ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿ ಹಾಡು : 'ಅವನು ನಮ್ಮಪ್ಪ ಅಲ್ಲ, ಅಂಕಲ್…'

ಭಾರತಿ ಬಿ ವಿ

1978ನೇ ಇಸವಿ. ಹೊಸದಾಗಿ ಬಂದಿದ್ದೆವು ಈ ಮಹಾನಗರಿಗೆ. ಒಂದು ಜೊತೆಗೆ ಇನ್ನೊಂದು ರೋಡ್ ಮಾತ್ರ ಇದ್ದಂತ ಊರುಗಳಲ್ಲಿ ಬೆಳೆದ ನಾನು, ಆಗ ತಾನೇ ಹುಟ್ಟಿದ ಮಗುವಿನ ಹಾಗೆ ಈ ಮಹಾನಗರವನ್ನು ಬೆರಗಿನಿಂದ ನೋಡುತ್ತಿದ್ದೆ. ಯಾರೆಂದರೆ ಯಾರೂ ಪರಿಚಯವಿಲ್ಲ. ಹಾಗಾಗಿ ಬೆಳಿಗ್ಗೆ ಸ್ಕೂಲಿಗೆ ಹೋದವಳು ಸಂಜೆ ವಾಪಸ್ಸಾಗಿ ಮನೆಯ ಮುಂದಿನ ಗೋಡೆಯ ಮೇಲೆ ಕೂತುಕೊಂಡಿದ್ದೆ. ಸಂತೆಯೊಳಗಿನ ಏಕಾಂತ ನನ್ನದು. ಕಾಂತಿ ಏನು ಮಾಡ್ತಿರ್ತಾಳೆ ಇಷ್ಟು ಹೊತ್ತಿಗೆ? ನಾನು ಇಲ್ಲ ಅಂದಮೇಲೆ ಪಾಪ ಅವಳೂ ನನ್ನ ಹಾಗೇ ಕೂತಿರುತ್ತಾಳೋ ಏನೋ ಅಂತ ಕಲ್ಪನೆ ಮಾಡಿಕೊಂಡು ಹಿಂದಿನ ಊರಿನಲ್ಲಿದ್ದ ಗೆಳತಿಯ ನೆನಪಿನಲ್ಲಿ ವಿಷಾದಿಸುತ್ತ ಕೂತಿದ್ದೆ. ಯಾರಿಗಾದರೂ ನಾವಿಲ್ಲದೇ ಜೀವನ ನಡೆಯುವುದೇ ಇಲ್ಲ ಅನ್ನುವ ಭ್ರಮೆ ಎಂಥ ಸುಖದ ಉತ್ತುಂಗಕ್ಕೇರಿಸುತ್ತೆ ಅಲ್ಲವಾ … ಹಾಳು ಮನಸ್ಸು!
ಹೀಗೆ ಅಂದುಕೊಳ್ತಿರುವಾಗಲೇ ಆ ಮೂಲೆಯ ತಿರುವಿನಿಂದ ಒಬ್ಬ ಹುಡುಗಿ ಬಳುಕುತ್ತಾ ಬರೋದು ಕಾಣಿಸಿತು. ನೀಲಿ ಸ್ಕರ್ಟ್ ಮತ್ತು ಬಿಳಿ ಶರ್ಟ್ ಹಾಕಿದ್ದಳು. ಅವಳ ನಡಿಗೆಯ ಸ್ಟೈಲ್ ನನ್ನನ್ನು ತುಂಬ ಆಕರ್ಷಿಸಿತು. ಮಾಡೆಲ್‌ಗಳ ಥರ ನಡೆಯುತ್ತಿದ್ದಳು. ಹಳ್ಳಿಯಲ್ಲಿ ಬೆಳೆದು ಅಡಸಾ ಬಡಸಾ ಶಂಕರ್‌ನಾಗ್ ಹಾಗೆ ನಡೆಯುತ್ತಿದ್ದ ನನಗೆ ಈ ಒನಪು, ವಯ್ಯಾರ ಯಾವುದೂ ಆಗಿ ಬರಲೇ ಇಲ್ಲ ಅವತ್ತಿಗೂ, ಇವತ್ತಿಗೂ! ಹಾಗಾಗಿ ಅವಳ ನಡಿಗೆ ನನ್ನನ್ನು ಸೆಳೆಯಿತು. ಯೂನಿಫ಼ಾರ್ಮ್ ಹಾಕಿದ್ದರೂ ಕಾಲಿಗೆ ಮಾತ್ರ ಶೂ ಹಾಕಿರಲಿಲ್ಲ. ಪುಟ್ಟ ಹೀಲ್ಸ್ ಇದ್ದ ಕೆಂಪು ಚಪ್ಪಲಿ ಹಾಕಿದ್ದಳು… ಬೆಲ್ಟ್ ಇರುವಂಥದ್ದು. ತುಂಬ ಉದ್ದವಿದ್ದ ನನಗೆ ಹೀಲ್ಸ್ ಚಪ್ಪಲಿ ತೊಡುವ ಭಾಗ್ಯವೇ ಇರಲಿಲ್ಲ. ಹಾಗಾಗಿ ಅಷ್ಟು ಚೆಂದದ ಹೀಲ್ಸ್ ಚಪ್ಪಲಿಯ ಒಡತಿಯ ಕಡೆ ಗಮನ ಹರಿಸಿದೆ. ಎರಡು ಜಡೆ ಹಾಕಿದ್ದಳು. ರೇಷ್ಮೆಯಂತ ಕೂದಲು, ಕೋಲು ಮುಖ. ನಾನು ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡುತ್ತಿದ್ದುದನ್ನು ನೋಡಿ ಹಾಯ್ ಅನ್ನುತ್ತಾ, ನನ್ನ ಕಡೆ ನೋಡಿ ನಕ್ಕು ಮಾತಿಗೆ ನಿಲ್ಲದೇ ಮನೆಯೊಳಗೆ ಹೊರಟಳು. ಮುಂಬಾಗಿಲು ಹಾಕಿತ್ತು. ಅವಳು ಬಾಗಿಲನ್ನು ಚೂರು ಮೆಲ್ಲನೆ ತಳ್ಳಿದವಳೇ ಅದು ತೆಗೆದುಕೊಳ್ಳದಿದ್ದಾಗ ಮುಖ ಚೂರು ಹಿಂಡುತ್ತಾ ಹಿಂದಿನ ಬಾಗಿಲಿನ ಕಡೆ ಹೊರಟಳು. ನನ್ನನ್ನು ಇನ್ನೇನಾದರೂ ಮಾತಾಡಿಸುತ್ತಾಳೇನೋ ಅಂತ ಆಸೆಗಣ್ಣಿಂದ ನೋಡುತ್ತಿದ್ದೆ … ಉಹೂ ಅವಳು ನನ್ನ ಕಡೆಗೆ ನೋಡಲೇ ಇಲ್ಲ. ಅವಳು ಒಳಸೇರಿದ ಹತ್ತು ನಿಮಿಷಕ್ಕೆ ಇನ್ನಿಬ್ಬರು ಸಣ್ಣ ಹುಡುಗಿಯರು ಬಂದು, ಅವರು ಕೂಡಾ ಮುಂಬಾಗಿಲು ಮೆಲ್ಲನೆ ತಳ್ಳಿ ಹಿತ್ತಲ ಬಾಗಿಲ ಕಡೆ ನಡೆದರು. ರಾಧಾ ಹಾಯ್ ಅಂದಿದ್ದಳು. ಆದರೆ ಈ ಇಬ್ಬರೂ ನನ್ನ ಕಡೆ ತಲೆ ಎತ್ತಿ ಸಹಾ ನೋಡಲಿಲ್ಲ …

ದಿನ ಕಳೆಯಿತು. ದಿನಾ ನಾನು ಅಲ್ಲಿ ಕೂತುಕೊಳ್ಳುವುದು ಮತ್ತು ಅವಳು ಹಾಯ್ ಅನ್ನುತ್ತಾ ಹಿಂದಿನ ಬಾಗಿಲಿಂದ ಮನೆ ಸೇರುವುದು ಮಾಮೂಲಾಗಿ ಹೋಯ್ತು. ಅವರು ನನ್ನ ಜೊತೆ ಸ್ನೇಹ ಬೆಳೆಸುತ್ತಾರೇನೋ ಅಂತ ಕಾದೇ ಕಾದೆ. ಅದರ ಸುಳಿವೇ ಕಾಣಲಿಲ್ಲ. ನನಗೆ ಒಬ್ಬಳೇ ಕೂತು ಕೂತು ಸಾಕಾಗಿ ಹೋಗಿ ಇವತ್ತು ಏನಾದರೂ ಮಾಡಿ ಅವರ ಸ್ನೇಹ ಪಡೆದೇ ಬಿಡಬೇಕು ಅಂತ ತೀರ್ಮಾನಿಸಿಬಿಟ್ಟೆ. ಅವರು ಎಂದಿನ ಹಾಗೆ ಹಿತ್ತಲ ಬಾಗಿಲಿಂದ ಒಳಗೆ ಹೋದಮೇಲೆ ನಮ್ಮ ಮನೆಯ ಕಡೆಗಿದ್ದ ಅವರ ಹಿತ್ತಲು ಬಾಗಿಲು ಕಾಣುವ ಹಾಗೆ ನಮ್ಮ ಕಾಂಪೌಂಡಿಗೆ ಒರಗಿ ನಿಂತು ಬಗ್ಗಿ ನೋಡಿದೆ. ಒಳಗೆ ಪೂರಾ ಕತ್ತಲು. ಆ ಕತ್ತಲಿಗೆ ಕಣ್ಣು ಹೊಂದಿಕೊಳ್ಳೋದಿಕ್ಕೆ ಐದು ನಿಮಿಷ ಹಿಡಿಯಿತು. ಆಗ ಗೊತ್ತಾಯಿತು ಅಲ್ಲಿ ಒಬ್ಬ ಅಜ್ಜಿಯೂ ಇದ್ದಿದ್ದು! ಮುಖ ಕತ್ತಲಿನಲ್ಲಿ ಕಾಣಲಿಲ್ಲ. ಮನೆಯ ಒಳಗೆಲ್ಲ ಆ ಸಂಜೆಗೇ ತುಂಬು ಕತ್ತಲು ಆವರಿಸಿತ್ತು. ಅಜ್ಜಿ ತಟ್ಟೆಯಲ್ಲಿ ­ಅನ್ನ ಕಲೆಸಿ ಈ ಮೂವರ ಕೈಗೂ ಇಟ್ಟಿತು. ಮೂರೂ ಜನ ಸದ್ದಿಲ್ಲದೇ ಊಟ ತಿನ್ನುತ್ತಿದ್ದರು. ಒಂದು ಸಣ್ಣ ಮಾತು ಕೂಡಾ ಆಡದೇ. ನಮ್ಮ ಮನೆಯಲ್ಲಿ ಊಟದ ಟೇಬಲ್ ಎದುರು ಕೂತರೆ ನಾಯಿಯ ಹಾಗೆ ಅಕ್ಕನ ಜೊತೆ ಕಿತ್ತಾಡುತ್ತಲೋ, ಅಪ್ಪನ ಜೊತೆ ಮುದ್ದುಗರೆಯುತ್ತಲೋ, ಅಮ್ಮನಿಗೆ ಕೊರೆಯುತ್ತಲೋ ಇರುತ್ತಿದ್ದ ನನಗೆ ಮೌನವಾಗಿ ಕೂಡಾ ಮನುಷ್ಯರು ಊಟ ಮಾಡಬಹುದು ಅಂತಲೇ ಗೊತ್ತಿರಲಿಲ್ಲ! ಆ ಅಜ್ಜಿ ಕೂಡಾ ಮೆಲ್ಲನೆ ಪಿಸುಗುಡುವ ದನಿಯಲ್ಲಿ ಮಾತಾಡುತ್ತಿತ್ತು … ಸಾಕಾ, ಬೇಕಾ ಈ ಥರದ ಮಾತುಗಳು ಮಾತ್ರ ಇರಬೇಕು ಅನ್ನುವುದು ನನ್ನ ಊಹೆ. ಮುಖ ಕೂಡಾ ಕಾಣದ ಮಬ್ಬುಗತ್ತಲೆಯಲ್ಲಿ ಊಟ ಮುಗಿಸಿದರು. ತಟ್ಟೆ ಇಡಲು ಆಚೆ ಬಂದವರು ಗೋಡೆಗೆ ಒರಗಿ ನಿಂತಿದ್ದ ನನ್ನನ್ನು ಕಂಡು ಆಶ್ಚರ್ಯದ ಮುಖ ಮಾಡಿದರು. ಆಟಾಡಕ್ಕೆ ಬರ್ತೀರಾ? ನನ್ಗೆ ಯಾರೂ ಫ಼್ರೆಂಡ್ಸೇ ಇಲ್ಲ ಅಂದೆ ಕರುಣಾಜನಕವಾಗಿ. ಅವರೆಲ್ಲ ಮುಖ ಮುಖ ನೋಡಿಕೊಳ್ಳುತ್ತಾ ಯೂನಿಫಾರ್ಮ್ ಬದಲಿಸಿ ಬರುವುದಾಗಿ ಹೇಳಿ ಒಳಗೆ ಓಡಿದರು. ಅವರ ಉತ್ಸಾಹ ನೋಡಿದರೆ ಅವರಿಗೂ ಯಾರೂ ಸ್ನೇಹಿತೆಯರಿದ್ದ ಹಾಗೆ ಕಾಣಲಿಲ್ಲ. ಹತ್ತೇ ನಿಮಿಷದಲ್ಲಿ ಎಲ್ಲರೂ ಜೈಲಿನಿಂದ ಪಾರಾದವರ ಹಾಗೆ ಈಚೆ ಬಂದರು. ಮೊದಲನೆಯವಳು ‘ಯಾವ ಸ್ಕೂಲು?’ ಅಂತ ತಮಿಳು ಸ್ಟೈಲಿನ ಕನ್ನಡದಲ್ಲಿ ಕೇಳಿದಳು, ಹೇಳಿದೆ. ಹೆಸರು? ಅಂದಳು. ಭಾರತಿ ಅಂದೆ. ಪಾರತಿಯಾ ಅಂದಳು. ಮತ್ತೆ ತಿದ್ದಿದೆ. ಅವಳ ಹೆಸರು ರಾಧಾ ಅಂತ ಪರಿಚಯ ಮಾಡಿಕೊಂಡಳು. ಇನ್ನಿಬ್ಬರ ಹೆಸರು ರಮಾ ಮತ್ತು ಸೆಲ್ವಿ ಅಂದಳು. ಅಣ್ಣ ಒಬ್ಬ ಇದ್ದಾನೆ ಅಂದಳು. ಎಲ್ಲಿದಾನೆ ಅವನು? ನಾನು ನೋಡೇ ಇಲ್ವಲ್ಲಾ ಅವನನ್ನ ಅಂದೆ. ಅವನು ಮನೆಗೆ ಲೇಟಾಗಿ ಬರ್ತಾನೆ ದಿನಾ ಅಂದಳು ಸಪ್ಪಗಿನ ದನಿಯಲ್ಲಿ. ನಾನು ಯಾಕೆ? ಅಂದೆ. ಅವಳು ಉತ್ತರಿಸಲಿಲ್ಲ. ನಮ್ಮನೇಲಿ ನಮ್ಮಕ್ಕ, ಅಪ್ಪ, ಅಮ್ಮ ಇದ್ದಾರೆ ಅಂದೆ. ಹಳ್ಳಿಯಿಂದ ಬಂದಿದ್ದು ಅಂದೆ. ಹಾಗೆ ಶುರುವಾಗಿತ್ತು ಸ್ನೇಹ.
ಒಂದು ದಿನ ಸಂಜೆ ಸ್ಕೂಲಿಂದ ಬಂದಾಗ ರಾಧಾ ಮನೆಯ ಬಾಗಿಲಲ್ಲಿ ಕೂದಲು ಒಣಗಿಸುತ್ತ ಕೂತ ಹೆಂಗಸು ಕಂಡರು. ನೀನು ಭಾರತಿ ಅಂತೆ? ನಮ್ಮ ರಾಧಾ ಹೇಳಿದಳು. ಎಲ್ರೂ ಫ಼್ರೆಂಡ್ಸ್ ಆಗಿದೀರಂತೆ. ಹೀಗೇ ಇರಿ, ಆಯ್ತಾ? ಅಂತ ಮಾತಾಡಿಸುತ್ತಾ ನಿಂತರು. ನೀವೇನಾಗಬೇಕು ರಾಧಾಗೆ? ಅಂದೆ. ಅವರು ನಗುತ್ತಾ ಅವಳ ಅಮ್ಮ ಅಂದರು. ಮತ್ತೆ ನೀವು ಕಾಣ್ಲೇ ಇಲ್ವಲ್ಲ ಇಷ್ಟು ದಿನ ಅಂದೆ. ಇಲ್ಲೇ ಇದ್ದೆನಲ್ಲ ಅಂತ ಅನ್ನುವಷ್ಟರಲ್ಲಿ ಮನೆಯ ಮುಂದೆ ಒಂದು ಬೈಕು ಬಂದು ನಿಂತಿತು. ಅದರಿಂದ ಒಬ್ಬ ದಪ್ಪಗಿನ ಗಂಡಸು ಇಳಿದು ಬಂದು ತಮಿಳಿನಲ್ಲಿ ಅವರನ್ನು ಏನೋ ಕೇಳಿದ. ಇವರೂ ಉತ್ತರಿಸುತ್ತ ಒಳಗೆ ಹೊರಟರು. ಬಾಗಿಲು ಮುಚ್ಚಿತು…

ಮತ್ತೆ ಹತ್ತು ನಿಮಿಷ ಕಳೆಯುವಷ್ಟರಲ್ಲಿ ರಾಧಾ ಬಂದಳು. ನಿಮ್ಮಮ್ಮನ ಜೊತೆ ಮಾತಾಡಿದೆ ಇವತ್ತು. ಮಾತಾಡ್ತಾ ಇರುವಾಗ್ಲೇ ನಿಮ್ಮಪ್ಪ ಬಂದ್ರು. ನಿಮ್ಮಮ್ಮ ಹೊರಟೋದ್ರು ಅಂದೆ. ಅವನು ನಮ್ಮಪ್ಪ ಅಲ್ಲ, ಅಂಕಲ್ ಅಂತ ಸಿಟ್ಟಿನ ದನಿಯಲ್ಲಿ ಹೇಳಿ ಹಿಂದಿನ ಬಾಗಿಲಿನ ಕಡೆ ಹೊರಟುಹೋದಳು. ನಾನು ಅವರು ಊಟ ಮಾಡಿ ಬರುವುದನ್ನು ಕಾಯುತ್ತಾ ಕೂತೆ. ಅವಳು ಊಟ ಮುಗಿಸಿ ಬಂದವಳೇ ತನ್ನ ಅಪ್ಪನ ವಿಷಯ ಶುರು ಮಾಡಿದಳು. ನಮ್ಮಪ್ಪ ದುಬಾಯ್‌ನಲ್ಲಿದಾರೆ. ನಾನು ಬೇಗ ಓದು ಮುಗಿಸಿದ್ರೆ ಅಲ್ಲಿಗೆ ಕರೆಸಿಕೊಳ್ತಾರಂತೆ… ಇಲ್ಲಾಂದ್ರೆ ಮದುವೆ ಮಾಡ್ತಾರಂತೆ. ಅದಕ್ಕೇ ನಾನು ಬೇಗ ಓದು ಮುಗಿಸಬೇಕು. ಅಲ್ಲಿಗೆ ಹೋಗ್ಬೇಕು ಅಂದಳು. ರಮಾ ಮಾತಾಡದೇ ಕೂತಿದ್ದಳು. ಸೆಲ್ವಿ ಭರತನಾಟ್ಯದ ಯಾವುದೋ ಭಂಗಿಗಳನ್ನು ಪ್ರಯತ್ನಿಸುತ್ತಾ ನಿಂತಿದ್ದಳು. ಅವರು ಯಾರು ಅಂಕಲ್ ಅಂದೆ. ರಾಧಾ ಬಾಯಿ ಬಿಡುವಷ್ಟರಲ್ಲಿ ಸೆಲ್ವಿ ಅಂಕಲ್ ಹೇಳಿದಾರೆ ನನ್ನ ಭ್ರಮರ ಇದಾರಲ್ಲ .. ಅದೇ ಸಿನಿಮಾ ಸ್ಟಾರು ಅವರ ಡ್ಯಾನ್ಸ್ ಕ್ಲಾಸಿಗೆ ಸೇರಿಸ್ತಾರಂತೆ. ಅಂದಳು. ವಾಯಿ ಮೂಡು ಪಿಶಾಚಿ ಅಂದಳು ರಮಾ. ಸೆಲ್ವಿ ಅವಳ ಮಾತಿಗೆ ಹೋ ಅಂತ ಅಳಲು ಶುರು ಮಾಡಿದಳು. ರಾಧಾ ಸಿಟ್ಟಿಗೆದ್ದು ಇನ್ನು ಅವನು ಬಂದು ಬಾಯಿ ಬಡ್ಕೋತಾನೆ. ಸುಮ್ನಿರಕ್ಕಾಗಲ್ವಾ ಅಂತ ರಮಾಗೆ ಎರಡು ಹೇರಿದಳು. ದೇವರೇ! ನನ್ನ ಮನೆಯಲ್ಲೂ ನಾನು, ಅಕ್ಕ ಜಗಳ ಆಡುವುದು ಮಾಮೂಲಾದರೂ ಈ ಥರ ಪಿಶಾಚಿ ಅಂತೆಲ್ಲ ಬಯ್ದುಕೊಂಡು, ಹೊಡೆದುಕೊಂಡು ಕಿತ್ತಾಡುವುದು ಗೊತ್ತೇ ಇಲ್ಲ. ನಾನು cultural shock ಗೆ ಒಳಗಾಗಿ ನಿಂತಿದ್ದೆ.
ಅಷ್ಟರಲ್ಲಿ ಮನೆಯ ಮುಂದಿನ ಬಾಗಿಲು ದಢಾರ್ ಅಂತ ತೆಗೆಯಿತು. ಮನೆಯ ಒಳಗಿದ್ದ ಅಂಕಲ್ ಆಚೆ ಬಂದವನೇ ಅದೇನೋ ಬೈದುಕೊಳ್ಳುತ್ತಾ ಬೈಕ್ ಹತ್ತಿ ಹೊರಟೇ ಹೋದ. ರಾಧಾ ಅಮ್ಮ ತಮಿಳಿನಲ್ಲಿ ಬಯ್ಯುತ್ತಾ ನಿಂತರು. ಮಧ್ಯದಲ್ಲಿ ಅಂಕಲ್ ಅನ್ನುವ ಪದ ಮಾತ್ರ ಅರ್ಥವಾಯ್ತು ಅಷ್ಟೇ. ಬಹುಶಃ ಅಂಕಲ್ ನಿಮ್ಮ ಗಲಾಟೆಯಿಂದ ಸಿಟ್ಟುಗೊಂಡು ಹೊರಟುಹೋದ ನೋಡಿ ಅಂತ ಬಯ್ಯುತ್ತಿದ್ದಿರಬೇಕು. ಸಾಯಲಿ ಅವನು ಅಂತ ನನ್ನ ಕಡೆ ತಿರುಗಿ ರಮಾ ಪಿಸುಗುಟ್ಟಿದಳು. ಅವಳ ಕಣ್ಣಲ್ಲಿ ನೀರು ತುಂಬಿತ್ತು. ನಾನು ಈ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಅಂತಲೇ ತಿಳಿಯದೇ ಗಾಭರಿಯಿಂದ ನಿಂತಿದ್ದೆ.
ಮನೆಯ ಒಳಗೆ ಬನ್ನಿ ಎಲ್ರೂ ಅಂತ ಅವರಮ್ಮ ಕಿರುಚಿ ಒಳಗೆ ಹೊರಟು ಹೋದರು. ಅಜ್ಜಿ ಹಿತ್ತಲ ಬಾಗಿಲಿಂದ ಬೇಗ ಬರಲು ಸನ್ನೆ ಮಾಡುತ್ತಾ ನಿಂತಿತ್ತು. ನಾನು ಅದೇ ಮೊದಲ ಸಲ ಬೆಳಕಲ್ಲಿ ಅಜ್ಜಿಯನ್ನು ಕಂಡಿದ್ದು ನಾವು ಆ ಮನೆಗೆ ಬಂದ ಅಷ್ಟು ದಿನಗಳಲ್ಲಿ. ರಾಧಾ, ರಮಾ ಮತ್ತು ಸೆಲ್ವಿ ಕಾಲೆಳೆಯುತ್ತಾ ಮನೆಯ ಕಡೆ ಹೊರಟರು … ಮೊದಲ ಸಲ ಮುಂಬಾಗಿಲಿಂದ ಅವರು ಒಳಗೆ ಹೋದರು …

‍ಲೇಖಕರು avadhi

14 March, 2013

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. Gopaal Wajapeyi

    ಎಷ್ಟು ಚಂದ ಬರೀತೀರಿ ಭಾರತಿ… ಬರಹದ ಶೈಲಿ ಅದೆಷ್ಟು ಗಾಢ… ! ‘ಅಹವಿ ಹಾಡು’ ಆರಂಭವಾದಾಗಿನಿಂದ ಹ್ಯಾಟು ತೆಗೆದಿರಿಸಿದ್ದೇನೆ.

  2. Anjali Ramanna

    ಇನ್ನೂ ಓದಬೇಕು ಅನ್ನಿಸಿದ್ದು ಸುಳ್ಳಲ್ಲ ! 🙂
    Anjali Ramanna

  3. Raghunandan K

    Nice Article, ನೀವು ಹೇಳುತ್ತಿದ್ದರೆ ಹಾಗೇ ಕೇಳುತ್ತಿರಬೇಕೆನ್ನಿಸುವುದು ಸುಳ್ಳಲ್ಲ…

  4. anuradha

    ಕಥೆ ಹೇಳೋ ಶೈಲಿ ಅಂದ್ರೆ ಅದು ಹೀಗಿರಬೇಕು ಅನ್ನಿಸಿತು …ಸ್ವಾರಸ್ಯಕರ ಬರಹ!

  5. samyuktha

    short and intense!! Ultimate!!

  6. Sumathi Deepa Hegde

    ಓದ್ತಾ ಓದ್ತಾ ಕಣ್ಣ ಮುಂದೆ ಈ ಎಲ್ಲ ಪಾತ್ರಗಳು ಅಭಿನಯಿಸ್ತಾ ಇತ್ತು…

  7. ಶಮ, ನಂದಿಬೆಟ್ಟ

    ಎಂಥ ಸಂವೇದನೆ ಭಾರತಿ… ಲವ್ ಯೂಊಊಊಊಊಊಊಊಊಊಊಊ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading