ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅವನಿಗೆಲ್ಲ ಗೊತ್ತಿತ್ತು, ಮೊದಲು ಗುಡುಗು ನಂತರ ಮಳೆ..’

ಬಸವ ರಾಜು

ನಡೆಯುತ್ತಿತ್ತು ಪಡಸಾಲೆಯಲ್ಲಿ ಪಾಂಡಿತ್ಯ ಚರ್ಚೆ.
ಅವನಿಗೆಲ್ಲ ಗೊತ್ತಿತ್ತು; ನಿಜ, ಮೊದಲು ಗುಡುಗು ನಂತರ ಮಳೆ.
ಗುಡುಗುಡುಗಿ ಮುದುಕಿ ಸುರಿದಳು ಬಿಸಿ ನೀರು
ಘಾಟಿ ಹಳದಿ ಕುದುರೆಯವಳು;ಅಜಗಜಾಂತರ ಯೌವನ, ಯೋಚನೆ
 
ಅವನಿಗೆಲ್ಲ ಗೊತ್ತಿತ್ತು;ನಿಜ, ಮೊದಲು ಗುಡುಗು ನಂತರ ಮಳೆ.
ತಾಳುತ್ತಲೇ ಇದ್ದ ತಾಳಿ ಕಟ್ಟಿದ ಮೇಲೂ…
ಪಾಪ, ಅವಳಾದರೂ ಮಾಡೋದೇನು?
ಇವನಿಗೋ ತತ್ವದ ಅರಿಕೆ, ಅವಳಿಗೋ ತೆಕ್ಕೆಯ ಕನವರಿಕೆ
ನಿಡುಸುಯ್ದರು ನಿಗುರದವ, ಬೇಗೆಯೇ ಸುಕ್ಕು ತರಿಸಿತ್ತಿವಳಿಗೆ
ತೆಕ್ಕೆಗೆ ತಪಿಸಿದಳಿಗೆ ಸಿಕ್ಕಿದ್ದು ಬರೀ ವಾದಗಳ ವಾಂತಿ-ಬೇಧಿ

ಅವನಿಗೆಲ್ಲ ಗೊತ್ತಿತ್ತು;ನಿಜ, ಮೊದಲು ಗುಡುಗು ನಂತರ ಮಳೆ.
ಸುಖಕ್ಕಾಗಿ ಕಾತರಿಸಿ ಸಾಕಾದವಳಿಗೆ ಕೊನೆಗೆ ಸಿಕ್ಕ
ಮಗನಂಥಾ ಅಗಲ ಎದೆಯವನು
ಬಾಯಾರಿದ್ದವನಿಗೆ ಮಜ್ಜಿಗೆಯೊಂದಿಗೆ ಸಿಕ್ಕಿತ್ತು ಬೆಣ್ಣೆ
ವಿಶಾಲ ಎದೆಯ ಬಾಣಲೆಯಲ್ಲಿ ಕಮ್ಮಗೆ ಕಾದಿತ್ತು ತುಪ್ಪ
ಹಳದಿ ಕುದುರೆಯ ಬಣ್ಣ ಬದಲಾಗಲಿಲ್ಲ. ಅದನ್ನೂ ತಾಳಿಕೊಂಡ ಗಂಡ
 
ಅವನಿಗೆಲ್ಲ ಗೊತ್ತಿತ್ತು;ನಿಜ, ಮೊದಲು ಗುಡುಗು ನಂತರ ಮಳೆ.
ಯಾವುದೋ ಗಬ್ಬು ಗೋಷ್ಠಿ ಮುಗಿಸಿ, ತಡ ಮನೆಗೆ ಬಂದ
ಜೋರು ರಂಪ, ನಿನಗೇಕೆ ಮಕ್ಕಳು, ಮಡದಿ, ಮನೆ?
ಕಾಡಿತ್ತು ಪಾಪ ಪ್ರಜ್ಞೆ, ಅತ್ತವಳ ಕಣ್ಣಿಂದ ನೀರಿಂಗಿ ಹೊಗೆ ಬಂತು
ಕೋಪಿಷ್ಟ ಕಣ್ಣಿನ ನಿಗಿನಿಗಿ ಕೆಂಡ ನೀರಿಗೆ ಬುಸ್ ಅಂದಿತ್ತು
 
ಅವನಿಗೆಲ್ಲ ಗೊತ್ತಿತ್ತು;ನಿಜ, ಮೊದಲು ಗುಡುಗು ನಂತರ ಮಳೆ.
ಅತ್ತವಳ ಅಂತರಂಗದಲ್ಲಿ ಆಸೆಯಷ್ಟೇ ಆತುರಪಟ್ಟಿತ್ತು
ಅದು ತಪ್ಪೇ ಅಲ್ಲವೆಂದು ತನ್ನಲ್ಲೇ ವಾದಿಸಿಕೊಂಡ ವಾಗ್ಮಿ
ಬಿಸಿಗೆ ಬೆಣ್ಣೆ ತುಪ್ಪವಾಗೋದು ತಪ್ಪಾ? ಅವನಿಗೆಲ್ಲ ಗೊತ್ತಿತ್ತು…
 
ಎಲ್ಲ ಗೊತ್ತಿದ್ದರೇನು, ಮಡದಿಯ ಮನಗೆಲ್ಲದ ನೀನೆಂಥಾ ಜ್ಞಾನಿ?
ನಿನಗೇಕೆ ಖ್ಯಾತಿ? ಅವಳಿಗ್ಯಾಕೆ ಕುಖ್ಯಾತಿ? ತಪ್ಪು ಅವಳದ್ದಲ್ಲವೇ ಅಲ್ಲ…
ಬೆಪ್ಪ ಮೊದಲೇ ಅರಿವಿರಬೇಕಿತ್ತು, ಅರಿಕೆ ಬರೀ ಬದನೆಕಾಯಿಯಷ್ಟೇ ಅಲ್ಲ
Xanthippe ಕೆಟ್ಟವಳಲ್ಲ. ಹೆಣ್ಣಾಗಿ ನಿನ್ನೊಂದಿಗೆ ಹೆಣಗಿದ್ದೇ ಅವಳ ಕೈಂಕರ್ಯ.
 

‍ಲೇಖಕರು G

6 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading