ಡಾ ಅರ್ಚನಾ ಆರ್
**
ಸಂತೋಷ ಕುಮಾರ ಮೆಹಂದಳೆ ಅವರ ಹೊಸ ಕೃತಿ ‘ನಾತಿಚಾರಮಿ’ ಬಿಡುಗಡೆಯಾಗಿದೆ.
ಸಾಹಿತ್ಯ ಲೋಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಕೃತಿ ಕೊಳ್ಳಲು: 99459 39436
**
ಬಿಡುಗಡೆಗೂ ಮುನ್ನವೇ ಓದುಗರನ್ನ ಆಕರ್ಷಿಸಿದ್ದ ‘ಸಾಹಿತ್ಯ ಲೋಕ ಪಬ್ಲಿಕೇಶನ್’ನಿಂದ ಪ್ರಕಟವಾದ ಸಂತೋಷ ಕುಮಾರ್ ಮೆಹಂದಳೆ ಅವರ ‘ನಾತಿಚರಾಮಿ’ ಕೃತಿ ನಿನ್ನೆ ಮಧ್ಯಾಹ್ನ ನನ್ನ ಕೈ ಸೇರಿತ್ತು. ಕಳೆದ ವಾರವೇ ನಾನಿದನ್ನು ಲೇಖಕರ ಬಳಿ ಅಡ್ವಾನ್ಸ್ ಬುಕ್ ಮಾಡಿದ್ದೆ ಅವರ ಕೃತಿಗಳಿಗೆ ಬಿಡುಗಡೆಯ ಔಪಚಾರಿಕತೆ ಇಲ್ಲ, ಅಷ್ಟೇ ಅಲ್ಲ “ಬಿಡುಗಡೆಗು ಮುನ್ನವೇ ಎರಡನೇ ಮುದ್ರಣ ಆಗುತ್ತೆ ನೋಡಿ.” ಎಂದು ನಾನು ಹೇಳಿದ್ದೆ ಕೂಡ ಅದೇ ಕಾರಣಕ್ಕೆ ಮೊದಲೇ ಬುಕ್ ಮಾಡಿದ್ದರೂ ಯಾವಾಗ ಬರಬಹುದು ಎಂದು ಕಾತರ ಇದ್ದೆ ಇತ್ತು ಪತ್ರಿಕೆಗಳಲ್ಲಿ, ಫೇಸ್ಬುಕ್ನಲ್ಲಿ ಇದರ ಆಯ್ದ ಭಾಗಗಳನ್ನು ಓದಿದ ಮೇಲೆ ಆಸಕ್ತಿ ಮತ್ತಷ್ಟು ಹೆಚ್ಚಿತ್ತು. ‘ಓದು ವ್ಯಸನವಾಗಲಿ’ ಎನ್ನುವ ಸಂತೋಷ್ ಸರ್ ಅದನ್ನು ತಮ್ಮ ಕೃತಿಗಳ ಮೂಲಕ ಅಕ್ಷರಶ ನಿಜ ಮಾಡುತ್ತಾರೆ.
ಈ ಹೊತ್ತಿನ ಕನ್ನಡದ ವರ್ಸಟೈಲ್ ಲೇಖಕರಲ್ಲಿ ಒಬ್ಬರಾದ ಸಂತೋಷ್ ಸರ್ ಕಾದಂಬರಿ, ಕಥೆ, ವೈಜ್ಞಾನಿಕ ಲೇಖನಗಳು, ಪ್ರವಾಸ ಕಥನ, ಅಂಕಣ ಹೀಗೆ ಸಾಹಿತ್ಯದ ಎಲ್ಲಾ ವಲಯಗಳಲ್ಲೂ ತಮ್ಮ ಛಾಪನ್ನ ಮೂಡಿಸಿದ್ದಾರೆ. ಅವರ ಒಂದೊಂದು ಕೃತಿಯು ವಿಭಿನ್ನ ಮತ್ತು ಓದುಗರನ್ನು ಮೆಸ್ಮ ರೈಸ್ ಮಾಡುವ ಶೈಲಿಯವು. ಹೇಗೆ ಬರಹಗಾರರಿಗೆ ಬರಹಕ್ಕೆ ಸಿದ್ಧತೆ ಇರಬೇಕು ಅಂತೆಯೇ ಓದುಗನಿಗೂ ಒಂದು ಮಟ್ಟಿಗಿನ ಸಿದ್ಧತೆ ಬೇಕು ಎಂದು ನಂಬಿರುವವಳು ನಾನು. ಕಳೆದ ವಾರದಿಂದಲೂ ಈ ಕೃತಿಯ ಬರುವಿಕೆಗಾಗಿ ಹವಣಿಸಿದ್ದ ನನಗೆ ನಿನ್ನೆ ಈ ಕೃತಿ ತಲುಪಿದಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ಈ ವಾರಾಂತ್ಯದ ಎಲ್ಲಾ ಕೆಲಸವನ್ನು ಬದಿಗಿಟ್ಟು ಒಂದೇ ಸಮನೆ ಓದಿದ ಕೃತಿ ಇದು. ಒಟ್ಟು 179 ಪುಟಗಳ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಬಿಡುವಷ್ಟು ಆವರಿಸಿಕೊಳ್ಳುವ ಆಕರ್ಷಣೆ ನಾತಿಚರಾಮಿಯದ್ದು. ಪುಸ್ತಕದ ಮೊದಲ ಪುಟ ತೆರೆಯುತ್ತಿದ್ದಂತೆ ನನಗೆ ಕಂಡ “ಬದುಕಿನ ಗಮ್ಯದೊಡೆಗೆ ಸಾಗುವ ಹೆಣ್ಣಿನ ಮನಸ್ಸು ಎನ್ನುವ ಪ್ರತಿ ಸೃಷ್ಟಿಗೆ ಸಮರ್ಪಣೆ” ಎಂಬ ಸಾಲುಗಳೆ ಈ ಪುಸ್ತಕವನ್ನು ಬಿಟ್ಟು ಬಿಡದಂತೆ ಓದುವಂತೆ ಮಾಡಿತು.
ನಾತಿಚರಾಮಿಗೆ ಹಲವು ಆಯಾಮಗಳಿವೆ ಇದು ಏಕಕಾಲಕ್ಕೆ ಕಥೆ, ಕಾದಂಬರಿ, ಬಿಡಿಬಿಡಿಯಾದ ಲೇಖನ ಏನು ಬೇಕಾದರೂ ಆಗಿ ಬಿಡುವಂತಹ ಕೃತಿ ಇದನ್ನುಇದೇ ಪ್ರಕಾರ ಎಂದು ಗೆರೆ ಕೊರೆದು ಹೇಳಲಾಗದು ಓದಿದವರ ಭಾವಕ್ಕೆ ತಕ್ಕಂತೆ ಬದಲಾಗಬಲ್ಲ ಅಪರೂಪದ ಕೃತಿ. ನಾನಿಲ್ಲಿ ಕೃತಿಯನ್ನು ಕುರಿತು ಸಾಮಾನ್ಯ ಓದುಗಳಾಗಿ ಹೇಳುವುದೊಂದಷ್ಟಿದೆ . ಇತ್ತೀಚೆಗೆ ವಿಫಲವಾಗಿ ಬೆಳೆಯುತ್ತಿರುವ ಸಾಹಿತ್ಯ ಸೃಷ್ಟಿ ಒಂದೆಡೆ ಸಂತಸ ತಂದರೆ ಬರಡಾಗಿರುವ ವಿಮರ್ಶಾವಲಯ ಖೇದಕ್ಕೆ ಕಾರಣವಾಗಿದೆ. ವಿಮರ್ಶೆ ಎಂದರೆ ಕೇವಲ ಕೃತಿ ಪರಿಚಯಕ್ಕೆ, ಕೃತಿ – ಕೃತಿಕಾರರನ್ನ ಹೊಗಳುವುದಕ್ಕೆ ಮಾತ್ರವೇ ಎಂದಾಗಿಬಿಟ್ಟಿದೆ ಆದರೆ ನಿಜವಾದ ವಿಮರ್ಶೆ ಸಾಹಿತ್ಯ ಕೃತಿಯೊಂದರ ಮೌಲ್ಯವನ್ನು ಎತ್ತರಿಸುತ್ತಾ ಸಾಹಿತ್ಯ ಮತ್ತು ವಿಮರ್ಶಾ ಲೋಕದ ನಡುವೆ ಅನುಸಂಧಾನವನ್ನು ಸಾಧಿಸುವಂತಿರಬೇಕು. ಇಂತಹ ಅಪರೂಪದ ಕೃತಿಗಳು ಬಿಡುಗಡೆಯಾದಾಗಲಾದರೂ ಸಮಕಾಲೀನ ಬರಹಗಾರರು ಇದನ್ನ ಕುರಿತು ಬರೆಯುವಂತಾಗಬೇಕು. ಸಂತೋಷ್ ಸರ್ ರವರ ಯಾವ ಕೃತಿಗಳಿಗೂ ಬಲವಂತದ ಫೀಡ್ ಬ್ಯಾಕ್, ಅಡ್ವರ್ಟೈಸ್ಮೆಂಟ್ ಗಳ ಅಗತ್ಯವಿಲ್ಲ ನಿಜ. ಆದರೆ ಓದುಗರನ್ನು ಆವರಿಸಿಕೊಳ್ಳುವ ಬರಹದ ಆಪ್ತತೆ ಇರುವ ಇಂತಹ ಕೃತಿಗಳು ಎಲ್ಲರನ್ನ ತಲುಪಬೇಕು ಎಂಬುದಷ್ಟೇ ನನ್ನ ಆಶಯ.
ಕನ್ನಡ ಸಾಹಿತ್ಯದಲ್ಲಿ ಪ್ರೇಮ ಎಂಬ ಭಾವವನ್ನು ಅನೇಕ ಕವಿಗಳು ತಮ್ಮ ತಮ್ಮ ಭಾವ ಲಹರಿಗೆ ತಕ್ಕಂತೆ ಬಣ್ಣಿಸಿದ್ದಾರೆ. ಕವಿ ಕುವೆಂಪು “ನಾ ನಿನಗೆ ನೀ ನನಗೆ ಜೇನಾಗುವ ರಸ ದೇವಾ ಗಂಗೆಯಲ್ಲಿ ಮೀನಾಗುವ” ಎಂದರೆ, ಪ್ರೇಮಕವಿ ಕೆ ಎಸ್ ನ “ನಿನ್ನ ಪ್ರೀತಿಗೆ ಅದರ ಪ್ರೀತಿಗೆ ಕಣ್ಣ ಹನಿಗಳೇ ಕಾಣಿಕೆ ಹೊನ್ನ ಚಂದಿರ ನೀಲಿ ತಾರೆಗೆ ಹೊಂದಲಾರದ ಹೋಲಿಕೆ” ಎಂದಿದ್ದಾರೆ. ಜೆಎಸ್ಎಸ್ “ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ ?”ಎಂದು ಅರ್ಥೈಸಿದ್ದಾರೆ. ಒಲವಿನ ಕವಿ ಬೇಂದ್ರೆ “ಒಲವೇ ನಮ್ಮ ಬದುಕು ಎಂದಿಲ್ಲವೇ? ಈ ಎಲ್ಲಾ ಸಾಲುಗಳು ಆಯಾ ಕಾಲ ಧರ್ಮದ ಪ್ರೀತಿಯ ಆಯಾಮವನ್ನು ಚಿತ್ರಿಸಿರುವಂತೆ ನಾತಿಚರಾಮಿ ಕೂಡ ಇಂದಿನ ದಿನಮಾನಕ್ಕೆ ತಕ್ಕಂತೆ ಓದಿದ ಪ್ರತಿಯೊಬ್ಬರಿಗೂ ಅವರವರ ಬದುಕಿನ ಭಾಗವಾಗಿ ಬಿಡಬಲ್ಲದು. ಕೃತಿಯಲ್ಲಿ ಹೇಳಲಾಗಿರುವ ಅವನ/ಅವಳ ಭಾವಗಳು, ಮೂರ್ತಿಗಳ ಬದುಕು, ಪ್ರಕಾಶ್ ಮತ್ತು ಪಲ್ಲವಿಯರ ದಾಂಪತ್ಯ, ಹೀಗೆ ಎಲ್ಲಾ ಎಳೆಗಳು ಓದುಗರ ಮನದಲ್ಲಿ ಪ್ರೇಮ ಭಾವವನ್ನು ಲಿಂಗ ,ವಯಸ್ಸನ್ನ ಮೀರಿ ಪೋಷಿಸುತ್ತದೆ, ಪ್ರೀತಿಗೆ ಭಾವನಾತ್ಮಕ, ದೈಹಿಕ ಮತ್ತು ಅಧ್ಯಾತ್ಮಿಕ ಹೀಗೆ ಎಲ್ಲಾ ಬಂಧಗಳನ್ನು ಒಳಗೊಳ್ಳುವ ಶಕ್ತಿ ಇದೆ.
ಆದರೆ ಪ್ರತಿಯೊಬ್ಬರೂ ಪ್ರೀತಿಯನ್ನು ಕುರಿತು ವಿಭಿನ್ನ ದೃಷ್ಟಿ ಹೊಂದಿರುತ್ತಾರೆ ಮತ್ತು ಈ ಪ್ರೀತಿಯ ಬಯಸುವಿಕೆ ಕೂಡ ಒಬ್ಬರಿಂದೊಬ್ಬರಿಗೆ ಭಿನ್ನವಾಗಿರುತ್ತದೆ ಎಂಬುದನ್ನು ಈ ಕೃತಿಯು ಸ್ಪಷ್ಟಪಡಿಸುವ ರೀತಿ ಪ್ರಸ್ತುತವಾಗಿದೆ. ಲಿವಿಂಗ್ ಗಳೆ ಹೆಚ್ಚಾಗಿರುವ ಕಾಲದಲ್ಲಿ ಅವನ/ಅವಳ ಅಂತರಂಗದಲ್ಲಿ ಹುದುಗಿರುವ ಪ್ರೇಮಕ್ಕೆ ಹೊಸ ಅರ್ಥ ಕಲ್ಪಿಸುವಂತಿದೆ ನಾತಿಚರಾಮಿ ಪ್ರೀತಿಯ ಎಲ್ಲಾ ಭಾವನೆಗಳೊಂದಿಗೆ ಸಂಬಂಧವಾ?ಗೆಳೆತನವಾ? ದಾಂಪತ್ಯವಾ? ಆತ್ಮಸಾಂಗತ್ಯವಾ? ಎಂಬೆಲ್ಲಾ ಯಾರಲ್ಲಿಯೂ ಕೇಳಲಾಗದ ಪ್ರಶ್ನೆಗಳಿಗೆ ಇಲ್ಲಿ ಸದ್ದಿಲ್ಲದೆ ಉತ್ತರ ದೊರಕಿ ಬಿಡುತ್ತದೆ. ಸುತ್ತಲಿನ ಪ್ರಪಂಚದ ಪ್ರಶ್ನೆಗಳು, ಅವುಗಳಿಗೆ ಕಂಡುಕೊಳ್ಳಬೇಕಾದ ಉತ್ತರಗಳನ್ನು ಲೇಖಕರು ಹೇಳಲು ಮರೆತಿಲ್ಲ ಹಾಗೂ ಪ್ರೇಮ ಎಂಬುದು ಗಂಡು ಹೆಣ್ಣು ಇಬ್ಬರಲ್ಲೂ ಇರಬೇಕಾದ ತಿಳುವಳಿಕೆ ಎಂಬುದನ್ನು ಈ ಕೃತಿ ವ್ಯಾಖ್ಯಾನಿಸಿದೆ.
ಪ್ರೇಮ ಎಂಬ ಭಾವ ಈವರೆಗೂ ಲಕ್ಷಾಂತರ ಪುಟಗಳಲ್ಲಿ ಪ್ರಕಟವಾಗಿರಬಹುದು ಆದರೆ ಈ ಒಂದು ಭಾವ ಯಾರ ಆಲೋಚನೆಗೂ ಇದುವರೆಗೂ ‘ಇದಂಇತ್ತಂ’ ಎಂಬಂತೆ ಪರಿಪೂರ್ಣ ವ್ಯಾಖ್ಯಾನವನ್ನು ಪಡೆಯಲು ಆಗಿಯೇ ಇಲ್ಲ. ಹೆಚ್ಚಿನ ಸಂದರ್ಭದಲ್ಲಿ ಪ್ರೀತಿಗಾಗಿ ತ್ಯಾಗ ಮಾಡುವುದನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ ಹಾಗೂ ಪ್ರೀತಿ ಎಂದರೆ ಗಂಡು ಹೆಣ್ಣಿನ ಸಂಬಂಧದಲ್ಲಿ ಕೇವಲ ಸಹಿಸಿಕೊಳ್ಳುವುದು ಮಾತ್ರವೇ ಎಂಬುದೇ ಆಗಿದೆ. ಅದಕ್ಕಾಗಿಯೇ ಸಂಬಂಧಗಳಲ್ಲಿ ಮಿತಿ ಮೀರಿದ ಅಪನಂಬಿಕೆ, ಬಿರುಕು, ಬ್ರೇಕ್ ಅಪ್, ವಿಚ್ಛೇದನಗಳು ಅನಿವಾರ್ಯ ಎನ್ನಿಸತೊಡಗಿದೆ. ಇವತ್ತು ಈ ಕೃತಿಯನ್ನ ಕೈಯಲ್ಲಿ ಹಿಡಿದು ಓದುವಾಗಲೂ ಹೆಣ್ಣು ಮಕ್ಕಳ ಬದಲಾಗದ ಜಗತ್ತು ಕಣ್ಮುಂದೆ ರಪ್ಪನೆ ಅಪ್ಪಳಿಸುತ್ತವೆ. ಬದುಕಿನ ಅನಿವಾರ್ಯತೆಗೆ ದುಡಿಯುವ ಎಷ್ಟೋ ಹೆಣ್ಣುಮಕ್ಕಳು ತಮ್ಮ ದುಡಿಮೆಯನ್ನು ಮನಗೆ ಕೊಟ್ಟು, ಮನೆಯಲ್ಲೂ ದುಡಿದು ಹೆತ್ತ ಮಕ್ಕಳನ್ನು ಕೆಲವೊಮ್ಮೆ ಕಟ್ಟಿಕೊಂಡ ಗಂಡನನ್ನು ಅವರ ಮನೆಯವರನ್ನು ಪೊರೆಯುದಲ್ಲದೆ, ಇಲ್ಲದ ಸಮಯವನ್ನು ಹೇಗೋ ಹೊಂದಿಸಿಕೊಂಡು ತಮ್ಮ ಕೆರಿಯರ್ನಲ್ಲೋ ಆಸಕ್ತಿಯ ವಲಯದಲ್ಲೋ ಗೆದ್ದು ಬಂದರೆ ಅವಳಿಗೆ ಹೆಮ್ಮೆಗಿಂತ ಗಿಲ್ಟ್ ಗೆ ಒಳಗಾಗುವಂತೆ ಮಾಡಲು ಮನೆ, ಸಮಾಜ, ಸುತ್ತಲಿನವರು ಹಿಂದೆ ಬೀಳುವುದಿಲ್ಲ.
ಅವಳಲ್ಲಿ ಈ ಅಭದ್ರತೆಯ ಭಾವ ಮೂಡಿಸಿ ಪ್ರೀತಿಯ ಬೆಂಬಲವನ್ನ ನೀಡುವುದಿರಲಿ ತನ್ನ ಇಚ್ಛೆಯ ಒಂದೊಂದು ಹೆಜ್ಜೆ ಇಡುವಾಗಲೂ ಪ್ರತಿ ಹೆಜ್ಜೆಗೂ ಅವಳು ಕಳೆದುಕೊಳ್ಳುವುದನ್ನು ಹೇಳುವಷ್ಟೇ ಸಮರ್ಥವಾಗಿ ಅವಳ ಜೀವನೋತ್ಸಾಹದೊಂದಿಗೆ ಅವನ ಅಂತರಂಗವನ್ನು ಕೂಡ ಲೇಖಕರು ‘ಲೇಡೀಸ್ ಎನ್ನುವ ರಿಸರ್ವೇಶನ್ ಯಾಕೆ? ಎಂದು ಪುರುಷರ ಭಾವ ಲೋಕವನ್ನು ಬಣ್ಣಿಸಿದ್ದಾರೆ. ಹೀಗೆ ಪ್ರೇಮ ಎಂಬುದು ಕೇವಲ ಭಾವ ಮಾತ್ರವಲ್ಲ ಅದೊಂದು ‘ಬದ್ಧತೆ’ ಎಂದು ಸಾರುವ ನಾತಿಚರಾಮಿ ಈ ಬಾರಿ ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗರೆಯಾಗಬಲ್ಲದು. ಅಷ್ಟೇ ಅಲ್ಲ ಎಲ್ಲಾ ವಯೋಮಾನದವರಿಗೂ ಕೂಡ ಒಲವಿನ ಮಾಧುರ್ಯವನ್ನ ಅವರವರ ಅನುಭವಕ್ಕೆ ತಕ್ಕಂತೆ ಪರಿಭಾವಿಸಿ ಸಂಭ್ರಮಿಸುವಂತೆ ಮಾಡುತ್ತದೆ. ಒಟ್ಟಿನಲ್ಲಿ ನನ್ನ ಈ ಪುಟ್ಟ ಬರಹವನ್ನು ಓದಿದವರಲ್ಲಿ ನಾತಿಚರಾಮಿಯನ್ನ ಓದಬೇಕು ಎಂದು ಹವಣಿಕೆ ಮೂಡಿದರೆ ಸಾಕು.
0 ಪ್ರತಿಕ್ರಿಯೆಗಳು