
5
ಚಲನಚಿತ್ರ ಕಲಾ ಕೇಂದ್ರ – ಯೂನಿವರ್ಸಲ್ ಸ್ಟುಡಿಯೋ
ಯೂನಿವರ್ಸಲ್ ಸ್ಟುಡಿಯೋ ಲಾಸ್ ಏಂಜಲೀಸ್ನ ಸ್ಯಾನ್ ಫರ್ನಾಡೋದಲ್ಲಿರುವ ಒಂದು ಪ್ರಮುಖ ಆಕರ್ಷಣೆ. ಚಲನಚಿತ್ರ ಪ್ರೇಮಿಗಳು ಜೀವನದಲ್ಲಿ ಒಂದು ಬಾರಿಯಾದರೂ ನೋಡಲೇಬೇಕೆಂದುಕೊಳ್ಳುವ ಒಂದು ಆಕರ್ಷಣಾ ಕೇಂದ್ರ. ಇಲ್ಲಿಗೆ ದಿನನಿತ್ಯವೂ ಅದೆಷ್ಟು ಜನರು ಬರುತ್ತಾರೆಂದರೆ, 10000ಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸಲು ಏಳೆಂಟು ಅಂತಸ್ತಿನಲ್ಲಿ ನಿಲುಗಡೆಯ ಜಾಗಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಯೂನಿವರ್ಸಲ್ ಸ್ಟುಡಿಯೋ ಒಳಹೋಗುವಾಗ..ಇಲ್ಲಷ್ಟೇ ಅಲ್ಲ; ಅಮೆರಿಕದ ಎಲ್ಲ ಪ್ರೇಕ್ಷಣೀಯ ಸ್ಥಳಗಳಲ್ಲೂ ನಮ್ಮ ಕಾರು ನಿಂತಿರುವ ನಿಲುಗಡೆಯ ಅಂತಸ್ತು, ಸಾಲಿನ ಸಂಖ್ಯೆ ಅಥವಾ ಹೆಸರು, ಮತ್ತು ನಿಲುಗಡೆಯ ತಾಣದ ಸಂಖ್ಯೆಯು ಕಾಣುವಂತೆ ಮೊಬೈಲ್ನಲ್ಲಿ ಒಂದು ಫೋಟೋ ತೆಗೆದಿರಿಸಿಕೊಳ್ಳುವುದು ಒಳಿತು. ಇಲ್ಲದಿದ್ದರೆ ವಾಪಸ್ಸು ಹೊರಡುವಾಗ ನಮ್ಮ ಕಾರನ್ನು ಹುಡುಕುವುದು ಸಾಸಿವೆಯಲ್ಲಿ ರಾಗಿ ಕಾಳನ್ನು ಹುಡುಕುವಂತೆಯೇ ಸರಿ!.

ಯೂನಿವರ್ಸಲ್ ಸ್ಟುಡಿಯೋ ಒಳಹೋಗುವಾಗ..
ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯನ್ನು ನೋಡಿದವರಿಗೆ ಇದು ಅದರ ಮುಂದುವರಿದ ತಾಣವೆನಿಸುತ್ತದೆ. ಇದೂ ಅಷ್ಟೇ ವಿಶಾಲವಾಗಿದೆ. ಅಲ್ಲಿ ಏನೇನನ್ನು ನಾವು ‘ನೋಡುತ್ತೇವೋ’ ಅವನ್ನೆಲ್ಲಾ ಇಲ್ಲಿ ನಮ್ಮ ‘ಅನುಭವಕ್ಕೆ ಬರುವಂತೆ ಈ ಜಾಗವನ್ನು ಸಿದ್ಧಗೊಳಿಸಲಾಗಿದೆ. ಇಡೀ ಆವರಣವನ್ನು ಎರಡು ಅಂತಸ್ತುಗಳಲ್ಲಿ ನಿರ್ಮಿಸಲಾಗಿದೆ. ಕೆಳ ಅಂತಸ್ತಿನಲ್ಲಿ ಕೆಲವು ಪ್ರದರ್ಶನಗಳಿವೆ ಮತ್ತು ಮೇಲಿನ ಜಾಗದಲ್ಲಿ ಇನ್ನೂ ಹಲವು ಹತ್ತು ಆಟ ಮತ್ತು ಕಾರ್ಯಕ್ರಮಗಳಿವೆ. ಮೇಲೆ, ಕೆಳಗೆ ಹತ್ತಿಳಿಯಲು ಎಲಿವೇಟರ್ ಮತ್ತು ಮೆಟ್ಟಿಲಿನ ಸೌಕರ್ಯವಿದೆ. ಗಾಲಿ ಕುರ್ಚಿಯವರನ್ನು ಕರೆದೊಯ್ಯಲು ವಾಹನ ವ್ಯವಸ್ಥೆಯಿದೆ.
ಕೆಳ ಅಂತಸ್ತಿನಲ್ಲಿ ಚಲನ ಚಿತ್ರಗಳ ವಿಶೇಷ ಪರಿಣಾಮಗಳನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸುವ 30-40 ನಿಮಿಷಗಳ ಪ್ರದರ್ಶನವಿದೆ. ಇದರಲ್ಲಿ ಶಬ್ಧಗಳನ್ನು ಹೊರಡಿಸುವ ಕಲೆ, ಹೊಡೆದಾಟಗಳಲ್ಲಿ ಉಪಯೋಗಿಸುವ ತಂತ್ರ, ಯಾವುದೇ ಅವಘಡವಾಗದಂತೆ ಮನುಷ್ಯನಿಗೆ ಬೆಂಕಿ ಹೊತ್ತಿ ಉರಿಯುವ ಉಪಾಯ, ಕುಳಿತಲ್ಲೇ ವೇಗವಾಗಿ ಕಾರು ಓಡಿಸುವ ‘ದೃಷ್ಟಿ ಭ್ರಮೆ’ ಹುಟ್ಟಿಸುವ ರೀತಿ, ದೆವ್ವ-ಭೂತಗಳನ್ನು ತೋರಿಸುವುದು ಇಂತಹ ಹಲವು ಹತ್ತು ವಿಶೇಷ ಪರಿಣಾಮಗಳನ್ನು, ಅವುಗಳನ್ನು ಉಪಯೋಗಿಸಿಕೊಂಡಿರುವ ಚಲನಚಿತ್ರಗಳ ನಿದರ್ಶನಗಳ ಸಹಿತ ವಿವರಿಸುತ್ತಾರೆ.

ʻಟ್ರಾನ್ಸ್ ಫಾರ್ಮರ್ಸ್ʼನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಮಕ್ಕಳು.
ಇಂದಿನ ಮಕ್ಕಳ ಮನರಂಜನೆಯ ಪ್ರಮುಖ ಆಕರ್ಷಣೆಯಾಗಿರುವ ಕಾಮಿಕ್ ಮತ್ತು ಅನಿಮೇಟೆಡ್ ಚಿತ್ರಗಳನ್ನು ನಿರ್ಮಿಸುವ ಕಲೆಯನ್ನು ಸಹಾ ಪ್ರಾತ್ಯಕ್ಷಿಕೆಯಾಗಿ ನೋಡಬಹುದು. ಇದೊಂದು ವಿಶೇಷ ಅರಿವು ನೀಡುವ ಅನುಭವ. ಇದನ್ನು ಮುಗಿಸಿಕೊಂಡು ಮುಂದೆ ಸಾಗಿದರೆ ಸಿಗುವ ಕೆಲವು ಪ್ರದರ್ಶನಗಳು ರೋಮಾಂಚಕಾರಿಯಾಗಿವೆ.
ಕುರ್ಚಿಯ ಪಟ್ಟಿಯನ್ನು ಬಿಗಿದುಕೊಂಡು ಕುಳಿತರೆ ಒಂದೈದು ನಿಮಿಷ ಮೇಲೆಸೆದು, ಕೆಳಗೆ ಬೀಳಿಸಿ, ತಿರತಿರನೆ 180 ಡಿಗ್ರಿಯಲ್ಲಿ ತಿರುಗಿಸಿ, ಓ… ಎಂದರಚಿಕೊಳ್ಳುವಂತೆ ಮಾಡುವ ‘ಟ್ರಾನ್ಸ್ಫಾರ್ಮರ್ಸ್’ ಎಂಬ ಆಟವಿದೆ.
‘ಜುರಾಸಿಕ್ ಪಾರ್ಕ್’ ಎನ್ನುವ ನೀರಿನಲ್ಲಿ ಸಾಗುವ ಆಟದಲ್ಲಿ, ಕುಳಿತಲ್ಲಿಗೇ ಬರುವ ಡೈನಸಾರ್ಗಳು, ಅವುಗಳಿಂದ ತಪ್ಪಿಸಿಕೊಳ್ಳುವ ರೋಮಾಂಚನ, ಎಲ್ಲೆಲ್ಲೋ ಅಡ್ಡ ಬರುವ, ನಮ್ಮ ಮೇಲೆ ನೀರನ್ನು ಉಗಿಯುವ ಡೈನಸಾರ್ಗಳು, ಅಟ್ಟಿಸಿಕೊಂಡು ಬರುವ ಅವುಗಳಿಂದ ಬಿಡಿಸಿಕೊಳ್ಳಲು ವೇಗವಾಗಿ ಚಲಿಸಿ ಪುಟ್ಟ ಜಲಪಾತದಲ್ಲಿ ಜ಼ರ್ರನೆ ಕೆಳಗೆ ಜಾರಿ ನೀರಿನಲ್ಲಿ ನೆನೆಯುವ ಸೌಭಾಗ್ಯ – ಎಲ್ಲವನ್ನೂ ಅನುಭವಿಸಿ ಕೆಳಗಿಳಿಯುವಾಗ ‘ಚೆನ್ನಾಗಿತ್ತಪ್ಪ’ ಎಂದು ಉದ್ಘರಿಸುತ್ತಾ ಮುಂದೆ ಸಾಗಬಹುದು.
ಮೇಲಿನ ಅಂತಸ್ತಿಗೆ ಬಂದರೆ ಇಲ್ಲಿ ಇನ್ನೂ ಹಲವು ಹತ್ತು ಪ್ರದರ್ಶನಗಳು ನಮಗಾಗಿ ಕಾದಿರುತ್ತವೆ. ಮಕ್ಕಳೂ, ದೊಡ್ಡವರೂ ಈ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಆನಂದಿಸಬಹುದು. ಎಲ್ಲ ಪ್ರದರ್ಶನಗಳೂ 3ಡಿ ಮತ್ತು 4ಡಿ ಯಲ್ಲಿದ್ದು ಅದರದರದೇ ಆದ ಅನುಭವವನ್ನು ಕೊಡುತ್ತದೆ. ಮಕ್ಕಳ ನೆಚ್ಚಿನ ‘ಹ್ಯಾರಿ ಪಾಟರ್’ ಪ್ರದರ್ಶನವಂತೂ ನಿಗೂಢ ಲೋಕದಲ್ಲಿ ಪಯಣಿಸಿ ಬಂದ ಅನುಭವವನ್ನು ನೀಡುತ್ತದೆ.

ಹ್ಯಾರಿ ಪಾಟರ್ – ಹಾಗ್ಸ್ಮೇಡ್ ತಾಣ
ಈ ತಾಣದಲ್ಲಿ ನನಗೆ ತುಂಬಾ ಹಿಡಿಸಿದ ಕಾರ್ಯಕ್ರಮ ‘ಸ್ಟುಡಿಯೋ ಯಾತ್ರೆ’. ಸುಮಾರು ಒಂದು ಗಂಟೆಯ ಈ ಟ್ರಾಮ್ ಪಯಣದಲ್ಲಿ ಈ ಪ್ರದರ್ಶನದ ನಿರ್ವಾಹಕನ ನಿರೂಪಣಾ ಕೌಶಲ್ಯಕ್ಕೆ ಬೆರಗಾಗದವರೇ ಇಲ್ಲ. ಪಯಣದ ಉದ್ದಕ್ಕೂ ಸಾಗುವ ಅವನ ವಾಗ್ಝರಿ ಪಯಣದ ಅನುಭವವನ್ನು ಇನ್ನೂ ದಟ್ಟಗೊಳಿಸುತ್ತದೆ.
3ಡಿ ಅನುಭವದಲ್ಲಿ ಪಯಣದ ಆರಂಭದಲ್ಲಿ ಹೆದರಿಸುತ್ತಾ ಬರುವ ಕಿಂಗ್ಕಾಂಗ್; ಸಾಗುತ್ತಿರುವಾಗ ಇದ್ದಕ್ಕಿದ್ದಂತೆಯೇ ನುಗ್ಗುವ, ಕೊಚ್ಚಿಕೊಂಡು ಹೋಗುವ ಭ್ರಮೆ ಹುಟ್ಟಿಸಿ ಅಷ್ಟೇ ಬೇಗ ಇಳಿದು ಹೋಗುವ ನೀರಿನ ಪ್ರವಾಹ; ನಮ್ಮ ವಾಹನ ದೊಡ್ಡ ಕಟ್ಟಡವೊಂದರಲ್ಲಿ ಸಾಗುತ್ತಿರುವಾಗ ಇಕ್ಕೆಲಗಳಲ್ಲೂ ನಿಜ ಕಲಾವಿದರು ಪ್ರದರ್ಶನದಲ್ಲಿ ತೊಡಗಿರುವಾಗ ಇದ್ದಕ್ಕಿದ್ದಂತೆಯೇ ಎಲ್ಲ ಕಡೆಗೂ ಬೆಂಕಿ ಹೊತ್ತಿಕೊಳ್ಳುವುದು; ನಮ್ಮ ವಾಹನ ಅದರ ನಡುವೆಯೇ ಚೀತ್ಕಾರದಿಂದ ಸಾಗುವುದು.

ಹ್ಯಾರಿ ಪಾಟರ್ – ಹಾಗ್ವರ್ಡ್ ಸ್ಕೂಲ್ನ ಒಳನೋಟ
ಮಾನಸಿಕ ಅಸ್ವಸ್ಥನೊಬ್ಬ ನಮ್ಮೆದುರಲ್ಲೇ ಅವನ ಹೆಂಡತಿಯನ್ನು ಕೊಲೆಗೈದು, ಅವಳ ದೇಹವನ್ನೆತ್ತಿಕೊಂಡು ಬರುವುದು- ನೋಡುತ್ತಿರುವ ನಮ್ಮನ್ನು ಅಟ್ಟಿಸಿಕೊಂಡು ಓಡುತ್ತಾ ಬರುವುದು; ನೀರಿನ ಮಧ್ಯೆ ಒಬ್ಬ ವ್ಯಕ್ತಿ ತಿಮಿಂಗಿಲದ ಆಕ್ರಮಣಕ್ಕೆ ಒಳಗಾಗಿ ಸಾಯುವುದು, ಅಲ್ಲಿನ ನೀರೆಲ್ಲಾ ಕೆಂಪಾಗುವುದು; ಅದೇ ತಿಮಿಂಗಲ ನಮ್ಮನ್ನೂ ಅಟ್ಟಿಸಿಕೊಂಡು ಬರುವಾಗ ನಾವು ತಪ್ಪಿಸಿಕೊಂಡು ವೇಗವಾಗಿ ಸಾಗುವುದು; ಇಂತಹ ರೋಮಾಂಚಕ ಅನುಭವಗಳಿಗೆ ಪಕ್ಕಾಗುತ್ತೇವೆ.
ಇವೆಲ್ಲವುಗಳ ನಡುನಡುವೆ ಚಲನಚಿತ್ರದ ದೃಶ್ಯಗಳಲ್ಲಿ ಬಳಸಿಕೊಳ್ಳುವ ಹಲವು ಮನೆಗಳು, ಅಂಗಡಿ ಮುಂಗಟ್ಟುಗಳು, ವಿಶೇಷ ಪರಿಕರಗಳು ಇವೆಲ್ಲವನ್ನೂ, ಅವುಗಳನ್ನು ಬಳಸಿಕೊಂಡಿರುವ ಚಲನಚಿತ್ರ ಮತ್ತು ದೂರದರ್ಶನ ಚಿತ್ರಗಳ ತುಣುಕುಗಳನ್ನು ಮುಂದೆ ಕಾಣುವ ಟೀವಿಯ ಪರದೆಯ ಮೇಲೆ ಮೂಡಿಸುತ್ತಾ ವಿವರಿಸುತ್ತಾರೆ. ಈ ಪ್ರದರ್ಶನದ ಕಡೆಯಲ್ಲಿ ಬರುವ ಕಾರ್ ರೇಸ್ನ ಅನುಭವ ಅನನ್ಯವಾದುದು. 3ಡಿ ಅನುಭವದಲ್ಲಿ ನಮ್ಮ ಅಕ್ಕ-ಪಕ್ಕದಲ್ಲೇ ವೇಗವಾಗಿ ಸಾಗುವ ಈ ರೇಸ್ನ ಅನುಭವ ವಿಶಿಷ್ಟವಾದುದು.

ಸ್ಟೂಡಿಯೋ ಟೂರ್ ನಲ್ಲಿ ಕಂಡು ಬರುವ ಒಂದು ದೃಶ್ಯ.
ಯಾವ ಸಾಹಸವನ್ನು ನಿಜಕ್ಕೂ ನಮ್ಮಿಂದ ಮಾಡಲು, ಅನುಭವಿಸಲು ಸಾಧ್ಯವಿಲ್ಲವೋ ಅದರ ಒಂದು ನಿಜಕ್ಕೆ ಹತ್ತಿರವಾದ ಭ್ರಮೆಯನ್ನು ಅನುಭವಿಸಬೇಕೆಂದಿರುವವರು ಈ ಪ್ರದರ್ಶನಗಳಲ್ಲಿ ಸಾಕಷ್ಟು ರೋಮಾಂಚನವನ್ನು, ಮನೋರಂಜನೆಯನ್ನು ಅನುಭವಿಸುತ್ತಾ, ಆ ಅನುಭವದ ಗುಂಗಿನಲ್ಲೇ ಸ್ಟುಡಿಯೋದಿಂದ ಹೊರಬೀಳುವುದರಲ್ಲಿ ಸಂಶಯವಿಲ್ಲ. ಚಲನಚಿತ್ರಗಳ ಬಗ್ಗೆ ಅಧ್ಯಯನ ಮಾಡಲಿಚ್ಛಿಸುವವರಿಗೆ ಇದು ಒಂದು ಪ್ರಾತ್ಯಕ್ಷಿಕ ಅನುಭವ ನೀಡುವ ತಾಣ..
ಆಮೋದ, ಪ್ರಮೋದ, ಜೂಜುಗಳ ಹಿರಿಯಡ್ಡೆ – ಲಾಸ್ ವೇಗಾಸ್
ನೆವಾಡ ರಾಜ್ಯದ ಮೊಜಾ಼ವೆ ಮರಳುಗಾಡಿನ ಮಧ್ಯದ ಮನರಂಜನೆ(?)ಯ ಉತ್ತುಂಗದ, ರಾತ್ರಿಯ ಸಾಮ್ರಾಜ್ಯದ, ದಿನದ ಇಪ್ಪತ್ನಾಲ್ಕು ಗಂಟೆಗಳೂ ಜೂಜು ಕಟ್ಟೆಗಳು ಜಾಗೃತವಾಗಿರುವ, ಇನ್ನೂ ಅನೇಕ ವೈಭೋಗಗಳ ಕೇಂದ್ರ ಲಾಸ್ ವೇಗಾಸ್. ಲಾಸ್ ಏಂಜಲೀಸ್ನ ಆಗ್ನೇಯ ದಿಕ್ಕಿನಲ್ಲಿ 270 ಮೈಲಿ (440 ಕಿ.ಮೀ.) ದೂರವಿರುವ ಲಾಸ್ ವೇಗಾಸ್ಗೆ ತಲುಪುವ ಹಾದಿಯ ಇಕ್ಕೆಲಗಳೂ ನಿರ್ಜನ ಪ್ರದೇಶಗಳು. ನೀರಿನ ಅಭಾವವೇ ಈ ಸ್ಥಿತಿಗೆ ಕಾರಣ ಎನ್ನುತ್ತಾರೆ.
ಇಲ್ಲಿ ಈ ಮುಂಚೆ ವಾಸವಾಗಿದ್ದವರೂ, ನೀರಿನ ಅಭಾವವನ್ನು ಭರಿಸಲಾಗದೆ, ಊರುಗಳನ್ನು ಬಿಟ್ಟು ಬೇರೆ ಪ್ರದೇಶಗಳನ್ನು ಹುಡುಕಿಕೊಂಡು ಹೋಗಿ ಆ ಪ್ರದೇಶಗಳೆಲ್ಲಾ ಪಾಳುಬಿದ್ದಿವೆ. ಅಂತಹ ಒಂದು ಊರಿಗೆ ಗೋಸ್ಟ್ ಸಿಟಿ (ದೆವ್ವಗಳ ಊರು) ಎಂಬ ಹೆಸರಿದೆ. ಈ ದಾರಿಯಲ್ಲಿ ಮೈಲುಗಳಗಟ್ಟಲೇ ಯಾವುದೇ ಹೋಟೆಲ್ಗಳಾಗಲೀ, ತಂಗುದಾಣಗಳಾಗಲೀ, ಪೆಟ್ರೋಲ್ ಬಂಕ್ಗಳಾಗಲೀ ಸಿಗುವುದಿಲ್ಲ.
ನೂರಾರು ಮೈಲಿ ಉದ್ದದ ರಸ್ತೆಯಲ್ಲಿ ಅತಿ ವಿರಳವಾಗಿ ಸಿಗುವ ಈ ಸವಲತ್ತುಗಳನ್ನು ನೆಚ್ಚಿಕೊಳ್ಳುವುದು ಕಷ್ಟವಾದ್ದರಿಂದ ಈ ಹಾದಿ ಶುರುವಾಗುವ ಮುನ್ನವೇ ಸಾಕಷ್ಟು ತಿನಿಸು, ನೀರು ಮತ್ತು ಪೆಟ್ರೋಲ್ಗಳನ್ನು ತುಂಬಿಸಿಕೊಂಡು ಹೊರಡುವುದು ಪ್ರಯಾಣಿಕರ ದೃಷ್ಟಿಯಿಂದ ಕ್ಷೇಮಕರ. ಎಲ್ಲೂ ನಿಲ್ಲಿಸುವ ಯೋಚನೆಯಿಲ್ಲದ್ದರಿಂದ ವಾಹನಗಳು ಒಂದರ ಹಿಂದೊಂದು ವೇಗಾಸ್ನ್ನು ತಲುಪುವ ಆತುರದಿಂದ ವೇಗವಾಗಿ ಚಲಿಸುತ್ತಿರುತ್ತವೆ.
ಅಷ್ಟೊಂದು ಉದ್ದದ ನಿರ್ಜನ ಪ್ರದೇಶವನ್ನು ದಾಟುತ್ತಾ ಬಂದ ಹಾಗೆ ಒಂದಷ್ಟು ಮನೆಗಳು, ಕಟ್ಟಡಗಳು ಕಾಣತೊಡಗಿದುವೆಂದರೆ ವೇಗಾಸ್ ಪಟ್ಟಣವನ್ನು ತಲುಪಿದ್ದೇವೆಂದೇ ಅರ್ಥ. ಅಮೆರಿಕದ ದಟ್ಟ ಜನ-ಜೀವನ ಹೊಂದಿರುವ ನಗರಗಳಲ್ಲಿ ಈ ಪಟ್ಟಣ 28ನೇ ಸ್ಥಾನವನ್ನು ಪಡೆದಿದೆ.

ಈ ನಗರಕ್ಕೆ ‘ವೇಗಾಸ್, ಸಿನ್ ಸಿಟಿ (ಪಾತಕಗಳ ನಗರ), ಸಿಟಿ ಆಫ್ ಲೈಟ್ಸ್ (ಬೆಳಕಿನ ನಗರ), ದಿ ಗ್ಯಾಂಬ್ಲಿಂಗ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್ (ಪ್ರಪಂಚದ ಜೂಜು ಅಡ್ಡೆಗಳ ರಾಜಧಾನಿ), ಕ್ಯಾಪಿಟಲ್ ಆಫ್ ಸೆಕೆಂಡ್ ಚಾನ್ಸಸ್ (ಎರಡನೇ ಅವಕಾಶಗಳ ರಾಜಧಾನಿ), ದಿ ಮ್ಯಾರೇಜ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್ (ಮದುವೆಗಳ ರಾಜಧಾನಿ), ದಿ ಸಿಲ್ವರ್ ಸಿಟಿ (ಬೆಳ್ಳಿ ನಗರ), ಅಮೆರಿಕಾಸ್ ಪ್ಲೇ ಗ್ರೌಂಡ್ (ಅಮೇರಿಕಾದ ಆಡೊಂಬಲ)’ ಎನ್ನುವ ಹಲವು ಅನ್ವರ್ಥ ಬಿರುದಾಂಕಿತ ನಾಮಗಳೂ ಇವೆ.
352 ಚದುರ ಕಿ.ಮೀ. ವಿಸ್ತೀರ್ಣದ ಈ ನಗರ ಹುಟ್ಟಿದ್ದು 1905ರ ಮೇ 15ರಂದು. ಇಂದು ಜಗತ್ತಿನ ಅತ್ಯಂತ ಹೆಚ್ಚಿನ ವೈಭವೋಪೇತವಾದ ಹೋಟೆಲ್ಗಳ ನಗರವಾಗಿದ್ದು, ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣವಾಗಿ ಬೆಳೆದಿದೆ. 1931ರಲ್ಲಿ ಇಲ್ಲಿ ಜೂಜನ್ನು ಕಾನೂನು ಬದ್ಧಗೊಳಿಸಲಾಯಿತು. ಇಲ್ಲಿ ಜೂಜನ್ನು ಜೂಜೆಂದು ಕರೆಯುವುದಿಲ್ಲ; ಆಟವೆನ್ನುತ್ತಾರೆ. ಇದೇ ವರ್ಷದಲ್ಲಿ ಆರಂಭವಾಗಿ 1935ರಲ್ಲಿ ಪೂರ್ಣಗೊಂಡ ಇಲ್ಲಿಗೆ ಹತ್ತಿರದ ಹೂವರ್ ಅಣೆಕಟ್ಟು ಈ ಊರಿನ ನೀರಿನ ಜೀವಾಳ.
ಪ್ರವಾಸ, ಜೂಜು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೇ ಇಲ್ಲಿನ ಆರ್ಥಿಕ ಆದಾಯದ ಮೂಲ. ಇಲ್ಲಿನ ಅತ್ಯಂತ ಹಳೆಯ ಜೂಜು ಕಟ್ಟೆ ‘ನಾರ್ದನ್ ಕ್ಲಬ್’ ‘ಲಾ ಬಾಯು’ ಎಂಬ ಸ್ಥಳದಲ್ಲಿದೆ. ಜಗತ್ಪ್ರಸಿದ್ಧವಾದ ಗಾಯಕರು ಇಲ್ಲಿ ಆಗಾಗ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಯಾವುದೇ ಪ್ರಸಿದ್ಧ ಕಂಪನಿಯು ತನ್ನ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾದರೆ ಅವುಗಳ ಮೊದಲ ಉಡಾವಣೆ ಈ ನಗರದಿಂದಲೇ.
ಇಲ್ಲಿ ಅನೇಕ ವಸ್ತು ಸಂಗ್ರಹಾಲಯ ಮತ್ತು ಇನ್ನಿತರ ಪ್ರವಾಸಿ ಸ್ಥಳಗಳಿದ್ದರೂ, ಇಲ್ಲಿನ ಮೋಜಿನ ವಾತಾವರಣದಲ್ಲಿ ಅವೆಲ್ಲವೂ ಹಗಲಿನ ನಕ್ಷತ್ರಗಳಂತೆ ಮಂಕಾಗಿ ಕಾಣುತ್ತಿವೆ. ಅಮೆರಿಕದ ಹಲವು ಕಂಪನಿಗಳು ತಮ್ಮ ವಾರ್ಷಿಕ, ಅರೆವಾರ್ಷಿಕ ಮತ್ತು ನಿಯತಕಾಲಿಕ ಸಮಾವೇಶಗಳನ್ನು ಈ ನಗರದ ಪ್ರಸಿದ್ಧ ಹೋಟೆಲ್ಗಳಲ್ಲಿ ನಡೆಸುವುದು ಪ್ರತಿಷ್ಠೆಯ ಸಂಕೇತ.
‘ಸ್ಟ್ರಿಪ್’ ಎಂದು ಕರೆಸಿಕೊಳ್ಳುವ ನಾಲ್ಕು ಮೈಲು ಉದ್ದದ ರಸ್ತೆಯ ಎರಡೂ ಪಕ್ಕಗಳಲ್ಲಿ ಕಾರಂಜಿಗಳನ್ನು ಚಿಮ್ಮಿಸುವ, ಪಿರಮಿಡ್, ಈಫೆಲ್ ಟವರ್ ಮುಂತಾದ ಜಗತ್ಪ್ರಸಿದ್ಧ ತಾಣಗಳನ್ನು ಹೋಲುವಂತ ವೈಭವೋಪೇತ ಹೋಟೆಲ್ಗಳ ಬೀದಿ ಇಲ್ಲಿನ ಪ್ರಮುಖ ಆಕರ್ಷಣೆ.

ಈ ಸ್ಟ್ರಿಪ್ನ ವೈಭವದ ಹೋಟೆಲ್ಗಳಲ್ಲಿ ಒಂದಾದ ‘ಸಿಜ಼ರ್ಸ್’ ಎನ್ನುವ ಹೋಟೇಲಿನಲ್ಲಿ ನಾವು ಒಂದು ದಿನದ ಮಟ್ಟಿಗೆ ವಾಸ್ತವ್ಯ ಹೂಡಿದೆವು. ಜೀವಮಾನದಲ್ಲಿ ಮೊತ್ತ ಮೊದಲ ಬಾರಿಗೆ ಇಂತಹ ಹೋಟೆಲ್ನ ಸಿರಿತನವನ್ನು ಅನುಭವಿಸುವ ಅವಕಾಶ ನನಗೆ ಇಲ್ಲಿ ದೊರಕಿತು.
ಬಿಸಿಲು ಸ್ವಲ್ಪ ಇಳಿಮುಖವಾದ ನಂತರ ಈ ನಗರದ ವಿಶೇಷತೆಗಳನ್ನು ಕಾಣಲು ಹೊರಟೆವು. ಹಾಗೆ ನೋಡಿದರೆ, ಇಲ್ಲಿ ಜನ-ಜೀವನ ಶುರುವಾಗುವುದೇ ಸಂಜೆಯ ನಂತರ. ಪಾದಚಾರಿ ರಸ್ತೆಯ ಮೇಲೆ ಸಾಗುತ್ತಾ ಅನೇಕ ತಾರಾ ಹೊಟೆಲ್ಗಳ ದೀಪಾಲಂಕಾರಗಳನ್ನೂ, ವಿಜೃಂಭಣೆಯನ್ನೂ ಕಂಡೆವು. ಇಲ್ಲಿನ ಬೆಲಾಜಿಯೋ ಹೋಟೆಲಿನ ಮುಂದಿನ ಸಂಗೀತ ಕಾರಂಜಿ ಒಂದು ವಿಶೇಷ ಆಕರ್ಷಣೆ.
ಸುಮಾರು 150 – 200 ಜನ ನಿಂತು ನೋಡಬಹುದಾದಷ್ಟು ವಿಶಾಲವಾದ ಕೊಳದಲ್ಲಿ ಅಷ್ಟು ಉದ್ದಕ್ಕೂ ಇರುವ ಕಾರಂಜಿಗಳು ಪ್ರತಿ ಅರ್ಧಗಂಟೆಗೊಮ್ಮೆ, ಹತ್ತು ನಿಮಿಷಗಳ ಕಾಲ ಸಂಗೀತಕ್ಕೆ ತಕ್ಕಂತೆ ರಂಗುರಂಗಿನ ನರ್ತನ ಮಾಡುತ್ತವೆ. ಮೈಸೂರಿನ ಬೃಂದಾವನ ಉದ್ಯಾನವನದ ಸಂಗೀತ ಕಾರಂಜಿಯಂತೆ ಇದೂ ಮನೋಲ್ಲಾಸಕರವಾಗಿದೆ. ವಿಸ್ತೀರ್ಣದಲ್ಲಿ ಇದು ತುಂಬಾ ದೊಡ್ಡದಿದೆ. ಆದರೆ ವೈವಿಧ್ಯತೆಯಲ್ಲಿ ಮೈಸೂರಿನ ಕಾರಂಜಿ ಇನ್ನೂ ಹೆಚ್ಚು ವೈವಿಧ್ಯಮಯ ಹಾಗೂ ಅಲ್ಲಿನ ಕಾರಂಜಿಗಳ ನರ್ತನದ ಸಮಯವೂ ಹೆಚ್ಚು.

ಸಿಜ಼ರ್ಸ್ ಪ್ಯಾಲೇಸ್ ಹೋಟೆಲಿನ ಒಳಾಂಗಣದ ದೃಶ್ಯ
ಈ ಬೀದಿಯ ವಿಶೇಷವೆಂದರೆ, ಇಲ್ಲಿನ ಯಾವ ಹೋಟೆಲಿನಿಂದ ಬೇಕಾದರೂ ಮೇಲ್ಸೇತುವೆಗೆ ತೆರಳಿ ಅಲ್ಲಿಂದ ನೇರವಾಗಿ ಇನ್ನೊಂದು ಹೋಟೆಲಿನ ಜೂಜುಕಟ್ಟೆಯನ್ನು ಪ್ರವೇಶಿಸಬಹುದು; ಅಲ್ಲಿಂದ ಹೊರಬಂದು ಪಾದಚಾರಿ ರಸ್ತೆಯ ಮೇಲೆ ಅಡ್ಡಾಡಬಹುದು; ಮತ್ತೆ ಇನ್ನೊಂದು ಹೋಟೆಲಿನ ಒಳಹೋಗಬಹುದು. ಅಲ್ಲಿಂದ ಮೇಲೇರಿ ಎದುರು ಬದಿಯ ಹೋಟೆಲಿನಲ್ಲಿ ಸೀದಾ ಇಳಿಯಬಹುದು.
ಇಲ್ಲಿ ಪ್ರವೇಶದ, ನಿರ್ಗಮನದ ಯಾವ ನಿರ್ಬಂಧನೆಗಳೂ ಇಲ್ಲ. ಹಾಗಾಗಿ ನಾವು ಅಲ್ಲಿ ಉಳಿದುಕೊಳ್ಳದಿದ್ದರೂ ಸಾಕಷ್ಟು ಹೋಟೆಲ್ಗಳ ವೈಭವವನ್ನು ನೋಡುತ್ತಾ ಸಾಗಬಹುದು. ಸ್ವಲ್ಪ ಸಂಕೋಚ ಸ್ವಭಾವದವರನ್ನು ಕಣ್ಣು ಕಟ್ಟಿ ಒಂದಷ್ಟು ತಿರುಗಿಸಿ ಕಣ್ಣು ಬಿಚ್ಚಿದರೆ ಈ ವಿಶಾಲ ಆವರಣಕ್ಕೆ ಬರುವುದಕ್ಕೆ ಯಾವ ದಾರಿಯೋ, ಹೋಗುವುದಕ್ಕೆ ಯಾವ ದಾರಿಯೋ ತಿಳಿಯದೆ ತಬ್ಬಿಬ್ಬಾಗಿ ನಿಲ್ಲಬೇಕಾಗಬಹುದು.

ವೈಭವೋಪೇತ ಹೋಟೆಲ್ಗಳ ಬೀದಿ
ದಾರಿ ಕೇಳಲೂ ಯಾರೂ ಸಿಗುವುದಿಲ್ಲ – ಎಲ್ಲರೂ ತಮ್ಮ-ತಮ್ಮ ಪ್ರಪಂಚದಲ್ಲಿಯೇ ಮುಳುಗಿ ಹೋಗಿರುತ್ತಾರೆ. ಬರಿಯ ಹೋಟೆಲ್ಗಳು ಮಾತ್ರವಷ್ಟೇ ಅಲ್ಲ; ಪ್ರಸಿದ್ಧ ಕಂಪನಿಗಳ ಅದ್ಧೂರಿ ಮಳಿಗೆಗಳೂ ಇಲ್ಲಿ ಕಾಣಸಿಗುತ್ತವೆ. ಎಲ್ಲ ಉತ್ಕೃಷ್ಟ ಕಂಪನಿಗಳ ಜಾಹೀರಾತು ಮಳಿಗೆಗಳೂ ಇಲ್ಲಿ ತಂತಮ್ಮ ಜಾಗಗಳನ್ನು ಪಡೆದುಕೊಂಡಿವೆ.
ಇಲ್ಲಿ ಜೂಜು ಕಾನೂನು ಬದ್ಧವಾಗಿರುವಂತೆ ಇದರ ಪೂರಕ ಅಂಗಗಳಾದ ಮದ್ಯ, ಮದಿರೆ, ಮಾನಿನಿ ಎಲ್ಲ ವೈಭೋಗಗಳೂ ಕಾನೂನು ಬದ್ಧವೇ. ರಸ್ತೆಯಲ್ಲೇ ಮದಿರೆಯ ಪಾತ್ರೆಯನ್ನು ಹಿಡಿದು ಓಲಾಡುತ್ತಾ ಅಡ್ಡಾಡುವವರು, ರಾತ್ರಿಯ ಮೋಜಿಗೆ ಬೆಚ್ಚನೆಯ ಹುಡುಗಿಯರು ಎಂಬ ದೊಡ್ಡ ದೊಡ್ಡ ಪ್ರಚಾರ ಫಲಕಗಳು ಆ ರಂಭೆಯರ ದೂರವಾಣಿ ಸಂಖ್ಯೆಯೊಂದಿಗೆ ಅಲ್ಲಲ್ಲಿ ಎದುರಾಗುವುದು.
ಕೈಯಲ್ಲೇ ಅದೇ ಅರ್ಥ ಹೊಮ್ಮಿಸುವ ಫಲಕಗಳನ್ನಿಟ್ಟುಕೊಂಡು ನಿಂತಿರುವ ಸುರ ಸುಂದರಿಯರು ಕಾಣುವುದು, ಮಿಕಗಳನ್ನು ಬಲೆಗೆ ಹಾಕಿಕೊಳ್ಳಲು ಕೈಗೆ ಪರಿಚಯ ಕಾರ್ಡುಗಳನ್ನು ನೀಡಲು ಮುಂದಾಗುತ್ತಾ ಮಾತಿಗೆಳೆಯುವ ನಾಜೂಕಯ್ಯರ ಪೈಪೋಟಿ, ಇದಲ್ಲದೆ ಕ್ಯಾಬರೇ ಹುಡುಗಿಯರ ಅಲಂಕರಣದಲ್ಲಿ ಮಿಂಚುತ್ತಾ, ಒಂದಷ್ಟು ಟಿಪ್ಸಿಗಾಗಿ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಪೋಸ್ ನೀಡುತ್ತಾ ಆಹ್ವಾನಿಸುವ ಅಪ್ಸರೆಯರು – ಎಲ್ಲವೂ ಇಲ್ಲಿ ಸರ್ವೇಸಾಮಾನ್ಯ ದೃಶ್ಯಗಳು.
ಎಲ್ಲೋ ಒಂದೊಂದೆಡೆ ಕಾಣುವ, ಫೋಟೋಗಳಿಗೆ ಪೋಸ್ ನೀಡಲು ಕಾಯುವ, ಇತರ ಕಾಮಿಕ್ ವೇಷಧಾರಿಗಳು ಇವರ ನಡುವೆ ದೃಷ್ಟಿಬೊಟ್ಟಿನಂತೆ ಕಾಣುತ್ತಾರೆ. ವಿವಿಧ ಪ್ರೇಮ ಭಂಗಿಗಳಲ್ಲಿ ಮುಳುಗಿ ಹೋಗಿರುವ ಪ್ರಪಂಚವನ್ನೇ ಮರೆತು ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿರುವ ಯುವ ಪ್ರೇಮಿಗಳು ಎಲ್ಲೆಡೆ ಕಾಣ ಸಿಗುತ್ತಿರುತ್ತಾರೆ. ಇವೆಲ್ಲವನ್ನೂ ‘ಯಾವುದೀ ಲೋಕವು!’ ಎನ್ನುವಂತೆ ನೋಡುವ, ಸಾಗುವ ನಮ್ಮಂತವರೂ ಅಲ್ಲಲ್ಲಿ ತಾರಾಡುತ್ತಿರುತ್ತಾರೆ.

ಕ್ಯಾಸಿನೋದ ಒಂದು ದೃಶ್ಯ
ಇಲ್ಲಿರುವುದು ಬರಿಯ ಹಣದ, ಮೋಜಿನ, ಮೇಜುವಾನಿಗಳ ಜೀವನ. ‘ವೇಗಾಸ್ ಪಟ್ಟಣದಲ್ಲಿ ಹಗಲು ರಾತ್ರಿ, ರಾತ್ರಿ ಹಗಲು’ ‘ವೇಗಾಸ್ ಪಟ್ಟಣ ನಿದ್ರಿಸುವುದೇ ಇಲ್ಲ ಎನ್ನುವ ಮಾತಿದೆ. ರಾತ್ರಿಯೆಲ್ಲಾ ಹಲವು ಮೋಜಿನಲ್ಲಿ ಕಳೆದವರು ಹಗಲು ಅಲ್ಪ ವಿಶ್ರಾಂತಿ ಪಡೆಯುತ್ತಾರೆ. ಹಗಲು ರಾತ್ರಿಯೆನ್ನದೇ ಕ್ಯಾಸಿನೋಗಳಲ್ಲಿ ತಮ್ಮ ಮುಂದಿರುವ ಪರದೆಯಲ್ಲಿ ನಶೆಗೆ ಒಳಗಾದವರಂತೆ ಮುಳುಗಿ ಹೋಗಿರುತ್ತಾರೆ.
ಜೂಜಿನಲ್ಲಷ್ಟೇ ಅಲ್ಲದೆ ಬೇರೆ ಆಮೋದ, ಪ್ರಮೋದಗಳಿಗೂ ಇಲ್ಲಿ ಬರವಿಲ್ಲ. ಈ ನಗರವನ್ನು ಗುರುತಿಸುವುದೆ ಮದ್ಯ, ಮಾನಿನಿ ಮತ್ತು ಜೂಜಿನಿಂದ. ಇವುಗಳ ಪ್ರಭಾವದಲ್ಲಿ ಇದರ ಇನ್ನಿತರ ಗುಣಗಳು ಮರೆಯಾಗಿವೆ. ಆಹಾರ ಖಾದ್ಯಗಳಿಗೂ ಈ ಪಟ್ಟಣ ಹೆಸರುವಾಸಿಯಾಗಿದೆ. ಮೂರ್ನಾಲ್ಕು ಗಂಟೆಗಳ ಕಾಲ ಕುಳಿತು, ನೂರಾರು ಖಾದ್ಯಗಳ ಮಧ್ಯಾಹ್ನದ ಬಫೆ ಊಟವನ್ನು ಸವಿಯಲು ಅವಕಾಶವೀಯುವಂಥ ಸವಿರುಚಿಯ ಹೋಟೆಲ್ಗಳೂ ಇಲ್ಲಿವೆ.
ಇಷ್ಟೆಲ್ಲಾ ವೈಭವಗಳ ಸ್ವರ್ಗವಾಗಿರುವ ಈ ನಗರ ನಷ್ಟವನ್ನು ಅನುಭವಿಸುತ್ತಿದೆ ಎಂದು ಕೇಳಿದಾಗ ನಿಜಕ್ಕೂ ಅಚ್ಚರಿಯಾಯಿತು. ಇದು ನಿಜಕ್ಕೂ ಅರ್ಥವಾಗದ ‘ಅರ್ಥ’ ಪ್ರಪಂಚ. ‘ದಂಡಿನಲ್ಲಿ ಬಂದಿದ್ದು ಲಡಾಯಿಯಲ್ಲಿ ಹೋಯಿತು’ ಎಂಬಂತೆ ಇಲ್ಲಿನ ಆದಾಯ ಇಲ್ಲಿನ ಖರ್ಚುಗಳಿಗೇ ಸಮನಾಗುತ್ತಿಲ್ಲವೇ?! ಹಣದ ಹೊಳೆ ಹರಿಯುತ್ತಿರುವ ಈ ಪಟ್ಟಣದ ಮೇಲ್ಸೇತುವೆಯ ಮೇಲೊಬ್ಬ ಬಡ ಮುದುಕಿ ತನ್ನೊಂದು ಬಡಕಲು ನಾಯಿಯನ್ನು ಅವುಚಿಕೊಂಡು ಕುಳಿತುಕೊಂಡು, ‘ದಯವಿಟ್ಟು ನನ್ನ ನಾಯಿಯ ಊಟಕ್ಕಾಗಿ ಒಂದಿಷ್ಟು ಧನ ಸಹಾಯ ನೀಡಿ. ಭಗವಂತನು ನಿಮಗೆ ಒಳಿತು ಮಾಡುತ್ತಾನೆ’ ಎಂದು ಬರೆದಿದ್ದ ಫಲಕವನ್ನು ಕೈಲಿಟ್ಟುಕೊಂಡು ಕುಳಿತುಕೊಂಡಿದ್ದ ದೃಶ್ಯ ಈ ಸ್ಥಿತಿಯ ರೂಪಕದಂತೆನಿಸಿತು.
(ಮುಂದುವರಿಯುವುದು)






0 Comments