ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವ್ವ ಹೇಳಿದ್ದೇ ನವುಲಿನ ಕಥೆಯ ನವಿರಾಗಿ

ರಾಜೇಂದ್ರ ಪ್ರಸಾದ್

ಅವ್ವ ಹೇಳುತ್ತಲೇ ಇದ್ದಳು
ಹೇಳಿದ್ದೇ ನವುಲಿನ ಕಥೆಯ ನವಿರಾಗಿ
ವರುಷ ವರುಷವೂ ಹೊಸದಾಗಿ
ಯುಗಾದಿ ಹಿಂದಿನ ಹುಣ್ಣಿಮೆಯ ದಿನ
ಬಣ್ಣದ ಬೆರಗು ಹಿಡಿದವಳಂತೆ!

ಅಂದೂ ಹಾಗೇ
ಯುಗಾದಿ ಹಿಂದಿನ ಹುಣ್ಣಿಮೆಯ ದಿನ
ನವುಲೊಂದು ಬಂದು ಬಿನ್ನಾಣ ತೋರುತ್ತಾ
ಮನೆಯ ಮಾಳಿಗೆ ಮೇಲೆ ಕೂತಿತ್ತಂತೆ!
ಮೂರು ರಾತ್ರಿಗಳ ಕಳೆದು ಎರಡನೆಯ ಜಾವ
ಅದು ಕೂಗುವ ಸದ್ದಿಗೆ ಬೆಚ್ಚಿದ ಅವ್ವ ನನ್ನ ಹಡೆದಳಂತೆ.

ಮುಂಜಾನೆ ಮಬ್ಬು ಕಣ್ಣಿನ ಮುತ್ತಜ್ಜಿ
ಅಂಗಳದಿ ಗರಿ ಬಿಚ್ಚಿ ಬ್ರಹ್ಮಾಂಡವ ತೋರುತ್ತಾ
ವಜ್ಜುರದ ಹರಳಿನ ಬೆಳ್ಳಿಗಜ್ಜೆಗಳಲಿ ಕುಣಿಯುತ್ತಾ
ನಿಂತ ನವುಲ, ಸೋಜಿಗವಾಗಿ ಕಾಣುತ್ತಿರಲು
ಭಮ್ಮನೆ ಬಾನಿಗೆ ಜಿಗಿದು ಹಾರಿದ ಗಿರಿನವುಲು
ಬಿಟ್ಟುಹೋದ ಏಳುಗರಿಗಳನ್ನು,
ಬೆಳ್ಳಿಯ ಕಾಲ್ಗಡಗವನ್ನು ತೊಟ್ಟಿಲಿಗೆ ಕಟ್ಟಿದ್ದರಂತೆ ;
ಚಂಡಿ ಹಿಡಿವ ಕೂಸಿಗೆ ಚಂಡಮಾರುತದಂತ ಕೋಪ,
ನವಿಲುಗರಿ ಕಂಡರೆ ಸಾಕು ಕೆಂಡಸಂಪಿಗೆಯ ನಗುವಂತೆ!

ಅದಾಗಿ ಹದಿನೆಂಟು ವರ್ಷಗಳ ಪರ್ಯಂತ
ಮಾಳಿಗೆಯಲ್ಲಿ ಸಿಕ್ಕ ಗರಿಗಳಿಗೆ ಲೆಕ್ಕವಿಲ್ಲ.
ಕಳೆದುಹೋದ ಬೆಳ್ಳಿಗೆಜ್ಜೆ ಹುಡುಕದ ಜಾಗವಿಲ್ಲ.
ಎಂದು ಕನವರಿಸುತ್ತಲೇ ಇದ್ದಳು, ಕಣ್ಣಿನೊಳಗೆ
ಬೆಳಕಿನ ತಂತುವಿನ ಬೆಸುಗೆ ಇರಲಾಗಿ…

* * *
ಮೊನ್ನೆಯಿಂದ ನವುಲು,
ಸತ್ತಿಗೆ ಸೂರೆಪಾನಗಳನು ಹಿಡಿದ ದಿಬ್ಬಣ
ಡಮರು ಡಕ್ಕೆಗಳ ಜೊತೆ, ಅಂಗಳಕೆ ಬಂದಂತೆ
ನನ್ನೆದೆಯ ಮೇಲೆ ಗರಿಬಿಚ್ಚಿ ಭೂ-ವ್ಯೋಮ ಕಂಡಂತೆ
ಬೆಡಗಿನ ಕನಸು ದಿನವೂ ಬೀಳುತ್ತಲೇ ಇದೆ.

ಇಲ್ಲಿ ಈ ಕನಸಲ್ಲಿ
ನನ್ನ ಚಿತೆಗೆ ಬೆಂಕಿ ಹೊತ್ತಿಸಿದ ಮೇಲೆ ಏಳುವ
ಆ ನವುಲು ಹಿಂಡನ್ನು ನೀವು ಎಣಿಸಲಾರಿರಿ!
ಮಳೆಬಿಲ್ಲು ಮುರಿವ ಶಬುದ ಕೇಳಲಾರಿರಿ!
ಅಲ್ಲಿ ನಾನು ನಾನಲ್ಲ.. ಆದರಿಲ್ಲಿ ನಿಮಿತ್ತ! ~

‍ಲೇಖಕರು Avadhi GK

20 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading