ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿತಾ ಪಿ ತಾಕೊಡೆ ಕವಿತೆ – ಋಜುವಾತು…

ಅನಿತಾ ಪಿ ತಾಕೊಡೆ

ಲೆಕ್ಕವಿಲ್ಲದಷ್ಟು ಬಾರಿ ನೋಡುತ್ತೇನೆ
ಮುಚ್ಚಿದ ಕಿಟಕಿಯ ಕದವನು ತೆರೆದು
ನಿನ್ನಿರದಿರುವಿಕೆಯನು ಖಾತ್ರಿಪಡಿಸುತ್ತೇನೆ

ಪುಟ್ಟ ಪುಟ್ಟ ಹೆಜ್ಜೆಯಲ್ಲಿ ರೆಕ್ಕೆ ಬಿಚ್ಚಿ ಹಾರುವಲ್ಲಿ
ಸದ್ದು ಸಡಗರ ಜ್ಞಾನ ಧ್ಯಾನ ಸಲ್ಲಾಪದಲಿ
ಎಲ್ಲರನೂ ಎಲ್ಲವನೂ ಮೀರಿ, ಬಳಿ ಸಾರಿ ನಿಂದ
ನಿನ್ನೂರು ಯಾವುದೆಂಬ ಹುಡುಕಾಟವಿಲ್ಲ

ಒಂದೊಂದೇ ಗಟ್ಟಿ ನಾರನು ಹೊಸೆದು ನೀ ಕಟ್ಟಿದ ಗೂಡಲಿ
ಎಷ್ಟೊಂದು ಮುದ್ದು ಮಾತಿನ, ಚಿಗುರು ಕನಸಿನ ಹಕ್ಕಿಗಳಿತ್ತು
ಈಗ ಅಲ್ಲುದುರಿದ ಪುಕ್ಕಗಳ ಜೊತೆ ನಿನ್ನುಸಿರಿನ ಗಂಧ
ನೀನಿರದೆಯೂ ಇರುವಿಕೆಯ ಭಾವವನು ಸ್ಫುರಿಸುತಿವೆ

ಮನೋರಂಗದೊಳು ಒಂದಾದಮೇಲೊಂದರಂತೆ ತೆರೆದುಕೊಳ್ಳುವ
ಚಿತ್ರಗಳ ಛಾಯೆಯಲ್ಲಿ ನೀನಿಲ್ಲವೆಂದರಿತಾಗ
ಬಣ್ಣ ಮಸುಕಾಗದಿರಲೆಂದು ಒಂದು ಮೌನದ ಪರದೆ
ತನ್ನಷ್ಟಕೆ ತಾನೆ ಹರಿದು, ತೆರೆಯೆಳೆದು ಬಿಡುವುದು

ಕಲಾ ಕುಸುರಿಯ ಕಲೆಗಾರ ಈಗ ಹೇಗಿರುವೆ ನೀನು…!
ಹಿಂದೊಮ್ಮೆ ನೀ ಹೇಳಿದ ಕಥೆಯಂತೆ ಅದೇ ಹಳೆಯ ಊರಿನಲ್ಲಿರುವೆಯೋ?
ಹೊಸದೊಂದೂರಲಿ ಪಥಿಕನಾಗಿರುವೆಯೋ…!

ನಾಡಲ್ಲೇ ಕೂತು ಕಾಡು ಹಕ್ಕಿಗೆ ಸೋತ ದಿನಗಳು
ಮಾಸಿ ಹೋಗದಿರಲೆಂದು ನನ್ನ ಕವಿತೆಗೆ ನಿನ್ನದೇ ಹೆಸರಿಟ್ಟಿರುವೆ
ಸಾಲುಸಾಲುಗಳು ಒಪ್ಪವಾಗಿ ನಿನ್ನ ನೆನೆಯುತಿವೆ

ಗಿರಿಶಿಖರ ಮಂದ ಮಾರುತಗಳ ಸುತ್ತಿ ಬಳಸಿ
ನೀಲಾಗಸದ ದಾರಿಯಲಿ ಹಾದು ಹೋಗುವಾಗ
ಅಲ್ಲೇ ಒಂದು ಋಜುವಾತು ಹಾಕಿಬಿಡು
ಇಲ್ಲೇ ನಿಂತು ನೋಡುತ್ತೇನೆ ನೋಡುತ್ತಲೇ ಇರುತ್ತೇನೆ

‍ಲೇಖಕರು avadhi

13 February, 2023

1 Comment

  1. Ok

    Anita taccode kavite sogasagide,hari hoda hakkiyo,telihoda modavo kaviya bhetiya niriksheyalli katara ide…
    Abhinandane Anita.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading