸೀರಿಯಸಾಗಿ ಕೂಡಾ ಇರಬಹುದೇನೋ!) ಇದೇ ಏಳನೆಯ ಜನ್ಮವಾಗಲಿ ಅಂದಿದ್ದಕ್ಕೆ ಆ ಗಂಡನೆಂಬುವ ಮನುಷ್ಯ ಅದನ್ನು ಜೀರ್ಣಿಸಿಕೊಳ್ಳಲಾಗದೇ ವಿಲ ವಿಲ ಒದ್ದಾಡಿಹೋಗಿದ್ದ. ಇನ್ನೇನಾದರೂ ಮದುವೆ ಜೀವಾವಧಿ ಶಿಕ್ಷೆ ಅಂತೆಲ್ಲ ಅಂದುಬಿಟ್ಟರಂತೂ ಗಂಡಸಿನ ಈಗೋ ಭಯಂಕರ ಹರ್ಟ್ ಆಗುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.
ನನ್ನ ಪರಿಚಿತರೊಬ್ಬರು ಹೆಂಡತಿಗೆ ಆರೋಗ್ಯ ಸರಿಯಿಲ್ಲ ಅನ್ನುವ ಕಾರಣಕ್ಕೆ ಬೆಳಿಗ್ಗೆ ಎದ್ದು ಮುಂಬಾಗಿಲಿಗೆ ನೀರು ಹಾಕಿ, ರಂಗೋಲಿ ಇಡುತ್ತಾರೆ. ಇದನ್ನೆಲ್ಲ ಮಾಡಲು ಆತ ಬೆಳಕು ಹರಿಯುವ ಮುನ್ನವೇ ಏಳುತ್ತಾರೆ. ಯಾಕೆಂದರೆ ಅಕ್ಕ ಪಕ್ಕದ ಮನೆಯವರಿಗೆ ಅದು ಕಾಣಿಸಬಾರದಂತೆ! ನನ್ನ ಹೆಂಡತಿಗೆ ನಾನು ಸಹಾಯ ಮಾಡ್ತೀನಿ ಅನ್ನುವಂತೆ ಇರಲು ಅವರಿಗೆ ಯಾಕೆ ಸಾಧ್ಯವಾಗುವುದಿಲ್ಲ? ಸರಿ ಆತ ಹಾಗಿದ್ದಾರೆ ಹೋಗಲಿ ಬಿಡಿ, ಅವರನ್ನು ಕ್ಷಮಿಸೋಣ. ಆದರೆ ಅವರೇ ಗುಂಪಿನಲ್ಲಿರುವಾಗ ಮತ್ತೊಬ್ಬ ಗೆಳೆಯ ಹೆಂಡತಿಗೆ ಪಾತ್ರೆ ತೊಳೆಯುವುದಕ್ಕೆ ಸಹಾಯ ಮಾಡುತ್ತಾನೆ ಅಂತ ಗೊತ್ತಾದಾಗ ‘ಏನ್ಲೇ ನಿನ್ ಕೈನಲ್ಲಿ ಗೆರೆಗಳೇ ಅಳಿಸಿ ಹೋಗಿದ್ಯಂತಲ್ಲ!’ ಅಂತ ಹಾಸ್ಯ ಮಾಡುತ್ತಾನೆ. ಹೆಂಗಸೊಬ್ಬಳು ಪಾತ್ರೆ ತೊಳೆದರೆ, ಅಡಿಗೆ ಮಾಡಿದರೆ, ಬಟ್ಟೆ ಒಗೆದರೆ, ಕಸ ಗುಡಿಸಿದರೆ ಯಾರಾದರೂ ಹೆಂಗಸರು ಆಡಿಕೊಳ್ಳುವುದನ್ನು ಕಂಡಿದ್ದೀರಾ? ಇವರಿಗೆ ಮಾತ್ರ ಅದೇನು ಕೋಡು ಗೊತ್ತಾಗುವುದಿಲ್ಲ …! ಕೋಡು ಅಂದಾಗ ಮತ್ತೊಂದು ‘ಗಂಡು’ ಜೋಕ್ ನೆನಪಾಯ್ತು – ಮದುವೆಗೆ ಮುಂಚೆ ‘ಗಂಡು’ ಆಗಿದ್ದವನು ಮದುವೆಯ ನಂತರ ‘ಗಂಡ’ ಆಗುತ್ತಾನಲ್ಲ ಅದು ಅವನು ‘ಕೋಡು’ ಕಳೆದುಕೊಂಡ ಅನ್ನುವುದರ ಸೂಚ್ಯಾರ್ಥವಂತೆ !!

ನನ್ನ ಗಂಡನ ಗೆಳೆಯನೊಬ್ಬ ಅವನ ಹೆಂಡತಿ ಎದುರಿಗೇ ಇರುವಾಗ ‘ನನಗೆ ಅವಳು ಮನೆಯಲ್ಲಿ ಇಲ್ಲದಿದ್ದರೂ ಪರವಾಗಿಲ್ಲ. ಮಕ್ಕಳು ಮಾತ್ರ ಜೊತೆ ಇರಲೇಬೇಕು’ ಅನ್ನುತ್ತಾನೆ. ಮಕ್ಕಳ ಮೇಲಿನ ಪ್ರೀತಿ ವ್ಯಕ್ತ ಪಡಿಸಲು ಇದಕ್ಕಿಂತ ಚೆಂದದ ಮಾತು ಅವನಲ್ಲಿ ಯಾಕೆ ಹುಟ್ಟಲಿಲ್ಲ? ಆ ಹೆಂಡತಿ ಕೂಡಾ ಅದೊಂದು ಸಾಮಾನ್ಯ ವಿಷಯವೆನ್ನುವ ಹಾಗೆ ಒರೆಸಿಕೊಂಡು ಸುಮ್ಮನಿದ್ದುಬಿಡುತ್ತಾಳೆ. ಆ ಮಾತನ್ನು ಹೆಂಡತಿ ಗಂಡನ ವಿಷಯವಾಗಿ ಗುಂಪಿನಲ್ಲಿರುವಾಗ ಆಡಿ ನೋಡಲಿ! ಬಹುತೇಕ ಸಂಧರ್ಭಗಳಲ್ಲಿ ಅದು ಸುಮಾರು ಸಂಸಾರಗಳ ಸತ್ಯದ ಕತೆಯಾಗಿದ್ದರೂ, ಅವಳು ಬಾಯಿ ಬಿಟ್ಟು ಆಡಿದರೆ ಅವ ಮುಂದಿನ ಮೂರು ವಾರ ಸ್ಟ್ರೈಕ್ ಮಾಡುತ್ತಾನೇನೋ. ಕೆಲವು ಸತ್ಯಗಳು ಸತ್ಯಗಳೇ ಆಗಿದ್ದರೂ ಈ ವಿಷಯದಲ್ಲಿ ಗಂಡಸರಿಗೆ ಜೀರ್ಣಶಕ್ತಿ ಕಡಿಮೆ! ಆತ ಆ ಮಾತು ಆಡಿದಾಗ ನನಗೆ ಯಾಕೋ ಮನಸ್ಸಿಗೆ ಹಿಂಸೆ ಅನ್ನಿಸಿ (ಅವಳೇ ತೆಪ್ಪಗಿರುವಾಗ ನನಗೆ ಯಾಕೆ ಈ ತಲೆಹರಟೆ ಬೇಕಿತ್ತೋ..) ‘ನನ್ನ ಗಂಡ ಏನಾದ್ರೂ ಈ ಥರ ಅಂದಿದ್ರೆ ಗತಿ ಕಾಣಿಸಿ ಬಿಡ್ತಿದ್ದೆ’ ಅಂದುಬಿಟ್ಟಿದ್ದೆ. ಆ ಮಾತಿಗೆ ನನ್ನ ಗಂಡ ಹರ್ಟ್ ಆಗಿ ಮೂರು ದಿನ ಮಾತು ಬಿಟ್ಟಿದ್ದ ! ನನ್ನೊಬ್ಬ ಗೆಳೆಯನಿದ್ದಾನೆ. ಅವನು ಹೇಳುತ್ತಿರುತ್ತಾನೆ ‘ನನ್ನದು ತಪ್ಪಿರಲಿ, ಅವಳದ್ದೇ ತಪ್ಪಿರಲಿ .. ಒಟ್ಟಿನಲ್ಲಿ ಕ್ಷಮೆ ಮಾತ್ರ ಅವಳೇ ಕೇಳಬೇಕು’ ಅಂತ. ಅವಳು ಒಪ್ಪಿಕೊಳ್ಳುತ್ತಾಳಾ ತನ್ನದೇ ತಪ್ಪು ಅಂತ ಎಂದು ನಾನು ಪ್ರಶ್ನಿಸಿದರೆ ‘ಒಪ್ಪಿಕೊಳ್ಳದೇ ಹೋದರೆ ಅವಳಿಗಿಂತ ಹೆಚ್ಚು ನಾನು ಕಿರುಚಾಡಿ ಬಿಡುತ್ತೇನೆ. ಹಾಗಾಗಿ ಅವಳು ಒಪ್ಪಿಬಿಡುತ್ತಾಳೆ’ ಅಂದ. ಎಷ್ಟು ಸುಲಭದ ಉಪಾಯಗಳು ಸಂತೋಷದಿಂದ ಬದುಕಲು!
 
ಇನ್ನೊಬ್ಬ ಗೆಳೆಯನಿದ್ದಾನೆ. ಅವನ ಹೆಂಡತಿ ತನ್ನ ಮಕ್ಕಳ ಜೊತೆ ಕೂತು ಮಾತಾಡುತ್ತಾ ಇರುತ್ತಾಳಂತೆ. ಆ ಮಕ್ಕಳು ಅಮ್ಮನನ್ನು ದೇವತೆ ಅನ್ನುವ ಹಾಗೆ ಅವಳನ್ನು ಆರಾಧಿಸುತ್ತವಂತೆ. ಅವಳ ಜ್ಞಾನ ತುಂಬ ಮಿತವಾದದ್ದು. ತಾನು ಅವಳಿಗಿಂತ ಜ್ಞಾನಿ. ಮಕ್ಕಳು ಅವಳ ಹತ್ತಿರ ಹೇಳಿಕೊಳ್ಳುವ ವಿಷಯಗಳ ಬಗ್ಗೆ ನನ್ನಲ್ಲಿ ಆಳವಾದ ಜ್ಞಾನವಿದೆ. ಜಗತ್ತಿಗೆ ತುಂಬ expose ಆಗಿರುವುದರಿಂದ ನನಗೆ ಆ ವಿಷಯಗಳು ಹೆಚ್ಚು ಗೊತ್ತು ಅಂತ ಅವನ ವಾದ. ಅದಕ್ಕೇ ನಾನು ಹೇಳಿದೆ ‘ನಿನಗೆ ವಿಷಯ ಗೊತ್ತಿರಬಹುದು. ಆದರೆ ಅದನ್ನು ಹೇಳಿಕೊಳ್ಳಲು ನೀನು ಅವರಿಗೆ ಸಿಕ್ಕಬೇಕಲ್ಲ ಮಾರಾಯ. ಅಮ್ಮನ ಹತ್ತಿರವೇ ನಿನ್ನ ಮಕ್ಕಳು ತಮ್ಮ ವಿಷಯ ಹಂಚಿಕೊಳ್ಳಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಅವಳು ‘ಅಮ್ಮ’. ಅವಳು ಅಮ್ಮ ಆಗಿರುವುದೇ ಒಂದು qualification ನಿನ್ನ ಮಕ್ಕಳಿಗೆ. ಮತ್ತೆ ಇನ್ನೊಂದು ವಿಷಯವೆಂದರೆ ಅವಳು ಮಕ್ಕಳಿಗೆ ಹೆಚ್ಚು ಸಿಕ್ಕುತ್ತಾಳೆ. ನೀನು ನೋಡು ಅವುಗಳ ಬದುಕಿನಲ್ಲಿ ಮಿಳಿತವೇ ಆಗಿಲ್ಲ. ಹಾಗಾಗಿ ನೀನೆಷ್ಟು ಜ್ಞಾನಿ ಅನ್ನುವುದಕ್ಕಿಂತ ನೀನೆಷ್ಟು ಸಿಕ್ಕುತ್ತೀಯ ಅನ್ನುವುದೇ ನಿನ್ನ ಮಕ್ಕಳಿಗೆ ಮುಖ್ಯವಾಗಿದೆ ಅನ್ನಿಸುತ್ತದೆ’ ಅಂತ ಹೇಳಿದೆ … ಒಪ್ಪಿಕೊಳ್ಳಲು ಕಷ್ಟವಾಯ್ತು ಅವನಿಗೆ …. ಸಹಜವೇ!!
ನಮ್ಮ angry young man ಅಮಿತಾಭರ ‘ಪತ್ನಿಯರೆಲ್ಲ ಮನದನ್ನೆಯರಲ್ಲ’ ಅನ್ನುವ world famous quote ಯಾರು ಮರೆಯಲು ಸಾಧ್ಯ?! ಆತ ಅದನ್ನು ಹೇಳಿ ಜೀರ್ಣಿಸಿಕೊಂಡನಲ್ಲ, ಅದು ನನ್ನನ್ನು ಸದಾ haunt ಮಾಡುತ್ತದೆ. ಒಬ್ಬ ವ್ಯಕ್ತಿ – ಅದೂ ಅಮಿತಾಭರಂಥ icon- ಸಾರ್ವಜನಿಕವಾಗಿ ಈ ರೀತಿಯ statement ಕೊಡುವುದು ಎಷ್ಟು ಸರಿ? ಅದು ಆತನ ಸ್ವಂತ ಅಭಿಪ್ರಾಯವಿರಬಹುದು. ಅದನ್ನು ಅವರು ಆಗ ನಂಬಿದರೋ, ಈಗಲೂ ನಂಬುತ್ತಿದ್ದಾರೋ ಅದೆಲ್ಲ ಬೇರೆಯದೇ ಮಾತು. ಆದರೆ ಆ ರೀತಿ ಹೇಳಿದ ನಂತರ ಜಯಾ ಬಾಧುರಿಯ ಸ್ಥಿತಿ? ಆಕೆ ಎಷ್ಟು ಅವಮಾನ ಅನುಭವಿಸಿರಬೇಕಲ್ಲವೇ? ಈಗ ಒಂದು ಕಾಲ್ಪನಿಕ ಜಗತ್ತನ್ನು ಪ್ರವೇಶಿಸೋಣ. ಜಯಾ ಬಾಧುರಿಯೇನಾದರೂ ಪಬ್ಲಿಕ್ಕಾಗಿ ‘ಪತಿಯರೆಲ್ಲ ಪ್ರಿಯಕರರಲ್ಲ’ ಅಂದುಬಿಟ್ಟಿದ್ದರೆ? ಆಗ ಅಮಿತಾಭ್ ಇದನ್ನು ಹೇಗೆ ಸ್ವೀಕರಿಸುತ್ತಿದ್ದರು ಅನ್ನುವ ಕುತೂಹಲ ನನಗೆ. ಅಮಿತಾಭ್ ಇರಲಿ, ಜಗತ್ತು ಅದನ್ನು ಯಾವ ರೀತಿ ಸ್ವೀಕರಿಸುತ್ತಿತ್ತು? ವರ್ಷ ವರ್ಷ ಕಳೆದರೂ ಅಮಿತಾಭರ ಮಾತು ಯಾವುದೋ ದಾರ್ಶನಿಕರ ಜೀವನಾನುಭವದ ಮಾತಿನಂತೆ ಇವತ್ತಿಗೂ quote ಆಗುತ್ತಿದೆಯಲ್ಲ, ಹಾಗೆಯೇ ಜಯಾ ಬಾಧುರಿಯ ಮಾತೂ ಸ್ವೀಕೃತವಾಗುತ್ತಿತ್ತಾ? ಉತ್ತರ ಎಲ್ಲ ಹೆಂಗಸರಿಗೂ ಮತ್ತು ಎಲ್ಲ ಗಂಡಸರಿಗೂ ಗೊತ್ತು …
ಕೊನೆಯದಾಗಿ ಒಂದು ಸಣ್ಣ ಪ್ರಶ್ನೆ – ಒಬ್ಬ ಗಂಡಸು ತನ್ನ ಹೆಣ್ಣಿನ ಬಗ್ಗೆ ಮತ್ತು ತನ್ನ ಹೆಂಡತಿಯ ಬಗ್ಗೆ ಬಾಯಿಗೆ ಬಂದಿದ್ದು, ಮನಸ್ಸಿಗೆ ಬಂದಿದ್ದು ಎಲ್ಲವನ್ನೂ ನಿರರ್ಗಳವಾಗಿ ಆಡುತ್ತಾ ಹೋಗುತ್ತಾನಲ್ಲ ಆ ರೀತಿ ನಾವು ಹೆಂಗಸರು ಕೂಡಾ ಮಾತಾಡಲು ಶುರು ಮಾಡಿಬಿಟ್ಟರೆ ಏನಾಗಬಹುದು?
ನಾಲ್ಕನೆಯ ಮಹಾಯುದ್ಧದ ರಣಭೇರಿಯ ಸದ್ದು ಕೇಳಿಸುತ್ತಿದೆಯೇ ನಿಮಗೂ ….?
 

‍ಲೇಖಕರು G

25 July, 2013

ನಿಮಗೆ ಇವೂ ಇಷ್ಟವಾಗಬಹುದು…

18 Comments

  1. Geetha b u

    “Women come and go but my wife is the mother of my children ” antha raj kapoor..heli nermadhiyaagi edhu, hodanalla…adharindha bekaa?? Another person( very famous) who is happily married and who praises his wife for standing by him in his wayward life when young , with that women giving a maternal smile irritates me to no end….very well written bharathi.

  2. ಶಿವ

    ಅದು ಹಂಗಲ್ಲ ಮೇಡಂ.. ಗಂಡು ತನ್ನ ಹೆಂಡತಿ ಬಗ್ಗೆ ಏನೇ ಹೇಳಿದರೂ ಅದು ಸುಮ್ಮನೇ ತಮಾಶೆಗೆ ಆಗಿರುತ್ತದೆಯೇ ಹೊರತು ನಿಜವಾಗಿ ಆತನಿಗೆ ಅವಳು ಬೇಕೇ ಬೇಕಾಗಿರುತ್ತದೆ. ಪ್ರೀತಿ ಇರಬಹುದು, ಅವಲಂಬನೆ ಇರಬಹುದು, ಅನಿವಾರ್ಯತೆ ಇರಬಹುದು ಮತ್ತೇನೋ ಇರಬಹುದು. ಆದರೆ ಹೆಂಡತಿ ತನ್ನ ಗಂಡನ ಬಗ್ಗೆ ಟೀಕಿಸುತ್ತಿದ್ದಾಳೆಂದರೆ ಅವಳಿಗೆ ನಿಜವಾಗಿಯೂ ಅವನನ್ನು ದೂರುತ್ತಿದ್ದಾಳೆ ಎಂದು ಅರ್ಥ. ಹಾಗಾಗಿ ಅದು ಸೀರಿಯಸ್ಸಾಗಿ ಪರಿಗಣಿಸಲ್ಪಡುತ್ತದೆ. ಈ ಅಡುಗೆ, ಪಾತ್ರೆ ,ರಂಗೋಲಿ ಇವೆಲ್ಲಾ ಸಾಮಾಜಿಕ ಮತ್ತು ಅಹಮಿಕೆಯ ಅಂಶಗಳು ಬದಲಾವಣೆಯಾಗಲು ಸಮಯ ತೆಗೆದುಕೊಳ್ಳುತ್ತವೆ. ನಿಮ್ಮ ನಿಮ್ಮ(ನಮ್ಮ ನಮ್ಮ) ಮಕ್ಕಳಲ್ಲಿ ಇವುಗಳನ್ನು ಕಳೆಯುವುದರ ಮೂಲಕ ನಾವು ಮುಂದಿನ ತಲೆಮಾರು ಬದಲಾವಣೆಯಾಗುವಂತೆ ನೋಡಿಕೊಳ್ಳಬೇಕು.

  3. sujathalokesh

    …..ಒಬ್ಬ ಗಂಡಸು ತನ್ನ ಹೆಣ್ಣಿನ ಬಗ್ಗೆ ಮತ್ತು ತನ್ನ ಹೆಂಡತಿಯ ಬಗ್ಗೆ ಬಾಯಿಗೆ ಬಂದಿದ್ದು, ಮನಸ್ಸಿಗೆ ಬಂದಿದ್ದು ಎಲ್ಲವನ್ನೂ ನಿರರ್ಗಳವಾಗಿ ಆಡುತ್ತಾ ಹೋಗುತ್ತಾನಲ್ಲ ಆ ರೀತಿ ನಾವು ಹೆಂಗಸರು ಕೂಡಾ ಮಾತಾಡಲು ಶುರು ಮಾಡಿಬಿಟ್ಟರೆ ಏನಾಗಬಹುದು?……
    —ಥೂ ಆ ತರಹದ ಯಾವ ಗಂಡಸೂ ನನಗೆ ಅಸಹ್ಯ ಎನಿಸ್ತಾನೆ. ಯಾವ ಹೆಣ್ಣೂ ಅವನ ಜೊತೆಯೇ ಬಾಳಬೇಕಾದ ಅನಿವಾರ್ಯತೆ ಇದ್ದವಳು, ತನ್ನವನದ್ದು ಎಷ್ಟೇ ಹುಳುಕಿದ್ದರೂ ಮರ್ಯಾದೆ ಪ್ರಶ್ನೆ ಅಂತಾದರೂ ಏನನ್ನೂ ಹೇಳಿಕೊಳ್ಳುವುದಿಲ್ಲ.
    ಏನ್ ಚೆನಾಗಿ ವಿಷಯಗಳನ್ನು ಹೇಳ್ತಾ ಹೋಗ್ತೀರಿ ! ಯೋಚಿಸೋ ಹಾಗೆ ಮಾಡ್ತೀರಿ !

  4. Radhika

    Bharathi, you’ve picked a sensitive topic in the context of Indian society. Appreciate it. I wonder how men have the mindset that they have though they too live the same society! Subconsciously women have accepted that they can be made fun of. Those who talk back are at the receiving end.

  5. ಶಮ, ನಂದಿಬೆಟ್ಟ

    ಆಹಾ… ಭಾರತಿಗೆ ಭಾರತಿಯೇ ಉಪಮೆ….

  6. Pramod

    ಓದುತ್ತಾ ಓದುತ್ತಾ ಅಭಿಮಾನ್ ಚಿತ್ರದ ನೆನಪಾಯಿತು. ಚಿತ್ರ ರಿಲೀಸ್ ಆದ ಟೈಮಲ್ಲಿ ಅಮಿತಾಭ್ ಜಯಾ ಬಾಧುರಿಯಷ್ಟು ಫೇಮಸ್ ಇರಲಿಲ್ಲ.
    ಜತೆಗೆ ಆಗಷ್ಟೆ ಅವರಿಬ್ಬರ ಮದುವೆ ಆಗಿತ್ತು. ನ೦ತರ ಜಯಾ ಆಕ್ಟಿ೦ಗ್ ಬಿಟ್ಟೇ ಬಿಟ್ಟರು.
    ಮೇಲ್ ಇಗೋ ನೋಡಿ!!! ರೀಲ್ ಗೂ ರಿಯಲ್ ಗೂ ವ್ಯತ್ಯಾಸವಿರಲಿಲ್ಲ. ರೀಲ್ ನಲ್ಲಿ ಹ್ಯಾಪ್ಪಿ ಎ೦ಡಿ೦ಗ್ ಹಾಕಬಹುದು.
    ರಿಯಲ್ ನಲ್ಲಿ ಕಷ್ಟ ಸಾಧ್ಯ!

  7. Vasuki

    Very well written…I am waiting for some conservative person, to say women “not giving it back” is the reason why Indians have very less marital problems! 😛
    A related thing that irritates me no end, is when urban educated women say “My husband has given me full freedom” without even understanding the inherent flaw in that she is born with all the freedom in the first place 🙂

    • Anonymous

      Wow… Well said!! So true 🙂

  8. Veena Bhat

    ನಮ್ಮ ದೇಶದ ದುರಂತ ಯಾವುದೆಂದರೆ…. ಹೆಂಗಸರ ವಿಷಯಕ್ಕೆ ಬಂದಾಗ ಗಂಡಸರು ಈಗಲೂ ನೂರು ವರ್ಷ ಹಿಂದೆ ಹೋಗಿಬಿಡುತ್ತಾರೆ. …

  9. suguna mahesh

    ಸೂಕ್ಷ್ಮ ವಿಷಯವನ್ನು ಚರ್ಚೆಗಿಟ್ಟಿದ್ದೀರಿ.

  10. soumya

    very nice and true madam !

  11. ತೇಜಸ್

    ಬರಹ ಚೆನ್ನಾಗಿದೆ, ಸತ್ಯದ ಘಟನೆಗಳನ್ನು ಸ್ಪಷ್ಟವಾಗಿ ಹೇಳಿದ್ದೀರ. ಗಂಡು ಏನ್ನನ್ನಾದರೂ ಆರೋಪ ಮಾಡಬಹುದು, ಹೆಣ್ಣು ಅದನ್ನೇ ಮಾಡಿದರೆ ದೊಡ್ಡ ಗದ್ದಲವೇ ಆದೀತು. ಭಾರತದಂತ ದೇಶದಲ್ಲಿ ಮಹಿಳೆಯರು ಇದಕ್ಕೆ ಒಗ್ಗಿ ಹೋಗಿದ್ದಾರೆ, ಕೆಲವೇ ಮಂದಿ ಇದರ ಹೊರತಾಗಿರೋದು. ಮನೆಯಲ್ಲಿ ಹೆಂಡಿತಿ ಎಷ್ಟೇ ಗಯ್ಯಾಳಿಯಾದರೂ, ಹೊರಜಗತ್ತಿಗೆ ಆಕೆ ಗಂಡನ ಹದ್ದುಬಸ್ತಿನಲ್ಲಿ ಇರುವಂತೆ ನಟಿಸುತ್ತಾಳೆ, ತನ್ನ ಗಂಡನ್ನನ್ನು ಇನ್ನೊಬ್ಬರ ಮುಂದೆ ಹೀಯಾಳಿಸುವ ಕೆಲಸ ಮಾಡುವುದಿಲ್ಲ.

  12. kirandesai

    purushapradhaana jagatininda bere enannu apekshisalu saadhya.jaya bhaaduri tumbaa avamanavannu sahisiddale endu kelipattiddene. aadare sansaara mattu makkala bhavishyada kaarana hennu avamaanavannu sahisikollutaale

  13. prakash mithra

    ಎಲ್ಲಿಯವರೆಗೆ ಹೆಣ್ಣು ಆರ್ಥಿಕವಾಗಿ ಸ್ವಾವಲಂಬಿಯಾಗುವುದಿಲ್ಲವೋ ಅಲ್ಲಿಯವರೆಗೆ ಇದು ಅನಿವಾರ್ಯ…..
    ಅಳಿಯಕಟ್ಟು ಸಂಪ್ರದಾಯವಿರುವ ಮನೆ ಅಳಿಯಂದಿರನ್ನು ಖಾಸಗಿಯಾಗಿ ಮಾತನಾಡಿಸಿ ನೋಡಿ … ಅವರ ಅನುಭವಗಳೂ ಇದಕ್ಕಿಂತ ಭಿನ್ನವಾಗೇನಿರುವುದಿಲ್ಲ ….

  14. Mahesh

    ಸತ್ಯದ ಘಟನೆಗಳನ್ನು ಸ್ಪಷ್ಟವಾಗಿ ಹೇಳಿದ್ದೀರ…..

  15. ಜಿ.ಎನ್ ನಾಗರಾಜ್

    ಪುರುಷರೇ ಸೇರಿದ ಗುಂಪುಗಳಲ್ಲಿನ ಜೋಕ್ ಗಳ ಬಗ್ಗೆ ಮಾತನಾಡುತ್ತಾ ಇದ್ದೀರಿ. ಅದೇಕೆ ?ಮಹಿಳೆಯರೇ ಮುಕ್ಕಾಲು ಮೂರು ವೀಸೆ ಪಾಲು ಓದುಗರಾಗಿರುವ ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಇಡೀ ಪುಟ ಜೋಕ್ ಗಳು ಬರುತ್ತಿದ್ದವು, ಅದರಲ್ಲಿ ಬಹು ಭಾಗ ಮಹಿಳೆಯರ ಬಗ್ಗೆಯೇ ಇರುತ್ತಿತ್ತು. ಮನೆಯ ಅಡಿಗೆ, ಪಾತ್ರೆ ತೊಳೆಯುವುದು ಬಟ್ಟೆ ಒಗೆಯುವುದು ಇತ್ಯಾದಿಗಳನ್ನು ಮಾಡುವ ಗಂಡಸರು ಹೆಣ್ಣಿಗರೆಂದು, ಹೆಂಗಸರ ಸೀರೆ ಒಗೆಯುವವರೆಂದು ಗಂಡಸರಿರಲಿ ಹೆಂಗಸರೂ ಕೂಡ ಹಾಸ್ಯ ಮಾಡಿಕೊಂಡು ನಗುತ್ತಾರೆ.ನನ್ನದೇ ಅನುಭವ ನೋಡಿ. ನಾನು ಈ ಕೆಲಸಗಳನ್ನೆಲ್ಲ ಮಾಡತೊಡಗಿದೆ. ಇದರ ಬಗ್ಗೆ ಆ ರಸ್ತೆಯ ಹೆಂಗಸರು ಗುಸು ಗುಸು ಮಾತನಾಡಿಕೊಳ್ಳತೊಡಗಿದ್ದಾರೆಂದು ಕಿವಿಗೆ ಬಿತ್ತು. ಕುತೂಹಲದಿಂದ ಅಂತಹ ಸಮಯವನ್ನು ಅವರು ಕಾಯತೊಡಗಿದರು. ಅವರ ಕಷ್ಟ ತಪ್ಪಿಸಲು ನಾನು ಮನೆಯ ಹೊರಗೆ ಬಂದು ಎಲ್ಲರಿಗೂ ಕಾಣುವಂತೆ ಈ ಕೆಲಸಗಳನ್ನು ಮಾಡತೊಡಗಿದೆ.ತಿಂಗಳಲ್ಲಿ ಹಲವಾರು ಬಾರಿ ಪ್ರವಾಸ ಮಾಡುವ, ಇತರರ ಮನೆಯಲ್ಲಿ ಊಟ ಮಾಡುವ ನಾನು ಹೋದಲ್ಲೆಲ್ಲ ನನ್ನ ತಟ್ಟೆಯನ್ನು ನಾನೇ ತೊಳೆಯುತ್ತೇನೆ. ಆಗೆಲ್ಲ ಮನೆಯ ಹೆಂಗಸರ ಜೊತೆ ವಾಗ್ವಾದ ನಡೆಸಿಯೇ ಈ ಕೆಲಸ ಮಾಡಬೇಕಾಗುತ್ತದೆ. ಆ ಎಲ್ಲ ಸಮಯದಲ್ಲಿ ಮನೆಯ ಹೆಂಗಸರಿಗೆ, ಗಂಡಸರಿಗೆ ಗಂಡಸರು ಅಡಿಗೆ ಮನೆಯ ಕೆಲಸ ಮಾಡಬೇಕೆಂಬ ಬಗ್ಗೆ ಒಂದು ಉಪನ್ಯಾಸ ನೀಡಿಯೇ ಸಿದ್ದ.ಈ ಕೆಲಸಗಳನ್ನು ಮಾಡದಿದ್ದರೆ ಗಂಡಸರ ಬೆರಳು, ಕೈ ಸೆಡೆತುಕೊಳ್ಳತ್ತೆ,ಹೆಂಗಸರ ಮೂಳೆಗಳು ಸವೆದು ಹೋಗತ್ತೆ .ಇಬ್ಬರಿಗೂ ನಷ್ಟ ಎಂದು.ಹೆಂಗಸರಿಗೆ ನಿಮ್ಮ ಗಂಡು ಮಕ್ಕಳು ಹೆಣ್ಣು ಮಕ್ಕಳಷ್ಟೇ ಕೆಲಸ ಮಾಡುವಂತೆ ಮಾಡಿ ಎಂದು. ನಾನು ಆ ಮನೆಗೆ ಮತ್ತೆ ಹೋದಾಗ ನಾನು ಇರುವವರೆಗೂ ಗಂಡ ಮನೆಕೆಲಸದಲ್ಲಿ ಸಹಾಯ ಮಾಡುವವನಂತೆ ಓಡಾದುವುದು ಬಿಟ್ಟು ಬೇರೆ ಏನೂ ಪ್ರಯೋಜನ ಆದಂತೆ ಕಾಣುತ್ತಿಲ್ಲ. ಪುರುಷಾಧಿಪತ್ಯ ವ್ಯವಸ್ಥೆಯ ಮುಖ್ಯ ಲಕ್ಷಣ ಮನೆಯ ಹೊರಗೆ ಮತ್ತು ಒಳಗೆ ಪುರುಷರ ಆಡಳಿತ ಮತ್ತು ಅದನ್ನು ಮಹಿಳೆಯರು ಒಪ್ಪಿಕೊಳ್ಳುವ ಅನಿವಾರ್ಯತೆ ಮತ್ತು ಅದರ ಇಂಟರ್ನಲೈಸೇಷನ್. ಈ ಮನೋಭಾವ ಹೇಗೆ ಸರ್ವವ್ಯಾಪಿಯಾಯಿತು,ಈ ಅಧಿಪತ್ಯ ಹೇಗೆ ಅಸ್ತಿತ್ವಕ್ಕೆ ಬಂತು, ಅದನ್ನು ತೊಡೆಯುವುದು ಹೇಗೆ ಎಂಬ ಬಗ್ಗೆ ಚರ್ಚೆ ಬೆಳೆಯದೆ ಈ ಪರಿಸ್ಥಿತಿ ಬದಲಾಗುವುದಿಲ್ಲ. ವ್ಯಕ್ತಿಗತ ಪ್ರಯತ್ನ ಮಾಡುವಾಗಲೇ ಸಾಮೂಹಿಕವಾಗಿ ಇಡೀ ಸಮಾಜ ಪ್ರಯತ್ನ ಮಾಡದೆ ಪರ್ಯಾಯವಿಲ್ಲ.

  16. samyuktha

    Nanagoo ee vichaara sakashtu tale tindide!! 😀 good writing….

  17. ಸತೀಶ್ ನಾಯ್ಕ್

    ನಾನು ಎಂಥಾ ಸಮಯದಲ್ಲಿ ನನ್ನ ಫೇಸ್ಬುಕ್ ಸ್ಟೇಟಸ್ ಒಂದರಲ್ಲಿ ಈಗ ಇಲ್ಲಿ ನೀವು ಪ್ರಸ್ತಾಪಿಸಿರುವಂಥ ವಿಚಾರದ ಕುರಿತಾಗಿ ಸಂಬಂಧ ಪಟ್ಟ ಜೋಕ್ ಒಂದನ್ನ ಹಾಕಿ ಬಿಟ್ಟೆನಲ್ಲ ಅನ್ನೋ ಒಂದು ಪಶ್ಚಾತಾಪಕ್ಕೆ ಬಂದು ಈ ಕಾಮೆಂಟ್ ಅನ್ನ ಕಾಮೆಂಟಿಸಿರುತ್ತೇನೆ..
    ನಿಮ್ಮ ಈ ಲೇಖನವನ್ನ ನಿನ್ನೆಯೇ ನಾನು ಓದಿದ್ದಿದ್ರೆ ಇಂಥಾ ಒಂದು ಪೋಸ್ಟ್ ಹಾಕುವ ಕಡೆ ಯೋಚನೆಯನ್ನ ಕೂಡಾ ಮಾಡ್ತಾ ಇರ್ಲಿಲ್ಲ.
    ವಾಸ್ತವವಾಗಿ ನೋಡಿದ್ರೆ.. ಅತಿಯಾಗಿ ತನ್ನ ಹೆಂಡತಿಯನ್ನ ಪ್ರೀತಿಸೋ ವ್ಯಕ್ತಿ ಮಾತ್ರವೇ ತನ್ನ ಹೆಂಡತಿಯನ್ನ ಯಾವುದೇ ಈಗೋ ಇಲ್ಲದೆ ಅವಳಿಗೂ ನೋವಾಗದ ಹಾಗೆ.. ಅವರಿಬ್ಬರಿಗೂ ಕಚಗುಳಿ ಇಡುವ ಹಾಗೆ ಇಂಥಾ ಕಾಲೆಳೆಯುವಿಕೆ ಒಂದನ್ನ ಪರಸ್ಪರ ಮಾಡಿಕೊಳ್ಳೋ ದಂಪತಿಗಳಿಂದಲೇ ಇಂಥಾ ಜೋಕ್ ಗಳು ಚಾಲ್ತಿಗೆ ಬಂದಿರಬಹುದೇನೋ. ಮತ್ತು ಅಂತಹ ಕಾರಣಗಳಿಂದಷ್ಟೇ ಇಂಥಾ ಜೋಕ್ ಗಳು ಹುಟ್ಟಿರಬಹುದು. ಅದು ಕೂಡಾ ಇಂಥಾ ಜೋಕ್ ಗಳು ಪರಸ್ಪರ ತಮ್ಮಿಬ್ಬರ ನಡುವೆ ವಿನಿಮಯ ಆಗಿದ್ದರೆ ಖಂಡಿತ ಹೊರ ಜಗತ್ತಿಗೆ ಇವು ಪರಿಚಯ ಆಗೋ ಸಾಧ್ಯತೆಗಳು ಇರಲಿಕ್ಕಿಲ್ಲವೇನೋ. ಯಾವಾಗ ನಮ್ಮ ಆತ್ಮೀಯ.. ನಮ್ಮ ತದ್ರೂಪು.. ನಾವೇ ಅಂದುಕೊಳ್ಳುವಂಥ ಕೆಲವೊಂದು ಅತಿ ಆತ್ಮೀಯ ಸಂಬಂಧಗಳ ಎದುರು ಯಾವುದೇ ಎಗ್ಗಿಲ್ಲದೆ ಇಂಥಾ ಪರಸ್ಪರ ಕಾಲೆಳೆಯುವಿಕೆಯನ್ನ ನಡೆಸಿಕೊಳ್ತೆವೋ ಅಲ್ಲಿ ಇವು ಜಗಜ್ಜಾಹೀರಾಗಿರಬಹುದು.
    ಯಾವುದೋ ಒಂದು ವಿಶೇಷ ಸಮಾರಂಭ.. ಒಂದೇ ಕಡೆ ಕೆಲಸ ಮಾಡುವ ಅತೀ ಆತ್ಮೀಯ ಸ್ನೇಹಿತರಿಬ್ಬರು ತಮ್ ತಮ್ಮ ಹೆಂಡತಿಯರೊಡನೆ ಒಂದು ಕಡೆ ಒಂದು ಕೂಟದಲ್ಲಿ ಸೇರಿದಾಗ ಖಂಡಿತವಾಗಿಯೂ ಇಂಥದ್ದೊಂದು ಕಾಲೆಳೆಯುವಿಕೆ ಜರುಗೇ ಜರುಗುತ್ತದೆ. ಆದರೆ ಅಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಕೇವಲ ತನ್ನ ಪ್ರೀತಿ ಪಾತ್ರರಾದವರನ್ನ ಛೇಡಿಸುವ ಸಲುವಾಗಿಯಷ್ಟೆ ಇಂಥಾ ಕಾಲೆಳೆಯುವಿಕೆ ಹುಟ್ಟಿ ಕೊಳ್ಳಲು ಸಾಧ್ಯ. ಸಣ್ಣ ಸಣ್ಣ ಜಗಳ ಮತ್ತು ಹುಸಿಕೊಪದಲ್ಲಿ ಪ್ರೀತಿ ಜಾಸ್ತಿ ಅನ್ನೋ ಮಾತಿದೆ ನೋಡಿ ಹಾಗಾಗಿ. ಇನ್ನೊಂದು ವಿಚಾರ ಅಂತಂದ್ರೆ.. ಸಂಸಾರದ ವಿಚಾರಗಳ ಸಮೇತ ಎಲ್ಲಾ ವಿಚಾರಗಳನ್ನ ಯಾವುದೇ ಎಗ್ಗಿಲ್ಲದೆ ವಿನಿಮಯ ಮಾಡಿಕೊಳ್ಳುವಂಥವರಷ್ಟೇ ಅಷ್ಟು ಆತ್ಮೀಯ ಮಾತುಕತೆಗೆ ಅರ್ಹ. ಅಲ್ಲಿಂದ ಶುರುವಾದ ಇಂಥಾ ಗಂಡ ಹೆಂಡತಿಯರ ಜೋಕ್ ಗಳು ಇಲ್ಲಿಯ ತನಕ ಚಾಲ್ತಿಯಲ್ಲಿರಬಹುದು. ವಿಷಾದ ಅಂದ್ರೆ ಕೇವಲ ಹೆಂಡತಿಯರನ್ನ ಅಥವಾ ಹೆಣ್ಣನ್ನ ವಿಲನ್ ಆಗಿ ತೋರಿಸುವಂಥಾ ಜೋಕ್ ಗಳಿಗಷ್ಟೇ ಮನ್ನಣೆ.. ಅಂಥಾ ಜೋಕ್ ಗಳಿಗಷ್ಟೇ ಪ್ರಾಧಾನ್ಯತೆ ಸಿಕ್ತಾ ಇರೋದ್ರಿಂದ ಗಂಡಸರನ್ನ ಛೇಡಿಸುವಂಥ ಜೋಕ್ ಗಳು ಸಿಕ್ಕದೆ ಇರಬಹುದು. ಪುರುಷ ಪ್ರದಾನ ಸಮಾಜ ನೋಡಿ ನಮ್ಮ ಅಹಮ್ಮಿಗೆ ಪೆಟ್ಟು ಬೀಳಬಾರದು ಅನ್ನೋ ಸಣ್ಣ ಭಯ ಮತ್ತು ಇಂತಹವನ್ನ ನೀವುಗಳು (ಹೆಣ್ಣು) ಅಷ್ಟು ಗಂಭೀರವಾಗಿ ತೆಗೆದು ಕೊಳ್ಳಲಾರಿರಿ.. ಇಂಥವು ನಿಮ್ಮನ್ನ ಭಾದಿಸವು ಅನ್ನೋ ಉಡಾಫೆ ಇಂದಲೂ ಇವುಗಳ ಬೆಳವಣಿಗೆ ನಿರಂತರ ಆಗಿರಬಹುದು. ಮಾಧ್ಯಮಗಳು ಕೂಡಾ ಇದೆ ತಪನ್ನ ಮಾಡ್ತಿರೋದ್ರಿಂದ ಇದು ಇನ್ನೂ ಜೀವಂತವಾಗಿದೆ ಅಂದ್ರೂ ತಪ್ಪಿಲ್ಲ. ಇನ್ನು ನೀವು ಕೇಳಿದ್ರಲ್ಲಾ ..?? ಇನ್ನು ನಿಮ್ಮುಂದೆ ನಾನೂ ಸೇರಿ ಯಾರಾದ್ರೂ ಇಂಥ ಜೋಕ್ ಹಾಕ್ತಾರಾ ನೋಡಿ..?? ನಿಮ್ಮ ಹಾಗೆ ಎಲ್ಲರೂ ಕೇಳಿದಲ್ಲಿ ಇದು ನಿಂತರೂ ನಿಲ್ಲಬಹುದು. ಅಂತ ಪ್ರಯತ್ನಗಳಾಗೋದು ಕಡಿಮೆಯೇ.. ಗುಲಗಂಜಿ ಕದ್ದಿದ್ದಕ್ಕೆ ಹೋದರೂ ಕೂಡಾ ಮಾನ ಮಾನವೇ ನೋಡಿ ಹಾಗಾಗಿ. ನಿಮ್ಮ ಹಾಗೆ ಎಲ್ಲರೂ ಇದನ್ನ ಪ್ರಶ್ನಿಸೋದಾದ್ರೆ.. ನಾವು ನಿಮ್ಮ ಮೇಲೆ ಜೋಕ್ ಗಳನ್ನ ಕಟ್ಟಿ ಹರಿ ಬಿಡ್ತೀವಿ ಅಂತ ಹೆದರಿಸೋದಾದ್ರೆ.. ಇದಕ್ಕೊಂದು ತಕ್ಕ ರೀತಿಯ ಲಗಾಮು ಹಾಕಲು ಸಾಧ್ಯ. ಗೌರವದ ಭಯ.. ಮಾನದ ಭಯ ಅನ್ನುವುದು ಮನುಶ್ಯನನ್ನ ಕೆಲವು ಕೆಲಸಗಳನ್ನ ಮಾಡದಂತೆ ತಡೆಯಬಹುದು.
    ವಿಷಯ ಅಂತಂದ್ರೆ ತಮ್ಮ ಆತ್ಮೀಯರ ಹೊರತಾಗಿ ಯಾವ ಮನುಷ್ಯನೂ ತಮ್ಮ ವಿಚಾರಗಳನ್ನ ಇನ್ನೊಬ್ಬರ ಮುಂದೆ ಹರವಿಕೊಳ್ಳಲಾರ. ತನ್ನ ಹೆಂಡತಿಯ ಬಗ್ಗೆ ತನ್ನಾತ್ಮೀಯರ ಬಳಿ ಒಬ್ಬ ಮನುಷ್ಯ ಅವನ ವಿಚಾರಗಳನ್ನ ಪ್ರಸ್ತಾಪಿಸಿಕೊಳ್ಳುತ್ತಾನೆ ಅನ್ನೋದಾದರೆ ಅದು ಅವಳ ಕುರಿತಾಗಿನ ಅತಿಯಾದ ಪ್ರೀತಿ ಇಂದ ಅಥವಾ ಜಿಗುಪ್ಸೆ ಇಂದಷ್ಟೇ ಸಾಧ್ಯ. ಅದರಲ್ಲೂ ಹೆಂಡತಿಯ ಮೇಲೆ ಕೊಪವಿರುವ, ತಾತ್ಸಾರವಿರುವ, ಜಿಗುಪ್ಸೆ ಇರುವ ಯಾವ ಮನುಷ್ಯನೂ ಕೂಡಾ ಇಂಥಾ ಜೋಕ್ ಗಳನ್ನ ಹುಟ್ಟು ಹಾಕೋ ಪ್ರಯತ್ನ ಮಾಡುವುದಿಲ್ಲ. ಆ ನೆಪದಲ್ಲಿ ಮತ್ತೆ ಮತ್ತೆ ಅವನ ಹೆಂಡತಿಯ ನೆನಪನ್ನ ಅವನು ಮಾಡಿಕೊಳ್ಳುವಂಥ ಪ್ರಯತ್ನ ಅವನು ಮಾಡುವುದಿಲ್ಲ. ಅವನ ಹೆಂಡತಿಯ ಕುರಿತಾಗಿನ ತಾತ್ಸಾರತೆಯನ್ನ ಯಾರೂ ಕೂಡಾ ಈ ರೀತಿ ವಿನೋದ ಮನಸ್ತಿಥಿಯಿಂದ ಮತ್ತೊಬ್ಬರ ಬಳಿ ಚರ್ಚಿಸಿಕೊಳ್ಳುವ ಸಾಧ್ಯತೆಗಳೂ ಕಮ್ಮಿಯೇ. ಹೆಂಡತಿಯ ಮೇಲೆ ಕೋಪವುಳ್ಳ ವ್ಯಕ್ತಿಯ ವಿಚಾರಗಳು ಕೋಪದ ಮೂಲಕವೇ ಹೊರಬರುವಂಥದ್ದು ರೂಡಿಕೆ. ನಾನು ಅಂತಹವುಗಳನ್ನ ಕಂಡು ಬೆಳೆದಿದ್ದೇನೆ. ಆದ್ರಿಂದ ಇಂಥಾ ಜೋಕ್ ಗಳು ಒಂದು ಆಹ್ಲಾದಕರ ವಾತಾವರಣದಲ್ಲಿ ಹುಟ್ಟಿರಲಿಕ್ಕೆ ಸಾಧ್ಯ. ಅವು ಪ್ರಚಲಿತಕ್ಕೆ ಬಂದು ಹೀಗೆ ವಿಶ್ವ ವ್ಯಾಪಿಯಾಗಿ ವ್ಯಾಪಿಸಿಕೊಂಡಿರಬಹುದು.
    ನಮ್ಮಲ್ಲಿ ಸರ್ದಾರ್ ಜೋಕ್ ಗಳನ್ನ ಅದೆಷ್ಟು ಜನ ಈಗಲೂ ಬಳಸುತ್ತಿಲ್ಲ..?? ಮನೆಗೊಬ್ಬರಂತೆ ಸೈನ್ಯಕೊಬ್ಬರನ್ನ ಮೀಸಲಿಡುವ ವೀರ ಪರಂಪರೆ ಸರ್ದಾರ್ ಗಳದ್ದು.. ಅವರ ವೀರತ್ವವನ್ನ ಛೇಡಿಸಲು ಬ್ರಿಟೀಷರು ಮಾಡ್ಕೊಂಡ ಸುಲಭ ವಿಧಾನ ಅವರ ಜೋಕ್ ಗಳನ್ನ ಸೃಷ್ಟಿಸಿದ್ದು. ದುರಂತ ಅಂದ್ರೆ ಇದು ಗೊತ್ತಿದ್ದೂ ಕೂಡಾ.. ಭಾರತೀಯರಾಗಿ ನಾವುಗಳು ಅದೆಷ್ಟೋ ದಶಮಾನಗಳಷ್ಟು ಹಿಂದಿನ ಈ ಪದ್ದತಿಯನ್ನ ಬ್ರಿಟೀಷರಿಂದ ಮುಕ್ತರಾದರೂ ನಾವಿನ್ನೂ ಮರೆತಿಲ್ಲ. ಇದು ಗೊತ್ತಿದ್ದೂ ಕೂಡಾ ಇಂದಿಗೂ ಸರ್ದಾರ್ ಜೋಕ್ ಗಳನ್ನ ಚಾಲ್ತಿಯಲ್ಲಿ ಇಟ್ಕೊಂಡಿದ್ದೀವಿ. ಸರ್ದಾರ್ ಜೋಕ್ ಗಳನ್ನ ಬಳಸಿದವರನ್ನ ಹಿಡಿದು ಒಳಗೆ ಹಾಕ್ತೀವಿ.. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡ್ತೀವಿ ಅನ್ನೋ ಒಂದು ವಾತಾವರಣ ಬರಲಿ ನೋಡೋಣ.. ಆಗ ಇಂಥವುಗಳನ್ನ ಉಪಯೋಗಿಸೋ ಗಂಡೆದೆ ಯಾರಿಗೆ ಇರತ್ತೆ ನೋಡೋಣ. ನಾವು ನಮ್ಮ ವೀರರುಗಳನ್ನ ನಾವೇ ಅವಮಾನಿಸಿಕೊಳ್ಳೋದು ನಮ್ಮನ್ನ ನಾವೇ ಘೋರವಾಗಿ ಅವಮಾನಿಸಿಕೊಂಡಷ್ಟೇ ಸಮವಲ್ಲವೇ..?? ನಮ್ಮ ವೀರತ್ವ ಪ್ರದರ್ಶನ ಕೂಡಾ ನಮ್ಮ ದೇಶಾಭಿಮಾನದ ಸಂಕೇತವಲ್ಲವೇ..??
    ಇಂಥವುಗಳೆಲ್ಲ ನಾವಿನ್ನು ಸಹಿಸಿಕೊಳ್ಳುತ್ತಿರೋ ಕಾರಣಕ್ಕಷ್ಟೇ ಚಾಲ್ತಿಯಲ್ಲಿರೋದು. ಇನ್ನೊಬ್ಬರಿಗೆ.. ಇನ್ನೊಬ್ಬರ ಭಾವನೆಗಳಿಗೆ ಇದರಿಂದ ಖಂಡಿತ ಧಕ್ಕೆ ಬರುವುದಾದರೆ ಇಂಥವುಗಳನ್ನ ತಡೆಯೋದೆ ಸೂಕ್ತ. ಅದು ಮನುಷ್ಯ ಸ್ವಾಭಾವಿಕ ಪರಿಜ್ಞಾನ ಕೂಡಾ. ನಾನು ಪೋಸ್ಟ್ ಮಾಡಿದ ಆ ಜೋಕ್ ಪೋಸ್ಟ್ ಮಾಡುವ ವರೆಗೂ ಕೇವಲ ಜೋಕ್ ಆಗಿಯಷ್ಟೇ ನನ್ನ ಕಣ್ಣಿಗೆ ಕಾಣಿಸಿದ್ದು. ಅದರ ಒಳವಲಯ ಹೊರವಲಯದ ಯಾವ ಪರಿಚಯವೂ ನನಗಿರಲಿಲ್ಲ ನಿಮ್ಮ ಈ ಬರಹ ಓದುವ ತನಕ. ಇನ್ನೊಬ್ಬರ ಆತ್ಮಗೌರವಕ್ಕೆ ಅವರ ಭಾವುಕತೆಗೆ ಧಕ್ಕೆ ತರುವ ಯಾವ ವಿಚಾರವಾದರೂ ಅದನ್ನ ತಡೆ ಹಿಡಿಯುವುದು ಸೂಕ್ತ. ಇಂಥವುಗಳು ಹುಟ್ಟಿಸುತ್ತಿದ್ದ ನಗುವಷ್ಟೇ ಪರಿಚಯವಿತ್ತು ನೋವುಗಳ ಪರಿಚಯವಿರಲಿಲ್ಲ.. ಇನ್ನು ನೀವು ಮಾಡಿಸಿದೆರಲ್ಲಾ ಇಂಥಾ ಜೋಕ್ ಗಳಿಗೊಂದು ದೊಡ್ಡ ನಮಸ್ಕಾರ. ಭಾರತಿ ಅಕ್ಕ.. ಅಗತ್ಯವಾಗಿ ಚರ್ಚೆ ಆಗಲೇ ಬೇಕಿದ್ದ ವಿಚಾರವನ್ನ ಬಹಳ ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದೀರಾ ಖುಷಿಯಾಯ್ತು. ಹಾಗೆ ಪಶ್ಚಾತಾಪ ಕೂಡ.. 🙂
    ಇನ್ನು ಹೆಂಡತಿಯ ಜೊತೆ ಬಟ್ಟೆ ತೊಳೆಯುವುದು.. ಪಾತ್ರೆ ತೊಳಿಯುವುದು.. ಅಡುಗೆ ಮಾಡುವಾಗ ಅವಳಿಗೆ ಸಹಾಯ ಮಾಡೋದನ್ನ ಪ್ರೀತಿಯ ಇನ್ನೊಂದು ಪರಿ ಅಂತ ಅಂದುಕೊಳ್ಳುವ ಯಾರಿಗಾದರೂ ಅವು ಸ್ಥಾನ-ಮಾನವನ್ನ ಭಾದಿಸುವ ವಿಚಾರಗಳು ಅನ್ನುವುದು ಕಾಡುವುದಿಲ್ಲವೇನೋ. ಮನುಷ್ಯ ಪ್ರೀತಿಸುವುದನ್ನ ಕಲಿತಲ್ಲಿ ಸ್ಥಾನ ಮಾನಗಳ ವಿಚಾರ ಪರಿಗಣನೆಗೆ ಬರುವುದೇ ಇಲ್ಲ. ನಾವು ಪ್ರೀತಿಸುವುದರಲ್ಲಿ ತಾರತಮ್ಯ ಮಾಡ್ತಾ ಇರೋದ್ರಿಂದಲೇ ನಮ್ಮ ಸ್ತಾನ ಮಾನಗಳಲ್ಲಿ ಏರು ಪೇರಾಗ್ತಾ ಇರೋದಲ್ವೆ..?? ಬ್ಯಾಚಲರ್ ಗಳಾಗಿ ಇದನ್ನೆಲ್ಲಾ ಮಾಡಿಕೊಳ್ಳುವಾಗ ನಮಗೆ ಕಾಣದ ಮಾನದ ಪ್ರಶ್ನೆ ಮದುವೆಯಾದ ಒಡನೆ ಹೆಂಡತಿ ಇರುವಾಗ ಬರುತ್ತದೆಂದರೆ ಅದೂ ಒಂದು ಥರದ ಮೂಢ ನಂಬಿಕೆಯೇ ಸರಿ.

Trackbacks/Pingbacks

  1. ಒಂದು ಫೇಸ್‌ಬುಕ್ ಸ್ಟೇಟಸ್ ಮತ್ತು ಒಂದು ’ಸಾರಿ’ « ಅವಧಿ / avadhi - [...] ಭಾರತಿ ಅವರು ಅವಧಿಯಲ್ಲಿ ಬರೆದ  ”ಜಯಾ ಬಾಧುರಿ ’ಪತಿಯರೆಲ್ಲಾ ಪ್ರಿಯಕರರಲ್ಲ’ ...” ಲೇಖನ ಓದಿ ಆ ಲೇಖನಕ್ಕೆ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading