ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಿಜ್ಞಾ ಪಿ ಎಮ್ ಗೌಡ ಕವಿತೆ- ಯಾರೂ ಇಲ್ಲ…

ಅಭಿಜ್ಞಾ ಪಿ ಎಮ್ ಗೌಡ

ಎದೆಯ ಬೀದಿಗಳು ಪಾಳು ಬಿದ್ದಂತಿದ್ದರು
ನೋಡುವವರು ಯಾರೂ ಇಲ್ಲ
ನದಿಯಂತೆ ಹರಿದ ಕಣ್ಣೀರ ಧಾರೆಯನು
ಒರೆಸುವವರು ಯಾರೂ ಇಲ್ಲ

ಮೊಗದೊಳಗಿನ ನಗು ಮಾರಾಟಕಿದೆಯೆ
ಆಂತರ್ಯದ ನೋವ ಛಾಯೆಯಲಿ
ಜಗದ ಕಷ್ಟಗಳ ಹೊತ್ತು ತಿರುಗಿದ ಮನವ
ಸಂತೈಸುವವರು ಯಾರೂ ಇಲ್ಲ

ಬಳಲಿ ಬೆಂಡಾದ ಜೀವದಲಿ ಉತ್ಸಾಹದ
ಚಿಲುಮೆ ಚಿಗುರುತಿದೆ
ಅಳಲು ತೋರದೆ ಬಚ್ಚಿಟ್ಟಿದ ಕನಸುಗಳ
ಕರೆಯುವವರು ಯಾರೂ ಇಲ್ಲ

ಅಭಿಪ್ಸೆಗಳ ಹೊಳಪು ಕುಂದಿ ತಮದ
ಕಣಜವೆ ತುಂಬಿ ಹೋಗಿದೆ
ಸುಭಿಕ್ಷೆ ಬಯಸಿದ ಹೃದಯದ ಕೋರಿಕೆಯ
ಪೂರೈಸುವವರು ಯಾರೂ ಇಲ್ಲ

ಅಂತರಂಗದ ಆಸೆ ಆಕಾಂಕ್ಷೆಗಳೆಲ್ಲ ಸುಟ್ಟು
ಬೂದಿಯಾಗುತಿವೆ ಅಭಿ
ಚಿಂತಿಸಿ ಮಂಥಿಸಿದ ವಿಷಯದ ಸ್ವಾರಸ್ಯವ
ಬರೆಯುವವರು ಯಾರೂ ಇಲ್ಲ

‍ಲೇಖಕರು Admin

25 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading