‘ಅಲ್ಲಮ’ ನೆಂಬ ಅನುಭಾವದ ಬೆರಗಿಗೆ ಕನ್ನಡಿ
·
ಅರಕಲಗೂಡು ಜಯಕುಮಾರ್
ಹೊನ್ನು ಮಾಯೆಯೆಂಬರು, ಹೆಣ್ಣು ಮಾಯೆಯೆಂಬರು, ಮಣ್ಣು ಮಾಯೆಯೆಂಬರು ;
ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೇ ಮಾಯೆ ಕಣಾ ಗುಹೇಶ್ವರಾ…
ಎಂಬ ಹಾಡಿನಲ್ಲೇ ಅಲ್ಲಮನನ್ನು ಪ್ರೇಕ್ಷಕನಿಗೆ ದಾಟಿಸುವ ಪ್ರಯತ್ನದೊಂದಿಗೆ ಚಿತ್ರ ಆರಂಭಗೊಳ್ಳುತ್ತದೆ ಹಾಗೂ ಅಲ್ಲಮ ಎಂಬ ವಿರಾಟ್ ರೂಪಿಯನ್ನ ಪ್ರೇಕ್ಷಕನ ತೆಕ್ಕೆಗೆ ತಳ್ಳುವ ಯತ್ನ ಬಸವಣ್ಣನ ಅನುಭವ ಮಂಟಪದಲ್ಲಿ ಶೂನ್ಯ ಪೀಠವನ್ನು ಏರುವ ಮೂಲಕ ಅನಾವರಣಗೊಳ್ಳುತ್ತಾ ಹೋಗುತ್ತದೆ.
12ನೇ ಶತಮಾನದಲ್ಲಿ ವಚನಗಳ ಬೆಡಗಿನ ಮೂಲಕವೇ ಜಾಗೃತಿಯ ಕಿಡಿ ಹಚ್ಚಿದ ಅಲ್ಲಮನಂತಹ ಅಲ್ಲಮನನ್ನು ಮುಟ್ಟುವುದು ಸುಲಭದ ಮಾತಲ್ಲ. ಏಕೆಂದರೆ ಅಲ್ಲಮನನ್ನು ದಕ್ಕಿಸಿಕೊಳ್ಳುವ, ನಿಖರವಾಗಿ ರೂಪಿಸುವ ಸಾಕಷ್ಟು ಐತಿಹ್ಯಗಳು ಆ
ವ್ಯಕ್ತಿತ್ವವನ್ನು ಸುತ್ತುವರೆದಿವೆ. 13ನೇ ಶತಮಾನದ ಹರಿಹರ ಕವಿಯೂ ಸಹಾ ವಿಸ್ತೃತವಾಗಿ ಅಲ್ಲಮನ ಕುರಿತು ವ್ಯಾಖ್ಯಾನಿಸಿದರೂ ಸಹಾ ಅಲ್ಲಮನ ಪ್ರಭಾವಳಿಯಿಂದ ಹೊರಬಂದು ನೈಜ ಸ್ವರೂಪ ಕಟ್ಟಿಕೊಡುವಲ್ಲಿ ಸೋಲುತ್ತಾರೆ.

ಇಂತಹದ್ದರಲ್ಲಿ ಟಿ ಎಸ್ ನಾಗಾಭರಣರಂತಹ ಸೃಜನಶೀಲ ನಿರ್ದೇಶಕ ಚಿತ್ರ ಸಾಧ್ಯತೆಗಳ ಗೊಂದಲಗಳ ನಡುವೆಯೂ ಅಲ್ಲಮನನ್ನು ಚಿತ್ರದ ಮೂಲಕ ಸ್ಪರ್ಶಿಸುವ ಪ್ರಯತ್ನ ಮಾಡಿದ್ದಾರೆಂಬುದು ಅಭಿನಂದನೀಯ. ವ್ಯಕ್ತಿ ಚಿತ್ರಣಗಳನ್ನು ಸೆಲ್ಯೂಲಾಯ್ಡ್ ಮಾಧ್ಯಮಕ್ಕೆ ಹೊಂದಿಸುವಲ್ಲಿ ಹಿಂದಿ ಚಿತ್ರರಂಗದ ಅಭಿವ್ಯಕ್ತಿ ಮಂಚೂಣಿಯಲ್ಲಿದೆ. ಕನ್ನಡದಲ್ಲಿ ಅಂತಹ ಪ್ರಯತ್ನಗಳನ್ನು ಸಮರ್ಥವಾಗಿ ಕಟ್ಟಿಕೊಡಬಲ್ಲ ಸಮರ್ಥರು ನಾಗಾಭರಣ. ಅಲ್ಲಮನೆಂಬ ಅನುಭಾವದ ಬಯಲ ಬೆರಗಿಗೆ ನಾಗಾಭರಣ ಕನ್ನಡಿ ಹಿಡಿದಿದ್ದಾರೆ.
ಬಸವಣ್ಣ ದಕ್ಕಿದಷ್ಟು ಅಲ್ಲಮ ಜನಸಾಮಾನ್ಯರಿಗೆ ದಕ್ಕಿದ್ದು ತುಂಬಾ ಕಡಿಮೆ ಎನ್ನಬಹುದು. ಆದರೆ ಆ ದಿಸೆಯಲ್ಲಿ ‘ಅಲ್ಲಮ’ ಉತ್ತಮ ಪ್ರಯತ್ನ. ಮಾಯೆಯನ್ನ ಮೀರಿ ಶೂನ್ಯದಲ್ಲಿ ಉಚ್ಚ್ರಾಯ ಸ್ಥಿತಿಗೆ ತಲುಪುವ ಅಲ್ಲಮನನ್ನು ಧ್ವನಿಯ ಏರಿಳಿತ, ಭಾವಗಳ ಮೂಲಕವೇ ದಾಟಿಸುವ ನುರಿತ ನಟರಿಗೆ ಸಾಟಿಯಾಗುವಂತೆ ಪ್ರೇಕ್ಷಕನ ಮುಂದೆ ತಂದು ನಿಲ್ಲಿಸುವ ಚಿತ್ರದ ನಾಯಕ ಧನಂಜಯಗೆ ಹ್ಯಾಟ್ಸಾಫ್ ಹೇಳಬಹುದು. ಇಡೀ ಚಿತ್ರದಲ್ಲಿ ಪಾತ್ರದ ಜೀವಂತಿಕೆಗೆ ಪೂರಕವಾದ ವಚನಗಳ ಬಳಕೆ, ಸಂಗೀತ ತುಂಬಾ ಮೇಲ್ಮಟ್ಟದಲ್ಲಿದೆ ಆದರೆ ಸಂಭಾಷಣೆಯ ಕುರಿತು ಹೇಳದಿದ್ದರೆ ಅದು ಅಪೂರ್ಣವಾಗಿ ಬಿಡುತ್ತದೆ.
ಐತಿಹಾಸಿಕ ಚಿತ್ರಗಳಲ್ಲಿ ಪಾತ್ರಗಳಿಗೆ ಗಟ್ಟಿತನ ಮತ್ತು ಕಥೆಗೆ ಓಘ ತಂದು ಕೊಡುವುದು ಸಂಭಾಷಣೆ, ಕಥನ ಕುತೂಹಲದ ಕಾಯ್ದುಕೊಳ್ಳುವಿಕೆಗೆ ಸಂಭಾಷಣೆ ಸಾಥ್ ನೀಡಿದೆ. ಅಮ್ಮ-ಮಗನ ನಡುವಿನ ಸಂಭಾಷಣೆ, ಗುರು-ಶಿಷ್ಯರ ನಡುವಣ ಸಂಭಾಷಣೆ, ಗೆಳೆಯರ ನಡುವಿನ ಸಂವಹನ ಹೆಚ್ಚು ಅರ್ಥಪೂರ್ಣವಾಗಿ ಧ್ವನಿಸುತ್ತ ಸ್ಮೃತಿಪಟಲವನ್ನು ತಾಕುತ್ತದೆ.
ರಾಷ್ಟ್ರ ಪ್ರಶಸ್ತಿ ವಿಜೇತರಾದ ನಟ ಸಂಚಾರಿ ವಿಜಯ್ ತನ್ಮಯತೆಯಿಂದ ನಿರ್ವಹಿಸಿದ ಬಸವಣ್ಣನ ಪಾತ್ರ, ಅಲ್ಲಮನ ಪಾತ್ರ ನಿರ್ವಹಿಸಿರುವ ಧನಂಜಯ ಅವರ ಜೊತೆಗೆ ಜುಗಲ್ ಬಂದಿ ನಡೆಸಿದಂತಿದೆ. ಬನವಾಸಿಗೆ ಬರುವ ಅಲ್ಲಮನಿಗೆ ಅನಿರೀಕ್ಷಿತವಾಗಿ ಕಾಣಸಿಗುವ ನೃತ್ಯಗಾತಿ ಮಾಯಾದೇವಿಯಾಗಿ ಮೇಘನಾ ರಾಜ್ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.

ಅಲ್ಲಮನನ್ನು ಮೋಹಿಸುವ ಮಾಯಾದೇವಿ, ಚಿತ್ರದಲ್ಲಿ ಆತನನ್ನು ಮಿಲನಕ್ಕೆ ಸಂಧಿಸದಂತೆ ತೋರಿಸಲಾಗಿದೆ, ಮತ್ತು ಹೆಣ್ಣೆಂಬ ಮಾಯೆಯನ್ನು (ಆಕರ್ಷಣೆ) ಮೀರಿದ ವ್ಯಕ್ತಿತ್ವವಾಗಿ ಅಲ್ಲಮನನ್ನು ರೂಪಿಸಿರುವುದು ನಿರ್ದೇಶಕರ ಜಾಣತನ. ಆದರೆ ಇವರಿಬ್ಬರ ನಡುವಣ ಕೊಂಡಿಯಾಗಿ ಬರುವ ಶಿವಯ್ಯನ ನಂತರ ಮಾಯಾದೇವಿಯ ಪಾತ್ರ ಏಕಾಏಕಿ ಕಳೆದು ಹೋಗುವುದು ಚಿತ್ರದ ಓಟಕ್ಕೆ ಸೂಕ್ತ ಎಂದೆನಿಸುವುದಿಲ್ಲ. ಸಂಕಲನವೂ ಕೂಡ ಈ ದಿಸೆಯಲ್ಲಿ ಪೂರಕವಾಗಿಲ್ಲ ಎನಿಸುತ್ತದೆ. ಅಕ್ಕಮಹಾದೇವಿಯ ಪಾತ್ರಧಾರಿ ತುಟಿಯ ರಂಗು ರಾಚುವಂತೆ ಕಾಣುವುದರಿಂದ ಆ ಪಾತ್ರ ರೀಚ್ ಆಗುವಲ್ಲಿ ಸೋತಿದೆ.
ನಿರ್ವಿಕಾರ ಶಿವನೆಂಬ ಅಂತಶಕ್ತಿಯನ್ನು ತಲುಪುವ ಹಾದಿಯಲ್ಲಿ ಅಲ್ಲಮ ಪಡೆಯುವ ಆಧ್ಯಾತ್ಮಿಕ ಅನುಭೂತಿ ಮತ್ತು ಅದನ್ನು ನಿರೂಪಿಸುವ ಪ್ರಯತ್ನದಲ್ಲಿ ಪವಾಡಗಳ ಮೊರೆಹೋಗುವುದು ಅಗತ್ಯವಿರಲಿಲ್ಲ. ಇನ್ನೊಂದಿಷ್ಟು ವಚನಗಳನ್ನ ಬಳಕೆ ಮಾಡಿಕೊಂಡಿದ್ದಲ್ಲಿ ಮನೋಹರವಾದ ಗೀತರೂಪಕ ಚಿತ್ರ ಆಗುತ್ತಿತ್ತೇನೋ. ಛಾಯಾಗ್ರಹಣ ಚೆನ್ನಾಗಿದೆ, 12ನೇ ಶತಮಾನದ ದೃಶ್ಯ ಪುನರ್ ಸೃಷ್ಟಿಯಲ್ಲಿ ಕೃತಕತೆ ಎದ್ದು ಕಾಣುವುದರಿಂದ ಸಹಜತೆ ಕಳೆದು ಹೋಗಿದೆ.

ಸೆಲ್ಯೂಲಾಯ್ಡ್ ಮಾಧ್ಯಮಕ್ಕೆ ಅಲ್ಲಮ ಪ್ರಭುವಿನ ಕಥೆಯನ್ನು ಹೊಂದಿಸುವುದು ಸುಲಭ ಸಾಧ್ಯದ ಸಂಗತಿಯಲ್ಲ ಆದಾಗ್ಯೂ ಅತ್ತ ಪರಿಪೂರ್ಣ ಕಲಾತ್ಮಕ ಕಥೆ ಹೆಣೆಯದೇ ಕೊಂಚ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಂಡು ಕಥೆ ಹೆಣೆದ ರೀತಿ ಇಷ್ಟವಾಗುತ್ತದೆ. ವರ್ತಮಾನದಲ್ಲಿ ಐತಿಹಾಸಿಕ ಪುರುಷರನ್ನು ಜನಮಾನಸಕ್ಕೆ ಧಾಟಿಸಲು ಇದು ಅನಿವಾರ್ಯವೂ ಆಗಬಹುದು, ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಸೇರ್ಪಡೆಯಾಗುವ ಅಂಶಗಳು ಮುಖ್ಯ ಎನಿಸುತ್ತವೆ.
ಅಷ್ಟಕ್ಕೂ ಅಲ್ಲಮ ಏಕಾಏಕಿ ತೆರೆಗೆ ಬಂದ ಚಿತ್ರವಲ್ಲ, ಚಿತ್ರದ ತಯಾರಿಯ ಹಿಂದೆ ಸಾಕಷ್ಟು ಶ್ರಮ ಹಾಕಿರುವುದು ಕಾಣುತ್ತದೆ. ಪಾತ್ರವರ್ಗದ ಬದ್ದತೆ, ತಾಂತ್ರಿಕ ವರ್ಗದ ನೈಪುಣ್ಯತೆಯೂ ಪ್ರಶಂಸಾರ್ಹವಾಗಿದೆ. ಮಾಯೆಯನ್ನ ಅಭಿವ್ಯಕ್ತಿಸಿದ ರೀತಿಗೆ ಅಲ್ಲಲ್ಲಿ ತಕರಾರುಗಳು ಇದ್ದರೂ ಸಹಾ ಸಿನಿಮಾ ಸಾಧ್ಯತೆಗಳ ಮಿತಿ ಅರಿತಾಗ ತಕರಾರು ಮಂಚೂಣಿಗೆ ಬರಬಾರದು. ವರ್ತಮಾನದಲ್ಲಿ ‘ಅಲ್ಲಮ’ ತರಹದ ಚಿತ್ರಗಳು ಜನರನ್ನು ತಾಕುವಂತಾಗಬೇಕು ಮತ್ತು ಗೆಲ್ಲಬೇಕು.





0 Comments