’ಹೀಗೇ ಅಮ್ಮನ ನೆನಪಿನ ತುಣುಕುಗಳು..’ – ನಾ ದಿವಾಕರ್

ಜೂನ್ 5 ನನ್ನ ತಾಯಿ ಮೃತರಾದ ದಿನ. 1990. 24 ವರ್ಷಗಳು ಗತಿಸುತ್ತಿವೆ.

ಈ ನೆನಪಿನಲ್ಲಿ ಒಂದು ಭಾವುಕ ಅಭಿವ್ಯಕ್ತಿ.

ನಾ ದಿವಾಕರ

ಜೀವನದ ಅರ್ಧ ಭಾಗವನ್ನು ನೀನಿಲ್ಲದೆಯೇ ಕಳೆದಿರುವೆ. ನಿನ್ನನ್ನು ಕಳೆದುಕೊಂಡ ನಾನು ನತದೃಷ್ಟನೋ ನನ್ನೊಡನೆ ಇನ್ನೂ ಕೆಲಕಾಲ ಬಾಳುವ ಅವಕಾಶದಿಂದ ವಂಚಿತಳಾದ ನೀನು ನತದೃಷ್ಟೆಯೋ ಹೇಳಲಾರೆ. ಆದರೆ ಒಂದಂತೂ ನಿಜ ಅಮ್ಮ. ನೀನಿಲ್ಲದ 24 ವರ್ಷಗಳಲ್ಲಿ ಜೀವನದ ಸಾಕ್ಷಾತ್ಕಾರವಾಗಿದೆ. ಏಕೆನ್ನುತ್ತೀಯಾ , ಒಲವೇ ಬದುಕು, ಪ್ರೀತಿಯೇ ಮನುಕುಲದ ಆಶಯ, ಪ್ರೇಮವೇ ಬಾಳ ರಸ ಎಂದೆಲ್ಲಾ ಭಾವಿಸಿ ಬೆಳೆಯುತ್ತಿರುವ ನನಗೆ ನಿನ್ನ ಪ್ರೀತಿಯೇ ಇಲ್ಲದ 24 ವರ್ಷಗಳು ಮಾನವ ಪ್ರಪಂಚದ ವಿವಿಧ ಮುಖಗಳನ್ನು, ಮುಖವಾಡಗಳನ್ನು, ಆಯಾಮಗಳನ್ನು ಪರಿಚಯಿಸಿದೆ. ಒಂದೇ ಒಂದೆಡೆ ಮಾತ್ರ ನಿನ್ನೊಳಗಡಗಿದ್ದ ಮಾತೃಪ್ರೇಮದ ಛಾಯೆಯನ್ನು ಕಂಡಿದ್ದೇನೆ. ಆದರೂ ನಿನ್ನ ತೊಡೆಯ ಮೇಲಿನ ನಿದ್ದೆ, ನಿನ್ನ ಕೈತುತ್ತು, ನೀನು ಪ್ರೀತಿಯಿಂದ ಉಣಬಡಿಸುತ್ತಿದ್ದ ಖಾದ್ಯಗಳು , ಹೋಗಲಿ ಬಿಡು ನಿನಗೆ ಸರಿಸಾಟಿಯಾಗಲು ಯಾರಿಗೆ ಸಾಧ್ಯ ? ನಾನು ನಿನ್ನ ಶ್ರಾದ್ಧ ಮಾಡಲಿಲ್ಲ, ಸಂಸ್ಕಾರ ಮಾಡಲಿಲ್ಲ, ನಿನ್ನನ್ನು ಲೋಕಾರೂಢಿಯಂತೆ ವೈಕುಂಠಕ್ಕೂ ಕಳುಹಿಸಲಿಲ್ಲ. ಇಹಲೋಕ ತ್ಯಜಿಸಿದ ನನ್ನಮ್ಮ ಇನ್ನೆಂದಿಗೂ ಯಾವ ರೂಪದಲ್ಲೂ ನನ್ನ ಮುಂದೆ ಸುಳಿಯುವುದಿಲ್ಲ ಎಂಬ ವೈಚಾರಿಕ ನಂಬಿಕೆ ಇದಕ್ಕೆ ಕಾರಣ. ಕೋಪವಿಲ್ಲ ತಾನೇ ಅಮ್ಮ ?

ನೀನೇ ಹೇಳುತ್ತಿದ್ದೆಯಲ್ಲ ನನಗಾಗಿ ಬದುಕಿದ್ದಾಗಲೇ ಇಷ್ಟೆಲ್ಲಾ ಶ್ರಮ ಪಡುತ್ತಿದ್ದೀಯ ಮಗೂ ಸತ್ತ ಮೇಲೆ ನೀನು ಪಿಂಡ ಇಡುವುದೂ ಬೇಡ ಎಂದು. ಓದಿದ್ದು ನಾಲ್ಕನೆ ತರಗತಿಯಾದರೂ ಎಷ್ಟೊಂದು ಪ್ರಬುದ್ಧತೆ ಇತ್ತು ನಿನ್ನಲ್ಲಿ. ಹ್ಞಾ ಪಿಂಡ ಎಂದಾಕ್ಷಣ ನಿನ್ನ ಆ ಮಧುರ ಬೈಗಳು ನೆನಪಾಗುತ್ತದೆ. ನಿಮ್ಮಮ್ಮನ ಪಿಂಡ ಎನ್ನುವ ನಿನ್ನ ಬೈಗಳು ಎಷ್ಟು ಮಧುರವಾಗಿರುತ್ತಿತ್ತು. ಸೌಮ್ಯವಾಗಿದ್ದರೆ ಅದ್ಭುತವಾದ ತಾಯಿ ಕೋಪಗೊಂಡರೆ ಚಾಮುಂಡೇಶ್ವರಿ ಎಂದು ನಿನ್ನನ್ನು ಬಣ್ಣಿಸಿದರೆ ತಪ್ಪೇನಿಲ್ಲ. ಅಬ್ಬಾ ಎಷ್ಟೊಂದು ಕೋಪ ನಿನ್ನಲ್ಲಿ. ಕೋಪ ಎನ್ನುವುದಕ್ಕಿಂತಲೂ ಸ್ವಾಭಿಮಾನ. ನೀನು ಸಾಯುವ ಒಂದು ತಿಂಗಳ ಮುನ್ನ ಒಮ್ಮೆ ನಿನ್ನ ಸೊಸೆ ಪಾತ್ರೆ ಕೆಳಗೆ ಬೀಳಿಸಿದಳು ಎಂದು ಸಿಕ್ಕಾಪಟ್ಟೆ ಬೈದುಬಿಟ್ಟಿದ್ದೆ. ಮನೆಗೆ ಬಂದ ಸೊಸೆಯನ್ನು ಯಾಕಮ್ಮಾ ಬೈತೀಯಾ ಹೋಗಲಿ ಬಿಡು ಎಂದು ಹೇಳಿದ ನನ್ನ ಮೇಲೆ ಸಿಟ್ಟಾಗಿ ಒಂದು ವಾರ ನೀನು ನನ್ನೊಡನೆ ಸರಿಯಾಗಿ ಮಾತಾಡಿರಲಿಲ್ಲ. ಅದಾದ ಒಂದು ತಿಂಗಳಿಗೆ ನಿನ್ನ ಪಯಣ ಮುಗಿದಿತ್ತು. ಆ ಪಾಪ ಪ್ರಜ್ಞೆ, ಅಪರಾಧಿ ಮನೋಭಾವ ಇಂದಿಗೂ ಕಾಡುತ್ತಿದೆ ಅಮ್ಮಾ.
ಆದರೂ ನಾನು ಆಫೀಸಿನಿಂದ ಮನೆಗೆ ಬಂದ ಕೂಡಲೇ , ಆಪರೇಷನ್ ಪ್ರಭಾವದಿಂದ ನಡೆಯಲು ಸಾಧ್ಯವಾಗದಿದ್ದರೂ, ಮಗು ಬಂತು ನೋಡೇ ಎನ್ನುತ್ತಾ ಗೋಡೆ ಹಿಡಿದು ನಡೆಯುತ್ತಾ ನನಗೆ ನೀರು ತಂದು ಕೊಡುತ್ತಿದ್ದೆ. ಈಗ ಮನೆಗೆ ಬಂದ ಕೂಡಲೇ ನಾನೇ ನೀರು ಕುಡಿಯುವಾಗಲೆಲ್ಲಾ ಆ ದೃಶ್ಯ ಕಣ್ಮುಂದೆ ಬರುತ್ತದೆ. ಕುಡಿಯುವ ನೀರು ಕೆಲವೊಮ್ಮೆ ಕಣ್ಣಿಂದ ಹೊರಬರುವುದೂ ಉಂಟು. ಇರಲಿ ಬಿಡು. ಇದುವೇ ಜೀವನ ಅಲ್ಲವೇ ಅಮ್ಮಾ. ಲೇ ಕರು ಬಂತು ನೋಡೇ ಎಂದು ನಾನು ಬಂದ ತಕ್ಷಣ ನೀನು ಕೂಗಿ ಹೇಳುತ್ತಿದ್ದ ದೃಶ್ಯ ಮರೆಯಲಾಗುವುದೇ ಇಲ್ಲ. ಮಗು ಅಥವಾ ಕರು ಇವೆರಡೇ ನೀನು ಸಂಭೋಧಿಸುತ್ತಿದ್ದ ವೈಖರಿ. ಕೆಲವೊಮ್ಮೆ ಸ್ನೇಹಿತರ ಮುಂದೆಯೂ ಹೀಗೆಯೇ ಕರೆದು ನನಗೆ ಮುಜುಗರವಾಗಿದ್ದೂ ಉಂಟು. ಒಂದು ಘಟನೆ ನೆನಪಾಗುತ್ತಿದೆ ಅಮ್ಮಾ. ಒಮ್ಮೆ , 1982ರಲ್ಲಿ , ನಿನ್ನೊಡನೆ ನಾನು ಕೈವಾರದಿಂದ ಚಿಂತಾಮಣಿಗೆ ಹೊರಟಿದ್ದೆ. ಬಸ್ಸಿನಲ್ಲಿ ನಿನ್ನನ್ನು ಕೂಡಿಸಿ ಬಿಸ್ಕಟ್ ತರೋಣ ಎಂದು ಅಂಗಡಿಗೆ ಹೋದೆ. ಬಸ್ ಚಲಿಸಲು ಆರಂಭಿಸಿತ್ತು. ಆಗ ನೀನು ’ಅಯ್ಯೋ ಕಂಡಕ್ಟರೇ ನನ್ನ ಮಗು ಕೆಳಗೆ ಇಳಿದಿದೆ ನಿಲ್ಲಿಸ್ರೀ’  ಎಂದು ಜೋರು ಮಾಡಿದ್ದೆ. ನಾನು ಓಡಿ ಬಂದು ನಿನ್ನ ಬಳಿ ಕುಳಿತಾಗ ಕಂಡಕ್ಟರ್ ಇದೇನಾ ನಿನ್ನ ಮಗು ಎಂದು ರೇಗಿಸಿದ್ದ. ಆಗ ನನಗೆ 21 ವರ್ಷ. ಎಷ್ಟು ಸುಂದರ ವಿಹಂಗಮ ಘಟನೆ ಅಲ್ಲವೇನಮ್ಮಾ ?
ಕರು ಬಂತು ನೋಡೇ ಎಂದು ನೀನು ಹೇಳಿದಾಗಲೆಲ್ಲಾ ಅಕ್ಕಂದಿರು ಬರಲಿ ಬಿಡು ಕಲಗಚ್ಚು ಇಡುತ್ತೇವೆ ಎಂದು ರೇಗಿಸುತ್ತಿದ್ದರು. ಇಬ್ಬರು ಸೊಸೆಯಿಂದಲೂ ತೃಪ್ತಿಯಾಗಿಲ್ಲ, ನೀನಾದರೂ ನನಗೆ ಒಳ್ಳೆಯ ಸೊಸೆಯನ್ನು ಕೊಡು ಎಂದು ಹೇಳುತ್ತಿದ್ದ ನೀನು ನನ್ನ ವಿವಾಹದ ಮುನ್ನವೇ ಕಣ್ಣುಮುಚ್ಚಿಬಿಟ್ಟೆ. ತಪ್ಪಲ್ಲವೇ ? ನಿನ್ನ ಅಂತಿಮ ದಿನದಂದೂ ನೀನಾಡಿದ ಮಾತುಗಳ ಕಿವಿಗಳಲ್ಲಿ ಗುಯ್ಗುಟ್ಟುತ್ತವೆ. ನಿನ್ನನ್ನು ಆಸ್ಪತ್ರೆಗೆ ಸೇರಿಸಲು ಉತ್ಸುಕನಾಗಿ ಬೆಂಗಳೂರಿಗೆ ಕರೆತಂದಾಗ ಆ ಮಗು ಯಾಕಿಷ್ಟು ಶ್ರಮ ಪಡುತ್ತೆ ಅದರ ಆರೋಗ್ಯ ಏನಾಗಬೇಡ ಎಂದು ನೀನು ಹೇಳಿದ್ದು ತಪ್ಪಲ್ಲವೇ. ನಾನೆಷ್ಟೇ ಶ್ರಮ ಪಟ್ಟರೂ ನೀನು ನಿಲ್ಲಲಿಲ್ಲ ಹೊರಟೇ ಬಿಟ್ಟೆ. ಆದರೆ ನನ್ನ ಶ್ರಮದ ಸಾರ್ಥಕತೆ ನಿನ್ನ ಮಧುರ ನೆನಪಿನಲ್ಲಿ ಉಳಿದಿದೆ ಅಮ್ಮಾ. ನಿನ್ನ ನೆನಪಿನಲ್ಲಿ ವಿಪ್ರರಿಗೆ ಪ್ರಸಾದ, ಕಾಗೆಗೆ ಪಿಂಡ ನಾನು ಇಡಲು ಮುಂದಾಗಿಲ್ಲ. ಆದರೆ ನನ್ನ ಮನದಾಳದಲ್ಲಿ ನಿನ್ನನ್ನು ಪ್ರತಿಷ್ಠಾಪಿಸಿದ್ದೇನೆ. ಶಾಶ್ವತವಾಗಿ. ನೆನಪುಗಳ ಭಂಡಾರ ಬಿಚ್ಚುತ್ತಾ ಹೋದರೆ ಮುಗಿಯುವುದೇ ಇಲ್ಲ. ಕೈಗಳು ಬರೆಯಲಿಚ್ಚಿಸುತ್ತಿವೆ. ಕಂಗಳು ಮಂಜಾಗುತ್ತಿವೆ. ಹನಿಗಳು ಅಡ್ಡ ಬರುತ್ತಿವೆ. ನಿನ್ನ ನೆನಪುಗಳಲ್ಲೇ ದಿನಗಳೆಯುವುದೊಂದೇ ನನ್ನ ಭಾಗ್ಯ.

‍ಲೇಖಕರು G

June 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Palahalli Vishwanath

    ನಿನ್ನ ನೆನಪಿನಲ್ಲಿ ವಿಪ್ರರಿಗೆ ಪ್ರಸಾದ, ಕಾಗೆಗೆ ಪಿಂಡ ನಾನು ಇಡಲು ಮುಂದಾಗಿಲ್ಲ. ಆದರೆ ನನ್ನ ಮನದಾಳದಲ್ಲಿ ನಿನ್ನನ್ನು ಪ್ರತಿಷ್ಠಾಪಿಸಿದ್ದೇನೆ – liked this. With time, we internalize our parents, relatives, friends, who were close to us and who are no more with us. This is the way time heals

    ಪ್ರತಿಕ್ರಿಯೆ
  2. Raj

    by a fair distance this is the best writing from you sir!
    The relation with our parents is the most basic of all and also the most purest.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: