ನಮ್ಮೂರ ಭಾಷೆ
ಅಸಾದಿ.. ಅಂದ್ರೆ ದೇವರನ್ನೇ ಬೈಯುವವನು
ರೇಣುಕಾ ಚಿತ್ರದುರ್ಗ
ನಮ್ಮೂರು ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿರುವ ಪಟ್ಟ ಗ್ರಾಮ. ಇಲ್ಲಿ ಯಾರಾದರೂ ತುಂಬಾ ಕೆಟ್ಟದಾಗಿ ಬೈದಿರೋದನ್ನ ವರ್ಣಿಸಬೇಕು ಅಂದ್ರೆ ‘ಅವ ಹೆಂಗೆ ಬೈದ ಗೊತ್ತ? ಅಸಾದಿ ಬೈದಂಗೆ ಬೈದುಬಿಟ್ನಪ್ಪ’ ಎನ್ನುವ ಪದ ಉಪಯೋಗಿಸುತ್ತಾರೆ. ಏನಿದು ಅಸಾದಿ ಅಂದ್ರೆ ಅಂತ ಅನಿಸ್ತಾ ಇದಿಯಾ? ಬನ್ನಿ ಈ ಅಸಾದಿಗಳ ಬಗ್ಗೆ ತಿಳಿಯೋಣ.
ನಮ್ಮೂರಲ್ಲಿ ಪ್ರತಿವರ್ಷ ಗ್ರಾಮದೇವತೆ ಅಂತರಘಟ್ಟಮ್ಮನವರ ಜಾತ್ರೆ ನಡೆಯುತ್ತೆ. ಜಾತ್ರೆಯ ವಿಧಿವಿಧಾನಗಳಲ್ಲಿ ತೇರನ್ನೇರುವುದು ಒಂದು ಪ್ರಮುಖ ಘಟ್ಟ ಎನ್ನುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ನಮ್ಮೂರ ಅಮ್ಮ ಅಷ್ಟು ಸುಲಭವಾಗಿ ತೇರನ್ನೇರುವುದಿಲ್ಲ. ತೇರು ಹತ್ತಲ್ಲ ಅಂತ ಹಠ ಮಾಡ್ತಾಳೆ. ಗ್ರಾಮಸ್ಥರು ಮತ್ತೆ ಮತ್ತೆ ಕಾಯಿ ಒಡಿತಾರೆ, ಊದುಬತ್ತಿ ಬೆಳಗ್ತಾರೆ, ಆರತಿ ಮಾಡ್ತಾರೆ. ಉಹೂಂ.. ಜಪ್ಪಯ್ಯ ಅಂದ್ರೂ ಹತ್ತಲ್ಲ.
ಆಗ ಗ್ರಾಮದ ಅಸಾದಿಯ ಪ್ರವೇಶವಾಗುತ್ತದೆ. ಬಂದವನೇ ದೇವಿಯನ್ನು ಹಿಗ್ಗಾಮುಗ್ಗಾ ಬೈಯತೊಡಗುತ್ತಾನೆ. ಎಂತೆಂಥಾ ಪದಗಳು ಅಂದ್ರೆ ಕಿವಿಯಲ್ಲಿ ಕೇಳೋಕೆ ಆಗಲ್ಲ. ಎಲ್ಲವೂ ಸೊಂಟದ ಕೆಳಗಿನ ಬೈಗುಳ. ತಮಟೆಯ ಸದ್ದಿಗೂ, ಬೈಗುಳಕ್ಕೂ ದೇವಿ ರಾಂಗ್ ಆಗ್ತಾನೇ ಹೋಗ್ತಾಳೆ. ಅಸಾದಿ ಬೈಯುತ್ತಲೇ ಹೋಗುತ್ತಾನೆ. ಈ ಪ್ರಹಸನ ಸುಮಾರು ಅರ್ಧ ಘಂಟೆ ನಡೆದ ಮೇಲೆ ದೇವಿ ತೇರನ್ನೇರುತ್ತಾಳೆ.
ಈ ಊರಲ್ಲಿ ತಮಟೆ ಬಡಿಯೋರು, ತಳವಾರರು, ಕುಂಬಾರರು, ಲಂಬಾಣಿಗರು, ಕುರುಬರು, ಗೌಡರು, ಕಮ್ಮಾರರು ಇರೋ ತರ ಅಸಾದಿಗಳು ಇದ್ದಾರೆ. ಅವರಿಗೆ ಜಾತ್ರೆ ಸಮಯದಲ್ಲಿ ಬೈಯೋದೇ ಕಾಯಕ. ಮಿಕ್ಕಂತೆ, ಸಣ್ಣ ರೈತರು, ಕೂಲಿಕಾರರಾಗಿ ಜೀವನ ಮಾಡುತ್ತಾರೆ.
ಈ ಅಸಾದಿ ಬೈಗುಳ ನೋಡಿದ ನನಗೆ, ಈ ಸಮಾಜ ಸಾಮಾನ್ಯ ಹೆಣ್ಣು ಒತ್ತಟ್ಟಿಗಿರಲಿ, ಊರೆಲ್ಲ ಪೂಜಿಸುವ ಗ್ರಾಮ ದೇವತೆಯನ್ನೇ ಬಿಡಲ್ವಲಪ್ಪ! ಅನಿಸ್ತು. ದೇವಿಗೆ ಬೈಸಿಕೊಳ್ಳೋಕೆ ಖುಷಿಯೋ! ಅಥವಾ ದೇವಿಯ ಮೂರ್ತಿ ಹಿಡಿದು ತೇರನ್ನೇರಿಸಲು ನಿಂತ ಊರವರಿಗೆ, ಹೆಣ್ಣು ದೇವರು ಬೈಸಿಕೊಳ್ಳೋದನ್ನ ಕೇಳಲಿಕ್ಕೆ ಖುಷಿಯೋ ಅನ್ನುವುದನ್ನು ಆ ಅಂತರಘಟ್ಟಮ್ಮನೇ ಹೇಳಬೇಕು.
0 ಪ್ರತಿಕ್ರಿಯೆಗಳು