ಸುಧಾ ಆಡುಕಳ
ಅಮ್ಮ
ಪುಟ್ಟ ಬೆಕ್ಕೊಂದನ್ನು ಸಾಕಿದ್ದಳು
ಕಪ್ಪು ಬೆಕ್ಕು
ಕಪ್ಪೇ ಯಾಕೆ?
ಎಂದರೆ
ಸುತ್ತ ಹೊಂಚು ಹಾಕುವ
ನಾಯಿಗಳ ಕಣ್ತಪ್ಪಿಸಿ ಬದುಕುತ್ತದೆ
ಎಂಬ ವಿವರಣೆ
-ಗೆ ಸಾಕ್ಷಿಯೋ ಎಂಬಂತೆ
ಬೆಕ್ಕು ಬೆಳೆಯುತಿತ್ತು
ಹಾಲು, ಹೈನ, ಅನ್ನ
ಎಲ್ಲ ಭರಪೂರ ತಿನಿಸಿದರೂ
ಮತ್ತೆ, ಮತ್ತೆ ಕಾಲು ಸುತ್ತುವ
ಬೆಕ್ಕಿನ ಒತ್ತಾಸೆಗೆ ಬಿದ್ದ
ಮಹಾನ್ ಅಹಿಂಸಾವಾದಿ ಅಮ್ಮ
ತೋಡಿನಲ್ಲಿ ನಿಂತು ಮೀನು
ಹಿಡಿಯುತ್ತಿದ್ದಳು!
ರಾತ್ರಿ ಹಾಸಿಗೆಯಲ್ಲೇ ಮಲಗಿ
ಕಪ್ಪೆ, ಹಲ್ಲಿ, ಇಲಿ
ಕೆಲವೊಮ್ಮೆ ಹಾವನ್ನೂ
ತುಂಡರಿಸಿ ತಂದಿಡುವ
ಬೆಕ್ಕನ್ನು ಅಮ್ಮ
ದೂರಿದ್ದು ಕಾಣೆ
ಹೊಟ್ಟೆಕಿಚ್ಚಿಗೋ ಎಂಬಂತೆ
ಮಗ್ಗುಲಲ್ಲಿ ಮಲಗಿದ
ತನ್ನ ಮಗುವಿಗೆ
ಮೂರು ಬಾರಿ ಕಚ್ಚಿದರೂ
ಬೇಸರಿಸದೇ ಆರು ಮೈಲಿ ನಡೆದು
ಚುಚ್ಚುಮದ್ದು ಕೊಡಿಸಿ
ಬಂದವಳೇ ಮತ್ತೆ
ಬೆಕ್ಕನ್ನು ಮುದ್ದು ಮಾಡುವಳು!
ಅಂತಿಪ್ಪ ಬೆಕ್ಕು ಒಂದು
ರಾತ್ರಿ ಮಿಯ್ಯೋ.. ಎಂದು
ಕೂಗಿದಾಗಲೇ….
ಎದ್ದ ಅಮ್ಮನಿಗೆ
ದೇಹವೆರಡರ ಬೇಟ
ಕಣ್ಮುಂದೆ ಕಂಡು
ಅಪ್ಪನ ಪಾತಿವ್ರತ್ಯ ಬಯಲು
ಮಗ್ಗಲಲಿದ್ದ ವಿಧವೆ ಒಕ್ಕಲು!
ಸತ್ಯ ತೋರಿದ ಬೆಕ್ಕು
ಗೆಳತಿಯಾಯಿತು ಮಿಕ್ಕು
ಕಷ್ಟ, ಸುಖಗಳೆಲ್ಲದರ ವರದಿ
ನಿತ್ಯ ಬೆಕ್ಕಿಗೆ
ಅದೂ ಅಪ್ಪನೆದುರಿಗೆ…
ಆಡಲಾರ, ಅನುಭವಿಸಲಾರ
ಕಾಲ ಹೆಜ್ಜೆ ಅಪ್ಪಳಿಸಿದಷ್ಟೂ
ಅಮ್ಮನ ಸುದ್ದಿ ಜೋರು
ಆ ವರ್ಷ ಮಳೆಗಾಲವೂ ಜೋರೆ
ಭೋರೆಂದು ಸುರಿದ ಮಳೆಗೆ
ಊರ ಹೊಳೆ ತುಂಬಿ ಹರಿದು
ಗದ್ದೆದಾಟಿ ಹಿತ್ತಲವರೆಗೂ
ನೀರೇ ನೀರು…
ಊರಿಡೀ ಹಿತ್ತಲಿಗಿಳಿದು
ಬೇಡದುದನೆಲ್ಲ ಪ್ರವಾಹಕ್ಕೆ ತೂರಿತು
ಅಪ್ಪನೂ…
ಕಪ್ಪು ಬೆಕ್ಕು ಮಂಗಮಾಯ!
ಅಮ್ಮ ಕಂಗಾಲು
ಹುಡುಕಿದಳು, ಹುಡುಕಿದಳು
ನೆರೆಯಿಳಿಯುವವರೆಗೂ…
ವರ್ಷ ಕಳೆದು
ಮತ್ತೆ ಬಂದ ನೆರೆಯಲ್ಲಿ
ಅಮ್ಮನೂ…
0 Comments