ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಹವಿಯ ಹಾಡು ಜಾಡು : ಮಡೆಸ್ನಾನದ ಬಗ್ಗೆ ಅರ್ಥವಾಗಲು ಇಷ್ಟೊಂದು ಸಮಯ ಯಾಕೆ ಹಿಡೀತು?

ಬಿ ವಿ ಭಾರತಿ

‘ಅಮ್ಮ ಮಡಿಯಾದ್ಲು ಕಣೇ’ ಫೋನಿನ ಆ ಕಡೆಯಿಂದ ಬಂದ ಅವಳ ಮಾತು ಕೇಳಿದಾಗ ನಾನು ದಂಗಾದೆ. ಯಾವ ವರ್ಷ ಇದು?! ಅಂತ ನನ್ನನ್ನು ನಾನು ಚಿವುಟಿ ನೋಡಿಕೊಂಡೆ .. ಅನುಮಾನವೇ ಇಲ್ಲ, ಇದು 2013ನೇ ಇಸವಿಯೇ ಅಂತ ಕ್ಯಾಲೆಂಡರ್ ನೋಡಿ ಖಚಿತ ಪಡಿಸಿಕೊಂಡೆ. ‘ಹೋದ ತಿಂಗಳು ಬದರಿಯಾತ್ರೆ ಹೋಗಿ ಬರ್ತೀನಿ ಅಂದ್ರು. ಅಪ್ಪ ಸತ್ತ ಮೇಲೆ ಅಮ್ಮ ಎಲ್ಲೂ ಹೋಗಿರಲೇ ಇಲ್ಲ. ಅದಕ್ಕೇ ಅವಳು ಹೋಗ್ತೀನಿ ಅಂದಾಗ ಸಖತ್ ಖುಷಿಯಾಯ್ತು ಕಣೇ. ಆದರೆ ಈ ಮಡಿಯಾಗೋ ನಿರ್ಧಾರ ಹೊರಡೋದಿಕ್ಕೆ ಮೊದಲೇ ತೆಗೆದುಕೊಂಡಿದ್ದಳೋ ಅಥವಾ ಅಲ್ಲೇನಾದ್ರೂ ದಿಢೀರ್ ನಿರ್ಧಾರ ತಗೊಂಡ್ಲೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ವಾಪಸ್ ಆಗಿದ್ದು ಕೂದಲೆಲ್ಲ ತೆಗೆಸಿದ ಅಮ್ಮ’ ಅವಳ ಧ್ವನಿ ಮೆತ್ತಗಾಗಿಹೋಗಿತ್ತು ಇಷ್ಟು ಹೇಳುವಷ್ಟರಲ್ಲಿ. ‘ಅಪ್ಪ ಹೋದಾಗಿನಿಂದ ಸದಾಕಾಲ ಇದೇ ಮಾತು ಆಡ್ತಿದ್ದಳು. ನನಗೆ ಅವಳು ಆ ಮಾತಾಡಿದಾಗಲೆಲ್ಲಾ ಸಿಕ್ಕಾಪಟ್ಟೆ ಸಿಟ್ಟು ಬಂದು ರೇಗ್ತಿದ್ದೆ. ಈಗ ನೋಡು, ಬೇಕಿದ್ದನ್ನ ಮಾಡಿ ಮುಗಿಸಿಕೊಂಡಳು. ನಾನೇನು ತಡೆದೆ ಹೇಳು? …’ ಅಂದವಳ ದನಿ ವಿಷಾದದಲ್ಲಿ ಅದ್ದಿ ತೆಗೆದ ಹಾಗಿತ್ತು. ನನಗೆ ನಿಜಕ್ಕೂ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಅರ್ಥವೇ ಆಗದೆ ಕೂತಿದ್ದೆ.

‘ಆದರೆ ಬಂದ ಮೇಲೆ ಅವಳ ಬದುಕಿನಲ್ಲಿ ಏನೆಲ್ಲಾ ಬದಲಾವಣೆಗಳು ಗೊತ್ತಾ? ಮಡೀಗೆ ಬರಲ್ಲ ಅಂತ ಮಠದಲ್ಲಿ ಯಾವ ಕೆಲಸಕ್ಕೂ ಅವಳು involve ಆಗಕ್ಕೆ ಆಗ್ತಿರಲಿಲ್ಲ. ಈಗ ಅದೇನು ಮರ್ಯಾದೆ ಗೊತ್ತಾ? ಮೊನ್ನೆ ಮೊನ್ನೆ ಶ್ರೀನಿವಾಸ ಕಲ್ಯಾಣ ಇತ್ತು ಮಠದ ಫ಼್ರೆಂಡ್ ಒಬ್ಬರ ಮನೇಲಿ. ಅವರೇ ಕಾರು ಕಳಿಸಿ ಕರೆಸಿಕೊಳ್ಳೋದೇನು … ಅಲ್ಲಿ ಮರ್ಯಾದೆ ಕೊಡೋದೇನು .. ಮನೆಗೆ ಮತ್ತೆ ಕಾರಲ್ಲಿ ಕಳಿಸೋದೇನು! ಇವಳಿಗೆ ಇದೆಲ್ಲ ಬೇಕಿತ್ತು ಕಣೇ. ಆ ಥರ ಅವರಲ್ಲಿ ಒಂದಾಗೋದು ಅವಳಿಗೆ ಬೇಕಿತ್ತು. ಅವಳಿಗೆ ಪೂಜೆ, ಮಠ, ಮಡಿ ಬಿಟ್ಟು ಇನ್ನೇನೂ ಬದುಕೇ ಇಲ್ಲ. ಹಾಗಾಗಿ ಅವಳೀಗ ಪೂರ್ತಿ ಖುಷಿಯಲ್ಲಿದ್ದಾಳೆ. ಸಂಕಟ ಎಲ್ಲ ನನಗೆ ಮಾತ್ರ. ಅವಳನ್ನು ನೋಡಿದಾಗ ಹೇಗೆ ಸಂಕಟ ಆಗತ್ತೆ ಗೊತ್ತಾ? ಯಾಕೆ ಬೇಕಿತ್ತು ಅವಳಿಗೆ ಈ ಮರ್ಯಾದೆ-ಗೌರವ. ನನಗೆ ನೆನೆಸಿಕೊಂಡರೆ ಸಿಟ್ಟು, ದುಃಖ ಎಲ್ಲ ಬರತ್ತೆ ನೋಡು. ಆದರೆ ಮಠದಲ್ಲಿ ನಡೆಯೋ ಎಲ್ಲ ಫಂಕ್ಷನ್‌ನಲ್ಲಿ ಇವಳು ಒಂಥರಾ centre of attraction ಆಗೋಗಿದಾಳೆ … ಯಾವುದು ಸರಿ, ಯಾವುದು ತಪ್ಪು. ಸುಖ ಕೊಡೋದು ಸರಿ ಅಂತಾಗಲ್ಲ. ದುಃಖ ಕೊಡೋದೆಲ್ಲ ತಪ್ಪಾಗಲ್ಲ ಅಲ್ವಾ? ನನ್ನ ಕಣ್ಣಿಗೆ ಅವಳು ವಿಚಿತ್ರವಾಗಿ ಕಾಣ್ತಾಳೆ … ಅವಳಿಗೂ ನಾನು ಹಾಗೆ ಕಾಣ್ತಿರೋ ಸಾಧ್ಯತೆ ಇದೆಯಲ್ಲವಾ? ನನ್ನ ಮಗಳ ಹತ್ತಿರ ಇದನ್ನು ಹೇಳಿಕೊಂಡು ಸಂಕಟ ಪಟ್ಟರೆ ಅವಳು ಏನಂದ್ಲು ಗೊತ್ತಾ .. ಅಜ್ಜಿ ಖುಷಿಯಾಗಿದ್ದಾಳೆ ತಾನೇ? ಅದು ಮುಖ್ಯ. ನಿನ್ಗೆ ಏನನ್ನಿಸತ್ತೆ ಅಂತ ಅವಳು ಯಾಕೆ ಯೋಚಿಸಬೇಕು? ಅವಳ ಬದುಕನ್ನು ಬದುಕಿ ಕೊಳ್ಳೋದಿಕ್ಕೆ ಅವಳನ್ನ ಬಿಟ್ಟುಬಿಡು ಅಂತ. ಅಷ್ಟು ಸುಲಭಕ್ಕೆ ಬಿಡಕ್ಕೆ ಆಗ್ತಿಲ್ಲ ಯಾಕೋ …’
ನಾನು ಏನು ಮಾತಾಡಬೇಕು ಅಂತ ತಿಳಿಯದೇ ಕೂತಿದ್ದೆ. ನಮ್ಮ ಮನೆಯಲ್ಲಿ ಬಹುಶಃ ನನ್ನ ಮರಿ ಅಜ್ಜಿಯ ಕಾಲಕ್ಕೆ ಮಡಿಯಾಗುವ ಪದ್ದತಿ ಇದ್ದಿರಬಹುದು. ಆ ನಂತರ ನಾನು ಕಂಡ ಹಾಗೆ ನನ್ನ ಅಜ್ಜಿಯ ಕಾಲಕ್ಕೂ ನನ್ನ ತಾತ ಸತ್ತ ಮೇಲೆ ಮಡಿಯಾಗುವ ಪರಿಸರ ಇರಲೇ ಇಲ್ಲ. ಮಡಿಯಾಗೋ ಮಾತು ಹಾಗಿರಲಿ, ತಾಳಿ-ಕಾಲುಂಗುರ-ಕುಂಕುಮ ಕೂಡಾ ಯಾರೂ ತೆಗೆಯೋದಿಲ್ಲ. ಅಂತ ವಾತಾವರಣದಲ್ಲಿ ಬೆಳೆದ ನನಗೆ ನಾನು ಟೈಮ್ ಮಷಿನ್‌ನಲ್ಲಿ ನೂರು ವರ್ಷ ಹಿಂದಕ್ಕೆ ಪ್ರಯಾಣ ಮಾಡಿದ್ದೀನೇನೋ ಅನ್ನಿಸಿತು. ಆ ನನ್ನ ಗೆಳತಿಯ ಮನೆಯವರೇನೂ ಕಡಿಮೆ ವಿದ್ಯಾವಂತರಲ್ಲ. ಎಲ್ಲ ಓದಿದ್ದಾರೆ. ಮಕ್ಕಳೆಲ್ಲ ವಿದೇಶದಲ್ಲೂ ಇದ್ದಾರೆ. ಒಳ್ಳೊಳ್ಳೆಯ ಕೆಲಸದಲ್ಲಿದ್ದಾರೆ. ಮತ್ತೆ ಇದು ಯಾಕೆ ಹೀಗೆ? ಅರ್ಥವೇ ಆಗಲಿಲ್ಲ …
ಬದುಕಿನಲ್ಲಿ ಸುಖ ಕೊಡೋದೆಲ್ಲ ಸರಿ ಅಂತಲ್ಲ, ದುಃಖ ಕೊಡೋದೆಲ್ಲ ತಪ್ಪು ಅಂತಲೂ ಅಲ್ಲ … ಅವಳ ಮಾತು ಎದೆಯಲ್ಲಿ ಮತ್ತೆ ಮತ್ತೆ ಮಾರ್ದನಿಸಿತು. ಹೌದಲ್ಲವಾ ಇದನ್ನು ಸರಿ-ತಪ್ಪುಗಳ ತಕ್ಕಡಿಯಲ್ಲಿಟ್ಟು ತೂಗಬೇಕೋ? ಸುಖ-ದುಃಖಗಳ ತಕ್ಕಡಿಯಲ್ಲಿಟ್ಟು ತೂಗಬೇಕೋ? ಅನ್ನೋ ಪ್ರಶ್ನೆ ಎದುರಾಯಿತು … ಉತ್ತರ ಯಾರಿಗೆ ಗೊತ್ತು? ಆದರೆ ಈ ಮನಃಸ್ಥಿತಿಗೆ ಸರಿಹೋಗುವಂಥ ಒಂದು ಘಟನೆ ನೆನಪಿಗೆ ಬಂತು …
ಪ್ರಸಿದ್ಧ ಬರಹಗಾರ ಚಂದ್ರಶೇಖರ ಆಲೂರರು ಒಂದು ಸಲ ಅವರ ಬರಹವೊಂದರಲ್ಲಿ ಮಡೆಸ್ನಾನದ ಬಗ್ಗೆ ತೀವ್ರವಾಗಿ ವಿರೋಧಿಸಿದ್ದರು. ಅವರು ಇದನ್ನು ಮೇಲ್ಜಾತಿಯವರ insensitivity ಅಂತ ಕರೆದಾಗ ನಾನು ಸಿಟ್ಟಾಗಿದ್ದೆ. ‘ಅರ್ರೇ! ಅಲ್ಲಿ ಉರುಳಲು ಬರುವವರನ್ನು ನಮ್ಮ ಎಲೆಯ ಮೇಲೆ ಉರುಳಿ ಅಂತ ಮೇಲ್ಜಾತಿಯವರು ಬಲವಂತ ಪಡಿಸಿದ್ದಾರಾ? ಇಲ್ಲವಲ್ಲ! ಅಲ್ಲಿ ಉರುಳುವ ಪ್ರತಿ ಮನುಷ್ಯನೂ ಸ್ವಂತ ಇಚ್ಛೆಯ ಮೇಲೆ ಉರುಳುತ್ತಾನೆ. ಅಂದಮೇಲೆ ಅದನ್ನು ಮೇಲ್ಜಾತಿಯವರ insensitivity ಅಂತ ಯಾಕೆ ಅನ್ನುತ್ತೀರಿ? ಈಗ ಎಲ್ಲ ಜಾತಿಯವರಲ್ಲೂ ವಿದ್ಯಾವಂತರಿದ್ದಾರೆ. ಅವರು ತಮ್ಮ ಜಾತಿಯ ಜನರಿಗೆ ಹೀಗೆ ಉರುಳುವುದು ತಪ್ಪು ಅಂತ ತಿಳುವಳಿಕೆ ಕೊಡಲಿ. ಅದು ಬಿಟ್ಟು ಎಲ್ಲದಕ್ಕೂ ಮೇಲ್ಜಾತಿಯವರನ್ನು ಯಾಕೆ ದೂರುತ್ತೀರಿ’ ಅಂತ ಕೇಳಿದ್ದೆ. ಆಗ ಆಲೂರರಿಂದ ನನ್ನ ವಾದಸರಣಿಯ ಬಗ್ಗೆ ತೀವ್ರ ಆಕ್ಷೇಪ ಬಂದಿತ್ತು. ‘ಹಾಗಾದರೆ ದೇವದಾಸಿ ಪದ್ದತಿಗೆ ಸಿಕ್ಕುವವರು, ಸತಿ ಹೋಗುವವರು ಎಲ್ಲರೂ ಅವರ ಸ್ವಂತ ಇಚ್ಛೆಯ ಮೇಲೆ ಅದನ್ನು ಮಾಡಿದರೆ ಅದನ್ನು ನಾವು ಅದು ಅವರ ನಿರ್ಧಾರ ಅಂತ ತೀರ್ಮಾನಿಸಿ ಸುಮ್ಮನಿದ್ದು ಬಿಟ್ಟರೆ ಸಮಾಜದ ಗತಿಯೇನು? ಬಾಲ್ಯ ವಿವಾಹ ಕೂಡಾ ಅವರ ಮನೆಯವರಿಗೆ ಬೇಕು ಅಂತಲೇ ಎಲ್ಲ ಸೇರಿಯೇ ಮಾಡಿರುತ್ತಾರೆ. ಹಾಗಿದ್ದರೆ ಅದೂ ಸರಿಯೇ ಅಂತಾಯಿತಲ್ಲ! ಇಂಥ ಮೌಢ್ಯದ ಆಚರಣೆಗಳನ್ನು ತಡೆಗಟ್ಟದಿದ್ದರೆ ಏಕ್‌ದಂ ನೂರು ವರ್ಷ ಹಿಂದಕ್ಕೆ ಹೋಗಿಬಿಡುತ್ತದೆ ಜಗತ್ತು …’ ಆಗ ತಲೆಯಲ್ಲಿ ಚೂರು ದೀಪ ಹೊತ್ತಿಕೊಂಡಿದ್ದರೂ ಕೂಡಾ ಪೂರ್ತಿ convince ಆಗಿರಲಿಲ್ಲ ನಾನು. ‘ಅದು ಬೇರೆ ಪದ್ದತಿಗಳು. ಅದಕ್ಕೂ, ಮಡೆಸ್ನಾನಕ್ಕೂ ಹೋಲಿಕೆ ಸರಿಯಲ್ಲ. ಇದು ಭಕ್ತರು ತಾವಾಗೇ ಹರಸಿಕೊಂಡು ಎಂಜಲೆಲೆಯ ಮೇಲೆ ಉರುಳುವ ಪದ್ದತಿ ಅಲ್ಲವಾ? ಜೊತೆಗೆ ಮೇಲ್ಜಾತಿಯವರೂ ಹರಕೆ ಹೊತ್ತು ಉರುಳುತ್ತಾರಂತಲ್ಲ! ಎಲ್ಲ ಜಾತಿಯವರಿಗೆ ಶಿಕ್ಷಣ ಅಂತ ಕೊಟ್ಟ ಮೇಲೆ ಅವರವರ ಜಾತಿಯವರು ಇಂಥದ್ದನ್ನೆಲ್ಲ ತಡೆಯಬೇಕು ಅಂತಲೇ ಹೇಳಿ ಮಾತು ಮುಗಿಸಿದ್ದೆ…
ಈಗ ನನ್ನ ಗೆಳತಿ ಹೇಳಿದ್ದನ್ನು ಕೇಳುವಾಗ ಅದೆಲ್ಲ ನೆನಪಾಯ್ತು. ಹೌದು, ಈಗ ನನ್ನ ಗೆಳತಿಯ ಅಮ್ಮನಿಗೂ ಯಾರೇನೂ ಬಲವಂತ ಮಾಡಿ ಮಡಿ ಮಾಡಿಸಿರಲಿಲ್ಲ. ಆಕೆ ಸ್ವಂತ ಇಚ್ಛೆಯಿಂದಲೇ ಮಡಿಯಾಗಿದ್ದರು. ಆದರೆ ಅದು ಸರಿಯಲ್ಲ ಅಂತ ಮನಸ್ಸು ಕೂಡಲೇ ನಿರ್ಧರಿಸಿತ್ತು. ಅದನ್ನು ಒಪ್ಪಲಾಗದ ಮನಸ್ಸು ಕೂಡಲೇ ಧಿಕ್ಕರಿಸಿತ್ತು. ಮಡಿ ಮಾಡಿಕೊಂಡಿದ್ದರಿಂದ ಮಾತ್ರ ಸಿಕ್ಕ ಗೌರವ-ಮರ್ಯಾದೆ ಎಲ್ಲವನ್ನೂ ಮನಸ್ಸು ವಿರೋಧಿಸಿತ್ತು. ಆ ರೀತಿ ಸಿಗುವ ಮರ್ಯಾದೆ ಯಾರಿಗೆ ಬೇಕು? ಅಂತ ಮನಸ್ಸು ಸಿಟ್ಟಾಗಿತ್ತು. ಈ ರೀತಿ ಸಮಾಜವನ್ನು ಹಿಂದಕ್ಕೆ ದೂಡುವಂಥ ಪದ್ದತಿಗಳನ್ನು ಮನಸ್ಸು ಖಂಡಿಸಿತ್ತು. ಈಗ ಮಾತ್ರ ಇಷ್ಟು ಸರಳವಾಗಿ ಹೆಣ್ಣುಜಾತಿಗೆ ಅನ್ಯಾಯವಾಗುವಂಥ ಮೌಢ್ಯ ಅಂತ ಕೂಡಲೇ ಮನಸ್ಸಿಗೆ ಹೊಳೆದಿತ್ತು. ಅವಳ ಅಮ್ಮ ಮಡಿಯಾದ ಆ ಘಳಿಗೆಯಲ್ಲಿ ನಾನು ಅವರ ಜೊತೆಗಿದರೆ ಏನು ಮಾಡುತ್ತಿದ್ದೆ? ಖಂಡಿತಾ ಅದನ್ನು ಮಾಡೊಸಿಕೊಳ್ಳಕೂಡದು ಅಂತ ಅಲ್ಲೆ ಹಠ ಹಿಡಿಯುತ್ತಿದ್ದೆ ತಾನೇ? ಮಡಿ ಮಾಡಿಸಿಕೊಂಡ ಅವರೇ ಖುಷಿಯಾಗಿದ್ದಾರೆ ಅಂತ ಸುಮ್ಮನಾಗಿ ಬಿಡುತ್ತಿದ್ದೆನಾ? ಇದು ಸರಿಯಲ್ಲ ಅಂತ ಎಷ್ಟು ಸರಳವಾಗಿ ರೆಪ್ಪೆ ಮಿಟುಕಿಸುವಷ್ಟರಲ್ಲಿ ಅರ್ಥವಾಗಿತ್ತು! ಆದರೆ ಮಡೆಸ್ನಾನದ ಬಗ್ಗೆ ಅರ್ಥವಾಗಲು ಇಷ್ಟೊಂದು ಸಮಯ ಯಾಕೆ ಹಿಡಿದಿತ್ತು? ಎಂದೂ ಅನ್ಯಾಯಕ್ಕೆ ಒಳಗಾಗದ ಜಾತಿಯಲ್ಲಿ ಹುಟ್ಟಿದ್ದರಿಂದ ಎಷ್ಟು ಕೆಟ್ಟದಾಗಿ ಅಂಥ ಸರಳ ವಿಷಯವನ್ನು ನನ್ನ ಮೂಗಿನ ನೇರಕ್ಕೆ ಅರ್ಥಸಿಕೊಂಡಿದ್ದೆನಲ್ಲ ಅಂತ ಅವಮಾನವೆನ್ನಿಸಿತು ಯಾಕೋ …
 

‍ಲೇಖಕರು avadhi

21 February, 2013

ನಿಮಗೆ ಇವೂ ಇಷ್ಟವಾಗಬಹುದು…

12 Comments

  1. N.viswanatha

    Hagadare oota munche maduva jathiyavaru thamma oota mugidananthara thappu oppugala bagge ondu bhashana madabekadeethu N.Viswanatha

  2. Radhika

    Good line of thoughts. But why does caste drive one to feel he/she is superior or inferior to another person? Why haven’t we been able to keep the ‘caste’ out of our thought process? Why people from ‘some castes’ indeed feel they are superior to others in the society? It is very evident in their conversations irrespective of the ‘education’ they have had. Never found an answer for these questions.

  3. Vasuki

    Tumbaa channagide nimma baraha!

  4. Kumara Raitha

    ಕಂದಾಚಾರ,ವೈಚಾರಿಕ ನಡುವಿನ ಸಂಘರ್ಷದ ಲೇಖನ. ಚೆನ್ನಾಗಿ ಬರೆದಿದ್ದೀರಿ. ಯಾವುದೇ ಮೌಢ್ಯವನ್ನ ಅವರವರ ಇಷ್ಟ ಅಂತ ಸುಮ್ಮನಿದ್ದರೆ ಭಾರತ ಕೇವಲ ನೂರು ವರ್ಷ ಯಾಕೆ, ನೂರಾರು ವರ್ಷ ಹಿಂದೆ ಹೋಗುತ್ತೆ… ಆಗ ಸತಿ ಸಹಗಮನ ಇಂಥವೆಲ್ಲ ಮತ್ತೆ ಬರುತ್ತೆ, ನೋಡ್ತಾ ಸುಮ್ಮನೆ ಕೂರಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ನಾವು ಆಚರಿಸದಿದ್ರೂ ಬೇರೆಯವರು ಮಡೆಸ್ನಾನ ಮಾಡಿದಾಗ ವಿರೋಧಿಸಲೇಬೇಕಾಗುತ್ತೆ.

  5. ಹನುಮೇಶ್ ಮಳಗಿ

    ಇವೆಲ್ಲ ಅರಿವಾಗದ ಅರಿವಿಗೆ ಬಾರದ ಅನಾದಿ ತಾಕಲಾಟಗಳು. ಮಲ ಹೊರುವ ಅನಿಷ್ಟಗಳು ನಮ್ಮಂತಹ ಮೇಲ್ಜಾತಿಯವರಿಗೆ ಹೇಗೆ ಅರ್ಥವಾಗುತ್ತದೆ. ಅದೇ ರೀತಿ ಹರೆಯದಲ್ಲಿ ಬಸವಿ ಬಿಡೋದು, ಮುಪ್ಪಾದಾಗ ಜೋಗತಿ ಆಗುವುದು, ಆ ಜೋಗತಿಗೆ ಮರ್ಯಾದೆ. ಇವೆಲ್ಲಾ ಈಗ ಪಳೆಯುಳಿಕೆಗಳಂತೆ ತೋರಬಹುದಾದರೂ, ಈ ಮಡಿಯ ಮನಸ್ಸು ಇಂತಹ ಅನಿಷ್ಟಗಳನ್ನು ಒಳಗೇ ಮುಚ್ಚಿಟ್ಟುಕೊಂಡಿರುತ್ತದೆ. ಸಮಯಬಂದಾಗ ಸಮರ್ಥನೆಯಾಗಿ ಚಿಗುರುತ್ತದೆ. ಇದು ದುರಂತವೇ ಸರಿ. ಸಮಾಜವನ್ನು ಸರಿದಾರಿಗೆ ತರುವವರಲ್ಲಿಯ ಇಂತಹ ಆಚರಣೆಗಳು ನಮ್ಮನ್ನು ದ್ವೇಷಿಸುವ ದೂಶಿಸುವವರಿಗೆ ಪ್ರೋತ್ಸಾಹ ನೀಡುತ್ತವೆ. ನಿಮ್ಮ ಲೇಖನ ಮನಮುಟ್ಟುವಂತಿದೆ.ಶುಭವಾಗಲಿ.

  6. ಉದಯಕುಮಾರ್ ಹಬ್ಬು

    ಭಾರತಿಯವರ ಲೇಖನ ಹಿಂದಿನವರು ಸಂಪ್ರದಾಯದ ಹೆಸರಿನಲ್ಲಿ ಮಾಡಿಟ್ಟ ಅವಾಂತರದ ಅರಿವು ತಡವಾಗಿಯಾದರೂ ನಮಗಾಗುತ್ತಿದೆಯೆಂಬುದೇ ಸಮಾಧಾನದ ಸಂಗತಿಯಾಗಿದೆ. ಯಾರು ಈ ಸಂಪ್ರದಾಯವನ್ನು ಹುಟ್ಟು ಹಾಕಿದರೋ ಅವರೇ ಇದು ಸರಿಯಲ್ಲ ಎಂದು ಘಂಟಾಘೋಷವಾಗಿ ಹೇಳುವ ಕಾಲ ಬಂದಿದೆ. ಸಂಪ್ರದಾಯದ ಪರ ನಾವು ಹಿಂದು ಮುಂದಿನ ಆಲೋಚನೆಯಿಲ್ಲದೆ ಮಾತಾಡಿಬಿಡುತ್ತೇವೆ. ಪೂರಣಮೀತ್ಯೇವ ನ ಸಾಧು, ಸತ್ಯಂ ಎಂದು ಕಾಳಿದಾಸ ಒಂದೆಡೆ ಹೇಳಿದ್ದಾನೆ. ಶ್ರೇಷ್ಟತೆಯ ವ್ಯಸನವೇ ಈ ಎಲ್ಲ ಅವಾಂತರಕ್ಕೆ ಕಾರಣ. ಇನ್ನಾದರೂ ಇಂತಹ ಅಮಾನುಷವಾದ ಮೂಢನಂಬಿಕೆಗಳನ್ನು ತ್ಯಜಿಸುವ ನಿರ್ಧಾರವನ್ನು ನಾವೆಲ್ಲ ಮಾಡಬೇಕಿದೆ. ಇದಕ್ಕೆಲ್ಲ ಪೂರ್ಣವಿರಾಮ ಕೊಡುವವರು ಯಾರು? ಮೇಲು ಎಂಬವನು ಇನ್ನೊಬ್ಬಮನುಷ್ಯನನ್ನು ಕೀಳು ಎಂದು ಭಾವಿಸಿದಾಗ ಆಗುವ ಹಿಂಸೆ, ಅವಮಾನ, ನೋವು ಯಾರಿಗೂ ಬೇಡ. ಈ ಸನಾತನ ಧರ್ಮದ ತರತಮ ಭಾವದಿಂದಲೇ ಬಸವಣ್ಣ ಮತ್ತು ದಾಸರು ಕುಲದ ಢಾಂಬಿಕತೆಯ ವಿರುದ್ಧ ಸಿದಿದೆದ್ದರು. ಹೇಳಿ ಬೆಕ್ಕಿಗೆ ಗಂಟೆ ಕಟ್ಟಬೇಕಾದ್ದು ಯಾರು? ಉದಯಕುಮಾರ ಹಬ್ಬು, ಕಿನ್ನಿಗೋಳಿ. ದ ಕ .574150

  7. shobhavenkatesh

    ee tharhada lekhanagalu,anisikegalu,ella madymadallu prakatisabeku,samvadavaga beku.bharatige thanks

    • bharathi bv

      Thnx shobha venkatesh …

  8. bharathi bv

    Elrigoo thnx

  9. ಜಿ.ಎನ್ ನಾಗರಾಜ್

    ಮನಸ್ಸನ್ನು ಬಿಚ್ಚಿ ನೊಡಿಕೊಳ್ಳವುದು ಅದರಲ್ಲಿಯೂ ಬಿಚ್ಚಿ ತೋರಿಸುವುದು ಬಹಳ ಕಷ್ಟದ ಕೆಲಸ.ಅದನ್ನು ಸೊಗಸಾಗಿ ಮಾಡಿದ್ದೀರಿ ಅಭಿನಂದನೆಗಳು.
    ಮನೆಯ ಕೊಳೆ ಕೆಲವೊಮ್ಮೆ ವರ್ಷಗಳಿಂದ ಹಾಗೇ ಬಿದ್ದಿರುತ್ತದೆ.ಹಬ್ಬ ಹರಿದಿನಗಳಲ್ಲಿ ಒಂದು ಕಡೆಯಿಂದ ಬಿಡದೆ ಸ್ವಚ್ಚ ಮಾಡುತ್ತೇವೆ. ಹಾಗೆಯೇ ಮನದ ಕೊಳೆಯನ್ನೂ-ಜಾತಿ-ಲಿಂಗ ಅಸಮಾನತೆ,ಕಂದಾಚಾರಗಳನ್ನು- ನಾವೆಲ್ಲರೂ ವರ್ಷಕ್ಕೆ ನಾಲ್ಕಾರು ಬಾರಿ ಸ್ವಚ್ಚ ಮಾಡಿಕೊಳ್ಳಬೇಕು.
    ನಮ್ಮ ಮನದ ಕೊಳೆ ‘ಕಾಣಿ’ಸುವುದು ಕಷ್ಟ. ಯಾಕೆಂದರೆ-ಅದಕ್ಕೆ ಸಂಸ್ಕೃತಿ,ಶಾಸ್ತ್ರ,ಎಂಬ ಹೆಸರಿದೆ ದೇವರ ನಂಟೂ ಇದೆ. ಸ್ವಂತಕ್ಕೆ ಲಾಭವೂ ಇದೆ.ಆದ್ದರಿಂದ ಎದುರಿನವರ ನೆರವು-ಕನ್ನಡಿ ಹಿಡಿಯಲು-ಪಡೆಯಬೇಕು.
    ಪುರೋಹಿತಶಾಹಿ-ಪಾಳೆಯಗಾರಿ ವ್ಯವಸ್ಥೆ ಏಕಕಾಲಕ್ಕೆ ಜಾತಿ-ಮಹಿಳಾ ಬೇಧ,ಕಂದಾಚಾರಗಳನ್ನು ಸೃಷ್ಠಿಸಿದೆ ಎಂಬುದನ್ನು ಅರಿಯಬೇಕು

  10. Prasad V Murthy

    ನಿಮ್ಮ ಮೇಲಿನ ಅಭಿಮಾನ ಹೆಚ್ಚಾಯ್ತು ಭಾರತಿ ಅಕ್ಕಾ. ಯಾವುದೇ ಮನುಷ್ಯ ಮತ್ತೊಬ್ಬನ ಸ್ಥಿತಿಯಲ್ಲಿ ನಿಂತು ಪರಿಸ್ಥಿತಿಯನ್ನು ಅವಲೋಕಿಸುವುದೇ ತ್ರಾಸವಾಗಿರುವ ಈ ಕಾಲದಲ್ಲಿ. ಮಡೆಸ್ನಾನದ ಕಂದಾಚಾರಗಳನ್ನು ತುಳಿತಕ್ಕೊಳಗಾದವರ ನಿಟ್ಟಿನಲ್ಲಿ ನಿಂತು ನೋಡಿದ್ದು ನಿಜಕ್ಕೂ ಶ್ಲಾಘನೀಯ. ಮಡಿಯಾದರೆಂಬ ಕಾರಣಕ್ಕೆ ಆ ಹಿರಿಯ ಹೆಣ್ಣು ಜೀವಕ್ಕೆ ಸಿಕ್ಕ ಮರ್ಯಾದೆ ಮನುಷ್ಯಳೆಂಬ ಕಾರಣಕ್ಕೆ ಮೊದಲೇ ಸಿಗದಿದ್ದು ನಮ್ಮ ಸಮಾಜದ ದುರಂತ! ಸತ್ಯವನ್ನು ವಿಮರ್ಶಿಸುವ ನಿಮ್ಮಲ್ಲಿನ ಆತ್ಮ ಪ್ರಜ್ಞೆಗೆ ಧನ್ಯವಾದಗಳು. ಹಿಡಿಸಿತು ಈ ಸಲದ ‘ಅಹವಿಯ ಹಾಡು ಜಾಡು’ 🙂
    – ಪ್ರಸಾದ್.ಡಿ.ವಿ.

  11. ಎಚ್. ಸುಂದರ ರಾವ್

    ಈ ಪ್ರಶ್ನೆಯನ್ನು ಇನ್ನೊಂದು ಮಗ್ಗುಲಿನಿಂದ ನೋಡೋಣ:
    ಮಡೆಸ್ನಾನ ಒಂದು ಹರಕೆ. ಅದನ್ನು ಮಾಡುವವರು ತಮ್ಮ ಯಾವುದೋ ಒಂದು ಸಮಸ್ಯೆಯ ಪರಿಹಾರಕ್ಕೆ ಹರಕೆ ಹೇಳಿಕೊಳ್ಳುತ್ತಾರೆ. ಅವರ ಸಮಸ್ಯೆ ಏನು? ಅದನ್ನು ಎಲ್ಲರ ಹತ್ತಿರ ಹೇಳಿಕೊಳ್ಳಲು ಸಾಧ್ಯವಿದ್ದರೆ, ಬಹುಶಃ ಅವರು ಹರಕೆಯನ್ನೇ ಹೊರುತ್ತಿರಲಿಲ್ಲ. ಮಡೆಸ್ನಾನ ವ್ಯಕ್ತಿಯನ್ನು ದೀನನಾಗುವಂತೆ ಮಾಡುತ್ತದೆ, ಅವನ/ಳ ವ್ಯಕ್ತಿತ್ವವನ್ನೇ ಅವಮಾನಿಸುತ್ತದೆ. ಆದರೆ ಒಬ್ಬ ವ್ಯಕ್ತಿ ಬೇರೊಂದು ಕಡೆ ಮಡೆಸ್ನಾನಕ್ಕಿಂತ ಹೆಚ್ಚು ತೀಕ್ಷ್ಣವಾದ ಅವಮಾನಕ್ಕೆ, ಗೊಂದಲಕ್ಕೆ, ನೋವಿಗೆ ಗುರಿಯಾಗುತ್ತಿದ್ದರೆ ಅದಕ್ಕೆ ಪರಿಹಾರ ಏನು? (ಎರಡೂ ಕಾಲು ಇಲ್ಲದವನು ಒಂದು ಕಾಲಿರುವವನನ್ನು ಅದೃಷ್ಟವಂತ ಎಂದು ತಿಳಿಯುವುದಿಲ್ಲವೆ?)
    ಒಂದು ಊಹಾತ್ಮಕ ಉದಾಹರಣೆ ಕೊಡುತ್ತೇನೆ: ಇದೇ ಸುಬ್ರಹ್ಮಣ್ಯದ ಪರಿಸರದಲ್ಲಿ ಎಂಡೋಸಲ್ಪಾನ್ ಕಾರಣವಾಗಿ ದೈಹಿಕ-ಮಾನಸಿಕ ವಿಕಲ ಮಕ್ಕಳು ಹುಟ್ಟುವುದು ವಿರಳವಲ್ಲ. ಆ ಪ್ರದೇಶದ ಸುಮಾರು ಎಸೆಸೆಲ್ಸಿ ಓದಿದ, ಮಧ್ಯಮ ವರ್ಗದ ಹುಡುಗಿಯೊಬ್ಬಳು ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಳೆಂದು ತಿಳಿಯಿರಿ. ಎಲ್ಲ ಗರ್ಭಿಣಿಯರಿಗೆ ಆಗುವ ಹಾಗೆ ಅವಳಿಗೂ ಹುಟ್ಟುವ ಮಗುವಿನ ಬಗ್ಗೆ ಕಾತರ, ಆತಂಕಗಳು ಇದ್ದೇ ಇರುತ್ತವೆ. ನಾಳೆ ತನ್ನ ಮಗುವೂ ಹೀಗೆ ವಿಕಲಾಂಗವೋ, ವಿಕಲಮತಿಯೋ ಆದರೆ ಏನು ಗತಿ ಎಂಬ ಹೆದರಿಕೆ ಅವಳ ಮನಸ್ಸಿನಲ್ಲಿ ಹುಟ್ಟಿದರೆ ಅವಳು ಏನು ಮಾಡಬೇಕು? ವೈಚಾರಿಕವಾಗಿ ಮಾತಾಡುವವರು ಅವಳು ಗರ್ಭಿಣಿ ಇರುವಾಗಲೇ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹೇಳಿಯಾರು. ವೈದ್ಯಕೀಯ ಪರೀಕ್ಷೆಯಿಂದ ಮಗು ದೈಹಿಕವಾಗಿ ವಿಕಲವಾಗಿದ್ದರೆ ಗುರುತಿಸಲು ಸಾಧ್ಯ, ಮಾನಸಿಕ ವಿಕಲತೆಯನ್ನು ಗುರುತಿಸಲು ಸಾಧ್ಯವಿಲ್ಲ. ಹಾಗಾದರೆ ಅವಳ ಹೆದರಿಕೆಯನ್ನು ಹೇಗೆ ನಿವಾರಿಸುವುದು? ಇಂಥದೊಂದು ಸಮಸ್ಯೆಯಲ್ಲಿ ಸಿಕ್ಕಿಕೊಂಡ ಗರ್ಭಿಣಿ ಹುಡುಗಿ, ಯಾರೋ ಹೇಳಿಯೋ, ತಾನೇ ನಿಶ್ಚಯಿಸಿಯೋ, ಮಡೆಸ್ನಾನದ ಹರಕೆ ಹೇಳಿಕೊಂಡರೆ ತಪ್ಪಾಗುತ್ತದೆಯೆ?
    ಮಡೆಸ್ನಾನದ ಹರಕೆ ಸಲ್ಲಿಸುವುದರಿಂದ ಅವಳಿಗೆ ಆರೋಗ್ಯವಂತ ಮಗು ಹುಟ್ಟುತ್ತದೆ ಎಂದು ನಾನಂತೂ ನಂಬಲಾರೆ. ಆದರೆ ಅವಳ ಸಮಸ್ಯೆಗೆ ಪರಿಹಾರ ಏನು? ಕನಿಷ್ಠ, ಗರ್ಭಿಣಿಯಾಗಿರುವ ಅವಧಿಯಲ್ಲಾದರೂ, ಆ ಹರಕೆ ಅವಳಿಗೆ ಒಂದು ಮಾನಸಿಕ ಧೈರ್ಯ, ನೆಮ್ಮದಿಗಳನ್ನು ಕೊಡಲಾರದೆ?
    “ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ” ಎಂದು ಅನೇಕರು ಭಾವಿಸಿದಂತಿದೆ. ಹಾಗಿಲ್ಲ. -ಎಚ್. ಸುಂದರ ರಾವ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading