‘ಅರ್ಥ’ ಮಾತ್ರವಾಗದ ಅಪ್ಪ
ರಜನಿ ಗರುಡ
ನಾನು ಬಾಲ್ಯದಲ್ಲಿ ನೋಡಿದ“ ಬೆಂಕಿಯಲ್ಲಿ ಅರಳಿದ ಹೂ “ ಸಿನೆಮಾ ನನ್ನನ್ನು ಬಹಳ ಕಾಡಿದೆ.
ಇದು ‘ಮೆಗೆ ಧಾಕಾ ತಾರಾ ’ ಎಂಬ ರಿತ್ವಿಕ್ ಘಟಕ್ ಅವರ ಬಂಗಾಲಿ ಸಿನೆಮಾದ ಕನ್ನಡ ರೂಪಾಂತರ. ಇದರಲ್ಲಿ ದೊಡ್ಡ ಕುಟುಂಬವೊಂದರ ಕಥನವಿದೆ. 7-8 ಮಕ್ಕಳಿರುವ ಆ ಕುಟುಂಬಕ್ಕೆ ಆರ್ಥಿಕ ಭದ್ರತೆ ಇಲ್ಲ. ತಂದೆ ಯಾವಾಗಲೊ ತೀರಿ ಹೋಗಿದ್ದಾನೆ, ತಾಯಿ ಮನೆಯ ಉಸ್ತುವಾರಿ ಹೊತ್ತಿರುತ್ತಾಳೆ. ಹಿರಿಯ ಮಗ ಏನೂ ಸಂಪಾದನೆ ಮಾಡದ ಸೋಮಾರಿ. ಹಿರಿಯ ಮಗಳು ಸಣ್ಣ ಕೆಲಸ ಮಾಡುತ್ತಾ ತಂದೆಯ ಸ್ಥಾನದಲ್ಲಿ ನಿಂತು ಕುಟುಂಬವನ್ನು ಪೋಷಿಸುತ್ತಾಳೆ.
ತಮ್ಮ-ತಂಗಿಯರ ವಿದ್ಯಾಭ್ಯಾಸ, ಅವರ ಮದುವೆ ಹೀಗೆ ಕುಟುಂಬದ ಪಾಲನೆಯಲ್ಲಿ ಆಕೆಯ ಬದುಕು ಯಾಂತ್ರಿಕವಾಗುತ್ತಾ ನಡೆಯುತ್ತದೆ. ಸಿನೆಮಾದ ಕಥೆಯ ತಿರುವಿನಲ್ಲೆಲ್ಲೊ ಆಕೆಗೂ ಜೀವನ ಸಂಗಾತಿ ದೊರೆತು ಮದುವೆಯ ಯೋಗ ಕೂಡಿಬರುತ್ತದೆ. ಆದರೆ ಇನ್ನೇನೊ ದುರಂತವಾಗಿ ಮದುವೆಯಾಗದೆ ಕುಟುಂಬ ನಿರ್ವಹಣೆಗೆ ಹಿಂದಿರುಗುತ್ತಾಳೆ. ಇದು ಸಿನೆಮಾದ ಸ್ಥೂಲ ಕಥೆ.
ಈಗಲೂ ನನ್ನ ಸ್ಮೃತಿಪಟಲದಲ್ಲಿ ದಾಖಲಾದ ಆ ಸಿನೆಮಾದ ಕಥೆ ನೆನಪಾದಾಗೆಲ್ಲಾ ಭಾವುಕಳಾಗುತ್ತೇನೆ. ಸಮಾಜದ ಬಹುಮುಖ್ಯ ಅಂಗ ಕುಟುಂಬ. ಅದೊಂದು ನಿರಂತರ ಚಲಿಸುವ ಗಾಡಿ ಎಂದುಕೊಳ್ಳುವುದಾದರೆ ಅದಕ್ಕೆ ಚಾಲನೆ ಬರುವುದು ತಂದೆ ತಾಯಿ ಎನ್ನುವ ಎರಡು ಚಕ್ರದ ಸಹಾಯದಿಂದ ಎನ್ನುವುದು ನಮ್ಮೆಲ್ಲರ ನಂಬಿಕೆ. ಕುಟುಂಬದ ಪಾಲನೆ ತಾಯಿಯದಾಗಿದ್ದರೆ, ಪೋಷಣೆ ತಂದೆಯದಾಗಿರುತ್ತದೆ.
ಇಲ್ಲಿ ಪೋಷಣೆ ಎನ್ನುವುದು ದುಡಿದು ಹಣ ತಂದು ಕುಟುಂಬ ನಡೆಸುವುದೊಂದು ಯಾಂತ್ರಿಕ ಕ್ರಿಯೆಯಲ್ಲ. ಹಣ ಗಳಿಸುವುದಕ್ಕೂ ಅದನ್ನು ತನ್ನ ಕುಟುಂಬ ನಿರ್ವಹಣೆಗೆ ಬಳಸುವುದಕ್ಕೂ ಒಂದು ಭಾವನಾತ್ಮಕವಾದ ಸಂಬಂಧವಿರುತ್ತದೆ. ತನ್ನ ಕುಟುಂಬ, ತನ್ನ ಮಕ್ಕಳನ್ನು ಪೋಷಿಸುವ ಭಾವನಾತ್ಮಕ ಕಾರಣದ ಜೊತೆಗೆ ಇಂದಿಗಿಂತ ಭವಿಷ್ಯವನ್ನು ಇನ್ನೂ ಸುಂದರವಾಗಿ ಮಾಡುವ ಕನಸೂ ಇರುತ್ತದೆ.
ಮೊದಲು ಹೇಳಿದ ಸಿನೆಮಾದ ಕಥೆ ನಿಜದಲ್ಲೂ ನಡೆದ್ದನ್ನು ನಾವು ನೋಡುತ್ತೇವೆ. ತಂದೆ ಇಲ್ಲದಾಗ ತಾಯಿ ಅಥವಾ ಹಿರಿಯ ಮಕ್ಕಳು ಆ ಸ್ಥಾನದಲ್ಲಿನಿಲ್ಲುವುದನ್ನುಕಾಣುತ್ತೇವೆ. ಆದರೆ ಇವೆಲ್ಲ ಒಂದು ಅನಿವಾರ್ಯ ಸಂದರ್ಭದಲ್ಲಿ ಮಾತ್ರ. ಹಾಗಾದಾಗ ಆ ಕುಟುಂಬ ಅಪ್ಪನ ಆಧಾರದ ಕೊರತೆಯ ವಿಚಿತ್ರ ಒತ್ತಡದಲ್ಲಿರುವದನ್ನು ಕಾಣುತ್ತೇವೆ.
ಆರ್ಥಿಕ ಭದ್ರತೆಗೆ ಮಾತ್ರ ಅಪ್ಪ ಅನಿವಾರ್ಯವಾಗಿರುವುದಿಲ್ಲ. ಸಮಯಕ್ಕೆ ಸರಿಯಾದ ನಿರ್ಧಾರ, ಸೂಕ್ತ ನಿರ್ಣಯ ಮತ್ತು ಮಕ್ಕಳ ಭವಿಷ್ಯವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವಲ್ಲಿಯೂ ಅಪ್ಪನ ಮಹತ್ವದ ಪಾತ್ರವಿರುತ್ತದೆ. ಹೀಗೆ ಹೇಳುವಾಗ ನನಗೆ ನೆನಪಾಗುತ್ತಿರುವುದು ಶೇಕ್ಸಪಿಯರ್ ನ ಕಿಂಗ್ ಲಿಯರ್ ಮತ್ತು ಗಿರೀಶ್ ಕಾರ್ನಾಡ್ ರ ಯಯಾತಿ ನಾಟಕ. ಅಪ್ಪ ಹೇಗಿರಬಾರದು ಎನ್ನುವುದಕ್ಕೆ ಇವು ಉದಾರಣೆಗಳು. ಇವೆರಡೂ ನಾಟಕದಲ್ಲಿ ಅಪ್ಪ ಮಕ್ಕಳ ಬದುಕನ್ನು ಹೇಗೆ ಅಸ್ಥವ್ಯಸ್ಥಗೊಳಿಸುತ್ತಾನೆ ಎನ್ನುವುದನ್ನು ಕಾಣಬಹುದು.
ಲಿಯರ್ ತನ್ನ ಆಸ್ತಿಯನ್ನು ತನ್ನ ಮೂರು ಹೆಣ್ಣು ಮಕ್ಕಳಿಗೆ ವಿಭಾಗ ಮಾಡಿ ಹಂಚಿ ನಿವೃತ್ತನಾಗಲು ಬಯಸುತ್ತಾನೆ. ತನ್ನನ್ನು ಯಾರು ಹೆಚ್ಚು ಪ್ರೀತಿಸುತ್ತಾರೊ ಅವರಿಗೆ ಆಸ್ಥಿಯಲ್ಲಿ ಅಗ್ರಪಾಲು ಎಂದು ಘೋಷಿಸುತ್ತಾನೆ. ಮೊದಲಿನೆರಡು ಹೆಣ್ಣುಮಕ್ಕಳು ಶಬ್ದಗಳ ಆಡಂಬರದಿಂದ ಅಪ್ಪನನ್ನು ವರ್ಣಿಸಿ ಆಸ್ಥಿಯನ್ನು ಪಡೆಯುತ್ತಾರೆ. ಆತ ಬಹಳ ನಿರೀಕ್ಷೆಯನ್ನು ಇರಿಸಿಕೊಂಡಿದ್ದ ಕಿರಿಯ ಮಗಳ ಮಾತುಗಳು ಹುಂಬ ಲಿಯರ್ ಗೆ ಅರ್ಥವಾಗದು.
ತನ್ನ ಗಂಡನಾಗುವವನಿಗೆ ಮೊದಲ ಪ್ರೀತಿ, ನಂತರದ ಸ್ಥಾನ ನಿನಗೆ ಎಂದು ಆಕೆ ಯಾವ ಆಡಂಬರವಿಲ್ಲದೆ ಆಡಿದ ಮಾತು ತನ್ನನ್ನು ತೇಜೋಭಂಗ ಮಾಡಿದಂತೆನಿಸುವುದು. ಕ್ರೋಧದಿಂದ ಅವಳನ್ನು ಮನೆಯಿಂದ ಹೊರ ಹಾಕುತ್ತಾನೆ. ಕೊನೆಯಲ್ಲಿ ಮೊದಲಿನೆರಡು ಮಕ್ಕಳೇ ಅವನನ್ನು ಭಿಕಾರಿಯನ್ನಾಗಿ ಮಾಡುತ್ತಾರೆ. ಆಗ ಕಿರಿಯ ಮಗಳಲ್ಲಿ ಆಶ್ರಯ ಪಡೆಯುತ್ತಾನೆ. ಅಷ್ಟರಲ್ಲಿ ಎಲ್ಲವೂ ಕೈಮೀರಿರುತ್ತದೆ. ಕೊನೆಯ ನಿರ್ಣಾಯಕ ಯುದ್ಧದಲ್ಲಿ ಕಿರಿಯ ಮಗಳು ಸಾಯುತ್ತಾಳೆ. ಅಲ್ಲಿಗೆ ಲಿಯರನ ಅಂತ್ಯವೂ ಆಗುತ್ತದೆ. ಅಪ್ಪನ ಹುಂಬ ದುರಹಂಕಾರದಿಂದ ಕುಟುಂಬವೊಂದು ಸರ್ವನಾಶವಾಗುತ್ತದೆ.
ಮಹಾಭಾರತದಲ್ಲಿ ಬರುವ ಯಯಾತಿ ರಾಜನ ಕಥೆಯಲ್ಲಿ ಅಪ್ಪ ಮಗನನ್ನು ತನ್ನ ಕಾಮನೆಗಾಗಿ ಬಳಸಿಕೊಳ್ಳುವದನ್ನು ಕಾಣಬಹುದು. ಯಯಾತಿಗೆ ಶುಕ್ರಾಚಾರ್ಯರು ಅಕಾಲಿಕ ಮುಪ್ಪಿನ ಶಾಪ ಕೊಟ್ಟಾಗ ಇನ್ನೂ ಭೋಗಿಸುವ ಬಯಕೆ ಇದ್ದ ಆತ ಮಗ ಪುರುವಿನ ಯೌವನವನ್ನು ಕೇಳಿ ಪಡೆಯುತ್ತಾನೆ. ಕಾರ್ನಾಡರ ಈ ನಾಟಕದಲ್ಲಿ ಯಯಾತಿ ಯೌವನ ಪಡೆಯುವುದರ ಜೊತೆಗೆ ಕಾಲಮಾನದ ವ್ಯವಸ್ಥೆ ಬದಲಾದ ಸಂದಿಗ್ಧತೆಯನ್ನೂ ಎದುರಿಸುತ್ತಾನೆ.
ಈ ಎರಡೂ ನಾಟಕಗಳು ಅಪ್ಪನ ದೌರ್ಬಲ್ಯತೆಯಿಂದ ನೊಂದುಕೊಳ್ಳುವ ಮಕ್ಕಳ ಪಾಡನ್ನು ಹೇಳುತ್ತವೆ. ಆದ್ದರಿಂದ ಅಪ್ಪ ಕೇವಲ ಆರ್ಥಿಕ ಆಧಾರ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಕುಟುಂಬದ ಆಧಾರವಾಗಿರುತ್ತಾನೆ.





ಲೇಖನದ ಮಟ್ಟಿಗೆ ಇದು ಸ್ವಲ್ಪ ಅಪ್ರಸ್ತುತ ಅನ್ನಿಸಬಹುದು. ಕೊಜಿನಸ್ಟೇವ್ ನಿರ್ದೇಶನದ ರಶಿಯನ್ ಚಿತ್ರ ಕಿಂಗ್ ಲಿಯರ್ ನೆನಪಿಸಿಕೊಳ್ಳಲು ಇದೊಂದು ಅವಕಾಶ ಅಂದುಕೊಂಡು ಯೂ ಟ್ಯೂಬ್ ನಿಂದ ಒಂದು ಕ್ಲಿಪ್ ಎರವಲು ಪಡೆದು ವಿಳಾಸ ಶೇರ್ ಮಾಡಿದ್ದೇನೆ. ಒಳ್ಳೆಯ ಚಿತ್ರಗಳ ಸಾಲಿನಲ್ಲಿ ಇದಕ್ಕೆ ತನ್ನದೇ ಆದ ಸ್ಥಾನವಿದೆ . ಮೆಘೆ ಧಕಾ ತಾರಾದಲ್ಲಿಯೂ ಒಬ್ಬ ಅಸಾಹಾಯಕ ತಂದೆ ಇದ್ದಾನೆ.ಲಿಯರ್ ಗಿಂತ ಸ್ವಲ್ಪ ಬೇರೆ. ಕಟು ಸತ್ಯಗಳು ಅವರನ್ನು ಒಂದು ಮೂಲೆಗೆ ತಳ್ಳಿ ಬೆದರು ಗೊಂಬೆಗಳಾಗಿಸಿವೆ.